ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಪಿ ಉಪಾಧ್ಯ ಸರಣಿ ಕಥೆ 36- ಮೂಕ ಬಸವನಂತೆ ಎದ್ದು ಹೋಗಿದ್ದರು ಶಾಮಣ್ಣನವರು…

ಪಿ ಪಿ ಉಪಾಧ್ಯ

36

ಮೂಕ ಬಸವನಂತೆ ಎದ್ದು ಹೋಗಿದ್ದರು ಶಾಮಣ್ಣನವರು…

ಆದಿಗೆ ವಯಸ್ಸು ಕಳೆಯುತ್ತಿತ್ತು. ಸಮಾಜ ಸೇವೆ, ಮನೆಯ ವ್ಯವಹಾರ ಯುವಕ ಸಂಘದ ಚಟುವಟಿಕೆಗಳು ಹೀಗೆ ಹತ್ತು ಹಲವು ಕಾರ್ಯಗಳಲ್ಲಿ ತೊಡಗಿಕೊಂಡ ಆದಿಗೆ ಸಮಯ ಕಳೆದದ್ದರ ಪರಿವೆಯೇ ಇರುತ್ತಿರಲಿಲ್ಲ. ಬೆಳಿಗ್ಗೆ ಎದ್ದು ಸ್ನಾನ ಮಾಡಿ ತಿಂಡಿಯನ್ನು ತಿಂದೋ ಅಲ್ಲ ಗಂಜಿಯನ್ನು ಉಂಡೋ ಹೊರಗೆ ಹೊರಟರೆ ಮತ್ತೆ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದರೂ ಬಂದ ಇಲ್ಲದಿದ್ದರೆ ಅಲ್ಲೇ ಹೊರಗೆಲ್ಲೋ ಊಟ ಮಾಡಿದರೂ ಮಾಡಿದನೇ. ರಾತ್ರಿ ಮಾತ್ರ ತಪ್ಪದೇ ಮನೆಯಲ್ಲಿಯೇ ಊಟ.

ಸಾಮಾನ್ಯವಾಗಿ ಘಂಟೆ ಎಂಟು ಕಳೆಯುವುದರೊಳಗೇ ಬಂದರೂ. ಅಥವಾ ಅಪ್ಪಿತಪ್ಪಿ ತಡವಾದರೂ ಹೊರಗಡೆ ಊಟ ಮಾಡಲಾರ. ಎಷ್ಟೊತ್ತಾದರೂ ಕಾಯುತ್ತಿದ್ದ ಅಮ್ಮನೊಂದಿಗೆ ಕುಳಿತೇ ಊಟ. ಆದಿ ತಾನೇ ತಂದು ಹಾಕಿಸಿದ್ದ ಡೈನಿಂಗ್ ಟೇಬಲ್ಲಿನ ಮೇಲೆ ಅಮ್ಮನೊಂದಿಗೆ ಕುಳಿತು ಊಟಮಾಡಬೇಕು. ಆಗೆಲ್ಲ ಮಗನನ್ನೇ ದಿಟ್ಟಿಸಿ ನೋಡುತ್ತಿದ್ದ ಕಮಲಮ್ಮನಿಗೆ ಮಗನಿಗೆ ವಯಸ್ಸಾಗುತ್ತಿದ್ದುದು ತಿಳಿಯುತ್ತಿತ್ತು. ಬಹಳಷ್ಟು ಸಲ ಅವನೊಡನೆ ಮದುವೆಯ ವಿಷಯ ಮಾತನಾಡಬೇಕೆಂದು ಎಳೆಸಿದ್ದಿತ್ತು. ಆದರೆ ಅಳುಕು. ಅವನ ಅಪ್ಪ ಸರಿಯಿದ್ದಿದ್ದಿದ್ದರೆ ಇದೆಲ್ಲ ಸುಗಮವಾಗಿ ಸಾಗುತ್ತಿತ್ತೋ ಏನೋ ಎಂದು ಎಷ್ಟೋ ಸಲ ಅಂದುಕೊ೦ಡದ್ದಿತ್ತು.. ಆದರೆ ಆತ ಮಾತ್ರ ಈಗೀಗಂತೂ ತೀರ ನಿರ್ಲಿಪ್ತರಾಗುತ್ತಿದ್ದಾರೆ. ಕಮಲಮ್ಮನೇ `ಅಲ್ಲ ಆದಿಗೊಂದು ಮದುವೆ ಮಾಡುವುದು ಬೇಡವೇ.. ಈ ಮಳೆಗಾಲಕ್ಕೆ ಮೂವತ್ತು ತುಂಬುತ್ತದೆ’ ಎಂದರೆ `ಹೌದಾ.. ವರ್ಷ ಎಷ್ಟು ಬೇಗ ಕಳೆಯುತ್ತದೆ ಅಲ್ಲವಾ..’ ಎಂದು ಸುಮ್ಮನಾದವರು ಮತ್ತೆ ಅದರ ಸುದ್ದಿ ಎತ್ತಲೇ ಇಲ್ಲ.

ಮಗನೊಂದಿಗೆ ನೇರವಾಗಿ ಮಾತನಾಡಲು ಆಕೆಗೆ ಅಳುಕು. ಈ ಹಿಂದೆ ಒಮ್ಮೆ ಮಗನ ಮೌನವನ್ನೇ ಸಮ್ಮತಿ ಎಂದೆಣಿಸಿ ಮುಂದುವರಿಸಿದ್ದರು. ಅದೂ ತಮ್ಮನ ಮಗಳೇ. ತವರು ಮನೆಯ ಬಳಕೆಯನ್ನು ಇತ್ತೀಚಿನ ದಿನಗಳಲ್ಲಿ ಅತೀ ಕಡಿಮೆ ಮಾಡಿಕೊಂಡಿದ್ದರು ಕಮಲಮ್ಮ. ಅಂತ್ಯ ಅಲ್ಲಿದ್ದಷ್ಟು ದಿನವೂ ಆಗಾಗ್ಗೆ ಬಂದು ಹೋಗುತ್ತಿದ್ದ. ಅಪರೂಪಕ್ಕೊಮ್ಮೆ ಅಣ್ಣನೂ  ಬರುತ್ತಿದ್ದುದಿತ್ತು ಅವನ ಜೊತೆಯಲ್ಲಿ. ಅದು ಬಿಟ್ಟು ಕಮಲಮ್ಮ ತಂದೆ ತಾಯಿ ಸತ್ತ ಮೇಲೆ ತವರಿಗೆ ಹೋಗುತ್ತಿದ್ದುದು ಬಹಳ ಕಡಿಮೆಯೇ. ಅಪ್ಪ ಅಮ್ಮನ ಶ್ರಾದ್ಧಕ್ಕೂ ಸುರು ಸುರುವಿಗೆ ಹೋಗುತ್ತಿದ್ದವಳು ಆ ಮೇಲಿಂದ ಪ್ರಯಾಣ ತನಗೆ ಆಗುವುದಿಲ್ಲವೆಂದು ಮನೆಯಲ್ಲೇ ಬೆಳಿಗ್ಗೆಯಿಂದ ಉಪವಾಸವಿದ್ದು ಮಡಿಯಲ್ಲೇ ಅಡಿಗೆ ಮಾಡಿ ಎಲೆ ಹೊರಗಿಡುವ ಶಾಸ್ತ್ರ ಮಾಡುತ್ತಿದ್ದಳು. ಆದ್ದರಿಂದ ಅಲ್ಲಿ ತವರು ಮನೆಯಲ್ಲಿ ಏನಾಗುತ್ತಿದೆ ಎನ್ನುವುದರ ಬಗ್ಗೆ ಸ್ಥೂಲವಾದ ಮಾಹಿತಿ ತಿಳಿಯುತ್ತಿತ್ತೇ ವಿನಃ ದೈನಂದಿನ ಆಗು ಹೋಗುಗಳ ಬಗ್ಗೆ ಅಂತಹ ಸುದ್ದಿಯೇನೂ ಸಿಗುತ್ತಿರಲಿಲ್ಲ.

ಹಾಗೆ ನೋಡಿದರೆ ಅಣ್ಣನಿಗೆ ಹೆಣ್ಣೊಂದಿದ್ದಿದ್ದರೆ ತಾನು ಕೇಳುವ ಅಗತ್ಯವೇ ಇಲ್ಲದಂತೆ ಅವನೇ ಅಳಿಯನಿಗೆ ಕೊಟ್ಟು ಬಿಡುತ್ತಿದ್ದ. ಆದರೆ ದುರದೃಷ್ಟ. ಅತ್ತಿಗೆಯ ಹೊಟ್ಟೆಯಲ್ಲಿ ಹುಳವೊಂದು ಹೊರೆಯಲೇ ಇಲ್ಲವಲ್ಲ. ಅದೇ ತಮ್ಮನಿಗೆ ಒಬ್ಬಳು ಮಗಳಿದ್ದಾಳೆ. ವಯಸ್ಸು ತುಸು ಕಡಿಮೆಯೇ. ಅದು ಆಕೆಯ ಚಿಂತೆಯಲ್ಲ. ಬರೀ ತಮ್ಮನನ್ನೇ ಕೇಳಿ ಕೆಲಸ ಆಗುವುದಾಗಿದ್ದರೆ ನೇರವಾಗಿಯೇ ಕೇಳುತ್ತಿದ್ದಳೋ ಏನೋ. ತಮ್ಮನ ಹೆಂಡತಿಯೊಬ್ಬಳಿದ್ದಾಳಲ್ಲ. ಅವಳನ್ನು ಒಪ್ಪಿಸುವುದು ಕಷ್ಟ. ಮೊದಲೇ ಬಾಯಿ ಹೆಚ್ಚು. ತೀರ ದೊಡ್ಡಸ್ತಿಕೆ ಬೇರೆ. ಕೇಳಿದಾಗ ಒಪ್ಪಿದರೆ ಸರಿ. ಎಲ್ಲಿಯಾದರೂ ಸಾಧ್ಯವಾಗದು ಎಂದರೆ… ಕೆಲಸ ಆಗದಿರುವುದಷ್ಟೇ ಅಲ್ಲ. ತವರಿನ ಸಂಬ೦ಧವೇ ಹಾಳಾಗುತ್ತದಲ್ಲ ಎನಿಸಿ ಆ ವಿಷಯವನ್ನೇ ಕೈ ಬಿಟ್ಟಿದ್ದಳು

ಆದರೆ ಅಮ್ಮನ ಆಲೋಚನೆಯ ಸುಳಿವು ಹತ್ತಿದ ಆದಿ ತಾನೇ ಅಮ್ಮನನ್ನು ಕರೆದು ಹೇಳಿದ್ದ `ಅಮ್ಮ ನಾನಾಗಿ ಹೇಳುವ ವರೆಗೆ ನೀನು ನನ್ನ ಮದುವೆಯ ಬಗ್ಗೆ ಪ್ರಯತ್ನ ಮಾಡುವುದು ಬೇಡ’ ಎಂದು. ಹಾಗಾಗಿ ಮಗನಿಂದ ಸೂಚನೆ ಬರುತ್ತದೆ ಎಂದು ಕಾಯುತ್ತಲೇ ಇದ್ದ ಕಮಲಮ್ಮ ವರ್ಷಗಳೇ ಕಳೆದರೂ ಮಗನಿಂದ ಸುದ್ದಿಯೇ ಬರದಾಗ ಇನ್ನು ಕಾಯುವುದಲ್ಲ ಎಂದು ತಾನೇ ಮುಂದೊತ್ತಿ ಹೋಗುವುದಾಗಿ ನಿರ್ಧರಿಸಿದ್ದರು.

ಹಾಗೆಯೇ ಗಿಳಿಯಾರಿನ ಸೋಮಯಾಜಿಗಳನ್ನು ಕರೆದು ಸಂಬ೦ಧ ನೋಡಲು ಹೇಳಿದ್ದರು. ಸೋಮಯಾಜಿಗಳು ಹೋಗದ ಮನೆಗಳಿಲ್ಲ. ತಿರುಗಾಡದ ಊರಿಲ್ಲ. ಹಾಗಾಗಿ ಕಮಲಮ್ಮ ಹೇಳಿದ್ದೇ ಉತ್ಸಾಹದಿಂದ ಕೆಲಸ ಕೈಗೆತ್ತಿಕೊಂಡಿದ್ದರು. ಶಾಮಣ್ಣನವರ ಮನೆಯ ಸಂಬ೦ಧವೆ೦ದ ಕೂಡಲೇ ಕಿವಿ ನಿಗುರಿಸಿ ಕೇಳುವ ಮಂದಿ ಆದಿಗೆ ಎಂದ ಕೂಡಲೇ ಹಿಂಜರಿಯುತ್ತಿದ್ದರು. ದೊಡ್ಡ ಮನೆ, ಹುಡುಗನೂ ಹೆಸರು ಮಾಡಿದ್ದಾನೆ. ಆದರೆ ಹುಡುಗನಿಗೆ ಹೇಳಿಕೊಳ್ಳಲು ಒಂದು ಉದ್ಯೋಗವೇ ಇಲ್ಲವಲ್ಲ.. ಎನ್ನುವವರೇ ಎಲ್ಲ. ಕೆಲ ಉತ್ಸಾಹಿಗಳು ಇನ್ನೂ ತುಸು ಮುಂದುವರಿದು ಅವರ ಒಬ್ಬ ಮಗ ಅಮೆರಿಕಕ್ಕೆ ಹೋಗಿದ್ದಾನಂತಲ್ಲ ಅವನಾದರೆ ಪರವಾಯಿಲ್ಲ ಎಂದೂ ಹೇಳಿದ್ದರು.

ಸೋಮಯಾಜಿಗಳು ಅದನ್ನೇ ತುಸು ಮೆದುವಾಗಿ ಕಮಲಮ್ಮನಿಗೆ ಹೇಳಿದ್ದರು. `ಹೆಣ್ಣು ಹೆತ್ತವರಿಗೆ ಕೊಬ್ಬು ಬಂದಿದೆ.. ನಾವು ಹೇಳಿದ್ದು ಬೇಡ.. ಅವರು ಕೇಳಿದ್ದೇ ಆಗಬೇಕು ಅವರಿಗೆ.. ಇರಲಿ ಬಿಡಿ ಕಮಲಮ್ಮ.. ನಮ್ಮ ಆದಿಗೆ ಚಿನ್ನದಂತಹ ಹುಡುಗಿಯನ್ನು ತಂದು ಕೊಡುತ್ತೇನೆ’ ಎಂದಿದ್ದರು. ಅದು ಕಮಲಮ್ಮನ ಮನೆಯ ಬಗ್ಗೆ ತನ್ನ ವಿಧೇಯತೆಯನ್ನು ತೋರಿಸುವ ಮಟ್ಟಿಗಿನ ಮಾತು ಎಂದು ತಿಳಿಯಲು ಬಹಳ ದಿನವೇನೂ ಬೇಕಾಗಲಿಲ್ಲ. ಹತ್ತು ಹಲವು ಕಡೆ ಮಾಮೂಲಿಯಾದ ಅದೇ ಮಾತು ಎದುರಾದಾಗ ಸೋಮಯಾಜಿಗಳೂ ಕೈ ಬಿಟ್ಟಿದ್ದರು. ಅಷ್ಟೇ ಅಲ್ಲ ಕೆಲವು ದಿನ ಕಮಲಮ್ಮನನ್ನು ಭೇಟಿ ಮಾಡುವುದನ್ನೇ ನಿಲ್ಲಿಸಿದ್ದರು. ಅರ್ಥವಾಗಿತ್ತು ಕಮಲಮ್ಮನಿಗೆ. ಒಳ್ಳೆಯದು ಕೆಟ್ಟದ್ದು ಎಲ್ಲದಕ್ಕೂ ಆಗುತ್ತಿದ್ದ ಸೋಮಯಾಜಿಗಳೇ ಹೀಗೆ ತಲೆ ತಪ್ಪಿಸುತ್ತಿದ್ದರೆಂದರೆ….! ಆ ಕೋಪ ಗಂಡನ ಮೇಲೆ ತಿರುಗಿತ್ತು.

ನಾಲ್ಕು ವರ್ಷ ಹಿಂದೆಯೇ ಅವರು ಪ್ರಯತ್ನಿಸಿದ್ದರೆ ಆಗುತ್ತಿರಲಿಲ್ಲವೇ… ಅಲ್ಲ ಮಗ ಎಸ್‌ಎಸ್‌ಎಲ್‌ಸಿ ಗೇ ಕಲಿಯುವುದನ್ನು ನಿಲ್ಲಿಸಿದಾಗ ಮುಂದೆ ಕಲಿಯುವಂತೆ ಒತ್ತಾಯವನ್ನಾದರೂ ಮಾಡಬಾರದಿತ್ತೆ.. ತಮಗೇನಾದರೂ ಅಂತಹ ಕಷ್ಟವಿತ್ತೇ.. ಎಂತಹ ಕಾಲೇಜಿನಲ್ಲಿಯೂ ಕಲಿಸಬಹುದಿತ್ತಲ್ಲ.. ಹಾಗೆಂದು ನೋವು ಬೆರತ ಸಿಟ್ಟಿನಲ್ಲಿ ಅದೇ ಗಂಡನೊ೦ದಿಗೆ ಹೇಳಿಕೊಂಡರೂ ಏನೂ ಉಪಯೋಗವಾಗಿರಲಿಲ್ಲ. ಹೇಳುವುದೆಲ್ಲವನ್ನೂ ಕೇಳಿ ಮೂಕ ಬಸವನಂತೆ ಎದ್ದು ಹೋಗಿದ್ದರು ಶಾಮಣ್ಣನವರು. ಕಮಲಮ್ಮ ತಲೆ ಚಚ್ಚಿಕೊಳ್ಳುವುದೊಂದೇ ಬಾಕಿ.

ಇಷ್ಟೆಲ್ಲ ಆಗುವಾಗ ಅದರ ಸುಳಿವು ಆದಿಗೆ ತಟ್ಟದೆ ಇರುತ್ತದೆಯೇ. ಮೊದಲು `ನಾ ಹೇಳಿದ ಮೇಲೆ ಮದುವೆಯ ಮಾತು’ ಎನ್ನುತ್ತಿದ್ದವ ಈಗ ಮದುವೆಯ ಮಾತೇ ಬೇಡ ಎನ್ನಲು ತೊಡಗಿದ್ದ. ‘ಹೀಗೇ ಇದ್ದು ಬಿಡುತ್ತೇನೆ. ಹಾಗೂ ನಿಮಗೆ ವಂಶ ಬೆಳೆಯಲೇಬೇಕೆಂದಿದ್ದರೆ ಅನಂತ ಇದ್ದಾನೆ.. ಅಂತ್ಯ ಇದ್ದಾನೆ ಅವರಿಬ್ಬರಿಗೂ ಬೇಗ ಮದುವೆ ಮಾಡಿ’ ಎಂದಿದ್ದ. ಮೊದಲ ಮಗನ ಮದುವೆಯನ್ನೊಂದು ಮಾಡಿ ಅವನ ಸುಖೀ ಸಂಸಾರವನ್ನು ನೋಡಬೇಕೆಂಬ ತಾಯಿ ಕಮಲಮ್ಮನ ಆಸೆ ಮಾತ್ರ ಆಸೆಯಾಗಿಯೇ ಉಳಿಯಿತು.

| ಇನ್ನು ನಾಳೆಗೆ |

‍ಲೇಖಕರು Admin

8 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading