ನಾಗರಾಜ ಶೆಟ್ಟಿ
ಮನುಷ್ಯ ಸಹಜವಾದ ಪ್ರೀತಿ ಧರ್ಮದ ಹೆಸರಲ್ಲಿ ಹಿಂಸೆಯಲ್ಲಿ ಕೊನೆಗೊಳ್ಳುವಾಗ ಸಂವೇದನಾಶೀಲ ಮನಸ್ಸುಗಳು ನೊಂದು ಒಂದಲ್ಲ ಒಂದು ಬಗೆಯಲ್ಲಿ ಪ್ರತಿಕ್ರಿಯಿಸಲು, ಪ್ರತಿಭಟಿಸಲು ಬಯಸುತ್ತವೆ. ಬಹು ಜನರನ್ನು ತಲುಪುವ ಸಿನಿಮಾದಂತಹ ಮಾಧ್ಯಮದ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುವ ವಿದ್ಯಮಾನಗಳಿಗೆ ಪ್ರತಿರೋಧವನ್ನು ತೋರಬಹುದಾದರೂ ಅವನ್ನು ತಡೆಯಲು ಪ್ರಭುತ್ವದ ಕೈಯಲ್ಲಿ ಹಲವು ಸಲಕರಣೆಗಳಿವೆ.ಇಂತಹ ತಡೆಗಳನ್ನು ದಾಟಿಕೊಂಡು ಯುವ ಸಂವೇದನಾ ಶೀಲ ಮನಸ್ಸುಗಳು ದಿಟ್ಟವಾಗಿ ಅಭಿವ್ಯಕ್ತಿಸುತ್ತವೆಂದರೆ ಅಂತಹ ಪ್ರಯತ್ನಗಳನ್ನು ಮೆಚ್ಚಲೇ ಬೇಕು.
ಸಾರ್ಥಕ್ ಹೆಗ್ಡೆ ನಿರ್ದೇಶನದ ‘ಗ್ರೀನ್ ಗರ್ಲ್’ ಹೆಸರಿನ ಚಿತ್ರವೊಂದು ಒಂದು ವಾರದಿಂದ ಮಲ್ಟಿಫ್ಲೆಕ್ಸ್ ನಲ್ಲಿದೆ. ಅದನ್ನು ನೋಡಿದವರ, ಅದರ ಕುರಿತು ಬರೆದವರ, ಹೊಗಳಿದವರ ಸಂಖ್ಯೆ ತೀರಾ ಕಡಿಮೆ. ಹಾಗೆ ನೋಡಿದರೆ ಇದು ಬಿಡುಗಡೆಯಾಗಿದ್ದೇ ಆಶ್ಚರ್ಯ. ಕೇವಲ 48 ನಿಮಿಷಗಳ ಈ ಚಿತ್ರವನ್ನು ಕಿರು ಚಿತ್ರ ಎಂದರೂ ಸರಿಯೇ. ಆದರೆ ಅದು ತೆರೆಯ ಮೇಲೆ ಕಾಣಿಸುವ, ನೇರವಾಗಿ ಬೊಟ್ಟು ಮಾಡಿ ತೋರಿಸುವ ವಿಷಯ ಸಣ್ಣದೇನಲ್ಲ.
ಜೀವನ್ ಮತ್ತು ಅಮೀನಾ ಹದಿಹರೆಯ ದಾಟಿದ ಮುಗ್ಧ ಪ್ರೇಮಿಗಳು. ಜೀವನ್ ಗೆ ತಾನು ಮುಸ್ಲಿಮರಿಂದ ಹಲ್ಲೆಗೊಳಗಾಗುವ ಕನಸು ಬೀಳುವಂತೆ, ಭಾರತ ಮಾತೆ ಅಮೇರಿಕಾಕ್ಕೆ ಹೋಗು ಎಂದು ಹೇಳುವ ಎನ್ನುವ ಕನಸೂ ಬೀಳುತ್ತದೆ. ಅಮೀನಾ ಧೈರ್ಯಸ್ಥೆ. ಇದು 2024 ನೇ ಇಸವಿ; ನಾವು ಹೆದರಬೇಕಾಗಿಲ್ಲ ಎಲ್ಲವೂ ಬದಲಾಗುತ್ತದೆ ಎನ್ನುತ್ತಾಳೆ ಆಕೆ.

ಗೆಳೆಯನಿಗಾಗಿ ಕೇಸರಿ ಸಂಘಟನೆಯ ಕೆಲಸದಲ್ಲಿ ತೊಡಗಿಕೊಳ್ಳುವ ಜೀವನ್ ಅಮೀನಾ ಬೇಡ ಎಂದರೂ ಅದನ್ನು ಬಿಡಲಾರ. ತನ್ನ ತಂದೆಗೆ ಅದರಿಂದ ಸಂತೋಷ ಆಗುತ್ತದೆ. ಬಿಟ್ಟರೆ ಅವರಿಗೆ ಬೆಚ್ಚ ಆಗುತ್ತದೆ ಎನ್ನುತ್ತಾನೆ. ಧರ್ಮದ ಹುಚ್ಟು ಮನೆ ಮನೆಗೂ ಅಮರಿಕೊಂಡಿರುವುದು ಈ ಮೂಲಕ ವ್ಯಕ್ತವಾದರೆ, ಇದು ಕಲಿಯುಗ ದೇವರು ನಮ್ಮನ್ನು ರಕ್ಷಿಸುವುದಿಲ್ಲ, ದೇವರ ರಕ್ಷಣೆ ನಾವು ಮಾಡಬೇಕು ಎನ್ನುವ ಧರ್ಮ ರಕ್ಷಣೆಯ ನೇರ ಮಾತುಗಳೂ ಚಿತ್ರದಲ್ಲಿವೆ. ಪ್ರಾಯ ಸಹಜವಾದ ಭಾವನೆಗಳನ್ನು ನಿಯಂತ್ರಿಸುವ ಶಕ್ತಿಗಳನ್ನು ತೋರಿಸುವಂತೆ, ಇಲ್ಲಿರುವುದಕ್ಕಿಂತ ಸ್ವತಂತ್ರವಾಗಿರಲು ಪರದೇಶಕ್ಕೆ ಹೋಗುವುದು ವಾಸಿ ಎನ್ನುವ ಯುವಜನರ ಅಭಿಪ್ರಾಯವನ್ನೂ ಚಿತ್ರ ಹೇಳುತ್ತದೆ.
ಜೀವನ್ ಮತ್ತು ಅಮೀನಾರ ಮುಗ್ಧ, ಸಹಜ ಪ್ರೀತಿಯೊಟ್ಟಿಗೆ ಕೇಸರಿ ಢಾಳಾಗಿ ಕಣ್ಣಿಗೆ ಮೆತ್ತಿಕೊಂಡು ಆತಂಕವನ್ನು ಸೃಷ್ಟಿಸುತ್ತಾ ಹೋಗುತ್ತದೆ. ಬೆಂಕಿಯುಗುಳುವ ಮಾತುಗಳು, ಪ್ರೇಮದ ಮಾರ್ದವತೆಯನ್ನು ಗುಲಾಬಿಯ ಮುಳ್ಳುಗಳಂತೆ ಚುಚ್ಚುತ್ತವೆ. ಯಾವ ಸಂಕೋಚವೂ ಇಲ್ಲದೆ ಕಠೋರ ವಾಸ್ತವವನ್ನು ಅನಾವರಣ ಮಾಡುವ ನಿರ್ದೇಶಕ ಚಿತ್ರದ ಮೊದಲಲ್ಲೇ ಅಮೀನಾಳನ್ನು ಭಾರತಾಂಬೆಯಾಗಿ ತೋರಿಸುವ ಮೂಲಕ ತನ್ನ ಚಿಂತನೆಯನ್ನು ಮನದಟ್ಟು ಮಾಡುತ್ತಾನೆ.
ಸುಚರಿತ ಮತ್ತು ಮಯೂರ್ ಗೌಡ ಎಳೆ ಹರೆಯದ ಪ್ರೇಮಿಗಳಾಗಿ ಕಾಡುತ್ತಾರೆ. ರವಿಯಣ್ಣ, ಪ್ರೇಮ್ ಪಾತ್ರಗಳನ್ನು ಪ್ರಾಸಂಗಿಕವಾಗಿ ಒಪ್ಪಬಹುದಾದರೂ ಪ್ರತೀಕ್ ಪಾತ್ರಕ್ಕೆ ಸ್ಪಷ್ಟತೆಯಿಲ್ಲ. ಕೆಲವೇ ನಿಮಿಷಗಳ ಚಿತ್ರದಲ್ಲಿ ಹೆಚ್ಚು ನಿರೀಕ್ಷಿಸಲಾಗದು.ಆದರೆ ಕೆಲವು ಸನ್ನಿವೇಶಗಳನ್ನು ಸುಧಾರಿಸಿದ್ದರೆ, ಧ್ವನಿ ಗ್ರಹಣ ಸ್ಪಷ್ಟವಾಗಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು.
‘ಗ್ರೀನ್ ಗರ್ಲ್’ ಇನ್ನೊಂದು ದಕ್ಷಿಣ ಕನ್ನಡದ ಚಿತ್ರ. ಆದರೆ ಇದರಲ್ಲಿ ರಂಜಿಸುವ, ಭ್ರಮೆಗೆ ಒಳಪಡಿಸುವ ಉದ್ದೇಶವಿಲ್ಲ. ದಕ್ಷಿಣ ಕನ್ನಡದ ಸಂದರ್ಭವನ್ನು, ಜನರ ಮನಸ್ಥಿತಿಯನ್ನು, ಮುಗ್ಧ ಜೀವಿಗಳ ತಹತಹವನ್ನು ಒಂದಿನಿತೂ ಅಳುಕಿಲ್ಲದೆ ನೇರವಾಗಿ ಹೇಳುವ ನಿರ್ದೇಶಕ ಹುಲಿ ಇರುವ ಗುಹೆಗೇ ನುಗ್ಗಿದ್ದಾರೆ. ದಕ್ಷಿಣ ಕನ್ನಡದ ಆಡು ಮಾತು ನಗೆಯುಕ್ಕಿಸುವ ಬದಲು ಚುಚ್ಚುತ್ತದೆ. ಸಾರ್ಥಕ್ ಹೆಗ್ಡೆ ಯಾರನ್ನೂ ಮೆಚ್ಚಿಸುವುದಕ್ಕೆ ಹೋಗದೆ ತನ್ನ ಆಶಯವನ್ನು ದಾಟಿಸುತ್ತಾ ತಾನು ಹೇಳುವುದನ್ನು ಹೇಳಿದ್ದೇನೆ ನೋಡುವುದು, ಬಿಡುವುದು ನಿಮಗೆ ಬಿಟ್ಟಿದ್ದು ಎನ್ನುವಂತೆ ಚಿತ್ರ ಮಾಡಿದ್ದಾರೆ. ಈ ರೀತಿಯ ದಿಟ್ಟ, ಕಳಕಳಿಯ ನಿರ್ದೇಶಕ ಕನ್ನಡಕ್ಕೆ ಬೇಕು.






0 Comments