ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೋಗಿ ಬರ್ಪೆವು ನಾರಿಯರೆ…ಗೌರಿ, ಅಮೀರಿಯರೆ….!

ಅಮೀರ್ ಬಾಯಿ ಕರ್ನಾಟಕಿ-ಒಂದು ವಿಮರ್ಶೆ

ಸುಧಾ ಚಿದಾನಂದಗೌಡ

ಪ್ರತಿ ಓದನ್ನು ಆರಂಭಿಸುವ ಹೊತ್ತಿಗೂ ಈ ಬರಹದಲ್ಲಿ ಸ್ತ್ರೀಪರ ಕಾಳಜಿ ಇದೆಯೋ, ಈ ಲೇಖಕ ಮಹಿಳೆಗೆ ಕೊಡಬೇಕಾದ ಸ್ಥಾನಮಾನ ಕೊಟ್ಟಿದ್ದಾರೆಯೋ ಸ್ತ್ರೀಪಾತ್ರಗಳ ಮೌಲ್ಯವೇನು ಇತ್ಯಾದಿ ಹುಡುಕಾಡುವುದನ್ನೆ ಸ್ತ್ರೀವಾದಿ ವಿಮರ್ಶೆಯು ಅಭ್ಯಾಸವನ್ನೇನಾದರೂ ಮಾಡಿಕೊಂಡಿದ್ದರೆ ಅಮಿರ್ಬಾಯಿ ಕರ್ನಾಟಕಿ ಕೃತಿಯೊಂದಿಗೆ ಮುಖಾಮುಖಿಯಾದಾಗ ಮುಗ್ಗರಿಸಿ ಬೀಳುವುದು ಅನಿವಾರ್ಯವಾಗುತ್ತದೆ. ಇಷ್ಟಕ್ಕೂ ಯಾವ ಪ್ರಜ್ಞಾವಂತ ಬರಹಗಾರನೂ/ಗಾರ್ತಿಯೂ ಮಹಿಳೆಯನ್ನು ಸಮಾಜ ಅಥವಾ ಕುಟುಂಬ ಎಂಬ ಗುಂಪಿನಿಂದ ಪ್ರತ್ಯೇಕವಾಗಿ ಹೊರಗಿಡುವ ಮೂರ್ಖತನ ಮಾಡಲಾರ.

ವಿನಾಯತಿಗಳು ಜೈವಿಕ ವ್ಯತ್ಯಾಸದಿಂದ ಕೊಡಲ್ಪಟ್ಟವೇ ಹೊರತು ಮಹಿಳೆಯೆಂದಿಗೂ ಸಮಷ್ಟಿಯ ಒಂದು ಅಂಗವಾಗಿಯೇ ಬರುತ್ತಾಳೆ. ಬರಬೇಕು ಕೂಡಾ. ಕಾರ್ಲಮಾಕ್ರ್ಸನಿಂದಾರಂಭಿಸಿ ಮನಷ್ಯತ್ವದ ಬುನಾದಿಯುಳ್ಳ ಯಾವ ವಿಚಾರವಂತ ಕೂಡಾ ತನ್ನ ಸಿದ್ಧಾಂತದಲ್ಲೋ ವಿಚಾರದಲ್ಲೋ ಪ್ರತ್ಯೇಕವಾಗಿ ಮಹಿಳೆಯ ಅಸ್ತಿತ್ವವಾಗಲೀ, ಅಸ್ಮಿತೆಯಾಗಲೀ ಚರ್ಚಿಸಿಲ್ಲ. ಅದರರ್ಥ ಸ್ಪಷ್ಟ. ಮಹಿಳೆ part of all ಆಗಿಯೇ ಬರುತ್ತಾಳೆ. ಹೀಗಿದ್ದಾಗ್ಯೂ ಆಕೆಯ ಮೇಲಿನ ಕಠಿಣ ನಿರ್ಬಂಧಗಳು, ಸುರಕ್ಷಿತ ಚೌಕಟ್ಟಿನ ಹೆಸರಿನ ಬಂಧನಗಳು, ವಿಪರೀತದ ಪಾವಿತ್ರ್ಯಸಂಬಂಧಿತ ನಿರೀಕ್ಷೆಗಳಿಗೆ ಅರ್ಥವೇನು ಹಾಗಾದರೆ? ಡಾ. ರಹಮತ್ ತರಿಕೆರೆಯವರು ಈ ಪ್ರಶ್ನೆಗಳ ಬೆನ್ನು ಹತ್ತಿಯೇ ಹೊರಟು ಐದು ವರ್ಷಗಳನ್ನು ವ್ಯಯಿಸಿದ್ದಾರೆ ಎನಿಸುತ್ತದೆ.


ಮತ್ತು ಈ ತಿರುಗಾಟ ಹಾಗೂ ಅಧ್ಯಯನ, ಮಾಹಿತಿಸಂಗ್ರಹದ ಫಲವಾಗಿ ಅಮೂಲ್ಯವಾದ ದಾಖಲೆಗಳೊಂದಿಗೆ ಅಮೀರ್ ಬಾಯಿಯನ್ನು ಓದುಗರೆದುರಿಗಿಟ್ಟಿದ್ದಾರೆ ಸಾಧಕಿಯರನ್ನು ಕುರಿತು ಬರೆದ ಕೃತಿಗಳು ಕನ್ನಡದಲ್ಲಿ ಇಲ್ಲವೆಂದಲ್ಲ. ಅಕ್ಕಿ ಸುಜಾತಾ ರಂಗಭೂಮಿಯ ಕಲಾವಿದೆಯರನ್ನು ಕುರಿತೇ ಪಿ.ಹೆಚ್.ಡಿ ಪ್ರಬಂಧ ಮಂಡಿಸಿದ್ದಾರೆ. ಚಂದ್ರಶೇಖರ್ ಆಲೂರ್ ಮಧುಬಾಲಾ ಮತ್ತು ಮೀನಾಕುಮಾರಿ ಎಂಬ ಪುಸ್ತಕ ರಚಿಸಿದ್ದಾರೆ. ಆದರೆ ಅದು ಅಧ್ಯಯನವಲ್ಲ. ಭಾವುಕ ಭಾಷೆಯ, ಕಲಾವಿದೆಯರ ಬದುಕಿನ ನೋವುಗಳ ದುಃಖಭರಿತ ಕಥಾನಕ. ಇನ್ನೂ ಹಲವಾರು ಚಿತ್ರನಟಿಯರ ಜೀವನಚಿತ್ರಗಳನ್ನು ವಿವಿಧ ಲೇಖಕರು ಬರೆದ ದಾಖಲೆಗಳು ಲಭ್ಯವಿವೆ.

ಆದರೆ ಅವುಗಳಾವುವು ಅಧ್ಯಯನದ ಶಿಸ್ತಿಗೆ ಒಳಪಟ್ಟ, ಸಾಂಸ್ಕೃತಿಕ ಮುಖಾಮುಖಿಗಳನ್ನು ದಾಖಲಿಸುವ ಚಾರಿತ್ರಿಕ ದಾಖಲೆಗಳ ನಿಖರತೆ ಒದಗಿಸುವಲ್ಲಿ ಪರಿಪೂರ್ಣವಲ್ಲ ಎಂದೆ ಹೇಳಬೇಕಾಗುತ್ತದೆ, ಬಹುಷಃ ಹಾಗೆ ದಾಖಲೆ ಒದಗಿಸುವುದು ಅ ಕೃತಿಗಳ ಉದ್ದೇಶ ಅಲ್ಲದೆಯೂ ಇರಬಹುದು. ಇನ್ನೂ ಹಿಂದಕ್ಕೆ ಹೋದರೆ ಅಕ್ಕಮಹಾದೇವಿ, ಸಂಚಿಹೊನ್ನಮ್ಮ..ಹೀಗೆ ಇವರ ಕುರಿತು ಅಧ್ಯಯನಗಳು ಧಂಡಿಯಾಗಿವೆ. ಹರಪನಹಳ್ಳಿ ಭೀಮವ್ವನ ಕುರಿತಾಗಿ ಕೂಡ ಪವನ್ ಎಂಬುವವರು ಪುಸ್ತಕವೊಂದನ್ನು ಬರೆದಿದ್ದಾರೆ. ಸರಸ್ವತಿಬಾಯಿ ರಾಜವಾಡೆಯವರ ಕುರಿತಾದ ಕೆಲಸವೊಂದನ್ನು ವೈದೇಹಿ ಮಾಡಿದ್ದಾರೆ. ಅದನ್ನು ಅಕ್ಷರ ಪ್ರಕಾಶನ-2008ರಲ್ಲಿ ಪ್ರಕಟಿಸಿದೆ. ಇದು ಆತ್ಮಕಥನದ ನಿರೂಪಣೆಯನ್ನು ಹೋಲುತ್ತದೆ. ಇವುಗಳಾವುವೂ ಸಂಶೋಧನಾತ್ಮಕವಾದ ಅಧ್ಯಯನದ ಪಟ್ಟಿಯಲ್ಲಿ ನಿಖರವಾಗಿ ಬರಲಾರವು.

ಕೆ.ವಿ. ಅಯ್ಯರ್ ಅವರ ಶಾಂತಲಾ, ದೌಲತ್ ನಂಥಾ ಕಾದಂಬರಿಗಳು ಮಹಿಳೆಯನ್ನೇ ಕೇಂದ್ರವಾಗಿಟ್ಟುಕೊಂದು ರಾಜಕೀಯವನ್ನು ಚರ್ಚಿಸಿದರೂ, ಅವುಗಳು ಸೃಜನಶೀಲ ಕೃತಿಗಳಾಗಿರುವುದರಿಂದ, ಕಲ್ಪನೆಯ ಮೂಲಕ ಎಷ್ಟೆಲ್ಲಾ ಹೇಳಿದರೂ ವಸ್ತುನಿಷ್ಠವಾಗಿ ಏನನ್ನೂ ಹೇಳಿದಂತೆ ಆಗಿರುವುದೇ ಇಲ್ಲ. ಅವುಗಳನ್ನು ಹೊರತುಪಡಿಸಿ ಪ್ರತಿಭಾವಂತ ಮಹಿಳೆಯರ ಕುರಿತ ಗಂಭೀರಅಧ್ಯಯನಗಳು ನಡೆದ ನೆನಪು ತಕ್ಷಣಕ್ಕೆ ಬರುವುದೇ ಇಲ್ಲ. ಅವುಗಳ ಕೊರತೆ ಕನ್ನಡದಲ್ಲಿ ಎದ್ದುಕಾಣುತ್ತದೆ. ಮರೆತುಹೋದ ಕಲಾವಿದೆಯರು, ಸಾಧಕಿಯರು ಹೇರಳವಾಗಿದ್ದಾರೆ.

ಪ್ರಾಕ್ಟಿಕಲ್ಲಾಗಿ ಅಧ್ಯಯನಪೂರ್ಣ ಕೃತಿಗಳು ಅಂಥವರ ಕುರಿತಾಗಿ ಬಂದಿರುವುದು ನನ್ನ ತಿಳುವಳಿಕೆಯ ಮಿತಿಯಲ್ಲಿ ತೀರ ಕಡಿಮೆ. (ಈ ಕುರಿತು ಹೆಚ್ಚಿನ ಮಾಹಿತಿ ಯಾರಿಗಾದರೂ ಇದ್ದಲ್ಲಿ ತಿಳಿಸಬೇಕೆಂದು ಮನವಿ)ಇವೆಲ್ಲ ಸೇರಿ ಕಲಾಸಾಧಕಿಯರ ಕುರಿತ ಸಂಶೋಧನಾತ್ಮಕ ರೂಪದ ಅಧ್ಯಯನದಲ್ಲಿ ಅಮೀರ್ ಬಾಯಿ ಕರ್ನಾಟಕಿ ಒಂದರ್ಥದಲ್ಲಿ ಪ್ರಥಮಕೃತಿಯಾಗಿಯೇ ಇರುವಂತೆ ಮತ್ತು ಇತರೆಲ್ಲ ಕೃತಿಗಳಿಗಿಂತ ಪ್ರತ್ಯೇಕವಾಗಿ ನಿಲ್ಲಬಲ್ಲಂಥ ಮಹತ್ವದ ಸ್ಥಾನದಲ್ಲಿ ಇದೆಯೆಂಬುದೇ ಸರಿಯೆಂದು ತೋರುತ್ತದೆ.

ಇದಕ್ಕೆ ಕಾರಣಗಳನ್ನು ಹೀಗೆ ಪಟ್ಟಿಮಾಡಬಹುದು- ಮೊದಲನೆಯದಾಗಿ, ಹಿಂದೂಯೇತರ ಪ್ರತಿಭಾವಂತೆಯರ ಬದುಕು ಹೇಗೆ ಧರ್ಮತೀತವಾಗಿ ಪ್ರಶಂಸೆಗೆ ಒಳಗಾಗಿತ್ತು ಎಂಬುದರ ದಾಖಲೆ ಒದಗಿಸುವುದು ಗ್ರಾಮಾಂತರ ಪ್ರದೇಶಗಳಿಂದ ಹೊರಹೋದ ಅವರ ದೃಡನಿರ್ಧಾರ ಮತ್ತು ಯಶಸ್ಸಿನ ಸತ್ಯಕಥೆ ಹೇಳುವುದು, ಅಮೀರ್ ಬಾಯಿಯನ್ನು ಕೇಂದ್ರವಾಗಿಟ್ಟುಕೊಂಡು ಆಕೆಯ ಕುಟುಂಬ, ಅಭಿಮಾನಿಗಳು, ಸಹಕಲಾವಿದರು, ಪ್ರೋತ್ಸಾಹಕರು ಹೀಗೆ ಸುತ್ತಲೂ ಇದ್ದ ಸರ್ವಧರ್ಮ ಸಮನ್ವಯದ ಸಾಮಾಜಿಕ ವಾತಾವರಣವೊಂದನ್ನು ದಾಖಲಿಸಿರುವುದು, ಅಮೂಲ್ಯವಾದ ಫೋಟೋ ಗ್ಯಾಲರಿ ಒದಗಿಸಿರುವುದು, ನೂರಾರು ಜನರ ನೆನಪಿನಲ್ಲಿ ಉಳಿದಿರುವ ಘಟನೆಗಳನ್ನು ತೆರೆದಿಟ್ಟಿರುವುದು, ಅದೆಲ್ಲಕ್ಕಿಂತ ಹೆಚ್ಚಾಗಿ ಎಲ್ಲಿಯೂ man made language ಪ್ರಜ್ಞಾಪೂರ್ವಕ ಬಳಸದಿರುವುದು, ಹೀಗೆ… ಹಾಗೆಂದು ಈ ಕೃತಿಗೆ ಮಿತಿಗಳು ಇಲ್ಲವೇ ಇಲ್ಲ ಎಂದಲ್ಲ. ರಹಮತ್ ತರಿಕೆರೆಯವರು ಅತ್ಯಂತ ಹುಷಾರಾಗಿ ಈ ಅಧ್ಯಯನವನ್ನು ಕೈಗೊಂಡಿದ್ದಾರೆ. ಅದಕ್ಕೆ ಕಾರಣ ಅವರೇ ಹೇಳಿಕೊಂಡಿರುವಂತೆ ಅವರಿಗೆ ಅಮೀರ್ ಬಾಯಿಯ ಕ್ಷೇತ್ರ (ರಂಗಭೂಮಿ, ಕಲೆ, ಸಿನಿಮಾ) ಹೊಸತಾಗಿರುವುದೇ.

ಅತೀ ಹುಷಾರುತನ ಎಲ್ಲೋ ಒಂದೆಡೆ ಇನ್ನಷ್ಟು ಸ್ವಾರಸ್ಯವಾಗಬಹುದಾಗಿದ್ದ ಓದನ್ನು ತುಂಡರಿಸಿದಂತೆಯೂ ಅನಿಸುತ್ತದೆ. ಕೃತಿಕಾರರ ನಾನಿದಕ್ಕೆ ಹೊಸಬಎಂಬ ವಿನಯಪೂರ್ವಕ ಭಯ ಓದುಗರನ್ನೂ ಆವರಿಸುವಂತೆ ಮಾಡಿಬಿಡುತ್ತದೆ. ಈ ಕೃತಿಯಲ್ಲಿ ಕಂಡುಬರುತ್ತಿರುವ ಮತ್ತೊಂದು ಲೋಪವೆಂದರೆ (ಲೋಪವೆಂದು ಕರೆಯಬಹುದೋ, ಬಾರದೋ ತಿಳಿಯದು)-ಈ ರೀತಿಯ ಸಾಧಕಿಯರ ಅಧ್ಯಯನಗಳು ಹಿಂದೆ ಕನ್ನಡದಲ್ಲಿ ಆಗಿದೆಯೇ ಎಂಬ ಮಾಹಿತಿಯನ್ನು ಕೊಟ್ಟಿಲ್ಲ. ಅದೊಂದನ್ನು ಕೊಟ್ಟಿದ್ದರೆ ಒಳಿತಿತ್ತು. ನನಗೆ ನಿಜಕ್ಕೂ ಕುತೂಹಲ ಹುಟ್ಟಿಸಿರುವುದು, ಗಮನ ಕೇಂದ್ರೀಕರಿಸಿದ್ದು ಅವರು ಸ್ತ್ರೀಪರವಾಗಿ ಯಾವ ನೆಲೆಗಟ್ಟಿನಲ್ಲಿ ನಿಂತು ನೋಡುತ್ತಿದ್ದಾರೆ. ಮತ್ತು ಎಷ್ಟರಮಟ್ಟಿಗೆ ಪುರುಷಪ್ರಜ್ಞೆಯನ್ನು ಮೆಟ್ಟಿನಿಂತಿದ್ದಾರೆ ಎಂಬುದರ ಕಡೆಗೇನೇ.

ಈ ರೀತಿಯ ವಿಶ್ಲೇಷಣೆ ಸೃಜನೇತರ ಕೃತಿಯೊಂದರ ಕುರಿತಾಗಿ ನಡೆಸುವುದು ಸರಿಯೊ ತಪ್ಪೋ ಜಿಜ್ಞಾಸೆ ಇದ್ದೇ ಇದೆ. ಆದರೆ ಮೊದಲ ಓದಿಗೆ ನಿಲುಕಿದಂತೆ ಯಾವ ಸೃಜನಶೀಲ ಕೃತಿಗೂ ಕಡಿಮೆಯಿಲ್ಲದೆ ಅಮೀರ್ ಬಾಯಿ ಸರಸರ ಓದಿಸಿಕೊಂಡು ಹೋಗಿಬಿಟ್ಟಿತು. ಐದುವರ್ಷಗಳ ಕಾಲದ ತಿರುಗಾಟದಲ್ಲಿ ಸಂಗ್ರಹಿಸಿದ ಮಾಹಿತಿಗಳು, ಅಧ್ಯಯನದ ಮೆಥಡಾಲಜಿ ಬಲ್ಲ ಪಾರಂಗತೆ ಮತ್ತು ಸಂಸ್ಕೃತಿ ಕಾಳಜಿಗಳು ಒಟ್ಟಾಗಿ ಸೃಷ್ಟಿಯಾಗಿರುವ ಅಮೀರ್ ಬಾಯಿ ಕರ್ನಾಟಕಿ ಡಾ. ರಹಮತ್ ತರಿಕೆರೆಯವರಿಗೆ ಮತ್ತಷ್ಟು ಅವಾರ್ಡ್ ಗಳನ್ನು  ತಂದುಕೊಡುತ್ತದೊ ಎನ್ನುವುದು ಭೌತಿಕ ಯಶಸ್ಸನ್ನು ಮಾತ್ರ ಸೂಚಿಸಬಲ್ಲದು. ಆದರೆ ಪ್ರಶಸ್ತಿವಿಜೇತ ಕೃತಿಗಳು ಜನಮಾನಸಕ್ಕೆ ಎಷ್ಟು ಹತ್ತಿರವಾಗಿ, ಎಷ್ಟು ಕಾಳಜಿಯನ್ನು ಮಾಡಬಲ್ಲವು, ಮಾಡಿವೆ ಎಂದು ಚಿಂತಿಸುವಾಗಲೂ ತರೀಕೆರೆಯವರು ಪ್ರಗತಿಪರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿಯೇ ನಿಲ್ಲುತ್ತಾರೆ.

ಯಜಮಾನಸಂಸ್ಕೃತಿಗೆ ಸಮಾನಾಂತರವಾದ ಪ್ರತಿಸಂಸ್ಕೃತಿಯನ್ನು ವ್ಯಾಖ್ಯಾನಿಸಿ, ಜನಪದರ ಭಾವನೆಗಳಿಗೆ ಹೊಸಭಾಷ್ಯೆಯನ್ನು, ಕಸುವನ್ನು ಈಗಾಗಲೇ ಡಾ ರಹಮತ್ ತರಿಕೆರೆ ನೀಡಿಯಾಗಿದೆ. ಹಾಗಾಗಿ ಕತ್ತಿಯಂಚಿನದಾರಿ, ಪ್ರತಿಸಂಸ್ಕೃತಿ ಕೃತಿಗಳನ್ನು ತಲೆಯಲ್ಲಿಟ್ಟುಕೊಂಡೇ ಹೊಸಪುಸ್ತಕ ಅಮೀರ್ ಬಾಯಿ ಕರ್ನಾಟಕಿಯನ್ನು ಓದಲನುವಾದಾಗ ಅವರ ಬರವಣಿಗೆ ಕುರಿತಂತೆ ಕೆಲವು ನಿರೀಕ್ಷೆಗಳು ಅಯಾಚಿತವಾಗಿ ಹುಟ್ಟಿಕೊಂಡು ಬಿಟ್ಟಿರುತ್ತವೆ. ಸುಂದರ ಮುಖಪುಟ, ಹೈ ಕ್ವಾಲಿಟಿಗಳು ಕೂಡ ಬಾಹ್ಯರೂಪಗಳು ಮಾತ್ರ. ನಿಜಕ್ಕೂ ಕೃತಿಯೊಂದರ ಆತ್ಮ ಇರುವುದು ಕೊನೆಗೂ ಅದರ ಒಳಹೂರಣದಲ್ಲಿಯೇ ತಾನೇ..? ಸತ್ವಶಾಲಿ ಹೂರಣವನ್ನು ಒಳಗೊಂಡ ಓದನ್ನು ಈಗಾಗಲೇ ಕೊಟ್ಟಿರುವ ಲೇಖಕರಿಂದ ಪುನಃ ಅದನ್ನೇ ನಿರೀಕ್ಷಿಸುವ ಹಕ್ಕು ಓದುಗರಿಗೆ ಇರುತ್ತದೋ ಇಲ್ಲವೋ, ಅಂಥ ನಿರೀಕ್ಷೆ ಸಾಧು ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸುವುದು ಹಿರಿಯರಿಗೆ, ವಿದ್ವಾಂಸರಿಗೆ ಬಿಟ್ಟದ್ದು. ಆದರೆ ನಿರೀಕ್ಷೆ ಇರುತ್ತದೆ ಎಂಬುದಂತು ಸತ್ಯ.

ಮತ್ತು ಆ ನಿರೀಕ್ಷೆಯನ್ನು ಈ ಕೃತಿಕಾರರು ಹುಸಿಹೋಗಗೊಟ್ಟಿಲ್ಲ. ಹನ್ನೆರಡು ಅಧ್ಯಾಯಗಳಲ್ಲಿ ಹರಡಿಕೊಂಡಿರುವ ಈ ಅಧ್ಯಯನವು ಅದರ ಬೆನ್ನುಡಿಯಲ್ಲಿ ಹೇಳಿಕೊಂಡಿರುವಂತೆ ಒಂದು ಕಾಲಘಟ್ಟದ ಸಾಂಸ್ಕೃತಿಕ ಅಧ್ಯಯನ. ವ್ಯಕ್ತಿಯನ್ನು ಸಮಷ್ಟಿಯಿಂದ ಬೇರೆಯಾಗಿ ನೋಡುವುದು, ಅದು ಹೆಣ್ಣಾಗಲೀ, ಗಂಡಾಗಲೀ ಸಾಧ್ಯವಿಲ್ಲದ, ಸಾಧುವಲ್ಲದ ಸಂಗತಿ. ಇದನ್ನು ಚೆನ್ನಾಗಿಯೇ ಬಲ್ಲ, ವಿಶ್ವವಿದ್ಯಾಲಯದ ಅಧ್ಯಾಪನವೃತ್ತಿಯಲ್ಲಿರುವ ಕನ್ನಡ ಗುರು ಡಾ. ರಹಮತ್ ತರೀಕೆರೆಯವರು ಅಧ್ಯಯನದ ಮೆಥಡಾಲಜಿಯಲ್ಲಿ ಲೋಪದೋಷ ಮಾಡಿರಲಂತು ಸಾಧ್ಯವಿಲ್ಲ. ಆ ರೀತಿಯ ಹುಡುಕಾಟದ ದೃಷ್ಟಿಯನ್ನಿಟ್ಟುಕೊಂಡು ನಾನಿದನ್ನು ಓದಲೂ ಇಲ್ಲ. ಹಿಂದೆಯೇ ಹೇಳಿರುವಂತೆ ಕೃತಿಕಾರರು ಮಹಿಳೆಯನ್ನು ನೋಡುವ ದೃಷ್ಟಿಯ ಕುರಿತಾದ ಕುತೂಹಲವನ್ನಿಟ್ಟುಕೊಂಡು ಮರುಓದುವಾಗ ಹಲವು ಸೂಕ್ಷ್ಮಗಳನ್ನು ಗಮನಿಸಲು ಸಾಧ್ಯವಾಯ್ತೆಂದು ಹೇಳಬಹುದು..

ಉದಾಹರಣೆಗೆ, ಸ್ತ್ರೀಪರ ಕಾಳಜಿಯ ಕೆಲ ಲೇಖಕರು ಹಾಗೆ ಮಾಡುವುದು ತಮ್ಮ ಉದಾರವಾದವೆಂದೋ, ಅದರಿಂದ ಮಹಿಳೆಯರು ತಮಗೆ ಜೀವನಪೂರ್ತಿ ಋಣಿಗಳಾಗಿರಬೇಕೆಂದೂ ಬಯಸುವಂಥ ಒಂದು ಹೊಳಹು ಅವರ ಬರವಣಿಗೆಗಳಲ್ಲಿ ಕಂಡುಬರುವುಂಟು. ಮತ್ತೆ ಕೆಲವರು ಸಾಂಪ್ರದಾಯಿಕ ರೂಪಕಗಳನ್ನೇ ಹೆಣ್ಣೆಂದು ಬಿಂಬಿಸಿ, ನೀನು ದೇವಿ, ನೀನು ದುರ್ಗೆ ಎಂದೆಲ್ಲ ನಂಬಿಸಿ, ತನ್ಮೂಲಕ ಇದ್ದಬದ್ದ ಒಂಚೂರು ಸ್ವಾತಂತ್ರ್ಯವನ್ನೂ ಕಿತ್ತುಕೊಂಡೇ ಬಿಟ್ಟಿದ್ದಾರೆ. ಮತ್ತೆ ಕೆಲವರು ಮನುವಿನ ಉತ್ತರಾಧಿಕಾರಿಗಳು, ಹೆಣ್ಣಿನ ಕರ್ತವ್ಯಗಳ ಉದ್ದ ಪಟ್ಟಿಕೊಟ್ಟು ಆಕೆಯ ಹಕ್ಕುಗಳನ್ನು ಸಾರಾಸಗಟಾಗಿ ನಿರಾಕರಿಸುವರು, ಕಲೆ ಸಾಹಿತ್ಯಗಳು ಗೌರವಬಾಹಿರವೆಂದೇ ತಾವು ನಂಬಿ, ಇತರರಿಗೂ ಅದನ್ನೇ ನಂಬುವಂತೆ ಅಜ್ಞಾಪಿಸುವವರು.

ಅಮೀರ್ ಬಾಯಿಯ ಬದುಕಿನಲ್ಲೂ ಇವರೆಲ್ಲರೂ ಇದ್ದರು. ಆಕೆ ಯಾರಿಗೂ ಉತ್ತರ ಕೊಡಲಿಲ್ಲ ಬದಲಿಗೆ ತನ್ನ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾ ತನ್ನೊಳಗಿನ ಕಲೆಯ ದಾಹಕ್ಕೆ ಉತ್ತರ ಕೊಟ್ಟುಕೊಳ್ಳುವುದನ್ನೆ ಮುಖ್ಯವಾಗಿಸಿಕೊಂಡಳು. ಸತತ ಪರಿಶ್ರಮ ಕೀರ್ತಿ, ಐಶ್ವರ್ಯವನ್ನು ಹೊತ್ತುತಂದಾಗಲು ತನ್ನೊಳಗಿನ ತುಡಿತದಂತೆಯೇ ನಡೆದವಳು. ಇದನ್ನೆಲ್ಲ ಅಕ್ಷರಗಳಲ್ಲಿ ಹಿಡಿದಿಡುವುದು ಹೇಗೆ? ಈ ಪ್ರಶ್ನೆ ಡಾ. ರಹಮತ್ ತರಿಕೆರೆಯವರನ್ನು ಕಾಡಿದಂತೆ ತೋರುವುದಿಲ್ಲ. ಅಷ್ಟು ಲೀಲಾಜಾಲವಾಗಿ ಅವರು ಬರೆಯುತ್ತಾ ಹೋಗಿದ್ದಾರೆ. ಮಾಹಿತಿಗಳ ಭರಪೂರದೊಂದಿಗೆ ಕಲಾವಿದರ ಬದುಕಿನ ದ್ವಂದ್ವಗಳು, ನಷ್ಟಗಳು, ಒಂದನ್ನು ಪಡೆಯಲು ಇನ್ನೊಂದನ್ನು ತೊರೆಯಲೇಬೇಕಾದ ಅನಿವಾರ್ಯತೆ, ಕಲೆ ಕೊಡುವ ಬಿಡುಗಡೆಯ ಭಾವ, ಅದನ್ನು ಸಹಕಲಾವಿದರೊಂದಿಗೆ ಹಂಚಿಕೊಂಡ ಸೌಹಾರ್ದಗುಣ, ಸಾಧನೆಯೊಂದಿಗೇ ಅಭಿನಯದೊಂದಿಗಿನ ತಾದಾತ್ಮ್ಯತೆ….

ಯಾವುದು ಮೊದಲು,,ಯಾವುದು ಅನಂತರ..?ಎಂದು ಕೂಡ ಯೋಚಿಸದೆ ಬದುಕುಕರೆದುಕೊಂಡಲ್ಲಿಗೆ ಹೋದರೂ ತನ್ನದೆ ದಾರಿ ಸೃಷ್ಟಿಸಿಕೊಂಡ ಅಪರೂಪದ ವ್ಯಕ್ತಿಗಳಿವರು. ಅವರ ಸುತ್ತಲಿನವರು ಹಾಗೆಯೇ… ಮೊಟ್ಟಮೊದಲ ಅಧ್ಯಾಯವೇ ಪ್ರಬುದ್ಧವೂ, ಆಪ್ಯಾಯವೂ ಆಗಿರುವಂತದ್ದು. ಅದು ಬಾಯಿ ಮತ್ತು ಜಾನ್ ಹೆಸರುಗಳ ಮೂಲವನ್ನು ಹುಡುಕಿಹೊರಟು ಸಂಸ್ಕೃತಿಕ ಲೋಕವನ್ನೆಲ್ಲಾ ಸುತ್ತು ಹಾಕುವಂತಿದೆ. ಮತ್ತೊಂದು ತುಂಬ ಮೆಚ್ಚುಗೆಯಾಗುವ ಅಧ್ಯಾಯ ಅನುಬಂಧ ಗಳು. ಇದನ್ನು ಅಧ್ಯಾಯ ಎನ್ನಬಹುದೇ..? ಅಕಾಡೆಮಿಕ್ ಜ್ಞಾನಶಿಸ್ತಿನ ರೀತಿನೀತಿಗಳೇನೇ ಇರಲಿ..ಅನುಬಂಧವೇ ಒಂದು ಮಾಹಿತಿಗಳ ಭರ್ತಿ ಕಣಜದಂತೆಯೇ ನನಗೆ ಕಾಣುತ್ತಿದೆ.

ಆದರೆ ಒಂದನ್ನು ಇಲ್ಲಿ ಗಮನಿಸಬೇಕು. ಹೆಣ್ಣುಮಗಳೊಬ್ಬಳ ಪ್ರೀತಿಯಲ್ಲಿ ಬಿದ್ದು ಸಾಕಷ್ಟು ಕಳೆದುಕೊಂಡ ಗಂಡಸರು ಇರುವಂತೆಯೇ ಪುರುಷನೊಬ್ನನ್ನೂ ಗಾಢವಾಗಿ ಪ್ರೀತಿಸಿ, ಮನೆತೊರೆದು, ಚೆನ್ನಾಗಿರಬಹುದಾದ ಬದುಕನ್ನು ನಾಶಮಾಡಿಕೊಂಡ ಮಹಿಳೆಯರೂ, better life ಎನ್ನಬಹುದಾದ ಅವಕಾಶವನ್ನು ಕಳೆದುಕೊಂಡ ಮಹಿಳೆಯರು ಇದ್ದಾರೆ. ಅಂಥವರಲ್ಲಿ ಗೋಹರ್ ಒಬ್ಬಳು. ಆದರೆ, ಪ್ರತಿಬಾರಿಯು ಮಹಿಳೆಯೆ ಅಪಪ್ರಚಾರಕ್ಕೆ, ಅಪಖ್ಯಾತಿಗೆ ಮತ್ತು ತಿರಸ್ಕಾರಕ್ಕೆ ಏಕೆ ಒಳಗಾಗುತ್ತಾಳೆ ಎಂಬುದು ಅರ್ಥವಾಗದ ಸಂಗತಿ. ವೇಶ್ಯೆಯಾಗಿದ್ದರೂ ಅಷ್ಟೇ, ವಿವಾಹಿತೆಯಾಗಿದ್ದರೂ ಅಷ್ಟೇ, ತನ್ನ ಮೂಗಿನ ನೇರಕ್ಕಿಲ್ಲದವರನ್ನು ಜಗತ್ತು ಅಸಡ್ಡೆಯಾಗಿ ಕಾಣುವುದರ ಮೂಲಕ ತುಳಿದುಬಿಡಲು ಸದಾ ಸಿದ್ಧವೇ ಆಗಿರುವ ತಣ್ಣನೆಯ ಕ್ರೌರ್ಯದ ಗುರಿ ಮಹಿಳೆಯೇ ಆಗಿರ್ತಾಳೆಂಬುದು ವಾಸ್ತವ. ಅವ್ಳು ಹಾಳ್ಮಾಡ್ಬಿಟ್ಳು ನಂ ಹುಡುಗನ್ನ.. ಎಂಬರ್ಥದ ಮಾತನ್ನು ಆಡಲು ತುಂಬ ಖುಷಿಪಡುತ್ತದೆ ಸಮಾಜ ಎಂಬಂತೆ ತೋರುತ್ತದೆ.

ಸಮಯ ಬಂದಾಗ ಮುಲಾಜಿಲ್ಲದೆ ಅವಳು ಬೇರೆ, ಅವನು ಬೇರೆ, ನಮ್ಮ ಅಪ್ಫಣೆಯಿಲ್ಲದೆ ಅದು ಹೇಗೆ ಒಂದಾಗಿ ಬದುಕಬಲ್ಲರು ಎಂದು ತನ್ನ ಶೌರ್ಯವನ್ನು ತೊರಿಸಿಯೇಬಿಡುವ ಸಮುದಾಯ ಅನೇಕ ಸ್ತ್ರೀಯರನ್ನು ಒಳಗೊಳಗೇ ಹೊಸಕಿ ಹಾಕಿದೆ. ವೈಯಕ್ತಿಕ ಆಯ್ಕೆ ಮತ್ತು ಸಾಮಾಜಿಕ ಆಯ್ಕೆಗಳು ಯಾಕಾಗಿ ವಿರುದ್ಧದಿಕ್ಕಿನಲ್ಲಿ ಚಲಿಸುತ್ತವೆಂದು ಊಹಿಸುವುದು ಕಷ್ಟ. ಆದರೆ ಬಾದಶಾ ಮಾಸ್ತರರ ಬಾಯಿಯಿಂದ ಸಹಜವಾಗಿ ಎಂಬಂತೆ ಹೊರಬರುವ ನಮದೊಂದು ನಾಟಕ ಕಂಪನಿ ಇತ್ತಪ್ಪ. ನಡೀಲಿಲ್ಲ.

ಗೌರಿ, ಅಮೀರಿ ನನ್ನ ಸೊಸ್ತೇರಪ್ಪ…. ಎಂದು ಹೇಳಿದ್ದನ್ನು ಏಣಿಗಿ ಬಾಳಪ್ಪ ಸ್ಮರಿಸಿರುವುದನ್ನು ದಾಖಲಿಸಿರುವ ಡಾ.ರಹಮತ್ ತರೀಕೆರೆಯವರು ಇಲ್ಲಿ ಗೌರಿ ಅಮೀರಿಯರೆಂದರೆ ಗೋಹರ್ ಬಾಯಿ ಮತ್ತು ಅಮೀರ್ ಬಾಯಿ ಎಂದು ಗುರುತಿಸುತ್ತಾರೆ.(ಪುಟ ಸಂ. 25) ಮತ್ತು ಹೀಗೆ ಈ ಹೆಸರುಗಳಿಂದಲೆ ಇವರಿಬ್ಬರು ಮುಸ್ಲಿಂ ಮಹಿಳೆಯರು ಎಲ್ಲ ಧರ್ಮ, ಜಾತಿ, ಭಾಷೆಗಳ ಗಡಿದಾಟಿ ಆಪ್ತರಾಗಿಬಿಡುತ್ತಾರೆ. ಹೆಸರಲ್ಲೇನಿದೆ ಎಂದು ಯಾವಾಗಲೂ ಹೇಳುವಂತಿಲ್ಲ. ಕೆಲಬಾರಿ ಹೆಸರೇ ಎಲ್ಲವೂ ಆಗಿಬಿಡುತ್ತದೆ..ಅದಕ್ಕೆ ಅಮೀರಿ, ಗೋಹರಿಯರು ಗೌರಿ, ಈಶ್ವರಿ, ರಾಜೇಶ್ವರಿಯರ ಪಟ್ಟಿಯಲ್ಲಿ ಪ್ರತ್ಯಕ್ಷರಾಗಿ ಆತ್ಮೀಯರಾಗಿಬಿಡುವುದೆ ಸಾಕ್ಷಿ.

ಅವರು ಮಾಡಿದ ಹಿಂದೂ ಪೌರಾಣಿಕ ಪಾತ್ರಗಳನ್ನು ಅವಿಸ್ಮರಣೀಯಗೊಳಿಸಿರುವುದು ಇಂಥ ಧರ್ಮಸಹಿಷ್ಣುತೆಯೆ. ಇದೆಲ್ಲದರ ತರವಾಯವೂ ಬಾಲಗಂಧರ್ವರ ಸನ್ಮಾನದ ಸಂದರ್ಭದಲ್ಲಿ ಸಮಾಜ ತನ್ನ ಸಣ್ಣತನ, ಕ್ಷುದ್ರತೆ, ದುಷ್ಟತನಗಳನ್ನು ತೋರಿಸಿಯೇಬಿಟ್ಟಿತು-ಗೌರಿಯನ್ನು ಆಹ್ವಾನಿಸದೆ, ಸಹಧರ್ಮಿಣಿಗೆ ಕೊಡಬೇಕಾಗಿದ್ದ ಗೌರವ ಕೊಡದೆ, ಗಂಧರ್ವರಿಂದ ದೂರ ಇಡುವ ಮೂಲಕ..! ಇತಿಹಾಸದಲ್ಲಿ ಅಜ್ಞಾತವಾಗಿಹೋಗಿಬಿಡಬಹುದಾಗಿದ್ದ ಈವೊಂದು ದುರಂತವನ್ನು ದಾಖಲಿಸಿ ರಹಮತ್ ಸರ್ ಮಹಿಳಾಲೋಕಕ್ಕೆ ಮಹದುಪಕಾರ ಮಾಡಿದ್ದಾರೆ. ವಾಸ್ತವದತ್ತ ಗಮನ ಸೆಳೆದಿದ್ದಾರೆ. ಗೋಹರಳ ಜೀವನ ವೃತ್ತಾಂತವಿರುವ ಅಕ್ಕ ಅಮೀರ್ಬಾಯಿ ಕರ್ನಾಟಕಿ (ಪುಟ ಸಂ.160ರಿಂದ 180) ಇಡೀ ಪುಸ್ತಕದ ಎದೆ ತಟ್ಟುವ ಅಧ್ಯಾಯ. ರಂಗಭೂಮಿಗೆ ಸಂಗೀತದ ನಂಟು ಒಂದು ಚಾರಿತ್ರಿಕ ಪ್ರಾಮುಖ್ಯತೆಯ ಅಧ್ಯಾಯವಾದರೆ ಕಲಾಲೋಕದ ಧರ್ಮಾತೀತತೆ ಸಾಮಾಜಿಕ ಕೊಡುಕೊಳ್ಳುವಿಕೆಯ ವಸ್ತುನಿಷ್ಠ ದಾಖಲೆಯಾಗಿ ಒದಗಿಬರುವ ಅಧ್ಯಾಯಗಳು.

ನಂತರ ಮುಂಬೈ ಕರ್ನಾಟಕದ ಅನೇಕ ಮುಖಗಳನ್ನು ಬಿಚ್ಚಿಡುವ, ಹಂತಹಂತವಾಗಿ ಸಿನಿಮಾ, ರಂಗಭೂಮಿಗಳನ್ನು ಅನುಸಂಧಾನಗೊಳಿಸಿರುವ ಅಧ್ಯಾಯದ ನಂತರ ತೆರೆದುಕೊಳ್ಳುವುದೇ ಆಮೀರ್ ಬಾಯಿಯ ಯಶೋಗಾಥೆಯ ಕಥನ. ರಂಗದಿಂದ ಸಿನಿಮಾಗೆ, ಚಿತ್ರನಟಿಯಾಗಿ, ಗಾಯಕಿಯಾಗಿ, ಕನ್ನಡ ಹಾಡು ಮತ್ತು ಗಾಂಧಿಚಳುವಳಿ -ಹೀಗೆ ಅಮೀರಿಯ ಜೀವನಗಾಥೆ ಓದುಗರೆದುರಿಗೆ ಅನಾವರಣಗೊಳ್ಳುತ್ತದೆ ಎಂದು ಹೇಳಿದರೆ ಏನನ್ನೂ ಹೇಳಿದಂತಾಗುವುದಿಲ್ಲ. ಬರವಣಿಗೆಯ, ಅಧ್ಯಯನದ ರಸಾಸ್ವಾದನೆಗಾಗಿ ಪುಸ್ತಕ ಓದುವುದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ.

ಹಲವು ಮರುಓದುಗಳನ್ನು ಅನಿವಾರ್ಯಗೊಳಿಸುವ ಅಮೀರ್ ಬಾಯಿ ಕರ್ನಾಟಕಿ ಕೃತಿಯು ಪ್ರತಿಓದಿನಲ್ಲೂ ಒಂದೊಂದು ಅಂಶದತ್ತ ಗಮನಸೆಳೆದು ವಿಸ್ಮಿತಗೊಳಿಸುತ್ತಾ.. ಪೋಗಿ ಬರ್ಪೆವು ನಾರಿಯರೆ..ಮತ್ತೆ ಸಿಗೋಣ.. ಎಂದುಕೊಳ್ಳುತ್ತಾ ಮತ್ತಮತ್ತೆ ಈ ಸಂಸ್ಕೃತಿಕ ಕಥನವನ್ನು ಕೈಗೆತ್ತಿಗೊಳ್ಳುವಂತೆ ಮಾಡುತ್ತದೆ. ಎಲ್ಲರೂ ಓದಬೇಕಾದ ಅಪರೂಪದ ಅಧ್ಯಯನಕೃತಿ ಇದು.

‍ಲೇಖಕರು avadhi

19 March, 2013

8 Comments

  1. prathibha nandakumar

    very good – prathibha nandakumar

    • ಸುಧಾ ಚಿದಾನಂದಗೌಡ

      thanq pratibha
      -sudha chidanandGowd

  2. Jayalaxmi Patil

    ಅಮೀರ‍್ಬಾಯಿ ಕರ್ನಾಟಕಿ ಪುಸ್ತಕವನ್ನು ಮೊನ್ನೆಯಷ್ಟೇ ತಂದಿದ್ದೇನೆ. ನನ್ನ ಪಾಲಿಗೆ ನಿಮ್ಮ ಈ ಬರಹ ಪೂರ್ವಪೀಠಿಕೆಯಂತೆಯಂತಿದೆ ಸುಧಾ. ಸಾಮಾನ್ಯವಾಗಿ ಪುಸ್ತಕದ ಮುನ್ನುಡಿಯನ್ನು, ಸಮೀಕ್ಷೆ, ವಿಮರ್ಶೆಗಳನ್ನು ಆಯಾ ಪುಸ್ತಕದ ಓದು ಮುಗಿದ ನಂತರ ಓದುವ ನಾನು ಇಂದು ಅಮೀರ‍್ಬಾಯಿಯೆಡೆಗಿರುವ ನನ್ನ ಒಲವಿನಿಂದಾಗಿ ನಿಮ್ಮ ಲೇಖನ ಓದದೇ ಇರಲಾಗಲಿಲ್ಲ! ತುಂಬಾ ಸಂಯಮದ ಬರವಣಿಗೆ ನಿಮ್ಮದು. ಇಷ್ಟವಾಯಿತು.

    • ಸುಧಾ ಚಿದಾನಂದಗೌಡ

      thanq jp

  3. Swarna

    ಪುಸ್ತಕವನ್ನು ಓದಬೇಕು , ಓದುವಿಕೆಯ ಹಲ ಆಯಾಮಗಳ ಪರಿಚಯ ಮಾಡಿಕೊಟ್ಟಿರಿ. ಇಷ್ಟವಾಯ್ತು

  4. laxminarasimha

    ಗೌರಿ, ಅಮೀರಿ ನನ್ನ ಸೊಸ್ತೇರಪ್ಪ…. ಎಂದು ಹೇಳಿದ್ದನ್ನು ಏಣಿಗಿ ಬಾಳಪ್ಪ ಸ್ಮರಿಸಿರುವುದನ್ನು ದಾಖಲಿಸಿರುವ ಡಾ.ರಹಮತ್ ತರೀಕೆರೆಯವರು ಇಲ್ಲಿ ಗೌರಿ ಅಮೀರಿಯರೆಂದರೆ ಗೋಹರ್ ಬಾಯಿ ಮತ್ತು ಅಮೀರ್ ಬಾಯಿ -ಇದು ನಿಜವಾದ, ಸಹಜವಾದ ಪ್ರೀತಿ. ಇಂತಹ ವಾತವರಣ ಕಳೆದುಕೊಂಡು ಕೂತಿರುವ, ಇಂತಹ ಪ್ರೀತಿಯನ್ನು ವ್ಯಕ್ತಮಾಡಲೂ ಲೆಕ್ಕಾಚಾರ ಹಾಕುವ, ಪರಿಸ್ಥಿತಿಯಲ್ಲಿ ಬದುಕುತ್ತಿರುವ ನಾವುಗಳು ಆ ಮಟ್ಟಿಗೆ ದುರದೃಷ್ಟರೆಂದೇ ಹೇಳಬೇಕು. ತುಂಬಾ ಒಳ್ಳೆಯ ಬರಹಕ್ಕಾಗಿ ಸುಧಾ ಚಿದಾನಂದಗೌಡ ಅವರಿಗೆ ಧನ್ಯವಾದ

  5. rekha anand

    wonderful

  6. BHAGYALAKSHMI B V

    pustakada parichaya chennagi bandide…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading