ಪ್ರಸಾದ್ ನಾಯ್ಕ್ ಅವರ ಕಥಾ ಸಂಕಲನ ‘ಫರಿಶ್ತಾ’
ಈ ಪುಸ್ತಕವನ್ನು ಅವ್ಯಕ್ತ ಪ್ರಕಾಶನ ಪ್ರಕಟಿಸಿದೆ
ಪ್ರಶಸ್ತಿ ವಿಜೇತ ಈ ಕಥಾಸಂಕಲನದ ಆಯ್ದ ಭಾಗ ಇಲ್ಲಿದೆ
ಅವಳು ಇನ್ನೇನಾದರೂ ಮಾತಾಡುವ ಮುನ್ನವೇ “ಇವಿಷ್ಟು ವರ್ಷಗಳಲ್ಲಿ ಯಾವತ್ತಾದರೂ, ಒಂದು ಕ್ಷಣವಾದರೂ ನಾನು ನಿನಗೆ ನೆನಪಾದೆನೇ?’” ಎಂದು ಕೇಳಿದ್ದೆ. ವಿವಾಹಿತೆಯಾದ ಅವಳಿಗೆ ಅದರ ಅಗತ್ಯವೇನೂ ಇರಲಿಲ್ಲ ಎಂಬುದು ನನಗೆ ಗೊತ್ತಿತ್ತು. ಆದರೆ ನನ್ನದೂ ಪುರುಷಾಹಂಕಾರ. “ಅದೂ… ಅದೂ…”, ಎಂದು ತಡವರಿಸಿದಳು ಅವಳು. ಕೆಂಡದ ಮೇಲೆ ನಿಂತವನಂತೆ ಕೊಸರಾಡುತ್ತಿದ್ದ ನನಗೆ ರೋಸಿಹೋಯಿತು.
“ನಿನ್ನ ಉತ್ತರವು ನಿನ್ನ ಮೌನದಲ್ಲೇ ಇದೆ”, ಎನ್ನುತ್ತಾ ವೇಗವಾಗಿ ಕೋಣೆಯಿಂದ ಹೊರಬಿದ್ದೆ. ಈ ಒಂಭತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅದ್ಯಾಕಾದರೂ ಇವಳು ನನ್ನ ಜೀವನದಲ್ಲಿ ಬಂದಳೋ ಎನ್ನುವಷ್ಟು ಸಂಕಟವಾಯಿತು ನನಗೆ. ನನ್ನ ಅನಿರೀಕ್ಷಿತ ನಿರ್ಗಮನದೊಂದಿಗೆ ಗೊಂದಲಕ್ಕೀಡಾಗಿದ್ದ ಜಾಹ್ನವಿ ದಂಗುಬಡಿದವಳಂತೆ ನಿಂತಲ್ಲೇ ನಿಂತಿದ್ದಳು. ಅದೇನು ಹೇಳಲು ಬಂದಿದ್ದಳೋ, ಆದರೆ ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ.
ಸೀದಾ ಒಳಕೋಣೆಯತ್ತ ನಡೆದ ನಾನು ಧರಿಸಿದ್ದ ಬಟ್ಟೆಯನ್ನು ಬಿಚ್ಚಿ ಹಾಕಿ ಪುಟ್ಟ ಚಡ್ಡಿಯೊಂದನ್ನು ಮಾತ್ರ ಹಾಕಿಕೊಂಡು ಬುಸುಗುಡುತ್ತಾ ಹೊರಬಂದೆ. ಮೆತ್ತನೆಯ ಟವೆಲ್ ನನ್ನ ಭುಜದ ಮೇಲೆ ಮೈಚಾಚಿ ಮಲಗಿಕೊಂಡಿತ್ತು. ಜಾಹ್ನವಿ ಇದೇನಾಗುತ್ತಿದೆ ಎನ್ನುವಂತೆ ನೋಡುತ್ತಲೇ ನಿಂತಿದ್ದಳು. ಅವಳು ಅಲ್ಲಿ ಇಲ್ಲವೇ ಇಲ್ಲ ಎಂಬಂತೆ ಹೊರಬಂದ ನಾನು ಅತ್ತಿತ್ತ ನೋಡದೆ ಈಜುಕೊಳದೊಳಕ್ಕೆ ಧುಮುಕಿಬಿಟ್ಟೆ…






0 Comments