ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೇಪರ್ ಹುಲಿಗಳನ್ನು ಅಲುಗಾಡಿಸಿ ಹೆದರಿಸಬೇಡಿ ಪ್ಲೀಜ್!

COUNTER VIEW

neeta s rao

ನೀತಾ ಎಸ್ ರಾವ್

ಪೇಪರ್ ಹುಲಿಗಳನ್ನು ಅಲುಗಾಡಿಸಿ ಹೆದರಿಸಬೇಡಿ ಪ್ಲೀಜ್!

ಇವತ್ತು ನಮಗೆ ಬೇಕಿರಲಿ, ಬೇಡವಿರಲಿ ಕೆಲವು ವಿಷಯಗಳು ಕಿವಿಗೆ, ಕಣ್ಣಿಗೆ ಬಿದ್ದೇ ಬೀಳುತ್ತವೆ. ಅದರಲ್ಲಿ ಅತ್ಯಂತ ತೀವ್ರವಾಗಿ ಬೀಳುತ್ತಿರುವಂಥದು, ರೈತರ ಆತ್ಮಹತ್ಯೆಯೇ, ಮೂಲಸೌಕರ್ಯಗಳ ಕೊರತೆಯೇ, ಕುಡಿಯುವ ನೀರಿನ ಸಮಸ್ಯೆಯೇ, ಉಗ್ರರ ಧಾಳಿ ಭೀತಿಯೇ? ಊಹೂಂ ಇವ್ಯಾವೂ ಅಲ್ಲ. ಕೆಲವು ಜನರು ಐಶಾರಾಮಿ ಕೋಣೆಗಳಲ್ಲಿ ಕುಳಿತು, ಸಾಹಿತ್ಯ ವಲಯದ ಚರ್ಚೆಗಳು ನಡೆಯುವ ಕಾಫಿಹೌಸಗಳ ಮಂದ ಬೆಳಕಿನಲ್ಲಿ ಹುಟ್ಟುಹಾಕುವ ವಿಷಯಗಳಿವೆಯಲ್ಲಾ ಅವು ನಿಜವಾದ ಸಮಸ್ಯೆಗಳಿಗಿಂತ ಹೆಚ್ಚು ಚೂಪಾಗಿ ಜನರ ಮನಸ್ಸನ್ನು ಎರೆಡು ಅಲಗಿನ ಕತ್ತಿಗಳಂತೆ ಕೊಯ್ಯುತ್ತಿವೆ.

ಎಂದೋ ಅಳಿದುಹೋದ ಪುರೋಹಿತಶಾಹಿ, ಜಾತಿಪದ್ಧತಿ, ವರ್ಣನೀತಿ, ಅಲ್ಪಸಂಖ್ಯಾಕರ ಅಳಲು, ಇವನ್ನೇ ತಮ್ಮ ಸರಕಾಗಿಸಿಕೊಂಡ ಕೆಲ ಸಾಹಿತಿಗಳು, ಸೊ-ಕಾಲ್ಡ್ ಬುದ್ಧಿಜೀವಿಗಳು ಒಂದೇ ಸಮನೆ ಕೊರೆದು ಕೊರೆದು ಕಿವಿ ತೂತು ಮಾಡಿರುವುದರಿಂದ, ಈ ರಾಡಿಯಿಂದ ದೂರವಿರಬೇಕೆಂದುಕೊಂಡರೂ, ಒಂದಿಷ್ಟಾದರೂ ವಾಸ್ತವಗಳನ್ನು ನಾನೂ ನನಗೆ ಕಂಡಂತೆ ತಿಳಿಸಲೇಬೇಕೆಂಬ ಪ್ರಲೋಭನೆಯುಂಟಾಗಿ ಕೆಟ್ಟ ಖೆಡ್ಡಾಕ್ಕೆ ಬೀಳುತ್ತಿದ್ದೇನೆ, ಬಂಧುಗಳು, ಆತ್ಮೀಯರು, ಇಂಥ ಅನಗತ್ಯ ಚರ್ಚೆಗಳಿಂದ, ಅನಗತ್ಯ ಜನರಿಂದ ದೂರವಿರುವಂತೆ ತಾಕೀದು ಮಾಡಿದ್ದರೂ. ಅವರ ಕ್ಶಮೆ ಕೋರಿ ನನ್ನದೂ ಒಂದಿಷ್ಟು ಅಕ್ಕಿಕಾಳು ಈ ಹಾಳು, ಭ್ರಮಾಧೀನ ಚರ್ಚೆಗೆ.

paper tiger2ಎಲ್ಲ ವಿಷಯಗಳೂ ಎಲ್ಲರಿಗೂ ತಿಳಿಯಲು ಸಾಧ್ಯವಿಲ್ಲ, ಏಕೆಂದರೆ ಎಲ್ಲ ಅನುಭವಗಳೂ ಎಲ್ಲರಿಗೂ ಆಗಲು ಸಾಧ್ಯವಿಲ್ಲ. ತಮ್ಮ ತಮ್ಮ ಓದು, ಜ್ಞಾನಗಳಿಕೆ, ಅನುಭವಗಳ ಮಿತಿಗೊಳಪಟ್ಟೇ ಎಲ್ಲರೂ ಯೋಚಿಸುವುದು, ಬರೆಯುವುದೂ ನಡೆಯುತ್ತದಾದ್ದರಿಂದ ನನ್ನ ಬರಹದಲ್ಲಿ ಆ ಎಲ್ಲ ದೋಷಗಳು ಇರಲಿಕ್ಕೆ ಸಾಧ್ಯವಿದ್ದೇ ಇದೆ ಎನ್ನುವ ಟಿಪ್ಪಣಿಯನ್ನು ನೀಡಿಯೇ ಮುಂದುವರೆಯುತ್ತೇನೆ.

ಬಾಲ್ಯದಲ್ಲಿ ನಾನು ನೋಡುತ್ತಿದ್ದಂತೆ ನಮ್ಮ ಅಜ್ಜಿಯ ಮನೆಗೆ ರೈತರು ಬಂದಾಗ ಚಹಾ ಮಾಡಿಕೊಟ್ಟರೆ ಅವರ ಕಪ್ಪನ್ನು ಅವರೇ ತೊಳೆದಿಟ್ಟು ಹೋಗುತ್ತಿದ್ದುದು ನಮಗೆ ನೆನಪಿದೆ. ಅವರಿಗೆ ಹಾಗೆ ಕಪ್ಪು ತೊಳೆಯಲು ಪುಟ್ಟ ಹುಡುಗಿಯರಾದ ನಾನು, ನನ್ನಕ್ಕ ನೀರು ಹಾಕುತ್ತಿದ್ದ ನೆನಪೂ ನನಗಿದೆ. ಆದರೆ ನಾವಾಗಲಿ, ರೈತರಾಗಲಿ ಎಂದೂ ಅದನ್ನು ಅವಮಾನ ಎಂದುಕೊಂಡಿರಲಿಲ್ಲ. ಅದರ ಕಾರಣವನ್ನು ಆವಾಗ ನಾನು ವಿಚಾರ ಮಾಡಿರಲಿಲ್ಲ. ಹಾಗಂತ ಅದು ಸರಿ ಎಂದು ಸಮರ್ಥಿಸಿಕೊಳ್ಳುತ್ತಿಲ್ಲ. ತಪ್ಪು ತಪ್ಪೇ. ಮುಂದೆ ಕಾಲ ಬದಲಾಯಿತು.

ನಮ್ಮಜ್ಜಿಯ ಮುಂದೆ (ಅವಳು ಅವರೆಲ್ಲರ ಪಾಲಿಗೆ ಸಾವಕಾರ್ಣಿ ಆಗಿದ್ದಳು) ಮುದುಡಿ ಕುಳಿತುಕೊಳ್ಳುತ್ತಿದ್ದ ರೈತರು ಆಮೇಲೆ ನಮ್ಮ ಜೊತೆಗೆ ಕುರ್ಚಿಯ ಮೇಲೆ ಕುಳಿತುಕೊಳ್ಳತೊಡಗಿದರು. ಅವರ ಕಪ್ಪನ್ನು ನಾವೇ ತೊಳೆಯಲಾರಂಭಿಸಿದೆವು. ಈ ಬದಲಾವಣೆಗೆ ಯಾವ ಮಹಾಕ್ರಾಂತಿಯೂ ಬೇಕಾಗಲಿಲ್ಲ. ಕಾಲ ಬದಲಾಯಿತು, ಅಜ್ಜಿಯ ಹೊಲಗಳೆಲ್ಲ ಟೆನನ್ಸಿ ಕಾಯಿದೆಯಲ್ಲಿ ರೈತರಿಗೆ ಹೊರಟುಹೋದವು. ಇವಳಿಗೆ ಒಂದಿಷ್ಟು ಸರಕಾರದ ಸಹಾಯಧನ ಬಂತು ಅಷ್ಟೇ. ಆದರೆ ಅವಳು ರೈತರ ಪಾಲಿಗೆ ಕೊನೆಯವರೆಗೂ ಸಾವಕಾರ್ಣಿ (ಮರಾಠಿಯಲ್ಲಿ) ಆಗಿಯೇ ಉಳಿದು, ಅಳಿದುಹೋದಳು. ಅವಳ ನಂತರ ನನ್ನ ತಾಯಿಯೂ ಅವರ ಬಾಯಲ್ಲಿ ಸಾವಕಾರ್ಣಿಯೇ ಆಗಿದ್ದಾಳೆ, ಆದರೆ ಆ ಪಟ್ಟಕ್ಕೆ ಬೇಕಾದ ಹೊಲ-ಮನೆ ಯಾವುದೂ ಈಗಿಲ್ಲ. ಅದಕ್ಕಾಗಿ ವಿಷಾದವೂ ನಮಗ್ಯಾರಿಗೂ ಇಲ್ಲ.

ಇನ್ನು ಮನೆಗೆ ಖಾಯಂ ಮುಕ್ಕಾಂ ಹೊಡೆಯಲು ಬರುತ್ತಿದ್ದ ನನ್ನ ಗೆಳತಿಯರಾರೂ ನನ್ನ ಜಾತಿಯವರಲ್ಲ. ಆದರೆ ಒಂದು ದಿನವೂ ಆ ವಿಷಯಕ್ಕೆ ನಮ್ಮ ಮನೆಯಲ್ಲಿ ಚರ್ಚೆಗಳಾಗಿದ್ದು ನನಗೆ ಗೊತ್ತಿಲ್ಲ. ಹಾಗಂತ ಅವರ ಜಾತಿಯೇ ನಮಗೆ ಗೊತ್ತಿರಲಿಲ್ಲವೆಂತಲ್ಲ. ಜೈನರಾಗಿದ್ದ ನನ್ನ ನಾಲ್ಕು ಗೆಳತಿಯರಿಗೆ ತಮ್ಮ ಸಕಲ ಕಲಾಪ್ರದರ್ಶನಕ್ಕೆ ನಮ್ಮ ಮನೆಯೇ ರಂಗಮಂದಿರ, ನನ್ನ ತಂದೆ-ತಾಯಿಯರೇ ರಸಿಕ ಪ್ರೇಕ್ಷಕರು. ಹೀಗಾಗಿ ಅವರ ದಂಡು ಯಾವತ್ತೂ ನಮ್ಮನೆಗೆ ಧಾಂಗುಡಿಯಿಡುತ್ತಿತ್ತು. ಕತ್ತೆ ತಪ್ಪಿದರೆ ಹಾಳುಗೋಡೆ ಎಂಬಂತೆ ನಮ್ಮ ಮನೆಯವರೂ ನನ್ನನ್ನು ಹುಡುಕಬೇಕೆಂದರೆ ಅವರ ಮನೆಗೇ ಬರುತ್ತಿದ್ದರು. ಗೆಳತಿರ ಅಜ್ಜಿಯ ಬಾಯಲ್ಲಿ ನಾನು ‘ಹಾರೋರ ಕುಕ್ಕಣ್ಣಿ’ (ಬ್ರಾಹ್ಮಣರ ಕುಲ್ಕರ್ಣಿ) ಆಗಿದ್ದೆ.

dalithನಾವೆಲ್ಲಾ ಕೂಡಿ ರಾಘವೇಂದ್ರ ಸ್ವಾಮಿಗಳ ಮಠಕ್ಕೂ, ಜೈನರ ಬಸ್ತಿಗೂ ಹೋಗುತ್ತಿದ್ದೆವು. ಇಂದಿಗೂ ಜೈನರ ಪಂಚನಮೋಕಾರ ಮಂತ್ರ ನನ್ನ ಬಾಯಲ್ಲೇ ಇದೆ. ದಸರಾ ಹಬ್ಬದಲ್ಲಿ ಹತ್ತೂ ದಿನಗಳು ನಾನು ಅವರ ಬಸ್ತಿಗೆ ಹಾಜರಿ ಹಾಕುತ್ತಿದ್ದೆ. ಅವರ ಬಸ್ತಿಗಳಲ್ಲಿ ಮಾಡುತ್ತಿದ್ದ ದೇವರ ಅಲಂಕಾರ ನನಗೆ ಅತ್ಯಂತ ಪ್ರಿಯವಾಗಿತ್ತು. ನಾವೆಲ್ಲರೂ ಸೇರಿ ಇನ್ನೊಬ್ಬ ಗೆಳತಿಯ ಮನೆಗೆ ಹೋಗುತ್ತಿದ್ದೆವು. ಅವಳ ಮನೆಯಲ್ಲಿ ಆಡು-ಕುರಿಗಳನ್ನೆಲ್ಲ ಸಾಕಿದ್ದರು. ಆಡಿನ ಹಾಲಿನ ಬಗ್ಗೆ ಅವಳು ಹೇಳುತ್ತಿದ್ದಳು. ಆದರೆ ಅವಳು ಯಾವ ಜಾತಿಯೆಂದು ನಾವೆಂದೂ ವಿಚಾರ ಮಾಡಿರಲಿಲ್ಲ. ಗೊತ್ತಿದ್ದ ಹಿರಿಯರು ಎಂದೂ ನಮಗೆ ಹೇಳಲಿಲ್ಲ. ಈಗ ಗೊತ್ತಾಗಿದೆ ಅವಳ ಜಾತಿ, ಈ ಜಾತೀಯತೆಯ ಬಗ್ಗೆ ಎದ್ದ ದೊಡ್ಡ ಕೂಗುಗಳಲ್ಲಿ.

ದಿನಾಲೂ ಸಂಜೆ ನಾವು ಆಟವಾಡುವಾಗ ಮುಸ್ಲಿಮ್ ಅಜ್ಜನೊಬ್ಬ ನಮ್ಮ ಓಣಿಯಲ್ಲಿ ಹಾಯ್ದುಹೋಗುತ್ತಿದ್ದ. ನಗು ತುಂಬಿದ ಅವನ ಮುಖದಲ್ಲಿ ಮಕ್ಕಳನ್ನು ಕಂಡೊಡನೇ ಇನ್ನೂ ಹೆಚ್ಚು ನಗು ಹರಡುತ್ತಿತ್ತು. ದಿನಾಲೂ ತಪ್ಪದೇ ಅವನು ‘ಸಲಾಂ ವಾಲೆಕುಂ’ ಎನ್ನುತ್ತಿದ್ದ. ನಾವೆಲ್ಲಾ ಒಟ್ಟಾಗಿ ಅವನಿಗೆ, ಅವನಿಂದಲೇ ಕಲಿತು ‘ವಾಲೆಕುಂ ಅಸ್ಸಲಾಂ’ ಎನ್ನುತ್ತಿದ್ದೆವು. ಅವನ ಹೆಸರೇನು, ಎಲ್ಲಿರುತ್ತಿದ್ದ, ಏನೇನೂ ಗೊತ್ತಿಲ್ಲ, ನಮ್ಮ ಬಂಧ ಇಷ್ಟೇ ಇತ್ತು. ಹಾಗೂ ತುಂಬ ಹಾರ್ದಿಕವಾಗಿತ್ತು.

ಮನೆಗೆ, ಅಡುಗೆಮನೆಗೆ ಬರಲು ಯಾರಿಗೂ ಯಾವ ರೀತಿಯಲ್ಲೂ ರಿಸ್ಟ್ರಿಕ್ಷನ್ ಇರಲಿಲ್ಲ. ನಮ್ಮದೇ ಬಂಧುಗಳ ಮನೆಯಲ್ಲಿ ಕೆಲವೊಂದು ನಿಯಮಗಳಿದ್ದರೂ ನಮ್ಮಲ್ಲಿ ಇಲ್ಲವೇ ಇಲ್ಲ. ಅತಿಯಾಗಿ ಮಡಿ ಮಾಡುವ ನಮ್ಮ ಹುಬ್ಬಳ್ಳಿ-ಧಾರವಾಡದ ಮಂದಿ ಸ್ವತಃ ತಮ್ಮ ಮಕ್ಕಳು, ಸೊಸೆಯಂದಿರಿಗೂ ಸಾಕಷ್ಟು ಕಟ್ಟುಪಾಡುಗಳನ್ನು ವಿಧಿಸಿರುತ್ತಾರೆ. ಅವರು ತಮ್ಮ ಜನರನ್ನೇ ನಾನಾ ಕಾರಣಗಳಿಗಾಗಿ, ನಾನಾ ಸಂದರ್ಭಗಳಲ್ಲಿ ಮುಟ್ಟಿಸಿಕೊಳ್ಳುವುದಿಲ್ಲ. ಆದರೆ ಅದಕ್ಕೆ ವಿರೋಧವು ಕೂಡ ಒಳಗಿನಿಂದಲೇ ಬಂದಿದೆ, ಬರುತ್ತಲೇ ಇದೆ.

social media tigerಹೀಗಾಗಿ ಕರ್ಮಠ ಬ್ರಾಹ್ಮಣರ ಮನೆಗಳಲ್ಲಿ ಒಳಗಿನಿಂದಲೇ ಕ್ರಾಂತಿ ಮತ್ತು ಬದಲಾವಣೆಗಳು ಆಗುತ್ತಿವೆ. ಮೊದಲು ಉಪಜಾತಿಯಲ್ಲಿ ಕೂಡಾ ಮದುವೆ-ಸಂಬಂಧಗಳು ನಿಶಿದ್ಧವಾಗಿದ್ದವು. ಈಗ ಯಾವ ಉಪಜಾತಿಯಾದರೂ ಆಗಲಿ, ನಡೆಯುತ್ತದೆ ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಇಂಥದೇ ಕಟ್ಟುಪಾಡುಗಳು ಪ್ರತಿಯೊಂದು ಧರ್ಮ, ಜಾತಿಯಲ್ಲಿವೆ. ಆದರೆ ಅದೇಕೋ ಬರಹಗಾರರ ಟೀಕೆಗೆ ಗುರಿಯಾದವರು ಮಾತ್ರ ‘ಒಂದೂರಿನಲ್ಲಿ ಇದ್ದ ಬಡಬ್ರಾಹ್ಮಣ’ನೇ. ಇತರ ಎಲ್ಲ ಜಾತಿಗಳಲ್ಲಿ, ಧರ್ಮಗಳಲ್ಲಿ ಒಳ-ಪಂಗಡಗಳು, ಒಳ-ಜಾತಿಗಳು, ಅದರಲ್ಲಿ ಇದು ಶ್ರೇಷ್ಠ, ಅದು ಕೀಳು, ಎನ್ನುವ ತಾರತಮ್ಯ ಇದ್ದೇ ಇದೆ. ಮದುವೆಗಳು ಅಲ್ಲಿಯೂ ಇನ್ನೂ ಬೇಲಿ ದಾಟಿ ಬರಲಾರದ ಯುವ-ಮನಸ್ಸುಗಳಿಗಾಗಿ ಕಾದು ಸೊರಗಿವೆ. ಕ್ರಾಂತಿ ಎನ್ನುವುದು ಒಳಗಿನಿಂದ, ಒಳಗಿನವರಿಂದಲೇ, ಅನುಭವಿಸಿದವರಿಂದಲೇ ಆಗಬೇಕಿದೆ.

ಅದು ನನ್ನ ಜಾತಿಯಲ್ಲಿ ಬೇಗ ಆಗಿದೆ, ಇನ್ನೂ ಆಗುತ್ತಿದೆ. ಆದರೂ ಇಂದಿಗೂ ಪುರೋಹಿತಶಾಹಿ ಎಂದು ಹಳಿಯುವುದನ್ನು ಕೆಲವರು ನಿಲ್ಲಿಸಿಯೇ ಇಲ್ಲವಲ್ಲ ಎಂದು ಮನಸ್ಸಿಗೆ ಬೇಜಾರಾಗುತ್ತದೆ. ಅವರಿಗೇನಾದರೂ ಭಯಂಕರ ಅನುಭವಗಳಾಗಿವೆಯೇ? ಇವತ್ತಿಗೂ ಆಗುತ್ತಿವೆಯೇ? ತಮ್ಮ ತಮ್ಮ ಜಾತಿಯವರು, ತಮ್ಮ ತಮ್ಮ ಭಾಷೆಯವರು ಮೇಲೆ ಬರಬೇಕೆಂಬ ಪ್ರಾಮಾಣಿಕ ಆಶಯ ನಿಮ್ಮದಾಗಿದ್ದರೆ ಆ ನಿಟ್ಟಿನಲ್ಲಿ ನೀವೇ ಪ್ರಯತ್ನಿಸಬೇಕಲ್ಲವೇ? ಹೆಣ್ಣುಮಕ್ಕಳ ಹಕ್ಕಿಗಾಗಿ ಹೆಣ್ಣುಮಕ್ಕಳೇ ಹೋರಾಡಬೇಕಿದೆ. ಕೆಲವು ಮಹನೀಯರು ಹಿಂದೆ ಹೆಣ್ಣುಮಕ್ಕಳ ಶಿಕ್ಷಣ, ಸಮಾನತೆಗಾಗಿ ಹೋರಾಡಿದ್ದಾರೆ, ಇಲ್ಲವೆಂತಲ್ಲ. ಆದರೆ ಯಾವಾಗಲೂ ಯಾರೋ ಒಬ್ಬ ದೇವಮಾನವ ಬರುವ ನಿರೀಕ್ಷೆಯಲ್ಲೇ ನಮ್ಮ ಇಂದು-ನಾಳೆಗಳನ್ನು ಉರಿಸಲಿಕ್ಕಾಗದು ಅಲ್ಲವೇ?

ಇದೀಗ ‘ಅಸಹಿಷ್ಣುತೆ’ ಅಥವಾ Intolarance ಅತ್ಯಂತ ಪಾಪ್ಯುಲರ್ ಶಬ್ದವಾಗಿದೆ, ಮತ್ತು ಅದು ಬರೇ ಶಬ್ದವೇ ಆಗಿದೆ ಎಂದು ನನಗೆ ಅನಿಸಲು ಶುರುವಾಗಿದೆ. ಏಕೆಂದರೆ ಎಲ್ಲ ಶಿಷ್ಯ ಸಮೂಹದ ಪ್ರೀತಿಪಾತ್ರರಾದ ಶ್ರೀ. ಕಲಬುರ್ಗಿಯವರ ಸಾವಿಗೆ ಕಾರಣರಾದವರನ್ನು ಕಂಡುಹಿಡಿಯಲಾಗದ ಸರ್ಕಾರವನ್ನು ದೂಷಿಸುವುದನ್ನು ಬಿಟ್ಟು ಕೆಲವರು ತಾವೇ ಅವರ ಆರೋಪಿಗಳನ್ನು ಕಂಡುಹಿಡಿದವರಂತೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅಸಹಿಷ್ಣುತೆಗೇ ಅವರು ಬಲಿಯಾದರು ಎಂದು ಹುಯಿಲೆಬ್ಬಿಸುತ್ತಿದ್ದಾರೆ.

ಅದರ ಬದಲು ಸರಕಾರವನ್ನು ಒತ್ತಾಯಿಸಿ, ಬೇಗನೇ ಕೇಸನ್ನು ಇತ್ಯರ್ಥಗೊಳಿಸುವಂತೆ ಒತ್ತಡ ತನ್ನಿ, ಖಂಡಿತ ಆ ಸಾಮರ್ಥ್ಯ ನಿಮಗಿದೆ, ಅದು ಬಿಟ್ಟು ನೀವೇ ಪೋಲಿಸರಾಗಬೇಡಿ. ಸಂಬಂಧವಿಲ್ಲದವರನ್ನು ಎಳೆದು ತಂದು ನಿಮ್ಮದೇ ಖಾಸಗಿ ಠಾಣೆಯಲ್ಲಿ ಇನ್ವೆಸ್ತಿಗೇಶನ್ ಕೂಡಾ ಮಾಡದೇ ತೀರ್ಪು ಕೊಡಬೇಡಿ. ಅವರವರ ಕೆಲಸವನ್ನು ಅವರವರಿಗೆ ಮಾಡಲು ಬಿಡಿ. ಅದರ ಬದಲು ಯಾರಾದರೂ ‘ಅಸಹಿಷ್ಣುತೆ’ ಎಂದರೇನು, ಅದು ಯಾವ ಯಾವ ರೂಪದಲ್ಲಿ ನಡೆಯುತ್ತಿದೆ, ಎಲ್ಲಿ ನಿಮ್ಮ ಅನುಭವಕ್ಕೆ ಬಂದಿದೆ ಎನ್ನುವುದನ್ನು ಸ್ವಲ್ಪ ವಿವರಿಸಿರಿ. ನಮ್ಮಂಥ ಸಾಮಾನ್ಯ ಜನಕ್ಕೆ ತಿಳುವಳಿಕೆಯಾದರೂ ಮೂಡುತ್ತದೆ.

ಹಿಂದೆ ಕೆಟ್ಟ ಅನುಭವಗಳಿಂದ ನೀವು ನೊಂದಿದ್ದರೆ, ಅದಕ್ಕೆ ನನ್ನ ಪೂರ್ವಜರೇನಾದರೂ ಕಾರಣರಾಗಿದ್ದರೆ, ಖಂಡಿತ ನಾನು, ನನ್ನಂಥವರು ನಿಮ್ಮ ಆರೋಪಿಗಳು, ನಿಮ್ಮ ಕ್ಶಮೆ ಇರಲಿ. ನಮ್ಮಿಂದ ಇಂಥ ಅಪರಾಧಗಳು ಎಂದೂ ನಡೆಯಲಾರವು ಎನ್ನುವ ನಂಬಿಕೆ ನನಗಿದೆ. ನಮಗೆಲ್ಲರಿಗೂ ನಮಗೆ ಬೇಕಾದಂತೆ ಬದುಕುವ ಹಕ್ಕಿದೆ, ಆದರೆ ಬೇಕಾದ ಜಾಗಗಳಲ್ಲಿ, ದೇಶಗಳಲ್ಲಿ, ಬೇಕಾದ ಜಾತಿಗಳಲ್ಲಿ, ಬೇಕಾದ ಅಪ್ಪ-ಅಮ್ಮನ ಹೊಟ್ಟೆಯಲ್ಲಿ ಹುಟ್ಟುವ ಆಯ್ಕೆಯ ಸ್ವಾತಂತ್ರ್ಯವನ್ನು ನಾನು ನಂಬುವ ಮತ್ತು ಕೆಲವರು ನಂಬದ ಆ ಭಗವಂತನು ನೀಡಿಲ್ಲವಾದ್ದರಿಂದ ಏನೂ ಮಾಡಲು ಆಗುವುದಿಲ್ಲ. ಆದರೂ ಸುಮ್ಮಸುಮ್ಮನೆ ಪೇಪರ ಹುಲಿಯನ್ನು ಅಲ್ಲಾಡಿಸಿ ಸಮಾಜವನ್ನು ಹೆದರಿಸುವ, ಘಾತಿಸುವ ಈ ಉದ್ಯೋಗವನ್ನು ಬಿಟ್ಟು ಏನಾದರೂ ಒಳ್ಳೆಯ, ಕಟ್ಟುವ ಕೆಲಸಗಳನ್ನು ಮಾಡೋಣವೇ?

‍ಲೇಖಕರು Admin

23 February, 2016

4 Comments

  1. Kiran

    ನಮ್ಮ ಸದ್ಯದ ವರ್ತಮಾನದ most appropriate and beautiful analysis ಓದಿದ್ದು ಅಂದರೆ ಇದು.
    ನಮ್ಮ ಸಮಾಜಕ್ಕೆ ಅಂಟಿರುವ ಸದ್ಯದ ಶಾಪ ಅಂದರೆ ಈ ಬುದ್ದಿ-ದಾರಿದ್ರ್ಯದ ದರಿದ್ರ ಶನಿಗಳಾದ ಬುದ್ದಿಜೀವಿಗಳೆಂದು ಕರೆಸಿಕೊಳ್ಳುತ್ತಿರುವ ತಲೆಹಿಡುಕರು, ಯಾರಿಗೂ ಯಾವುದನ್ನೂ ಮರೆಯಲೂ ಬಿಡದೇ ಹೇಳಿದ ಕೆಟ್ಟ ಸುಳ್ಳುಗಳನ್ನೇ ಮತ್ತೆ, ಮತ್ತೆ ಒದರುತ್ತಾ ಇಡೀ ಸಮಾಜಕ್ಕೆ ಪ್ಲೇಗಿನಂತೆ ಕಾಡುತ್ತಿದ್ದಾರೆ.
    ಯಾರಾದರೂ ಈ ಶಾಹಿ ಎಂದು ಬರೆದರೆ ಆ ಬರಹದ ಸ್ವರೂಪ ಗೊತ್ತಾಗುತ್ತೆ…
    ಈಗ ಸದ್ಯದಲ್ಲಿ ಯಾರಿಗೂ ಈ ಸೈದ್ದಾಂತಿಕ ಹೋರಾಟಕ್ಕೆಲ್ಲಾ ಬಿಡುವೂ ಇಲ್ಲಾ, ಮನಸ್ಸೂ ಇಲ್ಲ, ಇವೆಲ್ಲ ತಲೆಹರಟೆ ಬೇಕಾಗಿರೋದು ಲುಚ್ಚಾ ರಾಜಕಾರಣಿಗಳಿಗೆ, ಲಫಂಗ ಸಾಹಿತಿಗಳಿಗೆ, ಮತ್ತು ತರಲೆ ವಿದ್ಯಾರ್ಥಿಗಳಿಗೆ ಮಾತ್ರ.

    • Neeta S Rao

      ಧನ್ಯವಾದಗಳು ಕಿರಣ.

  2. Krishna B

    Beautiful writing and perfect analysis. This is in the minds of 99% of the so called “forward castes”.. Why hang on to things happened in 100s of years ago. This is one of the perfect analysis I saw in recent times.

    • Neeta S Rao

      Thank you sir.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading