ಪಿ ಪಿ ಉಪಾಧ್ಯ
37
ಐದು ದಿನಗಳ ಶೋಗಳೂ ಹೌಸ್‌ಫುಲ್.…
ಅಂತ್ಯನ ಪುಸ್ತಕ ಮುಗಿಯುತ್ತ ಬರುತ್ತಿದ್ದ ಹಾಗೆ ಅವರ ಮೇಳದ ಅಖಿಲ ಭಾರತ ಪ್ರವಾಸಕ್ಕೆ ಜನಪದ ಅಕಾಡೆಮಿಯ ಪರವಾನಗಿ ದೊರಕಿತ್ತು ಮತ್ತು ಅಕಾಡೆಮಿಯ ಮೆಹನತ್ತಿನಿಂದಾಗಿಯೇ ದೆಹಲಿ, ಲಖನೌ ಮತ್ತು ಕೋಲ್ಕೋತ್ತಾಗಳಲ್ಲಿ ಪ್ರದರ್ಶನ ವ್ಯವಸ್ಥೆಯೂ ಆಗಿತ್ತು. ಜೊತೆಗೇ ಅಹಮ್ಮದಾಬಾದು, ಹೈದರಾಬಾದು ಮತ್ತು ಚೆನ್ನೈಗಳಲ್ಲಿಯೂ. ದೆಹಲಿಯಲ್ಲಿ ನಾಲ್ಕು, ಲಖನೌ ಮತ್ತು ಕೋಲ್ಕೋತಾಗಳಲ್ಲಿ ತಲಾ ಎರಡೆರಡು ಪ್ರದರ್ಶನ. ಮತ್ತೆಂಟು ದಿನ ಕಳೆದು ಅಹಮ್ಮದಾಬಾದಿನಲ್ಲಿ ಮೂರು ಮತ್ತು ಅದರ ಹಿಂದೆಯೇ ಹೈದರಾಬಾದಿನಲ್ಲಿ ನಾಲ್ಕು, ಚನ್ನೆöÊನಲ್ಲಿ ಐದು ಪ್ರದರ್ಶನಗಳ ವ್ಯವಸ್ಥೆಯಾಗಿತ್ತು. ಪ್ರವಾಸ ಹೆಚ್ಚು ಕಡಿಮೆ ಒಂದೂವರೆ ತಿಂಗಳಿಗೂ ಮೀರಬಹುದಾದ್ದರಿಂದ ಪ್ರೊಫೆಸರ್ ಗಣೇಶ ತಾನು ದೆಹಲಿಯ ಪ್ರಥಮ ಶೋಗೆ ಇರುವುದಾಗಿಯೂ ಮುಂದೆ ಸಾಧ್ಯವಾದರೆ ಚನ್ನೈನಲ್ಲಿ ಗುಂಪನ್ನು ಸೇರಿಕೊಳ್ಳುವುದಾಗಿಯೂ ಹೇಳಿದರು. ಮತ್ತೆಲ್ಲ ಶಾಸ್ತ್ರೀಗಳದ್ದೇ. ಹಲವಾರು ಭಾಷೆಗಳನ್ನು ಮಾತಾಡಲು ಬರುತ್ತಿದ್ದ ಅವರಿಗೆ ಭಾಷೆಯದ್ದೇನೂ ತೊಂದರೆಯಿಲ್ಲ. ಸಂಸ್ಕೃತ ಮತ್ತು ಹಿಂದೀ ಪಾಂಡಿತ್ಯ ಮತ್ತು ಸರ್ವೀಸಿನಲ್ಲಿದ್ದಾಗ ಪ್ರಾರಂಭವಾಗಿ ಮುಂದೆ ಬೆಳೆಸಿಕೊಂಡು ಬಂದಿದ್ದ ಅಕಾಡೆಮಿಯೊಂದಿಗಿನ ಸಂಬಂಧದಿಂದಾಗಿ ಎಲ್ಲಿಯೂ ತೊಂದರೆಯಾಗಲಿಕ್ಕಿಲ್ಲ. ಆದರೂ ಹನ್ನೆರಡು ಜನರ ಟೀಮೊಂದನ್ನು ಕರೆದುಕೊಂಡು ಹೋಗುವುದೆಂದರೆ ಜವಾಬ್ದಾರಿಯ ಕೆಲಸ. ಪ್ರೊಫೆಸರರು ಇದ್ದಿದ್ದರೆ ಒಳ್ಳೆಯದಿತ್ತೆನಿಸಿದರೂ ವೈಯಕ್ತಿಕ ಕಾರಣಗಳಿಂದಾಗಿ ಅವರು ಬರಲಾಗುವುದಿಲ್ಲ ಎಂದು ಕಾರ್ಯಕ್ರಮ ಕೈ ಬಿಡಲಾಗುತ್ತದೆಯೇ. ತರಬೇತಿ ಕೇಂದ್ರದ ಪೋಷಕ ಆದಿಗೇನಾದರೂ ಬರಲಾಗುತ್ತದೆಯೇ ಎಂದು ವಿಚಾರಿಸಿದರೆ ಅವನೇ ಬರುವುದಿಲ್ಲವೆಂದ. `ನಮ್ಮದೇ ಕೇಂದ್ರ ಎನ್ನುವುದು ಒಂದಾದರೆ ನನ್ನ ತಮ್ಮನೇ ಮೇಳದಲ್ಲಿರುವುದರಿಂದ ಬೇಡ’ ಎಂದ. ಹೌದೆನ್ನಿಸಿದ ಶಾಸ್ತಿçಗಳೂ ಸುಮ್ಮನಾಗಿದ್ದರು. ಮತ್ತೆ ತಮ್ಮ ಗುಂಪಿನಲ್ಲೇ ಒಂದಿಬ್ಬರು ಹಿರಿಯ ಸದಸ್ಯರಿಗೆ ಜವಾಬ್ದಾರಿಯನ್ನು ಹಂಚಿದರು.
ತಂಡದ ಪ್ರವಾಸದಲ್ಲಿನ ಪ್ರದರ್ಶನಕ್ಕಾಗಿ ಅಭಿಮನ್ಯು ಕಾಳಗ, ಕರ್ಣಾರ್ಜುನ ಕಾಳಗ ಮತ್ತು ವೀರ ವೃಷಸೇನ ಈ ಮೂರು ಪ್ರಸಂಗಗಳನ್ನು ತಯಾರಿ ಮಾಡಿಕೊಂಡಿದ್ದರು. ಈಗಿನ ವಿದ್ಯಾರ್ಥಿಗಳೊಂದಿಗೆ ಹಿಂದಿನ ವರ್ಷಗಳಲ್ಲಿನ ಪ್ರತಿಭಾವಂತ ಅಭ್ಯರ್ಥಿಗಳಲ್ಲಿ ಕೆಲವರನ್ನೂ ಕರೆಸಿಕೊಂಡದ್ದರು. ತರಬೇತಿ ಕೇಂದ್ರದ ಶಾಸ್ತ್ರೀಗಳು ಕರೆಯುತ್ತಾರೆಂದಾಕ್ಷಣ ಅವರೆಲ್ಲರೂ ಕುಣಿಯುತ್ತ ಬಂದಿದ್ದರು. ಅವರವರು ಯಾವ ಪಾತ್ರವನ್ನು ಸುಲಭದಲ್ಲಿ ಅರಗಿಸಿಕೊಳ್ಳಬಹುದೆಂಬುದನ್ನು ತನ್ನದೇ ನೆನಪು ಮತ್ತು ಅವರ ಇತ್ತೀಚಿನ ಸಾಧನೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ಅದೇ ಪಾತ್ರಗಳನ್ನು ಕೊಟ್ಟಿದ್ದರು. ಆದರೆ ಎಲ್ಲ ಪ್ರಸಂಗಗಳಲ್ಲೂ ಪ್ರಮುಖ ಪಾತ್ರ ಅಂತ್ಯನಿಗೇ. ಅಭಿಮನ್ಯು ಕಾಳಗದಲ್ಲಿ ಅಭಿಮನ್ಯು, ಕರ್ಣಾರ್ಜುನ ಕಾಳಗದಲ್ಲಿ ಶಾಸ್ತ್ರೀಗಳು ಅರ್ಜುನನ ಪಾತ್ರವೇ ಆಗಬಹುದು ಎಂದು ಎಷ್ಟು ಹೇಳಿದರೂ ಕೇಳದೆ ಕರ್ಣನ ಪಾತ್ರವನ್ನೇ ಆರಿಸಿಕೊಂಡಿದ್ದ. ಶಾಸ್ತ್ರೀಗಳಿಗೆ ಆಶ್ಚರ್ಯ. ದುರಂತ ನಾಯಕರ ಬಗ್ಗೆ ಅಂತ್ಯನಲ್ಲಿದ್ದ ಆಸಕ್ತಿ ಅವರಿಗೆ ಬೇರೆ ಏನನ್ನೋ ಹೇಳಿತ್ತು. ಅಂತರ್ಮುಖಿಯಾಗಿ ಕುಳಿತುಕೊಳ್ಳುತ್ತಿದ್ದ ಅಂತ್ಯನೇ ಕಣ್ಣೆದುರಿಗೆ ಬಂದಿದ್ದ. ಹಾಗಾದರೆ ಇತ್ತೀಚಿನ ದಿನಗಳಲ್ಲಿ ಮನೆಗೆ ಹೋಗಿ ಬರಲು ಸುರುಮಾಡಿದಂದಿನಿಂದ ತೋರಿಸಿಕೊಳ್ಳುತ್ತಿದ್ದ ಸಂತೋಷ ಬರೀ ಸೋಗಿನದ್ದೇ. ಮೇಲ್ನೋಟಕ್ಕೆ ಕಾಣಿಸುತ್ತಿದ್ದ ಸಮಾಧಾನವೇ…! ಶಾಸ್ತ್ರೀಗಳಿಗೆ ಹೇಳಿಕೊಳ್ಳಲು ಆಗದ ಚಿಕ್ಕದೊಂದು ನೋವು. ಅದೇನೋ ಮೊದಲ ದಿನ ಅಂತ್ಯನನ್ನು ನೋಡಿದಂದೇ ಅವರಲ್ಲಿ ಹುಟ್ಟಿದ ಇವನ್ಯಾರೋ ತನ್ನ ತೀರ ಹತ್ತಿರದವನು ಎನ್ನುವ ಭಾವನೆಯೊಂದು ಒಳ ಮನಸ್ಸಿನ ಮೂಲೆಯಲ್ಲಿ ಕುಳಿತದ್ದು ಕೆಲಸದ ಭರದಲ್ಲಿ ಮರೆತರೂ ಆಗಾಗ್ಗೆ ಮೇಲೆ ಬಂದು ಅವರನ್ನು ಕ್ಷೊಭೆಗೊಳ್ಳುವಂತೆ ಮಾಡುತ್ತಿತ್ತು. ಈಗ ಅಂತ್ಯ ಅಂತಹ ಪಾತ್ರಗಳಲ್ಲಿ ತಲ್ಲೀನನಾಗಿ ಅಭಿನಯಿಸುವಾಗ ಭಯದ ಸೆಲೆಯೊಂದು ಶಾಸ್ತಿçಗಳ ಮನದಲ್ಲಿ ಹಾಯುತ್ತಿದ್ದುದೂ ಹೌದು.
ತಾವು ತರಬೇತಿ ಕೊಡುವುದರೊಂದಿಗೆ ಕೆಲವೊಂದು ದಿನ ಪ್ರೊಫೆಸರ್ ಗಣೇಶರನ್ನೂ ನಿಲ್ಲಿಸಿಕೊಂಡು ಅಭಿನಯ, ಕುಣಿತ ಮತ್ತು ಮಾತುಗಳ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿ ಅವರು ಸಲಹೆ ಮಾಡಿದ ಕೆಲವು ತಿದ್ದುಪಡಿಗಳನ್ನು ಅಳವಡಿಸಿಕೊಂಡಿದ್ದರು. ತಮ್ಮ ಗುಂಪು ಮೊದಲ ಬಾರಿಗೆ ಹೊರ ಪ್ರವಾಸಕ್ಕೆ ಹೊರಟಿದೆ. ಬೇರೆ ಬೇರೆ ಕಡೆಯಿಂದ ಕಲೆಗಳ ಬಗ್ಗೆ ಪರಿಣಿತರು ಬರುವಂತಹ ಜಾಗ. ಯಕ್ಷಗಾನದ ಬಗ್ಗೆಯೂ ಅಧ್ಯಯನ ಮಾಡಿದವರು ಇರಬಹುದು. ಅವರೆದುರಿಗೆ ತಪ್ಪಬಾರದಲ್ಲ. ಹೋದಲ್ಲಿ ಬಹುಮಾನ ಬರಬೇಕೆಂದಲ್ಲ. ಆದರೆ ಎಡವಬಾರದಲ್ಲ. ಹಾಗಾಗಿ ಈ ತಾಲೀಮು. ಮತ್ತು ಎಲ್ಲೆಲ್ಲ ಸಾಧ್ಯವಿದೆಯೋ ಅಲ್ಲೆಲ್ಲ ತಪ್ಪುಗಳನ್ನು ಸರಿಪಡಿಸಿಕೊಂಡು ಒಂದು ಉತ್ಕೃಷ್ಟ ಕಾರ್ಯಕ್ರಮ ಕೊಡುವ ಆಸೆ ಅವರಿಗೆ. ಮುಂದೆ ಇದನ್ನೇ ಅಳತೆಗೋಲಾಗಿಟ್ಟಿಕೊಂಡು ವಿದೇಶಕ್ಕೆ ಹೋಗುವ ಬಗ್ಗೆಯೂ ಅವರು ನಿರ್ಧರಿಸುವುದಾದರೆ ಎನ್ನುವ ದೂರದ ಒಂದು ಆಸೆ. ಶಾಸ್ತ್ರೀಗಳಿಗೆ ಹೋಗಬೇಕೆಂದಲ್ಲ. ತಮ್ಮ ವಿದ್ಯಾರ್ಥಿಗಳಿಗೊಂದಿಷ್ಟು ಮಂದಿಗೆ ಅವಕಾಶ ಸಿಗುತ್ತದಲ್ಲ ಎಂದು ಅಷ್ಟೆ.

ಹೊರಡುವ ದಿನಕ್ಕೆ ವಾರದ ಮುನ್ನವೇ ಮೇಳದ ಪ್ರತಿಯೊಬ್ಬರೂ ಪೂರ್ತಿಯಾಗಿ ತರಬೇತಾಗಿದ್ದರು. ಮೂರು ಪ್ರಸಂಗಗಳೂ ಯಾವ ಪ್ರದರ್ಶನಕ್ಕೂ ಅಡ್ಡಿಯಿಲ್ಲ ಎನ್ನುವ ಮಟ್ಟಿಗೆ ತಯಾರಾಗಿದ್ದುವು. ಆದರೂ ತರಬೇತಿ ನಿಲ್ಲಿಸಲಿಲ್ಲ.
ಮೇಳದ ಪೆಟ್ಟಿಗೆ ಹೊರುವವರನ್ನು ಕರೆದುಕೊಂಡು ಹೋಗಲು ಸಾಧ್ಯವಿರಲಿಲ್ಲವಾಗಿ ಅವರವರ ವೇಷ ಭೂಷಣಗಳನ್ನೆಲ್ಲ ಅವರವರೇ ಪ್ಯಾಕ್ ಮಾಡಿ ತಮ್ಮ ಬಟ್ಟೆ ಬರೆಗಳೊಂದಿಗೆ ಹಿಡಿದುಕೊಳ್ಳುವುದೆಂದು ತೀರ್ಮಾನವಾಗಿತ್ತು. ಆ ಮಟ್ಟಿಗೆ ತಲೆಗೊಂದರಂತೆ ಹೆಗಲಿಗೇರಿಸುವಂತಹ ದೊಡ್ಡ ದೊಡ್ಡ ಬ್ಯಾಗುಗಳನ್ನು ಆದಿಯೇ ಕೊಡಿಸಿದ್ದ. ಜೊತೆಗೆ ಖರ್ಚಿಗೇನಾದರೂ ಬೇಕಾದರೆ ಇರಲಿ ಎಂದು ಒಂದಿಷ್ಟು ದುಡ್ಡನ್ನು ಶಾಸ್ತಿಗಳ ಜೇಬಿಗೆ ತುಂಬಿದ್ದ. ಶಾಸ್ತ್ರೀಗಳು ಅವನ ಔದಾರ್ಯದೆದುರಿಗೆ ಇದೆಷ್ಟನೇ ಬಾರಿಗೋ ಮೂಕರಾಗಿದ್ದರು.
ದೆಹಲಿಯ ಪ್ರದರ್ಶನ ಅದ್ಭುತವಾಗಿ ನಡೆಯಿತು. ಮೊದಲ ಪ್ರದರ್ಶನ ಅಭಿಮನ್ಯು ಕಾಳಗ. ಮುಂದಿನ ಎರಡು ಸಾಲು ಪ್ರೇಕ್ಷಕರು ಟಿ ವಿ ಚ್ಯಾನೆಲ್‌ನವರು ಪೇಪರಿನವರು ಮತ್ತು ಕಲಾ ವಿಮರ್ಶಕರು. ಶಾಸ್ತಿçಗಳು ಮೊದಲೆರಡು ನಿಮಿಷ ಶುದ್ಧ ಹಿಂದಿಯಲ್ಲಿ ತಮ್ಮ ಯೋಜನೆಯ ಬಗ್ಗೆ ಮಾತನಾಡಿದರು. ಊರಿನಿಂದ ಹೊರಡುವ ಮೊದಲೇ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಅಚ್ಚು ಹಾಕಿಸಿ ತಯಾರು ಮಾಡಿಕೊಂಡು ಬಂದಿದ್ದ ಕರಪತ್ರವನ್ನು ಆಗಲೇ ಪ್ರೇಕ್ಷಕರೆಲ್ಲರಿಗೆ ಹಂಚಿ ಆಗಿತ್ತು.
ಚಂಡೆಯ ಧ್ವನಿ, ಹಾರ್ಮೋನಿಯಂನ ಶೃತಿ, ಬಾಗವತರ ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿತ್ತು. ಅಭಿಮನ್ಯುವಿನ ರಂಗ ಪ್ರವೇಶ. ದಿಟ್ಟ ಹೆಜ್ಜೆಯಿಡುತ್ತ ಹದಿನಾಲ್ಕರ ಪೋರ ಅಭಿಮನ್ಯುವಿನ ವೀರಾವೇಷದ ಕುಣಿತ. ಜನ ಶಿಳ್ಳೆ ಹಾಕಿದ್ದರು. ಚಪ್ಪಾಳೆ ತಟ್ಟಿದ್ದರು.
ಮುಂದಿನ ಎರಡೂವರೆ ಘಂಟೆಗಳ ಕಾಲ ಸೂಜಿ ಬಿದ್ದರೂ ಕೇಳಿಸಬೇಕು. ಸಭೆಯಲ್ಲಿ ಅಷ್ಟು ನಿಶ್ಶಬ್ಧ. ಕಾರ್ಯಕ್ರಮ ಮುಗಿದರೂ ಯಾರೂ ಎದ್ದೇಳುವ ಲಕ್ಷಣವೇ ಇಲ್ಲ. ಮುಗಿಯಿತೆಂದು ನಿಯೋಜಕರು ಘೋಷಿಸಿದಾಗಲೇ ಎಚ್ಚರ. ಎಲ್ಲ ರಂಗಸ್ಥಳದ ಹಿಂದಿದ್ದ ಗ್ರೀನ್ ರೂಮಿಗೆ ನುಗ್ಗಿದ್ದರು. ವೇಷ ಬಿಚ್ಚುತ್ತಿದ್ದ ಅಂತ್ಯನ ಪಕ್ಕದಲ್ಲಿ ಕುಳಿತು ನಿಟ್ಟುಸಿರು ಬಿಡುತ್ತಿದ್ದ ಶಾಸ್ತ್ರೀಗಳನ್ನು ಅಭಿನಂದಿಸಲು.
ಮಾರನೆಯ ದಿನ ರಾಜಧಾನಿಯ ಪತ್ರಿಕೆಗಳ ಮುಖಪುಟದಲ್ಲಿ ಅಭಿಮನ್ಯುವಾಗಿದ್ದ ಅಂತ್ಯನ ಫೋಟೋ. ಗಂಧರ್ವ ಲೋಕವೇ ಧರೆಗಿಳಿದು ಬಂದ ಪರಿ. ದಕ್ಷಿಣದ ಬಾಲಕನ ಮೋಡಿ. ಶಾಸ್ತ್ರೀಯೆನ್ನುವ ಗುರುವಿನ ಕೈಯ್ಯಲ್ಲಿ ಪುತ್ಥಳಿಗಳಾದ ಪಾತ್ರಗಳು ಎಂದು ಎಲ್ಲರೂ ಹೊಗಳಿದವರೇ.
ಮುಂದೆ ಪ್ರತಿ ದಿನವೂ ಪ್ರೇಕ್ಷಕರ ಕಡೆಯಿಂದ ಅದರದ್ದೇ ಪುನರಾವರ್ತನೆ. ಎರಡನೆಯ ದಿನ ಕರ್ಣಾರ್ಜುನ ಕಾಳಗ. ಮೊದಲ ದಿನದ ಪ್ರಸಂಗದಲ್ಲಿ ಅಭಿಮನ್ಯು ಹೀರೋ. ಎರಡನೆಯ ದಿನ ಕರ್ಣ. ಖಳನಾಯಕ. ಜನ ಖಳ ನಾಯಕ ಕರ್ಣನಿಗಾಗಿ ಕಣ್ಣೀರು ಸುರಿಸುವಂತೆ ಮಾಡಿದ್ದ ಅಂತ್ಯ. ಕೊನೆಯ ದಿನ ಪ್ರೊಫೆಸರ್ ಗಣೇಶ್ ಅವರೂ ಬಂದಿದ್ದರು. ತಮ್ಮೂರ ಯಕ್ಷಗಾನಕ್ಕೆ ಸಿಕ್ಕ ಮರ್ಯಾದೆ ಅವರನ್ನು ಸ್ತಂಭೀಭೂತರನ್ನಾಗಿಸಿತ್ತು. ಕಾರ್ಯಕ್ರಮವೆಲ್ಲ ಮುಗಿದು ದೆಹಲಿಯಿಂದ ಮುಂದೆ ಲಖನೌಗೆ ಹೊರಡುವಾಗ ಪ್ರತಿಯೊಬ್ಬನ ಜೇಬಿನಲ್ಲಿಯೂ ಹತ್ತಿಪ್ಪತ್ತು ಸಾವಿರ ಹಣ. ಪ್ರೇಕ್ಷಕ ವರ್ಗದವರು ಖುಶಿಯಿಂದ ಕೊಟ್ಟ ಹಣದ ಜೊತೆಗೆ ಅಕಾಡೆಮಿಯವರು ಕೊಟ್ಟದ್ದೂ ಸೇರಿತ್ತು. ಆಗಲೇ ನಾಲ್ಕಾರು ಟೀವಿ ಚಾನೆಲ್‌ನವರು ಶಾಸ್ತಿçಗಳ ಹಿಂದೆ ಬಿದ್ದಿದ್ದರು. ಅದೂ ಲಕ್ಷಗಟ್ಟಲೆ ಕೊಡುತ್ತೇವೆ ಎನ್ನುವ ಆಮಿಷದೊಂದಿಗೆ. ಯಾವುದಕ್ಕೂ ಸದ್ಯಕ್ಕೆ ಒಪ್ಪಿಕೊಂಡ ಕಾರ್ಯಕ್ರಮ ಮುಗಿಯಲಿ ನೋಡುವ ಎಂದರು ಶಾಸ್ತ್ರೀಗಳು.
ಶಾಸ್ತಿçಗಳು ಹೇಳಿದ ಮಾತನ್ನು ನೆನಪಿಟ್ಟುಕೊಂಡ ಚಾನೆಲ್‌ನವರು ಅವರ ಮೇಳ ಲಖನೌ ಮತ್ತು ಕೋಲ್ಕೋಟಾದ ಕಾರ್ಯಕ್ರಮವನ್ನು ಮುಗಿಸಿ ದೆಹಲಿ ಮೂಲಕ ಮುಂದಿನ ಊರಿಗೆ ಹೋಗುವುದನ್ನು ಕಾದು ಪುನಃ ಕಾಡಿದ್ದರು. ಇನ್ನು ತಪ್ಪಿಸಿಕೊಳ್ಳುವ ದಾರಿಯಿಲ್ಲವೆಂದು ಅರಿತ ಶಾಸ್ತಿçಗಳು ಒಪ್ಪಿದರು. ಅಲ್ಲೂ ಒಬ್ಬರ ಮೇಲೆ ಒಬ್ಬರ ಮೇಲಾಟ. ಸ್ಥಳೀಯ ಚಾನೆಲ್‌ನವರ ಜೊತೆ ರಾಷ್ಟ್ರಮಟ್ಟದ ಚಾನೆಲ್‌ನವರೂ ಮುಗಿ ಬಿದ್ದಿದ್ದರು. ಅಂತೂ ಏನು ಹೇಳಿದರೂ ಕೇಳದ ಅವರನ್ನು ಸಮಾಧಾನ ಪಡಿಸುವ ಸಲುವಾಗಿ ಮೂರು ಚಾನೆಲ್‌ನವರಿಗೆ ಒಂದೊಂದು ಪ್ರಸಂಗಗಳನ್ನು ರೆಕಾರ್ಡ್ ಮಾಡಿಕೊಳ್ಳಲು ಅನುವು ಮಾಡಿಕೊಟ್ಟರು ಶಾಸ್ತ್ರೀಗಳು.
ಅಂತೂ ಅಹಮ್ಮದಾಬಾದಿನ ಕಾರ್ಯಕ್ರಮ ಮುಗಿಸಿ ಬರುವದರೊಳಗೆ ಶಾಸ್ತ್ರೀಗಳ ಮೇಳ ದೇಶವಿಡೀ ಪ್ರಸಿದ್ಧವಾಗಿತ್ತು. ಚಾನೆಲ್ಲುಗಳು ತಾವು ಪಡೆದುಕೊಂಡ ಕಾರ್ಯಕ್ರಮಗಳನ್ನು ಪದೇ ಪದೇ ಪ್ರಸಾರ ಮಾಡುವುದರ ಮೂಲಕ ಎಷ್ಟು ಪ್ರಚಾರ ಕೊಟ್ಟಿದ್ದವೆಂದರೆ ಮೇಳದ ಪ್ರತಿ ಪಾತ್ರಧಾರಿಗಳಿಗೂ ಸ್ಟಾರ್ ವಾಲ್ಯೂ ಬಂದು ಬಿಟ್ಟಿತ್ತು. ಅದರಲ್ಲೂ ಅಂತ್ಯನಿಗೆ ತೀರ ಹೆಚ್ಚು.
ಬೆಂಗಳೂರಿಗೆ ತಿರುಗಿ ಬಂದಾಗ ಅವರ ಪ್ರವಾಸ ಕಾರ್ಯಕ್ರಮ ಪ್ರಾರಂಭವಾಗಿ ಒಂದು ತಿಂಗಳೇ ಕಳೆದಿತ್ತು. ಮತ್ತೆರಡು ದಿನಗಳಿಗೇ ಚನ್ನೈನಲ್ಲಿ ಕಾರ್ಯಕ್ರಮ. ಹೆಚ್ಚಿನವರ ಮನಸ್ಸಿನಲ್ಲಿ ಒಮ್ಮೆ ಊರಿಗೆ ಹೋಗಿ ಬಂದಿದ್ದರಾದರೂ ಆಗುತ್ತಿತ್ತು ಎನ್ನುವ ಆಸೆ. ಹಾಗೆಂದು ಶಾಸ್ತಿçಯವರ ಹತ್ತಿರ ಹೇಳಲಾರರು. ತಮ್ಮನ್ನು ಈ ಮಟ್ಟಕ್ಕೆ ತಂದ ಅವರೊಂದಿಗೆ ಅಂತಹುದೇನನ್ನೂ ಮಾತನಾಡಲಾರರು. ಅಂತ್ಯನಂತೂ ಮನೆಗೆ ಹೋಗುವ ಆಲೋಚನೆಯಲ್ಲೇ ಇರಲಿಲ್ಲ. ಕೆಲಸವೆಂದರೆ ಕೆಲಸ. ಅಷ್ಟೆ. ಎಲ್ಲಾದರೂ ಫೋನ್ ಸಿಕ್ಕಿದರೆ ಅಣ್ಣನೊಂದಿಗೆ ಮಾತನಾಡುತ್ತಾನೆ. ಅಮ್ಮನಿಗೆ ಹೇಳು ಎಂದು ಹೇಳುತ್ತಾನೆ. ಆದಿ ಪೇಪರಿನಲ್ಲಿ ಹೊಗಳಿ ಬರೆದುದನ್ನೂ ಟಿವಿಯಲ್ಲಿ ಅವರ ಕಾರ್ಯಕ್ರಮ ಬಂದುದನ್ನೂ ಹೇಳುತ್ತಿದ್ದ. ಹಾಗೆ ಆ ಕಾರ್ಯಕ್ರಮ ಬಂದ ದಿನ ಊರೆಲ್ಲ ಅದರ ಬಗ್ಗೆಯೇ ಮಾತು ಎಂದೂ ಹೇಳುತ್ತಿದ್ದ. ಮನೆಯಲ್ಲಿದ್ದ ಟಿವಿಯಲ್ಲಿ ಕಾರ್ಯಕ್ರಮ ಬರುವಾಗ ಊಟ ತಿಂಡಿಗಳನ್ನೂ ಮರೆತು ಅಮ್ಮ ಗಂಟೆಗಟ್ಟಲೆ ಅದರೆದುರಿಗೇ ಕುಳಿತು ನೋಡುತ್ತಿರುತ್ತಾಳೆ. ಹೆಚ್ಚಿನ ಸಲ ಏನನ್ನೋ ನೆನಸಿಕೊಂಡು ಅಳುತ್ತಲೂ ಇರುತ್ತಾಳೆ. ಅದೂ ಕರ್ಣಾರ್ಜುನ ಕಾಳಗವನ್ನು ನೋಡಿದ ಅಮ್ಮ ಆ ರಾತ್ರಿಯಿಡೀ ನಿದ್ದೆಯನ್ನೇ ಮಾಡಲಿಲ್ಲ’ ಎಂದಿದ್ದ. ‘ನಾವು ಚನ್ನೈ ನ ಕಾರ್ಯಕ್ರಮ ಮುಗಿಸಿ ಇನ್ನೊಂದು ಎಂಟು ಹತ್ತು ದಿನಗಳಲ್ಲಿಯೇ ಊರಿಗೆ ಬರುತ್ತೇವೆ. ಆಮೇಲೊಂದೆರಡು ದಿನ ಅಮ್ಮನೊಂದಿಗೇ ಇರುತ್ತೇನೆ’ ಎಂದು ಹೇಳಿ ಅಂತ್ಯ ಮಾತು ಮುಗಿಸುತ್ತಿದ್ದ.
ಅಂತೂ ಚನ್ನೈ ನಲ್ಲೂ ಕಾರ್ಯಕ್ರಮ ಯಶಸ್ವಿಯಾಗಿ ಮುಗಿಯಿತು. ಅಲ್ಲಿನ ಕಾರ್ಯಕ್ರಮಗಳಿಗೆ ಅರ್ಧಕ್ಕಿಂತ ಹೆಚ್ಚು ಪ್ರೇಕ್ಷಕರು ಕನ್ನಡ ಬಲ್ಲವರೇ. ಯಾವುದೋ ಕಾಲದಲ್ಲಿ ಅಲ್ಲಿ ಹೋಗಿ ತಲತಲಾಂತರದಿಂದ ಅಲ್ಲಿಯೇ ಇದ್ದವರ ಜೊತೆಗೇ ಇತ್ತೀಚೆಗೆ ಅಲ್ಲಿಗೆ ಹೋದವರೂ ಸಹ ಇದ್ದರು. ಮನೆಯಲ್ಲಿ ಕನ್ನಡ ಮಾತನಾಡುವವರೇ ಆದರೂ ಮನೆಯಿಂದ ಹೊರಗೆ ಕಾಲಿಟ್ಟರೆಂದರೆ ತಮ್ಮದೆಲ್ಲವನ್ನೂ ಮರೆಯಬೇಕಾಗಿ ಬರುತ್ತಿದ್ದ ಅವರಿಗೆ ತಮ್ಮ ಸ್ವಂತ ನೆಲದೊಂದಿಗೆ ಸಂಬಂಧವನ್ನು ಕಂಡು ಕೊಳ್ಳಲು ಇದೊಂದು ಸಂದರ್ಭ. ಅವರಲ್ಲಿ ಹೆಚ್ಚಿನವರ ಹುಟ್ಟೂರಿನಲ್ಲಿ ತೆಂಕು ತಿಟ್ಟಿನ ಯಕ್ಷಗಾನವೇ ಆದರೂ ಈಗ ನೋಡುತ್ತಿದ್ದ ಬಡಗು ತಿಟ್ಟಿನದರ ಜೊತೆಗೂ ತಮ್ಮನ್ನು ಗುರುತಿಸಿಕೊಳ್ಳಬಲ್ಲವರಾಗಿದ್ದರು. ಹಾಗಾಗಿ ಐದು ದಿನಗಳ ಶೋಗಳೂ ಹೌಸ್‌ಫುಲ್.
ಆ ಕಾರ್ಯಕ್ರಮವನ್ನು ಮುಗಿಸಿಕೊಂಡು ಕೇರಳದ ಮಾರ್ಗವಾಗಿ ಟ್ರೈನಿನಲ್ಲಿ ಮಂಗಳೂರಿಗೆ ಬರುವಾಗ ಎಲ್ಲರಿಗೂ ಸುಸ್ತಾಗಿದ್ದರೂ ಮುಖದ ಮೇಲೆ ವಿಜಯದ ಕಳೆ ರಾರಾಜಿಸುತ್ತಿತ್ತು. ಸುಮಾರು ಒಂದೂವರೆ ತಿಂಗಳು ಮನೆಬಿಟ್ಟು ತಿರುಗುತ್ತಿದ್ದ ಅವರಲ್ಲಿ ಹೆಚ್ಚಿನವರಿಗೆ ಮನೆಗೆ ಹೋಗುವ ಅವಸರ. ತಮ್ಮವರನ್ನು ಸೇರುವ ಮತ್ತು ಅವರೊಂದಿಗೆ ತಮ್ಮ ಯಶಸ್ಸಿನ ಕಥೆಯನ್ನು ಹೇಳಿಕೊಳ್ಳುವ ಆತುರ. ಮೊದಲಬಾರಿಗೆ ತಮ್ಮ ಜೇಬು ತುಂಬ ತುಂಬಿದ ದುಡ್ಡನ್ನು ತೋರಿಸುವ ಬಯಕೆಯೂ ಇತ್ತು. ಆಯಾ ಊರಿನಲ್ಲಿ ತಮ್ಮ ಪ್ರೀತಿ ಪಾತ್ರರಿಗೆಂದು ತೆಗೆದುಕೊಂಡ ಉಡುಗೊರೆಗಳು. ಊರಿಗೆ ಹೋದರೆ ಒಂದೇ ಎರಡೇ. ಎಲ್ಲಕ್ಕಿಂತ ಹೆಚ್ಚಾಗಿ ಶಾಸ್ತ್ರೀ ಗಳ ಔದಾರ್ಯವನ್ನೂ ಊರೆಲ್ಲ ಹೇಳಿಕೊಳ್ಳಬೇಕು. ಶಾಸ್ತಿçಗಳದ್ದು ಮಾತ್ರ ಮಿತಿಯಿಲ್ಲದ ಔದಾರ್ಯ. ಯಾರಿಗೂ ಯಾವುದಕ್ಕೂ ಕೊರತೆ ಬರದಂತೆ ನೋಡಿಕೊಂಡದ್ದೇ ಅಲ್ಲದೆ ಹೋದ ಕಡೆಯಲ್ಲೆಲ್ಲ ತಮ್ಮನ್ನು ಮೆಚ್ಚಿ ಜನ ತನಗೆಂದೇ ಕೊಟ್ಟ ಹಣವನ್ನೂ ಎಲ್ಲರಿಗೂ ಹಂಚುತ್ತಿದ್ದರು. ತನಗೆಂದು ಏನೂ ಉಳಿಯದಿದ್ದರೂ ಚಿಂತೆ ಮಾಡದೆ ಕೊಡುತ್ತಿದ್ದರು. ಹೆಚ್ಚಿನ ಬಾರಿ ಹಾಗೇ ಆಗುತ್ತಿತ್ತು. ಹಾಗಾದಾಗೆಲ್ಲ ಅದನ್ನು ಹೇಗೋ ಪತ್ತೆಹಚ್ಚುತ್ತಿದ್ದ ಅಂತ್ಯ ಮಾತ್ರ ತನ್ನ ಪಾಲಿನದೆಂದು ಅವರು ಕೊಟ್ಟದ್ದನ್ನು ವಾಪಾಸು ಅವರ ಜೇಬಿಗೇ ತುರುಕುತ್ತಿದ್ದ.
ಊರಿಗೆ ತಲುಪಿದ ಅವರು ಮೊದಲು ಅವರವರ ಮನೆಗೆ ಹೋಗುವುದು, ಮುಂದೆ ಒಂದೆರಡು ವಾರಗಳಲ್ಲಿ ಎಲ್ಲರೂ ಮತ್ತೆ ತರಬೇತಿ ಕೇಂದ್ರದಲ್ಲಿ ಸೇರಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾತಾಡೋಣ ಎಂದು ತೀರ್ಮಾನಿಸಿ ಬೀಳ್ಕೊಳ್ಳುವಾಗ ಎಲ್ಲರ ಕಣ್ಣಲ್ಲೂ ನೀರು. ಒಂದೂವರೆ ತಿಂಗಳ ಕಾಲ ಹೊಸ ಹೊಸ ಜಾಗಗಳಲ್ಲಿ ತಾವೆಲ್ಲ ಒಂದೇ ಕುಟುಂಬದವರಂತೆ, ಅಣ್ಣ ತಮ್ಮಂದಿರಂತೆ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತ ಇದ್ದವರಿಗೆ ಈಗ ಅಗಲುವಾಗಿನ ನೋವು ಸಹಜವೇ.
ಅಂತ್ಯನೂ ತರಬೇತಿ ಕೇಂದ್ರದಲ್ಲಿನ ರೂಮಿನಲ್ಲಿ ತನ್ನ ಪೋಷಾಕನ್ನು ತುಂಬಿಸಿದ್ದ ಸೂಟ್ ಕೇಸನ್ನು ಇಟ್ಟವ ನೇರವಾಗಿ ಮನೆಗೆ ಹೋದ. ಅಮ್ಮನಿಗೆಂದು ದೆಹಲಿಯಲ್ಲಿ ಕೊಂಡು ಕೊಂಡಿದ್ದ ಚಪ್ಪಲಿಗಳನ್ನೂ ಕೋಲ್ಕೋತಾದಲ್ಲಿ ತೆಗೆದುಕೊಂಡಿದ್ದ ನೂಲಿನ ಸೀರೆ, ಅಹಮ್ಮದಾಬಾದಿನಲ್ಲಿ ತೆಗೆದುಕೊಂಡಿದ್ದ ಮಿಲ್ಲಿನ ಸೀರೆಗಳನ್ನೂ ಕೊಟ್ಟ. ಎಲ್ಲವನ್ನೂ ಒಂದೊಂದಾಗಿ ತೆಗೆದುಕೊಡುತ್ತಿದ್ದಂತೆ ಕಮಲಮ್ಮ ಮೂಕರಾಗಿದ್ದರು. ಸಾಲಿಗ್ರಾಮ ಹಬ್ಬದಲ್ಲಿ ಗಾಜಿನ ಬಳೆ ತೆಗೆದುಕೊಳ್ಳುತ್ತಿದ್ದರು ಅವರು. ತೀರ ಹತ್ತಿರದವರ ಮನೆಯಲ್ಲಿ ಮದುವೆ ಮುಂಜಿಗೆ ಹೋಗಬೇಕೆನಿಸಿದರೆ ತವರಿನಲ್ಲಿ ಕೊಟ್ಟ ಮತ್ತು ಮದುವೆ ಸಮಯದಲ್ಲಿ ಗಂಡನ ಮನೆಯವರು ಕೊಟ್ಟಿದ್ದ ಇನ್ನೂ ಒಮ್ಮೆಯೂ ಉಡದಿದ್ದ ರಾಶಿಗಟ್ಟಲೆ ರೇಷ್ಮೆ ಸೀರೆಗಳು ಪೆಟ್ಟಿಗೆಯಲ್ಲಿ ಹಾಗೇ ಇವೆ. ಉಳಿದಂತೆ ಗಂಡ ಮಾತ್ರ ಇಷ್ಟರವರೆಗೆ ಒಂದು ತುಂಡು ಬಟ್ಟೆ ತಂದು ಕೊಟ್ಟದ್ದೆಂದು ಇಲ್ಲ. ಅಂತಹುದರಲ್ಲಿ ಈ ಮಗ ಎಲ್ಲೆಲ್ಲಿಂದಲೋ ನೆನಪಿನಿಂದ ತನಗಾಗಿ ಸೀರೆಗಳನ್ನು ತಂದಿದ್ದಾನೆ. ಕಾಲಿಗೆ ಮೆಟ್ಟಲು ಚಪ್ಪಲಿಗಳು. ಆ ತಾಯಿಯ ಕಣ್ಣುಗಳು ಮಂಜಾಗಿದ್ದುವು. ಮಾತು ಬರದೆಯೇ ಬಾಯಿ ಮೂಕವಾಗಿತ್ತು. ಆದಿಗೂ ಅಷ್ಟೆ. ಯಾವಾಗಲೂ ಕಿವಿಗೆ ಸಿಕ್ಕಿಸಿಕೊಂಡು ತಿರುಗಾಡಬಹುದಾಗಿದ್ದ ಟಾನ್ಸಿಸ್ಟರ್ ಒಂದನ್ನು ತೆಗೆದುಕೊಂಡು ಬಂದಿದ್ದ. ದೆಹಲಿಯ ಅಂಗಡಿಯಿಂದ ಶಾಸ್ತ್ರೀ ಗಳ ಜೊತೆಗೆ ಹೋಗಿ ರಾಡೋ ವಾಚೊಂದನ್ನೂ ತಂದಿದ್ದ. ಅದರ ದರದ ಚೀಟಿಯನ್ನು ನೋಡಿಯೇ ಅಣ್ಣ ಹೌಹಾರಿದರೆ `ಅಲ್ಲ ಅಣ್ಣ.. ಇಷ್ಟೆಲ್ಲ ವ್ಯವಹಾರ ಮಾಡುತ್ತೀಯ. ಒಂದು ರಾಡೋ ವಾಚು ಕಟ್ಟುವ ಯೋಗ್ಯತೆಯಿಲ್ಲವೇ ನಿನಗೆ. ದುಡ್ಡು ಕೊಟ್ಟದ್ದು ನಾನೇ ಆದರೂ ಆಯ್ಕೆ ಶಾಸ್ತ್ರೀ ಗಳದ್ದೇ’ ಎಂದ. ಕಮಲಮ್ಮನದ್ದು ಆ ದಿನವಿಡೀ ಅಡಿಗೆಯವಳೊಂದಿಗೆ ಮನೆ ಕೆಲಸದ ಹೆಂಗಸಿನೊಂದಿಗೆ ಮತ್ತೆ ಗಂಡನೊಂದಿಗೆ ಅದೇ ಮಾತು. ಆದರೆ ಗಂಡನದ್ದು ಮಾತ್ರ ಅದೇ ನಿರ್ಲಿಪ್ತ ಪ್ರತಿಕ್ರಿಯೆ.
ಆದಿಯೂ ತಮ್ಮ ತಂದು ಕೊಟ್ಟಿದ್ದ ವಾಚನ್ನು ಕಟ್ಟಿಕೊಂಡು ಚಿಕ್ಕ ಮಕ್ಕಳಂತೆ ಸಂಭ್ರಮಿಸಿದ. ಎದುರಿಗೆ ಸಿಕ್ಕವರಿಗೆಲ್ಲ ತೋರಿಸುತ್ತ ಹೆಮ್ಮೆಯಿಂದ ಹೇಳಿಕೊಂಡ. ತಮ್ಮ ತಂದುಕೊಟ್ಟದ್ದೆಂದು ಹೇಳುವಾಗ ಅವನ ಕಣ್ಣಲ್ಲಿ ಹೊಳಪು. ನೋಡಿದವರೂ ಅಷ್ಟೆ. `ಆದಿ ಕಟ್ಟಿಕೊಂಡಿರುವ ವಾಚಿಗೆ ಇಪ್ಪತ್ತಾರು ಸಾವಿರ ರೂಪಾಯಿಯಂತೆ. ತಮ್ಮ ತಂದು ಕೊಟ್ಟದ್ದಂತೆ’ ಎಂದು ಅರ್ಧ ಅಸೂಯೆ ಅರ್ಧ ಮೆಚ್ಚುಗೆಯಿಂದ ಅವರೂ ಹೇಳಿಕೊಂಡು ತಿರುಗಿದ್ದೇ. ಇನ್ನು ಕೆಲವರಂತೂ `ಅಲ್ಲ ಅವನಿಗೆ ಏನು ರೋಗ. ಅವನಂತಹವರು ಇಪ್ಪತ್ತಾರು ಸಾವಿರದ್ದಲ್ಲ ಒಂದು ಲಕ್ಷದ್ದೂ ಕಟ್ಟಿಕೊಳ್ಳಬಹುದು’ ಎಂದೂ ಹೇಳಿದರು.
| ಇನ್ನು ನಾಳೆಗೆ |






0 Comments