ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಸನ್ನ ಅವರ ಉಪವಾಸ ಕುರಿತಂತೆ ತಾತ್ವಿಕವಾಗಿ ಸಮಸ್ಯೆಗಳಿವೆ..

ಪವಿತ್ರ ಆರ್ಥಿಕತೆಗಾಗಿ ಖ್ಯಾತ ರಂಗಕರ್ಮಿ, ದೇಸಿ ಚಳವಳಿಯನ್ನು ಹುಟ್ಟು ಹಾಕಿದ ಪ್ರಸನ್ನ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ‘ಇದೇನಿದು ಪವಿತ್ರ ಆರ್ಥಿಕತೆ?’ ಎನ್ನುವ ಪ್ರಶ್ನೆಗಳೂ ಎದ್ದಿವೆ.

ಇಲ್ಲಿ ನಮ್ಮ ನಡುವಿನ ಸಂವೇದನಾಶೀಲ ಚಿತ್ರ ಇರ್ದೆಶಕ ಕೇಸರಿ ಹರವೂ, ಸಮಕಾಲೀನ ವಿಷಯಗಳ ವಿಶ್ಲೇಷಣಾಕಾರ ನಾ. ದಿವಾಕರ್ ಅವರು ಪ್ರಸನ್ನರ ನೋಟದ ಹಿಂದಿನ ರಾಜಕೀಯವನ್ನು ಬಿಡಿಸಿಟ್ಟಿದ್ದಾರೆ.

ಇದು ‘ಜುಗಾರಿ ಕ್ರಾಸ್’. ಚರ್ಚೆಗಾಗಿ ಇರುವ ಅಂಗಳ 

ನೀವೂ ಚರ್ಚೆಯಲ್ಲಿ ಭಾಗವಹಿಸಿ. avadhimag@gmail.com ಗೆ ನಿಮ್ಮ ಅಭಿಪ್ರಾಯವನ್ನು ಕಳಿಸಿಕೊಡಿ

ಸುರೇಶ್ ಕಂಜರ್ಪಣೆ 

ಪ್ರಸನ್ನ ಅವರ ಉಪವಾಸ ಕುರಿತಂತೆ ತಾತ್ವಿಕವಾಗಿ ಒಂದೆರಡು ಸಮಸ್ಯೆಗಳನ್ನು ಮುಂದಿಡಬಯಸುವೆ.

1. ಉಪವಾಸ ಸತ್ಯಾಗ್ರಹವೆಂಬುದು ಯಾವುದೇ ಹೆಜ್ಜೆಗತಿಯ ಕೊನೆಯ ಅಸ್ತ್ರವೇ ಹೊರತು ಆರಂಭದ್ದಲ್ಲ. ಇದನ್ನು ಬಳಸುವಲ್ಲಿ ಒಂದೆರಡು ಸೂಚಿಗಳಿವೆ. ಮೊದಲನೆಯದಾಗಿ ಇದನ್ನು ಪ್ರಭುತ್ವದ ವಿರುದ್ಧದ ಹೋರಾಟದಲ್ಲಿ ಎಲ್ಲಾ ಸಂವಾದದ ಸಾಧ್ಯತೆಗಳೂ ಬಳಕೆಯಾಗಿಯೂ ನಿಷ್ಪಲಗೊಂಡಾಗ ಬಳಸಬೇಕು. ಎರಡನೆಯದು ಸಾಮುದಾಯಿಕವಾಗಿ ಕ್ಷೋಭೆಯಿದ್ದಾಗ ಒಂದು ನೈತಿಕ ನಿಲುಮೆಯಲ್ಲಿ ಸಮುದಾಯಕ್ಕೆ ಪ್ರಜ್ಞೆ ಮೂಡಿಸುವ ಕ್ರಮವಾಗಿ. (ಅಮ್ಟಸ್ ಸಲಾಂ ನೌಖಾಲಿಯಲ್ಲಿ ಮಾಡಿದ ಉಪವಾಸ ಇಂಥಾದ್ದು)
ಪ್ರಸನ್ನ ಅವರು ಇಂಥಾ ಕ್ರಮಗಳನ್ನು ಪೂರೈಸಿದ್ದಾರೆ ಎಂಬ ಬಗ್ಗೆ ಪುರಾವೆಗಳೇ ಇಲ್ಲ. ಪ್ರಭುತ್ವದ ಜೊತೆ ಮಾತುಕತೆಗೆ ಅವಕಾಶ ಮಾಡಿಕೊಡಿ ಎಂಬ ಸಣ್ಣ ಅಂಶಕ್ಕೇ ಈ ಉಪವಾಸದ ಅಸ್ತ್ರ ಬಳಸಿದರೆ ಹೇಗೆ?

2. ಪ್ರಸನ್ನ ಅವರ ಬೇಡಿಕೆಗಳೇನು? ಅವರು ಹೇಳುತ್ತಿರುವ ಪವಿತ್ರ ಆರ್ಥಿಕತೆಯ ಬಗ್ಗೆ ಉಳಿದವರ ಜೊತೆಯೂ ಒಂದು ಚರ್ಚೆ ಸಂವಾದ , ಡೆಲಿಬರೇಷನ್ ಆಗಬೇಕಲ್ಲವೇ? ಒಂದೋ ಈ ಪರ್ಯಾಯದ ಬಗ್ಗೆ ಹಲವಾರು ಭಾಗೀದಾರರಲ್ಲಿ ಚರ್ಚಿಸಿ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ನಿರ್ದಿಷ್ಟ ನೀಲನಕ್ಷೆಯೊಂದಿಗೆ ಸರ್ಕಾರದ ಜೊತೆಗೆ ಚರ್ಚೆಗೆ ಇಳಿಯಬೇಕು. ನಾವು ಒಪ್ಪಲಿ ಬಿಡಲಿ ಅಲ್ಲಿ ಬೇರೆ ಹಿತಾಸಕ್ತಿಯವರ ವಾದವೂ ಇರುತ್ತದೆ. ಅದೆಷ್ಟೇ ಸ್ವಾರ್ಥಪರವಾಗಿದ್ದರೂ ಪ್ರಜಾಸತ್ತಾತ್ಮಕವಾಗಿ, ತಾರ್ಕಿಕವಾಗಿ ಆ ವಾದಗಳನ್ನು ಭಂಗಿಸಿ ಈ ಪರ್ಯಾಯವನ್ನು ಮುಂದಿಡಬೇಕು. ಇವೆಲ್ಲಾ ಒಂದರ್ಥದಲ್ಲಿ ವಿಸ್ತೃತ ದುಂಡುಮೇಜಿನ ಚರ್ಚೆಯೇ ಸರಿ.

3. ಇನ್ನೊಂದೆಡೆ, ಈ ಪವಿತ್ರ ಆರ್ಥಿಕತೆ ಯಾರನ್ನು ಒಳಗೊಳ್ಳುತ್ತದೆಯೋ ಅವರನ್ನು ಮೊಬಿಲೈಸ್ ಮಾಡಬೇಕಲ್ಲವೇ? ಅವರಿಗೇ ಈ ಬಗ್ಗೆ ಪರಿವೆ ಇಲ್ಲದಿದ್ದರೆ ಇದರ ನೀಲನಕ್ಷೆಯ ಪುರಾವೆ ಎಲ್ಲಿಂದ ಬರುತ್ತದೆ?

4. ಈ ಪರಿಕಲ್ಪನೆ ಬಗ್ಗೆ ಇರುವ ಒಳ ವೈರುಧ್ಯಗಳನ್ನು ಪ್ರತ್ಯೇಕವಾಗಿ ಚರ್ಚಿಸಬೇಕಿದೆ. ಉದಾ: ನೂರು ಕಿ.ಮೀ ಒಳಗಿನ ಸಂಪನ್ಮೂಲ ಮತ್ತು ಉತ್ಪಾದನಾ ವಲಯ. ಇದು ಪ್ರಾಕ್ಟಿಕಲಿ ಹೇಗೆ ಆಪರೇಟ್ ಆಗುತ್ತದೆ? ಆಯಾತ- ನಿರ್ಯಾತಗಳೇ ಉಸಿರಾಗಿರುವ ಈ ಆರ್ಥಿಕ ವರ್ತಮಾನದಲ್ಲಿ ಅದನ್ನು ಸ್ಥಿರಗೊಳಿಸುವ ಬಗೆ ಹೇಗೆ? ಇವೆಲ್ಲಾ ವಿವರಗಳನ್ನು ಬೇಡುತ್ತದೆ.

5. ಪ್ರಸನ್ನ ಅವರು ನಾಟಕೀಯವಾಗಿ ಮೊರ, ಪೊರಕೆ ಮಡಿಕೆ ಇಟ್ಟು ಹೈಲೈಟ್ ಮಾಡಿದ್ದಿದೆ. ಅವು ನಾಟಕದಲ್ಲಿ ಓಕೆ. ಆದರೆ ಆರ್ಥಿಕ ವ್ಯವಹಾರದಲ್ಲಿ ಸರ್ಕಾರವನ್ನು ಒಪ್ಪಿಸುವುದಷ್ಟೇ ಅಲ್ಲ, ಗ್ರಾಹಕರನ್ನು ಒಪ್ಪಿಸುವ ಕೆಲಸವೂ ಇದೆ. ತಕ್ಷಣಕ್ಕೆ ಹಾಳಾಗದ ಖಾದಿ ಬಟ್ಟೆಯೊಂದನ್ನು ಮುಂದಿಟ್ಟುಕೊಂಡು ಕೈಗಳಿಗೆ ಉದ್ಯೋಗ ಎಂದು ಮಾತಾಡುವುದಿದೆ. ಆದರೆ ಇಂದು ಮೌಲ್ಯವರ್ಧಿತ ಉತ್ಪನ್ನಗಳ ಸಣ್ಣಪುಟ್ಟ ಸ್ಥಳೀಯ ಉದ್ದಿಮೆಗಳು ನಮ್ಮ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿವೆ. ಇವನ್ನು ಪ್ರೆಡೇಟರಿ ಕಂಪೆನಿಗಳಿಂದ ರಕ್ಷಿಸಿ ಬೆಳೆಸುವುದು ಹೇಗೆ? ಇವುಗಳ ಉತ್ಪನ್ನಗಳ ಗುಣಮಟ್ಟಕ್ಕೊಂದು ಮಾನದಂಡ ಹೇಗೆ? ಹತ್ತಾರು ಪದರಗಳಲ್ಲಿ ಸ್ಪಷ್ಠತೆ ಬೇಕಾಗುತ್ತದೆ. ಈ ಸ್ಪಷ್ಠತೆಯ ದಫ್ತರು ಇಲ್ಲದಿದ್ದರೆ ಬೀಸು ಹೇಳಿಕೆಯ ತಾತ್ವಿಕತೆ ನಮ್ಮನ್ನು ಹಾಸ್ಯಾಸ್ಪದ ಮಾಡಬಲ್ಲುದು

‍ಲೇಖಕರು avadhi

12 October, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading