
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.
‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.
ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.
ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.
17
ನಮ್ಮ ತಂಡದಲ್ಲಿ ಬ್ಯಾರಿ ಭಾಷೆ ಬರ್ತಾ ಇದ್ದಿದ್ದು ಇಬ್ಬರಿಗೇ, ಒಂದು ಚಂದ್ರಹಾಸರಿಗೆ, ಇನ್ನೊಂದು ಸ್ವತಃ ಬ್ಯಾರಿಯೇ ಆಗಿದ್ದ ಕಬೀರ್ ಮಾನವ್‌ಗೆ. ಫೋಟೋಗ್ರಫರ್ ಆಗಿದ್ದ ಕಬೀರ್, ಬೋಳುವಾರು ಸರ್ ಅವರ ತಮ್ಮನ ಮಗ. ಐ. ಕೆ ಬೋಳುವಾರರು ನಾಟಕ ರಂಗದಲ್ಲಿ ಸಕ್ರಿಯವಾಗಿದ್ದವರು. ತುಂಬಾ ಸಜ್ಜನಿಕೆಯ ವ್ಯಕ್ತಿ, ಅವರನ್ನು ನಾವು ಒಮ್ಮೆ ಮಾತ್ರ ಭೇಟಿಯಾಗಿದ್ದು. ಅದೂ ಬೋಳುವಾರರ ಜೊತೆ ಪುತ್ತೂರಿಗೆ ಹೋದಾಗ. ಕಬೀರ್ ನಮ್ಮನ್ನು ಬಂದು ಸೇರಿದಾಗ ಐ. ಕೆ ಬೋಳುವಾರರ ಮಗ ಎಂದು ಗೊತ್ತಿರಲಿಲ್ಲ. ಏನಾದರೂ ಮಾಡಬೇಕು ಎನ್ನುವ ಛಲ ಅವರ ಕಣ್ಣುಗಳಲ್ಲಿ ಎದ್ದು ಕಾಣುತ್ತಿತ್ತು. ಕಬೀರ'ಸರಿಮಾನವ್ ಯಾಕೆ?’ ಎಂದು ಯಾರೋ ಅವನನ್ನು ರೇಗಿಸಿದ್ದರು.
ಮುಕ್ಕಚೇರಿಯ ಹೆಂಗಸರೆಲ್ಲಾ ನಮ್ಮನ್ನು ನೋಡಿ ಏನು ಮಾತಾಡಿಕೊಳ್ಳುತ್ತಾರೆ ಎನ್ನುವ ಕುತೂಹಲ ನನಗೆ. ಆದರೆ ಅವರ ಭಾಷೆ ನನಗೆ ಬರದು. ಬೀಡಿ ಕಟ್ಟುತ್ತಲೋ, ಅಕ್ಕಿ ಕೇರುತ್ತಲೋ, ಇಲ್ಲಾ ರಂಜಾನ್‌ಗೆ ತಿಂಡಿಯ ಮೇಲೆ ಹೊದಿಸಲು ಬೇಕಾದ ಬಟ್ಟೆಯನ್ನು ಕ್ರೋಷದಲ್ಲಿ ದಾರದಿಂದ ಹೆಣೆಯುತ್ತಲೋ ಕುಳಿತರೆ ಅವರ ಕೆಲಸವೂ ಆಗುತ್ತೆ, ನಮ್ಮನ್ನು ಗಮನಿಸಿದ ಹಾಗೂ ಆಗುತ್ತೆ. ನಾವು ಶೂಟಿಂಗ್‌ಗೆ ಹೋಗುವ ಮೊದಲಿಗೆ ಗಂಡಸರೆಲ್ಲಾ ಕೆಲಸಕ್ಕೆಂದು ಮನೆಯನ್ನು ಬಿಟ್ಟಿರುತ್ತಿದ್ದರು. ಮುಲ್ಕಿಯ ಹೊಟೇಲಿನಿಂದ ಮುಕ್ಕಚೇರಿ ತಲುಪುವಾಗ ಹತ್ತು ಗಂಟೆ ಆಗಿಬಿಡುತ್ತಿತ್ತು.
ಸಮುದ್ರದ ತಡೆಗೋಡೆಗೆ ಅಂಟಿಕೊಂಡಂತೆ ಆ ಕೇರಿ ಸೂರ್ಯ ನೆತ್ತಿಯ ಮೇಲೆ ಬರುವಾಗ ಸ್ತಬ್ಧವಾಗಿಬಿಡುತ್ತಿತ್ತು. ಯಾರಾದರೂ ಹೊರಗೆ ಬರುವವರಿದ್ದರೆ, ಅವರು ತಲೆಯ ಮೇಲೆ ವೇಲೊಂದನ್ನು ಹಾಕಿಕೊಂಡೋ, ಇಲ್ಲ ಟೋಪಿಯನ್ನು ಧರಿಸಿಯೋ ಬರುತ್ತಿದ್ದರು. ಉರಿವ ಆ ಬಿಸಿಲಿಗೆ ಕರುಣೆಯೇ ಇರುತ್ತಿರಲಿಲ್ಲ. ಚರ್ಮವನ್ನು ಸೀಸಿ ಒಳಗಿನತನಕ ಇಳಿದು ನವೆ ಉರಿ ಉಂಟುಮಾಡುತ್ತಿತ್ತು. ನನಗೆ ಕೈ ಮೇಲೆಲ್ಲಾ ಸನ್ ಬರ್ನ್ಸ್ ಆಗಿತ್ತು. ತಕ್ಷಣ ಏನಾಗುತ್ತಿದೆ ಎಂದು ನನಗೆ ಅರಿವಾಗದೇ ಹೋದದ್ದರಿಂದ ಏನೋ ಅಲರ್ಜಿ ಆಗಿರಬೇಕು ಎಂದುಕೊಂಡೆ. ಮಾತ್ರೆಯ ಬಾಕ್ಸ್ನಿಂದ ಒಂದು ಸಿಟ್ರಿಜಿನ್ ತೆಗೆದುಕೊಂಡೆ. ಆದರೆ ಏನೂ ಪ್ರಯೋಜನ ಇಲ್ಲ.

ಬಿಸಿಲು ಬಿದ್ದ ಕಡೆಯೆಲ್ಲಾ ಚರ್ಮ ಕಲ್ಲಂಗಡಿ ಹಣ್ಣಿನ ಬಣ್ಣಕ್ಕೆ ತಿರುಗಿಬಿಟ್ಟಿತ್ತು. ಇದೆಂಥಾ ಮಾಡಿಕೊಂಡ್ರಿ? ಇದೆಲ್ಲಾ ಬೇಕಿತ್ತಾ ನಿಮಗೆ? ತಣ್ಣಗೆ ಮನೆಯಲ್ಲಿರಬಹುದಿತ್ತಲ್ಲಾ’ ಎಂದರು ಅಲ್ಲಿದ್ದ ಹೆಂಗಸರು. ನನಗೆ ಹಿಂದೆಂದೂ ಹೀಗಾಗಿರಲಿಲ್ಲ ಏನು ಹುಳ ಕಚ್ಚಿತೋ ಅಲರ್ಜಿ ಆಗಿರಬೇಕು’ ಎಂದೆ. ಅದಕ್ಕೆ ವಯಸ್ಸಾದ ಮಧುಬಾಲಾ ಅಲೀಮಮ್ಮ, ಇದು ಅಲರ್ಜಿ ಇಲ್ಲ ನಮ್ಮ ಸೂರ್ಯನಿಗೆ ನೀವಂದ್ರೆ ಇಷ್ಟ ಅದಕ್ಕೆ ನಿಮಗೆ ಮುತ್ತುಕೊಟ್ಟಿದ್ದಾನೆ’ ಎಂದರು. ಅವರ ಮಾತಿಗೆ ನಾನೂ ಸೇರಿದಂತೆ ಅಲ್ಲಿದ್ದವರೆಲ್ಲಾ ನಕ್ಕೆವು.ಇದಕ್ಕೆ ಮದ್ದು ನಾನು ತರುವೆ’ ಎಂದು ಎದ್ದುಹೋಗಿ ಕೊಬ್ಬರಿ ಎಣ್ಣೆಯನ್ನು ತಂದು, ಕೆಂಪಗಾದ ಕಡೆಯೆಲ್ಲಾ ಸವರಿದ್ದರು. ಎರಡು ದಿನ ಔಷಧಿ ಮಾತ್ರೆ ಅಂತೆಲ್ಲಾ ಆದ ಮೇಲೆ, ಸನ್‌ಸ್ಕ್ರೀನ್ ಲೋಷನ್ ಕೊಂಡುತಂದಿದ್ದೆ. ಬಳ್ಳಾರಿಯ ಪಕ್ಕದ ಚಳ್ಳಕೆರೆ ನನ್ನ ತವರು ಮನೆಯಾದ್ದರಿಂದ, ಆ ಬಿಸಿಲನ್ನೇ ತಡೆದಿದ್ದ ನನಗೆ ಈ ಬಿಸಿಲು ಏನೂ ಮಾಡಲಾರದು ಎನ್ನುವ ಹುಂಬತನ. ಕಲಿಯ ಬೇಕಾದ ಬುದ್ಧಿಯನ್ನು ಸೂರ್ಯ ಎಷ್ಟು ಚೆನ್ನಾಗೇ ಕಲಿಸಿದ್ದ!
ನನಗೆ ಬ್ಯಾರಿಭಾಷೆಯಲ್ಲಿ ನಮ್ಮ ಬಗ್ಗೆ ಆ ಹೆಂಗಸರೆಲ್ಲಾ ಏನು ಮಾತಾಡಿಕೊಳ್ಳುತ್ತಾರೆ ಎನ್ನುವ ಕುತೂಹಲ ಎಂದೆನಲ್ಲವೇ? ಹೆಂಗಸರು ಹೀಗೆಲ್ಲಾ ಬಂದು ಕೆಲಸ ಮಾಡಿರುವುದನ್ನು ನೋಡಿರದ ಅವರು ನನ್ನ ಕುಟುಂಬದ ಬಗ್ಗೆ, ಗಂಡ-ಮಕ್ಕಳ ಬಗ್ಗೆ ಮಾತಾಡುತ್ತಿದ್ದುದನ್ನು ಕಬೀರ್ ಹೇಳುತ್ತಿದ್ದರು. ನಿಮಗೆ ಗಂಡ ಇದ್ದಾರಾ ಇಲ್ಲವಾ ಎನ್ನುವುದೇ ಅವರ ಸಮಸ್ಯೆ ಎಂದಿದ್ದರು. ಎಲ್ಲರೂ ಕೂತಿದ್ದಾಗ ನಾನು ನಗುತ್ತಾ ನನ್ನ ಗಂಡ, ಮಗನ ಬಗ್ಗೆ ಹೇಳುತ್ತಿದ್ದೆ. ನಿಮ್ಮ ಅತ್ತೆ ಇಷ್ಟು ದೂರ ಕಳಿಸಿ ಏನೂ ಮಾತಾಡುವುದಿಲ್ಲವಾ?’ ಎಂದು ಹಸೀನಮ್ಮ ಕೇಳಿದರೆ, ಅಲೀಮಮ್ಮನಿಗೆಮಗ ನಿಮ್ಮನ್ನು ನೆನೆಸಿಕೊಳ್ಳುವುದಿಲ್ಲವಾ?’ ಎನ್ನುವ ಪ್ರಶ್ನೆ ಕಾಡುತ್ತಿತ್ತು.
ನನ್ನ ಬಗ್ಗೆ ಇವರು ಎಷ್ಟೆಲ್ಲಾ ಕಾಳಜಿ ತೆಗೆದುಕೊಳ್ಳುತ್ತಿದ್ದಾರಲ್ಲಾ ಎನ್ನಿಸುತ್ತಿತ್ತು. ಇಲ್ಲಿ ಮಾಡುವ ಕೆಲಸಕ್ಕಾಗಿ ನನಗೆ ಏನು ಸಂಬಳ ಎನ್ನುವುದು ಅವರ ಇನ್ನೊಂದು ಕುತೂಹಲದ ಸಂಗತಿಯಾಗಿತ್ತು. ಇದು ಹಣದ ಸಂಗತಿಯಲ್ಲ ಹುಚ್ಚಿನ ಸಂಗತಿ ಎನ್ನುವುದನ್ನು ಅವರಿಗೆ ನಾನು ತಿಳಿ ಹೇಳಲಾರದೆ ಹೋದೆ. ಇಂಥಾ ಹುಚ್ಚುಗಳಿಗೆ ಅವರಲ್ಲಿ ಜಾಗವೇ ಇರಲಿಲ್ಲ. ಹೊಟ್ಟೆ, ಬಟ್ಟೆ, ಗಂಡ, ಮಕ್ಕಳು ಹೆಚ್ಚೆಂದರೆ ಸಿನಿಮಾ, ಇಲ್ಲ ನೆಂಟರ ಮನೆ ಇಷ್ಟೆ ಜಗತ್ತಾದ ಅವರುಗಳಿಗೆ ನನ್ನ ಹುಚ್ಚನ್ನು ಏನೋ ಅದ್ಭುತವಾದದ್ದನ್ನು ಸಾಧಿಸಲು ಬಂದಿದ್ದೇನೆ ಎಂದು ಹೇಗೆ ಹೇಳುವುದು. ಹೇಳಿದರೂ ಅರ್ಥವಾಗುವ ಸ್ಥಿತಿಯಲ್ಲಿ ಅವರೂ ಇರಲಿಲ್ಲ. ಆಕ್ಟರುಗಳು ಮಾತಾಡುತ್ತಾರೆ ಅವರಿಗೆ ಮಾತು ಬರುವುದಿಲ್ಲವಾ? ಅವರಿಗೆ ನೀವೆಂಥÀ ಮಾತು ಬರೆಯುವುದು’ ಎಂದು ಕೇಳಿ ನನ್ನಲ್ಲಿ ಇನ್ನಷ್ಟು ನಗು ತರಿಸುತ್ತಿದ್ದರು. ನಾನು ವಿವರಿಸಿದರೆ ಅದು ಅವರಿಗೆ ಆಘಾತದ ಸಂಗತಿ.ಹೌದಾ ಹಾಗಾದರೆ ಸಲ್ಮಾನ್ ಖಾನ್ ಅವನೇ ಮಾತಾಡುವುದಿಲ್ಲವಾ? ಅವನಿಗೆ ಮಾತು ಬರುವುದಿಲ್ಲವಾ?’ ಎಂದೆಲ್ಲಾ ಕೇಳುತ್ತಿದ್ದರು. ನಾನು ಇಲ್ಲ' ಎಂದರೆ ನಂಬಲಿಕ್ಕೆ ಅವರು ತಯಾರಿಲ್ಲ.ಅವನಿಗೆ ಹಾಡಲಿಕ್ಕೆ ಬರಲಿಕ್ಕಿಲ್ಲ, ಆದರೆ ಚಂದ ಮಾತಾಡುತ್ತಾನೆ, ಭಾಷಣ ಮಾಡುವುದನ್ನು ನಾನು ಟಿವಿಯಲ್ಲಿ ಕೇಳಿದ್ದೇನೆ’ ಎನ್ನುತ್ತಿದ್ದರು.
ಅಲ್ಲಮ್ಮಾ ಪ್ರತಿ ಸಿನಿಮಾಗೆ ಅವನಿಗೆ ಕಥೆ ಮಾಡುತ್ತಾರೆ, ಆ ಕಥೆಗೆ ತಕ್ಕ ಹಾಗೆ ಸೀನ್ ಡಿವೈಡ್ ಮಾಡಿ, ಅದಕ್ಕೆ ಮಾತು ಬರೆಯಬೇಕು. ಎಲ್ಲಕ್ಕೂ ಜನ ರ‍್ತಾರೆ. ಅವರು ಮಾಡಿದರೆ, ಇವರು ಮಾತಾಡುವುದು. ನಿಮಗೆ ನೋಡಲಿಕ್ಕೆ ಸಿನೆಮಾ ಅಂತ ಆಗುವುದು’ ಎಂದೆಲ್ಲಾ ವಿವರಿಸುತ್ತಿದ್ದೆ. ಎಷ್ಟೋ ರ‍್ಷಗಳಿಂದ ನನ್ನ ಜೊತೆಯಲ್ಲಿರುವವರಿಗೆ ಇದು ಗೊತ್ತಿಲ್ಲ, ಅಂದಮೇಲೆ ಸುಭಾಷ್ ನಗರದ ಸಮುದ್ರದ ತಡೆಗೋಡೆಗಂಟಿಕೊಂಡು ಜೀವನ ನಡೆಸುತ್ತಿರುವ ಪುಟ್ಟ ಜಗತ್ತಿನ ಇವರಿಗೆ ಬರೆಯುವವರೇ ಬೇರೆ, ಹೇಳುವವರೇ ಬೇರೆ ಎಂದು ಹೇಗೆ ಗೊತ್ತಾಗಬೇಕು? ಚಿಕ್ಕ ವಯಸ್ಸಿನಲ್ಲಿ ನನ್ನ ಜೊತೆಯ ಹುಡುಗಿಯೊಂದಿಗೆ ಆದ ಜಗಳ ಇನ್ನೂ ನೆನಪಲ್ಲಿದೆ.
ದಿನಾ ರೇಡಿಯೋ ಕೇಳುತ್ತಿದ್ದ ನನಗೆ ಹಾಡುವವರು ಎನ್ನುವ ವಿಷಯ ಕಿವಿ ಮೇಲೆ ಬಿದ್ದು ಗೊತ್ತಾಗಿತ್ತು. ಆದರೆ ನನ್ನ ಗೆಳತಿಗೆ ಅದು ಗೊತ್ತಿರದ ಕಾರಣ ಕಲ್ಪನಾನೇ ಹಾಡುತ್ತಾಳೆ. ಜಯಂತಿಯೇ ಹಾಡುತ್ತಾಳೆ ಎಂದು ವಾದಮಾಡುತ್ತಿದ್ದಳು. ಈಗಲೂ ಹೋದಲ್ಲಿ ನಿನ್ನ ಕೆಲಸ ಏನು?’ ಎಂದು ಕೇಳುವವರಿಗೆ ನಾನು ಬರೆಯುತ್ತೇನೆ’ ಎಂದರೆ ನಗುತ್ತಾರೆ. ಬರೆದು ಯಾರಾದರೂ ಮಾತಾಡಲಿಕ್ಕಿದೆಯಾ?’ ಎಂದು. ನಟರೇ ಎಲ್ಲವನ್ನೂ ಸೃಷ್ಟಿಸಬಲ್ಲ ಅದ್ಭುತ ಜೀವಗಳು ಎಂದು ನಂಬಿರುತ್ತಾರೆ. ತೆರೆ ಮರೆಯಲ್ಲಿ ಕೆಲಸ ಮಾಡುವವರ ಬಗ್ಗೆ ಕಲ್ಪನೆಯೇ ಇಲ್ಲ. ಇಷ್ಟೆಲ್ಲಾ ವಿವರಿಸಿದ ಮೇಲೆ ನೀವು ಇಷ್ಟೆಲ್ಲಾ ಓದಿ ಈ ಕೆಲಸ ಮಾಡುವುದಾ? ಬದಲಿಗೆ ಆಕ್ಟ್ ಮಾಡಿದ್ದಿದ್ರೆ ಫೇಮಸ್ ಆಗುತ್ತಿದ್ದಿರಲ್ಲಾ’ ಎಂದು ನನ್ನ ಮೇಲೆ ಕನಿಕರ ತೋರುತ್ತಿದ್ದರು. ಎಲ್ಲಾ ಒಂದೇ ಕೆಲಸ ಮಾಡಿದರೆ ಮಿಕ್ಕ ಕೆಲಸ ಮಾಡುವವರು ಯಾರು? ಇದು ಅವರಿಗೆ ಅರ್ಥವಾಗುತ್ತಿರಲಿಲ್ಲ. ಆದರೆ ಇಂಥಾ ಮಾತುಕತೆಗಳಲ್ಲಿ ಒಂದು ಥರದಾ ಮಜಾ ಇರುತ್ತಿತ್ತು.

ಈ ಸಿನಿಮಾ ಪ್ರಪಂಚದ ಬಗ್ಗೆ ಅರಿವೇ ಇಲ್ಲದ ಜನ, ಸಿನಿಮಾದ ಬಗ್ಗೆ ಹೇಗೆ ಯೋಚಿಸುತ್ತಾರಲ್ಲಾ? ಅದಕ್ಕೆ ಇರಬೇಕು ಸಾಮಾನ್ಯ ಜನಕ್ಕೆ ನಟರುಗಳು ದೇವರ ಹಾಗೆ ಕಾಣುವುದು. ನಟರೇ ಎಲ್ಲವನ್ನೂ ಮಾಡುತ್ತಾರೆ ಎಂದು ನಿರ್ಧರಿಸಿಬಿಟ್ಟಿರುತ್ತಾರೆ. ಮುಕ್ಕಚೇರಿಯ ಹೆಂಗಸರು ನನಗೂ ಅಲ್ಪ ಸ್ವಲ್ಪ ಬ್ಯಾರಿ ಭಾಷೆಯನ್ನೂ ಕಲಿಸಿದರು. ಬೆಳಗೆದ್ದು ಬಂದಾಗ ತಿಂಡಿ ಆಯಿತಾ? ‘ಊಟ ಆಯಿತಾ?’, ನಿನ್ನ ಹೆಸರೇನು?’ ಇಂಥಾ ಸಣ್ಣ ಸಣ್ಣ ವಾಕ್ಯಗಳನ್ನು ಅವರಿಂದಲೇ ಕೇಳಿ ಕಲಿತು ಅವರನ್ನೇ ಕೇಳುತ್ತಿದ್ದೆ. ನನ್ನ ಉಚ್ಛಾರ ಸರಿ ಇರುತ್ತಿರಲಿಲ್ಲವೋ ಅಥವಾ ನಾನು ಕಲೀತಿದ್ದೇನಲ್ಲಾ ಎನ್ನುವ ಖುಷಿಗೋ ಅವರ ಮುಖದಲ್ಲಿ ನಗು ಕಾಣುತ್ತಿತ್ತು. ಆ ಪುಟ್ಟ ಪುಟ್ಟ ಮನೆಗಳ ಒಳ ಹೊಕ್ಕು ಬರುತ್ತಿದ್ದೆ. ನಾನು ತಿನ್ನದೇ ಇದ್ದರೂ ಅವರಲ್ಲಿ ಮೀನಿನ ಅಡುಗೆ ಮಾಡುವುದು ಹೇಗೆ ಎಂದೆಲ್ಲಾ ಕೇಳುತ್ತಿದ್ದೆ. ಮೀನಿನ ಹುರುಪುಗಳನ್ನು ಹೆರೆಯುವುದನ್ನು ಕಲ್ಲಿಗೆ ಉಜ್ಜುವುದನ್ನು ಆಸಕ್ತಿಯಿಂದ ನೋಡಿದ್ದೇನೆ.
ಮೊಟ್ಟೆ ಕೂಡ ತಿನ್ನದ ನೀವು ಇದನ್ನೆಲ್ಲಾ ನೋಡಿ ಏನು ಮಾಡುವುದು?’ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಗೊತ್ತಿಲ್ಲ ಯಾವುದಾದರೂ ಸರಿಯೆ ನೋಡಬೇಕು ತಿಳಿಯಬೇಕು ಎನ್ನುವ ಕುತೂಹಲ ನನಗೆ ಮೊದಲಿಂದಲೂ. ಭಾನುವಾರ ಅಥವಾ ದಿನಾ ಸಂಜೆ ಅಲ್ಲಿ ಬಂದು ಸೇರುತ್ತಿದ್ದ ಮಕ್ಕಳಿಗೆ ಗಲಾಟೆ ಮಾಡದಿರುವಂತೆ ಲಂಚವಾಗಿ ಚಾಕೋಲೇಟ್ ಕೊಡುತ್ತಿದ್ದೆ. ಸಂಜೆಯಾದರೆ ಹದಿನೈದು ಜನ ಪುಟ್ಟ ಪುಟ್ಟ ಹುಡುಗರು ನನ್ನನ್ನು ಹುಡುಕಿ ಬರುತ್ತಿದ್ದರು. ತಲೆಗೆ ಕೂದಲು ಕಾಣದಂತೆ ಹಾಕಿಕೊಂಡಿದ್ದ ಮಕ್ಕಣೆ, ಮುದ್ದಾದ ನಗು, ಕುತೂಹಲಭರಿತ ಕಣ್ಣಿನ ಪುಟ್ಟ ಹೆಣ್ಣುಮಕ್ಕಳು ನನ್ನ ತುಂಬ ಆಕರ್ಷಿಸುತ್ತಿದ್ದರು. ಅವರ ಹೆಸರನ್ನು ಕೇಳುತ್ತಿದ್ದೆ. ಮೆಹರ್ ಎನ್ನುವ ಹುಡುಗಿ ತನ್ನ ತಮ್ಮನನ್ನು ಕರೆತಂದಿದ್ದಳು. ನಾನವನ ಹೆಸರನ್ನು ಕೇಳಲಿಲ್ಲ, ಕಾರಣ ಅವನು ಮಾತಾಡುವಷ್ಟು ದೊಡ್ಡವನಿರಲಿಲ್ಲ. ಆ ಹುಡುಗಿ ತುಸು ಕೋಪದಿಂದ ಇವನು ಅಹಮದ್, ಇವನ ಹೆಸರನ್ನು ನೀವು ಕೇಳಲೇ ಇಲ್ಲ’ ಎಂದಿದ್ದಳು. ತಮ್ಮನೆಡೆಗಿನ ಅವಳ ಪ್ರೀತಿಗೆ ನಾನು ಸೋತು ಹೋಗಿದ್ದೆ. ಅವನೆದುರು ಕುಳಿತು ಏನು ನಿನ್ನ ಹೆಸರು?’ ಎಂದು ಕೇಳಿದೆ. ಮೂರುವರ್ಷಗಳ ಪೋರ ಅಮ್ಮದ್’ ಎಂದಿದ್ದ.
ಇಷ್ಟೆಲ್ಲಾ ಮಾಡುವಾಗ ಡೈರೆಕ್ಷನ್ ಡಿಪಾರ್ಟ್ಮೆಂಟ್ ನಿಂದ ನನಗೆ ಸುಮ್ಮನಿರುವಂತೆ ಸೂಚನೆ ಬರುತ್ತಿತ್ತು. ಸ್ವಲ್ಪ ಹೊತ್ತಿನ ಬಳಿಕ ‘ಮನೆಗೆ ಹೋಗಿ ಓದಿಕೊಳ್ಳಿ’ ಎಂದು ಕಳಿಸುತ್ತಿದ್ದೆ. ಮತ್ತೆ ಮಾರನೆಯ ಸಂಜೆ ತಪ್ಪದೆ ಹಾಜರಾಗುತ್ತಿದ್ದರು. ಕೆಲ ದಿನಗಳ ನಂತರ ಸಂಜೆ ಅವರ ಅಮ್ಮ ಕೊಡುತ್ತಿದ್ದ ತಿಂಡಿಯಲ್ಲಿ ಸ್ವಲ್ಪ ನನಗಾಗಿ ಉಳಿಸಿ ತರುತ್ತಿದ್ದರು. ಪ್ರೀತಿಯನ್ನು ತೋರಿಸಲು ಅವರಿಗೆ ತೋಚಿದ್ದ ದಾರಿ ಅದು. ಮಕ್ಕಳೇ ಹಾಗಲ್ಲವೇ? ಆ ಮುಗ್ಧತೆಯ ಎದುರು ಯಾವ ಸೌಂದರ್ಯವೂ ಸುಳ್ಳಾಗುತ್ತದೆ. ತಂದ ತಿಂಡಿಯಲ್ಲಿ ಸ್ವಲ್ಪ ತೆಗೆದುಕೊಂಡು ಅವರಿಗೇ ತಿನ್ನಲು ವಾಪಾಸು ಕೊಡುತ್ತಿದ್ದೆ. ಇದನ್ನೆಲ್ಲಾ ಗಮನಿಸುತ್ತಿದ್ದ ಪುಟ್ಟಣ್ಣ, ಪುನೀತಾ ಮೇಡಂ ಇಲ್ಲಿಂದ ವಾಪಾಸು ಹೋಗುವಾಗ ಗ್ಯಾರೆಂಟಿ ನಾಲ್ಕು ಕೆಜಿಯಾದರೂ ಜಾಸ್ತಿ ಆಗರ‍್ತೀರಾ’ ಎಂದು ರೇಗಿಸುತ್ತಿದ್ದರು. ಇಂಥಾ ಪ್ರೀತಿ ಸಿಗುವುದಾದರೆ ಏನು ಬೇಕಾದರೂ ಆಗಬಹುದಲ್ಲವೇ?!
| ಇನ್ನು ಮುಂದಿನ ವಾರಕ್ಕೆ |






0 Comments