ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಪ್ರಥಮ್‌ ಬುಕ್ಸ್‌’ನಲ್ಲಿ ಎಸ್ಥರ್‌ ದುಫ್ಲೋ ಪುಸ್ತಕಗಳ ಬಿಡುಗಡೆ

ಪ್ರಥಮ್‌ ಬುಕ್ಸ್‌ನಿಂದ ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞೆ ಎಸ್ಥರ್‌ ದುಫ್ಲೋ ಪುಸ್ತಕಗಳ ಬಿಡುಗಡೆ

ಮೂಲಭೂತ ಅಧಿಕಾರಗಳ ಬಗ್ಗೆ ಮಕ್ಕಳಿಗಾಗಿ ಚಿತ್ರಪುಸ್ತಕಗಳ ಸರಣಿ ಕನ್ನಡದಲ್ಲಿ

ನೊಬೆಲ್‌ ಪುರಸ್ಕೃತರೊಬ್ಬರು ಮಕ್ಕಳಿಗಾಗಿ ಬರೆಯುವುದು ಎಂದರೆ ಅಪರೂಪವೇ, ಅದೂ ಚಿತ್ರಪುಸ್ತಕ. ‘ಮೂಲಭೂತ ವಿಚಾರಗಳ ಬಗ್ಗೆ’ ಎಂಬ ಶೀರ್ಷಿಕೆಯಡಿ ನೊಬೆಲ್‌ ಪ್ರಶಸ್ತಿ ಪುರಸ್ಕೃತರಾದ ಎಸ್ಥರ್‌ ದುಫ್ಲೋ ಅವರು ರಚಿಸಿರುವ ಐದು ಪುಸ್ತಕಗಳ ಸರಣಿಗೆ ಶಾಯೆನ್ ಒಲೀವ್ಹಿಯೆ ಇಲ್ಲಸ್ಟ್ರೇಟ್ ಮಾಡಿದ್ದಾರೆ. ಈ ಪುಸ್ತಕಗಳನ್ನು ಪ್ರಥಮ್‌ ಬುಕ್ಸ್‌ನಿಂದ ಕನ್ನಡ, ಹಿಂದಿ, ಮರಾಠಿ, ಬೆಂಗಾಲಿ ಮತ್ತು ತಮಿಳು ಸೇರಿ ಐದು ಭಾಷೆಗಳಲ್ಲಿ ಪ್ರಕಟಿಸಲಾಗಿದೆ.

ಬದಲಾವಣೆ ಪ್ರೇರಕ ಕತೆಗಳು

ಎಸ್ಥರ್‌ ದುಫ್ಲೋ ಅವರ ಸಂಶೋಧನೆಯು ಸಾಮಾಜಿಕ ಹಾಗೂ ಆರ್ಥಿಕ ನೀತಿ ನಿಯಮಗಳ ಮೂಲಕ ಹೇಗೆ ಬಡವರ ಆರ್ಥಿಕತೆ ಸುಧಾರಿಸಬಹುದು ಎಂಬುದನ್ನು ಕೇಂದ್ರೀಕರಿಸಿದೆ. ಪ್ರಯೋಗಗಳ ಮೂಲಕ, ಬಡತನ ನಿವಾರಣೆಗೆ ಆರೋಗ್ಯ, ಶಿಕ್ಷಣ ಮತ್ತು ಅಭಿವೃದ್ಧಿಯ ಪಾತ್ರ ಎಷ್ಟು ಮುಖ್ಯವಾಗುತ್ತದೆ ಎಂಬುದನ್ನು ಅವರು ಕಂಡುಕೊಂಡಿದ್ದಾರೆ. ಸಂಶೋಧನೆಯಿಂದ ಪ್ರೇರಿತವಾದ ಈ ಮಕ್ಕಳ ಕತೆಗಳಲ್ಲಿ ಪಾತ್ರ ಸೃಷ್ಟಿ ಮತ್ತು ಆಸಕ್ತಿ ಹುಟ್ಟಿಸುವಂತೆ ಕತೆ ಕಟ್ಟುವುದು, ಅದಕ್ಕೆ ಪೂರಕವಾಗಿ ಇಲ್ಲಸ್ಟ್ರೇಟ್ ಮಾಡುವುದು ಸವಾಲಾಗಿತ್ತು. ಎಸ್ಥರ್‌ ದುಫ್ಲೋ, ಫ್ರೆಂಚ್‌ ಮೂಲದ ಚಿತ್ರಗಾರ್ತಿ ಶಾಯೆನ್‌ ಒಲೀವ್ಹಿಯೆ ಇಬ್ಬರೂ ಇದನ್ನು ಪರಿಣಾಮಕಾರಿಯಾಗಿ ಮಾಡಿದ್ದಾರೆ.

ಈ ಪುಸ್ತಕಗಳ ವಿನ್ಯಾಸದಲ್ಲಿ, ಒಂದೆರಡು ಸಾಲುಗಳ ಕತೆ ಜೊತೆ ಚಿತ್ರಗಳೇ ಹೆಚ್ಚಾಗಿರುವ ಪುಟಗಳು ಮಕ್ಕಳ ಗಮನ ಸೆಳೆಯುತ್ತವೆ. ಅಲ್ಲಲ್ಲಿ ಬರುವ ನವಿರು ಹಾಸ್ಯವು ಪುಸ್ತಕವನ್ನು ಮತ್ತಷ್ಟು ಆಕರ್ಷಕವೂ, ಸುಲಭ ಓದಿಗೆ ಸಿಗುವಂತಾಗಿಸಿವೆ. ಈ ಸರಣಿ ಪುಸ್ತಕಗಳಲ್ಲಿ ಶಾಲೆ, ಮೂಲಭೂತ ಹಕ್ಕುಗಳು, ಮಕ್ಕಳ ಆರೋಗ್ಯ, ಆರ್ಥಿಕ ಅಭಿವೃದ್ಧಿಗೆ ಅವಕಾಶಗಳು ಮತ್ತು ಮಗುವಿನ ದೃಷ್ಟಿಯಿಂದ ಲಿಂಗ ಸಮಾನತೆ ಕುರಿತ ವಿಷಯಗಳ ಕುರಿತಾದ ಕತೆಗಳಿವೆ.

ಈ ಸರಣಿಯ ಶೀರ್ಷಿಕೆಗಳನ್ನ ನೋಡಿದರೆ, ಅದರ ಸಾರ ಹೇಳುವಂತಿವೆ.

ಅಫಿಯಾ

ಅವಳನ್ನು ಗುಣಪಡಿಸುವವರು ಯಾರು?

ಅನುವಾದ: ಎಚ್ ಎಸ್ ರಾಘವೇಂದ್ರ ರಾವ್

ಊಲಾ

ಚುನಾವಣೆ ಸಮಯ

ಅನುವಾದ: ಎಸ್ ದಿವಾಕರ್

ನೆಸೊ ಮತ್ತು ನಾಜೆ

ದೊಡ್ಡ ಸಿಟಿಯ ಭಯವಿಲ್ಲ

ಅನುವಾದ: ಓ ಎಲ್ ನಾಗಭೂಷಣಸ್ವಾಮಿ

ನೀಲೂ

ಇನ್ನು ಶಾಲೆ ತಪ್ಪಿಸುವುದಿಲ್ಲ!

ಅನುವಾದ: ಜೆ ವಿ ಕಾರ್ಲೊ

ಬಿಬಿರ್

ಮಾಟಗಾತಿಗೊಂದು ಪುಟ್ಟ ಸಹಾಯ

ಅನುವಾದ: ಎಲ್ ಸಿ ನಾಗರಾಜ್

ಕತೆಯ ವಿಷಯಗಳು ಮತ್ತು ಅವುಗಳ ಸುತ್ತ ಹೆಣೆಯಲಾದ ಕತೆಗಳು ಭಾರತದ ಮಕ್ಕಳಿಗೂ ಅಷ್ಟೇ ಸಶಕ್ತವಾಗಿ ದಕ್ಕುತ್ತವೆ. ಪ್ರೇರಣೆ ನೀಡುವ ಈ ಕತೆಗಳು, ಅವಕಾಶಗಳ ಅನ್ವೇಷಣೆಗೆ ಸಹಾಯಕವಾಗಿ, ಅಭಿವೃದ್ಧಿಯನ್ನು ಉತ್ತೇಜಿಸುವಂತಿವೆ. ಈ ಪುಸ್ತಕಗಳು 3ನೇ ಹಂತದ ಅಂದರೆ ಸ್ವಂತವಾಗಿ ಓದಬಲ್ಲ 8ರಿಂದ 12 ವರ್ಷದ ಮಕ್ಕಳಿಗೆ ಹೆಚ್ಚು ಸೂಕ್ತವಾಗಿವೆ.

ಪ್ರಥಮ್ ಬುಕ್ಸ್ ಮತ್ತು ಎಸ್ಥರ್‌ ದುಫ್ಲೋ:

ಎಸ್ಥರ್‌ ದುಫ್ಲೋ ತಮ್ಮ ಅರ್ಥಶಾಸ್ತ್ರಜ್ಞ ಪತಿ ಡಾ ಅಭಿಜಿತ್‌ ಬ್ಯಾನರ್ಜಿ ಮತ್ತು ಪ್ರೊಫೆಸರ್‌ ಮೈಕಲ್‌ ಕ್ರೆಮರ್‌ ಅವರೊಂದಿಗೆ 2019ರಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್‌ ಪ್ರಶಸ್ತಿ ಪಡೆದಿದ್ದಾರೆ. ಅಮೆರಿಕದ ಮಸಾಚುಸೆಟ್ಸ್‌ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿದ್ದಾರೆ. ಮಕ್ಕಳ ಓದುವಿಕೆ ಕುರಿತ ಆಳವಾದ ಆಸಕ್ತಿಯಿಂದಾಗಿಯೇ ಎಸ್ಥರ್‌ ಪ್ರಥಮ್‌ ಬುಕ್ಸ್‌ನ ಸಂಪರ್ಕಕ್ಕೆ ಬಂದಿದ್ದು ಕೂಡ. ನೊಬೆಲ್‌ ಮ್ಯೂಸಿಯಂಗಾಗಿ ಅವರು ಪ್ರಥಮ್‌ ಬುಕ್ಸ್‌ನ ಪುಸ್ತಕಗಳನ್ನು ದಾನವಾಗಿಯೂ ಕೊಟ್ಟಿದ್ದಾರೆ. ಈ ಸರಣಿ ಪುಸ್ತಕಗಳನ್ನು ಬರೆದು, ಪ್ರಥಮ್ ಬುಕ್ಸ್ ಮೂಲಕ ಪ್ರಕಟಣೆಗೆ ಮುಂದಾಗಿರುವುದು ಪ್ರಥಮ್‌ ಬುಕ್ಸ್‌ ಜತೆಗಿನ ಬಾಂಧವ್ಯವನ್ನು ಮತ್ತಷ್ಟು ವೃದ್ಧಿಸಿದೆ. ಈ ಪುಸ್ತಕಗಳ ಮೂಲ ಫ್ರೆಂಚ್‌ ಭಾಷೆಯಲ್ಲಿದ್ದು, ಎಸ್ಥರ್‌ ಸ್ವತಃ ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.

ಇಲ್ಲಸ್ಟ್ರೇಟರ್ ಬಗ್ಗೆ:

ಶಾಯೆನ್ ಒಲೀವ್ಹಿಯೆ ಫ್ರೆಂಚ್‌ ಮೂಲದ ಇಲ್ಲಸ್ಟ್ರೇಟರ್. ಸ್ಟ್ರಾಸ್‌ ಬೊರ್ಗ್‌ನ ಡೆಕೊರೇಟಿವ್‌ ಆರ್ಟ್ಸ್‌ ಶಾಲೆ ಮತ್ತು ಪ್ಯಾರಿಸ್ಸಿನ ಎಸ್ಟಿಯೆನ್‌ ಆರ್ಟ್ಸ್‌ ಅಂಡ್‌ ಡಿಸೈನ್ ಸ್ಕೂಲ್‌ನಿಂದ ಚಿತ್ರ ರಚನೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ಚಿತ್ರಗಳು, ರೇಖಾಗಣಿತದ ಮಾದರಿಗಳೊಂದಿಗೆ ಸ್ವಾಭಾವಿಕವಾಗಿ ಕಚಗುಳಿ ಇಡುವಂತಿದ್ದು, ಸಾಮಾನ್ಯವಾಗಿ ಸಾಮಾಜಿಕ ಮತ್ತು ಪ್ರಾಕೃತಿಕ ಸಮಸ್ಯೆಗಳ ಕುರಿತಾಗಿ ಚಿತ್ರ ಬರೆಯುವ ರೂಢಿ ಇವರದು.

ಅನುವಾದಕರ ಬಗ್ಗೆ:

ಈ ಸರಣಿಯ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿರುವುದು; ನಾಡಿನ ಪ್ರಮುಖ ಲೇಖಕರು, ಅನುವಾದಕರಾದ – ಎಚ್ ಎಸ್ ರಾಘವೇಂದ್ರ ರಾವ್‌, ಎಸ್ ದಿವಾಕರ್, ಓ ಎಲ್ ನಾಗಭೂಷಣಸ್ವಾಮಿ, ಜೆ ವಿ ಕಾರ್ಲೊ, ಎಲ್‌ ಸಿ ನಾಗರಾಜ್‌ ಎನ್ನುವುದು ಮತ್ತೊಂದು ವಿಶೇಷ. ಇವರುಗಳ ಕುಸುರಿ ಕೆಲಸವು ಈ ಕತೆಗೆ ವಿಶೇಷ ಮೆರುಗು ನೀಡುವಲ್ಲಿ, ಕನ್ನಡ ಓದುಗರನ್ನು ತಲುಪುವಲ್ಲಿ ಹೆಚ್ಚು ಸಹಕಾರಿಯಾಗಿದೆ.

  • ನೊಬೆಲ್‌ ಪ್ರಶಸ್ತಿ ದೊರೆತಾಗ, ಏನಾದರೊಂದು ವಸ್ತುವನ್ನು ನೊಬೆಲ್‌ ಸಂಗ್ರಹಾಲಯಕ್ಕೆ ದಾನವಾಗಿ ಕೊಡಲು ಕೇಳಿದರು. ದೇಶಾದ್ಯಂತ ಮಕ್ಕಳನ್ನು ಬೆಂಬಲಿಸುವಲ್ಲಿ ಪ್ರಥಮ್‌ ಬುಕ್ಸ್‌ನ ಪಾತ್ರವನ್ನು ಕಂಡು, ಪ್ರಥಮ್‌ ಬುಕ್ಸ್‌ನ ಪುಸ್ತಕಗಳನ್ನು ಅಲ್ಲಿಗೆ ಕೊಟ್ಟೆ. ಇದೀಗ ಪ್ರಥಮ್ ಬುಕ್ಸ್ ನನ್ನದೇ ಕೆಲಸವೊಂದನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆ ನೀಡಿದೆ. ನೀಲೂ ಮತ್ತು ಸ್ನೇಹಿತರ ಕಥಾ ಸರಣಿ ಕನ್ನಡ, ತಮಿಳು, ಮರಾಠಿ, ಹಿಂದಿ, ಬೆಂಗಾಲಿ ಮಕ್ಕಳಿಗೆ ಓದಿನ ಸಂತಸ ನೀಡಲಿದೆ ಎಂದು ಆಶಿಸುತ್ತೇನೆ.
  • ಎಸ್ಥರ್‌ ದುಫ್ಲೋ, ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞೆ

ಈ ಸರಣಿಯು ಭಾರತೀಯ ಭಾಷೆಗಳಿಗೆ ಅನುವಾದಗೊಳ್ಳುತ್ತಿರುವುದರಿಂದ ಇಂಗ್ಲಿಷ್‌ ಹೊರತಾದ ಇತರೆ ಭಾಷೆಯ ಹಲವು ಓದುಗರಿಗೆ ತಲುಪಲಿದ್ದೇವೆ ಎಂಬುದು ಸಂತಸದ ವಿಷಯ. ನನ್ನ ಪ್ರಕಾರ, ಕತೆಗಳನ್ನು ಮಕ್ಕಳು ತಾವಾಗಿಯೇ ಓದಲಿ ಅಥವಾ ದೊಡ್ಡವರು ಯಾರಾದರೂ ಓದಿ ಹೇಳಿದರೂ ಮಾತೃಭಾಷೆಯಲ್ಲಿ ಓದುವುದರಿಂದ ಪುಸ್ತಕಗಳು, ಪಾತ್ರಗಳ ಜೊತೆ ನೈಜ ಕಲ್ಪನೆ ಸಾಧ್ಯವಾಗುತ್ತದೆ. ಸಂಕೀರ್ಣವಾದ ಕತೆಗಳು ಮತ್ತು ಉಪಾಯಗಳ ಅರ್ಥೈಸುವಿಕೆ ಈ ಮೂಲಕ ಮತ್ತಷ್ಟು ಸರಳವೂ ಆಗುತ್ತದೆ.

ಶಾಯೆನ್ ಒಲೀವ್ಹಿಯೆ, ಇಲ್ಲಸ್ಟ್ರೇಟರ್

ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಎಸ್ಥರ್‌ ದುಫ್ಲೋ ಅವರ ಕೈಂಕರ್ಯಗಳು ಜಾಗತಿಕ ಮಟ್ಟದಲ್ಲಿ ಬದಲಾವಣೆ ತರಲು ನೆರವಾಗಿವೆ. ಪ್ರಥಮ್‌ ಬುಕ್ಸ್‌ ಮೂಲಕ ಅವರ ಜ್ಞಾನವನ್ನು ಮಾತೃಭಾಷೆಗಳಲ್ಲಿ ಮಕ್ಕಳಿಗೆ ತಲುಪಿಸುತ್ತಿರುವುದಕ್ಕೆ ನಾವು ಆಭಾರಿಗಳು. ಓದು ಬದಲಾವಣೆಗೆ ಪೂರಕ ಮತ್ತು ಈ ಪುಸ್ತಕಗಳು ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಕುರಿತಾದ ಚರ್ಚೆಗಳಿಗೆ ಇಂಬು ನೀಡಲಿ ಎಂದು ಆಶಿಸುತ್ತೇವೆ.

– ಹಿಮಾಂಶು ಗಿರಿ, ಸಿಇಓ, ಪ್ರಥಮ್‌ ಬುಕ್ಸ್‌

ಪ್ರಥಮ್‌ ಬುಕ್ಸ್‌ ಬಗ್ಗೆ

ಪ್ರತಿ ಮಗುವಿನ ಕೈಯಲ್ಲಿ ಪುಸ್ತಕ ಎಂಬ ಧ್ಯೇಯವಾಕ್ಯದಡಿ 2004ರಲ್ಲಿ ಹುಟ್ಟಿಕೊಂಡ ಲಾಭಾಪೇಕ್ಷೆರಹಿತ ಮಕ್ಕಳ ಪ್ರಕಾಶ ಸಂಸ್ಥೆ ಪ್ರಥಮ್‌ ಬುಕ್ಸ್. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಹಲವು ಭಾಷೆಗಳಲ್ಲಿ ಗುಣಮಟ್ಟದ ಪುಸ್ತಕಗಳನ್ನು ಕೈಗೆಟುಕುವ ಬೆಲೆಯಲ್ಲಿ ಪ್ರಕಟಿಸುವುದು ಸಂಸ್ಥೆಯ ಮುಖ್ಯ ಉದ್ದೇಶ. ಈವರೆಗೆ, ಪ್ರಥಮ್‌ ಬುಕ್ಸ್‌ ಏಳು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಭಾರತೀಯ 24 ಭಾಷೆಗಳಲ್ಲಿ ಪ್ರಕಟಿಸಿದೆ. ದೇಶದ ಹಲವು ಪ್ರಸಿದ್ಧ ಲೇಖಕರು ಮತ್ತು ಚಿತ್ರಕಾರರೊಂದಿಗೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಪ್ರಥಮ್‌ ಬುಕ್ಸ್‌ನದ್ದು. ಸಂಸ್ಥೆಯ ಪುಸ್ತಕಗಳು ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಸಹ ಪಡೆದಿವೆ.               

ಈ ಪುಸ್ತಕಗಳನ್ನು ಆರ್ಡರ್ ಮಾಡಲು ಇಲ್ಲಿ ಕ್ಲಿಕ್ಕಿಸಿ.

ಜುಲೈ 10ರಂದು ಈ ಪುಸ್ತಕಗಳು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿವೆ.

ಸ್ಥಳ: ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್

ಸಮಯ: ಸಂಜೆ 6:30ರಿಂದ 8 ಗಂಟೆ.

‍ಲೇಖಕರು avadhi

9 July, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading