ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಚಂದ್ರಿಕಾ ಅಂಕಣ – ಗುರಿಯಲ್ಲ ಅದರೆಡೆಗಿನ ಪಯಣವೇ ಮುಖ್ಯ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

38


ಮಳೆಬಿಟ್ಟರೂ ಮರದ ಹನಿ ಬಿಡದು ಎನ್ನುವಂತಿತ್ತು ನಮ್ಮ ಕೆಲಸ. ಮಾರನೆಯ ದಿನ ಬೆಳಗ್ಗೆ ಚಂದ್ರಹಾಸರು ತಮ್ಮ ಕಾರನ್ನು ತೆಗೆದುಕೊಂಡು ಬಂದರು. ಅವರ ಸಾರಥ್ಯದಲ್ಲಿ ಮುಲ್ಕಿ-ಉಲ್ಲಾಳದ ಮಧ್ಯೆ ಇದ್ದ ಎಸ್ ಪಿ ಸೆಂಟರ್ ಎನ್ನುವ ಅಂಗಡಿಯಲ್ಲಿ ಅಲೀಮಮ್ಮ, ಹಸೀನಮ್ಮ ಮತ್ತು ಪ್ರೇಮಾ ಬೋಳಾ ರಂಗನಾಥ್ ಅವರಿಗೆ ಸೀರೆಗಳನ್ನು ತೆಗೆದುಕೊಂಡೆವು.

ಪಾತುಮ್ಮನ ಮನೆಯ ಜಾಗಕ್ಕೆ ಬಂದಾಗ ಜಕ್ಕು ಮಹಮದ್‌ನ ಸೈಕಲ್ ಕಾಣಿಸಿತು. ಹಸೀನಮ್ಮ ನಮ್ಮನ್ನು ನೋಡಿ ಮಾರ್ಮಿಕವಾಗಿ, ಬೆಳಗಿನಿಂದ ಕಾಯ್ತಾ ಇದಾರೆ ನಮ್ಮ ಜಕ್ಕು ಕಾಕ’ ಎಂದಳು. ನಿಮ್ಮ ಜಕ್ಕು ಕಾಕ ನಮ್ಮ ಹತ್ತಿರ ಇವತ್ತು ಜಗಳ ಆಡದಿದ್ದರೆ ಅಷ್ಟೇ ಸಾಕು’ ಎಂದು ನಾನೂ ತಿಳಿ ನಗುವಿನೊಂದಿಗೆ ಹೇಳಿದೆ. ನಿಮ್ಮ ಬಳಿ ಜಗಳ ಆಡಿದರೆ ನಾವೆಲ್ಲಾ ಸುಮ್ಮನೆ ನೋಡಿಕೊಂಡು ಇರುತ್ತೀವಾ?’ ಎಂದು ಹಸೀನಮ್ಮ ಹೇಳಿದಾಗ ಅರಿಯದಲೇ ನನ್ನ ಕಣ್ಣಿನಲ್ಲಿ ನೀರು ಜಿನುಗಿತ್ತು.

ನನಗೆ ಮೊದಲಿನಿಂದಲೂ ಈ ಸೌಹಾರ್ದ ಎನ್ನುವ ಪದದ ಮೇಲೆ ನಂಬಿಕೆ ಇಲ್ಲ. ಅದೊಂದು ರಾಜಕೀಯ ಪ್ರೇರಿತವಾದ ಮಾತೆಂದೇ ಅನ್ನಿಸುತ್ತದೆ. ಅದು ಪ್ರೀತಿ ಮಾತ್ರ ಮನುಷ್ಯನ ಎದೆಯಿಂದ ಎದೆಗೆ ಹರಿವ ಅಮೃತವಾಹಿನಿ. ಕೊಟ್ಟ ಮಾತಿನಂತೆ ಅಲೀಮಮ್ಮನ ಬಳಿ ಉಪ್ಪಿನ ಕಾಯನ್ನು ಕೊಂಡೆ. ಎಲ್ಲಿ ನಿಮ್ಮ ಹೀರೋ ಒಮ್ಮೆಗೂ ಕಾಣಿಸಲೇ ಇಲ್ಲ ಎಂದೆ. ನಿಮ್ಮದು ತಮಾಷೆಯಾ ಎಂದು ನಾಚಿಕೊಂಡರು ಅಲೀಮಮ್ಮ. ಈಗಲೂ ನಾನು ಹೇಳದೆ ಇದ್ದರೆತಪ್ಪಾದೀತು ಎಂದು, ಹಣವನ್ನು ಕೊಡುವ ನೆಪದಲ್ಲಿ, ಮೊದಲ ಬಾರಿಗೆ ಪರದೆಯನ್ನು ಸರಿಸಿ ಕರೆದ ಅವರ ಕೈಗಳನ್ನು ಹಿಡಿದು, ಅಲೀಮಮ್ಮ ನೀವು ಥೇಟ್ ಮಧುಬಾಲಾ ಥರಾನೇ ಇದೀರಿ’ ಎಂದೆ. ಅವರ ಗಲ್ಲ ಕೆಂಪಾಯಿತು. ನನ್ನ ಸಾಬ್ ಕೂಡಾ ಹೀಗೇ ಹೇಳಿದ್ದರು’ ಎಂದರು. ನಾನು ಹುಸಿ ಮುನಿಸಿನಿಂದ, ಎಲ್ಲವನ್ನೂ ಹೇಳಿದ್ದೀರಿ, ನಿಮ್ಮ ಸಾಬ್ ಹೇಳಿದ ಈ ಮಾತನ್ನು ಯಾಕೆ ಹೇಳಲಿಲ್ಲ’ ಎಂದೆ. ಇಷ್ಟೇ ಅಲ್ಲ ಹೇಳಲಿಕ್ಕೆ ತುಂಬಾ ಇದೆ’ ಎಂದರು ಹೆಮ್ಮೆಯಿಂದ ಅಲೀಮಮ್ಮ.

ಮುಂದೆ ಒಂದು ದಿನ ಬಿಡುವಾಗಿ ಬರುತ್ತೇನೆ, ಆಗ ಎಲ್ಲವನ್ನೂ ಹೇಳಿ ನಿಮ್ಮ ಮೇಲೆ ನಾನೊಂದು ಕಾದಂಬರಿ ಬರೆಯುತ್ತೇನೆ’ ಎಂದೆ. ನೀವೊಂದು ಸುಮ್ಮನಿರಿ’ ಎಂದು ಪ್ರೀತಿಯಿಂದ ನನ್ನ ಬೆನ್ನ ಮೇಲೆ ಹೊಡೆದರು. ನಾನ್ಯಾಕೆ ಬರುತ್ತೇನೆ ಎಂದು ಇವರಿಗೆ ಮಾತನ್ನು ಕೊಡುತ್ತಿದ್ದೇನೆ? ಅಥವಾ ಬರಿಯ ಮಾತಿಗೆ ಹೇಳುತ್ತಿದ್ದೇನೆಯೇ? ಯಾಕೋ ಇದ್ದಕ್ಕಿದ್ದ ಹಾಗೆ ಅಮ್ಮ ಹೇಳುತ್ತಿದ್ದ ಮಾತು ನೆನಪಾಅಯಿತು. ದೇವಸ್ಥಾನದಿಂದ ಹೊರಗೆ ಬರುವಾಗ ಗಂಟೆ ಹೊಡೆಯಬೇಡ ಅದು ಮತ್ತೆ ಬರುತ್ತೇನೆಂದು ದೇವರಿಗೆ ಹೇಳಿದ ಹಾಗೆ. ಅಕಸ್ಮಾತ್ ಬರಲಾಗಲಿಲ್ಲ ಎಂದರೆ ಮಾತು ತಪ್ಪಿದ ಹಾಗೆ ಆಗುತ್ತಲ್ಲವಾ? ಅದಕ್ಕೆ ಎಂದು. ನಿಜ ಅಲೀಮಮ್ಮನಿಗೆ ಹೇಳಿದ್ದಕ್ಕಾದರೂ ಮತ್ತೆ ಇಲ್ಲಿಗೆ ಬರಬೇಕು ಎಂದುಕೊಂಡೆ. ಇಷ್ಟೆಲ್ಲಾ ಆಗುವಾಗ ಶುರುವಾಗಿದ್ದು ನಮ್ಮ ಹಗ್ಗ ಜಗ್ಗಾಟ.

ಜಕ್ಕು ಮಹಮದ್ ತಮ್ಮ ತುಸುವೇ ಉಬ್ಬಿದಂತಿದ್ದ ಹೊಟ್ಟೆಯನ್ನು ಮುಂದಕ್ಕೆ ಹಾಕಿಕೊಂಡು ನಮ್ಮ ಜೊತೆ ಮಾತಿಗೆ ಇಳಿದಿದ್ದರು. ಅವರ ಕೃಶವಾಗಿದ್ದ ಕೈಕಾಲುಗಳು ಅವಶ್ಯಕತೆಗಿಂತ ಹೆಚ್ಚೇ ಆಡುತ್ತಿತ್ತು. ಎಕ್ಸೈಟ್‌ಮೆಂಟ್ ಇದ್ದೀತು. ತನ್ನ ಅಬ್ಬ ಅಲಿಯಬ್ಬ, ತಾಯಿ ಪಾತುಮ್ಮಾಬಿ ಕಟ್ಟಿಸಿದ್ದ ಮನೆಯನ್ನು ಕಾಪಾಡಿಕೊಳ್ಳುವ ಹಠವೂ ಸೇರಿತ್ತು. ನಾನು ನಾಜೂಕಾಗಿ ಜಕ್ಕು ಎನ್ನುವ ಪದ ನನ್ನ ಬಾಯಿಂದ ಅಪ್ಪಿ ತಪ್ಪಿಯೂ ಬರದೇ ಇರುವ ಹಾಗೆ ನೋಡಿಕೊಂಡು ಮಾತಾಡಿದೆ. ಮಹಮದರೇ, ನಿಮ್ಮ ಈ ಮನೆಯನ್ನು ರಿಪೇರಿ ಮಾಡಿಸಲಿಕ್ಕೆ ಆಗುವಷ್ಟು ಹಣವನ್ನು ನಮ್ಮಿಂದ ಕೊಡಲು ಸಾಧ್ಯವಿಲ್ಲ. ನಿಮಗೆ ನಾವು ಗೌರವ ಧನವನ್ನು ಮಾತ್ರ ಕೊಡಲಿಕ್ಕಾಗುತ್ತದೆ’ ಎಂದೆ.

ಜಕ್ಕು ಮಹಮದ್‌ರ ಮುಖ ಬಾಡಿತು. ಹಾಗೆಂದರೆ ಹೇಗೆ ಇವರೇ, ನಾನು ಬಡವ, ನನಗೆ ಇರುವುದು ಇದೊಂದೇ ಅವಕಾಶ, ನನ್ನ ಮನೆ ಕಡೆಯ ವರೆಗೂ ಇರುವ ಹಾಗೆ ನೋಡಿಕೊಳ್ಳಬೇಕಲ್ಲವಾ’ ಎಂದರು. ಕಡೆಗೆ ಐವತ್ತು ಆಗದಿದ್ದರೆ ಇಪ್ಪತ್ತೈದು, ಇಪ್ಪತ್ತೈದು ಆಗದಿದ್ದರೆ ಹತ್ತಾದರೂ ಕೊಡುವಂತೆ ಚೌಕಾಸಿ ಮಾಡಿ ಪಟ್ಟನ್ನು ಸಡಿಲಿಸಿ ಸಡಿಲಿಸಿ ಹಿಡಿಯುತ್ತಿದ್ದರು. ನಾವು ನಯವಾಗೇ ಅವರ ಮಾತನ್ನು ತಿರಸ್ಕರಿಸುತ್ತಾ ಬಂದೆವು. ನನ್ನ ಅಂದಾಜಿನ ಪ್ರಕಾರ ಐದು ಸಾವಿರವನ್ನಾದರೂ ಕೊಡಬಹುದು ಎಂದಿತ್ತು. ಆದರೆ ಪಂಚಾಕ್ಷರಿ ಹಾಗೆಲ್ಲಾ ಕೊಡಲಿಕ್ಕೆ ಆಗಲ್ಲ, ಇದೇನು ಇವರ ಮನೆಯನ್ನೆ ಪೂರ್ತಿ ತೆಗೆದೆವಾ. ಏನೋ ಎರಡು ದಿನ ಒಳಗೆ ಶೂಟ್ ಮಾಡಿರಬಹುದು, ನಾನು ಕೊಡುವುದೇ ೨೦೦೦ ರೂಪಾಯಿ’ ಎಂದಾಗ ಜಕ್ಕು ಮಹಮದ್‌ಗೆ ಆದಷ್ಟೇ ಆಘಾತ ನನಗೂ ಆಗಿತ್ತು.

ನನ್ನ ಮನೆಯನ್ನು ನಾನು ಹೇಗೆ ಕಾಪಾಡಿಕೊಳ್ಳಲಿ ಎನ್ನುತ್ತಿದ್ದ ಆತನನ್ನು ನಾನೂ ಚಂದ್ರಹಾಸರು ಪಕ್ಕಕ್ಕೆ ಕರೆದುಕೊಂಡು ಹೋದೆವು. ಚಂದ್ರಹಾಸರೂ ಆತನನ್ನು ಕನ್ವಿನ್ಸ್ ಮಾಡಲಿಕ್ಕೆ ನೋಡಿದರು. ಆಗಲಿಲ್ಲ. ಕಡೆಗೆ ನನ್ನ ತಲೆಯಲ್ಲಿ ಒಂದು ವಿಚಾರ ಮೂಡಿತು. ನಾನು ಜಕ್ಕು ಮಹಮದ್‌ಗೆ, ಮಹಮದ್‌ರೆ ನೀವು ನಿಮ್ಮ ಮನೆಯನ್ನು ಉಳಿಸಬೇಕು ಅಂತ ಹೇಳುತ್ತಿದ್ದೀರಾ ಅಲ್ಲವಾ? ಈಗ ನಮ್ಮಸಿನೆಮಾದಿಂದ ನಿಮ್ಮ ಮನೆ ಉಳಿದು ಬಿಟ್ಟಿದೆ’ ಎಂದೆ. ಅದು ಹೇಗೆ ಎನ್ನುವ ಪ್ರಶ್ನೆ ಅವರ ಮುಖದಲ್ಲಿ ಮೂಡಿತು. ಈ ಮನೆಯನ್ನು ರಿಪೇರಿ ಮಾಡಿಸಿದರೂ ಮುಂದಿನ ಮಳೆಗಾಲಕ್ಕೆ ಜೋರು ಕಡಲ ಕೊರೆತ ಉಂಟಾಗಿ ಮನೆ ಬಿದ್ದು ಹೋಗಲೂ ಬಹುದು. ನೋಡಿ ನಿಮ್ಮ ಮನೆ ನಮ್ಮ ಸಿನೆಮಾದಲ್ಲಿ ಸೆರೆಯಾಗಿ ಬಿಟ್ಟಿದೆ.

ನಿಮ್ಮ ಅಬ್ಬು ಮತ್ತು ಅಮ್ಮಿ ಕಟ್ಟಿದ ಇದನ್ನ ಕರ್ನಾಟಕದಲ್ಲಿ ನೋಡುತ್ತಾರೆ, ನ್ಯಾಶಿನಲ್ ಅವಾರ್ಡ್ ಬಂದರೆ ದೇಶವೆಲ್ಲಾ ನೋಡುತ್ತೆ, ಈ ಸಿನೆಮಾಗೆ ಯಾವುದಾದರೂ ಇಂಟರ್ ನ್ಯಾಷಿನಲ್ ಅವಾರ್ಡ್ ಬಂದರೆ ಇಡೀ ವಿಶ್ವವೇ ಇದನ್ನು ನೋಡುತ್ತೆ’ ಎಂದೆ. ನನ್ನ ಮಾತುಗಳಲ್ಲಿ ನಿಮ್ಮ ಮನೆ ಶಾಶ್ವತವಗಿಬಿಟ್ಟಿದೆ ಎನ್ನುವ ಧ್ವನಿಯನ್ನು ಉದ್ದೇಶಪೂರ್ವಕವಾಗಿ ಇರುವ ಹಾಗೆ ನೋಡಿಕೊಂಡೆ. ಒಂದು ಕ್ಷಣ ಮಹಮದ್‌ಗೆ ದಿಕ್ಕು ತೋಚಲಿಲ್ಲ. ನಿಧಾನಕ್ಕೆ ಅರ್ಥ ಮಾಡಿಸಿದೆ. ಹಾಗಾದ್ರೆ ನನ್ನ ಅಬ್ಬ ಅಮ್ಮಿ ಕಟ್ಟಿದ ಈ ಮನೆಯನ್ನು ಕರ್ನಾಟಕದ ಎಲ್ಲರೂ ನೋಡ್ತಾರಾ? ಎಂದರು. ಹೌದು ಮಹಮದರೇ ಎಂದೆ. ತುಸುವೇ ಚಾಚಿದ ಹಲ್ಲುಗಳನ್ನು ಇನ್ನಷ್ಟು ಮುಂದಕ್ಕೆ ಚಾಚಿ ನಗುವನ್ನು ತುಳುಕಿಸಿದರು. ನನಗೆ ಆ ನಗು ಸಮಾಧಾನವನ್ನು ತಂದುಕೊಟ್ಟಿತು. ಈಗ ನಾವು ಕೊಟ್ಟಷ್ಟನ್ನು ಅವರು ತೆಗೆದುಕೊಳ್ಳಬಹುದು ಅನ್ನಿಸಿತು.

ನಾನು ಚಂದ್ರಹಾಸರಿಗೆ ಇದರ ಜೊತೆ ಇನ್ನೊಂದು ಸಾವಿರ ಕೊಡುತ್ತೇನೆ ಸೇರಿಸಿ ಕೊಟ್ಟುಬಿಡೋಣ ಎಂದೆ. ಆದರೆ ಈಗ ಜಕ್ಕು ಮಹಮದ್ ನಮ್ಮಿಂದ ಹಣ ತೆಗೆದುಕೊಳ್ಳಲು ಸಿದ್ಧವೇ ಇರಲಿಲ್ಲ. ಅವರಿಗೆ ತನ್ನ ಮನೆಅಜರಾಮರ ಆಗಿಬಿಟ್ಟಿದೆ ಎನ್ನುವುದು ತಲೆಗೆ ಬಂದುಬಿಟ್ಟಿತ್ತು. ಅಲ್ಲಾಹ್ ನನಗೆ ದುಡಿಯಲಿಕ್ಕೆ ಶಕ್ತಿ ಕೊಟ್ಟಿದ್ದಾನೆ. ನನಗೆ ಬೇಕಿದ್ದಿದ್ದು ಈ ಮನೆಗಾಗಿ ಮಾತ್ರ. ಈಗ ನಿಮ್ಮ ಮಾತಿಂದ ಇದರ ರಿಪೇರಿಯ ಯೋಚನೆಯೂ ಬಿಟ್ಟುಹೋಯಿತು. ಇನ್ನು ಎಂತಕ್ಕೆ ಹಣ’ ಎಂದು ಹಣವನ್ನು ತೆಗೆದುಕೊಳ್ಳಲೇ ಇಲ್ಲ. ಅರೆ! ಇದೊಳ್ಳೆ ಪೀಕಲಾಟ ಆಯಿತಲ್ಲಾ? ಹಣ ಜಾಸ್ತಿ ಬೇಕು ಎನ್ನುತ್ತಿದ್ದವರು ಈಗ ಬೇಡವೇ ಬೇಡ ಎನ್ನುತ್ತಿರುವುದನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ಅರ್ಥವಾಗದೆ ಹೋಯಿತು.

ಬಲವಂತ ಮಾಡಿ ಹಣವನ್ನು ಕೊಟ್ಟೆವು. ಆತನ ಕಣ್ಣುಗಳು ಕೃತಜ್ಞತೆಯನ್ನು ಸೂಸುತ್ತಿದ್ದವು. ನನಗೆ ಮಾತುಗಳು ಸಿಕ್ಕದೆ ಪರದಾಡಿದೆ. ಆ ಹಣವನ್ನು ಕೈಲಿ ಹಿಡಿದು ಆತ ನಿಂತೇ ಇದ್ದರು. ಮನೆಯ ಪಕ್ಕದಲ್ಲಿ ಹಾಕಿದ್ದ ಗುಡಿಸಿಲಿನ ತೆರವಿನ ಕಾರ್ಯ ನಡೆಯುತ್ತಿತ್ತು. ಪಂಚಾಕ್ಷರಿ ಯಾಕೆ ಸಾಕಾಗಲ್ಲ ಅಂತ ಮತ್ತೆ ಕೇಳುತ್ತಿದ್ದಾರಾ? ಎಂದರು. ಇಲ್ಲ ನಿಮ್ಮಿಂದ ಹಣವನ್ನೇ ತೆಗೆದುಕೊಳ್ಳುವುದು ಬೇಡ ಅನ್ನುತ್ತಿದ್ದಾರೆ ಎಂದು ವಿವರಿಸಿದೆ. ಅವರು ಮಾತಾಡಲಿಲ್ಲ. ಕೆಲವೊಮ್ಮೆ ದೊಡ್ದ ಜನರಿಗೂ ಬಡತನವಿರುತ್ತೆ ಆದರೆ ಬಡತನದಲ್ಲಿರುವವರ ಶ್ರೀಮಂತಿಕೆ ನಿಜಕ್ಕೂ ದೊಡ್ಡದು ಅನ್ನಿಸಿಬಿಡುತ್ತೆ. ಜಕ್ಕು ಮಹಮದ್ ತನ್ನ ಸೈಕಲ್ ಅನ್ನು ಮರಳಿನಲ್ಲಿ ಎಳೆದುಕೊಂಡು ಹೋಗುತ್ತಿದ್ದ ದೃಶ್ಯವನ್ನು ನಾನು ಯಾವತ್ತೂ ಮರೆಯಲಾರೆ. ಯಾಕೋ ಅದು ನೆನಪಾದಾಗಲೆಲ್ಲಾ ಮನಸ್ಸು ಭಾರವೇ ಆಗುತ್ತದೆ.

ಅಲೀಮಮ್ಮ ಹಸೀನಮ್ಮನಿಗೆ ಸೀರೆಕೊಟ್ಟೆವು. ಇಬ್ಬರೂ ಪ್ರೀತಿಯಿಂದ ತೆಗೆದುಕೊಂಡರು. ಬೇರೆಯವರಿಗೆ ಹೇಳಬೇಡಿ ಅವರಿಗೆಲ್ಲಾ ತರುವಷ್ಟು ಹಣ ನಮ್ಮ ಬಳಿ ಇಲ್ಲ ಎಂದೆವು. ಸಲಾಂ ಸಾಬ್ ಗುಡಿಸಿಲಿನ ತೆರವು ಕೆಲಸದಲ್ಲಿದ್ದ. ಆತ ಕೆಲಸ ಜಾಸ್ತಿಯಾಗಿದೆ ಅದಕ್ಕೆ ಇನ್ನೊಂದು ಸಾವಿರ ಜಾಸ್ತಿ ಕೇಳುತ್ತಿದ್ದ. ನಾನು ಕೊನೆಯ ವರೆಗೂ ನೀವು ಮಾಡಿಮುಗಿಸಿ ಕೊಡುತ್ತೇನೆ ಎಂದು ಒಪ್ಪಿಸಿದ್ದೆ. ಕೊನೆಯ ದಿನವೂ ಆತನಾನು ಖೇಳಿದಷ್ಟು ಹಣವನ್ನು ಕೊಡಿ ಎಂದು ಡಿಮ್ಯಾಂಡ್ ಮಾಡುತ್ತಲೇ ಇದ್ದ. ಅವರ ಮನೆಯಿಂದತAದಿದ್ದ ಸಿಮೆಂಟ್ ಒಲೆಯನ್ನು ಎತ್ತಿಕೊಳ್ಳುವಾಗ ಒಡೆದುಬಿಟ್ಟಿದ್ದೆ. ಅದನ್ನು ಸಿಮೆಂಟ್ ಹಾಕಿ ಸರಿ ಮಾಡಬಹುದು ಎಂದು ಹೇಳಿದ್ದ.

ಕೆಲಸ ನೋಡಿ ಹಣ ನೀಡಿ ಮೇಡಂ ಎನ್ನುವುದೊಂದೇ ಅವನ ಮಾತಾಗಿತ್ತು. ಸರಿಯಪ್ಪ ನಾನು ಸಂಜೆಯ ವೇಳೆಗೆ ಬರುತ್ತೇನೆ ಆಗ ಮಿಕ್ಕದ್ದನ್ನು ಕೊಡುತ್ತೇನೆ ಎಂದು ಹೇಳಿದೆ. ಇಲ್ಲ ಚುಕ್ತಾ ಮಾಡುವಾಗ ಪೂರ್ತಿ ಮಾಡಿಬಿಡಿ ಮತ್ತೆ ನೀವು ಬಂದಾಗ ನಾನು ಇಲ್ಲದೆ ಹೋದರೆ ಎಲ್ಲ ರಗಳೆ ಎಂದ. ನೋಡಪ್ಪಾ ನಿಮಗೆ ಕೊಡಬೇಕಿರುವುದನ್ನು ಕೊಟ್ಟೇ ಕೊಡುತ್ತೇನೆ. ಮತ್ತೆನಾನು ಎಟಿಯಂಗೆ ಹೋಗಬೇಕು ನನ್ನ ಹತ್ತಿರ ಹಣ ಇಲ್ಲ ಎಂದೆ. ಕಡೆಗೆ ನನಗೆ ಬೇಸರವಾಗಿ ನಿನ್ನ ವಾದವನ್ನೇ ಮಾಡುತ್ತಿದ್ದರೆ ಹೇಗೆ ಏಳು ಸಾವಿರಕ್ಕೆ ಗುಡಿಸಲನ್ನು ಹಾಕಿ ಮತ್ತು ತೆಗೆಯಲಿಕ್ಕೆ ಅಂತ ಮಾತಾಡಿದ್ದು ಅಷ್ಟನ್ನು ಕೊಟ್ಟಿದ್ದೇವೆ. ಈಗ ಹಣ ಇಲ್ಲ ನಂಬಿಕೆ ಇಲ್ಲಾಂದ್ರೆ ನನ್ನ ನಂಬರ್ ತೆಗೆದುಕೋ. ಕೊಡಲಿಲ್ಲ ಅಂದ್ರೆ ಫೋನ್ ಮಾಡು’ ಎಂದು ನನ್ನ ಫೋನ್ ನಂಬರ್ ಕೊಡಲಿಕ್ಕೆ ಮುಂದಾದೆ.

ಸಲಾಂ ಸಾಅಬ್ ಏನಂದರೂ ನನ್ನ ನಂಬರ್ ತೆಗೆದುಕೊಳ್ಳಲಿಲ್ಲ. ಬೇಡ ಅಕಸ್ಮಾತ್ ನೀವು ಹಣ ಕೊಡದೆ ಹೋದರೆ ನಾನು ನಿಮಗೆ ಫೋನ್ ಮಾಡ್ತೀನಿ ಆಗ ನಿಮ್ಮ ಯಜಮಾನರು ಪಕ್ಕದಲ್ಲಿದ್ದರೆ ಇವ ಯಾರೋ ಯಾಕೆ ಫೋನ್ ಮಾಡಿದ್ದು ಅಂತ ಕೇಳ್ತಾರೆ. ಸುಮ್ಮನೆ ನನ್ನಿಂದ ನಿಮಗೆ ತೊಂದರೆ ಆಗಬಾರದು. ನಮ್ಮ ಮನೆಯ ಹೆಣ್ಣುಮಕ್ಕಳಿಗೆ ತೊಂದರೆ ಆದರೆ ಮನಸ್ಸಿಗೆ ನೋವಾಗುತ್ತಲ್ಲಾ? ನೀವು ಕೊಟ್ಟರೆ ಸಂತೋಷ ಕೊಡದಿದ್ದರೆ ಪರವಾಗಿಲ್ಲ ಎಂದು ಬಿಟ್ಟ. ಅವನ ಆ ಮಾತುಗಳು ಅವನೊಬ್ಬ ಜವಾಬ್ದಾರಿ ಮನುಷ್ಯ ಅನ್ನುವುದನ್ನು ಸಾಬೀತುಗೊಳಿಸಿತ್ತು. ಅವನ ಮಾತುಗಳನ್ನು ನಾನು ಎಂದಿಗೂ ನೆನಪಿಟ್ಟುಕೊಳ್ಳುತ್ತೇನೆ. ಇನ್ನೊಬ್ಬರಿಗೆ ತೊಂದರೆ ಆಗದ ಹಾಗೆ ಬದುಕುವುದು ದೊಡ್ಡ ಸಂಗತಿಯೇ. ಅಂದು ಸಂಜೆ ಆತನಿಗೆ ಹಣವನ್ನು ಕೊಟ್ಟೆ. ಸಾರಿ ಮೇಡಂ ಅಂದ. ಇರಲಿ ಪರವಾಗಿಲ್ಲ ನೀವೆಲ್ಲಾ ವಯಸ್ಸಿನಲ್ಲಿ ಸಣ್ಣವರು, ಸ್ವಲ್ಪ ಇಂಥಾ ದುಡುಕು ಇರುತ್ತೆ ಅಂದೆ. ಆ ಕೇರಿಯ ಎಲ್ಲ ಹೆಂಗಸರು ಮಕ್ಕಳು ನಮ್ಮನ್ನು ಬೀಳ್ಕೊಡಲು ಬಂದರು.

ಮಕ್ಕಳಿಗಾಗಿ ಚಾಕೋಲೇಟ್‌ಗಳನ್ನು ತೆಗೆಸಿಕೊಟ್ಟೆ. ಶೂಟಿಂಗ್ ಇದ್ದಷ್ಟು ದಿನ ನಿಮಗಾಗಿ ನಾವು ಕಾಯುತ್ತಿದ್ದೆವು. ನಾಳೆಯಿಂದ ಯಾರನ್ನ ಕಾಯುವುದು. ಮತ್ತೆ ಮೊದಲಿನ ಹಾಗೆ ಜೀವನ ಬೇಸರವಾಗುತ್ತೆ ಎಂದರು ಹೆಂಗಸರು. ನಮ್ಮ ಜೀವನವೂ ಅಷ್ಟೇ ಇಲ್ಲಿಂದ ಹೋದಮೇಲೆ ಎಲ್ಲವೂ ಮಾಮೂಲಿಯೇ. ನಿಮ್ಮ ಪ್ರೀತಿಯನ್ನು ನಾವು ಯಾವತ್ತೂ ಮರೆಯೊಲ್ಲ ಎಂದೆ ನಾನು. ಸಾಧ್ಯವಾದರೆ ನಮಗೆಲ್ಲಾ ಈ ಸಿನೆಮಾವನ್ನು ತೋರಿಸಿ ಎಂದರು ಒಬ್ಬರು. ಸಾಧ್ಯವಾದಷ್ಟೂ ಪ್ರಯತ್ನಿಸುತ್ತೇವೆ ಎಂದರು ಪಂಚಾಕ್ಷರಿ. ಕಾರು ಹೊರಟಾಗ ಎಲ್ಲರ ಕಣ್ಣು ತೇವ, ಮನಸ್ಸು ಆರ್ದ್ರ. ಆಡುತ್ತಿದ್ದ ಕೈಗಳು ನಿಧಾನಕ್ಕೆ ದೂರವಾಅಗುತ್ತಾ ಹೋಯಿತು.

ಅಲಿಯಬ್ಬ ಮತ್ತು ಫಾತುಮ್ಮಾಬಿ ಕಟ್ಟಿದ ಆ ಮನೆ ನಮ್ಮ ದೃಷ್ಟಿಯಿಂದ ದೂರಾಯಿತು. ಆದರೆ ಎಷ್ಟು ಸಂಬಂಧಗಳು ಹತ್ತಿರ ಹತ್ತಿರ. ಈಗಲೂ ಆ ಕಡಲ ತಡಿ, ತಡೆಗೋಡೆ. ಸಮುದ್ರದ ಮೊರೆತ, ಆ ಜನರ ನಗು ನನ್ನ ಮನಸ್ಸಿನಿಂದ ಅಳಿಸಲಿಕ್ಕೆ ಆಗುತ್ತಲೇ ಇಲ್ಲ. ನಾನು ಕಡಲ ತುದಿಯಬಂಡೆಯ ಮೇಲೆ ಕುಳಿತಿರುತ್ತೇನೆ. ನನ್ನ ಮನಸ್ಸಿನಲ್ಲಿ ಯಾಕೋ ದುಃಖವಿದೆ. ನಿರ್ದಿಷ್ಟ ಕಾರಣಗಳು ಎಲ್ಲಾವಾಗಲೂ ಇರುವುದಿಲ್ಲವಲ್ಲ. ಆಗ ಒಂದಿಷ್ಟು ಜನ ಬುರ್ಕಾಧಾರಿ ಹೆಣ್ಣುಮಕ್ಕಳು ಅಲ್ಲಿಗೆ ಬರುತ್ತಾರೆ.

ನಾನು ಅವರನ್ನು ನೋಡಿ ದುಃಖಿಸುತ್ತೇನೆ. ನನಗೆ ಗೊತ್ತಿದೆ ಆ ಬುರ್ಖಾದ ಹಿಂದೆ ಅಲೀಮಮ್ಮ ಹಸೀನಮ್ಮ ಪಾತುಮ್ಮ, ನುಸ್ರತ್, ಶಹಜಾನಾ, ನೂರುನ್ನೀಸಾ … ಹೀಗೆ ನನ್ನ ಎಲ್ಲಾ ಹೆಣ್ಣುಮಕ್ಕಳೂ ಇದ್ದಾರೆ ಎಂದು. ಅವರೆಲ್ಲಾ ನನ್ನ ಮುತ್ತಿಕೊಳ್ಳುತ್ತಾರೆ. ನಾನು ಕಾಣದಾಗುತ್ತೇನೆ. ಕಪುö್ಪ ಕಪುö್ಪ ಬುರ್ಕಾದ ಮಧ್ಯದಿಂದ ಒಂದು ಬಿಳಿಯ ಪಾರಿವಾಳ ಹಾರಿ ಹೋಗುತ್ತದೆ.

ಈ ಕನಸು ನನ್ನನ್ನು ಆಗಾಗ ಕಾಡುತ್ತಲೇ ಇರುತ್ತದೆ. ಒಂದು ಸಿನೆಮಾ ಪಯಣ ಇಷ್ಟು ನೆನಪುಗಳನ್ನು ಉಳಿಸಬಲ್ಲದು ಎನ್ನುವ ಊಹೆ ಕೂಡ ನನಗೆ ಇರಲಿಲ್ಲ. ಬ್ರಿಟೀಷ್ ಮಹಮದ್, ಜಕ್ಕು ಮಹಮದ್ ಮತ್ತು ಪಚ್ಚಿಲ ಮಹಮದ್ ಎನ್ನುವ ಮೂರು ಪದ್ಯಗಳನ್ನು ಬರೆದಿದ್ದೆ. ಅದನ್ನು ಓದಿದ ಬೇಲೂರು ರಘುನಂದನ, ಇದು ಗದ್ಯ ಆಗಿದ್ದಿದ್ದರೆ ಚೆನ್ನಾಗಿರ್ತಾ ಇತ್ತು’ ಎಂದು ಅಭಿಪ್ರಾಯ ಪಟ್ಟರು. ಪರಿಣಾಮ ಇಷ್ಟು ಬರೆಯಲಿಕ್ಕಾಯಿತು. ಮೂಲೆ ಮುಡುಕುಗಳಲ್ಲಿ ಇನ್ನೂ ಒಂದಿಷ್ಟು ನೆನಪುಗಳು ಮಾಸಿದ ಹಾಗಿವೆ. ಅಥವಾ ನನಗೆ ಈ ಕ್ಷಣಕ್ಕೆ ಅವು ಪ್ರಮುಖ ಅನಿಸದೆಯೂ ಇರಬಹುದು. ತುಂಬಾ ಆಪ್ತವಾದ ನೆನಪುಗಳಿಗೆ ಮತ್ತೊಮ್ಮೆ ಬರಹರೂಪ ಕೊಡುವಾಗ ಒಂದು ಸಂತೋಷ ಇರುತ್ತದೆ. ಆ ಸಂತೋಷ ಓದುಗರಾದ ನಿಮ್ಮದೂ ಆದರೆ ಅದೇ ಸಾರ್ಥಕ. ಪ್ರಕಟಣೆಯನ್ನು ಮಾಡಿ ಯಾವತ್ತೂ ನನ್ನ ಬರಹಗಳಿಗೆ ಬೆಂಬಲ ಸೂಚಿಸುತ್ತಿರುವ ಅವಧಿಗೆ ಮತ್ತು ಜಿ ಎನ್ ಮೋಹನ್‌ಗೆ ನಾನು ಆಭಾರಿ.

। ಮುಕ್ತಾಯ ।

‍ಲೇಖಕರು Admin

25 March, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading