ಡಾ.ಅಜಿತ್ ಹರೀಶಿ ಅವರ ಹೊಸ ಕವನ ಸಂಕಲನ ‘ತೇಲಿ ಬಿಟ್ಟ ಆತ್ಮಬುಟ್ಟಿ’
ವಿಜಯಲಕ್ಷ್ಮಿ ಪ್ರಕಾಶನ ಈ ಪುಸ್ತಕ ಪ್ರಕಟಿಸಿದೆ.
ಈ ಕವನ ಸಂಕಲನ ಕುರಿತು ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ವಿಮರ್ಶೆ ಇಲ್ಲಿದೆ.
–ಸುಬ್ರಾಯ ಚೊಕ್ಕಾಡಿ
ಅಜಿತ್ ಹರೀಶಿ ಈಚಿನ ಬರೆಹಗಾರರ ಪೈಕಿ ಗಮನಾರ್ಹವಾದ ಹೆಸರು. ಕವಿತೆ, ಕತೆ, ವಿಮರ್ಶೆ, ವೈದ್ಯಕೀಯ ಸಾಹಿತ್ಯ… ಹೀಗೆ ವಿವಿಧ ಪ್ರಕಾರಗಳಲ್ಲಿ ತಮ್ಮ ಮಾಧ್ಯಮದ ಹುಡುಕಾಟ ನಡೆಸಿದವರು, ನಡೆಸುತ್ತಾ ಇರುವವರು. ಪ್ರತಿಯೊಂದು ಪ್ರಕಾರದಲ್ಲೂ ಕೃತಿಯಿಂದ ಕೃತಿಗೆ- ಇದಲ್ಲ, ಇದಲ್ಲ ಅನ್ನುತ್ತ ಹೊಸತಿನ ಕಡೆಗೆ ತುಡಿದವರು.
“ತೇಲಿ ಬಿಟ್ಟ ಆತ್ಮಬುಟ್ಟಿ” ಅಜಿತರ ನಾಲ್ಕನೆಯ ಕವನ ಸಂಕಲನ. ಇದರಲ್ಲಿ, ಚಿತ್ರ ಅಮರ ಅನ್ನುವ, ಬಾಲ್ಯ ಬದುಕು ವೇದಾಂತ- ಎಂದು ಹೆಸರಿಸಿದ ಮೊದಲ ಭಾಗದಲ್ಲಿ 32 ಕವಿತೆಗಳಿದ್ದು, ಎರಡನೆಯ, “ಹರಿಕಾ ಹರಿ ಪ್ರೇಮ ಲಹರಿ” ಎನ್ನುವ ಎರಡನೇ ಭಾಗದಲ್ಲಿ, ಪ್ರೀತಿ ತೊರೆ ಕಡಲಾಗಿ ಎನ್ನುವ ಉಪ ಶೀರ್ಷಿಕೆಯ 6 ಕವಿತೆಗಳಿವೆ.
ಮೊದಲ ಭಾಗದಲ್ಲಿನ “ಸಾಕ್ಷ್ಯ ಚಿತ್ರ” ಕವಿತೆಯು ಬದುಕಿನ ವಿವಿಧ ಹಂತಗಳ, ಬಾಳಿನ ಉದ್ದೇಶದ, ಅದರ ವಿನ್ಯಾಸದ ಒಟ್ಟೂ ಚಿತ್ರವನ್ನು ಸೂಕ್ಷ್ಮವಾಗಿ ನೀಡುತ್ತದಲ್ಲದೆ, ಈ ಭಾಗದ ಇತರ ಕವಿತೆಗಳೂ ಈ ವಿನ್ಯಾಸದ ವಿವಿಧ ಭಾಗಗಳೆಂಬಂತೆ ಚಿತ್ರಿತವಾಗಿರುವ ರೀತಿ ಗಮನಾರ್ಹವಾಗಿದೆ. “ಮುತ್ತುಗದೆಲೆಯ ಮೇಲಿನ ಬೆಲ್ಲ”, “ರೂಪಾಂತರ”, “ದೀಪದೆಣ್ಣೆಗೆ ತಾಕದ ಬತ್ತಿ”, “ದೃಷ್ಟಿಕೋನ”, “ತಿತಿಕ್ಷೆ”, “ಕೋಳಿ ಕೂಗದ ಬೆಳಗು”, “ತಂತ್ರದೋಷ”, “ಎಂಟನೆಯ ಕನಸು”, “ಅಲೆಯ ಮೆಲಿನ ಚೆಂಡು”,… ಮೊದಲಾದ ಕವಿತೆಗಳು ಈ ಭಾಗದ ಗಮನಾರ್ಹವಾದ ಹಾಗೂ ಹೆಚ್ಚಿನ ವಿಶ್ಲೇಷಣೆಯನ್ನು ಬೇಡುವ ಕವಿತೆಗಳಾಗಿವೆ. ಎರಡನೇ ಭಾಗದ “ಮರದಿಂದ ಬಿದ್ದ ಮಳೆಹನಿ”, “ಪ್ರೀತಿ ವೀಣೆಯ ನುಡಿಸಿ”, “ನವಿಲು ಗರಿಯ ಬೆನ್ನ ಸವರಿ” ನನಗೆ ಇಷ್ಟವಾದ ಕವಿತೆಗಳಾಗಿವೆ.
ಅಜಿತ್ ಪಳಗಿದ ಕವಿ. ಭಾಷೆಯನ್ನು ಭಿನ್ನ ಬಗೆಗಳಲ್ಲಿ ಬಳಸಬಲ್ಲರು. ಇವರ ಕವಿತೆಗಳು ಒಂದು ರೀತಿಯಲ್ಲಿ ಕೊಲ್ಯಾಜ್ ಕವಿತೆಗಳೆನ್ನಬಹುದು. ವಿಭಿನ್ನ ರೂಪಕಗಳನ್ನು ಜಾಣತನದಿಂದ ಜೋಡಿಸುವ ಮೂಲಕ ಹೊಸ ಅರ್ಥವನ್ನು ಹೊಮ್ಮಿಸುವ ಪ್ರಯೋಗಗಳನ್ನು ಮಾಡುವ ಮೂಲಕ ಅಜಿತ್ ಕಾವ್ಯದ ಹೊಸಹಾದಿಯ ಹುಡುಕಾಟ ನಡೆಸಿದ್ದಾರೆ ಅಂತ ನನಗನಿಸುತ್ತದೆ. ಅತಿಯಾದ ರೂಪಕಗಳ ಬಳಕೆಯಿಂದ ಕೆಲವೊಮ್ಮೆಈ ಪ್ರಯೋಗದಲ್ಲಿ ಸೋತದ್ದಕ್ಕೂ, ಕೆಲವೊಮ್ಮೆ ಗೆದ್ದದ್ದಕ್ಕೂ ಈ ಸಂಕಲನದಲ್ಲಿ ಸಾಕ್ಷಿಗಳಿವೆ. ನಡೆಯುವವರು ಎಡವದೆ ಕುಳಿತವರು ಎಡವಬಲ್ಲರೇ? ಅಜಿತರು ತೇಲಿ ಬಿಟ್ಟ ಆತ್ಮ ಬುಟ್ಟಿ ಕೆಲವೊಮ್ಮ ಮೇಲೆ ಹಿತವಾಗಿ ಹಾರಾಡಿದೆ; ಕೆಲವೊಮ್ಮೆ ಕೆಳಗೂ ಸರಿದಿದೆ!
ಎಂದೂ ನಿಂತ ನೀರಾಗದೆ ಕೃತಿಯಿಂದ ಕೃತಿಗೆ ಹೊಸ ಪ್ರಯೋಗಗಳ ಮೂಲಕವೇ ದಾಟುತ್ತಿರುವ ಈ ಪ್ರಯೋಗಶೀಲ ಕವಿಯ ಮುಂದಿನ ನಡೆ ಕುತೂಹಲಕಾರಿಯಾಗಿದೆ.






0 Comments