
ಪುಟ್ಟಸ್ವಾಮಿ ಕೆ
ಹಿರಿಯ ಪತ್ರಕರ್ತ ಶ್ರೀ ಲಕ್ಷ್ಮಣ ಕೊಡಸೆ ಅವರು ಕೋ. ಚನ್ನಬಸಪ್ಪ ಅವರ ಒಡನಾಟದ ಕೆಲವು ಆರ್ದ್ರ ಪ್ರಸಂಗಗಳನ್ನು ಹಂಚಿಕೊಂಡಿದ್ದಾರೆ. ಎಲ್ಲ ಅರ್ಥದಲ್ಲೂ ಎತ್ತರವಾಗಿದ್ದ ಕೋಚೆ ಹಳೆಯ ಕಾಲದ ಉದಾರ ಮಾನವೀಯ ಮೌಲ್ಯಗಳನ್ನು ಪ್ರತಿನಿಧಿಸುತ್ತಿದ್ದ ಹಿರಿಯ ಜೀವ. ಅವರನ್ನು ಸ್ಮರಿಸಿದ ಕೊಡಸೆ ಅವರಿಗೆ ಶರಣು.
ಈ ನೆಪದಲ್ಲಿ ಕೋಚೆ ಅವರ ಜೊತೆಗಿನ ನೆನಪನ್ನು ಹಂಚಿಕೊಳ್ಳುತ್ತಿದ್ದೇನೆ.
ಡಾ. ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಪ್ರದಾನ ಮಾಡಲೂ ಕೋಚೆ ಒಪ್ಪಿಕೊಂಡು ಮಧ್ಯಾಹ್ನ ಮೂರಕ್ಕೇ ಮಂಡ್ಯ ತಲುಪಿದ್ದರು. ಅವರು ಈ ಮುನ್ನ ನಡೆಯುತ್ತಿದ್ದ ಪ್ರಶಸ್ತಿ ಸಮಾರಂಭಗಳಿಗೆ ತಪ್ಪದೇ ಬಂದು ಅಚ್ಚರಿ ಮೂಡಿಸಿ ಸಮಾರಂಭ ಮುಗಿದ ನಂತರವೇ ತೆರಳುತ್ತಿದ್ದರು ಈ ಬಾರಿ ಬಂದ ಕೂಡಲೇ ನನ್ನನ್ನು ಉದ್ದೇಶಿಸಿ ಪ್ರಶಸ್ತಿ ವಿಜೇತರ ಪುಸ್ತಕ ಕೊಡಿ, ಓದಬೇಕು ಎಂದರು. ನನಗೆ ನಾಚಿಕೆಯಾಗಿ ಹತ್ತು ನಿಮಿಷದಲ್ಲಿ ತಂದುಕೊಟ್ಟೆ.
ಅವರು ಸಂಜೆ ಐದೂವರೆವರಿಗೆ ಓದುತ್ತಾ ನಂತರ ಸಮಾರಂಭಕ್ಕೆ ಬಂದರು. ಪಕ್ಕ ಕುಳಿತ ನನ್ನನ್ನು ಕುರಿತು ಪ್ರಶಸ್ತಿ ಪಡೆದವರ ಕೃತಿಯನ್ನು ಅತಿಥಿಗಳಿಗೆ ಇನ್ನು ಮುಂದೆ ಮೊದಲೇ ತಲುಪಿಸಿ: ಅವರ ಕೃತಿಯ ವಿಶೇಷ ತಿಳಿಯದೇ ಪ್ರಶಸ್ತಿ ನೀಡುವುದು ನನಗೆ ಮುಜುಗರ: ಅವರ ಕ್ರಿಯಾಶೀಲತೆಯನ್ನು ಸಭಿಕರಿಗೆ ತಿಳಿಸುವುದು ನಮ್ಮ ಕರ್ತವ್ಯ ಎಂದು ಕಿವಿಮಾತು ಹೇಳಿದರು. ನನ್ನ ನಾಚಿಕೆಯ ಕೆರೆಗೆ ಕೋಡಿಬಿತ್ತು. ಅಂದು ತಮ್ಮ ಓದಿನ ಮಿತಿಯಲ್ಲಿ ಕೃತಿಯ ಬಗ್ಗೆ ಒಳ್ಳೆಯ ಮಾತನಾಡಿದರು.

ಹಿಂದೊಮ್ಮೆ ಪರಿಚಿತರ ಕಥಾ ಸಂಕಲನ ಬಿಡುಗಡೆಗೆ ಹೋಗಿದ್ದೆ. ಅದರ ಬಗ್ಗೆ ಮಾತನಾಡಲು ಒಪ್ಪಿಕೊಂಡಿದ್ದ ಹೆಸರಾಂತ ಕವಯತ್ರಿಯೊಬ್ಬರು ಮಾತನಾಡಲು ಎದ್ದು ಆ ಕೃತಿ ಮಲೆನಾಡಿನ ಅಪರಿಚಿತ ಜಗತ್ತಿನ ವಿವರಗಳನ್ನು ಒಳಗೊಂಡಿರುವುದರಿಂದ ತಾನು ಆ ಜಗತ್ತಿಗೆ ರಿಲೇಟ್ ಮಾಡಿಕೊಳ್ಳಲು ಆಗುತ್ತಿಲ್ಲವೆಂಬ ಅರ್ಥದ ಮಾತನಾಡಿ, ಕ್ಷಮೆಯನ್ನೂ ಕೋರದೆ ಕೃತಿಯ ಬಗ್ಗೆ ಒಂದು ಮಾತು ಹೇಳದೆ ಎರಡು ನಿಮಿಷಕ್ಕೆ ಕೂತರು.
ನಮ್ಮ ಮಿಲಿಟೆಂಟ್ ದಿನಗಳಲ್ಲಾಗಿದ್ದರೆ ನಿನಗೆ ಷೇಕ್ಸ್‌ಪಿಯರ್ ಅರ್ಥವಾದದ್ದು ಹೇಗೆ ಎಂದೆಲ್ಲಾ ಕೇಳಬಹುದಿತ್ತು. ನಾವೂ ಜಡಗೊಂಡಿದ್ದೇವೆ. ದೂರದೂರಿನಿಂದ ಬಂದ ಕತೆಗಾರ್ತಿಗಾದ ಅವಮಾನ ಸಹಿಸಿ ನಾಚಿಕೆ ಸಿಟ್ಟಿನಿಂದ ಎದ್ದುಬಂದೆ. ಆದರೆ ಕೋಚೆಯವರ ಉದಾತ್ತ ವರ್ತನೆ ನೆನೆದಾಗ ಇಂಥ ಪ್ರಕರಣಗಳು ನೆನಪಾಗಿ ಹಿಂಸಿಸುತ್ತವೆ






ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಷಯ