
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.
‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.
ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.
ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.
35
ಎಲ್ಲೆಲ್ಲೋ ಅಲೆದರೂ ಕೊನೆಗೆ ಸಿಕ್ಕಿದ್ದು ಉಲ್ಲಾಳದ ಜಟ್ಟಿಯ ಪಕ್ಕದಲ್ಲಿದ್ದ ಸಾಮಿಲ್ಲು. ಒಂದು ದೃಶ್ಯಕ್ಕಾಗಿ ತುಂಬಾ ದೂರ ಹೋಗುವುದು ಬೇಡ ಎಂದು ಉಲ್ಲಾಳದ ಸಾಮಿಲ್ಲಿನಲ್ಲೇ ಚಿತ್ರೀಕರಣ ಮಾಡೋಣ ಎಂದು ನಿರ್ಧರಿಸಿದೆವು. ಸಮುದ್ರದ ಜಾಗ ಕಿರಿದಾಗಿತ್ತಾ ಕೋಚೆಯಾಗುವ ಜಾಗದಲ್ಲಿ ಸಾಲು ಸಾಲಾಗಿ ದಡದಲ್ಲಿ ನಿಂತಿರುವ ದೋಣಿಗಳು.
ಒಂದು ದೋಣಿಯ ಮೇಲೆ ಹಸಿರು ಧ್ವಜವಿದ್ದರೆ ಇನ್ನೊಂದರ ಮೇಲೆ ಬಿಳಿಯದ್ದು, ಮತ್ತೊಂದರ ಮೇಲೆ ಭಾರತದ ಧ್ವ ಜ ಹಾರಾಡುತ್ತಿದ್ದವು. ಗಾಳಿಗೆ ತೂಗುತ್ತಾ ನಿಂತ ಈ ಧ್ವಜಗಳಿಗೆ ಯಾವ ನಿರ್ಬಂಧವೂ ಇಲ್ಲ ಗಾಳಿಗೆ ಸ್ವಚ್ಚಂದ ಆಡುತ್ತಿದ್ದವು. ಅದೇ ಮನುಷ್ಯರೆಲ್ಲರೂ ಹೀಗೆ ಪಕ್ಕ ಪಕ್ಕದಲ್ಲಿ ಎಲ್ಲ ಧರ್ಮಗಳೂ ನಿಲ್ಲುವ ದಿನ ಬರಲಿ ಎನ್ನುವ ಪ್ರಾರ್ಥನೆ ಮಾಡುವ ಹಾಗಿತ್ತು.
ಸಾಮಿಲ್ಲು ಆಬ್ದುಲ್ಲಾ ಎನ್ನುವ ವ್ಯಕ್ತಿಯದ್ದೆಂದು ಅಂದುಕೊಳ್ಳುತ್ತೇನೆ. ಉದಾರವಾದ ಮನಸ್ಸಿನಿಂದ ಅದನ್ನು ನಮಗೆ ಚಿತ್ರೀಕರಿಸಲು ಕೊಟ್ಟಿದ್ದರು. ಇಂಥಾ ಜಾಗಾಗಳಿಗೆ ನಾವು ಹಣವನ್ನೇನು ಕೊಡುತ್ತಿರಲಿಲ್ಲವಾದ್ದರಿಂದ ಎಶಾಹ್ಟೋ ಬಾರಿ ನಮಗೆ ಬೇಕಾದ ಲೊಕೇಷನ್ ಸಿಗುತ್ತಲೇ ಇರಲಿಲ್ಲ. ಸಾಮಿಲ್ಲು ಗಾತ್ರದಲ್ಲಿ ತುಂಬಾ ದೊಡ್ಡದಲ್ಲದಿದ್ದರೂ ನಮ್ಮ ಚಿತ್ರೀಕರಣಕ್ಕೆ ಅನುಕೂಲವಾಗುವ ಹಾಗೆ ಎಲ್ಲ ಕಡೆಯಲ್ಲಿ ಬಾಗಿಲುಗಳಿತ್ತು. ಬಹುಶಃ ಮರವನ್ನು ಕುಯ್ಯುವಾಗ ಸಣ್ಣ ದೂಳು ಕೊಡುವ ಕಾಟವನ್ನು ನಿಯಂತ್ರಿಸಲಿಕ್ಕೆ ಹೀಗೆ ಬಾಗಿಲುಗಳು ಇದ್ದಿರಬೇಕು.
ಒಂದು ನಿಮಿಷವೂ ಆ ಸಾಮಿಲ್ಲಿನಲ್ಲಿ ಬಿಡುವಿರುತ್ತಿರಲಿಲ್ಲ. ಜಟ್ಟಿ ಪಕ್ಕದಲ್ಲೇ ಇದ್ದಿದ್ದರಿಂದ ದೋಣಿಗಳ ಸಣ್ಣ ಪುಟ್ಟ ರಿಪೇರಿಗೂ ಅಲ್ಲಿ ಜನ ಇರುತ್ತಿದ್ದರು. ಕಬ್ಬಿಣದ ಪಟ್ಟಿಗಳು ಮರ ಕುಯ್ಯುವ ಸಣ್ಣ ಸಣ್ಣ ಮಿಷನ್ನುಗಳು, ಮೊಳೆ, ಸುತ್ತಿಗೆ, ಗರಗಸ, ರಿಪೇರಿ ಮಾಡುತ್ತಿದ್ದ ಕಟ್ ಕಟ್ ಶಬ್ದ, ಹಳೆಯದಾಗಿ ರಿಪೇರಿಗೆ ಬರಲೇ ಆಗದು ಎನ್ನುವಷ್ಟು ಹಾಳಾದ ದೋಣಿಗಳು ಗಾಳಿ ಮಳೆಗೆ ತುಂಡಾಗುತ್ತಾ ತಮ್ಮ ಕುರುಹುಗಳನ್ನು ಬಿಟ್ಟುಕೊಡುತ್ತಿದ್ದವು. ನೆನೆಯಿಟ್ಟ ಮರದ ತುಂಡುಗಳು, ಬಿಸಿಲಿನಲ್ಲಿ ಒಣಗುತ್ತಿದ್ದ ದೊಡ್ದ ದೊಡ್ಡಮರದ ದಿಮ್ಮಿಗಳು, ಎಲ್ಲಿಂದಲೋ ತಂದ ದಿಮ್ಮಿಗಳನ್ನು ಅನ್‌ಲೋಡ ಮಾಡುತ್ತಿದ್ದ ಲಾರಿಗಳು. ಸದಾ ಚಟುವಟಿಕೆಯಲ್ಲಿದ್ದ ಜಾಗವದಾಗಿತ್ತು.
ಸಲ್ಮಾ ಹೆರಿಗೆಗಾಗಿ ತವರಿಗೆ ಹೋಗುವ ಮುನ್ನ ಗಂಡ ಮಹಮದನಿಗೆ ಹೇಳಿ ಹೋಗಲು ಬರುವ ದೃಶ್ಯವನ್ನು ಅಲ್ಲಿ ಚಿತ್ರೀಕರಿಸುವುದಿತ್ತು. ಸಾಮಿಲ್ಲಿನಲ್ಲಿ ಕೆಲಸ ಮಾಡುತ್ತಿರುವ ಮಹಮದನಿಗೆ ಮಗಳು ಬಂದು ಅಮ್ಮ ಕರೆಯುತ್ತಿದ್ದಾಳೆ ಎನ್ನುತ್ತಾಳೆ. ಆ ಶಬ್ದದಲ್ಲಿ ಏನೂ ಕೇಳುತ್ತಿರಲಿಲ್ಲ. ಆದರೆ ಆ ಮಗುವಿನ ಹಾವ ಭಾವ ಚೆನ್ನಾಗಿತ್ತು. ನಿನಾಸಂನ ಕಲಾವಿದೆಯಾಗಿದ್ದ ಸ್ಪಂದನಾಳ ಮಗಳು ಅದು. ಹುಟ್ಟಿದಂದಿನಿಂದ ತಾಯಿಯನ್ನು ನೋಡುತ್ತಾ ಬಂದ ಮಗುವಿಗೆ ಕಲೆಯ ಬಗ್ಗೆ ಹೇಳದೆಯೇ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಬಂದುಬಿಟ್ಟಿತ್ತು. ಬಂದೆ’ ಎನ್ನುತ್ತಾ ಹೊರಗೆ ಬರುವ ಮಹಮದ್, ಅಜಲಮೊಗೇರು ದರ್ಗಾಗೆ ಹರಕೆ ಹೊತ್ತದ್ದರ ಬಗ್ಗೆ ಮಾತಾಡಿ, ಗಂಡು ಮಗುವಿನ ಆಸೆಯನ್ನು ಹೇಳಿಕೊಳ್ಳಬೇಕು.

ಸಂಜೆಯ ಸೂರ್ಯಾಸ್ತಮಾನದ ದೃಶ್ಯವದಾಗಿತ್ತು. ಮಹಮದ್ ಬಂದು ನಿಂತು ಡೈಲಾಗ್ ಅನ್ನೂ ಹೇಳಿಬಿಟ್ಟ. ಅದಕ್ಕೆ ಸಲ್ಮಾ ಹೆಣ್ಣು ಮಕ್ಕಳೋ ಗಂಡೋ ಮುಖ್ಯವಲ್ಲ. ಅವರ ಚೆನ್ನಾಗಿ ಬದುಕಲಿಕ್ಕೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ರೆ ಸಾಕು ಎಂದು ಪ್ರತಿ ಮಾತನ್ನು ಹೇಳುವಾಗ ಇಬ್ಬರಿಗೂ ಜಗಳ ಆಗಿ ಅವಳು ಬ್ಯಾಗನ್ನು ತೆಗೆದುಕೊಂಡು ಹೋಗಬೇಕು, ಡೈಲಾಗ್ ಹೇಳಿ ಪಕ್ಕದಲ್ಲಿದ್ದ ಬ್ಯಾಗನ್ನು ಎತ್ತಿಕೊಳ್ಳಲು ನೋಡುತ್ತಾಳೆ, ಬ್ಯಾಗೇ ಇಲ್ಲ!ಪ್ರಾಪರ್ಟಿ ಎಲ್ಲಿ ಮೇಡಂ?’ ಎಂದು ಪಂಚಾಕ್ಷರಿ ಕೇಳಿದರು, ನಾನು ಅದನ್ನು ತೆಗೆದುಕೊಂಡು ಬನ್ನಿ ಎಂದು ಕಾಸ್ಟ್ಯೂಮ್‌ರವರ ಬಳಿ ಹೇಳಿ, ಸಾಮಿಲ್ಲಿನಲ್ಲಿ ವ್ಯವಸ್ಥೆ ಮಾಡಲಿಕ್ಕೆ ಬಂದಿದ್ದೆ. ಅವರು ತಮ್ಮದ್ದಲ್ಲದ್ದರಿಂದ ಮರೆತು ಅದನ್ನು ಅಲ್ಲೇ ಬಿಟ್ಟು ಬಂದರು.
ಅವತ್ತು ನಮಗೂ ತುಂಬಾ ಕೆಲಸ ಆಗಿತ್ತು. ಬೆಳಗ್ಗೆ ಬೆಟ್ಟಂಪಾಡಿಯ ಮಹಮದನ ಮನೆಯಲ್ಲಿ, ಮಧ್ಯಾಹ್ನ ಸಾಮಿಲ್ಲು ಮತ್ತು ಸಂಜೆ ಪಾತುಮ್ಮನ ಮನೆಯ ಚಿತ್ರೀಕರಣ ಹಾಕಿಕೊಂಡಿದ್ದೆವು. ಜಯಶ್ರೀಯವರು ಹತ್ತು ದಿನಗಳನ್ನು ನಮಗೆ ಕೊಟ್ಟಿದ್ದರು. ಅಷ್ಟರಲ್ಲಿ ಅವರ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಬೇಕಿತ್ತು. ಮಧ್ಯದಲ್ಲಿ ಎರಡು ಸಲ ಅವರ ಸ್ವಂತ ಕೆಲಸದ ಕಾರಣಕ್ಕೆ ಬೆಂಗಳೂರಿಗೆ ಬರಬೇಕಿತ್ತು. ಅವರಿಲ್ಲದಿದ್ದಾಗ ಬೇರೆ ದೃಶ್ಯಗಳನ್ನು ಚಿತ್ರೀಕರಿಸುವ ಹಾಗೆ ಪ್ಲಾನ್ ಮಾಡಿದ್ದೆವು. ಹೀಗಾಗಿ ಅವತ್ತು ವಿಪರೀತ ಕೆಲಸ ಆಗಿಬಿಟ್ಟಿತ್ತು. ಊಟಕ್ಕೂ ಸಮಯವಿಲ್ಲದೆ ಕೆಲಸ ಮಾಡುತ್ತಿದ್ದೆವು. ಹಾಗಾಗಿ ಎಡವಟ್ಟಾಗಿಬಿಟ್ಟಿತ್ತು.
ಪೊಸಿಷನ್‌ನಲ್ಲಿ ನಿಂತು ಡೈಲಾಗ್ ಹೇಳಿದ ಸಲ್ಮಾ ಪಾತ್ರಧಾರಿ ಸ್ಪಂದನಾ ತನ್ನ ಬ್ಯಾಗಿಗಾಗಿ ಹುಡುಕಾಟ ಮಾಡಿದರು. ಅದು ಇರಲಿಲ್ಲ ಬ್ಯಾಗನ್ನು ನಮ್ಮ ಡಿಪಾರ್ಟೆ್ಮಂಟಿನವರೇ ತಂದಿಡಬೇಕಿತ್ತು. ಆದರೆ ನಾವು ಕಾಸ್ಟ್ಯೂಮ್‌ನವರಿಗೆ ಒಪ್ಪಿಸಿದ್ದರಿಂದ ಅವರೇ ಕೊಟ್ಟಿರುತ್ತಾರೆ ಎನ್ನುವ ಭಾವನೆಯಲ್ಲಿ ನಾವಿದ್ದೆವು. ಬ್ಯಾಗ್ ಹಿಂದಿನ ದೃಶ್ಯವನ್ನು ಮಾಡಿದ ಜಾಗದಲ್ಲೆ ಉಳಿದುಬಿಟ್ಟಿತ್ತು ಎನ್ನುವುದು ಅಲ್ಲಿಯ ವರೆಗೆ ಗಮನಕ್ಕೆ ಬಂದಿರಲಿಲ್ಲ. ತಪುö್ಪ ನಮ್ಮದೇ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಕೆಲಸದ ಒತ್ತಡಕ್ಕೆ ಬಿದ್ದು ತಪ್ಪಾಗಿಬಿಟ್ಟಿತ್ತು. ಸಮರ್ಥನೆ ದೋಷಾರೋಪಣೆ ಸಾಮಾನ್ಯ. ಆದರೆ ಸಮಯ ವ್ಯರ್ಥವಾಗುವುದನ್ನು ತಡೆಯಲಾಗಲೇ ಇಲ್ಲ.
ಉಳಿದು ಹೋದ ದೃಶ್ಯದ ಒಂದು ಭಾಗವನ್ನು ಸುಮ್ಮನೆ ಹಾಗೆ ಚಿತ್ರೀಕರಿಸಲು ಬರುವುದಿಲ್ಲ. ಬಟ್ಟೆ, ವಸ್ತುಗಳ ಕಂಟಿನ್ಯುಟಿಯ ಹಾಗೆ ಕಾಲದ ಕಂಟಿನ್ಯುಟಿ ಕೂಡಾ ಇರುತ್ತದೆ. ಮತ್ತೆ ಆ ದೃಶ್ಯವನ್ನು ಚಿತ್ರೀಕರಿಸಲಿಕ್ಕೆ ಇದೇ ಹೊತ್ತಿಗೆ ಬರಬೇಕು. ಇಲ್ಲದಿದ್ದರೆ ಹಿಂದಿನ ದೃಶ್ಯಕ್ಕೂ ಈಗ ನಡೆಯುವ ದೃಶ್ಯಕ್ಕೂ ಸಮಯದ ಹೊಂದಾಣಿಕೆಯಾಗುವುದಿಲ್ಲ. ಮತ್ತು ಅದೇ ಬೇರೆ ಸಮಯ ಇದೇ ಬೇರೆ ಸಮಯ ಎನ್ನುವುದು ಟೋನ್‌ನಲ್ಲೇ ಗೊತ್ತಾಗಿಬಿಡುತ್ತದೆ.
ಮಾರನೇ ದಿನ ಈ ದೃಶ್ಯವನ್ನು ಪೂರ್ಣ ಮಾಡುವ ಅನಿವಾರ್ಯತೆ ಇದ್ದಿದ್ದರಿಂದ ಮತ್ತೆ ಹೊರಾಂಗಣ ಚಿತ್ರೀಕರಣ ಹಾಕಿಕೊಂಡರೆ ಕಷ್ಟವಾಗುತ್ತೆ ಎಂದು ಮನೆಯ ಒಳಗಿನ ದೃಶ್ಯಗಳಿಗೆ ಬದಲಿಸಿಕೊಂಡು, ಆ ಸಮಯಕ್ಕೆ ಕಾದು ಶೂಟ್ ಮಾಡಬೇಕಾಯಿತು.
ಹಾಗೆ ಚಿತ್ರೀಕರಣ ಮಾಡುವಾಗ ಎರಡು ದೋಣಿಗಳು ಸ್ವಲ್ಪ ಸ್ವಲ್ಪ ದೂರದಲ್ಲಿ ಇದ್ದವು. ಆಸಕ್ತಿದಾಯಕ ಸಂಗತಿ ಎಂದರೆ ಒಂದು ಹಸಿರು ಬಾವುಟವನ್ನೂ ಇನ್ನೊಂದು ಭಾರತದ ಬಾವುಟವನ್ನೂ ಹೊಂದಿದ್ದವು. ನಮಗಾಗಿ ಹೊಳೆದು ಮಾಡಲಿಕ್ಕಾಗದ ಸಂಗತಿಯೊAದು ಅಲ್ಲಿ ತಾನಾಗೇ ಆಗಿತ್ತು. ಆ ಎರಡೂ ದೋಣಿಗಳು ಕವರ್ ಆಗುವ ಹಾಗೆ ಸಲ್ಮಾ ಮತ್ತು ಮಹಮದ್ ನಿಂತು ಮಾತನಾಡುತ್ತಿದ್ದುದನ್ನು ಶೂಟ್ ಮಾಡಿದೆವು. ಒಂದು ಧರ್ಮದ ನಂಬಿಕೆಯಾದರೆ, ಇನ್ನೊಂದು ಭಾರತದ ಸಂವಿಧಾನದ ಉದ್ದೇಶವನ್ನು ಹೇಳುವ ಹಾಗೆ ಆ ದೃಶ್ಯ ಸಂಭಾಷಣೆಯ ಜೊತೆಗೆ ಸೇರಿತ್ತು. ಇವೆಲ್ಲಾ ನೋಡುಗರು ಗಮನಿಸುತ್ತಾರೆ ಅಂತ ಅಲ್ಲ. ಆದರೆ ಒಂದು ಸಿನೆಮಾ ಏನು ಹೇಳಬೇಕು ಎನ್ನುವುದನ್ನು ಎಲ್ಲರೂ ಮನಗಂಡಾಗ ಸಿಗುವ ಕೆಲ ಝಲಕುಗಳು ಇಂಥವು. ಇವು ಸಾಂಕೇತಿಕವಾಗಿ ಪ್ರಾತಿನಿಧಿತ್ವವನ್ನು ಈ ಕಾರಣಕ್ಕೆ ಪಡೆದುಕೊಳ್ಳುತ್ತವೆ.

ಈ ದೃಶ್ಯವನ್ನು ನೋಡಲಿಕ್ಕೆ ಎಲ್ಲಾ ವಯೋಮಾನದ ಗಂಡಸರುಗಳು ಅಲ್ಲಿ ಸೇರಿದರು. ಏನು ನಡೀತಿದೆ ಎನ್ನುವ ಕುತೂಹಲ ಅವರಿಗೆ. ಕೆಲವರು ದಿಮ್ಮಿಗಳ ಮೇಲೆ ಕೂತು ಬೀಡಿ ಸೇದಿದರೆ, ಇನ್ನು ಕೆಲವರು ಸಾಮಿಲ್ಲಿಗೆ ಬಂದವರು ತಮಗೆ ಬೇಕಾದ ಮರವನು ಖರೀದಿಸುತ್ತಾ ನೋಡಿದರು. ಹಾಗೆ ಹೀಗೆ ಹೋಗುತ್ತಿದ್ದ ಕೆಲ ಯುವಕರೂ ಅಲ್ಲಿ ಬಂದು ಸೇರಿದರು. ನಮಗೆ ಸ್ವಲ್ಪ ಭಯ ಕೂಡಾ ಇತ್ತು. ನಂಬಿಕೆ ಮತ್ತು ಬದುಕಿನ ಕ್ರಮಗಳ ಬಗ್ಗೆ ಹೀಗೆ ಸಾರ್ವಜನಿಕವಾಗಿ ಮಾತಾಡುವಾಗ ಯಾರು ಏನನ್ನುತ್ತಾರೋ ಎಂದು. ಎಲ್ಲರನ್ನೂ ಸ್ವಲ್ಪ ದೂರವೇ ನಿಲ್ಲಿ’ ಎಂದು ಕೇಳಿಕೊಂಡೆವು, ಸ್ಪಷ್ಟವಾಗಿ ಆ ಮಾತುಗಳು ಅವರನ್ನು ತಲುಪದೇ ಇರಲಿ ಎಂದು. ಅದು ಸಂಜೆಯ ಏರು ಸಮಯ. ಮದರಸಾ ಬಿಟ್ಟಿದ್ದರಿಂದ ಹೆಣ್ಣುಮಕ್ಕಳೆಲ್ಲಾ ಮಕ್ಕಣಿ ಧರಿಸಿ ಚೀಲವನ್ನು ಬಗಲಿಗೆ ಹಾಕಿಕೊಂಡು ಹೊರಟಿದ್ದರು.
ಈ ದೃಶ್ಯಕ್ಕೆ ಆ ಹಿನ್ನಲೆಯೂ ಸಿಕ್ಕಿಬಿಟ್ಟಿತ್ತು. ಕೆಲವೊಮ್ಮೆ ನಿರೀಕ್ಷಿಸದೆ ಏನಾದರೂ ಹೀಗೆ ವಿಷೇಷವಾಗಿ ಸಿಕ್ಕರೆ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ನಾವು ಸೃಜನಶೀಲವಾದಾಗ ಇಂಥಾ ಸಂಗತಿಗಳು ಗೋಚರಿಸುತ್ತವೆ. ಅದನ್ನು ಬಳಸಿಕೊಳ್ಳುವ ಸಮಯ ಪ್ರಜ್ಞೆ ಮಾತ್ರ ನಮಗೆ ಬೇಕಾಗುತ್ತದೆ. ಅವತ್ತು ಸಲ್ಮಾ ಪಾತ್ರಧಾರಿ ಸ್ಪಂದನಾ ಅದ್ಭುತವಾಗಿ ನಟನೆ ಮಾಡಿದರು. ಆವರನ್ನು ಪ್ರಶಂಸಿಸುವ ಹಾಗೆ ನಾವೆಲ್ಲಾ ಚಪ್ಪಾಳೆ ತಟ್ಟಿದೆವು.
ಅಚ್ಚರಿಯೆಂದರೆ ನಾವು ಮಾತ್ರವಲ್ಲ ಅಲ್ಲಿದ್ದ ಮುಸಲ್ಮಾನ ಬಂಧುಗಳೂ ಕೂಡಾ ಚಪ್ಪಾಳೆ ತಟ್ಟಿದ್ದರು. ನಾವು ತಟ್ಟಿದೆವು ಅಂತಲಾ? ಅಥವಾ ಕಲಾವಿದರನ್ನು ಪ್ರೋತ್ಸಾಹಿಸಲಿಕ್ಕಾ? ಅಥವಾ ನಿಜಕ್ಕೂ ಆ ಡೈಲಾಗ್ ಅವರಿಗೆ ತುಂಬ ಇಷ್ಟ ಆಯಿತಾ? ಎಂದು ನಮಗೆ ಅರ್ಥವಾಗಲಿಲ್ಲ. ನಮ್ಮೊಳಗಿದ್ದ ಗೊಂದಲವನ್ನು ಒಡೆದು ಹಾಕುವ ಹಾಗೆ ಅಲ್ಲಿದ್ದ ಹಿರಿಯರೊಬ್ಬರು,ನಮ್ಮ ಹೆಣ್ಣುಮಕ್ಕಳ ಬಗ್ಗೆ ನಾವೆಲ್ಲಾ ಹೀಗೆ ಯೋಚಿಸಿಬಿಟ್ಟರೆ ನಮ್ಮ ಮಕ್ಕಳೂ ಚೆನ್ನಾಗಿರುತ್ತಾರೆ ಅಲ್ಲವಾ?’ ಎಂದರು. ಸಂಜೆ ಸೂರ್ಯ ಮೆಲ್ಲನೆ ಕೆಂಪಗಾಗುತ್ತಿದ್ದ. ಸಮುದ್ರವೂ ಕೂಡಾ. ಮುಖದಲ್ಲಿ ಫಲಿಸಿದ ಕೆಂಪು ಬದುಕನ್ನೂ ಆವರಿಸಲಿ ಎನ್ನಿಸಿದ್ದು ಮಾತ್ರ ಖಂಡಿತಾ ಆಕಸ್ಮಿಕ ಅಲ್ಲ.
। ಇನ್ನು ಮುಂದಿನ ವಾರಕ್ಕೆ ।






0 Comments