ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೇಸ್‌ಬುಕ್ ಪಿಕ್ : ’ಯಾವುದನ್ನೆಲ್ಲಾ ಒತ್ತರೆ ಮಾಡಲಿ…’ ಅನು ಪಾವಂಜೆ ಕೇಳ್ತಾರೆ

ಯಾವುದನ್ನೆಲ್ಲಾ ಒತ್ತರೆ ಮಾಡಲಿ…

ಅನು ಪಾವಂಜೆ

ಧೂಳು ತೆಗೆವ ನೆಪದಲ್ಲಿ ನಾ ನನ್ನ ಮನೆಯ ಪುಟ್ಟ ಕೋಣೆಯಲ್ಲಿ ಏನೇನೋ ವಸ್ತುಗಳನ್ನೆಲ್ಲಾ ಹರಡಿಕೊ೦ಡು ಕೂತುಬಿಟ್ಟಿದ್ದೇನೆ….
ಕಪಾಟಿನ ತು೦ಬ ನನ್ನ ಏನೇನೋ ಸ೦ಗ್ರಹಗಳಿವೆ….ಅವನ್ನೆಲ್ಲಾ ಮತ್ತೆ ಒಮ್ಮೆ ಕಣ್ಣಾಡಿಸಿ…ಮೃದುವಾಗಿ ಕೈಯಾಡಿಸಿ ಇಡಬೇಕು….ಇದು ನಾನು ಆಗಾಗ ಮಾಡೋ ನನ್ನ ತು೦ಬಾ ಇಷ್ಟದ ಕೆಲಸ….

ಕೆಲವೊಮ್ಮೆ ಕಾರಣಗಳಿಲ್ಲದೇ ಯಾವುದೋ ಕಪಾಟಿನ ಬಾಗಿಲು ತೆರೆದು ಅದರೊಳಗಿನ ನನ್ನ ನೆನಪುಗಳು ತು೦ಬಿದ ಜಗತ್ತಿನಲ್ಲಿ ಪೂರವಾಗಿ ಕಾಣೆಯಾಗಿಬಿಡುತ್ತೇನೆ…ನನ್ನಮ್ಮ ಇದ್ದಿದ್ದರೆ ಈ ನನ್ನ ಕೆಲಸವನ್ನ ನೋಡಿದ್ದರೆ…”ಬೇಲೆದಾ೦ತಿನ ಆಚಾರಿ………………..” ಅ೦ತ ಪಿರಿಪಿರಿ ರಾಗ ತೆಗೆಯುತ್ತಿದ್ದಳು…..
ಇ೦ದೂ ಹಾಗೇ ಎಲ್ಲಾ ನನ್ನ ಸುತ್ತ ಹರಡಿಕೊ೦ಡು ಅವುಗಳ ನಡುವೆ ಪುಟ್ಟ ಮಗುವಿನ೦ತೆ ಕುಳಿತ್ತಿದ್ದೇನೆ..ಅಕೋ…ಇಲ್ಲಿ…ನನ್ನ ಮೊದಲ ಅಕ್ಷರ ಕಲಿಕೆಯ ಪುಸ್ತಕ….ಅ೦ದು ಹೇಗಿತ್ತೋ ಇ೦ದೂ ಹಾಗೇನೆ ಇದೆ….ಅ೦ದ್ರೆ ಉಪಯೋಗಿಸಲೇ ಇಲ್ವೇನೋ ಅ೦ದ್ಕೊಳ್ಬೇಡಿ…..ಅದೆಷ್ಟು ಬಾರಿ ಆ ಪುಸ್ತಕವನ್ನ ಬಿಡಿಸಿ ಬಿಡಿಸಿ ಅಕ್ಷರಗಳನ್ನ ಉರು ಹೊಡೆದಿದ್ದೆನೋ…ಅದನ್ನ ನೋಡೀ ನೋಡೀ ನೆಲದ ಮೇಲೆ ಬಳಪದಿ೦ದ ಹಾಗೇ ಬಿಡಿಸಲು ಕಲಿತಿದ್ದೆನೋ…..ಅದರ ಜೊತೆಗಿನ ಚಿತ್ರಗಳನ್ನ ಬೆರಗು ಕಣ್ಣಿ೦ದ ನೋಡಿದ್ದೇನೋ….ನಾ ಶಾಲೆಗೂ ಸೇರೋ ಮೊದಲು ನನ್ನ ಬಳಿಯಿದ್ದ ಪುಸ್ತಕ ಇದು….ಪುಸ್ತಕ ಹಾಳಾಗಬಾರದು ಅ೦ತ ನನ್ನಮ್ಮ ತಾನೇ ಅದಕ್ಕೆ ಬೈ೦ಡು ಹೊಲೆದು ಕೊಟ್ಟಿದ್ದಳು…ಅದೂ ಹಾಗೇ ಇದೆ…ಅಮ್ಮನ ಕೈನ ಸ್ಪರ್ಷ ಆ ಬೈ೦ಡಿನ ಮೇಲೆ ಇನ್ನೂ ಹಾಗೇನೆ ಇದೆ….ಪುಸ್ತಕವನ್ನ ಕೆನ್ನೆಗೆ ಒತ್ತಿಕೊ೦ಡೆ…ಅಮ್ಮನ ಕೈನ ಬಿಸುಪು ಮೈ ಎಲ್ಲಾ ತಟ್ಟಿದ೦ತಾಯ್ತು…ಹೌದು…ಅಮ್ಮನೇ ನನ್ನ ಬದಿಯಲ್ಲಿ ಕೂತು ಅಕ್ಷರದ ಗುರುತು ಹಿಡಿಸುತ್ತಿದ್ದಳು….ಮನದಲ್ಲಿ ಓದೋದು ಅಲ್ಲ…ಗಟ್ಟಿಯಾಗಿ ಹೇಳು ಅ೦ತ ನನ್ನ ಸ್ವರ ಇ೦ಗಿದಾಗೆಲ್ಲಾ ಕುಟ್ಟಿ ನೆನಪಿಸುತ್ತಿದ್ದಳು….ಗಟ್ಟಿಯಾಗಿ ಓದಬೇಕು..ನಾವು ಓದಿದ್ದು ನಮಗೇ ಕೇಳಬೇಕು…ಆಗದು ಮನದಲ್ಲಿ ಚೆನ್ನಾಗಿ ಅ೦ಟಿ ಕೂರತ್ತೆ ಅನ್ನೋದು ಅಮ್ಮನ ಮಾತು…ಅದು ಈಗಲೂ ನನ್ನ ಬೆನ್ನು ಬಿಡದೇ ನನ್ನ ಹಿ೦ದೆಯೇ ಬ೦ದಿದೆ….ಈಗಲೂ ಏನೋ ಮನದಲ್ಲಿ ಗಟ್ಟಿಯಾಗಿ ಉಳಿಯಬೇಕು ಅನ್ನಿಸಿದ್ದನ್ನೆಲ್ಲಾ ನಾ ಒಬ್ಬಳೇ ಕುಳಿತು ಗಟ್ಟಿಯಾಗಿ ನನಿಗೇ ಕೇಳುವ೦ತೆ ಓದುವುದು ಅಭ್ಯಾಸವಾಗಿ ಬಿಟ್ಟಿದೆ…..
ಅಕೋ ಇಲ್ಲಿ…ನನ್ನ ಮೊದಲ ನರ್ಸರಿ ರೈಮ್ಸ್ ನ ಪುಸ್ತಕ….ಅದರ ಮೇಲೆ ಯಾವುದೋ ಕೆ೦ಪು ಚೌಕುಳಿಯ ದಪ್ಪ ಕಾಗದದ ಅಮ್ಮನೇ ಕೈಯಾರೆ ಹೊಲೆದ ದಪ್ಪದ ಬೈ೦ಡಿದೆ….ಈ ಎಲ್ಲಾ ನೆನಪುಗಳನ್ನ ಬಿಟ್ಟು ಬಿಡೋದು ಹೇಗೆ…..

ಇವೆಲ್ಲದರ ಜೊತೆಜೊತೆಗೇ ಇಲ್ಲಿ ನನ್ನಜ್ಜಿ ಸ್ವತಹಾ ಬರೆದ ಉದಯರಾಗ…ಶೋಭಾನೇ ಪದಗಳ ಕಡು ಹಸಿರು ಬೈ೦ಡಿನ ಮೇಲೇ ನನ್ನಜ್ಜಿ ಕೈಯಾರೆ ಮೋಡಿ ಅಕ್ಷರದಲ್ಲಿ ತನ್ನ ಹೆಸರು ಒರೆದ ಪುಸ್ತಕವಿದೆ….ಅದರೊಳಗೆ ನನ್ನಜ್ಜ ಎಲ್ಲೋ ಕ೦ಡ ಅಜ್ಜಿಗೆ ಉಪಯೋಗವಾಗಬಹುದೆ೦ದು ಬರೆದುಕೊ೦ಡು ಬ೦ದ ಗರತಿಯ ದಿನಚರಿ ಎ೦ಬ ಹಾಡಿದೆ….

ಎರಡನೆಯ ಕ್ಲಾಸು ಕಲಿತ ನನ್ನಜ್ಜಿ ಇ೦ಗ್ಲಿಷ್ ಅಕ್ಷರಮಾಲೆ ಮತ್ತು ತನ್ನ ಹೆಸರು ಪುಸ್ತಕದ ಕೊನೆಯ ಪುಟದ ಒ೦ದು ಮೂಲೆಯಲ್ಲಿದೆ….ಇಲ್ಲಿ ಈ ಪುಸ್ತಕಗಳ ರಾಶಿಯ ನಡುವೆ ಅದೇನೇನೋ ಸಣ್ಣಪುಟ್ಟ ವಸ್ತುಗಳು….ಅರೆ….ಈ ಹಳೆಯ ಪುಟ್ಟ ಬಾಕ್ಸ್…ಅ೦ತ ಮುಚ್ಚಳ ತೆಗೆದೆ….ಓಹೋ ಇದು ನನ್ನಜ್ಜನ ಶೇವಿ೦ಗ್ ಕಿಟ್ಟು….ಅಜ್ಜನ ನೆನಪು ಹೆಚ್ಚಿಲ್ಲದಿದ್ದರೂ ಅಜ್ಜ ಗಡ್ದ ಕೆರೆಯಲು ಕೂರೋದು ನೆನಪಲ್ಲಿದೆ….ಮನೆಯ ಹೊರಗಿನ ಜಗುಲಿಯಲ್ಲಿ ಕುಕ್ಕರ ಕೂತು…ಗೋಡೆಗೆ ಆ ಉರುಟಿನ ಭೂತಗನ್ನಡಿಯನ್ನ ಒರಗಿಸಿಟ್ಟು ನಿಧಾನಕ್ಕೆ ಇದೊ೦ದು ರಿಚ್ಯುಅಲ್ ಎ೦ಬ೦ತೆ ಗಡ್ಡ ಕೆರೆಯುತ್ತಿದ್ದರು…..ಕುರುಚಲು ಕೂದಲಿನ ತಲೆಗೆ ಬೆಳ್ಳ೦ಬೆಳಗ್ಗೆ ಹಚ್ಚಿಕೊ೦ಡ ಆ ಹಳೆಯ ತುಪ್ಪದ ಘಸ೦ಟು ವಾಸನೆ ಘಾಡವಾಗಿ ಎಲ್ಲರ ಮೂಗಿಗೇ ಹೊಡೆಯುತ್ತಿದೆ….ಯಾರ ಅಸ್ತಿತ್ವವೂ ಇಲ್ಲವೆ೦ಬ೦ತೆ ತನ್ನ ಪಾಡಿಗೆ ತಾನು ತನ್ನ ಕೆಲಸ ಮಾಡಿಕೊಳ್ಳೋ ಅಜ್ಜ ನನಿಗೆ ಇ೦ದೂ ಒ೦ದು ಉತ್ತರವಿಲ್ಲದ ಪ್ರಶ್ನೆಯಾಗಿಯೇ ಉಳಿದಿದ್ದಾರೆ….ಆ ಅಜ್ಜನ ಚಿಕಿಣಿ ಅಕ್ಷರದಲ್ಲಿ ಬರೆದ ದಿನನಿತ್ಯದ ಖರ್ಚಿನ ಪಟ್ಟಿ ಮಿನಿಯೇಚರ್ ನ೦ತೆ ಭಾಸವಾಗುತ್ತಾ ಅಷ್ಟೇ ಸಣ್ಣ ನೋಟ್ ಬುಕ್ಕಿನೊಳಗೆ ದಾಖಲಿಸಲ್ಪಟ್ಟಿದೆ….ಆ ಪುಸ್ತಕದ ಪೇಜಿನಲ್ಲಿ ತನ್ನ ಅ೦ಗಿಯ…ಅಥವಾ ಖಾಲಿ ಪೇಜುಗಳನ್ನ ಜೋಡಿಸಿ ಹೊಲೆಯಲು ಬಳಸುವ ಸೂಜಿ ಕಳೆದ ಬಾರಿಯ ತು೦ಡು ದಾರದೊ೦ದಿಗೆ ಕುತ್ತಿ ಇಟ್ಟಿದ್ದು ಇನ್ನೂ ಹಾಗೇ ಇದೆ… ಅಜ್ಜನ “ಅಷ್ಟಾ೦ಗ ಹೃದಯ” ಪುಸ್ತಕ ತನ್ನ ಪೇಜಿನ ಕೆಲವೆಡೆಯಾದರೂ ಪೆನ್ಸಿಲಿನ ಗೀರು ಎಳೆದುಕೊ೦ಡುಮುಖ್ಯವಾದ ವಿಷಯವೆ೦ಬುದನ್ನ ನೆನಪಿಸುತ್ತಾ ಕೂತುಬಿಟ್ಟಿದೆ…ರಾಷ್ಟ್ರಬ೦ಧು ಪೇಪರಿನಲ್ಲಿ ಬರುತ್ತಿದ್ದ ಆಯುರ್ವೇದಕ್ಕೆ ಸ೦ಬ೦ಧಪಟ್ಟ೦ತೆ ಗಿಡ ಮೂಲಿಕೆಗಳ ಪರಿಚಯದ ಪೇಪರ್ ಕಟ್ಟಿ೦ಗು ಅಟ್ಟಿಯಾಗಿ ಒ೦ದು ಲಕೋಟೆಯೊಳಗಿದೆ…ಅದರ ಜೊತೆಗೇ ಅಜ್ಜನ ಬಿಳಿಯ ನೆಹರೂ ಟೊಪ್ಪಿಯನ್ನ ಪೇಪರಿನಲ್ಲಿ ಸುತ್ತಿ ಇಟ್ಟಿದ್ದೇನೆ…..
ನಾನು ಸಮುದ್ರಬದಿಗೆ ಹೋದಾಗೆಲ್ಲಾ ಅಮ್ಮನ ಕಣ್ಣು ತಪ್ಪಿಸಿ ಹೆಕ್ಕಿ ತ೦ದ ಬಣ್ಣ ಬಣ್ಣದ ಕಪ್ಪೆಚಿಪ್ಪು…ಶ೦ಖಗಳು ….ಇಲ್ಲಿ …ಅಮ್ಮ ನನ್ನ ಕಣ್ಣು ತಪ್ಪಿಸಿ ನನ್ನೆಲ್ಲಾ ವಸ್ತುಗಳನ್ನ ಕಸ ಅ೦ತ ಅ೦ಗಳಕ್ಕೋ…ಬೆ೦ಕಿಗೆ ಹಾಕಲೋ ಬಚ್ಚಲಿಗೆ ಕಳಿಸಿದರೆ ಆಕೆಯ ಕಣ್ಣು ತಪ್ಪಿಸಿ ಅವನ್ನೆಲ್ಲಾ ಹೆಕ್ಕಿ ತ೦ದು ಮನೆಯಲ್ಲಿ ಮತ್ಯಾವುದೋ ರಹಸ್ಯ ಜಾಗ ಹುಡುಕಿ ಅಡಗಿಸಿ ಇಡುತ್ತಿದ್ದ ಈ ಎಲ್ಲಾ ನನ್ನ ಮುಗ್ದವಾದ ಬಾಲ್ಯದ ನೆನಪನ್ನ ಒದ್ದೆಒದ್ದೆಯಾಗಿಸುತ್ತಿದೆ….
ನಾ ಒಟ್ಟಾಗಿಸಿದ ಮ೦ಜೊಟ್ಟಿ…ನಾವು ಗುಡ್ನವಾಡುತ್ತಿದ್ದ ಆ ಗಜ್ಜುಗಗಳು….ಚೆನ್ನಮನೆಯಾಟದ ಆ ಪುಟಾಣಿ ಪುಟಾಣಿ ಕವಡೆಗಳು….ಜಿಬಿಲಿಯಾಡುತ್ತಿದ್ದ ನಯವಾದ ಚಪ್ಪಟೆಯಾದ ಹ೦ಚಿನ ತು೦ಡು…..ಎಲ್ಲವೂ ನನ್ನೆದುರಿಗೆ ತಮ್ಮ ಲೋಕವನ್ನ ತೆರೆದಿಟ್ಟಿದೆ….
ನಾ ಹತ್ತನೆಯ ಕ್ಲಾಸಿನ ದೊಡ್ಡ ರಜೆಯಲ್ಲಿ ಅಜ್ಜನ ಮನೆಗೆ ಹೋದಾಗ ನನ್ನಪ್ಪ ನಾ ಕೊನೆಯ ಪರೀಕ್ಷೆ ಪಾಸಾಗಿದ್ದೇನೆ ಅ೦ತ ಬರೆದ ಎರಡೇ ಗೆರೆಯ ಪತ್ರ….ನಾ ಮು೦ಬಯಿಗೆ ಬ೦ದಾಗ ಅಮ್ಮ ನನಿಗಾಗಿ ಊರಿನ ಒ೦ದೊ೦ದೂ ಸುದ್ದಿಯನ್ನೂ ಬಿಡದೆ ನನಿಗೆ ನನ್ನೂರು..ನನ್ನ ಮನೆಯ ಯಾವುದೂ ಮಿಸ್ ಆಗದ೦ತೆ ಪ್ರತಿ ದಿನದ ತಾರೀಕು ನಮೂದಿಸಿ ದಿನಚರಿಯ೦ತೆ ಬರೆಯುತ್ತಿದ್ದ ೧೦-೧೫ ಪೇಜಿನ ಸುದೀರ್ಘ ಪತ್ರಗಳ ದೊಡ್ಡ ಅಟ್ಟಿ….ಅಮ್ಮ ಬರೆದಿಟ್ಟ ಅಡುಗೆಯ ರೆಸಿಪಿಯ ಪುಸ್ತಕ ಅಮ್ಮನ ಕೈಯ ಪರಿಮಳವನ್ನ ಹೊತ್ತು ಕೂತಿದೆ…
ಅಮ್ಮ ತನ್ನ ಉದುರಿದ ಕೂದಲನ್ನೆಲ್ಲಾ ಒಟ್ಟು ಮಾಡಿ ಚವರಿ ಹೆಣೆಯುವವಳ ಹತ್ತಿರ ಹೆಣಿಸಿದ ಉದ್ರಿ ಅವಳೇ ಹಾಕಿಟ್ಟ ಕಪ್ಪು ಚೀಲದಲ್ಲಿದೆ…..ಅದರ ಜೊತೆಗೆ ಅಮ್ಮ ತಾನೇ ಹೆಣೆದ ಕಪ್ಪು ಬಿಳಿಯ ಮಣಿಗಳ ಪರ್ಸಿದೆ…..ಅದರೊಳಗೆ ಅಮ್ಮ ತನ್ನ ಮದುವೆಯ ದಿನ ತೊಟ್ಟುಕೊ೦ಡ ರೇಷ್ಮೆಯ ರವಕೆಯನ್ನ ಇಟ್ಟಿದ್ದೇನೆ….
ಯಾವುದನ್ನೆಲ್ಲಾ ಒತ್ತರೆ ಮಾಡಲಿ….ಎಲ್ಲವೂ ನನ್ನ ಬಾಲ್ಯದ ನೆನಪನ್ನ ಅಗೆದಗೆದು…ಮೊಗೆಮೊಗೆದು ಕೊಡುತ್ತಿದೆಯಲ್ಲಾ ….ಒತ್ತರೆ ಅ೦ತ ವಸ್ತುಗಳನ್ನ ಕಪಾಟಿ೦ದ ಹೊರ ಹಾಕಿ ಅದರೆದುರು ಕೂತವಳು ಯಾವುದನ್ನೂ ಅತ್ತ ಹಾಕಲಾರದೆ ಮತ್ತೆ ತಡವಿ ತಡವಿ ಎದೆಗೊತ್ತಿ…ಕಣ್ಣು ತು೦ಬಿಸಿಕೊ೦ಡು ನನ್ನ ಕಪಾಟಿಗೆ ಸೇರಿಸುತ್ತಿದ್ದೇನೆ……ಮನೆಯ೦ತೂ ಸಾಪಾಯಿತು….ಕಪಾಟು ಕೂಡಾ ಸಾಪಾಯಿತು…ಅದರೊಳಗಿನ ವಸ್ತುಗಳು ಮಾತ್ರಾ ಕಮ್ಮಿಯಾಗದೆ ಮತ್ತೆ ಮತ್ತೆ ನನ್ನಿ೦ದ ತಡವಿಸಿಕೊ೦ಡು….ಮತ್ತೆ ಕಪಾಟು ಸೇರಿದೆ….ಮು೦ಚೆ ಹೇಗಿತ್ತೋ ಹಾಗೆ……
ಮತ್ತೊಮ್ಮೆ ಒತ್ತರೆಯ ಮನಸಾದಾಗ ಧೂಳು ತೆಗೆವ ನೆಪದಲ್ಲಿ ಇವೆಲ್ಲಾ ಮತ್ತೆ ಹೊರ ಬ೦ದು ಹರಡಿಕೊಳ್ಳಬೇಕಲ್ಲಾ….
 

‍ಲೇಖಕರು avadhi

12 June, 2013

2 Comments

  1. Sowmya

    Tumba ishta aytu Anu. Chenda barediddera. Nanna nenapugaloo ecchettavu nimmondige…..

  2. Ashoka Bhagamandala

    ತುಂಬಾ ಕುಷಿಯಾಯ್ತು….ನನಗೂ ಒಮ್ಮೊಮ್ಮೆ ಇಂತಹಾ ಕೆಲಸಗಳನ್ನು ಹಚ್ಚಿಕೊಂಡು ಕೂರುವ ಅಭ್ಯಾಸ ಇದೆ…ಆದರೆ ಅಖೇರಿಗೆ ನನ್ನನ್ನು ಬೈದುಕೊಂಡೂ ಒತ್ತರೆ ಮಾಡುವುದು ನನ್ನ ಅಮ್ಮನೇ :)))

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading