ಮಂಜುಳಾ ಹುಲಿಕುಂಟೆ
ನನ್ನದೇ ಭಾಷೆ, ನನ್ನ ನೆಲದಲ್ಲಿ ಅಪರಿಚಿತವಾಗುತ್ತಿರುವ ಹೊತ್ತಿನಲ್ಲೂ, ಕನ್ನಡ ಅನ್ನಭಾಷೆಯಾಗಬೇಕೆಂಬ ಆಸೆ ಹೊತ್ತುಕೊಂಡೇ ಬೆಂಗಳೂರೆಂಬ ಮಾಯಾನಗರದಲ್ಲಿ ಐದಾರು ವರ್ಷಗಳ ಕಾಲ ಅಲೆದಿದ್ದೇನೆ. ಭಾಷೆಯೊಂದರ ಅಳಿವು-ಉಳಿವು ಅದರ ಬಳಸುವಿಕೆಯಲ್ಲೇ ಇರುತ್ತದೆ ಎಂಬುದು ಈಗಾಗಲೇ ಸಾಭೀತಾಗಿರುವ ವಿಚಾರವಾಗಿದ್ದು, ಕನ್ನಡ ಭಾಷೆ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದರತ್ತ ಗಮನ ಹರಿಸುವ ಅನಿವಾರ್ಯ ಇಂದು ಎಂದಿಗಿಂತ ಹೆಚ್ಚಿದೆ. ಕನ್ನಡದ ಸಾಹಿತ್ಯ ಕ್ಷೇತ್ರ ಅತ್ಯಂತ ಸಮೃದ್ಧವಾಗಿದ್ದರೂ ಕನ್ನಡ ಪುಸ್ತಕಗಳ ಪ್ರಕಾಶಕರು ನಷ್ಟದೊಂದಿಗೆ ಜಿದ್ದಿಗೆ ಬಿದ್ದಂತೆ ಸೆಣೆಸುತ್ತಿದ್ದಾರೆ. ಕನ್ನಡ ಸಾಹಿತಿಗಳು, ಲೇಖಕರು ತಮ್ಮದೇ ಅಸ್ಮಿತೆಯೊಂದಕ್ಕೆ ತಡಕಾಡುತ್ತಿದ್ದಾರೆ.
ಇದೆಲ್ಲದರ ಜೊತೆಗೆ ವರ್ಷಕ್ಕೆ 5ಸಾವಿರಕ್ಕಿಂತಲೂ ಹೆಚ್ಚು ಪುಸ್ತಕಗಳು ಪ್ರಕಟಗೊಳ್ಳುತ್ತಿರುವ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜನರಿಗೆ ತಲುಪಲಾಗದೇ ಅಜ್ಞಾತವಾಗಿ ಉಳಿದುಬಿಡುವ ಕೃತಿಗಳೆಷ್ಟೋ, ತಾನು ಲೇಖಕ ಎಂದು ತನ್ನನ್ನೇ ಪರಿಚಯಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಕನ್ನಡದ ಲೇಖಕರಿದ್ದಾರೆ. ಹಾಗೇ ಓದುವ ಹಂಬಲವಿದ್ದರೂ ಪುಸ್ತಕಗಳ ಮಾಹಿತಿ ಸಿಗದೇ ಪರದಾಡುವ ಓದುಗರೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಎಲ್ಲಾ ಸವಾಲುಗಳ ಜೊತೆ ಸೆಣೆಸಾಡುತ್ತಲೇ ಓದುಗ, ಲೇಖಕ, ಪ್ರಕಾಶಕರ ನಡುವೆ ಸೇತುವೆಯಾಗಿ ಕನ್ನಡ ಭಾಷೆ, ಸಾಹಿತ್ಯದ ಒಟ್ಟು ಅಸ್ಮಿತೆಯೊಂದರ ಹುಡುಕಾಟದಲ್ಲಿ ‘ಬುಕ್ ಬ್ರಹ್ಮ’ ರೂಪು ಪಡೆದಿದೆ. ಸಾಹಿತ್ಯ ಪ್ರೇಮಿಗಳು, ಭಾಷಾ ಪ್ರೇಮಿಗಳು, ಹಿರಿಯ ಪತ್ರಕರ್ತರ ಆಸೆಯಂತೆ ಆರಂಭಗೊಳ್ಳುತ್ತಿರುವ ಯೋಜನೆ ‘ಬುಕ್ ಬ್ರಹ್ಮ’. ಇದು ಜಾಗತಿಕ ಜಾಲತಾಣದಲ್ಲಿ ಕನ್ನಡ ಸಾಹಿತ್ಯವನ್ನು ದಾಖಲಿಸುವ ಮಹತ್ವದ ಯೋಜನೆ. ಇಂಥಾದ್ದೊಂದು ಯೋಜನೆ ಕನ್ನಡ ಪುಸ್ತಕ, ಲೇಖಕ, ಪ್ರಕಾಶರ ಮಾಹಿತಿಯನ್ನ ಒಟ್ಟಿಗೆ ನೀಡುವ ಕಾರ್ಯದೊಂದಿಗೆ ಆರಂಭಗೊಳ್ಳುತ್ತಿದೆ.

ಕನ್ನಡದ ಓದುಗರು ಮತ್ತು ಪ್ರಕಾಶಕರ ನಡುವಿನ, ಹಾಗೇ ಓದುಗರ ಮತ್ತು ಲೇಖಕರ ನಡುವಿನ ಅಂತರವನ್ನು ಕಡಿಮೆಗೊಳಿಸುವ ಉದ್ದೇಶದೊಂದಿಗೆ ಆರಂಭವಾಗುತ್ತಿರುವ ಈ ಯೋಜನೆ ಕನ್ನಡದ ಪುಸ್ತಕ ಪ್ರಕಾಶನಗಳ ಬಗ್ಗೆ ತಿಳಿಸಿಕೊಡುವ ನಿಟ್ಟಿನಲ್ಲೂ ಕಾರ್ಯಪ್ರವೃತ್ತವಾಗಿದೆ. ಯೋಜನೆಯ ಬಗ್ಗೆ ತಿಳಿಸಿದಾಗ ಅಚ್ಚರಿಯಿಂದ ಮತ್ತು ಅಷ್ಟೇ ಪ್ರೀತಿಯಿಂದ ಲೇಖಕರು, ಪ್ರಕಾಶಕರು ಓದುಗರು ಸ್ಪಂದಿಸಿದ್ದಾರೆ. ಈಗಾಗಲೇ ಮೂರು ಸಾವಿರಕ್ಕೂ ಹೆಚ್ಚಿನ ಪುಸ್ತಕಗಳು, ಸಾವಿರದ ಐನೂರಕ್ಕೂ ಹೆಚ್ಚಿನ ಲೇಖಕರ ಮಾಹಿತಿಗಳನ್ನು ದಾಖಲಿಸಿರುವ ಬುಕ್ ಬ್ರಹ್ಮ ಇದೇ ಆಗಸ್ಟ್ 15ರಂದು ಅಧಿಕೃತವಾಗಿ ಆರಂಭಗೊಳ್ಳುತ್ತಿದೆ..
ಯಾವುದೇ ಭಾಷೆ, ವಸ್ತು, ವಿಷಯ ಜೀವಂತವಿರಬೇಕಿದ್ದರೆ ಅದು ಜನರ ಸಂಪರ್ಕದಲ್ಲಿ ಹೆಚ್ಚಿರಬೇಕು, ಕಾಲಕ್ಕೆ ತಕ್ಕಂತೆ ಒಗ್ಗಿಕೊಂಡಾಗ ಉಳಿದುಕೊಳ್ಳುವ ಅವಕಾಶಗಳು ಸೃಷ್ಠಿಯಾಗುತ್ತವೆ. ಕನ್ನಡ ಭಾಷೆಗೀಗ ಬೇಕಿರುವುದು ಇಂಥಾದ್ದೇ ಜೀವಂತಿಕೆ. ನಮ್ಮದೇ ಭಾಷೆಯನ್ನು ನಾವು ಬಳಸುವ, ಜಗತ್ತಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.. ಹಾಗಾಗೇ ಭವಿಷ್ಯತ್ತಿನ ಮಾಧ್ಯಮ ಎಂದೇ ಗುರುತಿಸಲ್ಪಡುತ್ತಿರುವ ವೆಬ್, ಡಿಜಿಟಲ್ ಮೀಡಿಯಾದಲ್ಲಿ ಕನ್ನಡವನ್ನ ಅಧಿಕೃತವಾಗಿ ದಾಖಲಿಸಬೇಕು, ಹೆಚ್ಚೆಚ್ಚು ಜನಬಳಕೆಯ ಭಾಷೆಯಾಗಿಸಬೇಕು. ಅದಕ್ಕಿಂತಲೂ ಹೆಚ್ಚಾಗಿ ಓದುಗರನ್ನು ಸಾಧ್ಯವಿದ್ದಷ್ಟೂ ತಲುಪಬೇಕು. ಈ ನಿಟ್ಟಿನಲ್ಲಿ ರೂಪುಗೊಂಡದ್ದೇ ಬುಕ್ ಬ್ರಹ್ಮ ಯೋಜನೆ. ಇದು ಹಿರಿಯ ಪತ್ರಕರ್ತ ದೇವು ಪತ್ತಾರ್ ಅವರ ಸಂಪಾದಕತ್ವದಲ್ಲಿ ಜೀವತಳೆದಿದೆ.
ಯೋಜನೆಯ ಆಳ-ಅಗಲ ಅರಿತಷ್ಟೂ ಹಿರಿದು. ಮೂರು ಹಂತಗಳಲ್ಲಿ ಬುಕ್ ಬ್ರಹ್ಮ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಪುಸ್ತಕಗಳ ಸಮಗ್ರ ಮಾಹಿತಿ, ಎರಡನೇ ಹಂತದಲ್ಲಿ ಅಂತರ್ಜಾಲದಲ್ಲಿ ಪುಸ್ತಕಗಳ ಪ್ರಕಟಣೆ, ನಂತರದಲ್ಲಿ ಕನ್ನಡ ಪುಸ್ತಕಗಳ ಡಿಜಿಟಲೀಕರಣ ಯೋಜನೆಯಿದೆ. ತಂತ್ರಜ್ಞಾನ ಬಳಸಿ ಕನ್ನಡ ಪುಸ್ತಕ ಓದುವ ಸಂಸ್ಕೃತಿಗೆ ಉತ್ತೇಜನ ನೀಡುವ ಕಾರ್ಯ ನಡೆಸಲಾಗುತ್ತಿದೆ. ಕನ್ನಡ ಸಾಹಿತ್ಯದ ಒಲವಿಗಾಗಿ ಬುಕ್ ಬ್ರಹ್ಮ ಒಂದು ಸಣ್ಣ ಪ್ರಯತ್ನದೊಂದಿಗೆ ಆರಂಭವಾಗುತ್ತಿದೆ ಎಂಬುದು ಸಂಸ್ಥೆಯ ಸಿಇಒ ವಿನಯ್ ಕುಮಾರ್ ಅವರ ಅಭಿಪ್ರಾಯ.

ಬುಕ್ ಬ್ರಹ್ಮ ಯೋಜನೆಯ ಮತ್ತೊಂದು ವಿಶೇಷತೆ ಎಂದರೆ ಒಳಗೊಳ್ಳುವಿಕೆ. ಇದು ಕೇವಲ ಒಂದು ಗುಂಪಿನ ಕಾರ್ಯವಲ್ಲ. ಓದುಗರು, ಲೇಖಕರು, ಪ್ರಕಾಶಕರಿಗೂ ಇದೊಂದು ವೇದಿಕೆ. ಸಾಹಿತ್ಯಿಕ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮದ ಬಗ್ಗೆ, ಪುಸ್ತಕದ ಬಗ್ಗೆ ಓದುಗರು, ಲೇಖಕರು, ಪ್ರಕಾಶಕರು, ಮತ್ತು ಆಸಕ್ತರು ನೇರವಾಗಿ ಬುಕ್ ಬ್ರಹ್ಮ ಜಾಲತಾಣಕ್ಕೆ ತಮ್ಮ ಪುಸ್ತಕಗಳ ಅಥವಾ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಬಹುದು. ಇದು ಕನ್ನಡ ಸಾಹಿತ್ಯ ಪ್ರೇಮಿಗಳ ಕೈಪಿಡಿಯಾಗಿಯೂ ಕಾರ್ಯ ನಿರ್ವಹಿಸುತ್ತದೆ. ಜಾಗತಿಕ ಜಾಲತಾಣವಾಗಿರುವ ಬುಕ್ ಬ್ರಹ್ಮ ಆಡಿಯೋ, ವಿಡಿಯೋ ಸೇರಿದಂತೆ ವಿಭಿನ್ನ ಆಯಾಮಗಳನ್ನೂ ಒಳಗೊಂಡಿದೆ.
ಕನ್ನಡ ಭಾಷಾ ಪ್ರೇಮಿಗಳು, ಸಾಹಿತ್ಯದ ಆಸಕ್ತರು, ಓದುಗರು, ಸಾಹಿತ್ಯಿಕ ಒಡನಾಟವಿದ್ದವರು ಈ ಯೋಜನೆಗೆ ಬೆಂಬಲವಾಗಿ ನಿಲ್ಲುತ್ತೀರೆಂಬ ಮಹತ್ತರ ಆಸೆಯೊಂದಿಗೆ ಈ ಆರಂಭ ಮೊದಲಾಗುತ್ತಿದೆ….







ಕನ್ನಡ ಸಾಹಿತ್ಯ ಮತ್ತುಭಾಷೆಯ ಉಳಿವಿಗೆ ಸಹಾಯಕಾರಿ. ನನ್ನ ಬೆಂಬಲ ಇದಕೆ.
ತುಂಬ ಮಹತ್ವದ ಕೆಲಸ…ಭಾಳ ಅಗತ್ಯವಿತ್ತು ಇದು.
ಯಶಸ್ವಿಯಾಗಿ ಸಾಗಲಿ
ಬುಕ್ ಬ್ರಹ್ಮ ಸಮಕಾಲೀನ ಸಾಹಿತ್ಯ ಪ್ರವಾಹದ ವಿಭಿನ್ನ
ಆದರೆ ಅವಶ್ಯಕ ಧಾರೆಯಾಗಿದೆ.
ಭಾರತದ ಬಹುತೇಕ ಭಾಷೆಗಳು ಡಿಜಿಟಲ್ ಅಳವಡಿಕೆಯಲ್ಲಿ ಕನ್ನಡಕ್ಕೆ ಹಿಂದಿಕ್ಕಿವೆ ಎನಿಸುತ್ತದೆ,
ಈ ದಿಸೆಯಲ್ಲಿ ಬುಕ್ ಬ್ರಹ್ಮ ನಕ್ಷತ್ರದಂತೆ ಮೂಡಿ ಬಂದಿದೆ
ತಮ್ಮ ಪ್ರಯತ್ನಕ್ಕೆ ಅಭಿನಂದನೆಗಳು
ಡಿ.ಎಮ್. ನದಾಫ,
ಅಫಜಲಪುರ.
ನಾನು ಹಿರಿಯ ನಾಗರೀಕ
ನಿಮ್ಗಮಗಳ ಅಭಿರುಚಿ ಅನನ್ಯ.
ಶುಭವಾಗಲಿ
ಎಲ್ಲ ವಿಷಯಗಳಲ್ಲಿ ಅಧುನಿಕ ತಂತ್ರಜ್ಞಾನ ನಾಗಾಲೋಟದಲ್ಲಿ ಮುನ್ನುಗ್ಗುತ್ತಿರುವ ಸಂದರ್ಭದಲ್ಲಿ ,ಕನ್ನಡ ಪುಸ್ತಕಗಳ ಬಗ್ಗೆ ಈ ರೀತಿ ಯೋಚಿಸಿ ಕಾರ್ಯರೂಪಕ್ಕೆ ತರುತ್ತಿರುವ ಬುಕ್ ಬ್ರಹ್ಮ ಓದುಗರಿಗೆ ಹೊಸ ಲೋಕವನ್ನೆ ತೆರೆದಿಡುತ್ತಿದೆ.
ಅಭಿನಂದನೆಗಳು
A great work… All the best
It is a great initiative and I do not think that such an attempt has been made in any language across the globe. All of us have to support Book Brahma
ಮಹತ್ತರ ಕಾರ್ಯಕ್ಕೆ ಕೈಹಾಕಿದ ನಿಮಗೆ ಶುಭಾಶಯಗಳು.