ಎ ಆರ್ ಮಣಿಕಾಂತ್
ಪ್ರಿಯರೆ,
ಮೇ ೧೧ ರ ಭಾನುವಾರ ಬಿಡುಗಡೆ ಆಗಲಿರುವ ಭಾವತೀರಯಾನ ಪುಸ್ತಕದಲ್ಲಿ ಎಂಥ ಬರಹಗಳಿವೆ ಎಂಬುದು ಹಲವರ ಕುತೂಹಲ ಆಗಿರಬಹುದು .. ಆ ಪುಸ್ತಕದ ಒಟ್ಟು ಹೂರಣ ಏನು ಎಂಬುದನ್ನು ಗೆಳೆಯ ರಾಘವೇಂದ್ರ ಜೋಷಿ ಅವರು ಆಪ್ತವಾಗಿ ವಿವರಿಸಿದ್ದಾರೆ . ಪುಸ್ತಕಕ್ಕೆ ಮುನ್ನುಡಿಯ ತೋರಣ ಕಟ್ಟಿದವರು ಜೋಶಿಯವರೇ . ಅವರ ಆಪ್ತ ಬರವಣಿಗೆಗೆ ನಮಿಸುತ್ತಾ ಅದನ್ನು ನಿಮ್ಮ ಓದಿಗೂ ಕೊಡುತ್ತಿದ್ದೇನೆ…
’ಈ ಲೋಕದಲ್ಲಿ
ಅಸಂಭವ ಅನ್ನುವದು
ಕೇವಲ ಮಾತಿನಲ್ಲಿ
ಮಾತ್ರ ಬರುವಂಥದ್ದು;
ಕೃತಿಯಲ್ಲಲ್ಲ!’
ನನ್ನ ಪುರಾತನ ಮಿತ್ರನಾದ ಮಣಿಕಾಂತ್ ಬರೆದಿರುವ ಈ “ಭಾವತೀರಯಾನ” ಅಂಕಣ ಬರಹಗಳ ಪುಸ್ತಕವನ್ನು ಓದುತ್ತಿರುವ ಈ ಹೊತ್ತಿನಲ್ಲಿ ‘ರೂಮಿ’ ಎಂಬ ಅವಧೂತ ಮತ್ತೇ ಮತ್ತೇ ನೆನಪಿಗೆ ಬರುತ್ತಿದ್ದಾನೆ. ಮನುಷ್ಯ ಜನ್ಮದ ಸಾರ್ಥಕತೆಯನ್ನು ಹೇಳುತ್ತಲೇ, ನಮ್ಮಲ್ಲಿರಬಹುದಾದ ಹೇಡಿತನ, ಪೆದ್ದುತನ, ಜಾರಿಕೊಳ್ಳುವಿಕೆ, ಸೋಮಾರಿತನ, ಇಚ್ಛಾಶಕ್ತಿಗಳ ಬಗ್ಗೆ ರೂಮಿ ತುಂಬ ಕರುಣೆಯಿಂದ ಮಾತನಾಡುತ್ತಾನೆ: ಅಯ್ಯೋ ಹುಚ್ಚಪ್ಪ, ಸುಮ್ಮನೇ ನಡೆಯುತ್ತಿರು. ಮುಂದಕ್ಕೆ ಹೋಗುತ್ತಿರು. ನೀನು ಎಷ್ಟು ನಡೀತಿರಬೇಕು ಅಂದರೆ, ಕಾಲು ಸೋತು ನಡಿಗೆ ಭಾರವಾಗಿ ಇನ್ನೇನು ಕುಸಿದುಬಿದ್ದೆ ಅನ್ನುವ ಹೊತ್ತಿನಲ್ಲೇ ನಿನ್ನಲ್ಲಿ ರೆಕ್ಕೆ ಮೂಡಿದ್ದು ಗೋಚರಿಸುತ್ತದೆ ಅಂತ ರೂಮಿ ಹೇಳುತ್ತಾನೆ.
‘ಕನ್ನಡಪ್ರಭ’ ಪತ್ರಿಕೆಯ ಜನಪ್ರೀಯ ಅಂಕಣಕಾರ ಎ.ಅರ್.ಮಣಿಕಾಂತ್ ಬರೆದಿರುವ ಈ ಪುಸ್ತಕ ಕೂಡ ರೂಮಿಯ ಮಾತಿನ ಧಾಟಿಯಲ್ಲೇ ಸಾಗುತ್ತದೆ. ಇಲ್ಲಿ ನಮ್ಮೆಲ್ಲರ ದೈನಂದಿನ ಬದುಕಿನ ಅವಮಾನಗಳಿವೆ. ಕೊರಗುಗಳಿವೆ. ಹಸಿವು, ಬಡತನ, ದಟ್ಟದಾರಿದ್ರ್ಯಗಳಿವೆ. ಆದರೆ ಎಂಥ ಕಗ್ಗತ್ತಲಿನ ಸುರಂಗದ ಆಚೆಗೂ ಒಂದು ಬೆಳಕಿನ ಮಂಡಲ ಇದ್ದೇ ಇರುತ್ತದೆ ಎನ್ನುವಂತೆ,ತನ್ನ ಬರಹಗಳಲ್ಲಿ ಸಕಲೆಂಟು ಕಪ್ಪುಬಿಳುಪುಗಳ ಕೊನೆಗೆ ಒಂದು ಕಾಮನಬಿಲ್ಲು ಎದ್ದು ನಿಲ್ಲುವಂತೆ ಮಾಡುವಲ್ಲಿ ಈ ಗೆಳೆಯ ಯಾವತ್ತೂ ಹಿಂದೆ ಬಿದ್ದಂತಿಲ್ಲ. ಹಾಗಂತ ಇಲ್ಲಿರುವ ಬರಹಗಳಲ್ಲಿ ಯಾವುದೂ ಕಟ್ಟುಕತೆಗಳಿಲ್ಲ. ಸಪ್ತ ಸಾಗರದಾಚೆ ಒಬ್ಬ ರಾಜನಿದ್ದ-ಅಂತ ಹೇಳುವದಿಲ್ಲ. ಅಲ್ಲೊಂದು ಇಲ್ಲೊಂದು ಕಲ್ಪನೆಯ ‘ವಾಸ್ತವ ಚಿತ್ರಣ’ವಿರುವ ಸಣ್ಣಕತೆ ಅಥವಾ ಲಹರಿಗಳನ್ನು ಬಿಟ್ಟರೆ ಮಿಕ್ಕೆಲ್ಲವೂ ಸತ್ಯಕತೆಗಳೇ. ನಮ್ಮ ಕಣ್ಣಮುಂದೆ ನಡೆದಿರುವಂಥವುಗಳೇ. ಒಟ್ಟಾರೆಯಾಗಿ ಇಡೀ ಪುಸ್ತಕ ಒಂದು ಲೌಕಿಕ ಭರವಸೆಯನ್ನು ಕಟ್ಟಿಕೊಡುವದರಲ್ಲಿ ತನ್ನೆಲ್ಲ ಶಕ್ತಿಯನ್ನು ವಿನಿಯೋಗಿಸುತ್ತಲಿದೆ.
ಹಾಗೆ ನೋಡಿದರೆ, ಇಲ್ಲಿರುವ ಬಹುತೇಕ ಬರಹಗಳನ್ನು ನಾನು ಕಾಲಕಾಲಕ್ಕೆ ಕನ್ನಡಪ್ರಭದ ‘ಭಾವತೀರಯಾನ’ ಅಂಕಣದಲ್ಲಿ ಓದಿದ್ದಿದೆ. ಏನೆಲ್ಲ ಬರೆಯುವ ಸಾಮರ್ಥ್ಯವಿರುವ ಈ ಮಿತ್ರ, ಮನುಷ್ಯನ ಆಂತರಿಕ ಸ್ವಭಾವ, ತೊಳಲಾಟ ಮತ್ತು ಜೀವನಪ್ರೀತಿಯ ಬಗ್ಗೆ ಕೊಂಚ ಜಾಸ್ತಿ ಒಲವು ತೋರಿಸುವದರ ಬಗ್ಗೆ ನನಗೆ ಅನೇಕ ಸಲ ಕುತೂಹಲ ಮತ್ತು ನೆಮ್ಮದಿಯನ್ನು ಮೂಡಿಸಿದೆ. ಹಾಗೆಯೇ ಕೆಲವೊಮ್ಮೆ ಈ ಗೆಳೆಯ ತಾನು ಸೃಷ್ಟಿಸಿದ ಸೃಷ್ಟಿಯೊಳಗೆ ತನಗೇ ಗೊತ್ತಿಲ್ಲದಂತೆ ಅನಧಿಕೃತ ಪ್ರವೇಶ ಮಾಡಿಬಿಡುವದನ್ನೂ, ನಿರ್ದಿಷ್ಟ ಪಾತ್ರಗಳನ್ನು ಪ್ಯಾಂಪರಿಂಗ್ ಮಾಡುವದನ್ನೂ ನೋಡಿದಾಗ ಈ ಮನುಷ್ಯ ಎಷ್ಟು ಕರುಣಾಮಯಿ ಮತ್ತು ಎಷ್ಟು ಪಕ್ಷಪಾತಿ(?) ಅಂತ ಕುಶಾಲಿಯಾಗಿ ನಗಾಡಿಕೊಂಡಿದ್ದಿದೆ!
ಇದೆಲ್ಲದರ ಮಧ್ಯೆ, ನನಗೆ ತುಂಬ ಇಷ್ಟವಾಗುವ ಸಂಗತಿ ಏನೆಂದರೆ, ಇಲ್ಲಿ ಲೇಖಕ ‘ವಸ್ತು’ಗಳ ಬಗ್ಗೆ ಬೆನ್ನಟ್ಟಿ ಹೋಗುವ ರೀತಿ. ಎಲ್ಲೋ ಕೇಳಿದ ಸಂಗತಿಗಳನ್ನು ‘ಇದಮಿತ್ಥಂ’ ಎಂದು ಎಲ್ಲೂ ಹೇಳದೇ ಆಯಾ ಘಟನೆಗಳನ್ನು ಅದಕ್ಕೆ ಸಂಬಂಧಪಟ್ಟ ಮನುಷ್ಯರಿಂದಲೇ ಕೇಳಿ,ತಿಳಿದುಕೊಂಡು ಓದುಗರಿಗೆ ಕಟ್ಟಿಕೊಡುವ ರೀತಿಯಿದೆಯಲ್ಲ? ಅದು ತುಂಬ ಸಮಯ ಮತ್ತು ತಾಳ್ಮೆಯನ್ನು ಬಯಸುತ್ತದೆ. ತನ್ನ ಸೀಮಿತ ಪರೀಧಿಯ ನಡುವೆಯೂ ಇವೆಲ್ಲವುಗಳನ್ನೆಲ್ಲ ಮಣಿಕಾಂತ ತುಂಬ ಜತನದಿಂದ ಮಾಡಿರುವದು ನನಗೆ ವೈಯಕ್ತಿಕವಾಗಿ ಗೊತ್ತಿರುವದರಿಂದ ಈ ಮಾತನ್ನು ವಿನಯದಿಂದ ಹೇಳುತ್ತಿದ್ದೇನೆ. ಇನ್ನುಳಿದಂತೆ ಕತೆಯಾಗಲೀ, ಕವಿತೆಯಾಗಲೀ, ಪ್ರಬಂಧವಿರಲಿ: ಅದಕ್ಕೊಂದು ಅಥೆಂಟಿಸಿಟಿ ಕೊಡಬಹುದಾದ ಹಲವಾರು ಗುಣಗಳ ಪೈಕಿ ಆಯಾ ಲೇಖಕನ ಹುಡುಕಾಟದ ಮನಸ್ಸು ಮತ್ತು ಜೀವನಪ್ರೀತಿ ಕೂಡ ತನ್ನದೇ ಆದ ಪಾತ್ರವಹಿಸುತ್ತದೆ. ಬಹುಶಃ ಅದಕ್ಕೇ ಇರಬೇಕು: ಅತ್ಯಂತ ಶುದ್ಧ ಮನಸ್ಸಿನ ಭಾವನೆಗಳಿಂದ ಮಾತ್ರ ಅತ್ಯಂತ ಕೆಟ್ಟ ಕವನ ಹುಟ್ಟಬಲ್ಲದು ಅನ್ನುವ ಮಾತನ್ನು ಕೂಡ ಇಲ್ಲಿ ಅಪ್ರಾಸಂಗಿಕವಾಗಿ ಬರೆಯುತ್ತಿದ್ದೇನೆ. ಆದರೆ ಇದಕ್ಕೊಂದು ಅಪವಾದವೆಂಬಂತೆ, ಗೆಳೆಯ ಮಣಿಕಾಂತರಲ್ಲಿ ಚೆಂದದ ಬರಹ ಮತ್ತು ಶ್ರದ್ಧೆಯ ಪ್ರಜ್ಞೆ ಎರಡೂ ಇವೆ ಅಂತ ಹೇಳಬಲ್ಲೆ.
ಹೀಗಾಗಿ ಬದುಕಿನ ಹಲವಾರು ಹಳವಂಡಗಳಿಂದ ರೋಸಿಹೋದ ಮನಸ್ಸಿಗೆ, ಇಚ್ಛಾಶಕ್ತಿಯ ಕೊರತೆಯಿರುವ ಮನಸ್ಸಿಗೆ,ದುಃಖತಪ್ತ ಮನಕ್ಕೆ ಈ ಪುಸ್ತಕದಲ್ಲಿರುವ ಬಹುತೇಕ ಬರಹಗಳು ಪ್ರಫುಲ್ಲತೆ ಕೊಡುವದಲ್ಲದೇ ಒಂದು ಮಟ್ಟಿಗಿನ ದಿಕ್ಸೂಚಿಯಾಗಬಲ್ಲವು. ಹಾಗೆಯೇ ಇದೆಲ್ಲದರ ಜೊತೆಜೊತೆಗೇ ನನ್ನ ವೈಯಕ್ತಿಕ ಅಸಹನೆಯನ್ನೂ ಇಲ್ಲಿ ತೋರ್ಪಡಿಸುತ್ತಿದ್ದೇನೆ. ಏನೆಲ್ಲ ಬರೆಯುವ ಸಾಮರ್ಥ್ಯವಿರುವ ಮಣಿಕಾಂತ್ ಸಾಹಿತ್ಯದ ಇತರೇ ಪ್ರಾಕಾರಗಳಾದ ಕವಿತೆ, ಕತೆ, ಪ್ರಬಂಧಗಳ ಬಗ್ಗೆ ಯೋಚಿಸದಷ್ಟೂ ಒಳ್ಳೆಯನಾಗಿರುವದು ನನ್ನಂಥವರಿಗೆ ತುಸು ಬೇಸರ ತರಿಸುತ್ತದೆ. ಬದುಕಿನ ಜೀವನ್ಮುಖಿ ಬರಹಗಳ ಜೊತೆಜೊತೆಗೇ ಯಾವುದೋ ಕತೆಯ ಮೂಲೆಯಲ್ಲಿ ಮೂಡಬಹುದಾದ ಅನೂಹ್ಯ ತಿರುವಿಗಾಗಿ, ಎಂಥದೋ ಕವಿತೆಯಲ್ಲಿ ಪ್ರತಿಫಲಿಸಬಹುದಾದ ನವಿರು ಸ್ಪರ್ಶಕ್ಕಾಗಿ ಈ ಮಿತ್ರನ ಲೇಖನಿ ಶಬರಿಯಂತೆ ಕಾಯುತ್ತಿರಬಹುದು ಅಂತ ಇಲ್ಲಿ ಪ್ರೀತಿಯಿಂದ ಜ್ಞಾಪಿಸುತ್ತಿದ್ದೇನೆ.
ಅದೇನೇ ಇರಲಿ, ಈ “ಭಾವತೀರಯಾನ”ವಂತೂ ನನಗೆ ಒಂದು ಶಾಂತ ದಡವನ್ನೂ,ಬದುಕಿನ ಬಗ್ಗೆ ಭರವಸೆಯನ್ನೂ ಮೂಡಿಸಿದೆ. ಓದುಗರಿಗೂ ಇದೇ ರೀತಿಯ ಅನುಭವ ದಕ್ಕಲಿ ಅಂತ ನನ್ನ ಆಸೆ. ಕೊನೆಯದಾಗಿ, ಇಡೀ ಪುಸ್ತಕದ ಭಾವವನ್ನು ಒಂದು ಸಾಲಿನಲ್ಲಿ ಕಟ್ಟಿಕೊಡುವ ನಿರರ್ಥಕ ಪ್ರಯತ್ನ ಮಾಡಬಹುದಾದರೆ, ಗಿಜಿಗಿಜಿಯಾಡುತ್ತಿರುವ ಬಸ್ಸಿನಲ್ಲಿ ಹೊಡೆದಾಡಿ ಸೀಟು ಗಿಟ್ಟಿಸಿಕೊಳ್ಳುವ ಪೋರನೊಬ್ಬ ಆಗತಾನೇ ತೇಕುತ್ತ ಬಂದ ತುಂಬು ಗರ್ಭಿಣಿಗೆ ತನ್ನ ಜಾಗ ಬಿಟ್ಟುಕೊಡುವದರಲ್ಲಿಯೇ ಮಣಿಕಾಂತರ ಬೆರಳುಗಳ ಸಾರ್ಥಕತೆಯಿದೆ-
ಅಂತ ಅಂದುಕೊಳ್ಳುತ್ತ ಈ ಮಿತ್ರನಿಗೂ,ಆ ಪೋರನಿಗೂ ಶುಭ ಹಾರೈಸುತ್ತಿದ್ದೇನೆ..
-ರಾಘವೇಂದ್ರ ಜೋಶಿ
***
ಮೇ ೧೧ ರ ಸಂಜೆ ೬ ಗಂಟೆಗೆ ಸರಿಯಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ನೀವು ದಯವಿಟ್ಟು ಬರಬೇಕು ಎಂಬುದು ನನ್ನ ಪ್ರಾರ್ಥನೆ..
– ಎ ಆರ್ ಮಣಿಕಾಂತ್








0 Comments