‘ಎಸ್. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಸರಿಯಲ್ಲ..’ ಎನ್ನುವ ಲೇಖನ ‘ಜುಗಾರಿ ಕ್ರಾಸ್’ ಅಂಕಣದಲ್ಲಿ ನಿನ್ನೆ ಪ್ರಕಟವಾಗಿತ್ತು.
ಡಾ ವಡ್ಡಗೆರೆ ನಾಗರಾಜಯ್ಯ ಅವರು ರಾಧಾಕೃಷ್ಣನ್ ಅವರ ಬದುಕಿನ ಬಗ್ಗೆ ಅವರ ಮಗ ಎಸ್ ಗೋಪಾಲ್ ಬರೆದ ಪುಸ್ತಕವನ್ನು ಉಲ್ಲೇಖಿಸುತ್ತಾ ಈ ಪ್ರಶ್ನೆ ಎತ್ತಿದ್ದರು.
ಅದು ಇಲ್ಲಿದೆ
ಇದಕ್ಕೆ ‘ಅವಧಿ’ ಪ್ರತಿಕ್ರಿಯೆಯನ್ನು ಆಹ್ವಾನಿಸಿತ್ತು.
ಖ್ಯಾತ ಸಾಹಿತಿ ಪ್ರತಿಭಾ ನಂದಕುಮಾರ್ ಅವರ ನೋಟ ಇಲ್ಲಿದೆ
ಚಿಂತಕ ಕು ಸ ಮಧುಸೂಧನ್ ಅವರು ಪ್ರತಿಕ್ರಿಯಿಸಿದ್ದಾರೆ- ಅದು ಇಲ್ಲಿದೆ
ಕಂಠೀರವ ಅವರ ಪ್ರತಿಕ್ರಿಯೆ ಹೀಗಿದೆ. ಅದು ಇಲ್ಲಿದೆ
ಈಗ ಸಂವರ್ಥ ಸಾಹಿಲ್ ತಮ್ಮ ಭಿನ್ನ ನೋಟವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ
ಸಂವರ್ಥ ಸಾಹಿಲ್
ಶಿಕ್ಷಕರ ದಿನ ಅಂತ ಆಚರಿಸುವುದು ಅನಿವಾರ್ಯವೇ ಅಂತಾದರೆ ಅದಕ್ಕೆ ರಾಧಾಕೃಷ್ಣನ್ ಅವರ ಜನ್ಮದಿನದಂದು ಆಚರಿಸುವುದಕ್ಕಿಂತ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನ ಶಿಕ್ಷಕರ ದಿನದ ಆಚರಣೆಗೆ ಹೆಚ್ಚು ಸೂಕ್ತ ಮತ್ತು ಅರ್ಥಪೂರ್ಣ ಎನ್ನುವುದರ ಬಗ್ಗೆ ಎರಡು ಮಾತಿಲ್ಲ.
ಅದಕ್ಕೆ ತಾಯಿ ಫುಲೆ ಅವರ ಜಾತಿ ಕಾರಣವಲ್ಲ. ಅವರು ಮಾಡಿದ ಕೆಲಸ ಅವರ ದೇಶ-ಕಾಲದ ಮಟ್ಟಿಗೆ ಕ್ರಾಂತಿಕಾರಿಯಾದದ್ದು.
ಸಾಮಾಜಿಕ ನ್ಯಾಯದ ಪ್ರಜ್ಞೆ ಇದ್ದವರಿಗೆ ಇದು ಅರ್ಥವಾಗುವುದು ಕಷ್ಟವಲ್ಲ. ತಾಯಿ ಫುಲೆ ಅವರ ಕೆಲಸದ ದೂರದೃಷ್ಟಿ, ಆಶಯ ಹಾಗು ಅವರ ಕೆಲಸದ ಪರಿಣಾಮ, ಫಲ ಇವನ್ನೆಲ್ಲ ಗಮನಿಸಿದರೆ ತಾಯಿ ಫುಲೆ ಅವರ ಸ್ಮರಣೆಯಲ್ಲಿ ಶಿಕ್ಷಕರ ದಿನ ಆಚರಿಸುವುದು ಸೂಕ್ತ ಮತ್ತು ಅರ್ಥಪೂರ್ಣ ಎಂದು ತಿಳಿಯುತ್ತದೆ.

ಸಾವಿತ್ರಿಬಾಯಿ ಫುಲೆ ಅವರ 185ನೇ ಹುಟ್ಟುಹಬ್ಬಕ್ಕೆ ಗೂಗಲ್ ಡೂಡಲ್ ಗೌರವ ಸಲ್ಲಿಸಿತ್ತು.
ಶಿಕ್ಷಕರ ದಿನ ಆಚರಿಸಲು ರಾಧಾಕೃಷ್ಣನ್ ಅವರ ಜನ್ಮದಿನ ಯಾಕೆ ಆಯ್ದುಕೊಳ್ಳಲಾಯಿತು ಅನ್ನುವ ವಿಷಯ ಗುರುತಿಸುವುದು ಅಗತ್ಯವಾದರೂ ಅದನ್ನು ಸಮಜಾಯಿಷಿಯಂತೆ ಮಂಡಿಸುವುದು ಸರಿಯೋ ಗೊತ್ತಿಲ್ಲ. ಯಾಕೆಂದರೆ ಶಿಕ್ಷಕರ ದಿನ ಎಂದು ಆಚರಿಸುವುದು ಮುಖ್ಯವೇ ಅಂತಾದರೆ, ನಮ್ಮ ಸಮಾಜವು (ಬೇಕಿದ್ದರೆ ದೇಶ ಎಂದು ಓದಿಕೊಳ್ಳಿ) ಎಂತಾ ಶಿಕ್ಷಕರನ್ನು ಮಾದರಿ, ಆದರ್ಶ ಎಂದು ಒಪ್ಪಿಕೊಳ್ಳುತ್ತದೆ ಎಂಥಾ ಮೌಲ್ಯಗಳನ್ನು ಮೈಗೂಡಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ಕಾರ್ಯನಿರ್ವಸಬೇಕೆಂದು ನಿರೀಕ್ಷಿಸುತ್ತದೆ ಎಂಬುವುದು ಮುಖ್ಯ.
ಯಾಕೆಂದರೆ ಈ ದಿನಾಚರಣೆಗಳು ಈ ಎಲ್ಲಾ ಕನಸು, ನಿರೀಕ್ಷೆ, ಜವಾಬ್ದಾರಿಗಳನ್ನು ನೆನಪಿಸುವ ದಿನ ಆಗಬೇಕೆ ಹೊರತು ಸುಮ್ಮನೆ ಲಾಡೋ ಇಲ್ಲ ಮೈಸೂರ್ ಪಾಕ್ ಹಂಚುವ ಕಾರ್ಯಕ್ರಮ ಆಗಬಾರದು.
ಹಾಗಿರುವಾಗ ಶಿಕ್ಷಕರ ದಿನ ಆಚರಿಸುವುದೇ ಎಂದಾದರೆ ಆ ದಿನ ಯಾರ ಸ್ಮರಣಾರ್ಥ ನಡೆಸುವುದು ಆರೋಗ್ಯಕರ ಮತ್ತು ಸಮಾನತೆಯ ಸಮಾಜದ ಕನಸು ಕಾಣುವ ನಮಗೆ ಯಾರು ಮುಖ್ಯ ಯಾವ ಮೌಲ್ಯಗಳು ಮುಖ್ಯ ಎಂದು ಪರೀಕ್ಷಿಸಿದರೆ, ರಾಧಾಕೃಷ್ಣನ್ ಅವರಿಗಿಂತ ತಾಯಿ ಫುಲೆ ಅವರ ನೆನಪಿನಲ್ಲಿ ಆಚರಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲು ಕಷ್ಟವಾಗುವುದಿಲ್ಲ. ಪ್ರೊವೈಡೆಡ್, ಸಾಮಾಜಿಕ ನ್ಯಾಯ ನಮಗೆ ಮುಖ್ಯ ಎಂತಾದರೆ. ಅದು ಮುಖ್ಯ ಅಲ್ಲ ಎನ್ನುವವರ ಅಭಿಪ್ರಾಯ ಬೇರೆ ಇರಬಹುದು.
ರಾಧಾಕೃಷ್ಣನ್ ಅವರ ಖಾಸಗಿ ಬದುಕಿನ ವಿಚಾರ ಅಮುಖ್ಯವೇ? ಅಥವಾ ಅದು ಅವರ ವೈಯಕ್ತಿಕ ವಿಚಾರ ಅದರ ಬಗ್ಗೆ ನಾವ್ಯಾರೂ ಏನೂ ಹೇಳುವ ಹಾಗಿಲ್ಲ ಎಂದರ್ಥವೇ? ಒಂದು ವೇಳೆ ಈ ಮಾತನ್ನು ಒಪ್ಪಿಕೊಂಡರೆ, ವರದಕ್ಷಿಣೆ, ಕೌಟುಂಬಿಕ ಹಿಂಸೆ (ನಾವು ಕೌಟುಂಬಿಕ ಹಿಂಸೆ ಕುರಿತು ಮಾತನಾಡುವಾಗ ಕೇವಲ ಹೆಂಡತಿಯ ಮೇಲೆ ಗಂಡ ನಡೆಸುವ ಹಿಂಸೆ, ಕ್ರೌರ್ಯದ ಕುರಿತು ಮಾತ್ರ ಮಾತನಾಡುತ್ತೇವೆ. ಆದರೆ ಮಕ್ಕಳ ಮೇಲೆ ತಂದೆ-ತಾಯಿ ತಮ್ಮ ವಯಸ್ಸಿನ ಹಿರಿತನದ ಅಸ್ತ್ರ ಹಿಡಿದುಕೊಂಡೆ ನಡೆಸುವ ಅಗೋಚರ ದಬ್ಬಾಳಿಕೆ ಕುರಿತು ಮಾತನಾಡುವುದೇ ಇಲ್ಲ), ಮರ್ಯಾದೆ ಹತ್ಯೆ ಇತ್ಯಾದಿಗಳ ಕುರಿತು ನಾವು ಏನೂ ಹೇಳುವ ಹಾಗೆ ಇಲ್ಲ ಎಂದಾಗುತ್ತದೆ.
ಹಾಗೆಂದ ಮಾತ್ರಕ್ಕೆ ೨೧ನೆ ಶತಮಾನದ ಪೊಲಿಟಿಕಲಿ ಕರೆಕ್ಟ್ ಅಳತೆಗೋಲನ್ನು ಹಿಡಿದುಕೊಂಡು ಬೇರೆಯದೇ ಕಾಲಮಾನದ ಬದುಕನ್ನು ಅಳೆಯುವುದು ಸರಿಯೇ? ಮತ್ತು ಖಾಸಗಿ ಬದುಕಿನ ವಿಚಾರಗಳಿಗೆ ಜೋತುಬಿದ್ದು ಒಂದು ವ್ಯಕ್ತಿಯ ಸಂಪೂರ್ಣ ಬದುಕಿನ ಬೇರೆಲ್ಲ ವಿವರಗಳನ್ನು ಮರೆತು ಅಂಕಪಟ್ಟಿ ತಯಾರಿಸಿ ಅವರ ಕುರಿತು ನಿರ್ಣಾಯಕ ಮಾತುಗಳನ್ನಾಡುವುದು ಸರಿಯೇ?.
ಹೇಗೆ ಓರ್ವ ವ್ಯಕ್ತಿಯ ಸಾರ್ವಜನಿಕ ಬದುಕಿನ ಸಾಧನೆ ಅವರ ಖಾಸಗಿ ಬದುಕಿನ ತಪ್ಪುಗಳಿಗೆ ಕ್ಲೀನ್ ಚಿಟ್ ಕೊಡಿಸಲು ಸಾಧ್ಯವಿಲ್ಲವೋ, ಹಾಗೆಯೇ ಖಾಸಗಿ ಬದುಕಿನ ಮಿತಿಗಳು ಅವರ ಸಾರ್ವಜನಿಕ ಬದುಕಿನ ಮಹತ್ವ, ಕೊಡುಗೆಗೆಳನ್ನು ನೆಗೇಟ್ ಮಾಡಲು ಸಾಧ್ಯವಿಲ್ಲ. ಹಾಗಿರುವಾಗ ಖಾಸಗಿ ಬದುಕಿನ ಇತಿಮಿತಿಗಳನ್ನು ಸಾರ್ವಜನಿಕ ಬದುಕಿನ ಅಳತೆಗೆ ಎಳೆದು ತರುವುದು ಅವಶ್ಯವೇ? ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬಂಥ ಹಿಪೋಕ್ರಸಿ ಇದ್ದಾಗ ವಿಚಾರ ಬೇರೆ.

ಬದುಕನ್ನು ಸಜೀವವಾಗಿ ನೋಡಲಾಗದ ಮಿತಿ ನಮ್ಮನ್ನು ಬದುಕಿನ ಮತ್ತು ಮನುಷ್ಯರ ಓರೆಕೋರೆಗಳಿಗೆ ಅಸಹನೀಯರನ್ನಾಗಿಸುತ್ತದೆ. ತಿಂಡಿ ತಿಂದ ಹೋಟೆಲ್ನ್ನು, ಬಟ್ಟೆ ಕೊಂಡ ಬ್ರಾಂಡ್ ಅಂಗಡಿಯನ್ನು, ಪುಸ್ತಕ ತರಿಸಿಕೊಂಡ ವೆಬ್ಸೈಟ್ ಅನ್ನು, ಟಿ.ವಿಯಲ್ಲಿ ನೋಡಿದ ಕಾರ್ಯಕ್ರಮವನ್ನು, ಮೋಜಿಗಾಗಿ ಮೊಬೈಲ್ ಅಲ್ಲಿ ಡೌನ್ಲೋಡ್ ಮಾಡಿ ಆಡಿದ ಆಟವನ್ನು- ಹೀಗೆ ಎಲ್ಲವನ್ನು ಐದರಲ್ಲಿ ನಾಲ್ಕೋ, ಇಲ್ಲ ಎರಡೂ ಎಂದು ರೇಟ್ ಮಾಡುವ ಅಭ್ಯಾಸ ಆಗಿ ಆಗಿ ನಾವೆಲ್ಲಾ ಈಗ ಮನುಷ್ಯರನ್ನು ರೇಟ್ ಮಾಡುವ ಒಂದು ಅಂಪೈರ್ ಸಿಂಡ್ರೋಮ್ಗೆ ಬಲಿಯಾದಂತಿದೆ.
ನಮ್ಮ ಅನಾಲಿಸಿಸ್ – ಅದು ಜನರ ಕುರಿತಾಗಿರಲಿ ಇಲ್ಲ ಯಾವುದೇ ವಿಷಯದ ಕುರಿತಾಗಿರಲಿ- ಎಲ್ಲವೂ ಅರ್ಥ ಮಾಡಿಕೊಳ್ಳುವುದನ್ನು ಅಮುಖ್ಯಗೊಳಿಸಿ ಬರಿ ರೇಟ್ ಮಾಡುವುದು ಮುಖ್ಯ, ರೇಟ್ ಮಾಡಿ ನಿರ್ಣಯ ಪಾಸ್ ಮಾಡುವುದೇ ಮುಖ್ಯ ಎಂಬಲ್ಲಿಗೆ ಬಂದು ನಿಂತಿದೆ. ಇದು ದುರಂತ.
ರಾಧಾಕೃಷ್ಣನ್ ಅವರ ಕುರಿತು ಒಂದು ಸಣ್ಣ ಲೇಖನದಲ್ಲಿ ಎ.ಏನ್. ಮೂರ್ತಿ ರಾಯರು ಒಂದು ಮನಮಿಡಿಯುವ ಘಟನೆ ಕುರಿತು ಹೇಳುತ್ತಾರೆ. ಒಮ್ಮೆ ರಾಧಾಕೃಷ್ಣನ್ ರಷ್ಯಾ ದೇಶದ ಸ್ಟಾಲಿನ್ನ್ನು ಭೇಟಿ ಮಾಡಿದ್ದರಂತೆ. ಹೇಳಿ ಕೇಳಿ ಮೇಷ್ಟ್ರಾಗಿದ್ದ ರಾಧಾಕೃಷ್ಣನ್ ಬಹಳ ಮಮತೆಯಿಂದ ಸ್ಟಾಲಿನ್ ಜೊತೆ ಮಾತನಾಡುತ್ತಿರುವಾಗ ಸ್ಟಾಲಿನ್ ಕಣ್ಣಲ್ಲಿ ನೀರಿಳಿಯಲು ಆರಂಭಿಸಿತು.
ಹೌದು, ನಿಹೃದಯಿ ಸ್ಟಾಲಿನ್ ಕಣ್ಣಲ್ಲಿ ಕಂಬನಿ! ಸ್ಟಾಲಿನ್ ಅಳುವಿಗೆ ಕಾರಣ ತಿಳಿಯದ ರಾಧಾಕೃಷ್ಣನ್ ಅವನ ಬಳಿ ಏನಾಯಿತು ಎಂದು ಕೇಳಿದಾಗ ಸ್ಟಾಲಿನ್ ಕೊಟ್ಟ ಉತ್ತರ, “ನನ್ನನ್ನು ಇಷ್ಟು ಪ್ರೀತಿಯಿಂದ, ಇಷ್ಟು ಆಪ್ತವಾಗಿ ಮಾತನಾಡಿಸಿದ್ದೇ ಇಲ್ಲ.”
ಪ್ರೇಮರಾಹಿತ್ಯ ಮನುಷ್ಯನನ್ನು ಏನಾಗಿಸಬಹುದು ಎಂಬುದಕ್ಕೆ ಒಂದು ಉದಾಹರಣೆಯಂತಿರುವ ಈ ಘಟನೆಯನ್ನು ನೆನಪಿಸಿಕೊಳ್ಳುವುದು ಮತ್ತು ಸ್ಟಾಲಿನ್ ಮೇಲೆ ಈ ವಿಷಯಕ್ಕೆ ಕರುಣೆ ತೋರುವುದು ಎಂದರೆ ಆತ ಮಾಡಿದ ತಪ್ಪುಗಳಿಗೆ ಕ್ಲೀನ್ಚಿಟ್ ಕೊಡುವುದು ಎಂದರ್ಥವಲ್ಲ. ಹಾಗೆಯೇ ಸ್ಟಾಲಿನ್ ಅಂಥಾ ಸ್ಟಾಲಿನ್ ಒಳಗಿನ ಮನುಷ್ಯನನ್ನು ಕಾಣಿಸಿದ ರಾಧಾಕೃಷ್ಣನ್ ಅವರ ನಡೆ-ನುಡಿ ಅವರ ಮಿತಿಗಳಿಗೆ ಕ್ಲೀನ್ಚಿಟ್ ನೀಡುವುದಿಲ್ಲ.
ಈ ಚರ್ಚೆಯಲ್ಲಿ ಶಿಕ್ಷಕರ ದಿನಕ್ಕೆ ರಾಧಾಕೃಷ್ಣನ್ ಅವರ ಜನ್ಮದಿನ ಸೂಕ್ತವೋ ಇಲ್ಲವೋ ಎಂಬ ವಿಷಯ ಮತ್ತು ಖಾಸಗಿ ಬದುಕಿನ ವಿಚಾರಗಳಿಗೆ ಸಾರಾಸಗಟಾಗಿ ವ್ಯಕ್ತಿಯ ಇಡೀ ಬದುಕನ್ನು ತಿರಸ್ಕರಿಸಬಹುದೇ ಎಂಬ ವಿಷಯಗಳು ಇವೆ. ಅವೆರಡನ್ನು ಬೇರೆ-ಬೇರೆಯಾಗಿಯೇ ನೋಡುವುದು ಒಳ್ಳೆಯದು ಎಂಬುದು ನನ್ನ ಅನಿಸಿಕೆ.
ನನ್ನ ಮಾತಿನಲ್ಲೇನಾದರು ತಪ್ಪಿದ್ದರೆ ಇಲ್ಲ ಉಡಾಫೆ ಕಂಡು ಬಂದರೆ ಕ್ಷಮಿಸಿ.






0 Comments