ಪಿ ಪಿ ಉಪಾಧ್ಯ ಸರಣಿ ಕಥೆ 10 – ಅಮ್ಮ ಒಬ್ಬಳಲ್ಲದಿದ್ದರೆ ಶಾಮನ ಬಾಲ್ಯ ಬರೀ ದುಃಸ್ವಪ್ನವೇ…

ಪಿ ಪಿ ಉಪಾಧ್ಯ

10

ಅಮ್ಮ ಒಬ್ಬಳಲ್ಲದಿದ್ದರೆ ಶಾಮನ ಬಾಲ್ಯ ಬರೀ ದುಃಸ್ವಪ್ನವೇ…

ಮಗನೂ ಆ ಮೂವತ್ತು ಸಾವಿರ ನಷ್ಟವನ್ನು ಅರಗಿಸಿಕೊಳ್ಳಲು ತುಸು ಸಮಯವನ್ನೇ ತೆಗೆದುಕೊಂಡಿದ್ದ. ಅಪ್ಪ ಏನನ್ನೂ ನೇರವಾಗಿ ಹೇಳದಿದ್ದರೂ ಅವರ ನೋವು ಅರ್ಥವಾಗಿತ್ತು. ಆದರೆ ಪ್ರಾಯದ ಉತ್ಸಾಹ ಬಹಳ ದಿನಗಳವರೆಗೆ ಅವನನ್ನು ಸುಮ್ಮನಿರಲು ಬಿಡಲಿಲ್ಲ. ತಿಂಗಳು ಎರಡು ತಿಂಗಳುಗಳವರೆಗೆ ಹಾಗೂ ಹೀಗೂ ಕಾಲ ಹಾಕಿದವ ನಷ್ಟದ ನೋವು ಆರುತ್ತಲೇ ಪುನಃ ಹೊಸ ಸಾಹಸಕ್ಕೆ ಕೈ ಹಾಕಿದ್ದ. ಬಹುಶಃ ಶಾಮಣ್ಣನವರಿಗೂ ಮೂವತ್ತು ಸಾವಿರ ಕಳೆದದ್ದು ಮರೆತಿರಬೇಕು. ಅಲ್ಲ. ಹೆಂಡತಿ ಅಷ್ಟೊಂದು ರಗಳೆ ಮಾಡದ್ದರಿಂದ ಅವರ ಮನಸ್ಸಿನಲ್ಲೂ ಹೆಚ್ಚು ದಿನ ಉಳಿದಿರಲಿಲ್ಲ.

ಆದಿಯ ಅಪ್ಪ ಶಾಮಣ್ಣನವರ ಕುಟುಂಬದ ಶ್ರೀಮಂತಿಕೆ ಎಷ್ಟು ಹಳೆಯದೆಂದು ಈಗಿನ ಯಾರಿಗೂ ತಿಳಿಯದು. ಅವರಿಗೆಲ್ಲ ತಿಳಿದುದೆಂದರೆ ಶಾಮಣ್ಣನವರ ಅಪ್ಪನ ಕಾಲದಿಂದ ಇಂದಿನ ವರೆಗೆ ಮುಂದುವರಿದುಕೊ೦ಡು ಬಂದ ಆ ಶ್ರೀಮಂತಿಕೆ ಮಾತ್ರ. ಅದಕ್ಕೂ ಹಿಂದಿನಿ೦ದಲೂ ಇದ್ದಿರಬಹುದು. ಆದರೆ ಆ ಬಗ್ಗೆ ಲಭ್ಯವಿರುವ ದಾಖಲೆಗಳನ್ನು ಯಾರೂ ಪರಿಶೀಲಿಸುವ ಗೋಜಿಗೆ ಹೋಗದ್ದರಿಂದ ಖಚಿತವಾದ ಮಾಹಿತಿ ಯಾರಲ್ಲೂ ಇಲ್ಲ. ಕಾಲ ಕಾಲದಿಂದಲೂ ಅವರು ಶ್ರೀಮಂತರೇ ಇದ್ದಿರಬೇಕು ಎಂದು ಹೆಚ್ಚಿನವರ ಅನಿಸಿಕೆ. ಶಾಮಣ್ಣನವರ ಅಪ್ಪನ ದೊಡ್ಡಸ್ತಿಕೆ ಮತ್ತು ಆ ಗಾಂಭೀರ್ಯ ನೋಡಿದ್ದವರಿಗೆ ಯಾರಿಗೂ ಹೊಳೆದೀತು ಇದು ತಲ ತಲಾಂತರದಿAದ ಬಂದದ್ದೇ ಇರಬೇಕು' ಎಂದು. ಶಾಮಣ್ಣನವರು ನೋಡಿದ್ದಾರೆ.

ಚಿಕ್ಕವರಾಗಿದ್ದ ಅವರು ಅಪ್ಪನ ದರ್ಪ ಮತ್ತು ಸಿಟ್ಟನ್ನು ಕಣ್ಣಾರೆ ಕಂಡಿದ್ದಾರೆ. ಕೆಲಸ ಮಾಡುವ ಮಂದಿ ಆರಡಿ ದೇಹವನ್ನು ಮೂರಡಿ ಮಾಡಿಕೊಂಡು ಅಪ್ಪನೆದುರು ನಿಲ್ಲಲೂ ಹೆದರಿ ಮೂಲೆಯಲ್ಲಿ ಮುದುರಿಕೊಂಡು ನಡುಗುತ್ತಿರುವಾಗ ಆಪ್ಪ ಗುಡುಗುವುದನ್ನು ಕಂಡು ಹುಡುಗ ಶಾಮ ಚಡ್ಡಿ ಒದ್ದೆ ಮಾಡಿಕೊಂಡು ಒಳಗೋಡಿ ಅಮ್ಮನ ಸೆರಗಿನ ಮರೆಯಲ್ಲಿ ಅಡಗಿಕೊಂಡದ್ದಿತ್ತು. ಅಪ್ಪ ಊಟಕ್ಕೆ ಕುಳಿತಾಗ ಮಾಣಿ ಊಟ ಮಾಡಿದನೇ’ ಎಂದು ಕೇಳುವ ಅಬ್ಬರಕ್ಕೇ ಈ ಮಾಣಿಗೆ ಉಂಡದ್ದೆಲ್ಲ ಕೆಳಗಡೆಯಿಂದ ಹೊರಬರುವಂತಾಗುತ್ತಿತ್ತು.

ಅಮ್ಮ ಒಬ್ಬಳಲ್ಲದಿದ್ದರೆ ಬಹುಶಃ ಈ ಶಾಮನ ಬಾಲ್ಯದ ದಿನಗಳು ಬರೀ ದುಃಸ್ವಪ್ನವೇ ಆಗಿ ಬಿಡುತ್ತಿತ್ತೇನೋ. ಹಾಗೆಂದು ಆ ಅಮ್ಮನೇನೂ ಅಪ್ಪನ ಎದುರಿಗೆ ನಿಲ್ಲುತ್ತಿದ್ದಳೆಂದಲ್ಲ. ಅವಳೂ ಮಗನ ಹಾಗೆಯೇ. ಆ ಗಂಡ ಎಂದರೆ ಹೆದರಿ ಸಾಯುತ್ತಿದ್ದಳು. ಎದುರಿಗೆ ಬಂದರೆ ತಲೆಯ ಮೇಲೆ ಸೆರಗು ಎಳೆದುಕೊಂಡು ಮರೆಯಾಗುತ್ತಿದ್ದ ಆ ಅಮ್ಮ ಅದೇ ಸೆರಗಿನ ಮರೆಯನ್ನು ಆ ಮಗನನ್ನು ರಕ್ಷಿಸಲೂ ಬಳಸುತ್ತಿದ್ದುದು.

ಹಾಗೆಂದು ಆ ಅಪ್ಪ ಮಗನಿಗೆ ಎಂದೂ ಹೊಡೆದವರಲ್ಲ. ಬೇರೆ ಯಾರಿಗೆ ಹೊಡೆದವರೂ ಅಲ್ಲ. ಅವರ ಸ್ವರವೇ ಹಾಗೆ. ನಿಲುವೇ ಇನ್ನೊಬ್ಬರನ್ನು ಹೆದರಿಸುವಂತಹದು. ಶಾಲೆಯಲ್ಲಿ ಮೇಷ್ಟ್ರು ಹೇಳುವ ಕಥೆಯಲ್ಲಿ ಬರುವ ರಾಕ್ಷಸ ಈ ಅಪ್ಪನಷ್ಟೇ ದೊಡ್ಡದಿರುತ್ತದೇನೋ ಎಂದು ಕಲ್ಪಿಸಿಕೊಂಡದ್ದಿತ್ತು ಶಾಮಣ್ಣ. ಅವರಿಗೆ ನೆನಪಿದೆ. ಒಂದು ದಿನ ಶಾಲೆಯಿಂದ ಬಂದವ ಶಾಲೆಯ ಅಂಗಿ ಚಡ್ಡಿ ಕಳಚಿ ಬೇರೆ ಪಂಚೆಯ ತುಂಡೊ೦ದನ್ನು ಸುತ್ತಿಕೊಳ್ಳುತ್ತಿದ್ದಾಗ ಅಪ್ಪನ ಆರ್ಭಟ ಕೇಳಿದ್ದೇ ಕೈಯ್ಯಲ್ಲಿದ್ದ ಪಂಚೆ ತುಂಡು ಹಾಗೇ ಕೆಳಗೆ ಬಿದ್ದುದನ್ನು ಎತ್ತಿಕೊಳ್ಳಲೂ ಮರೆತು ಪಡಸಾಲೆಯನ್ನು ದಾಟಿ ಅಡಿಗೆ ಮನೆಯೊಳಗೆ ಓಡಿದ್ದ. ಪಾಪ ಆ ತಾಯಿಯೇ ತನ್ನ ಸೆರಗಿನ ಮರೆಯಲ್ಲಿ ಅವನನ್ನು ಹೊರಗೆ ಕರೆದುಕೊಂಡು ಬಂದು ಆ ತುಂಡನ್ನು ಸುತ್ತಿದ್ದಳು.

ಸುತ್ತಿದ ತುಂಡನ್ನು ಜಾರಿ ಹೋಗದಂತೆ ಕೈಯ್ಯಲ್ಲಿ ಹಿಡದುಕೊಂಡೇ ಹೊರಗೆ ಇಣುಕಿದರೆ ಅಂಗಳದ ಮೂಲೆಯಲ್ಲಿ ಯಾವಾಗಲೂ ಮನೆ ಕೆಲಸಕ್ಕೆ ಬರುವ ನಾಲ್ಕಾರು ಜನ ಮುದುರಿಕೊಂಡು ನಿಂತಿದ್ದರು. ಅಪ್ಪನ ಆರ್ಭಟಕ್ಕೆ ನಡುಗುತ್ತಿದ್ದ ಅವರ ಜೊತೆ ಶಾಮನೂ ನಡುಗತೊಡಗಿದ್ದ. ಆದರೂ ಅವನಿಗೆ ತಿಳಿದದ್ದು ಇಷ್ಟು. ತೀರ ಅಗತ್ಯದ ಕೆಲಸ ಮಾಡಲು ಎರಡು ದಿನಗಳಿಂದ ಬರಬೇಕಿದ್ದ ಆ ಗಂಡಾಳುಗಳು ಬಂದಿರಲಿಲ್ಲ. ಮತ್ತು ಕೆಲಸಕ್ಕೆ ಬರದ್ದರಿಂದ ಮನೆಯಲ್ಲಿ ಒಲೆ ಹತ್ತಿಸುವ ಕೆಲಸವೂ ಇರಲಿಲ್ಲ ಎಂದು ಆ ಮನೆಯ ಹೆಂಗಸರು ಮನೆಯೆದುರಿಗೆ ಬಂದು ಅಲವತ್ತುಕೊಂಡರೆ ಅಪ್ಪ ಹೇಳಿದ್ದರು ಕರೆದುಕೊಂಡು ಬನ್ನಿ ಆ ಸೋಮಾರಿಗಳನ್ನು. ಎರಡು ಗ್ಲಾಸು ಏರಿಸಿದರೆ ಮತ್ತೆ ಈ ಪ್ರಪಂಚದ ಜ್ಞಾನವೇ ಇರುವುದಿಲ್ಲ' ಎಂದು. ಈಗ ಆ ಹೆಂಗಸರು ತಮ್ಮ ಗಂಡ೦ದಿರನ್ನು ಕರೆದುಕೊಂಡು ಬಂದಿದ್ದಾರೆ.

ಮನೆಯಿಂದ ಹೊರಡುವಾಗ ವೀರಾವೇಶದ ಮಾತುಗಳನ್ನು ಆಡುತ್ತನಾವೇನು ಅವರ ಜೀತದವರೇ.. ಅವರ ಮನೆಯಲ್ಲಿ ವರ್ಷದ ಮುನ್ನೂರ ಅರವತ್ತೈದು ದಿನವೂ ದುಡಿಯಲು. ಮನಸ್ಸು ಬಂದರೆ ಅವರ ಮನೆಯ ಕೆಲಸಕ್ಕೆ ಹೋಗುತ್ತೇವೆ. ಇಲ್ಲದಿದ್ದರೆ ಬೇರೆ ಎಲ್ಲೋ… ದುಡಿದು ತಿನ್ನುವವರಿಗೆ ಎಲ್ಲಾದರೆ ಏನು..’ ಎಂದೆಲ್ಲ ಹೇಳುತ್ತ ಬಂದವರು ಇವರ ಮನೆ ಅಂಗಳ ಹತ್ತುತ್ತಲೇ ಕೈ ಕಾಲು ನಡುಗಲಾರಂಭಿಸಿದ್ದು ನಾಲಗೆ ಹಿಂಗಿ ಹೋಗಿ ಮಾತೇ ಇಲ್ಲದವರಾಗಿದ್ದರು. ಮಾತಾಡಲು ಪ್ರಾರಂಭಿಸಿದ ಹೆಂಗಸರೂ ಅಪ್ಪ ಒಮ್ಮೆ ಗುಟುರು ಹಾಕಿದ್ದೇ ಶಬ್ದ ಹೊರಡದ ಬಾಯಿಯಿಂದ ಬೆ… ಬ್ಬೆ… ಅನ್ನಲಿಕ್ಕೆ ಪ್ರಯತ್ನ ಪಟ್ಟರೂ ಆ ಶಬ್ದಗಳೂ ಹೊರಡದೆ ಸುಮ್ಮನೇ ನಿಂತಿದ್ದರು.

ಅಪ್ಪ ಬಾಯಿ ಸೋಲುವವರೆಗೆ ಬೈದರು. ಬೈಗಳದ ಕೊನೆಯಲ್ಲಿ ಅಮ್ಮನನ್ನು ಕರೆದು ನೋಡು ಇವಳೇ ಅವಕ್ಕೆ ಒಂದು ಹತ್ತು ಸೇರು ಅಕ್ಕಿ ಅಳೆದು ಕೊಡು' ಎಂದರು ಮತ್ತು ಆ ಮಂದಿಗೆನೋಡಿ, ನಾಳೆಯಿಂದ ಎಲ್ಲಾದರೂ ಕೆಲಸಕ್ಕೆ ತಪ್ಪಿಸಿದರೆ ಬಲಿ ಹಾಕಿ ಬಿಡುತ್ತೇನೆ’ ಎಂದೂ ಹೇಳಿದರು. ಆಯ್ತು ಅಯ್ಯ... ಆಯ್ತು ಅಯ್ಯ..' ಎನ್ನುತ್ತ ಅಮ್ಮ ಅಳೆದು ಕೊಟ್ಟ ಅಕ್ಕಿಯನ್ನು ಲಗುಬಗೆಯಿಂದ ಕಟ್ಟಿಕೊಳ್ಳುತ್ತ ಹೊರಡುವಾಗ ಇವ ಜಾರುತ್ತಿದ್ದ ತುಂಡನ್ನು ಹಿಡಿದುಕೊಂಡೇ ಹೊರಗೆ ಓಡಿದರೆ ಅವರಷ್ಟಕ್ಕೇ ಅವರು ಮಾತಾಡಿಕೊಳ್ಳುತ್ತಿದ್ದುದು ಇವನ ಕಿವಿ ಮೇಲೆ ಬಿದ್ದಿತ್ತು ನೀನು ಏನೇ ಹೇಳು ತಿಮ್ಮ.. ಅಯ್ಯ ದೇವರಂತಹವರು. ನಾಲ್ಕು ಮಾತನಾಡುತ್ತಾರೆ. ನೋಡು ಎರಡು ದಿನದಿಂದ ಕೆಲಸಕ್ಕೆ ಹೋಗಲಿಲ್ಲ. ಆದರೂ ಮನೆಯಲ್ಲಿ ಒಲೆ ಹಚ್ಚುವ ಕೆಲಸವೇ ಇಲ್ಲ ಎಂದಾಕ್ಷಣ ಹತ್ತು ಸೇರು ಅಕ್ಕಿ ಅಳೆಸಿದರು ನೋಡು’. ಇವನಿಗೂ ಅನ್ನಿಸಿತ್ತು ಅಪ್ಪ ಒಳ್ಳೆಯವರು ಎಂದು. ಆದರೂ ಅವರ ಬಗ್ಗೆ ಅವನಲ್ಲಿದ್ದ ಹೆದರಿಕೆ ಮಾತ್ರ ಹೋಗಿರಲಿಲ್ಲ.

ಮನೆಯಲ್ಲಿ ಅಕ್ಕಿ ಮುಡಿಗಳನ್ನು ಪೇರಿಸಿಡುವ ಕಾಲದಲ್ಲಿ ಅಪ್ಪನ ಗತ್ತನ್ನು ನೋಡಬೇಕು. ಶಾಮ ಮೂರನೇ ಕ್ಲಾಸೋ ಏನೋ ಆಗ. ಒಂದರ ಮೇಲೆ ಒಂದರ೦ತೆ ಕೋಣೆಯಲ್ಲಿ ಸಾಲು ಸಾಲಾಗಿ ಇಟ್ಟ ಅಕ್ಕಿ ಮುಡಿಗಳನ್ನು ಇವ ಎಣಿಸಲು ಪ್ರಯತ್ನಿಸಿ ಸೋತದ್ದಿತ್ತು. ಎಷ್ಟು ತಲೆ ತುರಿಸಿಕೊಂಡು ಮಗ್ಗಿ ನೆನಪಿಸಿಕೊಂಡರೂ ಪ್ರಯೋಜನವಾಗಿರಲಿಲ್ಲ. ಅದೇ ಅಪ್ಪ ಇನ್ನೂರ ನಲವತ್ತೆಂಟು ಮುಡಿ ಒಳಗಿದೆ.

ಕೆಲಸದವರಿಗೆ ಮಜೂರಿಗೆಂದು ಹೊರಗಡೆಯಿಟ್ಟ ಕಜೆ ಅಕ್ಕಿಯ ಇಪ್ಪತ್ತು ಮುಡಿಗಳನ್ನು ಸೇರಿಸಿದರೆ ಇನ್ನೂರ ಅರವತ್ತೆಂಟು ಮುಡಿ ಆಯ್ತು. ಏನಾದರೂ ಕಳೆದ ವರ್ಷಕ್ಕಿಂತ ಮೂವತ್ತು ಮುಡಿ ಕಡಿಮೆಯೇ ಎಂದಾಗ ಇವನಿಗೆ ಅಚ್ಚರಿಯೋ ಅಚ್ಚರಿ. ಅಪ್ಪನ ಬುದ್ಧಿವಂತಿಕೆಯ ಬಗ್ಗೆಯೂ ಗೌರವ ಮೂಡಿತ್ತು.

। ಇನ್ನು ನಾಳೆಗೆ ।

‍ಲೇಖಕರು Admin

May 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: