ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೊ.ಜಿ.ಎನ್. ಉಪಾಧ್ಯ ಓದಿದ ‘ಕುವೆಂಪು ಪದ ಸೃಷ್ಟಿ’   

ಪ್ರೊ. ಜಿ. ಎನ್. ಉಪಾಧ್ಯ, ಮುಂಬೈ

*

ಕುವೆಂಪು ಪದ ಸೃಷ್ಟಿ  

ಡಾ. ಜಿ.ಕೃಷ್ಣಪ್ಪ 

ಅಮೂಲ್ಯ ಪುಸ್ತಕ, ಬೆಂಗಳೂರು.

ಬೆಲೆ ರೂ 175

*

ಕುವೆಂಪು ಅವರದು ದೈತ್ಯ ಪ್ರತಿಭೆ. ಅವರು ಹೊಸ ಹೊಸ ಪದಗಳನ್ನು ಸಮುಚ್ಚಯಿಸಿ ತಮ್ಮ ಸೃಜನಶೀಲತೆಯನ್ನು ಮೆರೆದವರು. ಕೃಷ್ಣಪ್ಪ ವಿರಚಿತ ಕುವೆಂಪು ಪದ ಸೃಷ್ಟಿ  ಕೃತಿ ಕುವೆಂಪು ಅವರ ಕಾವ್ಯ ಪ್ರಪಂಚವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು,ಪ್ರವೇಶಿಸಲು ದಾರಿ ಮಾಡಿಕೊಟ್ಟಿದೆ.

ಹೊಸಗನ್ನಡ ಕಾವ್ಯ ನಿರ್ಮಾಪಕರಲ್ಲಿ ಕುವೆಂಪು ಅವರದು ದೊಡ್ಡ ಹೆಸರು. ಇಪ್ಪತ್ತನೆಯ ಶತಮಾನದಲ್ಲಿ ಕನ್ನಡಕ್ಕಾಗಿ ದುಡಿದ ಕನ್ನಡವನ್ನು ಬಹುಮುಖಿ ನೆಲೆಗಳಲ್ಲಿ ಬೆಳೆಸಿದ ಶ್ರೇಷ್ಠ ಸಾಹಿತಿಗಳಲ್ಲಿ ಅವರದು ಎದ್ದು ಕಾಣುವ ಸಾಧನೆ.ಅವರು ಕನ್ನಡ ಭಾಷೆ, ಸಾಹಿತ್ಯಗಳ ಪರಿಧಿಯನ್ನು ವಿಸ್ತರಿಸಿದ ಕೀರ್ತಿ ಶಿಖರವೂ ಹೌದು. ಕುವೆಂಪು ಅವರು ತಮ್ಮ ಕಾವ್ಯದಲ್ಲಿ ಸೃಷ್ಟಿಸಿದ ಆಯ್ದ ವಿಶೇಷ ಶಬ್ದ ಪುಂಜಗಳನ್ನು ಅವುಗಳ ಅರ್ಥ ವಿವರಣೆಯನ್ನು ವಿಭಿನ್ನ ನೆಲೆಗಳಲ್ಲಿ ಅತ್ಯಂತ ಸೊಗಸಾಗಿ  ಮಾಡಿ ಕೊಟ್ಟಿರುವುದು ಈ ಕೃತಿಯ ಅತಿಶಯತೆ.

ಕುವೆಂಪು ಅವರದು ದೈತ್ಯ ಪ್ರತಿಭೆ. ಅವರು ಹೊಸ ಹೊಸ ಪದಗಳನ್ನು ಸಮುಚ್ಚಯಿಸಿ ತಮ್ಮ ಸೃಜನಶೀಲತೆಯನ್ನು ಮೆರೆದವರು. ಕೃಷ್ಣಪ್ಪ ವಿರಚಿತ ಕುವೆಂಪು ಪದ ಸೃಷ್ಟಿ  ಕೃತಿ ಕುವೆಂಪು ಅವರ ಕಾವ್ಯ ಪ್ರಪಂಚವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು,ಪ್ರವೇಶಿಸಲು ದಾರಿ ಮಾಡಿಕೊಟ್ಟಿದೆ.ಮಹಾಕವಿ ಕುವೆಂಪು ಅವರ ಸಾಹಿತ್ಯ ಕೃತಿಗಳಲ್ಲಿ ಕಾಣ ಸಿಗುವ ಸುಮಾರು 224 ವಿಶಿಷ್ಟ ಪದರಾಶಿಗಳ ಅರ್ಥ ವಿವರಣೆ ಈ ಕೃತಿಯಲ್ಲಿ ಮನಂಬುಗುವಂತೆ ದಾಖಲಾಗಿದೆ.ಇಲ್ಲಿ ಕೃಷ್ಣಪ್ಪ ಅವರು ಕುವೆಂಪು ಅವರ ವಿವಿಧ ಕಾವ್ಯಗಳನ್ನು ಅಧ್ಯಯನ ಮಾಡಿ, ಅವುಗಳಲ್ಲಿ ಕವಿ ನಿರ್ಮಿಸಿರುವ ಹೊಸ ಹೊಸ ಶಬ್ದಗಳನ್ನುಅರಸಿ ತೆಗೆದು, ಅರ್ಥಸಹಿತವಾಗಿ, ಸಂದರ್ಭಸಹಿತವಾಗಿ ಸಹೃದಯರ ಮುಂದೆ ಮಂಡಿಸಿರುವುದು  ವಿಶೇಷ. 

“ಕವಿ ಕೃತಿ ಸಂಪೂರ್ಣವಾಗಿ ಲೋಕಭಿನ್ನವಾದುದೂ ಅಲ್ಲ, ಸಂಪೂರ್ಣವಾಗಿ ಲೋಕಾ ಭಿಪ್ರಾಯವೂ ಅಲ್ಲ, ಸಂಪೂರ್ಣವಾಗಿ ಲೋಕಾನುಕೃತಿಯೂ ಅಲ್ಲ.ಅದೊಂದು ಅನನ್ಯ ಪ್ರತಿತಂತ್ರವಾದ ಪ್ರತಿಮಾ” ಎಂಬುದಾಗಿ ಕುವೆಂಪುರವರೇ ಅಭಿಪ್ರಾಯಪಟ್ಟಿದ್ದಾರೆ.ಕಾವ್ಯ ಒಂದು ಶಬ್ದ ಕಲ್ಪವೂ ಹೌದು. ಕವಿಯ ಸೃಷ್ಟಿ ಕಾರ್ಯಕ್ಕೆ ಭಾಷೆಯೇ ಸಾಮಗ್ರಿ.

ಕುವೆಂಪುರವರ ಕಾವ್ಯ ಕೃತಿಗಳಲ್ಲಿ ವಿನೂತನ ಶಬ್ದಗಳು ಬಳಕೆಯಾಗಿರುವ ಕಾವ್ಯಭಾಗಗಳನ್ನು ಉದ್ಧರಿಸಿ, ತಮ್ಮ ಆ ವಿಶಿಷ್ಟ ಶಬ್ದಗಳ ಮಹತಿಯನ್ನು ವಿವರಣಾತ್ಮಕವಾಗಿ ಇಲ್ಲಿ ಲೇಖಕರು ತೆರೆದಿಟ್ಟಿದ್ದಾರೆ. ಕುವೆಂಪು ಅವರು ಸೃಷ್ಟಿಸಿದ ಪದ ಸಂಪತ್ತನ್ನು ಸೊಗಡನ್ನು ಇಲ್ಲಿ ಮುನ್ನೆಲೆಗೆ ತಂದು ಸಂದರ್ಭ ಸಹಿತ ಬಿಡಿಬಿಡಿಸಿ ವಿಶ್ಲೇಷಿಸಿರುವುದು  ಅವಲೋಕನೀಯವಾಗಿದೆ.

ಕನ್ನಡ ಭಾಷೆಯ ಶಬ್ದ ಸಂಪತ್ತನ್ನು ಬೆಳೆಸಿದವರಲ್ಲಿ ಕುವೆಂಪು ಅವರೂ ಒಬ್ಬರು.ಪ್ರತಿಭಾವಂತ ಕವಿಗೆ ತಾನು ನೇಯುವ ಕಲ್ಪನೆಗೆ ಇರುವ ಶಬ್ದ ಜಾಲ ಸಾಲದು ಎನಿಸಿ ಹೊಸ ಪದಗಳನ್ನು ಹೊಸೆಯುತ್ತಾನೆ. ಮಹಾಕವಿ ಕುವೆಂಪುರವರು ಮಾಡಿದ್ದು ಸಹ ಇದನ್ನೇ.ಉದಾಹರಣೆಗೆ ಸೊಗಂಬರಿ, ಹೊಗೆವಳ್ಳಿ, ಶ್ರೀದಿನ, ಮಧುನೃಪ, ದಾನರುಚಿ,ಅಕ್ಷಿಪಕ್ಷಿ, ಕನ್ನೆಳಲು, ಚಿತ್ರಯೋಗಿ, ತರುತಪಸ್ವಿ, ಪ್ರೇಮರಾಹು, ಬಂಧುಲೂನ,ಬಿಂಕದುರಿ,ಯಂತ್ರಪಕ್ಷಿ,ನಿದ್ದೆ ನೈವೇದ್ಯ ಹೀಗೆ ಕುವೆಂಪು ಅವರು ರಚಿಸಿದ ನೂರಾರು ಪದಗಳಿಗೆ ಅರ್ಥ ಹೇಳುವುದು  ಕಷ್ಟ. ಕೃಷ್ಣಪ್ಪ ಅವರು ಈ ಕಠಿಣ ಪದಪುಂಜಗಳಿಗೆ ಅರ್ಥ ಸಹಿತ ವಿವರಣೆ ನೀಡಿರುವುದು ಸ್ವಾರಸ್ಯಪೂರ್ಣವಾಗಿದೆ.ಕೆಲವು ಉದಾಹರಣೆ ಇಂತಿವೆ, ಇಕ್ಷುಗಂಗೋತ್ರಿ: ಇಕ್ಷು (ನಾ). ಕಬ್ಬು, ಗಂಗೋತ್ರಿ (ನಾ). ಗಂಗಾನದಿ ಹುಟ್ಟುವ ಸ್ಥಳ ಇಕ್ಷುವಿನೊಡನೆ ಪರಿಚಿತವಾಗಿರುವ ಪದ ಇಕ್ಷು ಕೋದಂಡ, ಇಕ್ಷು ಛಾಪ. ಅದರ ಅರ್ಥ ಕಬ್ಬಿನ ಕೋಲಿನಿಂದ ಬಿಲ್ಲುಳ್ಳವನು; ಮನ್ಮಥ. ಕುವೆಂಪು ಅವರು ತಮ್ಮ ಜೀವನದಲ್ಲಿ ಸವಿದ ರಸ ಘಳಿಗೆಯನ್ನು ರಸದಾಳಿ ಕಬ್ಬಿನಂತೆ ಸವಿಯುತ್ತ, ಅದರ ಆನಂದವನ್ನು ‘ಇಕ್ಷುಗಂಗೋತ್ರಿ’ ಎಂಬ ಪದದಿಂದ ಅಭಿವ್ಯಕ್ತಿಸಿದ್ದಾರೆ. 1957ರಲ್ಲಿ ‘ಇಕ್ಷುಗಂಗೋತ್ರಿ’ ಎಂಬ ಹೆಸರಿನ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ.

ಕುವೆಂಪು ಅವರು ಮಾನಸಯಾತ್ರಿಯಾಗಿ ಗಂಗೋತ್ರಿಯನ್ನು ಪರಿಭಾವಿಸಿ ರಚಿಸಿರುವ ಕವನ ‘ಇಕ್ಷುಗಂಗೋತ್ರಿ’, ಭಾರತ ದೇಶದ ಜೀವನದಿಯಾದ ಗಂಗೆಯು ಸಹಸ್ರಾರು ವರ್ಷಗಳಿಂದ ಈ ನೆಲದ ಜಲಚರ, ಪಶುಪಕ್ಷಿ, ಮಾನವರಿಗೆ ಸುಮಧುರ ಜೀವಪೋಷಕವಾಗಿದೆ. ಅದು ಭಾರತ ಸಂಸ್ಕೃತಿಯ ತೊಟ್ಟಿಲಾಗಿದ್ದು, ಎಲ್ಲ ತತ್ವಚಿಂತನದ ಕಡಲಾಗಿದೆ. ಅದು ಮನೋಲೋಕದಲ್ಲಿ ಆತ್ಮಕ್ಕೆ ಉನ್ನತ ಭಾವದ ಮಧುರತೆಯನ್ನು ನೀಡಿ ಅಧ್ಯಾತ್ಮ ಸಿದ್ದಿಗೊಯ್ಯುವ ನೆಲೆಯಾಗಿದೆ.

ಗಂಗೋತ್ರಿ ಹಿಮಾಲಯದಲ್ಲಿರುವ ಗಂಗಾತೀರದ ಒಂದು ಪುಣ್ಯಕ್ಷೇತ್ರ. ಕವಿಯು ಅದನ್ನು ಮಧುರವಾದ ಸವಿ, ಸಿಹಿ, ಚೈತನ್ಯ ನೀಡಿ ತಣಿಸುವ ಕಬ್ಬು ಎಂಬ ರೂಪಕದಲ್ಲಿ ‘ಇಕ್ಷುಗಂಗೋತ್ರಿ’ ಕವನ ರಚಿಸಿದ್ದಾರೆ. ಅವರು ಅದನ್ನು ‘ಮಧು ಗಂಗೋತ್ರಿ’, ‘ಋತ್‌ಚಿದ್ ಗಂಗೋತ್ರಿ’ (ಸತ್ಯ ಚೈತನ್ಯ ಗಂಗೋತ್ರಿ) ಎಂದು ವಿವಿಧ ಬಗೆಯಲ್ಲಿ ವರ್ಣಿಸಿದ್ದಾರೆ.

ಅವರು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾಗ, ವಿಶಾಲಸ್ಥಳದಲ್ಲಿ ಅದನ್ನು ವಿಸ್ತರಿಸಿ ಅದಕ್ಕೆ ನೀಡಿದ ಹೆಸರು ‘ಮಾನಸ ಗಂಗೋತ್ರಿ’ ಹೊಗೆವಳ್ಳಿ: ಕುವೆಂಪು ಅವರು ಒಮ್ಮೆ ಸ್ನೇಹಿತ ಮೂರ್ತಿಯೊಂದಿಗೆ ಮಲೆನಾಡಿನ ಬೆಟ್ಟಗಳನ್ನು ಏರಿ ಸಾಗುವ ಸೊಬಗಿನ ಚಿತ್ರಣದ ಕವನ ‘ವೈಶಾಖ ಸೂರ್ಯೋದಯ’. ಮುಗಿಲಿನ ಮಟ್ಟ ಸೇರಿ ಕೆಳಗಡೆ ಕಣಿವೆಯಲ್ಲಿ ಅಲ್ಲಲ್ಲಿ ತಲೆಯೆತ್ತಿರುವ ‘ಬಿಂಕದ ಹುಲ್ಮನೆ ನೋಟಗಳನ್ನು ನೋಡುತ್ತಾರೆ. ಕವಿಯು ಆ ಮನೆಗಳಿಂದ ಮೆಲ್ಲಗೆ ಮೇಲಕ್ಕೆ ಏರುವ ಹೊಗೆಯ ಆಕಾರವನ್ನು ಬಳ್ಳಿಗೆ ಹೋಲಿಸಿ ಹೊಸ ಪದ ‘ಹೊಗೆವಳ್ಳಿ’ಯಿಂದ ಹೀಗೆ ಚಿತ್ರಿಸಿದ್ದಾರೆ: ಮನೆಮನೆಯಿಂದ ಸುನೀಲಾಕಾಶಕೆ ಮೆಲ್ಲಗೇರ್ವ ಹೊಗೆವಳ್ಳಿಗಳು ನೀಲಿಯ ಕನಸಿನ ಬಳ್ಳಿಗಳು! (ಕದರಡಕೆ) ಹಗಲಿನಕ್ಷಿ:ಹಗಲನ್ನು ಬೆಳಗುವ ಸೂರ್ಯನನ್ನು ಪಗಲಕರ, ಪಗಲಬಲ್ಲಹ, ಹಗಲಚುಕ್ಕೆ, ಹಗಲಿನದೀಪ, ಪಗಲಾಣ್ಮ, ಪಗಲೆರೆಯ, ಹಗಲೊಡೆಯ ಎಂದು ಹಲವು ವಿಧವಾಗಿ ಕನ್ನಡ ಕವಿಗಳು ವರ್ಣಿಸಿದ್ದಾರೆ. ಸೂರ್ಯನು ಪೂರ್ವ ದಿಕ್ಕಿನಲ್ಲಿ ಕಣ್ಣು ತೆರೆಯುವುದರಿಂದ ಜಗತ್ತಿಗೆ ಬೆಳಕಾಗುವುದು. ಹಾಗಾಗಿ ಕುವೆಂಪು ಅವರು ರವಿಯನ್ನು ಹಗಲಿನ ಕಣ್ಣಾಗಿ ಕಂಡು ‘ಹಗಲಿನಕ್ಷಿ’ ಪದ ರಚಿಸಿ ಹೀಗೆ ಚಿತ್ರಿಸಿದ್ದಾರೆ: ದಿಗುತಟದಲಿ ತೆರೆಯುತಿತ್ತು ಹಗಲಿನಕ್ಷಿ (‘ಭಾದ್ರಪದದ ಸುಪ್ರಭಾತ’ ಪಕ್ಷಿಕಾಶಿ) ಹೂವತಿಥಿ:ಕೊಟಡಿಯ ಮುಂದೆಯೆ ಕೇಳಿತು ಝಂಕೃತಿ; ಕಿವಿಗಿಂಪೆರೆದೆದೆ ತೆರೆವಾ ಜೇನ್ ಕೃತಿ! ಜೇನಿಂಟುತ್ತಿವೆ ಹೂವತಿಥಿ? ಕುವೆಂಪು ಅವರು ಮೈಸೂರಿನ ‘ಉದಯರವಿ’ ಮನೆಯ ಹೂತೋಟದಲ್ಲಿ ಕುಳಿತು ದುಂಬಿಗಳ ಝೇಂಕಾರವನ್ನು ಕೇಳುತ್ತ, ಅವು ಸೂರ್ಯಕಾಂತಿ ಹೂವಿನ ‘ಹೂವತಿಥಿ’ ಎಂಬ ಅನ್ವರ್ಥನಾಮಪದ ಸೃಷ್ಟಿಸಿ ಬಣ್ಣಿಸಿದ್ದಾರೆ. ಮಕರಂದವನ್ನು ಹೀರುತ್ತಿರುವುದನ್ನು ಕಂಡು ಹಿಗ್ಗಿದ್ದಾರೆ.

ಸಂತೆಗಣ್ಣು ಗುಂಪು ಸೇರಿ ವ್ಯಾಪಾರ ಮಾಡುವ ಸ್ಥಳ ಸಂತೆ. ಅದು ಅನೇಕ ಬಗೆಯ ವಸ್ತುಗಳ ಪ್ರದರ್ಶನ, ಮನರಂಜನೆಗಳಿಂದ ಕೂಡಿದ ನೆರವಿ (ಸಮೂಹ). ಅಲ್ಲಿ ಸಮುದಾಯವು ತನ್ನ ಉಪಯೋಗ, ಅನುಕೂಲಕ್ಕೆ ತಕ್ಕಂತೆ ಸಾಮಾನ್ಯವಾದ ವಸ್ತು ಸಂಗತಿಗಳತ್ತ ಗಮನಹರಿಸುತ್ತದೆ. ಅಂತಹ ಸಂತೆ ಮಂದಿಯ ಕಣ್ಣುಗಳ ಲಕ್ಷಣವನ್ನು ಕುವೆಂಪು ‘ಸಂತೆಗಣ್ಣು’ ಎಂಬ ಪದ ಸೃಷ್ಟಿಸಿ ಕಾವ್ಯದಲ್ಲಿ ಪ್ರಯೋಗಿಸಿದ್ದಾರೆ. ಅದಕ್ಕೆ ಸೂಕ್ಷ್ಮವಾಗಿ ವಸ್ತು ವಿಶೇಷವನ್ನು, ವ್ಯಕ್ತಿತ್ವದ ಘನತೆಯನ್ನು ಅವಲೋಕಿಸುವ ಸಮಾಧಾನದ, ಶಾಂತಚಿತ್ತದ ಗುಣಲಕ್ಷಣಗಳಿರುವುದಿಲ್ಲ.

ಅಂತಹ ‘ಸಂತೆಗಣ್ಣು’ಗಳಿಗೆ ಕಾಣದೆ ಇದ್ದ ತಪಸ್ವಿ ಊರ್ಮಿಳೆಯನ್ನು ಕುವೆಂಪು ಒಂದು ಸಾನೆಟ್‌ನಲ್ಲಿ ಹೀಗೆ ಚಿತ್ರಿಸಿದ್ದಾರೆ. ರಾಮಾಯಣದ ಮಹಾರತ್ನವೇದಿಯ ಮೇಲೆ ಮೂಲೆಯಲಿ, ನಿಂತಿರುವುದೊಂದಮೃತ ಶಿಲ್ಪಕೃತಿ, ನಾಣ್ಚಿ ಕಾಣದೆ ಸಂತೆಗಣ್ಗಳಿಗೆ: ಪೂರ್ಣಸತಿ, ಊರ್ಮಿಳಾದೇವಿ, ಲಕ್ಷ್ಮಣ ಚಿರ ತಪಶೀಲೆ! (‘ಊರ್ಮಿಳಾದೇವಿ’ – ಕೃತ್ತಿ) ಡಾ. ಜಿ. ಕೃಷ್ಣಪ್ಪ ಅವರ ಸಾಹಿತ್ಯ ಸಾಧನೆ ಅನೇಕ ದೃಷ್ಟಿಯಿಂದ ನಮ್ಮ ಗಮನವನ್ನು ಸೆಳೆಯುತ್ತದೆ.ಅವರು ಸಾಹಿತ್ಯ ಕ್ಷೇತ್ರದಲ್ಲಿ ‘ಬೇಂದ್ರೆ ಕೃಷ್ಣಪ್ಪ’ ಎಂದು ಪರಿಚಿತರಾಗಿದ್ದರು. ಕೃಷ್ಣಪ್ಪ ಅವರು  ರಾಜ್ಯ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಮೋಟಾರು ವಾಹನಗಳ ನಿರೀಕ್ಷಕರಾಗಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು.ವೃತ್ತಿಯೊಂದಿಗೆ ಅಭಿರುಚಿಯಾಗಿ ಸಾಹಿತ್ಯ ಅಧ್ಯಯನದಲ್ಲಿ ತೊಡಗಿಸಿ ಕೊಂಡು ಕನ್ನಡದ ಪ್ರಮುಖ ಸಾಹಿತಿಗಳಾದ ಬೇಂದ್ರೆ ಹಾಗೂ ಕುವೆಂಪು ಅವರ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಿ ಹಲವು ಕೃತಿಗಳನ್ನು ರಚಿಸಿ ಸೈಯೆನಿಸಿ ಕೊಂಡವರು. ಬೇಂದ್ರೆ ಕಾವ್ಯ ಪದ ನಿರುಕ್ತ ಮಾದರಿಯಲ್ಲಿ ರಚನೆಯಾಗಿರುವ ಪ್ರಸ್ತುತ ಕೃತಿ ಸಹೃದಯರಿಗೆ,ಕನ್ನಡ ಕಾವ್ಯಾಸಕ್ತರಿಗೆ ಅತ್ಯಂತ ಉಪಯುಕ್ತವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕುವೆಂಪು ಪದ ಸೃಷ್ಟಿ  ಓದುಗರ ಪಾಲಿಗೆ ಒಂದು ಮಾರ್ಗಸೂಚಿ ನಿಘಂಟಾಗಿದೆ ಮತ್ತು ಇಂತಹ ನಿಘಂಟುಗಳನ್ನು ರಚಿಸಲು ಬಯಸುವ ವಿದ್ಯಾರ್ಥಿಗಳಿಗೆ ಇದೊಂದು ಅಪ್ಲೈಡ್ ಲೆಕ್ಸಿಕಾ ಗ್ರಫಿಯ ಪಠ್ಯವಾಗಿಯೂ ಒದಗಿಬರುತ್ತದೆ ಎಂಬುದಾಗಿ  ಮುನ್ನುಡಿಯಲ್ಲಿ ಡಾ. ವಾಸುದೇವಮೂರ್ತಿ ಅವರು ಕೃತಿಯ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ.

ಕುವೆಂಪು ಅವರ ನೂತನ ಶಬ್ದ ಸೃಷ್ಟಿಯನ್ನು ಅರ್ಥೈಸುವಲ್ಲಿ ಕೃಷ್ಣಪ್ಪ ಅವರು ತುಂಬಾ ಎಚ್ಚರ ವಹಿಸಿದ್ದಾರೆ.ಕೆಲವೆಡೆ ಆ ನೂತನ ಪದಗಳ ಸಾರ್ಥಕತೆಯನ್ನು ತಮ್ಮದೇ ಪ್ರತಿಭಾ ವಿಲಾಸದ ಹಿನ್ನೆಲೆಯಲ್ಲಿ ಮನಮುಟ್ಟುವಂತೆ ತಿಳಿಸಿಕೊಟ್ಟಿದ್ದಾರೆ ಎಂಬ ಡಾ. ಅನಂತರಾಮು ಅವರ ಮಾತು ನಿಜವೇ ಆಗಿದೆ. ಕುವೆಂಪುರವರ ಭಾಷಾ ಪರಿಣತಿ ಅಸಾಧಾರಣವಾದದ್ದು ಎಂಬುದನ್ನು ಈ ಕೃತಿ ಮತ್ತೊಮ್ಮೆ ರುಜುವಾತು ಪಡಿಸಿದೆ.”ಶಬ್ದವನು ನುಡಿದೊಡನೆ ಅವಸಾನ ಹೊಂದಿತೆನ್ನುವರು, ನುಡಿದಂದೆ ಶಬ್ದವದು ಬದುಕತೊಡಗುವುದೆ0ಬೆ ನಾನು”ಎಂಬ ಎಮಿಲಿ ಡಿಕನ್ಸನ್ ಅವರ ಮಾತು ಈ ಕೃತಿಯನ್ನು ಓದಿದ ಬಳಿಕ ನೆನಪಿಗೆ ಬಂತು. ಇದೊಂದು ಸಾರ್ಥಕ ಪ್ರಯತ್ನ.

‍ಲೇಖಕರು Admin R

7 March, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading