ಟಿ ಕೆ ದಯಾನಂದ್

ಕಳೆದವಾರ ಇಟ್ಟ ಜಾಗದಿಂದ ಕೆಮೆರಾವನ್ಟ್ಟು ಅತ್ತಿತ್ತ ಅಲ್ಲಾಡಿಸದ ಹುಟ್ಟು ಸೋಂಬೇರಿ ನಿರ್ದೇಶಕನೊಬ್ಬನ ಪರಮದರಿದ್ರ ಚಿತ್ರವೊಂದನ್ನು ನೋಡಿ ಕನ್ನಡಚಿತ್ರಗಳನ್ನು ನೋಡುವ ಆಸೆಯೇ ಬತ್ತಿ ಹೋದಂತಾಗಿತ್ತು. ಈ ಶೂನ್ಯಸ್ಥಿತಿಯಿಂದ ನನ್ನನ್ನು ಹೊರಗೆಳೆದು ತಂದದ್ದು ನಿರ್ದೇಶಕ ಸೂರಿಯ “ಕಡ್ಡಿಪುಡಿ” ಚಿತ್ರ. ಚಿತ್ರ ನೋಡಿ ಮುಗಿದ ಮೇಲೆ ದುನಿಯಾ ಚಿತ್ರದ ಟೈಮಿನಲ್ಲಿ ಬದುಕಿದ್ದ ಸೂರಿ ನನಗೆ ಮತ್ತೆ ಸಿಕ್ಕಂತಾಗಿತ್ತು. ರಕ್ತಚರಿತ್ರ, ಗ್ಯಾಂಗ್ಸ್ ಆಫ್ ವಾಸ್ಸೆಪುರ್ ಚಿತ್ರಗಳಲ್ಲಿದ್ದಂತಹವೇ ಅಗಾಧ ಕ್ಯಾನ್ವಾಸಿನ ಕಥಾವಿವರಗಳನ್ನು ಒಟ್ಟುಗೂಡಿಸಿ ಚಿತ್ರ ಕಟ್ಟಿಕೊಟ್ಟಿರುವ ಸೂರಿ ಈ ಸಲ ಯಾರೂ ಬೆರಳು ತೋರಿಸದಂತಹ ಅದ್ಭುತ ಚಿತ್ರವೊಂದನ್ನು ಕನ್ನಡದ ಮುಂದಿಟ್ಟಿದ್ದಾರೆ. ಚಿಗುರಿದ ಕನಸು, ಜೋಗಿ ಮತ್ತು ಭೂಮಿತಾಯಿಯ ಚೊಚ್ಚಲ ಮಗ ಚಿತ್ರದ ನಂತರ ಶಿವರಾಜಕುಮಾರ್ “ನಟಿಸಿರುವ” ಚಿತ್ರವೂ ಇದು ಹೌದೆಂಬ ಮಟ್ಟಿಗೆ ಅವರು ಕಡ್ಡಿಪುಡಿ ಆನಂದನ ಪಾತ್ರದೊಳಗೆ ನುಗ್ಗಿಬಿಟ್ಟಿದ್ದಾರೆ.
ರೆಕ್ಕೆ ವೆಂಕಟೇಶನ ಪಾತ್ರದ ಆ ಹೊಸಹುಡುಗನನ್ನ ಸೂರಿ ಅದೆಲ್ಲಿಂದ ಹಿಡಿದು ತಂದರೋ ಕಾಣೆ, ತೆರೆಯ ಮೇಲಿದ್ದಷ್ಟೂ ಹೊತ್ತು ಆ ಪಾತ್ರದ ಅಬ್ಬರಿಸುವ ವೇಗಕ್ಕೆ ನಾಯಕನೂ ಒಮ್ಮೊಮ್ಮೆ ಡಲ್ಲು ಎನಿಸಿಬಿಡುತ್ತದೆ. ಇಡೀ ಚಿತ್ರದ ಅಸಲಿ ಬಲ ಹಿನ್ನೆಲೆಸಂಗೀತ. ಸಂಗೀತದ ಮೂಲಕವೇ ದೃಶ್ಯದ ತೀವ್ರತೆಯನ್ನು ಎತ್ತರಕ್ಕೆ ಕೊಂಡೊಯ್ಯುವ ಹರಿಕೃಷ್ಣರಿಗೆ ಸೆಲ್ಯೂಟು. ಸಣ್ಣ ಸಣ್ಣ ವಿವರಗಳಲ್ಲೂ ತಾರ್ಕಿಕತೆಗಳನ್ನು ಬಿಟ್ಟುಕೊಡದೆ ಒಂದು ದೊಡ್ಡ ಕಥಾಹರಿವನ್ನು ಚಿತ್ರವಾಗಿ ರೂಪಿಸಿರುವ ನಿರ್ದೇಶಕ ಸೂರಿ ತಮ್ಮ ಹಿಂದಿನ ಜಂಗ್ಲಿ, ಜಾಕಿ, ಇಂತಿ ನಿನ್ನ ಪ್ರೀತಿಯ, ಅಣ್ಣಾಬಾಂಡ್ ಚಿತ್ರಗಳಲ್ಲಿ ಆಲ್ ಮೋಸ್ಟ್ ಕಳೆದೇ ಹೋಗಿದ್ದರು. ಇದೀಗ ಬಿಡುಗಡೆಯಾಗಿರುವ ಕಡ್ಡಿಪುಡಿಯ ಮೂಲಕ “ದುನಿಯಾ” ಸೂರಿ ವಾಪಸ್ ಬಂದಿದ್ದಾರೆ. ಜೊತೆಗೊಂದು “ಆಡಿಯೆನ್ಸ್ ಸ್ಪೆಷಲ್” ಚಿತ್ರ ಕಟ್ಟಿಕೊಟ್ಟಿದ್ದಾರೆ. ಟೂ ಥಂಬ್ಸ್ ಅಪ್ ಫಾರ್ “ಕಡ್ಡಿಪುಡಿ”.
ದಿನೇಶ್ ಕುಮಾರ್

ಹುಶ್, ಈ ಕಡ್ಡಿಪುಡಿಯ ಹ್ಯಾಂಗ್ ಓವರ್ ನಿಂದ ಸದ್ಯಕ್ಕೆ ಬಿಡಿಸಿಕೊಳ್ಳುವುದು ಕಷ್ಟ. ಮನುಷ್ಯನ ಒಳಗನ್ನು ಇಷ್ಟು ಸೂಕ್ಷ್ಮವಾಗಿ ಕುಸುರಿ ಕುಸುರಿಯಾಗಿ ಹರವಿಬಿಡುವುದು ಸೂರಿಗೆ ಹೇಗೆ ಸಾಧ್ಯವಾಯಿತೋ? ಇಲ್ಲಿ ಎದೆ ನಡುಗಿಸುವ ಕ್ರೌರ್ಯವಿದೆ, ಆದರೆ ರಕ್ತದ ಕಮಟು ಗೊತ್ತಿಲ್ಲದಂತೇ ಒಳಗೆ ಪ್ರವಹಿಸುವಂಥದ್ದು. ಸುತ್ತಲ ಬದುಕಿನ ಥರೇವಾರಿ ಪಾತ್ರಗಳನ್ನು ಅವು ಇದ್ದ ಹಾಗೆಯೇ ತೆರೆದಿಡಲಾಗಿದೆ, ಯಾವುದಕ್ಕೂ ಅತಿರೇಕದ ಬಣ್ಣಗಳಿಲ್ಲ. ಸೂರಿ ಮೂಲತಃ ಚಿತ್ರಕಲಾವಿದ. ಅವರ ಕುಂಚ ಮನುಷ್ಯನ ಮೂಲಗುಣಗಳನ್ನೇ ಅದ್ದಿಕೊಂಡು ಕಡ್ಡಿಪುಡಿಯನ್ನು ಚಿತ್ರಿಸಿದೆ. ಇಲ್ಲಿ ಒಂದು ಪಾತ್ರವೂ ಮತ್ತೊಂದರಂತಿಲ್ಲ. ಒಂದದಕ್ಕೂ ಒಂದೊಂದು ಜಗತ್ತು. ಇಲ್ಲಿ ಹೀರೋ ಹೀರೋ ಅಲ್ಲ, ಅವನು ಏಕಕಾಲಕ್ಕೆ ಹೀರೋನೂ ಹೌದು, ವಿಲನ್ನೂ ಹೌದು. ನಾಯಕನಟಿಗೂ ಇದೇ ಮಾತು ಅನ್ವಯ. ಸಿನಿಮಾ ಚಲಿಸಿದಂತೆಲ್ಲ ನಮ್ಮೊಳಗು ಚಲಿಸಲು ತೊಡಗುತ್ತದೆ, ಒಮ್ಮೊಮ್ಮೆ ಓಡುತ್ತದೆ. ಸಾಹಿತ್ಯವಾಗಲೀ, ಚಲನಚಿತ್ರವಾಗಲೀ ತಲ್ಲಣ ಹುಟ್ಟಿಸದೇ ಹೋದರೆ, ನಮ್ಮೊಳಗನ್ನೊಮ್ಮೆ ನಾವು ನೋಡಿಕೊಳ್ಳದಂತೆ ಮಾಡದಿದ್ದರೆ ಅದು ಸಾಹಿತ್ಯವೂ ಅಲ್ಲ, ಚಲನಚಿತ್ರವೂ ಅಲ್ಲ. ಸೂರಿ ನಮ್ಮ ಎದೆಯ ಮೇಲೇ ಚಿತ್ರ ಬರೆಯುತ್ತಾರೆ, ತಲ್ಲಣ ಹುಟ್ಟಿಸುತ್ತಾರೆ. ಸೂರಿಗೊಂದು ಥ್ಯಾಂಕ್ಸು, ಇಷ್ಟು ಒಳ್ಳೆಯ ಸಿನಿಮಾ ಕೊಟ್ಟಿದ್ದಕ್ಕಾಗಿ.
ಮರೆಯಬಾರದ ಮಾತು: ಶಿವಣ್ಣ ಮತ್ತಿತರ ಎಲ್ಲ ನಟರ ಅಭಿನಯಕ್ಕೆ ನೂರು ಅಂಕ. ಆದರೆ ಆ ಮೂರು ವಿಕ್ಷಿಪ್ತ ಕ್ಯಾರೆಕ್ಟರುಗಳನ್ನಂತೂ ಮರೆಯುವಂತೆಯೇ ಇಲ್ಲ, ನೆನಪಾದಾಗೆಲ್ಲ ಮೈಮೇಲೆ ಹುಳ ಹರಿದಂತಾಗುತ್ತದೆ.







ಇಷ್ಟೊಂದ್ ಚೆನ್ನಾಗಿದೆಯಾ, ಮತ್ತ್ಯಾಕೆ ವಿಜಯವಾಣೀ ಅಡ್ದಗೋಡೆ ಮೇಲೆ ಬುಡ್ಡಿ ಇಟ್ಟಂಗೆ ಬರೆದಿದೆ