ಪಿ ಪಿ ಉಪಾಧ್ಯ
16
ಶಾಮಣ್ಣನವರ ಲೆಕ್ಕದಲ್ಲಿ ಹೊಟ್ಟೆ ತುಂಬ ಊಟ.
ಇದ್ದ ಎರಡು ದಿನ ಅವರಿಬ್ಬರೂ ಕೋಣಗಳು ತಮ್ಮನ್ನು ಮರೆತಿರಬಹುದೇನೋ ಎಂಬ ಹೆದರಿಕೆಯಿಂದ ಅವುಗಳ ಜೊತೆಗೇ ಕಾಲ ಕಳೆದು ತಮ್ಮ ಸಂಬ೦ಧವನ್ನು ಪುನಃ ಬೆಸೆದುಕೊಂಡರು. ಮೊದಲ ದಿನ ಇವರನ್ನು ನೋಡಿಯೇ ಹೂಂಕರಿಸಿದ ಕೋಣಗಳು ಎರಡನೆ ದಿನ ಇವರನ್ನು ನೋಡಿದೊಡನೆ ತಲೆಯಲ್ಲಾಡಿಸಲು ತೊಡಗಿದ್ದುವು.
ಕಂಬಳದ ಮುನ್ನಾದಿನವೇ ಆದಿಯೊಡನೆ ಅವರಿಬ್ಬರೂ ವಂಡಾರಿಗೆ ಹೋಗಿ ಅಲ್ಲಿನ ಕಂಬಳದ ಗದ್ದೆಗಿಳಿದು ನೋಡಿ ತಮ್ಮ ತೃಪ್ತಿಯನ್ನು ವ್ಯಕ್ತಪಡಿಸಿದ್ದರು. ಶಾಮಣ್ಣನವರ ಕೋಣಗಳನ್ನು ಓಡಿಸಲು ಮೂಡಬಿದರೆಯಿಂದ ಬಂದ ಆಳುಗಳೇ ತಮ್ಮ ಕಂಬಳದ ಗದ್ದೆಯನ್ನು ನೋಡಲು ಬಂದಿದ್ದಾರೆ೦ದರೆ ಅಲ್ಲಿನ ಗುರಿಕಾರರಿಗೂ ಸಂಭ್ರಮವೇ. ಅವರೆಲ್ಲರನ್ನೂ ಗದ್ದೆಯ ಸುತ್ತ ತಿರುಗಿಸಿ ಪಕ್ಕದಲ್ಲಿಯೇ ಇದ್ದ ತಮ್ಮ ದೊಡ್ಡ ಮನೆಗೆ ಕರೆದುಕೊಂಡು ಹೋಗಿ ಎಳನೀರು ಕುಡಿಸಿ ಉಪಚರಿಸಿ ಕಳುಹಿಸಿದರು.
ಕಂಬಳದ ದಿನ ಬೆಳಿಗ್ಗೆಯೇ ಹೊರಡಬೇಕು. ಬೇಗ ಹೊರಟರೆ ಆ ನಾಲ್ಕು ಮೈಲು ದೂರವನ್ನು ನಡೆದುಕೊಂಡೇ ಕ್ರಮಿಸಿ ಸೂರ್ಯ ನೆತ್ತಿಯ ಮೇಲೆ ಬರುವುದರೊಳಗೆ ಅಲ್ಲಿ ತಲುಪಬಹುದು. ಒಂದು ಗಂಟೆಯ ಕಾಲ ವಿಶ್ರಮಿಸಿ ಮತ್ತೆ ಗದ್ದೆಗಿಳಿಯಲು ಅನುಕೂಲವಾಗುತ್ತದೆ. ಹಾಗಾಗಿ ಬೆಳಗಾ ಬೆಳಿಗ್ಗೆಯೇ ಶಾಮಣ್ಣನವರ ಮನೆಯಂಗಳದಲ್ಲಿ ಗದ್ದಲ ಸುರುವಾಗಿತ್ತು. ಅರ್ಧಕ್ಕೆ ಅರ್ಧ ಊರೇ ನೆರೆದಿತ್ತು. ಹೇಳಿಕೆ ಸಿಕ್ಕಿ ಬಂದವರಷ್ಟೇ ಮಂದಿ ಹೇಳಿಕೆಯಿಲ್ಲದವರೂ ಬಂದಿದ್ದರು. ಕೇಳಿದರೆ ನಮ್ಮ ಊರಿನ ಕೋಣ ವಂಡಾರು ಕಂಬಳಕ್ಕೆ ಹೋಗುತ್ತದೆ. ಅಂದ ಮೇಲೆ ನಾವೆಲ್ಲ ಅಲ್ಲಿಲ್ಲದಿದ್ದರೆ ಹೇಗೆ. ಅದಕ್ಕೆಲ್ಲ ಹೇಳಲಿ, ಕರೆಯಲಿ ಎಂದು ಕಾಯುತ್ತ ಕುಳಿತುಕೊಳ್ಳುವುದೇ' ಎಂದಿದ್ದರು. ಅಂತೂ ಅದೊಂದು ಊರಿನ ಸಮಾರಂಭವೇ ಆಗಿತ್ತು.

ಮನೆಯಂಗಳದಲ್ಲಿ ಜನ ಸೇರುತ್ತಿದ್ದಂತೆಯೇ ಕಮಲಮ್ಮನಿಗೆ ಪುರುಸೊತ್ತೇ ಇಲ್ಲ. ಅಡಿಗೆ ನೀಲಮ್ಮನ ಜೊತೆಗೆ ಊರಿನ ಇನ್ನೊಂದಿಬ್ಬರು ಹೆಂಗಳೆಯರನ್ನು ಸೇರಿಸಿಕೊಂಡು ಹುಳಿಯವಲಕ್ಕಿ, ಉಪ್ಪಿಟ್ಟು, ಕೇಸರಿಭಾತು ಮಾಡಿಸಿ ಬಡಿಸಿದ್ದೇ ಬಡಿಸಿದ್ದು. ತಮ್ಮದೇ ಮನೆಯ ಕೋಣಗಳು ಕಂಬಳಕ್ಕೆ ಹೋಗುತ್ತಾವೆಂದ ಮೇಲೆ ಸುಮ್ಮನೆಯೇ. ಶಾಮಣ್ಣನವರು ಬೆಳಗಾ ಬೆಳಿಗ್ಗೆ ಸ್ನಾನ ಮಾಡಿ ಮಡಿಯುಟ್ಟು ಮನೆ ದೇವರಿಗೆ ಪೂಜೆ ಮಾಡುವ ಭಟ್ಟರು ಬರುವ ಮುನ್ನ ತಾವೇ ಪೂಜೆ ಮಾಡಿ ಆರತಿ ಬೆಳಗಿದವರು ಕೋಣಗಳಿಗೂ ಆರತಿ ಮಾಡಿದರು. ಸಿಪ್ಪೆಯಿದ್ದ ಎರಡು ತೆಂಗಿನ ಕಾಯಿಗಳನ್ನು ಸುಳಿದು ನೆಲಕ್ಕೆ ತಾಗದಂತೆ ಚಾವಡಿಯ ಮೂಲೆಯಲ್ಲಿ ನೇತು ಹಾಕಿದರು. ಎಲ್ಲ ಸುಸೂತ್ರವಾಗಿ ನಡೆಯಲಿ ಎಂದು ಆನೆಗುಡ್ಡೆ ಗಣಪತಿಗೆ ಹರಕೆ ಹೇಳಿಕೊಂಡ ಕಾಯಿಗಳು ಅವು. ಮನಸ್ಸಿನಲ್ಲಿಯೇ ಕೀಳಿಗೆ ಚರುವನ್ನು ಹಾಕುವುದಾಗಿಯೂ ಹೇಳಿಕೊಂಡರು.
ಆದಿ ಈ ನಾಲ್ಕು ತಿಂಗಳೆಲ್ಲ ತಯಾರಿ ಮಾಡಿ ಉಡುಪಿಗೋ ಕುಂದಾಪುರಕ್ಕೋ ಹೋದಾಗಲೆಲ್ಲ ಒಂದೊ೦ದಾಗಿ ಮಾಡಿಸಿಕೊಂಡು ಬಂದು ಒಳಗಡೆ ಕೋಣೆಯಲ್ಲಿ ಶೇಖರಿಸಿಟ್ಟಿದ್ದ ಕೋಣಗಳನ್ನು ಅಲಂಕರಿಸುವ ಸಾಧನಗಳೆಲ್ಲ ಹೊರಬಂದಿದ್ದುವು ಮತ್ತು ಆ ಮೂಡುಬಿದರೆಯಿಂದ ಬಂದ ಆಳುಗಳ ಕೈ ಚಳಕದಿಂದಾಗಿ ಕೋಣಗಳ ಮೈಮೇಲೇರಿ ಈ ಕೋಣಗಳು ಸಾಕ್ಷಾತ್ ದೇವಲೋಕದ ಐರಾವತಗಳೇ ಎನ್ನುವ ಭ್ರಮೆ ಹುಟ್ಟಿಸುವಂತೆ ನಿಂತಿದ್ದುವು. ಪತಾಕೆಗಳನ್ನು ಹಿಡಿದುಕೊಳ್ಳಲು ಊರಿನವರೇ ಇಬ್ಬರು. ಆಗಲೇ ಬಂದು ಅಂಗಳದ ಮೂಲೆಯಲ್ಲಿ ನಿಂತು ಡೋಲುಗಳನ್ನು ಜೋರಾಗಿ ಬಾರಿಸಲು ತೊಡಗಿದ್ದ ಮಂದಿಗೂ ಸಂಭ್ರಮ. ತಮ್ಮೂರ ಕೋಣಗಳ ಜೊತೆಗೆ ತಾವೂ ವಂಡಾರು ಕಂಬಳಕ್ಕೆ ಹೋಗುತ್ತಿದ್ದೇವೆ ಎನ್ನುವ ಉತ್ಸಾಹದಲ್ಲಿ ಡೋಲುಗಳ ಮೇಲೆ ಕೈ ಜೋರಾಗಿ ಓಡುತ್ತಿದೆ.
ಶಾಮಣ್ಣನವರಿಗೆ ಅನ್ನಿಸುತ್ತಿತ್ತು ತಮ್ಮ ಮದುವೆ ದಿಬ್ಬಣವೂ ಇಷ್ಟು ಜೋರಾಗಿರಲಿಲ್ಲ ಎಂದು. ಅಂತೂ ಕೋಣಗಳ ಮೆರವಣಿಗೆ ಹೊರಟಿತು. ಜೊತೆಗೇ ನೆರೆದ ಊರಿನ ಮಂದಿಯೂ. ನೂರೋ ಇನ್ನೂರೋ ಎಷ್ಟೋ.. ಬೇಡ ಅಪ್ಪ. ನಿಮಗೆ ಅಷ್ಟು ದೂರ ನಡೆಯಲಿಕ್ಕೆ ಆಗದು. ಗಾಡಿ ಕಟ್ಟಿಕೊಂಡು ಬನ್ನಿ’ ಎಂದು ಆದಿ ಅಂದರೆ ಶಾಮಣ್ಣ ಒಪ್ಪಿಯಾರೇ. ಅವರ ಬದುಕಿನ ಆಸೆ. ಕಂಬಳದ ಕೋಣಗಳೆದುರಿಗೆ ರುಮಾಲು ಸುತ್ತಿ ತಲೆಯೆತ್ತಿ ಊರಿನ ಜನರೆಲ್ಲ ನೋಡುತ್ತಿರುವ ಹಾಗೆ ನಡೆಯಬೇಕೆನ್ನುವ ಆಸೆ ಇಂದು ನಿನ್ನೆಯದೇ… ವಯಸ್ಸಾಯಿತೆಂದಾಕ್ಷಣ ಆಸೆ ಕಮರೀತೇ. ಒಪ್ಪಿರಲಿಲ್ಲ. ಇಲ್ಲ ಆದಿ. ಇವತ್ತು ನಾನು ಹೋರಿಗಳ ಜೊತೆ ಬರುವವನೇ' ಎಂದಾಗ ಆದಿಗೆ ಬೇರೆ ದಾರಿಯೇ ಇಲ್ಲ. ಒಪ್ಪಿದ. ತಮ್ಮ ಅನಂತನಿಗ೦ತೂ ಹೇಳಲಾರದ ಸಂಭ್ರಮ.
ಹೊಸಾ ಅಂಗಿ ಹೊಸಾ ಚಡ್ಡಿ ತೊಟ್ಟು ಕೋಣಗಳ ಮುಂದೆ ಅಪ್ಪ ಮತ್ತು ಅಣ್ಣನ ಕಣ್ಣು ತಪ್ಪಿಸಿ ಕುಣಿದದ್ದೇ ಕುಣಿದದ್ದು. ಮೆರವಣಿಗೆ ಮುಂದುವರಿಯುತ್ತಿದ್ದ೦ತೆ ಶಾಮಣ್ಣನವರ ಆ ರೇಷಿಮೆ ಅಂಗಿ, ಫಿನ್ಲೇ ಧೋತಿ ಮತ್ತು ಕೆಂಪು ರೇಷಿಮೆಯ ಶಾಲಿನ ರುಮಾಲುಗಳಲ್ಲಿ ಮದುಮಗನಂತೆಯೇ ಕಂಗೊಳಿಸುತ್ತಿದ್ದರು. ಹೊರಡುವಾಗ ಗಂಡನನ್ನು ನೋಡಿದ್ದ ಕಮಲಮ್ಮನೇಮನೆಗೆ ಬಂದ ಮೇಲೆ ಇವರಿಗೂ ದೃಷ್ಟಿ ನಿವಾಳಿಸಬೇಕು’ ಎಂದು ಮೆಚ್ಚುಗೆಯಿಂದ ಅಂದುಕೊ೦ಡಿದ್ದರು.
ಕಮಲಮ್ಮ ಮತ್ತು ಅವರ ಕೆಲಸದವರು ಬಡಿಸಿದ್ದ ಆ ಉಪ್ಪಿಟ್ಟವಲಕ್ಕಿ ಮತ್ತು ಕೇಸರಿ ಭಾತು ಮೆರವಣಿಗೆಯ ಜನರ ಕಾಲಿಗೆ ವಿಶೇಷ ತಾಕತ್ತನ್ನು ಕೊಟ್ಟಿತ್ತು. ಕುಣಿಯಲಿಕ್ಕೆ ಆಗದವರೂ ಡೋಲಿನ ಶಬ್ದಕ್ಕೆ ತಮ್ಮ ಹೆಜ್ಜೆಯನ್ನು ಮೇಳೈಸುತ್ತ ನಡೆಯುತ್ತಿದ್ದರು.
ಒಬ್ಬೊಬ್ಬರೇ ನಡೆದರೆ ಒಂದೂವರೆ ಗಂಟೆಯಲ್ಲಿ ಕ್ರಮಿಸಬಹುದಾದ ದೂರವನ್ನು ಸುಮಾರು ಎರಡೂವರೆ ಮೂರು ಗಂಟೆಯಲ್ಲಿ ಕ್ರಮಿಸಿದ ಮೆರವಣಿಗೆ ಕಂಬಳದ ಗದ್ದೆಯನ್ನು ತಲುಪುವಾಗ ಹನ್ನೆರಡು ದಾಟಿತ್ತು. ಸ್ವತಹ ಗುರಿಕಾರರೇ ಊರಿನ ಬಾಗಿಲಿಗೇ ಬಂದು ಶಾಮಣ್ಣನವರನ್ನು ಬರಮಾಡಿಕೊಂಡರು. ಆಗಲೇ ಗುರಿಕಾರರಿಗೆ ಆದಿ ಹೇಳಿಟ್ಟಿದ್ದರಿಂದ ಬಂದವರಿಗೆಲ್ಲ ಬಾಯಾರಿಕೆಗೆ ಬೆಲ್ಲ ಮತ್ತು ಹುಣಸೇ ಹಣ್ಣು ಕರಡಿದ ಅಮೃತಪಾನಕ ರೆಡಿಯಾಗಿತ್ತು. ಬೆಳಿಗ್ಗಿನ ಉಪ್ಪಿಟ್ಟವಲಕ್ಕಿ ಮತ್ತು ದಾರಿಯುದ್ದಕ್ಕೂ ಇದ್ದ ಬಿಸಿಲಿನ ಬೇಗೆ. ಎಲ್ಲರೂ ತೇಗು ಬರುವವರೆಗೆ ಕುಡಿದರು.
ಮತ್ತೆರಡು ಗಂಟೆ ಸಮಯ ಉಳಿದಿತ್ತು ಕಂಬಳದ ಓಟಕ್ಕೆ. ನಡುವೆ ಬಂದವರಿಗೆಲ್ಲ ಊಟವಾಗಬೇಕು. ಗುರಿಕಾರರ ಮನೆಯ ಪಕ್ಕದಲ್ಲೇ ಒಂದು ಚಪ್ಪರ ಹಾಕಿಸಿ ಅಲ್ಲೇ ಮೂಲೆಯಲ್ಲಿ ಅಡಿಗೆ ಮಾಡಿಸಿ ಊಟದ ವ್ಯವಸ್ಥೆಯನ್ನೂ ಮಾಡಿಸಿದ್ದ ಆದಿ. ಕಂಬಳದ ಹೊತ್ತಿಗೆ ಎಲ್ಲರೂ ತಯಾರಾಗಿರುವಂತೆ ಗಂಟೆ ಒಂದಾಗುವಾಗ ಊಟ ಬಡಿಸಲು ಪ್ರಾರಂಭಿಸಿದರು ಎರಡೆರಡು ದೊನ್ನೆಗಳಲ್ಲಿ. ದೊಡ್ಡ ದೊಡ್ಡ ದೊನ್ನೆಗಳು. ಒಂದರಲ್ಲಿ ಮೊಸರನ್ನ ಇನ್ನೊಂದರಲ್ಲಿ ಅನ್ನ ಹುಳಿ. ಎರಡೂ ಸೇರಿ ಎಂಥವರಿಗೂ ಹೊಟ್ಟೆ ತುಂಬಬೇಕು. ಇಲ್ಲದಿದ್ದರೆ ಇನ್ನೊಂದು ಬಾರಿ. ಹೊಟ್ಟೆ ತುಂಬಲಿಲ್ಲವೆ೦ದು ಹೇಳಬಾರದು ಯಾರೂ.

ಊರಿನವರು ಯಾರೋ ಬಂದು ಆದಿಯ ಹತ್ತಿರ ಹೇಳಿದರು ಬೇರೆಯವರೂ ಬಂದು ಊಟ ಮಾಡುತ್ತಿದ್ದಾರೆ' ಇರಲಿ ಏನಂತೆ. ಬೇಕಾದಷ್ಟು ತಯಾರಿಸಲು ಹೇಳಿದ್ದೇನೆ’ ಅಂತೂ ವಂಡಾರು ಕಂಬಳದಲ್ಲಿ ಪ್ರಥಮ ಬಾರಿಗೆ ಕಂಬಳಕ್ಕೆ೦ದು ಬಂದವರಿಗೆಲ್ಲ ಶಾಮಣ್ಣನವರ ಲೆಕ್ಕದಲ್ಲಿ ಹೊಟ್ಟೆ ತುಂಬ ಊಟ. ಅವರಲ್ಲಿ ಕೆಲವರಾದರೂ ಅಂದುಕೊ೦ಡಿರಲಿಕ್ಕೆ ಸಾಕು ಇದೇ ಪ್ರಕಾರ ಪ್ರತೀ ವರ್ಷ ಈ ಶಾಮಣ್ಣನವರು ಕಂಬಳಕ್ಕೆ ಕೋಣ ತರುವಂತಾಗಲಿ ದೇವರೇ' ಎಂದು. ಎಲ್ಲರದ್ದೂ ಊಟ ಮುಗಿಯುವ ಹೊತ್ತಿಗೆ ಗಂಟೆ ಎರಡಾಗುತ್ತ ಬಂದಿತ್ತು.
ಗುರಿಕಾರರ ಆಳುಗಳು ಆಗಲೇ ಎರಡೆರಡು ಸುತ್ತು ತಿರುಗಿ ಕಂಬಳ ಪ್ರಾರಂಭವಾಗುವುದರ ಬಗ್ಗೆ ಹೇಳಿ ಬಂದಿದ್ದರು. ಎಲ್ಲರ ದೃಷ್ಟಿಯ ಕೇಂದ್ರವಾಗಿದ್ದ ಶಾಮಣ್ಣನವರ ಕೋಣ ಕೊನೆಯಲ್ಲಿ ಓಡುವುದೆಂದು ನಿರ್ಧಾರವಾದಾಗ ಈ ಕೋಣಗಳು ಓಡುವುದನ್ನೊಂದು ನೋಡಿ ಮನೆಗೆ ಹಿಂತಿರುಗುವುದೆ೦ದು ನಿರ್ಧರಿಸಿದ್ದ ಬಹಳಷ್ಟು ಮಂದಿಗೆ ನಿರಾಸೆ.ಇದ್ಯಾವ ಗ್ರಹಾಚಾರ ಮಾರಾಯ. ಈ ವರ್ಷವಾದರೂ ಆ ಕೊಕ್ಕರ್ಣೆ ಕೋಣಗಳು ಸೆಗಣಿ ಹಾಕುತ್ತ ಓಡುವುದನ್ನು ನೋಡುವುದು ತಪ್ಪೀತೇನೋ ಎಂದುಕೊ೦ಡರೆ ಈ ಜನ ಕಲ್ಲು ಹಾಕಿದರಲ್ಲ. ಅಂತೂ ಕೊನೆಯವರೆಗೆ ನಿಲ್ಲುವ ಹಾಗೆ ಆಯ್ತಲ್ಲ’ ಎಂದು ಅಲವತ್ತುಕೊಂಡಿದ್ದರು. ಅದು ಗುರಿಕಾರರಿಗೂ ಗೊತ್ತಿಲ್ಲದ್ದಲ್ಲ. ಶಾಮಣ್ಣನವರ ಕೋಣ ಮೊದಲೇ ಓಡಿದ್ದಾದರೆ ಮತ್ತೆ ಎರಡನೇ ಜೋಡಿ ಓಡುವುದನ್ನು ನೋಡಲು ಜನವೇ ಇರುವುದಿಲ್ಲ ಎಂದು ಅವರಿಗೆ ಗೊತ್ತಿಲ್ಲವೇ. ಅದಕ್ಕೇ ಈ ಪ್ಲಾನು.
ಅಂತೂ ಬೇರೆ ದಾರಿಯೇ ಇಲ್ಲದೆ ಜನ ಸುತ್ತ ಮುತ್ತ ತಿರುಗಾಡುತ್ತ ಬೆಂಡು ಬತ್ತಾಸುಗಳ ಅಂಗಡಿಯನ್ನು ಸುತ್ತುತ್ತ ಕೈಗೆ ಎಟಕಿದ್ದನ್ನು ಕೊಂಡು ತಿನ್ನುತ್ತ ಅಂತೂ ಇಂತೂ ಕಾಲ ಕಳೆದಿದ್ದರು. ಇದ್ದದ್ದರ ಪೈಕಿ ಅಮಾಸೆಬೈಲ್ ಶೆಟ್ಟರ ಕೋಣ ಪರವಾಯಿರಲಿಲ್ಲ. ಹಲಗೆಯ ತೂತಿನಿಂದ ಹಾರಿದ ನೀರು ನಿಶಾನೆಯನ್ನು ಮುಟ್ಟದಿದ್ದರೂ ಹತ್ತಿರ ಹತ್ತಿರ ಹೋಗಿತ್ತು. ಅಷ್ಟೇ ಅಲ್ಲ ಕೋಣಗಳು ಅಲ್ಲಿಯವರೆಗೆ ಓಡಿದವುಗಳಂತೆ ಅಡ್ಡಾದಿಡ್ಡಿಯಾಗಿ ಓಡದೆ ಸರಿ ಸುಮಾರಿಗೆ ನೇರವಾಗಿ ಓಡಿದ್ದವು.
। ಇನ್ನು ನಾಳೆಗೆ ।






0 Comments