ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಿಯ ನಾಗಭೂಷಣ್, ಬರೆಯುತ್ತಲೇ ಇರಿ..

vashistaru

ಕಾಲದ ಜೊತೆ ಹೆಜ್ಜೆ ಹಾಕುವಾಗ ನಾನು ಒಂದೆರಡು ಹೆಜ್ಜೆ ಮುಂದೆ ಹೋಗಿಬಿಟ್ಟಿರುವೆನೇನೋ…. ಆದರೆ ಈ ದೇಶದ ಜನತೆ ಒಂದಲ್ಲ ದಿನ ನನ್ನ ಮಾತುಗಳಿಗೆ ಕಿವಿಗೊಡುವರು, ಕಿವಿಗೊಡಲೇ ಬೇಕಾಗುತ್ತದೆ..’ ಎಂದಿದ್ದರು ಈ ದೇಶ ಕಂಡ ಮಹಾ ಮೇಧಾವಿ ರಾಮಮನೋಹರ ಲೋಹಿಯಾ. ತಮ್ಮ ಚಿಂತನೆಯ ದೀವಟಿಗೆಯನ್ನು, ರಾಜಕೀಯದಲ್ಲಿರುವ ತಮ್ಮ ಶಿಷ್ಯಗಣ ಮುಂದಕ್ಕೊಯ್ದು ಸಮಾಜದಲ್ಲಿ ವೈಚಾರಿಕತೆಯ ಬೆಳಕು  ಪಸರಿಸಲಿದ್ದಾರೆಂದು ಅವರು ನಂಬಿದ್ದರೋ ಏನೋ? ಆದರೆ ಆ ಶಿಷ್ಯಗಣ ಭ್ರಷ್ಠ ರಾಜಕೀಯ ವ್ಯವಸ್ಥೆಯ ಕತ್ತಲ ಕೂಪದಲ್ಲಿ ಬಿದ್ದು ಕುರುಡಾಗಿ ಹೋಗಿ  ದಾರಿ ತಪ್ಪಿದೆ.

ಇಂತಹ ವೈಚಾರಿಕ ಅಂಧಕಾರದ ಸುರಂಗದ ಕೊನೆಯಲ್ಲಿನ  ಬೆಳಕಿಂಡಿಯಂತಿದೆ ಡಿ .ಎಸ್. ನಾಗಭೂಷಣ್ ಅವರ ಬರವಣಿಗೆ. ಸಮಾಜವಾದಿ ಚಿಂತನೆಗಳನ್ನು ಪರಿಣಾಮಕಾರಿಯಾಗಿ ಹೇಳುವುದು ಎಲ್ಲರಿಗೂ ಸಾಧ್ಯವಾಗುವಂತಹುದ್ದಲ್ಲ. ನಿಷ್ಠುರ ನುಡಿ ಮತ್ತು ನೇರ ನಡೆಯನ್ನು ಬದುಕಿನ ಒಂದು ಬಗೆಯಾಗಿ ಅಂಗೀಕರಿಸಿದವರಿಗೆ ಮಾತ್ರ ಇದು ಸಾಧ್ಯಾ. ಸಮಾಜವಾದಿ ಚಿಂತನೆಯ ಕುಲುಮೆಯಲ್ಲಿ ಪುಟಗೊಂಡ  ಡಿಎಸ್ ಎನ್ ಅವರಲ್ಲಿ ಇಂತಹ ಗುಣಗಳಿರುವುದರಿಂದಾಗಿಯೇ ಈ ಕಲೆ ಅವರಿಗೆ ಸಿದ್ದಿಸಿದೆ. ಬದುಕು ಮತ್ತು ಬರಹದ ನಡುವೆ ಅಂತರ ಇಲ್ಲದ ಅವರ ವ್ಯಕ್ತಿತ್ವದ ಪ್ರತಿಬಿಂಬ ಅವರ ಬರಹಗಳಲ್ಲಿ ಸ್ವಷ್ಟವಾಗಿ ಕಾಣುತ್ತದೆ. ಈ ಕಾರಣಕ್ಕಾಗಿಯೇ ಅವು ಓದುಗರ ಮನದ ಕದ ತಟ್ಟುತ್ತಿವೆ. ಡಿಎಸ್ ಎನ್ ಅವರದ್ದು ಹಂಗಿಲ್ಲದ ಬರವಣಿಗೆ.

ಡಿ.ಎಸ್.ನಾಗಭೂಷಣ್ ಅವರನ್ನು ನಾನೆಂದೂ ಭೇಟಿ ಮಾಡಿಲ್ಲ. ಅವರನ್ನು ತಿಳಿದುಕೊಳ್ಳಲು ಒಂದು ಭೇಟಿಯ ಅವಶ್ಯಕತೆ ಇದೆ ಎಂದು ನನಗೆ ಈಗಲೂ ಅನಿಸುತ್ತಿಲ್ಲ. ಅದಕ್ಕೆ ಅವರ ಬರವಣಿಗೆಯೇ ಸಾಕು. ಕರ್ನಾಟಕದಿಂದ ದೂರ ಇದ್ದರೂ, ಕಳೆದೆರಡು ವರ್ಷಗಳಿಂದ ವಿಕ್ರಾಂತ ಕರ್ನಾಟಕದಲ್ಲಿ ‘ವಾರದ ಒಳನೋಟ ಎಂಬ ಹೆಸರಲ್ಲಿ ಪ್ರಕಟವಾಗುತ್ತಿರುವ ಅವರ ಬಹುತೇಕ ಅಂಕಣಗಳನ್ನು ನಾನು ಓದಿದ್ದೇನೆ. ಅವುಗಳನ್ನು ಓದಿದಾಗಲೆಲ್ಲ ನನ್ನನ್ನು ಸೆಳೆಯುವುದು ಅವರ ಬರಹಗಳಲ್ಲಿ ಸದಾ ಪ್ರಜ್ವಲಿಸುತ್ತಿರುವ ಸಿಟ್ಟು. ಆ ಸಿಟ್ಟಿನಲ್ಲಿ ಅನ್ಯಾಯವನ್ನು ಸುಟ್ಟು ಹಾಕಬೇಕೆನ್ನುವ ಬೆಂಕಿಯ ಜತೆಯಲ್ಲಿ, ಸಮಾಜದ ಹಿತಕ್ಕಾಗಿ ತುಡಿಯುವ ಅಂತ;ಕರಣದ ಬೆಳಕೂ ಇದೆ. ಹಾಗಾಗಿಯೇ ಈ ಸಿಟ್ಟಿನ ಅಪರಾವತಾರಿ ಒಂದು ಪುಟ್ಟ ಬೆಕ್ಕಿನ ಸಾವಿಗೂ ಕರಗಿಹೋಗುತ್ತಾರೆ. ಈ ಅಪ್ಪಟ ಮನುಷ್ಯ ಗುಣವೇ ಅವರ ಬರವಣಿಗೆಗಳತ್ತ ನಮ್ಮನ್ನು ಸೆಳೆಯುವುದು.

ಮನುಷ್ಯ ಸಿಟ್ಟಾಗಬಾರದು, ಅದು ಆರೋಗ್ಯಕ್ಕೆ ಹಾನಿ. ಆದ್ದರಿಂದ ನಗು ನಗುತ್ತಾ ಇರಬೇಕು ಎನ್ನುತ್ತಾರೆ ವೈದ್ಯರು. ಅವರಿಗೆ ಸಾಮಾಜಿಕ ಆರೋಗ್ಯದ ಬಗ್ಗೆ ಅರಿವಿಲ್ಲ. ಆರೋಗ್ಯವಂತ ಮನುಷ್ಯನೊಬ್ಬ ಭಾರತೀಯ ಸಮಾಜದಲ್ಲಿ ಸಿಟ್ಟಾಗದೆ ಇರಲು ಸಾಧ್ಯವೇ ಇಲ್ಲವೆಂಬುದು ನನ್ನ ಗಟ್ಟಿ ನಂಬಿಕೆ. ಆದರೆ ಸ್ವಾತಿಕರ ಸಿಟ್ಟು ನಿರಾಶೆಯಾಗಿ, ಕೊನೆಗೆ ಹತಾಶೆಯಾಗಿ ಮಾರ್ಪಡಲು ಸಮಾಜ ಬಿಡಬಾರದು. ಪ್ರಿಯ ನಾಗಭೂಷಣ್, ಬರೆಯುತ್ತಲೇ ಇರಿ, ಅದಕ್ಕೆ ಕಿವಿಗೊಡುವವರು ಇದ್ದೇ ಇದ್ದಾರೆ ಖಂಡಿತ.

-ದಿನೇಶ್ ಅಮೀನ್ ಮಟ್ಟು

ಬೆನ್ನುಡಿಯಿಂದ

ವಸಿಷ್ಠರು ಮತ್ತು ವಾಲ್ಮೀಕಿಯರು ಸಮಾಜವಾದಿ ಸಂಕಥನಗಳು
ಡಿ ಎಸ್ ನಾಗಭೂಷಣ
ಪುಟ 368    ಬೆಲೆ 150
ಲೋಹಿಯಾ ಪ್ರಕಾಶನ, ಕ್ಷಿತಿಜ, ಕಪ್ಪಗಲ್ ರಸ್ತೆ,, ಬಳ್ಳಾರಿ- 583103
08392-257412

‍ಲೇಖಕರು avadhi

24 April, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading