ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೇರ್ ಆಂಡ್ ಲವ್ಲೀ!

ಕಥೆ

ಅರಬಗಟ್ಟೆ ಅಣ್ಣಪ್ಪ

”ನೀನೇನ್ ಹೆಣ್ ಹುಡ್ಗಿಯೇನೋ ಹಂಗೆ ಮಕಕ್ಕೆ ಸುಣ್ಣ ಮೆತ್ಕೋತೀಯಲಾ” ಅತ್ತಲಿಂದ ಅವ್ವನ ಬಾಣಧ್ವನಿ, ಇತ್ತ ಕನ್ನಡಿಯ ಮುಂದೆ ಬಾಡಿ ನಿಂತ ಮಗನ ಮೊಗಗಣಿ. ‘ಹೌದು, ಚೆನ್ನಾಗಿ ಕಾಣೋ ಹಪಹಪಿ ಬರೀ ಹೆಣ್ಮಕ್ಳಿಗೆ ಮಾತ್ರಾನಾ…’ ಮಗ ರಮೇಶನ ಆಲೋಚನೆಗಳು ಅಂಗಳದ ಬಳ್ಳಿ ರಂಗೋಲಿಯಂತೆ ಎಲ್ಲಿಂದೆಲ್ಲಿಗೋ ಹೆಣೆದುಕೊಂಡಿದ್ದವು, ಮತ್ತಲ್ಲೇ ಇರುವಂತೆ! ಮಾತೆರಡನು ಮುಗಿಸಿ ಭೂಮಿ ಹುಣ್ಣಿಮೆ ಹಬ್ಬದ ಗಡಿಬಡಿಯಲ್ಲಿ ಅವ್ವ ರಂಗಮ್ಮ ಅಂಗಳ ಬಿಟ್ಟೆದ್ದರೂ ರಮೇಶನ ಮನಸ್ಸು ಮಾತ್ರ ಪೂರ್ಣಗೊಂಡ ರಂಗು ರಂಗಿನ ರಂಗೋಲಿಯ ಸುತ್ತಲೇ ಗಿರಕಿ ಹೊಡೆಯುತ್ತಿತ್ತು.

ರಂಗಮ್ಮ, ಚೆನ್ನಪ್ಪ ದಂಪತಿಗಳಿಗೆ ರಮೇಶ, ರಾಣಿಯೆಂಬ ಗಿಣಿಯಂಥ ಎರಡು ಮಕ್ಕಳು. ರಮೇಶ ರಾಜಕುಮಾರ್ ಆದ್ರೆ ಮಗಳು ಮಾಲಾಶ್ರೀ… ಹೀಗೆ ಅಭಿಮಾನದಿಂದ ಕೊಂಡಾಡಿಕೊಳ್ಳುವುದು ದಂಪತಿಗಳಿಗೆ ಅಚ್ಚುಮೆಚ್ಚು. ಚೆನ್ನಪ್ಪ ದೂರದೂರಿಗೆ ಕೂಲಿಗೆ ಹೋದವನು ಬರುವ ದೀಪಾವಳಿಗೆ ಬರುತ್ತೇನೆಂದಿದ್ದ. ಈಗ ಭೂಮಿ ಹುಣ್ಣಿಮೆ ಮಾತ್ರ ಈ ಮೂವರದೆ. ಚೆನ್ನಪ್ಪ ಭೂಮಿಹುಣ್ಣಿಮೆ ತಪ್ಪಿಸಿಕೊಳ್ಳಲೂ ಕಾರಣವಿತ್ತು!? ವಾಸಕ್ಕೊಂದು ಮನೆಯೆಂಬ ಗುಡಿಸಲು, ಊಟ ಬಟ್ಟೆಗಿರಲಿಲ್ಲ ಹಳಸಲು. ಮುಖ್ಯವಾಗಿ ತನ್ನದೆಂದೊಂದು ಗೆರೆ ಭೂಮಿಯಿರಲಿಲ್ಲ. ಇರಲಿ… ದೇವರಂಥ ಮಕ್ಕಳಿವೆ. ಪ್ರೌಢಾವಸ್ಥೆಯವು. ಎರಡು ವರ್ಷಗಳ ಅಂತರವಷ್ಟೆ ಅವೆರಡಕ್ಕೆ. ಸಣ್ಣಪುಟ್ಟದಕ್ಕೆಲ್ಲ ಕೊರತೆಯಿಲ್ಲದಿದ್ದರೂ ದುಂದುಗಾರಿಕೆ ಹಿಡಿಸುತ್ತಿರಲಿಲ್ಲ. ಮೈ ಕೈಗೆ ಸುಣ್ಣ ಬಣ್ಣವನ್ನೆಲ್ಲ ಮೆತ್ತಿಕೊಂಡು ಒಣ ಶೋಕಿ ಕೊಡುವಷ್ಟು ಸ್ಥಿತಿವಂತರಾಗಿರಲಿಲ್ಲ. ಶ್ರೀಮಂತರಂತೂ ಅಲ್ಲವೇ ಅಲ್ಲ.

ವಯಸ್ಸು ಮಾಗುತ್ತಿರುವ ಮಕ್ಕಳಿಗೆ ಈ ಬೆಳ್ಳಗೆ ಕಾಣುವ ಚಟವೊಂದು ಹೇಗೋ ಹತ್ತಿತ್ತು. ಮಗಳು ರಾಣಿಗೆ ಲಂಗ ದಾವಣಿ, ಮಗ ರಮೇಶನಿಗೆ ಜುಬ್ಬಾ ಪೈಜಾಮ ಚೌಕಾಸಿ ಮಾಡಿ ರಾಟೆಯ ಪರಶಮ್ಮಳ ಬಳಿ ಹೊಲಿಸಿದ್ದಳು ರಂಗಮ್ಮ. ಬಟ್ಟೆ ಕೊಡುವಾಗ ತಮ್ಮ ಮಕ್ಕಳು ಬೆಂಗಳೂರಿಂದ ಅವಸರಕ್ಕೆ ಬಂದು ಹಬ್ಬದ ಬಾಗಿಲಲೇ ವಾಪಾಸ್ಸಾಗಿದ್ದರು. ಅವರು ಹಾಗೆ ಬಂದು ಹೋಗುವಾಗ ಬಿಟ್ಟು ಹೋಗಿದ್ದ ಫೇರ್ ಆಂಡ್ ಲವ್ಲೀ ಕ್ರೀಮನ್ನು ಪರಶಮ್ಮ ರಂಗಮ್ಮನ ಮಕ್ಕಳಿಗೆಂದು ಕೊಟ್ಟಿದ್ದಳು. ‘ಪರಶವ್ವಾsss, ನಮ್ ಮಕ್ಳ ಮೇಲಿನ್ ಪ್ರೀತ್ಗೆ ಇದ್ನ ಕೊಟ್ಟಿಯೇನೋ ಖರೆ… ಮುಂದಿವು ಹಠ ಹಿಡಿದ್ರೆ ಎಲ್ಲಿಂದ್ ತಂದ್ ಕೊಡ್ಲಿ ಶಿವ್ನೇ ಅನ್ನೋದ್ ನನ್ ಆಲೋಚ್ನೆ… ಸುಮ್ನೆ ಇವೆಲ್ಲ ರುಚಿ ನಮ್ಗಾಕೆ ಅವ್ವಾ’ ಅಂತ ಗೊಣಗುತ್ತಲೆ ಮನೆ ಕಡೆ ಹೆಜ್ಜೆ ಹಾಕಿದ್ದಳು.

ಸಿದ್ದಪ್ಪಸ್ವಾಮೀ ಮಠದ ವಿಭೂತಿ ಕಟ್ಟೇ ರಂಗಮ್ಮಳ ಮನೆಯ ಮಹಾ ಪ್ರಸಾದನವಾಗಿತ್ತು. ಸುಣ್ಣ ಸಂಗಣಿ ಸುಟ್ಟು ಬೆಂದು ಬಂದಿದ್ದ ಅದರ ಘಮವೇ ಘಮ. ಹಣೆಗೆ ಹಚ್ಚಿಕೊಳ್ಳುವುದಕ್ಕಿಂತ ಅದನ್ನು ಮುಖಕ್ಕೆ ಪೌಡರಂತೆ ಸವರಿಕೊಂಡದ್ದೇ ಹೆಚ್ಚು. ವಿಭೂತಿಯ ಹೆಸರು ಕೇಳಿದರೆ ಸಾಕು ನರನಾಡಿಗಳಲೆಲ್ಲ ಹಲವರಿಗೆ ಭಕ್ತಿ ಅರಳಿದರೆ ಅದರ ಪರಿಮಳದ ಭಾವಬಿಂಬಗಳೆಲ್ಲ ಮುಖಕ್ಕೆ ಬಳಿದುಕೊಳ್ಳುವವರಲ್ಲಿ ಹೊಳೆಯುತ್ತಿದ್ದವು. ವಿಭೂತಿ ಅತಿರೇಕವೂ ಆಗಿ ಅದರ ಬಗ್ಗೆ ಜಿಗುಪ್ಸೆಯೂ ಮೂಡಿತ್ತು. ಇಂಥ ಮಕ್ಕಳಿಗೆ ತಾಯಿ ರಂಗಮ್ಮ ಸೆರಗಲ್ಲಿ ಬಚ್ಚಿಟ್ಟುಕೊಂಡು ಕೇವಲ ಮಗಳಿಗೆ ಮಾತ್ರ ಕೊಡೋಣವೆಂದು ತಂದಿದ್ದ ಫೇರ್ ಆಂಡ್ ಲವ್ಲೀ ಪೌಚು ಜಾರಿ ಬಿದ್ದು ಮಗನ ಪಾಲಾಗಿತ್ತು. ಪೌರುಷದಿಂದ ಹೋರಾಡಿ ಮಗ ರಮೇಶ ಅದನ್ನು ತಂಗಿಗಿಷ್ಟೂ ಬಿಡದೆ ಸವರಿಕೊಂಡಿದ್ದ. ಬಿಟ್ಟಿ ಸಿಕ್ಕಿದ್ದರಲ್ಲಿ ಬಿಡಿಗಾಸಿನಷ್ಟಿದ್ದರೂ ಸಂಭ್ರಮ ಊರಷ್ಟಿತ್ತು.

ಸಂಸಾರವೆಂಬ ಬಂಡಿ ನಡೆಸಲು ಚೆನ್ನಪ್ಪ ಪೇಟೆ ದಾಟಿ ಗುತ್ತಿಗೆ ಹೋಗಿದ್ದರೆ, ಇತ್ತ ರಂಗಮ್ಮ ಕುಟುಂಬದ ಬಂಡಿಯ ಕೀಲಾಗಿ ಬದುಕು ಸವೆಸುತಿದ್ದಳು. ಊರುಮನೆಯ ಮಕ್ಕಳೂ, ಅಂದ ಚೆಂದ ಭಿತ್ತಿಪತ್ರಗಳೂ, ಟಿವಿಯಲ್ಲಿನ ಕ್ರೀಮಿನ ವಯ್ಯಾರಗಳು ಮಕ್ಕಳಲ್ಲೊಂದು ಕನಸಿನ ಮನೆ ಕಟ್ಟಿದ್ದವು. ಸಂಕಷ್ಟದ ನಡುವೆಯೂ ಹೊಲಿಸಿದ್ದ ಬಟ್ಟೆ, ಹಬ್ಬದಡುಗೆ ಈ ಕನಸಿನ ಗೋಪುರದ ಮುಂದೆ ರುಚಿಸಲಿಲ್ಲ. ಬಳಸಿ ಬಿಟ್ಟಿದ್ದ ಬಿಟ್ಟಿ ಸಿಕ್ಕಿದ್ದ ಫೇರ್ ಆಂಡ್ ಲವ್ಲೀ ಪೌಚು ಮಕ್ಕಳಿಗೆ ಹುಚ್ಚು ಹಿಡಿಸಿತ್ತು. ಪರಶಮ್ಮ ಕೊಟ್ಟಿದ್ದ ಪೌಚನ್ನು ಅದೆಷ್ಟೇ ಜಾಗ್ರತೆ ಮಾಡಿದರೂ ಮಗನಿಗೆ ಸಿಕ್ಕು ಖಾಲಿಯಾಗಿದ್ದು ಚಿಂತೆ ಮೂಡಿಸಿತ್ತು. ಮಗಳಿಗಿದು, ಮಗನಿಗೆ ವಿಭೂತಿ ಸಾಕೆಂದು ಬಗೆದದ್ದು ಕೈಗೂಡಲಿಲ್ಲ. ಹಬ್ಬದ ಸಂಭ್ರಮಕ್ಕೆ ಸ್ವಲ್ಪವಾದರೂ ಹಚ್ಚಿಕೊಳ್ಳಲು ಮಗಳು ರಾಣಿಗುಳಿಯಲಿಲ್ಲ. ಅವ್ವ ರಂಗಮ್ಮ ಆ ಪೌಚಿನ ಮುಚ್ಚಳದ ಕೆಳಗೆ ಕುಡುಗೋಲಿನಿಂದ ಕೊಯ್ದು ಸೀಟಿ ತೆಗೆದರೂ ಒಂದೀಟೂ ಸಿಗಲಿಲ್ಲ. ಅವ್ವಳ ಸಂದಿಗ್ಧಕೆ ಪರಿಹಾರವಿಲ್ಲ. ಗಂಡ ಚೆನ್ನಪ್ಪ ಕೂಡಿಟ್ಟಿದ್ದ ಹಣವನ್ನು ತೆಗೆದು ಬಳಸಲು ಧೈರ್ಯವಾಗುತಿಲ್ಲ.

‘ಎಷ್ಟು ವರ್ಷ ತಾನೆ ದುಡಿದರೇನು? ನಮ್ಮದೂ ಅಂತ ಒಂದು ಗೆರೆ ಭೂಮಿಯಿಲ್ಲದಿದ್ದರೆ. ನಾವು ಈ ನೆಲದಲ್ಲಿದ್ದೂ ಪರದೇಶಿಗಳಂತೆ ಸುಡುಗಾಡಲಿ ಮಣ್ಣಾಗಬೇಕೆ? ಕೂಲಿ ನಾಲಿ ಗುತ್ತಿಗೆ ಬಾಚಿ ಹಿಡಿದು ನಾನು ಸಾವಿರವಲ್ಲ ಲಕ್ಷ ದುಡಿಯಬಹುದು ರಂಗಿss, ಆದರೆ ಭೂಮಿಹುಣ್ಮೆ ಪೂಜೆಗೆ ನಮ್ದೀಟು ಹೊಲ ಅಂತ ಇರಬೇಕು’ ಎನ್ನುತ್ತಿದ್ದ ಗಂಡನ ಮಾತುಗಳು ರಂಗಮ್ಮನನ್ನು ಮತ್ತಷ್ಟು ಸಂದಿಗ್ಧಕ್ಕೆ ದೂಡಿದವು. ಈಗ ಮಕ್ಕಳ ಹುಚ್ಚಾಟಕ್ಕೆ ಮಣಿದು ಫೇರ್ ಆಂಡ್ ಲವ್ಲೀ ಮತ್ತೊಂದು ತಂದು ಕೊಡೋದೇನು ದೊಡ್ಡ ವಿಚಾರವಲ್ಲ. ಆದರೆ ಮಕ್ಕಳು ತೀರಾ ಮಹತ್ವ ಕೊಡುತ್ತಿರುವ ರೂಪದ ಬಿಂಕಾಟಕ್ಕೆ ಅರ್ಥವೇ ಇರಲಿಲ್ಲ. ‘ಇದ್ದಾಗ ನಾವ್ ಸಂದಾಗೆ ಕಾಣ್ತೀವೋ ಇಲ್ವೋ ಸತ್ತಾಗಂತೂ ಸಿಂಗಾರ ಮಾಡೇ ಮಾಡ್ತಾರೆ ರಂಗೀss.. ಆದ್ರೆ ನಮ್ಮನ್ನು ಭೂತಾಯಿಗಾಗೋಕೀಟು ನಮ್ದೂ ಅಂತ ಒಂದಂಗೈಯಗಲವಾದರೂ ಭೂಮಿ ಬೇಡ್ವಾ? ದಿಕ್ಕುದೆಸೆಯಿಲ್ದ ಭಿಕನಾಸಿಗಳಂತೆ ಹೋಗ್ಬೇಕಾ ಹೇಳು’ ಎನ್ನುತ್ತಿದ್ದ ಗಂಡನ ಮಾತುಗಳು ನೆನಪಾಗಿ ಮಕ್ಕಳನ್ನು ಸರಿಯಾಗಿ ಗದರಿಸಿ ಕೆಲಸಕ್ಕೆ ಅಣಿಯಾಗುತ್ತಿದ್ದಳು.

ಇದನ್ನೆಲ್ಲ ಗಮನಿಸುತ್ತಿದ್ದ ರಾಟೆ ಪರಶಮ್ಮ ಬೆಂಗಳೂರಿನಿಂದ ಬರುವ ತಮ್ಮ ಮಕ್ಕಳಿಂದ ಒಂದು ಹೊಸಾ ಫೇರ್ ಆಂಡ್ ಲವ್ಲೀಯನ್ನು ಬರುವ ದೀಪಾವಳಿಗೆ ಕೊಡಿಸುವುದಾಗಿ ಹೇಳಿದ್ದಳು. ‘ಇಂಥ ಹಾಳೂ ಮೂಳು ಎಲ್ಲ ಬೇಡ ಕಣವ್ವ… ದುಡುದು ತಿಂದದ್ದೇ ಹೊಟ್ಟಿಗತ್ತಲ್ವಂತೆ ಬಿಟ್ಟಿ ಸಿಕ್ಕಿದ್ದು ಮಕಕೆ ಅಂಟ್ತದಾ… ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಕಣವ್ವ.. ಈ ಮಕ್ಳು ಅದ್ನೇ ಚಟ ಮಾಡ್ಕೊಂಡ್ರೆ ನಾ ಹೇಗೆ ನಿಭಾಯ್ಸ್ಲೀ ತಾಯೀ…’ ಎಂದಳೇನೋ ಸರಿ. ‘ರಂಗಮ್ಮss.. ಕಾಲಕ್ಕೆ ತಕ್ಕಂಗೆ ವೇಷ. ಇದೇನು ಭಾರೀ ಬಂಗಾರಲ್ಲ.. ನನ್ ಮಕ್ಳು ಚೆನ್ನಾಗ್ ದುಡಿತಾವ್ರೆ, ಹಬ್ಬಹುಣ್ಮೆಗೆ ನಾನೇ ತರ್ಸಿ ಕೊಡ್ತೀನಿ..ನೋಡು ಮಕ್ಳು ಬಿಸ್ಲಿಗೆ ಹೆಂಗೆ ಬತ್ತಿ ಬಾಡಿ ಹೋಗಿದಾರೆ.. ಈಗಿನ್ ಕಾಲದ್ ಮಕ್ಳು ಅಂದ್ರೆ ಹೆಂಗಿರ್ಬೇಕು! ಒರಗೆಯ ಮಕ್ಳನ್ನಿಷ್ಟು ನೋಡೀಟು…’ ಎಂದು ಪರಶಮ್ಮ ಸಮಾಧಾನಿಸುತ್ತಿದ್ದಳು.

ರಂಗಮ್ಮಳಿಗೆ ಇದೊಂಥರಾ ಬಿಸಿತುಪ್ಪವಾಯಿತು. ಆದರೂ ಒಪ್ಪಿ ಹಬ್ಬದಿಂದ ಹಬ್ಬಕೆ ಅದೊಂದೇ ಫೇರ್ ಆಂಡ್ ಲವ್ಲೀಯನ್ನು ಕಾಪಾಡಿಕೊಂಡು ಹೋಗುವ ಉಪಾಯ ಹುಡುಕಿದಳು. ಮಗನ ಈ ಅಂದಚೆಂದದ ನಯಗಾರಿಕೆ ನಿಲ್ಲಿಸಿ ವಿಭೂತಿ ಬಳಿದುಕೋ ಸಾಕೆಂದು ಬುದ್ಧಿವಾದ ಹೇಳಿದಳು. ಬರಲಿರುವ ಫೇರ್ ಆಂಡ್ ಲವ್ಲೀ ಕೇವಲ ರಾಣಿಗೆ ಮಾತ್ರವೆಂಬ ಠರಾವು ಹೊಡೆದು ನಿರಮ್ಮಳವಾದಳು. ಸ್ವಲ್ಪ ಕಳ್ಳಬುದ್ಧಿಯ ರಮೇಶ ಮೊದಲದು ಬರಲಿ ಆಮೇಲೆ ಹೇಗೋ ಎಗರಿಸಿದರಾಯಿತೆಂದು ಮನದಲ್ಲೆ ಎಣಿಸಿ ಒಪ್ಪಿದ್ದನು. ರಾಣಿಗೆ ಎಲ್ಲಿಲ್ಲದ ಸಂತಸ ಆದರೆ ಅಣ್ಣನ ಮೇಲೆ ತುಂಬು ಪ್ರೀತಿ.. ಪಾಪ ಅಣ್ಣನಿಗಿಲ್ಲದ…ಜೊತೆಗೆ ಮನೆಯ ಯಾರಿಗೂ ಇಲ್ಲದ ಫೇರ್ ಆಂಡ್ ಲವ್ಲೀ ಬರೀ ನನಗೊಬ್ಬಳಿಗೆ ಮಾತ್ರ ಹೇಗೆ ತಾನೆ ಖುಷಿ ಕೊಟ್ಟೀತು? ಮೊದಲದು ಬರಲಿ ಎಲ್ಲರಿಗೂ ಬಳಿದು ಸಂಭ್ರಮಿಸುವ ಮನದಲ್ಲಿ ದೀಪಾವಳಿಯನ್ನು ತೆರೆದ ಕಂಗಳಲಿ ಕಾಯುತಿದ್ದಳು.

ದೀಪಾವಳಿಯ ದಿನ ಫೇರ್ ಆಂಡ್ ಲವ್ಲೀಯೇನೋ ಬಂದೇ ಬಿಟ್ಟಿತು. ಜೊತೆಗೆ ಪರಶಮ್ಮನ ಮಕ್ಕಳು ಅಲ್ಪ ಸ್ವಲ್ಪ ಬಳಸಿ ಉಳಿಸಿದ್ದ ಸ್ಯಾಚೆಗಳೂ ಸಾಕಷ್ಟು. ಅಪ್ಪನೂ ಬಂದಿದ್ದ, ಹಬ್ಬದ ಘಮದಲಿ ಹಿರಿಹಿರಿ ಹಿಗ್ಗಲು. ಆದರೆ ಅದು ಬಹು ಸಮಯ ಉಳಿಯಲಿಲ್ಲ. ಬೇರೇನೋ ವಾಸನೆ ಬಡಿಯುತ್ತಿತ್ತು. ಮಡದಿ ಮಕ್ಕಳ ಬಣ್ಣ ಮೆತ್ತಿದ ಮುಖಗಳು ಇವನನ್ನು ಇವನ ಶ್ರಮವನ್ನು ಅಣಕಿಸುವಂತೇ ಕಾಡಿದವು. ಹರುಕಲು ಮುರುಕಲು ಅಂಗಿ ಪಂಚೆಯಲಿ ಬಂದಿದ್ದ ಚೆನ್ನಪ್ಪನ ಮುಖ ದೇಹ ಬಿಸಿಲು ಮಳೆ ಚಳಿಯನ್ನದೇ ದುಡಿದು ಬೆಂಡಾಗಿ ಬಳಲಿತ್ತು. ತನ್ನ ಮನೆಯಲ್ಲೇ ತನಗೆ ಪರಕೀಯ ಭಾವನೆ ತಾಂಡವವಾಡತೊಡಗಿತು. ನಾನು ಯಾರಿಗಾಗಿ ದುಡಿಯುತಿದ್ದೇನೆ. ಯಾಕಿಷ್ಟು ಶ್ರಮ? ಮಡದಿಗೆ ಅಷ್ಟೆಲ್ಲ ತಿಳಿ ಹೇಳಿದ್ದೆ… ಹೀಗೆ ಶೋಕಿ ಮಾಡುವುದೇ ಆದರೆ ನನ್ನ ಕುಟುಂಬ ನಿಜಕ್ಕೂ ದಡ ಹತ್ತುತ್ತದೆಯೆ? ಮೂಲೆಯಲ್ಲಿದ್ದ ಚಿಬ್ಬಲು ಬುಟ್ಟಿಯಲ್ಲಿ ಹರಡಿದ್ದ ಬಳಸಿ ಬಿಸಾಡಿದ ಫೇರ್ ಆಂಡ್ ಲವ್ಲೀ ಸ್ಯಾಚೆಗಳು ಮತ್ತಷ್ಟು ಅಣಕಿಸಿ ಗಹಗಹಿಸುತ್ತಿದ್ದವು.

ದುಡಿಮೆಗೆಂದು ಪೇಟೆ ದಾಟಿ ಹೋಗುವ ಚೆನ್ನಪ್ಪನಿಗೆ ಸುಮ್ಮನೆ ಶೋಕಿ ಮಾಡಿಕೊಂಡು ಹಾದಿಬೀದಿ ತಿರುಗುವ ಜನರನ್ನು ಕಂಡರೇನೇ ಆಗುತ್ತಿರಲಿಲ್ಲ. ದೀವಳಿಗೆ ಹಬ್ಬವೆಂದು ಮನೆ ಮನವನ್ನೂ ಸಂಭ್ರಮಿಸಿಕೊಂಡಿದ್ದ ಮಡದಿ ಚೆನ್ನಮ್ಮಳ ಮೇಲೆ ನಿಡಾನಿಂದ್ರುಕೆ ಸಿಟ್ಟಿಗೆದ್ದು ಮಾನಾ ಹೀನಾ ಬೈದಾಡ ತೊಡಗಿದ. ದಿಢೀರನೆ ಎದುರಾದ ಇಂಥ ಆಘಾತಕ್ಕೆ ಹೆದರಿ ಚೆನ್ನಮ್ಮ ಮೂಲೆಗಾತುಕೊಂಡು ಕೂತು ಬಿಟ್ಟಳು. ಮಗ ರಮೇಶ ಊರಗಸೆ ಬಾಗಿಲಿಗೆ ಓಟ ಕಿತ್ತ. ಮಗಳು ಎರಡೂ ಕೈಗಳನು ಹಿಂದಕಿಟ್ಟುಕೊಂಡು ನಡುಗುತ್ತ ನಿಂತಳು. ದೀಪಾವಳಿಯ ಹಬ್ಬ ತನ್ನ ಪ್ರಭೆಯನ್ನೆಲ್ಲ ಕಳಚಿಕೊಂಡು ಮಂಕಾಯಿತು. ಮುಖಗಳೆಲ್ಲ ಹೊಳೆಯುತ್ತಿದ್ದರೂ ಕಂಗಳೂ ಕೊಳಗಳಾಗಿದ್ದವು ಮನದಾವರೆ ಬಾಡಿ ಹೋಗಿತ್ತು. ಕೆಟ್ಟಾಕೊಳಕ ಮಾತುಗಳನ್ನು ಎಂದೂ ಕೇಳದಿದ್ದ ರಂಗಮ್ಮ ಬೆಚ್ಚಿ ಬೆತ್ತವಾದಳು. ತನ್ನ ಪ್ರತಾಪ ತಣಿಸಿಕೊಳ್ಳದ ಚೆನ್ನಪ್ಪ ಹಿಂದೂ ಮುಂದೂ ಯೋಚಿಸದೆ ವಿಷಯವೇನೆಂದು ತಿಳಿದುಕೊಳ್ಳದೆ ಎದುರು ನಿಂತಿದ್ದ ಮಗಳಿಗೂ ಬೈದಾಡಿದ… ಮೃದು ಮನಸ್ಸಿಗೆ ಏನನ್ನಿಸಿತೋ ಏನೋ ತಲೆಹಿತ್ತಲಿಗೆ ಎಡತಾಕಿತು. ಅವ್ವ ಬೇಡ ಬೇಡವೆಂದರೂ ಕ್ರೀಮು ಹಚ್ಚಿದ್ದ ಕೈಗಳಿನ್ನು ಪರಿಮಳ ಉಳಿಸಿಕೊಂಡಿರಲಿಲ್ಲ. ಭಯದ ಬೆವರಿಗೆ ಜಲಪಾತವಾಗಿ ಹರಿದು ಹೋಗಿತ್ತು. ಅಪ್ಪ ಬಂದ ಚಪ್ಪಲಿಯ ಸದ್ದು ಕೇಳಿಯೇ ಮಗಳು ಪಪ್ಪನಿಗಿಷ್ಟು ಫೇರ್ ಆಂಡ್ ಲವ್ಲೀ ಹಚ್ಚಲು ಕಾಯುತ್ತಿದ್ದ ತೋರು ಬೆರಳೀಗ ಅದರುತಿತ್ತು. ಎಂದೆಂದೂ ಕೇಳಿರದಿದ್ದ ಬೈಗುಳದ ನುಡಿಗಳಿಗೆ ಮನವಾಗಲೇ ಸತ್ತಿತ್ತು. ತೋರುಬೆರಳಿನ ಕ್ರೀಮು ಸೀಮೆಎಣ್ಣೆ ಡಬ್ಬಿಯ ಮುಚ್ಚಳಕ್ಕೆ ತುಪ್ಪದಂತೆ ಮೆತ್ತಿ ‘ಸ್ವಾಹ…’ ಎಂದಿತ್ತು.

ಅಪ್ಪನಿಗೆ ಕ್ರೀಮು ಹಚ್ಚಲು ತೆರೆದುಕೊಂಡಿದ್ದ ಬೆರಳು ಮಾತ್ರ ಬೆಂದಿರಲಿಲ್ಲ. ಅಪ್ಪನ ಕೆನ್ನೆ ನೇವರಿಸಲು ಕಾದಿತ್ತು! ಎಲ್ಲರಿಗೂ ಫೇರ್ ಆಂಡ್ ಲವ್ಲೀ ಹಚ್ಚಿದ ಬೆರಳು ಇನ್ನೆಂದೂ ತನ್ನನು ಸಿಂಗರಿಸಿಕೊಳ್ಳಲಿಲ್ಲ..! ಅಪ್ಪನ ಕೆನ್ನೆಯೊಂದನು ನೀವಲು ಹೊರಚಾಚಿ ಬಿದ್ದಿತ್ತು…! ತಾನಳಿದರೂ ತನ್ನವರ ಪ್ರೀತಿಗಾಗಿ….!!

‍ಲೇಖಕರು avadhi

28 November, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading