ಅಪ್ಪ…
ದೀಪಾ ಗಿರೀಶ್
ಎಲ್ಲರೂ ಅಪ್ಪಂದಿರ ದಿನದಂದು ತಂತಮ್ಮ ಅಪ್ಪಂದಿರ ಬೆರಳು ಹಿಡಿದು ದಾರಿಗುಂಟ ಸಾಗಿದ್ದನ್ನೋ, ಹೇಗೆ ಸುರಿಯೋ ಮಳೆಯಲ್ಲಿ ತನ್ನಪ್ಪ ತನ್ನನ್ನು ನೆನೆಸದೇ ಮನೆ ತಲುಪಿಸಿದನೆಂದೋ, ಹೇಗೆ ಒಟ್ಟಿಗೆ ಮಳೆಗೆ ಮೈಯೊಡ್ಡಿ, ಆಲಿಕಲ್ಲು ಹೆಕ್ಕಿ ತಿಂದೆವೆಂದೋ, ಸೈಕಲ್ ಕಲಿಸಿದ್ದನ್ನೋ, ಹೆಗಲಲ್ಲಿ ಹೊತ್ತು ಬೆಟ್ಟ ಹತ್ತಿದ್ದನ್ನೋ ಬರೆಯುತ್ತಾರೆ. ಇರುವ ಒಳ್ಳೆಯ ನೆನಪುಗಳನ್ನೇ ಹೆಕ್ಕಿ ಹೆಕ್ಕಿ..
ನಾನೂ ಬಹಳ ವರ್ಷದಿಂದ ಬರೆಯಲು ಹವಣಿಸುತ್ತಿದ್ದೀನಿ.. ಅಂಥಹ ನೆನಪುಗಳನ್ನ. ಈವರೆಗೆ ಸಾಧ್ಯವಾಗಿಲ್ಲ.
ನಾ ಕಂಡ ನನ್ನ ಅಪ್ಪ ಅಂದ್ರೆ, ಅಮ್ಮನ ಕೆನ್ನೆಗೆ ಪೆನ್ನಿನಲ್ಲಿ ಚುಚ್ಚಿ, ಅದರ ನಿಬ್ಬು ಬಾಯಿಗೆ ಬರುವಂತೆ ಮಾಡಿದ ಸಾಹಸಿ! ಒಂದು ಕೈಲಿ ಸುರಿವ ರಕ್ತವ ಒತ್ತಿ ಹಿಡಿದು ಮನೆ ಬಿಟ್ಟ ಅಮ್ಮ, ಎರಡು ರಾತ್ರಿ ಎರಡು ಹಗಲಾದರೂ ಮರಳಿ ಬಾರದಿದ್ದರೂ ಏನು ಎತ್ತ ವಿಚಾರಿಸದೆ, ಮೂರು ಹೆಣ್ಣುಮಕ್ಕಳನ್ನು ವರಾಂಡದಲ್ಲಿ ಮಲಗಿಸಿ, ಸಖಿಯೊಂದಿಗೆ ಅಂತಃಪುರ ಸೇರುತ್ತಿದ್ದ ವಿಲಾಸಿ! ಅಮ್ಮ ಧರ್ಮಸ್ಥಳಕ್ಕೆ ಹೋಗಿ ನೇತ್ರಾವತಿಯ ಪಾಲಾಗಬೇಕಿದ್ದವಳು ಮೂರುಮಕ್ಕಳ ನೆನೆದು ಮರಳಿದಳು. ಮನೆಗೆ ವಾಪಸ್ಸು ಬಿಟ್ಟುಕೊಳುವುದಕ್ಕೆ ಮುನ್ನ ಅವಳ ಶೀಲವನ್ನು ಶಂಕಿಸಿ ನನ್ನಪ್ಪ ಶ್ರೀರಾಮಚಂದ್ರನಾದ!!
ಮೂರನೇ ಕ್ಲಾಸು ಓದುತ್ತಿದ್ದ ನನ್ನ ಕೈಲಿ ಅಪ್ಪ ಬಿಸ್ಕತ್ತು ಕೊಡಿಸಿ ಪತ್ರಬರೆಸುತ್ತಿದ್ದ, ‘ಪ್ರೀತಿಯ ಅಮ್ಮುವಿಗೆ..’ ಅರೆ! ಅಮ್ಮು ಅಂದ್ರೆ ನನ್ನಕ್ಕನನ್ನು ಮುದ್ದಿಗೆ ಕರೆಯುತ್ತಿದ್ದದ್ದು. ಮನೆಯಲ್ಲೇ ಇರುವ ಅಕ್ಕನಿಗ್ಯಾಕೆ ಪತ್ರ..? ಗೊಂದಲವಾಗುತ್ತಿತ್ತು. ಬಿಸ್ಕತ್ತು ಪತ್ರ ಬರೆಸುತ್ತಿತ್ತು. ಕೊನೆಯ ಸಾಲು ನಾನು ಬರೆದಂತೆ ಬರೆಸಲಾಗುತ್ತಿತ್ತು. ‘ಚಿಕ್ಕಮ್ಮಾ.. ನಿಮ್ಮನ್ನು ನೋಡಬೇಕು ಅಂತ ಆಸೆಯಾಗಿದೆ.. ಈ ಸಲ ಬೇಸಿಗೆಗೆ ನಿಮ್ಮೂರಿಗೆ ಬರಲಾ?’ ಅಂತ. ಹೇಳಿದ್ದನ್ನು ಬರೆದರೆ ಇನ್ಸೆಂಟಿವ್ ಸಿಗುತ್ತಿತ್ತು. ಬರೆಯುತ್ತಿದ್ದೆ.
ಒಮ್ಮೆ ಆಕೆಯ ಊರಿಗೆ ನನ್ನನ್ನು ಮತ್ತು ನನ್ನ ಅಕ್ಕನನ್ನು ಕರೆದುಕೊಂಡು ಹೋಗಿದ್ದರು. ಹೋದಕೂಡಲೇ ಅಲ್ಲಿಯ ಊರಿನವರಿಗೆ, ‘ನನ್ನ ಅಣ್ಣನ ಮಕ್ಳು, ನಾವೂ ಬರ್ತೀವಿ ಅಂತ ಒಂದೇ ಹಠ’ ಅಂತ ನಗುತ್ತಾ ಪರಿಚಯಿಸಿದ್ರು. ನಾವೂ ಚಿಕ್ಕಂದಿನಿಂದಲೇ ನಾಟಕಗಳಲ್ಲಿ ಅಭಿನಯಿಸಿದವರು. ಹೆತ್ತಪ್ಪನನ್ನು ;ಚಿಕ್ಕಪ್ಪಾ.. ಚಿಕ್ಕಪ್ಪಾ’ ಅಂತ ಕರೆದುಕೊಂಡು ಊರೆಲ್ಲಾ ಓಡಾಡುತ್ತಿದ್ದೆವು. ಒಮ್ಮೊಮ್ಮೆ ಬೇಕೆಂತಲೇ ‘ಅಪ್ಪಾ..’ ಎಂದು ಕರೆದು ನಾಲಿಗೆ ಕಚ್ಚಿಹಿಡಿದು, ತಲೆಕೆರೆದು ;ಚಿಕ್ಕಪ್ಪಾ’ ಎನ್ನುತ್ತಿದ್ದೆವು. ಅಪ್ಪ ಹಲ್ಲುಮುರಿ ಕಚ್ಚುವಷ್ಟರಲ್ಲಿ ಅಲ್ಲಿಂದ ಪರಾರಿ. ಅಲ್ಲಿ, ಅವರ ಮನೆಯ ರೂಮಿನ ಕಪಾಟಿನಲ್ಲಿ ನನ್ನಮ್ಮ ನಮ್ಮ ಸ್ಕೂಲ್ ಡೇಗೆಂದು ತಂದಿದ್ದ ಲಿಪ್ ಸ್ಟಿಕ್ಕು, ಮೇಕಪ್ ವಸ್ತುಗಳು, ಅಕ್ಕನ ಮಿಡ್ಡಿ, ಅಮ್ಮನ ಹೊಸ ಸೀರೆ.. ಇನ್ನು ಏನೇನೋ.. ನೋಡಿ ನಮಗೋ ಹೊಟ್ಟೆ ಉರಿದು ಹೋಯಿತು. ಊರಿಗೆ ವಾಪಸ್ಸಾಗುವ ದಿನ, ದೊಡ್ಡ ಸ್ಮಗ್ಲಿಂಗ್ ಗ್ಯಾಂಗಿನ ಲೀಡರ್ರಂತೆ ನಾನು ಅಕ್ಕನಿಗೂ ತಿಳಿಸದೆ ಅಲ್ಲಿಂದ ನನ್ನ ಫ಼ೇವರೆಟ್ ಲಿಪ್ ಸ್ಟಿಕ್ ಕದ್ದು (ನನ್ನದೇ ಆದರೂ!!) ಪ್ಯಾಂಟಿನ ಜೇಬಿನಲ್ಲಿ ಭದ್ರಪಡಿಸಿದೆ. ಬಸ್ ಸ್ಟಾಂಡಿನಲಿ ನಿಂತಾಗ ಪೋಲೀಸ್ ಪೇದೆಯೊಬ್ಬರು ನನ್ನ ಕಾಲಡಿ ಬಿದ್ದಿದ್ದ ವಸ್ತುವನ್ನು ತೆಗೆದುಕೊಳ್ಳುವಂತೆ ಸಂಜ್ಞೆ ಮಾಡಿದರು. ಅಪ್ಪ ಬಗ್ಗಿ ನೋಡಿದರೆ ಲಿಪ್ ಸ್ಟಿಕ್ ನನ್ನ ಜೇಬು ತೂತಾಗಿ ಕೆಳಗೆ ಉದುರಿತ್ತು. ‘ದರಿದ್ರ ಮುಂಡೇದೇ..’ ಎಂದು ಗೊಣಗುತ್ತ ತಲೆಯ ಮೇಲೊಂದು ಮೊಟಕಿದ ನನ್ನಪ್ಪ.
ನನ್ನ ಕಾಲೇಜು ದಿನಗಳು.. ‘ಓದಿ ಇವ್ಳೇನ್ ಕಲೆಕ್ಟರ್ ಆಗ್ತಾಳೆ..’ ಅಂತ ವ್ಯಂಗ್ಯ ಮಾಡಿದ ಅಪ್ಪ ಮೊದಲದಿನವೇ.ಕಾಲೇಜು ಫ಼ೀಸಿರಲಿ, ಬಸ್ ಚಾರ್ಚಿಗೂ ರುಪಾಯಿ ಕಾಸು ಕೊಡುತ್ತಿರಲಿಲ್ಲ. ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಬಂದ ಕ್ಯಾಷ್ ಅವಾರ್ಡುಗಳು ಅವರ ಕಿಸೆ ಸೇರಬೇಕಿತ್ತು. ನಾಟಕದ ಗೀಳು ಹತ್ತಿಸಿಕೊಂಡು ರವೀಂದ್ರ ಕಲಾಕ್ಷೇತ್ರ, ಹೆಚ್.ಎನ್, ಅಭಿನಯ ತರಂಗ ಸುತ್ತುತ್ತಿದ್ದ ನಾನು ಸಂಜೆ ಎಂಟರವರೆಗೂ ನಾಟಕ ನೋಡಿ, ಮನೆ ತಲುಪುವುದರೊಳಗೆ ಹತ್ತಾಗುತ್ತಿತ್ತು. ನನ್ನಪ್ಪ ಅಕ್ಕ-ಪಕ್ಕದ ಆಸಾಮಿಗಳನ್ನು ಕರೆದು ಮನೆಯಲ್ಲಿ ಕೂರಿಸಿಕೊಂಡು, ಅವರಿಗೆ ಬೋಂಡ ಬಜ್ಜಿ ತಿನ್ನಿಸಿ ಹೇಳುತ್ತಿದ್ದ,’ಇವಳಿದ್ದಾಳಲ್ಲಾ ಸಾರ್.. ಹಾಳಾಗಿ ಹೋಗಿದ್ದಾಳೆ. ಆ ಪಾರ್ಕು, ಈ ಹೋಟೆಲ್ಲು, ಈ ಲಾಡ್ಜ್ ಎಲ್ಲಾದ್ರೂ ಸಿಗ್ತಾಳೆ. ಎಲ್ಲಾದ್ರೂ ಕಂಡ್ರೆ ಹಿಡಿದು ನಾಲ್ಕು ಬಾರಿಸಿ’ ಅನ್ನುತ್ತಿದ್ದ. ಹೆಣ್ಣು ಮಕ್ಕಳ ಅಪ್ಪ ಅನ್ನುವ ಅಷ್ಟೊಂದು ಜವಾಬ್ದಾರಿ ಅವನ ಮೇಲಿತ್ತು! ಒಂದು ದಿನವಂತೂ ಬಸ್ಸು ಸಿಗದೆ ನಾ ಮನೆ ತಲುಪುವುದು ಹನ್ನೊಂದು ಗಂಟೆಯಾಗಿ ಹೋಯ್ತು. ಅಪ್ಪ ಡೋರ್ ಲಾಕನ್ನು ಹಾಕಿ ಕೀ ತನ್ನ ಕಿಸೆಯಲ್ಲಿ ಇಟ್ಟು ಮಲಗಿದ್ದ. ಕೊರೆವ ಚಳಿಯಲಿ ರಾತ್ರಿ ಬಾಗಿಲಲ್ಲಿ ಕಳೆದದ್ದನ್ನು ನೆನೆದರೆ ರಕ್ತ ಹೆಪ್ಪುಗಟ್ಟುತ್ತದೆ.
ಇಂತಿಪ್ಪ ಸಮಯದಲ್ಲಿ ನಮ್ಮ ಟೆಂಟ್ ಹೌಸಿನ ಪಾತ್ರೆಗಳನ್ನು ತೊಳೆಯಲು ಬರುತ್ತಿದ್ದ ಹೆಂಗಸೊಬ್ಬಳು ಗರ್ಭವತಿಯಾಗಿ, ಅದರ ಕಾರಣ ಮಹಾಪುರುಷ ನಮ್ಮಪ್ಪನಾಗಿರುವ ಸುದ್ದಿ ಕಿವಿಗೆ ಬಡಿಯಿತು. ಆ ಹೆಂಗಸಿನ ಅಣ್ಣ ಆಕೆಯನ್ನು ಬಚ್ಚಿಟ್ಟು, ಅವಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ, ಪೋಲೀಸರಿಗೆ ದೂರು ಕೊಡುವುದಾಗಿ ತಿಳಿಸಿ, ಹಣದ ಬೇಡಿಕೆಯನ್ನೂ ಇಟ್ಟ!, ಈ ಪ್ರಹಸನದಿಂದ ನಮ್ಮಪ್ಪನನ್ನು ಬಿಡಿಸಲು ಕೊನೆಗೆ ನಾವು ಮೂರು ‘ಹೆಣ್ಣು’ ಮಕ್ಕಳು ಸೇರಿ ನಮ್ಮ ಸ್ನೇಹಿತರು, ಸಹೋಧ್ಯೋಗಿಗಳಿಂದ ಹಣ ಸಂಗ್ರಹಿಸಿ ಅಪ್ಪನನ್ನು ಬಿಡಿಸಿಕೊಂಡು ಬಂದೆವು.
ಸರೀ ಮೂರು ಮೂರು ತಿಂಗಳಿಗೊಮ್ಮೆ ಅಪ್ಪ ಅಮ್ಮ ಮನೆಯನ್ನು ಪಾಲುಮಾಡಲು ನಿಂತುಕೊಳ್ಳುತ್ತಿದ್ದರು. ಇರುವ ಸಾಮಾನು -ಸರಂಜಾಮುಗಳನೆಲ್ಲಾ ಮನೆಯ ಹಾಲಿನಲ್ಲಿ ತಂದು ಸುರಿಯಲಾಗುತ್ತಿತ್ತು. ‘ನಾನು ಹೊರಟುಹೋಗ್ತೀನೀ..’ ‘ನಾನು ಹೊರಟುಹೋಗ್ತೀನೀ..’ ಆದ್ರೆ ಯಾರೂ ಹೋಗ್ತಿರಲಿಲ್ಲ. ಕೊನೆಗೊಂದು ದಿನ ಅಪ್ಪ-ಅಮ್ಮ ಇಬ್ಬರೂ ಮಕ್ಕಳ ಮೇಲೆ ಜಗಳವಾಡಿಕೊಂಡು ಟೆಂಪೋ ತಂದು ನಿಲ್ಲಿಸಿ, ಸಾಮಾನು ತುಂಬಿಕೊಂಡು ಹೋದರು, ಅವರ ಸ್ವಂತ ಊರಿಗೆ!! ಸಧ್ಯ! ಹಾಕಿಕೊಳ್ಳೋಕೆ ನಾಲ್ಕು ಜೊತೆ ಬಟ್ಟೆಗಳು, ನಮ್ಮ ಪುಸ್ತಕಗಳು.. ಇವಿಷ್ಟನ್ನಾದರೂ ಉಳಿಸಿ…
ಸಾಮಾನ್ಯವಾಗಿ ಯಾರಿಗಾದರೂ ಇಂಥಹ ಸನ್ನಿವೇಶಗಳು ಕನಲಿಸುತ್ತದೆ, ದುಃಖಕ್ಕೆ ಈಡುಮಾಡುತ್ತದೆ. ಆದರೆ ನಾವು ಸಂಭ್ರಮಿಸಿದ್ದೇ ಹೆಚ್ಚು. ಬಿಡುಗಡೆಯ ಭಾಗ್ಯ ದೊರೆತದ್ದಕ್ಕಾಗಿ. ಹೇಗೂ ಬದುಕಿಬಿಟ್ಟೆವು.
ಇದೀಗ ಹಿರಿಜೀವಗಳು ಮರಳಿವೆ. ಅವರಿಗೊಂದಿಷ್ಟು ನೆಮ್ಮದಿಯ ಸೂರು ಕೊಡಲು ನಾವು ‘ಹೆಣ್ಣುಮಕ್ಕಳು’ ತೀರ್ಮಾನಿಸಿದ್ದೇವೆ. ಜೊತೆಗೆ ನಮ್ಮ ಮಕ್ಕಳಿಗೆ ಒಳ್ಳೆಯ ಅಪ್ಪ-ಅಮ್ಮ ಆಗುವ ಜವಾಬ್ದಾರಿ ಅರಿತಿದ್ದೇವೆ. ಮುಂದೊಂದು ದಿನ ನಮ್ಮ ಮಕ್ಕಳು ಇಂಥಹ ಸಾಲುಗಳನ್ನು ಬರೆಯುವ ಪರಿಸ್ಥಿತಿ ಬಾರದಿರಲಿ ಎಂದು.
ನನ್ನಪ್ಪ ಅಂದ್ರೆ ನಂಗೆ………
ಹ್ಯಾಪಿ ಫ಼ಾದರ್ಸ್ ಡೇ..







ಅಪ್ಪ ಅನ್ನುವ ಜೀವ ಒಂದೇ.. ಹೆಸರೊಂದೇ.. ಸ್ಥಾನವೊಂದೇ.. ಇರುವಿಕೆ, ಪ್ರೀತಿ, ರೀತಿ ನೀತಿ, ವರ್ತನೆಗಳು ಬೇರೆ ಬೇರೆ. ಅಪ್ಪ ಹಲವರಿಗೆ.. ದೈವವಾದರೆ ಹಲವರಿಗೆ ರಾಕ್ಷಸ.. ಯಾವ ಪ್ರತಿಕ್ರಿಯೆಗಳನ್ನೂ ಹೇಳಲಾರದಷ್ಟು ಮೂಕವಾಗಿಸುವ ಬರಹ ಮೇಡಂ..
ಹ್ಯಾಟ್ಸಾಫ್ ಟು ಯು ಮೇಡಂ…
😐
ನಮಸ್ತೆ ದೀಪಕ್ಕಾ,
ಅದೆಷ್ಟೋ ಬಾರಿ ಆ ಸ್ಥಾನ ತನ್ನ ಡೋಲಾಯಮಾನ ಸ್ಥಿತಿಯನ್ನ ವ್ಯಕ್ತಪಡಿಸುತ್ತಾ ಹೋಗುತ್ತದೆ, ಬದುಕಲು ಮಾಡುವ ಸರ್ಕಸ್ಸುಗಳು ಕೂಡ… ಅದೆಷ್ಟೇ ಕೆಟ್ಟ ಅಪ್ಪನಾದರೂ ಕೊನೆಗಾಲದಲ್ಲಿ ಸೂರು ಕೊಡಲು ನಿರ್ಧರಿಸಿದ್ದು ನಿಮ್ಮಲ್ಲಿ ಧನ್ಯತಾ ಭಾವ ಮೂಡಿಸಿತು…
ದೀಪ,
ನಿಮ್ಮ ಲೇಖನ ಮೂಕಳನ್ನಾಗಿಸಿದೆ!!!
ಎಷ್ಟು ಹೆಣ್ಣುಮಕ್ಕಳ ಪರಿಸ್ಥಿತಿ ಹೀಗೇ ಇರಬಹುದೆ೦ದು ಅ೦ದಾಜು ಮಾಡುತಿದ್ದೆ!
ಅನುಭವಿಸಿಯೂ ಈ ರೀತಿ ಹೇಳಿಕೊಳ್ಳುವ ಧೈರ್ಯ ಎಲ್ಲರಿಗೂ ಬರಲಾರದು….
ನಿಮ್ಮ ಧೈರ್ಯ – ಸ್ಥೈರ್ಯ ಮೆಚ್ಚಲೇ ಬೇಕು….. ನೀವು ಮಾದರಿ ಎ೦ದರೂ ತಪ್ಪಾಗಲಾರದು….
ನಿಮ್ಮ ಮೇಲೆ ಅಭಿಮಾನವ೦ತೂ ಮೂಡುತಿರುವುದು ಸುಳ್ಳಲ್ಲ….
ರೂಪ
Adakke thilidavaru heluvudu. Gandu makkaligintha, Hennu makkale vasi, anthya kaladalli thande thayige aasare aguthare yendu. prayashaha nimma sthanadalli yaradaru gandu makkalididare, nimma thande madida kruthyakke avarannu hathira serisuthiralilla. Hats off to you Deepa Girish. nivu maduva olleya kelasagale nimmannu rakshisuthave.. nimage shubavagali
ನಿಮ್ಮ ಬರಹ ಹಾಗೂ ಬದುಕಿನ ತೀವ್ರತೆ ಕದಲಿಸಿದೆ, ಮನಸ್ಸು ಮೌನಿ,
ಅಪ್ಪನ ನೆರಳು ಬದುಕ ಕಾಡುವಾಗ ಆಸರೆಗೆ ನೆಮ್ಮದಿಯ ಹುಡುಕಾಟ ದೊಡ್ಡದು…
🙁
ಅಕ್ಕಾ, ಕೈ ಮುಗಿಯುತ್ತೇನೆ ತಾಯಂದಿರು ನೀವು ಮೂರು ಜನ ಹೆಣ್ಣುಮಕ್ಕಳೂ ಕೂಡ. ಎಷ್ಟೆಲ್ಲಾ ನೋವಡಗಿಸಿ ಜೀವನದಿ ಎದ್ದುನಿಂತುಬಿಟ್ಟ ನಿಮ್ಮ ಜೀವನ ಪ್ರೀತಿಗೆ ಏನೆಂದು ಅಭಿನಂದಿಸಬೇಕೋ ತಿಳಿಯುತ್ತಿಲ್ಲ. ಅಪ್ಪ-ಅಮ್ಮ ಜಗಳ ಮಾಡಿಕೊಂಡು ಮನೆಯ ಶಾಂತಿ ಹಾಳುಮಾಡುವುದರಿಂದ ಮಕ್ಕಳು ಹಾದಿ ತಪ್ಪುತ್ತಾರೆ ಎನ್ನುವ ಪೂರ್ವಗ್ರಹವೊಂದಿದೆ, ಅದನ್ನು ಸುಳ್ಳಾಗಿಸುವಂತೆ ಬದುಕಿ ತೋರಿಸುತ್ತಿರುವ ನಿಮಗೆ ನನ್ನ ಅಭಿನಂದನೆಗಳು. ಕಾಡಿಸಿದರೂ ಬಸವಳಿದ ಹಿರಿಯ ಜೀವಗಳ ಪೋಷಣೆಗೆ ನಿಂತಿರುವುದು ಹೆಮ್ಮೆಯ ವಿಚಾರ.
– ಪ್ರಸಾದ್.ಡಿ.ವಿ.
Eega nodikolluvudhe nijavaadhare ashtu dhodda manassu nimmadhu. Fine. But please do that on your terms. Some people do not deserve it.
ದೀಪಾ ಗಿರೀಶ್,
ಎಲ್ಲರಿಗೂ ಅವರಪ್ಪ ಇಷ್ಟ..ನನಗೆ ಇಷ್ಟಾನ ಕಷ್ಟಾನ ಇನ್ನೂ ಗೊತ್ತಾಗಿಲ್ಲ. ಉದಯ್ ಇಟಗಿ ಸರ್‍ಗೆ ಕಷ್ಟ..ಆದ್ರೆ ನಿಮಗಂತೂ ಕಷ್ಟ ಕಷ್ಟ…ಆದ್ರೂ ಈಗ ನೀವೇ ಅಪ್ಪ ಆಗಿದ್ದು ನನಗಂತೂ ತುಂಬಾ ಇಷ್ಟವಾಯ್ತು ಯಾಕೇಂತ ಗೊತ್ತಿಲ್ಲ..
ನಿಮ್ಮಗಳ ಅನುಭೂತಿಗೆ ಇಮ್ಮಡಿಯಾಗಿದೆ ಜೀವನಪ್ರೀತಿ..
ಭರವಸೆಯ ಮಾತುಗಳಿಗೆ ನೂರು ಸಲಾಮ್ಸ್..
ಸಾಮಾನ್ಯವಾಗಿ ಯಾರಿಗಾದರೂ ಇಂಥಹ ಸನ್ನಿವೇಶಗಳು ಕನಲಿಸುತ್ತದೆ, ದುಃಖಕ್ಕೆ ಈಡುಮಾಡುತ್ತದೆ. ಆದರೆ ನಾವು ಸಂಭ್ರಮಿಸಿದ್ದೇ ಹೆಚ್ಚು. ಬಿಡುಗಡೆಯ ಭಾಗ್ಯ ದೊರೆತದ್ದಕ್ಕಾಗಿ. ಹೇಗೂ ಬದುಕಿಬಿಟ್ಟೆವು.
ಇದೀಗ ಹಿರಿಜೀವಗಳು ಮರಳಿವೆ. ಅವರಿಗೊಂದಿಷ್ಟು ನೆಮ್ಮದಿಯ ಸೂರು ಕೊಡಲು ನಾವು ‘ಹೆಣ್ಣುಮಕ್ಕಳು’ ತೀರ್ಮಾನಿಸಿದ್ದೇವೆ. ಜೊತೆಗೆ ನಮ್ಮ ಮಕ್ಕಳಿಗೆ ಒಳ್ಳೆಯ ಅಪ್ಪ-ಅಮ್ಮ ಆಗುವ ಜವಾಬ್ದಾರಿ ಅರಿತಿದ್ದೇವೆ. ಮುಂದೊಂದು ದಿನ ನಮ್ಮ ಮಕ್ಕಳು ಇಂಥಹ ಸಾಲುಗಳನ್ನು ಬರೆಯುವ ಪರಿಸ್ಥಿತಿ ಬಾರದಿರಲಿ ಎಂದು.
ನನ್ನಪ್ಪ ಅಂದ್ರೆ ನಂಗೆ………tumba manamuttuva haage manatattuva haage barediddiri….
ದೇವ್ರೇ .. ನಂಗೇನು ಹೇಳಕ್ಕೂ ತೋಚ್ತಾ ಇಲ್ಲ ದೀಪಾ ಅವರೆ, ಇದನ್ನು ಬರೆಯುವ ಧೈರ್ಯ ನಿಮಗೆ ಬಂದಿದ್ದಾದರೂ ಹೇಗಮ್ಮಾ? ಬಹುಶಃ ನಿಮ್ಮ ಬಾಲ್ಯದ ಅನುಭವಗಳು ನಿಮ್ಮನ್ನು ವಜ್ರವನ್ನಾಗಿಸಿವೆ.
ಅಕ್ಕ ನಿನಗಿರುವ ಧೈರ್ಯ ನನಗೂ ಒಂಚೂರ್ ಕೊಟ್ಬಿಡು.. ಅಪ್ಪನ ಕಹಿ ನೆನಪು ನನ್ನಲ್ಲೂ ಮನೆ ಮನೆ ಮಾಡಿದೆ.. ಆ ನೆನಪು ನನ್ನನ್ನು ಕೆಲವೊಮ್ಮೆ ಕುಗ್ಗರಿಸಿ ಬೀಳಿಸುತ್ತದೆ… ನನ್ನ ಅಪ್ಪನ ಬಗ್ಗೆ ನಾನಿನ್ನೂ ಏನನ್ನೂ ಹೇಳಿಕೊಂಡಿಲ್ಲ. ನಿಮ್ಮ ಲೇಖನ ಓದಿದ ಮೇಲೆ ಕಹಿ ಸತ್ಯವನ್ನು ಒಮ್ಮೆ ಹೊರ ಹಾಕಿಬಿಡಲೆ ಎನ್ನಿಸುತ್ತಿದೆ.
ಮತ್ತೆ ಯಾರೂ ನನ್ನ ಅಪ್ಪನ ಬಗ್ಗೆ ಕೇಳದೆ ಇರಲಿ ಎನ್ನುವ ಭರವಸೆಯಾದರೂ ಮೂಡಿತೆಂಬ ಭಾವನೆ ನನಗೆ.
Deepa nimmada gatti hrudaya . ekendare sanna vayassinalli bandantha kastagalannu edurisiddeera.nimmagalaalle vobbarigobbaru tayagi. mathu mrudhumanassina hudugi ekendare konegaladalli hethavarige ashraya kottu. Once again hats of to you sisters.
ನಿಮ್ಮ ಅಪ್ಪ ನ ಬಗ್ಗೆ ಓದಿ ಸಂಕಟವಾಯ್ತು . ಹೀಗೂ ಇರ್ತಾರ ಅನ್ನಿಸಿತು . ನಿಮ್ಮ ಬದುಕು ಬಂಗಾರವಾಗಲಿ .