ಪದ್ಮಲತಾ ಮೋಹನ್ ಅವರ ಹೊಸ ಕಾದಂಬರಿ ‘ಎಲ್ ಬಿ ಡಬ್ಲ್ಯೂ’
ಈ ಕೃತಿಯನ್ನು ‘ನಿರಂತರ ಪ್ರಕಾಶನ’ ಪ್ರಕಟಿಸಿದೆ.
ಈ ಕಾದಂಬರಿಯ ಲೇಖಕರ ಮಾತುಗಳು ಇಲ್ಲಿವೆ.
-ಪದ್ಮಲತಾ ಮೋಹನ್
ನಮ್ಮ ದೇಶದಲ್ಲಿ ಜನಪ್ರಿಯ ಕ್ರೀಡೆ ಕ್ರಿಕೆಟ್. ಈ ಆಟವನ್ನು ಅಬಾಲವೃದ್ಧರೆಲ್ಲರಾಗಿ ಬಹಳ ಮೆಚ್ಚುತ್ತಾರೆ. ನಿಸ್ಸಂದೇಹವಾಗಿ ಕ್ರಿಕೆಟ್ ಮಾತ್ರವಲ್ಲ ಕ್ರಿಕೆಟ್ ಆಟಗಾರರ ಬಗ್ಗೆ ಕೂಡ ನಮ್ಮಲ್ಲಿ ಸಾಕಷ್ಟೂ ಅಭಿಮಾನವಿದೆ. ಚೆನ್ನಾಗಿ ಆಡಿದಾಗ ಖುಷಿ ಪಡುವುದು ಸೋತಾಗ ಬೈಯುವುದು ಸಾಮಾನ್ಯ. ನಾವು ಕ್ರೀಡಾಂಗಣದಲ್ಲಿ ಅವರು ಆಡುವ ಆಟವನ್ನು ನೋಡಿ ಆನಂದಿಸುತ್ತೇವೆ. ಆದರೆ ಈ ಆಟಗಾರರಿಗೂ ಒಂದು ವೈಯುಕ್ತಿಕ ಬದುಕು ಇರುತ್ತದೆ. ಅವರು ಈ ಮಟ್ಟಿಗೆ ಬೆಳೆಯಲು ಏಳು ಬೀಳುಗಳ ದಾರಿ ಸವೆಸಿ ಬಂದಿರುತ್ತಾರೆ. ಇತ್ತೀಚಿಗೆ ನಮ್ಮಲ್ಲಿ ಮಹಿಳಾ ಕ್ರಿಕೆಟ್ ಕೂಡ ಜನಪ್ರಿಯವಾಗುತ್ತಿದೆ.
ಈ ಕಾದಂಬರಿ ‘ಎಲ್ ಬಿ ಡಬ್ಲೂ’ ಒಬ್ಬ ಮಹಿಳಾ ಕ್ರಿಕೆಟ್ ಆಟಗಾರ್ತಿಯ ಬಗ್ಗೆ ಬರೆದ ಕಾಲ್ಪನಿಕ ಕಥೆ. ಇದರಲ್ಲಿ ಕಥಾನಾಯಕಿ ನಿರ್ಜರಾ ಇಂಟರ್ ನ್ಯಾಷನಲ್ ಲೆವೆಲ್ ಕ್ರಿಕೆಟ್ ಪ್ಲೇಯರ್ ಆಗಬೇಕೆಂಬ ಧ್ಯೇಯ ಇಟ್ಟುಕೊಂಡವಳು. ಆ ನಿಟ್ಟಿನಲ್ಲಿ ಅದಕ್ಕೆ ಪೂರಕವಾದ ದಾರಿಯಲ್ಲಿ ಸಾಗುತ್ತಿರಬೇಕಾದರೆ ಅವಳಿಗೆ ಎದುರಾಗುವ ಅಡ್ಡಿ ಆತಂಕಗಳು ಏನು? ಅದನ್ನು ಅವಳು ಹೇಗೆ ಎದುರಿಸುತ್ತಾಳೆ? ಎಂಬುದರ ಮೇಲೆ ಕಥೆ ಹೆಣೆಯಲಾಗಿದೆ. ಒಂದರ್ಥದಲ್ಲಿ ಇದು ಅವಳ ಬದುಕಿನ ಮತ್ತು ಕೆರಿಯರ್‌ನ ಹೋರಾಟದ ಕಥೆ ಎನ್ನಬಹುದು. ಇಲ್ಲಿ ನಿರ್ಜರಾಳ ಪಾತ್ರದ ಸುತ್ತ ಸುತ್ತುವ, ವಿಪುಲ್ ಮಿಹಿರ್ ಮತ್ತು ಸುಧನ್ವ ಅವಳ ಜೀವನದಲ್ಲಿ ಹೇಗೆ ಬದಲಾವಣೆ ತರುತ್ತಾರೆ? ಎಂಬುವುದನ್ನು ನೋಡಬಹುದು. ಈ ಪುಸ್ತಕದಲ್ಲಿ ನೀವು ಕೇವಲ ಕ್ರಿಕೆಟ್ ಪಂದ್ಯಗಳಷ್ಟನ್ನೇ ಅಲ್ಲ ನಿರ್ಜರಾ ಎಂಬ ಹೆಣ್ಣು ಮಗಳ ಕನಸು, ಸೋಲಿನ ಕ್ಷಣಗಳು ಮತ್ತು ಗೆಲುವಿನ ಹೊಳಪನ್ನು ಕಾಣಬಹುದಾಗಿದೆ.
ಈ ಕಥೆ ಪ್ರತಿಯೊಬ್ಬ ಮಹಿಳೆಗೂ ಪ್ರೇರಣಿಯಾಗಬೇಕು. ನಿರ್ಜರಾಳ ಹೋರಾಟದ ಹೆಜ್ಜೆಗಳು ನಮ್ಮ ಸಮಾಜಕ್ಕೆ ಒಂದು ಸಂದೇಶ ನೀಡಬೇಕು ಮಹಿಳೆ ಮನಸ್ಸು ಮಾಡಿದರೆ ಏನನ್ನಾದರು ಸಾಧಿಸಬಲ್ಲಳು ಎನ್ನುವುದಕ್ಕೆ ಉದಾಹರಣೆಯಾಗಿ ಅವಳ ಪಾತ್ರ ನಿಲ್ಲಬೇಕು ಎಂಬ ಅಭಿಲಾಷೆ ನನ್ನದು.
ಕ್ರಿಕೆಟ್ ಎಂದರೆ ನನಗೂ ಇಷ್ಟ ಹಾಗಾಗಿ ಅದನ್ನೇ ನನ್ನ ಕಥೆಯಲ್ಲಿ ಬಳಸಿಕೊಂಡೆ. ಆದರೆ ಇದು ಬರೀ ಕ್ರಿಕೆಟ್‌ನಲ್ಲಷ್ಟೇ ಅಲ್ಲ, ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಅನುಭವಿಸಬಹುದಾದ ಅನ್ಯಾಯ ಮೋಸ ಮತ್ತು ಹೋರಾಟಗಳನ್ನು ಈ ಕಥೆ ಪ್ರತಿಬಿಂಬಿಸುತ್ತದೆ ಹಾಗಾಗಿ ಇದು ಎಲ್ಲರಿಗೂ ಸಲ್ಲುವ ಪ್ರೇರಣಾದಾಯಕ ಕಥೆಯಾಗಿದೆ.
ಓದುಗರಾಗಿ ನೀವು ನನ್ನ ಇತರ ಕಥೆಗಳನ್ನು ಓದಿ ತೋರಿಸಿದ ಪ್ರೋತ್ಸಾಹ ನನಗೆ ಈ ಕಾದಂಬರಿ ಬರೆಯುವ ಆತ್ಮವಿಶ್ವಾಸ ನೀಡಿದೆ. ಭಿನ್ನ ಕಥಾ ಹಂದರವನ್ನು ತರುವ ನನ್ನ ಈ ಹೊಸ ಪ್ರಯತ್ನ ನಿಮಗೆ ಇಷ್ಟವಾಗಬಹುದೆಂದು ಆಶಿಸಿದ್ದೇನೆ. ನಿಮ್ಮ ಓದು ಮತ್ತು ಪ್ರತಿಕ್ರಿಯೆಗಳು ನನ್ನ ಬರವಣಿಗೆಗೆ ಪ್ರೇರಣೆಯಾಗಿದೆ. ಈ ಕೃತಿಗೂ ನಿಮ್ಮ ವಿಶ್ವಾಸ ಹೀಗೇಯೇ ಮುಂದುವರಿಯಲಿ ಎಂಬ ಆಶಯದೊಂದಿಗೆ.






0 Comments