ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೂಜಾಳಿಗೆ ಕರೆಮಾಡಿದೆ..

ಕಾಣದ ಕಡಲಿಗೆ ಹಂಬಲಿಸಿದೆ ಮನ..

ಹೆಜ್ಜೆ 06

ಯೋಜನೆಯ ಸಿದ್ಧತೆ

ಬೆಳಗಿನ ಜಾವ 03:00 ಗಂಟೆಗೆ ಎದ್ದು ಮುಖ ತೊಳೆದು, ಹೊರ ಬಂದೆ.

ಅಪ್ಪಾವ್ರು ಆಗಲೇ ಎದ್ದು ಒಬ್ಬರೇ ಮೆಟ್ಟಿಲುಗಳನ್ನು ಹತ್ತಿಳಿದು ವ್ಯಾಯಾಮ ಮಾಡುತ್ತಿದ್ದರು. ನಾನೂ ಅದೇ ಹಜಾರದಲ್ಲಿ ನಡೆದಾಡಲು ಶುರುಮಾಡಿದೆ. ಸರಿ ನಾಳೆಯಿಂದ ಯಾವ ರೀತಿ ನನ್ನ ಪಯಣ ಶುರುಮಾಡುವುದು ಎಂದು ಯೋಚನೆ ಮಾಡುತ್ತಾ ಕುಳಿತೆ. ಒಂದು ಯೋಜನೆ ಹೊಳೆಯಿತು.

avadhi- column- rahul- low res- editedಅಪ್ಪಾವ್ರ ಹತ್ತಿರ ಮಾತನಾಡಿ ಮನಗುಂಡಿ ಪ್ರೌಢಶಾಲೆಯಲ್ಲಿ ಉಪನ್ಯಾಸ ಮಾಡಲು ಅವಕಾಶ ಕೊಡಿಸುವಂತೆ ವಿನಂತಿಸಿಕೊಳ್ಳುವುದು. ಅವಕಾಶ ಸಿಕ್ಕರೆ ಪರಿಸರ, ಸ್ವಚ್ಛತೆ, ವಿವಿಧತೆಯಲ್ಲಿ ಏಕತೆಯಂತಹ ವಿಷಯಗಳ ಬಗ್ಗೆ ಉಪನ್ಯಾಸಕೊಟ್ಟು ಸಾಧ್ಯವಾದರೆ ಸ್ವಚ್ಛತಾ ಅಭಿಯಾನ ನಡೆಸಿ, ಒಂದಷ್ಟು ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದೆಂದು  ಎಣಿಸಿದೆ. ಹೀಗೆ ಶಾಲಾ ಮಕ್ಕಳನ್ನು ಒಗ್ಗೂಡಿಸಿ ಸಕ್ರಿಯರಾಗಿ ಆಗಾಗ ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದು. ಕಾರ್ಯಕ್ರಮ ಯಶಸ್ವಿಯಾದಲ್ಲಿ, ಶಾಲೆಯ ಮುಖ್ಯೋಪಾಧ್ಯಾಯರಿಂದ ಒಂದು ಶಿಫಾರಸ್ಸಿನ ಪತ್ರ ಪಡೆದು ಮುಂದಿನ ಶಾಲೆಗೆ ಹೋಗುವುದು.

ಆದರೆ ಎಲ್ಲಿಂದ ಎಲ್ಲಿಗೆ ಹೋಗುವುದು ಯಾವ ಜಿಲ್ಲೆಗಳನ್ನು ಸೇರಿಸಿಕೊಳ್ಳಬೇಕೆಂಬುದರ ಬಗ್ಗೆ ಗೊಂದಲವಿತ್ತು. ಹೇಗಿದ್ದರು ಇವತ್ತಿನ ಸಂಜೆಯೇ ಶಿಬಿರ ಮುಗಿಯಲಿದೆ. ಅಪ್ಪಾವ್ರ ಹತ್ತಿರ ಹೋಗಿ ಚರ್ಚೆ ಮಾಡಬೇಕು ಎಂದೆನಿಸಿತು. ಈ ಆರು ದಿನಗಳ ಉಪವಾಸ ಮತ್ತು ಯೋಗ ನನ್ನಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿತ್ತು. ಧೃಡತೆ ತಂದಿತ್ತು. ಇಚ್ಚಾಶಕ್ತಿ ಬೆಳೆದಿತ್ತು.

ಅಪ್ಪಾವ್ರು ನಾನು ಹಜಾರದಲ್ಲಿ ಕುಳಿತುಕೊಂಡ ಸದ್ದನ್ನು ಗ್ರಹಿಸಿ. “ಯಾರು?” ಎಂದು ಕೇಳಿದರು.

“ಮನೆ ಮಡದಿಯ ಬಿಟ್ಟು ರಸ್ತೆಗೆ ಬಂದೆ,

ರಸ್ತೆಯ ಸವೆದು, ನಗರ ಪಟ್ಟಣಗಳ ಸುತ್ತಿ ಹಳ್ಳಿಗೆ ಬಂದೆ,

ಹಳ್ಳಿಯ ಬಿಟ್ಟು, ಗುಡ್ಡಗಳ ದಾಟಿ ಮಹಾಮನೆಗೆ ಬಂದೆ,

ಮಹಾಮನೆಯ ಪ್ರಸಾದವನ್ನು ಉಂಡು ನಾ ಸೋಮಾರಿಯಾಗದಿದ್ದರೆ ಸಾಕಲ್ಲವೇ?” ಎಂದೆ.

ಅದು ಅವರಲ್ಲಿ ಜೋರಾದ ನಗು ತರಿಸಿತು. “ಓ, ರಾಹುಲ್. ಏಕೆ ಇಷ್ಟು ಬೇಗ ಎದ್ದಿರುವೆ. ಏಕೆ ನಿದ್ರೆ ಬರಲಿಲ್ಲವೇ?” ಎಂದು ಕೇಳಿದರು.

“ಯಾಕೋ ಕಾಣೆ, ಎಚ್ಚರವಾಯಿತು. ಮತ್ತೆ ನಿದ್ರೆ ಬರಲಿಲ್ಲ, ಬರೆಯಲು ಶುರುಮಾಡಿದೆ” ಎಂದೆ.

“ಒಳ್ಳೇದು, ಒಳ್ಳೇದು” ಎಂದು ಹೇಳಿ ತಮ್ಮ ವ್ಯಾಯಾಮವನ್ನು ಮುಂದುವರಿಸಿದರು.

ನನ್ನ ಕೊಳೆಯಾದ ಬಟ್ಟೆ ಬರೆಗಳನ್ನು ಒಗೆದು ಒಣಗಿಸಲು ಇಟ್ಟು, ಸ್ನಾನ ಮುಗಿಸಿ ಪಾನಕ ಕುಡಿದು, ಬೆಳಗಿನ ಪ್ರಸಾದವನ್ನು ಶಿಬಿರಾರ್ಥಿಗಳಿಗೆ ಬಡಿಸಿ, ಕೊಟ್ಟಿಗೆಗೆ ಹೋಗಿ ಕುಳಿತೆ. ಸುರೇಶ ಹಸುಗಳನ್ನು ಮೇಯಿಸಲು ಹೊರಡಲು ಸಿದ್ಧನಾಗಿ ನಿಂತಿದ್ದ.

“ಸುರೇಶವರೇ ನಾನು ನಿಮ್ಮ ಜೊತೆ ಬರಲೇನು?” ಎಂದು ನನ್ನ ಇಚ್ಛೆಯನ್ನು ಹೊರಗಿಟ್ಟೆ.

“ನೀವ್ಯಾಕ್ರಿ ನಮ್ ಕೂಡ ಗುಡ್ಡ ಕಾಡು ಅಲೀತೀರ. ನಿಮ್ಗ ಈ ಉಸಾಬರಿ ಚಲೋ ಆಗೋದಿಲ್ಲ ನೋಡ್ರಿ” ಎಂದು ಹೇಳಿದ.

“ನಿಂಗ್ಯಾಕೋ ಆ ಯೋಚನೆ? ನೀ ಮಾಡೋ ಕೆಲಸನೆಲ್ಲಾ ನಾನೂ ಮಾಡ್ತೀನಿ ಇವತ್ತು. ನಿನ್ನ ಜೊತೆ ಕರೆದುಕೊಂಡು ಹೋಗು ಅಷ್ಟೇ” ಎಂದು ಜಬರ್‍ದಸ್ತ್ ಮಾಡಿದೆ.

“ಸರಿ ಬರ್ರೀ, ಆ ಎರಡು ಆಕಳು ಒಳ್ಳೆವು. ಇವೆರಡನ್ನ ಹಿಡಕೊಂಡ್ ನನ್ನ ಕೂಡ ಬರ್ರೀ” ಎಂದು ಒಪ್ಪಿಕೊಂಡನು.

joxi_screenshot_1466406715846ಎರಡು ಹಸುಗಳ ಮೂಗುದಾರವನ್ನು ಹಿಡಿದುಕೊಂಡು ಅವನ ಜೊತೆ ಹೊರಟೆ. ಇಬ್ಬರೂ ಕೂಡಿ ಒಟ್ಟು ಎಂಟು ಹಸುಗಳು ಎರಡು ಕರುಗಳು ಹೊಡೆಕೊಂಡು ಹೋಗಿ ಗುಡ್ಡದ ಕುರಚಲು ಕಾಡುಗಳನ್ನು ಅಲೆದು ಮೇಯಿಸಿಕೊಂಡು, ಮಧ್ಯಾಹ್ನದ ಊಟದ ಹೊತ್ತಿಗೆ ವಾಪಸ್ ಬಂದೆವು. ಮಧ್ಯಾಹ್ನದ ಊಟವನ್ನು ಬಡಿಸಿ, ಪಾನಕವನ್ನು ಕುಡಿದು ಹೊರಗೆ ಬಂದರೆ ಎಲ್ಲೂ ಕಾಂತಪ್ಪಜ್ಜ ಕಾಣಲಿಲ್ಲ. ವಿಚಾರಿಸಿದಾಗ ತಮ್ಮ ಊರಿಗೆ ಹಿಂತಿರುಗಿದರೆಂದು ತಿಳಿಸಿದರು. ಈ ಮೂರ್ನಾಲ್ಕು ದಿನಗಳಲ್ಲಿ ನಮ್ಮಿಬ್ಬರ ನಡುವೆ ಒಂದು ಭಾಂದವ್ಯ ಬೆಳೆದಿತ್ತು. ನನಗೆ ಒಂದು ಮಾತು ಹೇಳಿ ತೆರಳಬಾರದೇ ಎಂಬ ಬೇಸರ ಕಾಡಿತು. ಆಶ್ರಮದಲ್ಲಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ಜೀವನದಲ್ಲಿ ಹೀಗೆ ಬಂದು ಹಾಗೆ ಹೋಗುವರೇ ಹೆಚ್ಚು ಪರಿಣಾಮ ಬೀರಿ ಬಿಡುತ್ತಾರೆ. ಕಾಂತಪ್ಪ ಅಜ್ಜ ಹೇಳುತ್ತಿದ್ದ ಕತೆಗಳಲ್ಲಿ ನಾನು ಬಹಳವಾಗಿ ಕಲಿಯುವುದಿತ್ತು. ನನ್ನ ಕೋಣೆಗೆ ಹೋಗಿ ಮಲಗೋಣವೆಂದರೆ ಅಲ್ಲಿ ನಮ್ಮ ಪ್ರವೀಣ ಕಾಲಿಗೆ ಆಶ್ರಮದಲ್ಲಿ ಪಡೆದಿದ್ದ ಔಷದಿ ಎಣ್ಣೆಯನ್ನು ಹಚ್ಚಿ ಮಸಾಜು ಮಾಡಿಕೊಳ್ಳುತ್ತಿದ್ದ. ಗಬ್ಬು ವಾಸನೆ. ನಿದ್ರೆ ಬದಲಿಗೆ ತಲೆ ನೋವು ಬಂತು.

ಎದ್ದು ಕೆಳಗೆ ಬಂದೆ. ಸುರೇಶ ಕೊಟ್ಟಿಗೆ ತೊಳೆಯಲು ಸಿದ್ಧವಾಗಿದ್ದ. ಅವನು ಬೇಡವೆಂದರೂ ಅವನ ಜೊತೆ ಕೈಜೋಡಿಸಿದೆ. ಇಬ್ಬರೂ ಸೇರಿ ಕೊಟ್ಟಿಗೆ ತೊಳೆದೆವು. ಸಂಜೆಯ ಹೊತ್ತಿಗೆ ಶಿಬಿರಾರ್ಥಿಗಳು ಹೊರಡಲು ಸಿದ್ಧವಾಗಿದ್ದರು. ಚಿದಾನಂದ ಅವರೆಲ್ಲರನ್ನು ಆಟೋದಲ್ಲಿ ಕೂರಿಸಿಕೊಂಡು ಹೋಗಿ ಹುಬ್ಬಳ್ಳಿ ಧಾರವಾಡಕ್ಕೆ ಬಿಟ್ಟು ಬಂದ. ನಾನು ಶಿವಾನಂದನನ್ನು ಕರೆದುಕೊಂಡು ಗುಡ್ಡ ಸುತ್ತಿ ಬಂದೆ. ರಾತ್ರಿಯ ಹೊತ್ತಿಗೆ ಚಿಕಿತ್ಸೆ ಪಡೆಯುತ್ತಿರುವವರನ್ನು ಬಿಟ್ಟು, ಆಶ್ರಮ ಬಹುತೇಕ ಖಾಲಿಯಾಗಿತ್ತು. ಭಿಕೋ ಎನ್ನುತ್ತಿತ್ತು. ಇನ್ನು ಇಲ್ಲಿ ಇದ್ದರೆ ನನ್ನ ಕೆಲಸ ಕೆಡುತ್ತದೆಂದು ಅಪ್ಪಾವ್ರ ಹತ್ತಿರ ಹೋಗಿ ನಾನು ಹೊರಡುವುದಾಗಿ ಹೇಳಿ, ನನ್ನ ಯೋಜನೆಯನ್ನು ತಿಳಿಸಿದೆ. ಖುಷಿಯಾದರು. ಮನಗುಂಡಿ ಪ್ರೌಢಶಾಲೆಯಿಂದ ಶುರುಮಾಡುವ ಇಂಗಿತ ವ್ಯಕ್ತಪಡಿಸಿದೆ. ಶಾಲೆಯವರ ಹತ್ತಿರ ಮಾತನಾಡುತ್ತೇನೆ ಎಂದರು.

“ಯಾವ ದಿಕ್ಕಿಗೆ ನಾ ಹೋಗಬೇಕೆಂಬುದು ತಿಳಿಯುತ್ತಿಲ್ಲ” ಎಂದೆ.

“ನಿನ್ನದು ಎಷ್ಟು ತಿಂಗಳ ಯೋಜನೆ” ಎಂದು ಕೇಳಿದರು.

“ಮೊದಲ ಸಲವೇ ದೊಡ್ಡ ಯೋಜನೆ ಹಾಕಿಕೊಂಡರೆ ಕೆಲಸ ಕೆಡುವುದಾಗಿ, ಬರಿ ಎರಡರಿಂದ ಮೂರು ತಿಂಗಳಲ್ಲಿ ಮೈಸೂರು ತಲುಪಬೇಕೆಂದಿದ್ದೇನೆ. ಅಕ್ಟೋಬರ್‍ನ ಕೊನೆಯ ವಾರ ಪೂಜಾಳಿಗೆ ಹೆರಿಗೆಯಾಗಬಹುದು. ಹಾಗಾಗಿ ಆ ಸಮಯಕ್ಕೆ ಸರಿಯಾಗಿ ಮೈಸೂರಿಗೆ ಹೋದರೆ ಸಾಕು” ಎಂದೆ.

“ಹಾಗಿದ್ದರೆ, ಇಲ್ಲಿಂದ ಮೈಸೂರಿನ ದಿಕ್ಕಿಗೆ ಹೊರಡು. ಹೋಗುವ ದಾರಿಯಲ್ಲಿ ಸಿಗುವ ಪ್ರೌಢಶಾಲೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡರೆ ಸಾಕು. ನಿನಗೆ ಅದೇ ಯೋಗ್ಯ ಯೋಜನೆ” ಎಂದರು.

joxi_screenshot_1466406735646“ಸರಿ ಅಪ್ಪಾವ್ರೆ” ಎಂದೆ. ಅಷ್ಟರಲ್ಲಿ ಅಮ್ಮಾವ್ರು ಬಂದರು. ಅಪ್ಪಾವ್ರ ಮುಂದೆ ಆಶ್ರಮದಲ್ಲಿ ನಾನು ಮಾಡಿದ ಸೇವೆಗಳ ಬಗ್ಗೆ ವಿವರಿಸಿ ಹಾಡಿ ಹೊಗಳಿದರು. ನನ್ನ ಕಣ್ಣುಗಳು ನೆನೆಯುತ್ತಿದ್ದವು. ನನ್ನ ಈ ಭಾವುಕತೆಗೆ ಕಾರಣ ಗೊತ್ತಾಗಲಿಲ್ಲ. ನನಗೆ ದಿಕ್ಕು ತೋಚದೆ ಅಲೆಯುತ್ತಿದ್ದಾಗ, ಈ ಆಶ್ರಮ ನನ್ನನ್ನು ನನ್ನ ಗುರಿಯ ಕಡೆಗೆ ನಡೆಯುವಂತೆ ದಾರಿ ತೋರಿಸಿತು ಎಂಬ ಕಾರಣಕ್ಕಿರಬಹುದು.

ಅಲ್ಲಿ ಕುಳಿತು ಅತ್ತರೆ ಅಸಭ್ಯವಾಗುತ್ತದೆಂದು ಅಲ್ಲಿಂದ ಹೊರಡಲು ಸಿದ್ಧನಾದೆ. ಅಪ್ಪಾವ್ರು ತಮ್ಮ ಜೇಬಿಗೆ ಕೈಹಾಕಿ ಕೈಗೆ ಸಿಕ್ಕ ನಲವತ್ತು ರೂಪಾಯಿಯನ್ನು ಕೊಟ್ಟು ಆಶೀರ್ವದಿಸಿದರು. ಅಮ್ಮಾವ್ರು ಇನ್ನೂರು ರೂಪಾಯಿ ಕೊಟ್ಟು ಆಶೀರ್ವದಿಸಿದರು. ಅಷ್ಟರಲ್ಲಿ ನನ್ನ ಕಣ್ಣೀರಿನ ಕಟ್ಟೆ ಒಡೆದಿತ್ತು. ಅಲ್ಲಿ ನಿಲ್ಲಲಾಗಲಿಲ್ಲ. ಆಶೀರ್ವಾದ ಪಡೆದು ದರದರನೆ ಹೊರ ನಡೆದು ಬಂದು ಎಷ್ಟು ಮುಖತೊಳೆದರೂ ಕಣ್ಣೀರು ನಿಲ್ಲಲಿಲ್ಲ.

ಸುಧಾರಿಸಿಕೊಂಡು ನನ್ನ ಕೋಣೆಗೆ ಬಂದು ಪ್ರವೀಣನ ಮೊಬೈಲ್ ತೆಗೆದುಕೊಂಡು ಪೂಜಾಳಿಗೆ ಕರೆಮಾಡಿದೆ. ಸ್ವಲ್ಪ ದಿಗ್ಭ್ರಮೆಯಾದವಳಂತೆ ಕಂಡರೂ ಸಾವರಿಸಿಕೊಂಡು ಚೆನ್ನಾಗಿ ಮಾತನಾಡಿದಳು. ಎಲ್ಲರೂ ಆತಂಕಗೊಂಡಿದ್ದಾಗಿ, ಅಪ್ಪ, ಅಮ್ಮ, ನನ್ನ ಸೋದರಮಾವ ಮತ್ತು ನನ್ನ ತಮ್ಮ ಧರ್ಮಸ್ಥಳಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು, ನಾನು ಮನೆಗೆ ವಾಪಸ್ಸು ಬರಲೆಂದು ಹರಕೆ ಹೊತ್ತು ಬಂದಿರುವುದಾಗಿ ಹೇಳಿದಳು.

ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಬಗ್ಗೆ ಸ್ವಲ್ಪ ಹೊತ್ತು ಮಾತನಾಡಿದೆವು. ಬೇಗನೆ ಮೈಸೂರಿಗೆ ಹಿಂತಿರುಗಬೇಕೆಂದೂ ಮತ್ತು ಬರುವವರೆಗೂ ವಾರಕ್ಕೆ ಎರಡು ಮೂರು ಸಲವಾದರೂ ಕರೆ ಮಾಡಬೇಕೆಂದು ಆಜ್ಞೆ ಇಟ್ಟಳು. ನನಗೆ ಸಮಯ ಸಿಕ್ಕಾಗ ಕರೆ ಮಾಡುತ್ತೇನೆಂದೂ ಮತ್ತು ಈ ನನ್ನ ಯೋಜನೆ ಮುಗಿದು, ನನಗೆ ಮನೆಗೆ ವಾಪಸ್ಸು ಬರಬೇಕೆಂದು ಅನಿಸತೊಡಗಿದಾಗ ಬರುತ್ತೇನೆಂದು ತಿಳಿಸಿದೆ. ಇಬ್ಬರೂ ಕುಶಲೋಪರಿ ವಿಚಾರಿಸಿಕೊಂಡು ಮಾತು ನಿಲ್ಲಿಸಿದೆವು. ಮನಸ್ಸು ತುಂಬಾ ತಿಳಿಯಾಯಿತು. ನನ್ನ ಕಣ್ಣೀರು ಬತ್ತಿ ಹೋಗಿತ್ತು.

ಕೋಣೆಗೆ ವಾಪಸ್ಸು ಹೋದಾಗ ಪ್ರವೀಣನ ಗೊರಕೆಯ ಸದ್ದು ಜೋರಾಗಿಯೇ ಇತ್ತು. ನಾನೂ ಹೋಗಿ ಮಲಗಿದೆ. ನಿದ್ರೆಗೆ ಜಾರಲು ಎರಡು ಕ್ಷಣವೂ ಹಿಡಿಯಲಿಲ್ಲ.

 [ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 31 ಮೈಲುಗಳು]

‍ಲೇಖಕರು Admin

20 June, 2016

4 Comments

  1. Pradeep K S

    Thumba chanagide…..!

    • ರಾದ

      Thank you pradeep 🙂

  2. Vihi wadawadagi

    Heege bandu hage hoguvavare hecchu prabhava beeruttare nijavaglu nija thank u u r making us feel,laugh,enjoy etc

    • ರಾದ

      ಹೌದು ವಿಹಿ. ಕಾಂತಪ್ಪಜ್ಜ ನನಗೆ ಹೇಳದೇ ಆಶ್ರಮದಿಂದ ನಿರ್ಗಮಿಸಿದಾಗ ಮನಸ್ಸಿಗೆ ತುಂಬಾ ಬೇಸರವಾಯಿತು. ಅವನ ಕಥೆಗಳಂತೂ ಅದ್ಭುತ.
      ಲೇಖನವನ್ನು ಮೆಚ್ಚಿದ್ದಕ್ಕಾಗಿ ತಮಗೆ ಧನ್ಯವಾದಗಳು. ಈ ಅಂಕಣದ ಬಗ್ಗೆ ತಮ್ಮ ಸ್ನೇಹಿತರಿಗೂ ವಿಷಯ ಮುಟ್ಟಿಸಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading