ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೂರ್ಣಿಮಾ ಮಾಳಗಿಮನಿ ಓದಿದ ‘ಪ್ಯಾರಸೈಟ್’

ಪೂರ್ಣಿಮಾ ಮಾಳಗಿಮನಿ

ಕಾರ್ತಿಕಾದಿತ್ಯ ಅವರ ಹೊಸ ಪುಸ್ತಕ ಪ್ಯಾರಸೈಟ್ ಓದಿ ಬೆರಗಾದೆ. ಕಾನ್ಕೇವ್ ಮೀಡಿಯಾ ಅಂಡ್ ಪಬ್ಲಿಕೇಷನ್ಸ್ ಪ್ರಕಟಿಸಿರುವ ಈ ಪುಸ್ತಕ ಮೂಡಿಗೆರೆಯ ಕಾಡು ಮೇಡುಗಳಲ್ಲಿ ಅಲೆದಾಡಿಸಿತು.

ಇದೇ ಹೆಸರಿನ ಒಂದು ಕೊರಿಯನ್ ಸಿನಿಮಾ ನೋಡಿದ್ದ ನನಗೆ ಇಲ್ಲೂ ಮತ್ತೊಬ್ಬ ಮನುಷ್ಯನ ಮೇಲೆ ಅವಲಂಬಿಸಿರುವ ಮನುಷ್ಯರ ಕಥೆ ಇರಬಹುದು ಅನಿಸಿತ್ತು. ಆದರೆ ಇದೊಂದು ಮಲೆನಾಡು ಸೀಮೆಯ ಕಾಡುಗಳಲ್ಲಿ ಕಾಣುವ ಬಳ್ಳಿಯ ಕಥೆ. ಇದೇನು ಸಾಮಾನ್ಯ ಬಳ್ಳಿಯಲ್ಲ. ಇದು ದಾಟು ಬಳ್ಳಿ! ಇದನ್ನು ಒಮ್ಮೆ ದಾಟಿದರೆ ಹುಚ್ಚು ಹಿಡಿದವರಂತೆ ಎಲ್ಲೆಲ್ಲೋ ತಿರುಗಾಡಿ ದಾರಿ ತಪ್ಪಿ ಮನೆ ಸೇರುವುದೇ ಅನುಮಾನ.
ಇಂಥ ಒಂದು ಬಳ್ಳಿಯ ಕಟ್ಟುಕತೆಗಳನ್ನು ಕೇಳಿ ಕೇಳಿ ರೋಸಿ ಹೋಗಿದ್ದ ನಿರೂಪಕ ಅದನ್ನು ಹುಡುಕಿಯೇ ತೀರಬೇಕೆಂದು ನಡೆಸುವ ಶೋಧನೆಯೇ ಇದರ ಕಥಾವಸ್ತು.

ನಿರೂಪಕನಿಗೆ ಈ ಬಳ್ಳಿ ಕಂಡಿತೇ? ನಿಜವಾಗಿಯೂ ದಾರಿ ತಪ್ಪಿದವರ ಹಿಂದೆ ಬಳ್ಳಿಯ ಕೈವಾಡ ಇತ್ತೇ? ಬಳ್ಳಿ ಸ್ಥಳಾಂತರ ಹೇಗೆ ಮಾಡುತ್ತದೆ ಎನ್ನುವುದನ್ನೆಲ್ಲಾ ತಿಳಿದುಕೊಳ್ಳಲು ಈ ಒಂದು ಅದ್ಭುತ ಚಾರಣದಂಥ ಕೃತಿಯನ್ನು ನೀವು ಓದಲೇಬೇಕು.

ಕಾರ್ತಿಕ್ ಅವರ ಲೋಕಲ್ ಭಾಷೆ, ಕೊನೆವರೆಗೂ ಕುತೂಹಲ ಉಳಿಸಿಕೊಳ್ಳುವಂತೆ ಬರೆದಿರುವ ಶೈಲಿ, ಅಲ್ಲಲ್ಲಿ ಬಂದು ಹೋಗುವ ವಿಶಿಷ್ಟ ಪೋಷಕ ಪಾತ್ರಗಳು, ಅವರ ಅಗಾಧ ಓದಿನ, ಸಂಶೋಧನೆಯ ಫಲವಾದ ಅಚ್ಚರಿ ಹುಟ್ಟಿಸುವ ಸಂಗತಿಗಳು ಎಲ್ಲಾ ಇಷ್ಟವಾದುವು. ಇದನ್ನು ಬರೀ ವಿಚಾರಗಳ ಗುಡ್ಡೆಯಾಗಿಸದೆ, ಅಂಕಿ ಅಂಶಗಳಿಂದ ತುಂಬಿರುವ ಸಂಶೋಧನೆಯ ವರದಿಯನ್ನಾಗಿಸದೆ ಆಸಕ್ತಿ ಹುಟ್ಟುವಂತೆ ಹೇಳಿಕೊಂಡು ಹೋಗಿರುವುದು ಪ್ರಶಂಶಿಸಬಹುದಾದ ವಿಷಯ.

ಕಾರ್ತಿಕಾದಿತ್ಯ ತೇಜಸ್ವಿ ಅವರ ದೊಡ್ಡ ಅಭಿಮಾನಿ ಎನ್ನುವುದೂ ಇಲ್ಲಿ ಕಾಣಸಿಗುತ್ತದೆ. ತೇಜಸ್ವಿ ಅವರ ಕರ್ವಾಲೋ ಕೃತಿಯನ್ನು ನೆನಪಿಸುವ ಪ್ಯಾರಸೈಟ್ ನಲ್ಲಿ ತೇಜಸ್ವಿ ಅವರ ಟ್ರೇಡ್ ಮಾರ್ಕ್ humor ಇಲ್ಲ ಮತ್ತು ಸಂಗತಿಗಳನ್ನು ಜಡ್ಜ್ ಮಾಡದೇ, ಭೋದನೆಯಂತಾಗಿಸದೆ, ಹೊರಗಿನಿಂದ ನಿಂತು ನೋಡಿ ಹೇಳಲು ಆಗಿಲ್ಲ ಎನ್ನುವ ಕೆಲವು ಅಂಶಗಳನ್ನು ಬಿಟ್ಟರೆ ಕರ್ವಾಲೋ ಓದಿನಂತೆಯೇ ಖುಷಿ ಕೊಟ್ಟಿತು ಕಾರ್ತಿಕ್ ಅವರ ಬರಹ.

ಕೆಲವು ಕಡೆ ಸಣ್ಣ ಪುಟ್ಟ structural editing ಬೇಕಿತ್ತು ಅನಿಸಿತು. ದಾಟು ಬಳ್ಳಿಯ ಒಂದು ಚಿತ್ರ ಮುಖಪುಟದಲ್ಲೋ, ಒಳಗೋ ಹಾಕಿದ್ದರೆ ಚೆನ್ನಾಗಿತ್ತು. ತಮ್ಮ ವೃತ್ತಿಯಿಂದ, ಚಾರಣದಿಂದ ಸಿಗುವ ಅನುಭವಗಳನ್ನು ಒಂದು ವಿಭಿನ್ನವಾದ ಕೃತಿಯಲ್ಲಿ ಹಿಡಿದಿಟ್ಟಿರುವ ಕಾರ್ತಿಕಾದಿತ್ಯ ಅವರಿಗೆ ಅಭಿನಂದನೆಗಳು. ಈ ಪ್ರಯತ್ನಕ್ಕೆ ಸಾಥ್ ನೀಡಿರುವ ಚೆಂದದ ಹೆಸರಿನ ಕಾನ್ಕೇವ್ ಮೀಡಿಯಾ ಅಂಡ್ ಪಬ್ಲಿಷರ್ಸ್ ಗೂ ಅಭಿನಂದನೆಗಳು.

Thank you Jameel Sawanna sir for recommending this book.

‍ಲೇಖಕರು Admin

1 March, 2022

1 Comment

  1. T S SHRAVANA KUMARI

    ಆಸಕ್ತಿದಾಯಕವಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading