ಶಿವು ಕಾಳಯ್ಯ
ಒಮ್ಮೆ ಓದಿನೋಡಿ ತುಂಬಾ ಇಷ್ಟವಾಗುತ್ತದೆ!
ಜಯಪ್ರಕಾಶ್ ನಾರಾಯಣ್ ನಿರೂಪಣೆಯ ಖ್ಯಾತ ಛಾಯಾಗ್ರಾಹಕ ಕೆ.ಜಿ ಸೋಮಶೇಖರ್ರವರ “ನನ್ನ ಬದುಕು ನನ್ನ ಫೋಟೊಗ್ರಫಿ” ಪುಸ್ತಕವನ್ನು ಈಗ ತಾನೆ ಓದಿ ಮುಗಿಸಿದೆ. ಟಿ.ಎಸ್.ಸತ್ಯನ್ರವರ ಕಾಲಕ್ಕೆ ಕನ್ನಡಿ ಪುಸ್ತಕದ ನಂತರ ಅಂತದ್ದೇ ಒಂದು ಫೋಟೊಗ್ರಫಿ, ಅದರ ಪರಿಶ್ರಮ, ಅದರ ಬಗೆಗಿನ ಪ್ಯಾಷನ್, ಅದಕ್ಕಾಗಿ ತಿರಸ್ಕರಿಸಿದ ವಿವಿಧ ಆಸೆ ಆಕಾಂಕ್ಷೆಗಳು, ಅನಿವಾರ್ಯತೆ ಹೀಗೆ ಬದುಕಿನ ದಟ್ಟವಾದ ಅನುಭವವನ್ನು ಕಟ್ಟಿಕೊಡುವ ಪುಸ್ತಕವಿದು. ಎಲ್ಲೂ ಒಂದು ಕ್ಷಣವೂ ಬೋರ್ ಆಗದಂತೆ ಓದಿಸಿಕೊಂಡು ಹೋಗುವ ಈ ಪುಸ್ತಕ ಅವರ ಪಕ್ಕದಲ್ಲಿಯೇ ನಿಂತೂ ನಾವು ಅನುಭವಿಸಿದಂತೆ, ಅವರೆದುರಿಗೆ ನಿಂತು ಅವರ ಬದುಕಿನ ಅನುಭವಗಳನ್ನು ಕುತೂಹಲದಿಂದ ನೋಡುವಂತೆ ಮಾಡುತ್ತದೆ.

ತಮ್ಮ ಬಾಲ್ಯ, ಮನೆ, ಮನೆತನ, ಸ್ಕೂಲು, ಕಾಲೇಜು, ೧೯೭೦ರಿಂದ ಪ್ರಾರಂಭಿಸಿದ ಫೋಟೊಗ್ರಫಿ, ಪ್ರದರ್ಶನ ಇತ್ಯಾದಿ ತಮ್ಮದೇ ಬದುಕಿನ ಕತೆಯನ್ನು ಹೇಳುವಾಗ ಅತಿ ಪುಟ್ಟ ಪುಟ್ಟ, ಸೂಕ್ಷ್ಮವಿಚಾರಗಳನ್ನು ಹೇಳುವಾಗ ಅವರ ಆಘಾಧ ಜ್ಞಾಪಕಶಕ್ತಿ ಬಗ್ಗೆ ಆಶ್ಚರ್ಯ ಮೂಡಿಸಿಕೊಳ್ಳುತ್ತಾ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ. ಆಗಿನ ೧೨ ಪ್ರೇಮಿನ ನೆಗಟೀವ್ ಕಾಲದಲ್ಲಿಯೇ ಅತ್ಯುತ್ತಮ ನೆರಳು ಬೆಳಕಿನ ಹೊಂದಾಣಿಕೆಯಲ್ಲಿ, ಹಿಡಿತದಲ್ಲಿ ಮಹಾನ್ ಕಲಾವಿದರು, ಸಾಹಿತಿಗಳು, ವಿಜ್ಞಾನಿಗಳು ಇನ್ನೂ ಅನೇಕ ಸಾಧಕರನ್ನು ಕ್ಲಿಕ್ಕಿಸಿದ ಅವರ ಫೋರ್ಟ್ರೈಟ್ ಫೋಟೊಗ್ರಫಿಯನ್ನು ನೋಡುತ್ತಿದ್ದರೆ ನಿಜಕ್ಕೂ ಅದ್ಬುತವೆನಿಸುತ್ತದೆ. ಪ್ರತಿಯೊಬ್ಬ ಫೋಟೊಗ್ರಫಿ ಆಸಕ್ತನೂ ಕೂಡ ಅವರು ಆಗ ಕ್ಲಿಕ್ಕಿಸಿದ ಫೋಟೊಗಳನ್ನು ಅಭ್ಯಾಸಿಸಬೇಕೆನ್ನಿಸುತ್ತದೆ. ಈ ಪುಸ್ತಕ ಇಷ್ಟು ಚೆನ್ನಾಗಿ ಬರಲು ನಿರೂಪಣೆ ಮಾಡಿರುವ ಜಯಪ್ರಕಾಶ್ ನಾರಾಯಣ್ ಕೂಡ ಕಾರಣರಾಗಿದ್ದಾರೆ. ಇಡೀ ಪುಸ್ತಕದಲ್ಲಿ ನಮ್ಮ ಪಕ್ಕದಲ್ಲಿಯೇ ಕೆ.ಜಿ.ಸೋಮಶೇಖರ್ ಕುಳಿತು ತಮ್ಮ ಬದುಕು, ಅದರೊಳಗಿನ ಫೋಟೊಗ್ರಫಿ, ಅದರ ಅನುಭವವನ್ನು ವಿವರಿಸುತ್ತಿರುವಂತೆ ಅನಿಸುವ ನಮಗೆ ಇದು ಎಲ್ಲೂ ಜಯಪ್ರಕಾಶ್ ನಾರಾಯಣ್ರವರ ನಿರೂಪಣೆ ಅಂತ ಅನ್ನಿಸುವುದೇ ಇಲ್ಲ.
ನಿರೂಪಣೆಯೂ ಕತೆಗಾರನ ಅನುಭವವನ್ನು ಎಲ್ಲಿಯೂ ಮೀರದೆ ಧಾಟದೆ, ಕತೆಗಾರನ ಅನುಭವವನ್ನು ಎಲೆಮರೆಕಾಯಿಯಂತೆ ಕಟ್ಟಿಕೊಡುವುದೇ ನಿರೂಪಕ ಶಕ್ತಿ ಮತ್ತು ತಾಕತ್ತು. ಇಲ್ಲಿಯೂ ಕೂಡ ನಿರೂಪಕ ಕತೆಗಾರರಾದ ಕೆ.ಜಿ.ಸೋಮಶೇಖರ್ರವರ ಅನುಭವವನ್ನು ಯಾವುದೇ ಕ್ಷಣದಲ್ಲಿಯೂ ಮೀರಿ ನಿಲ್ಲುವುದಿಲ್ಲ ಮತ್ತು ಕಾಣಿಸಿಕೊಳ್ಳುವುದಿಲ್ಲವಾದ್ದರಿಂದ ಇದೊಂದು ಅತ್ಯುತ್ತಮ ನಿರೂಪಣೆಯ ಪುಸ್ತಕವೆನಿಸುತ್ತದೆ. ಅದಕ್ಕಾಗಿ ನಿರೂಪಕ ಜಯಪ್ರಕಾಶ್ ನಾರಾಯಣ್ರವರು ಅಭಿನಂದನೆಗೆ ಖಂಡಿತ ಅರ್ಹರು.
ಪ್ರತಿಯೊಬ್ಬ ಛಾಯಾಗ್ರಾಹಕನು ಒಮ್ಮೆ ಓದಬೇಕಾದ ಪುಸ್ತಕ, ಫೋಟೊಗ್ರಫಿ ಅಭ್ಯಾಸವನ್ನು, ಕಲೆಯನ್ನು, ತುಡಿತವನ್ನು, ಪ್ರೀತಿಯನ್ನು ಇಟ್ಟುಕೊಂಡಿರುವವರು ಮತ್ತೆ ಮತ್ತೆ ಓದಬೇಕೆನಿಸುವ ಪುಸ್ತಕ. ಹಾಗೆ ಇದು ಒಂದು ಅತ್ಯುತ್ತಮ ಸಂಗ್ರಹ ಯೋಗ್ಯವುಳ್ಳ ಪುಸ್ತಕವೂ ಹೌದು.






ಒಳ್ಳೆಯ ಬರಹ ಸರ್