ಅನಿತಾ ನರೇಶ್ ಮಂಚಿ ಅವರ ಪುಸ್ತಕ ಬಣ್ಣದ ಕಡ್ಡಿಗೆ ಪೆಜತ್ತಾಯ ಅವರು ಬರೆದ ಮುನ್ನುಡಿ ಇಲ್ಲಿದೆ…
ಬಣ್ಣದ ಕಡ್ಡಿ ಎಂಬ ಪುಸ್ತಕವನ್ನು ಕೈಗೆ ಎತ್ತಿಕೊಂಡೆ.
ಬಣ್ಣದ ಬಳಪದ ಕಡ್ಡಿಯ ವಿವಿಧ ಬಣ್ಣಗಳ ಹಿನ್ನೆಲೆಯಲ್ಲಿ ಒಂದು ಲೇಖನಿ. ಆ ಲೇಖನಿಯೊಳಗೆ ಹೊಕ್ಕು ಗಲಾಟೆ ಮಾಡುತ್ತಾ ಇರುವ ನಾಲ್ಕು ಚಿಣ್ಣರು.
ಚಿತ್ರದ ಕೆಳಗೆ ಅನಿತಾ ನರೇಶ್ ಮಂಚಿ ಎಂಬ ಚಿರಪರಿಚಿತ ಲೇಖಕಿಯ ನಾಮ.
ತೇಜು ಪಬ್ಲಿಕೇಷನ್ಸ್ ಅವರ ಪ್ರಕಟಣೆ.
ಪುಸ್ತಕ ಕೈಗೆ ಬಂದ ಮೇಲೆ ನಾನು ಮೊದಲು ನೋಡುವುದೇ ಬೆನ್ನುಡಿಯನ್ನು.
ಯುವಲೇಖಕಿಯ ಒಂದು ಭಾವಚಿತ್ರ. ಅದರ ಕೆಳಗೆ ಅಶೋಕ ಭಾಗಮಂಡಲ ಅವರು ಬರೆದ ಚೊಕ್ಕದಾದ ಬೆನ್ನುಡಿ. ಅದರಲ್ಲಿ ಕಂಡೆ ನನ್ನ ಸೋದರ ಸೊಸೆ ಅನ್ನಿಸಿಕೊಳ್ಳುವ ಅನಿತಾಳ ಬಹುಮುಖ ಪರಿಚಯ.
ಮುಂದಕ್ಕೆ ಪುಸ್ತಕ ತೆರೆದರೆ ಪ್ರೊ. ಭುವನೇಶ್ವರಿ ಹೆಗಡೆ ಅವರ ಅಕ್ಕರೆಯ ಮುನ್ನುಡಿ.
ಡಾ. ಭುವನೇಶ್ವರಿ ಅವರ “ಅಕ್ಕರೆ” ಗಳಿಸುವುದು ಬಹು ಕಷ್ಟದ ಸಂಗತಿ. ಅವರು ಯಾವುದೇ ಪುಸ್ತಕದ ಒಂದು ಅಧ್ಯಾಯವನ್ನು ಓದುವಾಗಲೇ ಅದರ ಲೇಖಕರು ಅಥವಾ ಲೇಖಕಿ ಅವರ ಗುಣ ಮಟ್ಟ ಅರಿತುಕೊಳ್ಳುವ ಚಾಣಾಕ್ಷ ದೃಷ್ಟಿಯ ಪ್ರೊಫೆಸರ್!
ಅವರಿಂದ ಹೊಗಳಿಸಿಕೊಂಡ ನಮ್ಮ ಹುಡುಗಿ ನಿಜವಾಗಿಯೂ ಜಾಣೆ.
ಅರ್ಪಣೆ ನೋಡಿದರೆ, ಈ ಸಂಕಲನವು ಅನಿತಾಳ ತಂದೆಗೆ ಅರ್ಪಿತವಾಗಿದೆ.
ಇಂದು ಅನಿತಾಳ ಪುಸ್ತಕ ನನ್ನ ಕೈಗೆ ಬಂತು!
ಇನ್ನೇನು ಕಾಯುವುದು? ಲೇಖನಗಳನ್ನು ಒಂದೊಂದಾಗಿ ಕಬಳಿಸುತ್ತೇನೆ.
೧. ಕನ್ನಡಕ ಪುರಾಣ
ಚಿಕ್ಕಮಗು ಅನಿತಾಗೆ ಕನ್ನಡಕದ ಫ್ಯಾಸಿನೇಶನ್! ಅದಿನ್ನೂ ಅವಳ ಮೂಗೇರಲಿಲ್ಲ ಅಂತ ನಾವೂ ಪರಿತಪಿಸುತ್ತೇವೆ.
೨. ಜಗವೆಲ್ಲ ಮಲಗಿರಲು ನಾನೊಬ್ಬಳೆದ್ದಿದ್ದೆ…..
ನಾಟಕಕ್ಕೆ ಕರೆದುಕೊಂಡು ಹೋದ ಜನರು ಗಾಯಬ್! ಬೆಳಗಿನ ಜಾವ ಮೂರೂವರೆಯ ಹೊತ್ತಿಗೆ ಪುಟ್ಟ ಅನಿತಾ ಹೆದರಿಕೊಂಡೇ ಧೈರ್ಯ ಮಾಡಿಕೊಂಡು ಏಕಾಂಗಿಯಾಗಿ ಕೈದೀಪ ಅಥವಾ ಟಾರ್ಚಿನ ಸಹಾಯವಿಲ್ಲದೇ ಕತ್ತಲಲ್ಲೇ ಹೆಜ್ಜೆ ಹಾಕುತ್ತಾ ದೊಡ್ಡಮ್ಮನ ಮನೆತಲುಪಿದ ಸತ್ಯ ಕಥೆ.. ಅಂದಿನಿಂದ ಅನಿತಾಳಿಗೆ ಕತ್ತಲ ಭಯ ಇಲ್ಲವಂತೆ. ಇದನ್ನು ಓದಿಯೇ ಅನುಭವಿಸಬೇಕು.
೩. ಬಂದು ನೋಡಾ… ನಮ್ಮೂರ ರೋಡಾ …
ಎಂದೂ ದುರಸ್ತಿಯಾಗದ ಮಂಚಿಯ ರಸ್ತೆಯ ವ್ಯಥೆಯ ಕಥೆ. ನಗುನಗುತ್ತಾ ತಮ್ಮೂರ ರಸ್ತೆಯ ಕಥೆ ಹೇಳಿ ಅನಿತಾ ನಮ್ಮನ್ನು ನಗಿಸುತ್ತಾಳೆ. ಈ ಬಗ್ಗೆ ಆಕೆಗೆ ವ್ಯಥೆ ಇದ್ದಂತೆಯೇ ಇಲ್ಲ.
೪. ಸಾಸಿವೆ ಗಾತ್ರದ ಪುಟ್ಟ ಮಗು
ಜೀವಶಾಸ್ತ್ರದ ಬಗ್ಗೆ ಮಕ್ಕಳಿಗೆ ಯಾವ ಅರಿವೂ ಕೊಡದಿರುವ ಶಾಲೆಗಳಲ್ಲಿ ಕಲಿಯುವ ಮುಗ್ದ ಮಕ್ಕಳ ಕಲ್ಪನೆಯ ಕಥೆ. ಓದಿ! ಅನಿತಾ ಮತ್ತು ಅವಳ ಗೆಳತಿಯ ಕಲ್ಪನೆಯ ಕೂಸು ನಿಜಕ್ಕೂ ಇರಬಹುದೆ? – ಅನ್ನಿಸುವುದು.
೫. ಸಂಜ್ಞಾ ಕೋವಿದರು
ಮಾತನಾಡಿದರೆ ಮಡಿ ಕೆಡುತ್ತೆ ಅನ್ನುವ ಅಜ್ಜ. ಅವರ ಸಂಜ್ಞೆಗಳನ್ನು ಅರಿತು ಬಾಳುವ ಅಜ್ಜಿ. ಅಂತೆಯೇ ಇತರೇ ಸಂಜ್ಞಾ ಪುರಾಣ ಒಂದೊಂದಾಗಿ ಬಿಚ್ಚುತ್ತಾ ಕೊನೆಗೆ ಅನಿತಾ ತನ್ನ ಬಾಯನ್ನೇ ತಾನು ಮುಚ್ಚಿಕೊಳ್ಳುತ್ತಾಳೆ!
೬. ಎಕ್ಸ್ ಸರ್ವಿಸ್ ಬಸ್ ಮತ್ತು ಹೂವಿನ ಮಾಲೆ ….
ಎಕ್ಸ್ ಸರ್ವಿಸ್ ಬಸ್ಸಿನ್ ದ್ರೈವರ್ ಮಾಮ ಕೊಡುತ್ತಿದ್ದ ರಿಟಾಯರ್ಡ್ ಹೂ ಹಾರದ ನೆನಪು. ಫ್ಲೇಮ್ ಫ್ಹೇಮ್ ಎಂದು ಸದ್ದು ಮಾಡುತ್ತಾ ಬಸ್ಸಿನಂತೆ ಓಡಾಡುತ್ತಿದ್ದ ದಿನಗಳ ನೆನಪು.
೭. ಸರ್ಪಸುತ್ತಿನ ಗಮ್ಮಾತ್ತು!
ಇದು ಒಳ್ಳೆಯ ಗಮ್ಮತ್ತು. ಅನಿತಾ ಸರ್ಪಸುತ್ತಿನ ಯಮಯಾತನೆಯ ನೋವನ್ನು ನಗುತ್ತಾ ಸ್ವೀಕರಿಸಿದ ಕಥೆ! ಮೂಢ ನಂಬಿಕೆಗಳಿಗೆ ಮತ್ತು ನಾಟಿ ಮದ್ದುಗಳಿಗೆ ಸೊಪ್ಪು ಹಾಕದೇ ಡಾಕ್ಟರಲ್ಲೇ ಔಷಧಿ ಪಡೆದು ಕಾಯಿಲೆ ಗುಣಮಾಡಿಕೊಂಡ ದಿಟ್ಟ ಗೃಹಿಣಿ ಅನಿತಾ ಹೇಳುವ ವೈಜ್ಞಾನಿಕ ಕಥೆ. ( ಭೂತರಾಯಗೆ ಒಂದು ಕ್ವಾಳಿ ನಷ್ಟ ಮಾಡಿ ಬಿಟ್ತ್ ಅಲ್ಲಾ ಈ ಹುಡುಗಿ!)
೮. ರಂಗ್ ದೇ ಮುಝೆ ರಂಗ್ ದೇ…
ತನ್ನ ಬಾಲ್ಯದ ಮೆಹಂದಿಯ ಆಕರ್ಷಣೆಯ ಜತಜತೆಗೇ ಮೆಹಂದಿಯ ತಯಾರಿ ಹಾಗೂ ಹಚ್ಚುವ ಡಿಸೈನುಗಳ ಬಗ್ಗೆ ಒಂದು ಸಮಗ್ರ ಲೇಖನ. ತಿಳಿಹಾಸ್ಯದೊಡನೆ.
೯. ಪುಷ್ಪ ಮೈತ್ರಿ
ಪುಷ್ಪ ಮೈತ್ರಿ ಯಾರಿಗಿಲ್ಲ. ಅದೂ ಅನಿತಳಂಥಹಾ ಚೂಟಿ ಹೆಣ್ಣಾಗಿ ಹುಟ್ಟಿದ ಮೇಲೆ! ಈ ಗಾರ್ಡನಾಯಣ ಮತ್ತು ಅನಿತಾ ಹೂಗಳ ಬೀಜ ಕೊಂಡು ಬೇಸ್ತು ಬಿದ್ದ ಕಥೆ.
೧೦. ಪರಿಚಯಾಯಣ
ಪರಿಚಯಾಯಣ ಎಂದು ಕರೆಯಲ್ಪಟ್ಟು ನಮ್ಮನ್ನು ಕಾಡುವ ಬಗೆಬಗೆಬಗೆಯ ಪರಿಚಯಗಳ ವಿಶ್ಲೇಷಣೆ.
೧೧. ನಾಮಗಳೇ, ನೀವೇಕೆ ಹೀಗೆ?
ಇದು ದಾಸರು ವರ್ಣಿಸಿದ ನಾಮಗಳ ವಿವರ ಅಲ್ಲ. ಅನ್ವರ್ಥ ಅರ್ಥಕೊಡುವ ನಿಜ ನಾಮಗಳು ಮತ್ತು ಗೊಂದಲದಲ್ಲಿ ಬೀಳಿಸುವ ಆತ್ಮೀಯ ಪೆಟ್ ನೇಮ್ ಗಳಬಗ್ಗೆ ಅನಿತಾ ಬರೆದ ಸ್ವಾರಸ್ಯದ ಲೇಖನ.
೧೨. ನೋಡಯವ್ವ ಚೆಲುವನಾ..
ಇದುಯಾವ ಚೆಲುವ? …. ತನ್ನ ಬಾಲ್ಯದಲ್ಲಿ ಭಾರೀ ಮೊತ್ತದ ಹಣ ಅನ್ನಿಸಿಕೊಂಡಿದ್ದ ಇಪ್ಪತ್ತೈದು ಪೈಸೆಯ ನಾಣ್ಯದ ಬಗೆಗಿನ ಸುಂದರ ಲೇಖನ. ಚಲಾವಣೆಯಿಂದ ಹಿಂತೆಗೆಯಲ್ಪಟ್ಟಿದ್ದರೂ, ಇಂದಿಗೂ ಅನಿತಳ ಮನೆಯ ದೇವರ ಡಬ್ಬಿಯಲ್ಲಿ ಕೆಲವು ನಾಲ್ಕಾಣೆ ಪಾವಲಿಗಳು ನಾ… ಕಾಣೆ! – ಆಗದೇ ಉಳಿದಿವೆಯಂತೆ.
ನಾಲ್ಕಾಣೆ ನಾಣ್ಯದ ಚರಿತ್ರೆ, ಚಲಾವಣೆ ಹಾಗೂ ಅದರ ಬಹುಪಯೋಗೀ ಅಸ್ತಿತ್ವದ ಬಗ್ಗೆ ಬರೆದ ಸುಂದರ ನೆನಪುಗಳು.
೧೩. ಮೊದಲ ಮಳೆ …
ಮೊದಲ ಮಳೆ ಯಾರಿಗೆ ಬೇಡ? ಅದನ್ನು ಸ್ವಾಗತಿಸುವ ಮಾನವ ಸಮೂಹದ ಬಗೆ ಬಗೆಯ ಅನುಭವಗಳ ಬಗ್ಗೆ…. ಮನಸ್ಸನ್ನು ಪ್ರಪುಲ್ಲಿತಗೊಳಿಸುವ ಲೇಖನ.
೧೪. ಸ್ವಾತಂತ್ರೋತ್ಸವ ..
ಭಾಗಮಂಡಲ ಎಂಬ ಊರಿನಲ್ಲಿರುವ ತನ್ನ ಶಾಲೆಯಲ್ಲಿ ಪ್ರತೀ ವರ್ಷ ಅತೀ ವಿಜ್ರಂಭಣೆಯಿಂದ ಆಚರಿಸಲ್ಪಡುತ್ತಿದ್ದ ಸ್ವಾತಂತ್ರೋತ್ಸವ ಎಂಬ ರಾಷ್ಟ್ರೀಯ ಹಬ್ಬದ ಮಾಮೂಲಿ ಆಚರಣೆಯ ಬಗ್ಗೆ ……
೧೫. ಮಾವೆಂದರೆ ಅಷ್ಟೇ ಸಾಕೇ?
ಹಣ್ಣುಗಳ ರಾಜ ಮಾವಿನ ಹಣ್ಣಂತೆ. ಹಳ್ಳಿಮಕ್ಕಳಿಗೆ ಕಾಡು ಮಾವೆಂದರೆ ಬಲು ಪ್ರೀತಿ. ಹಣ್ಣಾಗಿ ಮರದಿಂದ ಕೆಳಗೆ ಬೀಳುವ ಕಾಡುಮಾವು ಹೆಕ್ಕುವ ಪ್ರಸಂಗಗಳು. ಮಾವು ಹೆಕ್ಕುವಾಗ ಬರುವ ದೆವ್ವಗಳು. ಅವನ್ನು ಬಗ್ಗಿಸಿ ಓಡಿಸುವ ಗುಟ್ಟು ಎಲ್ಲಾ ಬರೆದು ಅನಿತಾ ಮಾವಿನ ಗೊರಟು ಕೈಯ್ಯಲ್ಲಿ ಹಿಡಿದು ನಮ್ಮ ಹೆಸರನ್ನೇ ಕರೆಯುತ್ತಾಳೆ. ಬಾಯಿತಪ್ಪಿ ನಾವು “ಓ!” ಅಂದರೆ ಆಕೆ ಎಸೆಯುವ ಗೊರಟಿನ ಹಿಂದೆ ಓಡಬೇಕಾಗುತ್ತೆ!
೧೬. ಅಪ್ಪನ ಸ್ಕೂಟರ್
ದಿನಕಟ್ಟಳೆ ರಿಪೇರಿ ಮಾಡಿದರೆ ಗಂಟೆಕಟ್ಟಲೆ ಓಡುತ್ತಿದ್ದ ಅಪ್ಪನ ಸ್ಕೂಟರ್! ಅದರದೇ ಒಂದು ವಿಚಿತ್ರ ಸ್ವಭಾವ. ಅದನ್ನು ಅರಿತೂ, ಅದರ ಮೇಲೆ ಎಂದೂ ಬೇಸರಿಸದ “ತ್ರಿವಿಕ್ರಮನೇ” ಅನಿತಾಳ ಅಪ್ಪ!
ಆ ಸ್ಕೂಟರ್ ಅವರ “ಐಡೆಂಟಿಟಿ”ಯೂ ಆಗಿತ್ತು ಅನ್ನುತ್ತಾಳೆ ಅನಿತಾ …
೧೭. ಐ ಲವ್ ಯೂ ರಸ್ನಾ…
ಬೇಸಿಗೆ ಬಂತೆಂದರೆ ಎಲ್ಲರ ಮನೆಗಳಲ್ಲೂ ರಸ್ನಾಎಂಬ ಪಾನಕದ ಮಹಾಪೂರ! ಯಾವಪತ್ರಿಕೆ ನೋಡಿದರೂ ರಸ್ನಾದ ಜಾಹೀರಾತು!
“ ಐ ಲವ್ ಯೂ ರಸ್ನಾ!!” ಎಂಬ ಸ್ಲೋಗನ್ ಎಲ್ಲಾ ಮಕ್ಕಳ ಬಾಯಲ್ಲಿ!
ಮನೆಗೆ ಬಂದ ಮುದ್ದಾದ ಮಗುವಿಗೆ ಅನಿತಾ ಹೋಮ್ ಮೇಡ್ ರಸ್ನಾ ಕುಡಿಸಿ ಫಚೀತಿ ಮಾಡುತ್ತಾಳೆ.
ಪ್ರಾಣಾಂತಿಕ ಫಚೀತಿ ಏನಲ್ಲ.
ನಿಂಬೆ ಶರಬತ್ತು ಮಾಡಿ ಅದಕ್ಕೆ ಹಳದಿ ಬಣ್ಣವನ್ನು “ಸ್ವಲ್ಪ ಹೆಚ್ಚಾಗಿಯೇ” ಹಾಕಿದ್ದರಿಂದ ಆ ಮುದ್ದು ಮಗುವಿನ ಮುಖ “ಹನುಮಂತನ ಮುಖ” ಆಗಿತ್ತಂತೆ!

೧೮. ನನ್ನ ಸಂಗೀತಾಭ್ಯಾಸ …
ಸಂಗೀತ ಕಲಿಯುವ ಆಸೆ ಪ್ರತ್ಯೊಬ್ಬರಲ್ಲೂ ಉದಿಸುವುದು. ಅದು ಅಷ್ಟೇ ಬೇಹ ಕಮರಿಯೂ ಹೋಗುವುದು ಸ್ವಾಭಾವಿಕ.
ಅನಿತಾಳ ಈ ಅನುಭವ ಬಹು ವಿಶಿಷ್ಟವಾದುದು. ಆ ಬಗ್ಗೆ ಬರೆದು ಲೇಖನದ ಸ್ವಾರಸ್ಯ ಕೆಡಿಸಲಾರೆ. ನೀವೇ ಓದಿ.
೧೯. ಮಳೆಗಾಲ ಬಂದಾಗ ಎಷ್ಟು ಮಳೆ ಎಂಬರು …..!!
ಬೇಸಿಗೆಯ ಧಗೆ ತಾಳಲಾರದೆ ಜನರು “ ಮಳೆ ಇಲ್ಲಾ! ” – ಅಂತ ಅನ್ನುತ್ತಾರೆ. ಮಲೆನಾಡಿನಲ್ಲಿ ಅತಿವೃಷ್ಟಿ ಆದಾಗ “ ಎಷ್ಟು ಮಳೆ!!” ಅಂತ ದೂರುತ್ತಾರೆ. ಕಾವೇರಿ ಮತ್ತು ಕನ್ನಿಕೆಯರ ನಾಡು ಭಾಗಮಂಡಲ.
ಸುರಿದರೆ ದಿನಗಟ್ಟಳೆ ಎಡಬಿಡದ ಮಳೆ. ರಸ್ತೆ ಸೇತುವೆಗಳೆಲ್ಲಾ ಜಲಾವೃತ್ತ ಆಗಿ ಹೆಚ್ಚಿನವರು ಮನೆಯಲ್ಲೇ ಉಳಿಯುತ್ತಾರೆ.
ಮಳೆ ಬಂತೆಂದು ಕಾಯಿಲೆಗಳು ರಜೆ ತೆಗೆದುಕೊಳ್ಳುತ್ತವೆಯೇ?
ಡಾಕ್ಟರು ತನ್ನ ರೋಗಿಗಳನ್ನು ನೋಡಿ ಔಷದಿ ನೀಡಿ ಉಪಚರಿಸಲೇ ಬೇಕು. ಬಾಳೆಯ ಕಾಂಡಗಳ ತೆಪ್ಪ ಮಾಡಿ ಡಾಕ್ಟ್ರು ನದಿದಾಟಲು ಹೊರಡುತ್ತಾರೆ. ನದಿದಾಟುವಾಗ ಜೋರಾಗಿ ಮಳೆ ಬಂತೆಂದು ಅವರು ಕೊಡೆ ಬಿಡಿಸಿದ್ದೇ ದೊಡ್ಡ ಎಡವಟ್ಟಾಗುತ್ತದೆ.
ಅವರ ಬಾಳೆಕಾಂಡದ ತೆಪ್ಪ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತದೆ. ಅದರೊಂದಿಗೆ ಅನಿತಾಳ ತಂದೆಯವರೂ ಕೊಚ್ಚಿಹೋಗುತ್ತಾರೆ.
ಲಕ್ಷ್ಮಣನಂಥಹಾ ಭ್ರಾತೃ ಪ್ರೇಮಿ ಅನಿತಾಳ ಚಿಕ್ಕಪ್ಪ ತನ್ನ ಜೀವವನ್ನೇ ಪಣಕ್ಕಿಟ್ಟು ಅಣ್ಣನ ಅನ್ವೇಷಣೆಗೆ ಹೊರಡುತ್ತಾರೆ. ಪುಟ್ಟ ಅನಿತಾಳ ಕಣ್ಣೀರಕೋಡಿಯನ್ನು ನೆನಪಿಸಿಕೊಂಡರೆ ಕರುಳು ಕಿತ್ತು ಬರುತ್ತದೆ.
ಊರವರ ಉದ್ವೇಗ ಕೂಡಾ ತಾರಕಕ್ಕೇರುತ್ತದೆ. ಕೊನೆಗೊಮ್ಮೆ ರಾಮಲಕ್ಷ್ಮಣ ಇಬ್ಬರೂ ಸೌಖ್ಯದಿಂದ ಮನೆಗೆ ಮರಳುತ್ತಾರೆ.
ಎಲ್ಲವೂ ಸುಖಾಂತ್ಯ.
ಮೈ ನವಿರೇಳಿಸುವ ನಿಜ ಘಟನೆ.
ಪ್ರಕೃತಿ ಮುನಿದಾಗ ಅದರ ಅವತಾರ ಅದೆಷ್ಟು ರೌದ್ರ! – ಎಂದು ತಿಳಿಯಲು ಈ ಲೇಖನ ಓದಲೇ ಬೇಕು.
೨೦. ಚಿತ್ರಸ್ಪರ್ಧೆ …
ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಗಾದೆ ಇದೆ.
ಚಿತ್ರಬರೆದವರಿಗೆ ತಮ್ಮ ಚಿತ್ರವೇ ಚೆನ್ನಾಗಿ ಕಾಣುತ್ತದೆ.
ನಮ್ಮ ಅನಿತಾಳಿಗೂ ಹಾಗೇ ಅನ್ನಿಸಿತು. ತೀರ್ಪುಗಾರರ ತೀರ್ಪು ಕೇಲ್ಳಿ ಅನಿತಾಳಿಗೆ ಭ್ರಮನಿರಸನ ಆದ ಅನುಭವ!
ನಮ್ಮಲ್ಲಿ ಹೆಚ್ಚಿನವರಿಗೆ ಹೀಗೆಯೇ ಆಗಿರಬೇಕಲ್ಲವೇ?….
೨೧. ಟಿ ವಿ ಎಂಬ ಸುಂದರಿ…
ಟೀವಿ ಎಂಬ ಸುರಸುಂದರಿಯು ಪುಟ್ಟ ಹಳ್ಳಿಗಳಿಗೂ ಧಾಳಿ ಇಟ್ಟ ಅಂದಿನ ದಿನಗಳ ನೆನಪಿನ ಪುನರಾವರ್ತನೆ.
ಹಳೆಯ ನೆನಪುಗಳನ್ನೆಲ್ಲಾ ಬೆದಕಿ ಹಾಕುವ ಲೇಖನ ಓದಿಯೇ ಸವಿಯ ಬೇಕು.
೨೨. ಅನಂತ ಶಯನ ಮತ್ತು ಗುಪ್ತ ನಿಧಿ ….
ತಿರುವಾಂಕೂರು ಮಹಾರಾಜರುಗಳು ಅನಂತಶಯನನ ಸುಪರ್ದಿಗೆ ಒಪ್ಪಿಸಿ ಕಾಪಾಡುತ್ತಾ ಬಂದ ನಿಧಿ ಯಾಕೆ ಅಷ್ಟು ಸದ್ದು ಮಾಡಿತು?
ಅನಿತಾಳ ಆಪ್ತರ ಮನೆಗೂ “ನಿಧಿ” ಧಾಳಿ ಇಟ್ಟ ಕಥೆ ಬಹು ಸ್ವಾರಸ್ಯಕರ ಆಗಿದೆ.
೨೩. ಬಣ್ಣದ ಕಡ್ಡಿ
ಪ್ರೈಮರೀ ಶಾಲಾ ಮಕ್ಕಳಿಗೆ ಬಣ್ಣದ ಕಡ್ಡಿಯೇ ಒಂದು “ಗಗನ ಕುಸುಮ” ಆಗಿದ್ದ ಆ ಕಾಲದ ಕಥೆ. ಈ ಅತ್ಯಮೂಲ್ಯ ಬಣ್ಣದಕಡ್ಡಿಯ ಕಥೆಯೇ ಈ ಪುಸ್ತಕದ ಶಿರೋಬರಹ!
ನಾನ್ಯಾಕೆ ಒಡ್ಡು ಒಡ್ಡಾಗಿ ಕಾಮೆಂಟಿಸಿ ಸುಂದರರವಾದ ಬಣ್ಣದ ಬಳಪವನ್ನು ಪುಡಿಪುಡಿ ಮಾಡಲಿ?
ಇದು ಅನಿತಾಳ ಬಾಯಿಯಿಂದಲೇ ಕೆಳಬೇಕಾದ ಕಥೆ.
೨೪. ಆಕೀರ್ ಟೂಟ್ ಜಾತಾ ಹೆ …
ಅನಿತಾಳೇ ದೈರ್ಯಸ್ಥೆ ಅಂದುಕೊಂಡರೆ ನಮ್ಮ ನರೇಶ್ ಇನ್ನೂ ಒಂದು ಹೆಜ್ಜೆ ಮುಂದೆ!
ಮೂಳೆ ಮುರಿದುಕೊಂಡು ಆಸ್ಪತ್ರೆಗೆ ದಾಖಲಾದರೂ ನರೇಶ್ ವಿಚಲಿತರಾಗದೇ ಜೋಕ್ ಹೇಳಿದಂತೆ ತನ್ನ ಮಡದಿಗೆ ವಿಷಯ ತಿಳಿಸುತ್ತಾರೆ. ಅಸ್ಪತ್ರೆಯನ್ನು ತಲುಪಿದ ಕ್ಷಣದಲ್ಲೇ ಅನಿತಾಳ ಚಪ್ಪಲಿ ಕಿತ್ತು ಕೈಗೆ ಬರುತ್ತದೆ.
ಸದಾ ಪ್ರೀತಿಯಿಂದ ಹೊಸಾ ಚಪ್ಪಲಿ ತಂದು ಕೊಡುವ ನರೇಶ್ ಅವರ ಕೈಕಾಲುಗಳು ಪ್ಲಾಸ್ಟರ್ ಕಾಸ್ಟಿನ ಒಳಗೆ.
ಅನಿತಾಳ ಚಿಂತೆ – ಯಾರಕೈಯ್ಯಲ್ಲಿ ಚಪ್ಪಲಿ ತರಿಸಲಿ? – ಅಂತ.
ಕೊನೆಗೊಬ್ಬ ಆಪದ್ಭಾಂಧವರು ಹೊಸಾ ಚಪ್ಪಲಿಗಳನ್ನು ತಂದು ಕೊಡುತ್ತಾರೆ. ಆ ಪಾದರಕ್ಷೆಗಳ ಹೈ ಹೀಲ್ಸ್ ಕಂಡೇ ಅನಿತಾ ಮೊದಲಿಗೆ ಅಧೀರಳಾಗುತ್ತಾಳೆ.
ಧೈರ್ಯಂ ಸರ್ವತ್ರ ಸಾಧನಮ್! – ಅಂತ ಉರು ಹೊಡೆಯುತ್ತಾ ಅನಿತಾ ಆ ಚಪ್ಪಲಿಗಳನ್ನು ಧರಿಸಿ ಅವನ್ನು ಮಣಿಸುತ್ತಾಳೆ.
ಈ ಮೊಂಡು ಧೈರ್ಯಕ್ಕೆ ಕಾರಣ ಏನು?- ಅಂತ ಕೇಳಿದರೆ ………… ತನ್ನ ಪತಿಯ ರೂಮಿನ ಪಕ್ಕದ ರೂಮನ್ನು ಮೊದಲು ತನಗಾಗಿ ಕಾದಿರಿಸಿಅ ನಂತರವೇ ಹೊಸ ಚಪ್ಪಲಿಯತ್ತ ಕಾಲು ನೀಡಿದೆ! – ಅನ್ನುತ್ತಾಳೆ.
ಆ ಮೂಳೆ ಮುರುಕರ ಆಸ್ಪತ್ರೆಯಲ್ಲಿ ತಾನು ಕಾದಿರಿಸಿದ ರೂಮ್ ಇನ್ನೂ ಹಾಗೆಯೇ ಇದೆ! ಮುಂಜಾಗ್ರತೆ ವಹಿಸಿಯೇ ನಾನು ಇಂಥಹಾ ಧೈರ್ಯ ತಂದು ಕೊಂಡೆ! – ಅಂತ ತನ್ನ ಧೈರ್ಯದ ಬಂಡವಾಳ ಬಿಚ್ಚುತ್ತಾಳೆ.
ಶಕುನಗಳಲ್ಲಿ ನಂಬಿಕೆ ಇಲ್ಲದ ಅನಿತಾ, “ ನಾನು ಇನ್ನೂ ಆ ಕೋಣೆಯನ್ನು ಉಪಯೋಗಿಸಬೇಕಾದ ಸಂದರ್ಭ ಉಂಟಾಗಿಲ್ಲ!’ ಅನ್ನುತ್ತಾಳೆ.
೨೫. ಆಟಿ ಪಾಯಸ
ದಕ್ಷಿಣ ಕನ್ನಡದ “ಆಟಿ ಮದ್ದಿ”ನಂತೆ ಕೊಡವರ “ಆಟಿ ಪಾಯಸ”. ಈ ಆಟಿ ಪಾಯಸ ಪುಟ್ಟ ಅನಿತಾಳ ಕುತೂಹಲ ಕೆರಳಿಸುತ್ತದೆ.
ಬಹಳ ಸಿಹಿ ಮತ್ತು ಸ್ವಾದಿಷ್ಟ ಅಂತ ಅದನ್ನು ಬಾಯಿಗೆ ಹಾಕಿಕೊಂಡರೆ “ಅದು ಒಗರು ಮತ್ತು ಕಹಿ!” – ಆ ಪಾಯಸಕ್ಕೆ ಕೊಡಗಿನ ಜೇನನ್ನು ಬೆರೆಸಿ ಕುಡಿದು ತನ್ನ ಪಾಯಸದ ಲೋಟ ಖಾಲಿ ಮಾಡಿ ಪುಟ್ಟ ಅನಿತಾ ಎಲ್ಲರಿಂದಲೂ ಶಹಭಾಸ್ ಗಿರಿ ಪಡೆಯುತ್ತಾಳೆ.
೨೬. ಭಾದ್ರಪದಾ ಶುಕ್ಲದಾ ಚೌತಿಯಂದು ….
ಇದು “ಚೌತಿಯ ಚಂದ್ರನನ್ನು ನೋಡಿ, ತಾನು ನೋಡಲೇ ಇಲ್ಲ ! …..” ಎಂದು ಸಾಧಿಸಿ ಹೇಳುವ ಪುಟ್ಟ ಅನಿತಾಳ ವ್ಯಾಖ್ಯಾನ.
೨೭. ಅಡುಗೆಮನೆಯ ಸಂಡೇ ಎಪಿಸೋಡ್ …
ಭಾನುವಾರ ಅಡುಗೆ ಮನೆಗೆ ರಜಾ ಹಾಕಿ ತನ್ನ ಪತಿ ಮತ್ತು ಮಗನನ್ನು ಅಡುಗೆ ಕೆಲಸಕ್ಕೆ ಹಚ್ಚಿ ಪೇಪರ್, ಪುಸ್ತಕ ಓದುವ ಕನಸು ಕಂಡ ಗೃಹಿಣಿ ಅನಿತಾಳ ಅನುಭವ.
ಕೊನೆಗೂ ತಾನು ಸೋಲದೇ ತನ್ನ ಪುಟ್ಟ ಸಂಸಾರದೊಂದಿಗೆ ಆ ಭಾನುವಾರ ಮಧ್ಯಾಹ್ನ ಅನ್ನ ಮಜ್ಜಿಗೆ ಮತ್ತು ಉಪ್ಪಿನಕಾಯಿ ಮೆದ್ದ ಕಥೆ.
೨೮. ಗೋವಿಂದಾಯ ನಮಃ
ಗೋವಿಂದ ಎಂಬ ಮರಕಡಿಯುವ ಮಹಾನುಭಾವನ ಪುರಾಣ. ಓದಿಯೇ ಸವಿಯಬೇಕು.
೨೯. ನಗಕ್ಕೂ ಪರ್ಮಿಟ್ಟಾ …?
ಅನಿತಾಳ ನಕ್ಕು ನಗಿಸುವ ಕಲೆ ಶುದ್ಧ ನಗೆಯ ಹೊನಲು.
ತಿಳಿಹಾಸ್ಯದ ಜತೆಗೆ ಸ್ವಾನುಭವದ ಕ್ಷಣಗಳು.
ಯಾರಮನಸ್ಸಿಗೂ ನೋವುಂಟುಮಾಡದ ನಗೆಯ ಬೆಳದಿಂಗಳು.
ಇದಕ್ಕಿಂತ ಹೆಚ್ಚಿಗೆ ನಾನೇನೂ ಬರೆಯಲಾರೆ.
ಇದೇ ಈ ಪುಸ್ತಕದ ಗುಣ ವಿಶೇಷ.
೩೦. ಒಗ್ಗರಣೆ
ಯಾವುದೇ ಭಾರತೀಯ ಅಡುಗೆ ಇರಲಿ, ಅದಕ್ಕೊಂದು ಒಗ್ಗರಣೆ ಹಾಕಿ ಕೆಳಗಿಳಿಸಲೇ ಬೇಕು.
ಭಾರತೀಯ ಅಡುಗೆಯ ಒಗ್ಗರಣೆಗೆ ಆರುಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸ ಇದೆಯಂತೆ.
ಭೀಮಸೇನ ಮತ್ತು ನಳ ಮಹಾರಾಜರು ಕೂಡಾ ತಮ್ಮ ಒಗ್ಗರಣೆಯ ಕಂಪಿನಿಂದಲೇ ಹೆಸರು ಪಡೆದವರಂತೆ!
ನಮ್ಮ ಅನಿತಾ ದೇವಿ ಅವರೂ, ಗಡಿಬಿಡಿಯಲ್ಲಿ ಒಂದು ದಿನ ಪಾಯಸಕ್ಕೆ ಒಮ್ಮೆ ಒಗ್ಗರಣೆ ಹಾಕಿಬಿಟ್ಟರಂತೆ!
ಆನಂತರ ಆಪಾಯಸವನ್ನೇ ರಿಪೇರಿ ಮಾಡಿದ ರಹಸ್ಯವನ್ನು ತಾವೆಲ್ಲರೂ ಈ ಪುಸ್ತಕವನ್ನು ಓದಿಯೇ ತಿಳಿದುಕೊಳ್ಳಬೇಕು.
ನಮ್ಮ ಹುಡುಗಿಯನ್ನು ನಾನು ಅತಿಯಾಗಿ ಹೊಗಳಿದರೆ ಅದು ನನ್ನ ಡಂಬಾಚಾರ ಅನ್ನಿಸೀತು.
ನೀವೇ ಒಮ್ಮೆ ಓದಿ ನೋಡಿ.
ಶುಭಂ!






ಉತ್ತಮ ಮುನ್ನುಡಿ
Chennagide mamana maathugalu