ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಾರ್ವತಿ ಜಿ ಐತಾಳ್ ಓದಿದ ‘ಸ್ಪರ್ಶ ಶಿಲೆ’

ಪಾರ್ವತಿ ಜಿ ಐತಾಳ್

ಹೊರನೋಟಕ್ಕೆ ಸರಳವೆಂದು ಕಾಣುವ ಹಣ್ಣು ಒಳಗೆ ಸಿಹಿಯಾದ ತಿರುಳನ್ನು ಹೊತ್ತುಕೊಂಡಿರುವಂತೆ ಕೆ.ಎನ್.ಲಾವಣ್ಯಪ್ರಭಾ ಅವರ ಇತ್ತೀಚೆಗೆ ಪ್ರಕಟವಾದ ಕವನ ಸಂಕಲನ ‘ಸ್ಪರ್ಶ ಶಿಲೆ’ ನೋಟಕ್ಕೆ ಸರಳವಾಗಿ ಕಂಡರೂ ಓದುಗರ ಹೃದಯವನ್ನು ಸ್ಪರ್ಶಿಸಬಲ್ಲ ೩೬ ಕವನಗಳನ್ನು ಒಳಗೊಂಡಿವೆ.

ಭೂಮಿಗೆ ಕಾಲಾಂತರದಿಂದ ಬಂದಿರುವ ಹೆಸರು ಕ್ಷಮಯಾ ಧರಿತ್ರಿ. ‘ಭೂಮಿ ಇವಳು’ ಕವನದಲ್ಲಿ ‘ನಾವು ಏನೇ ಮಾಡಿದರೂ ಭೂಮಿ ಕ್ಷಮಿಸುತ್ತಾಳೆ. ಆದರೆ ಕ್ಷಮೆ ಅವಳ ದೌರ್ಬಲ್ಯದ ಸಂಕೇತವಲ್ಲ. ಯಾವುದೇ ಕ್ಷಣ ಸ್ಫೋಟಿಸ ಬಲ್ಲ ಜ್ವಾಲಾಮುಖಿ ಅವಳ ಒಳಗೆ ಇದೆ. ಆದ್ದರಿಂದ ಎಚ್ಚರದಿಂದಿರುವುದು ಸೂಕ್ತ’ ಎಂಬ ಸಂದೇಶವಿದೆ. ಇದು ಪ್ರಕೃತಿ-ಪರಿಸರಗಳನ್ನು ನಾಶ ಮಾಡುವವರಿಗೂ ಅನ್ವಯಿಸುತ್ತದೆ.
ಶಿಶುವಿನ ಹುಟ್ಟಿನಿಂದ ಹಿಡಿದು ಇನ್ನೊಂದು ಹೊಸ ಸೃಷ್ಟಿಯ ತನಕದ ಜೀವನ ಚಕ್ರದ ಚಿತ್ರಣವನ್ನು ‘ಉಸಿರಿಂದ ಉಸಿರಿಗೆ’ಕವನ ಕಟ್ಟಿಕೊಡುತ್ತದೆ. ‘ಅಮ್ಮನಿಲ್ಲದ ಮಗು’ವಿನ ಬಗೆಗಿನ ಕಾಳಜಿಯನ್ನು ಕವಯಿತ್ರಿಯ ಪ್ರಕಾರ ಪ್ರಕೃತಿಯೇ ನೋಡಿಕೊಳ್ಳುತ್ತದೆ. ಈ ಜಗತ್ತು ಎಷ್ಟೇ ಸುಂದರವಾಗಿದ್ದರೂ, ವಿಧ ವಿಧದ ಜನರು ಇಲ್ಲಿದ್ದರೂ ಹುಟ್ಟಿನಷ್ಟೇ ಸಾವೂ ಖಚಿತವಾದ್ದರಿಂದ ಇಲ್ಲಿ ಎಲ್ಲವೂ ಕ್ಷಣಿಕ ಅನ್ನುತ್ತದೆ ‘ನಿಲ್ಲಲಾರೆವು ಇನ್ನಿಲ್ಲಿ ನಾವು ಬಹುಕಾಲ’ ಎಂಬ ಕವನ.

ಪ್ರೀತಿಯ ನೆನಪು-ಕನಸುಗಳ ತೂಗುಯ್ಯಾಲೆ (ಆಷಾಢದ ವಿರಹ), ಹೊರಗೆ ಹನಿಮಳೆಯ ವಾತಾವರಣದಲ್ಲಿ ಗಂಡು-ಹೆಣ್ಣು ಕೂಡುವ ಕ್ಷಣದ ಹಿತವಾದ ಬೆಚ್ಚಗಿನ ಸ್ಪರ್ಶ ಹಾಗೂ ಭೂಮಿ ಬಸಿರಾಗುವ ‌ಸಂಭ್ರಮದ ಹೊತ್ತು (ಮಳೆ ನಿಂತ ಬೆಳಗು), ಬುದ್ಧ ಪೂರ್ಣಿಮೆಯ ದಿನದಂದು ಮುಗುಳು ನಗುವ ಬುದ್ಧನಿಂದ ದೂರ ಉಳಿಯ ಬೇಕಾಗಿ ಬಂದ ಯಶೋಧರೆ, (ಬುದ್ಧಪೂರ್ಣಿಮೆಯಂದು), ಪ್ರಿಯತಮನ ಪ್ರೀತಿಯ ನೆನಪು ಮುಂಜಾವದ ಬೆಳಕಲ್ಲಿ ಮೂಡಿಸುವ ಕವಿತೆ ಸಾಲು (ಕವಿಯ ದಯೆ ಮುಂಜಾವು), ಕೃಷ್ಣನಿಗಾಗಿ ಕಾತರದಿಂದ ಕಾಯುವ ರಾಧೆಯ ಚಿತ್ರ (ಒಂದು ಶ್ಯಾಮಲ ಸಂಜೆ), ಶಿವ-ಶಿವೆಯರ ದಿವ್ಯ ಮಿಲನದ ರಾತ್ರಿ (ಶಿವರಾತ್ರಿ) ಮೊದಲಾದ ಕವನಗಳಲ್ಲಿ ಕವಯಿತ್ರಿಯ ಭಾವತೀವ್ರತೆ ಎದ್ದು ಕಾಣಿಸುತ್ತದೆ. ಇಲ್ಲಿ ಹೆಚ್ಚಿನ ಕವನಗಳೂ ಹೆಣ್ಣು ಕವನಗಳು.

ಎಲ್ಲ ಕವಿಗಳು ಕಾವ್ಯವನ್ನು ಹೆಣ್ಣಿಗೆ ಹೋಲಿಸಿದರೆ ಲಾವಣ್ಯ ಅವರ ದೃಷ್ಟಿಯಲ್ಲಿ ಕಾವ್ಯವು ಹೆಣ್ಣು- ಕವಿಯನ್ನು ಪ್ರೇಮದ ಉತ್ತುಂಗ ಶಿಖರಕ್ಕೇರಿಸುವ ಶುದ್ಧ ಗಂಡು! ಎಲ್ಲ ಕವಿಗಳಿಗೆ ಸಮುದ್ರ ಗಂಡಾದರೆ ಅವರ ಪಾಲಿಗೆ ಅದು ಸಮುದ್ರೆ !

ಪ್ರೇಮವೆನ್ನುವುದು ಈ ಕವಿಯಿತ್ರಿಯ ದೃಷ್ಟಿಯಲ್ಲಿ ಕೇವಲ ವಿವಾಹ-ದಾಂಪತ್ಯಗಳ ಸಂಬಂಧಕ್ಕೆ ಸೀಮಿತವಾದದ್ದಲ್ಲ. ಗಂಡು-ಹೆಣ್ಣಿನ ನಡುವೆ ಅದು ಯಾವಾಗ ಬೇಕಾದರೂ ಹುಟ್ಟಿಕೊಳ್ಳ ಬಹುದು. (ಒಂದು ಪ್ರೇಮ ಪು.61)

ಲಾವಣ್ಯ ಅವರು ತಮ್ಮ ಕವಿತೆಗಳಲ್ಲಿ ಉಪಮೆ-ರೂಪಕಗಳನ್ನು ಧಾರಾಳವಾಗಿ ಬಳಸುತ್ತಾರೆ. ಕತ್ತಲೆ-ಬೆಳಕುಗಳು ಅವರ ಕವಿತೆಗಳಲ್ಲಿ ನಿರಾಸೆ-ಭರವಸೆಗಳ ಪ್ರತೀಕಗಳಾಗಿ ಬರುತ್ತವೆ. ಸೋಲು ಅನ್ನುವುದು ಮನುಷ್ಯನ ಜೀವನದಲ್ಲಿ ಯಾವಾಗಲೂ ಗೆಲುವಿನ ಮೆಟ್ಟಿಲಾಗಿ ಪ್ರವರ್ತಿಸುತ್ತದೆ ಅನ್ನುವ ಸಂದೇಶವಿರುವ ಅವರ ಕವನ ‘ಎಲ್ಲ ಬೇಸರಗಳೂ ನಲಿವಿಗೆ ದಾರಿ’ ಎಂಬ ಈ ಕವನದ ಸಾಲುಗಳು ಸುಂದರವಾಗಿವೆ ಮತ್ತು ಅರ್ಥಪೂರ್ಣವಾಗಿವೆ :

ಉಳಿಪೆಟ್ಟು ಕೊಟ್ಟು ಕೊಟ್ಟು /ಆವಿರ್ಭವಿಸಿದ ಶಿಲ್ಪಕ್ಕೀಗ/
ಪೂಜೆ ಪುನಸ್ಕಾರ./ಮೈತುಂಬಿದ ಮುಳ್ಳುಗಳಲ್ಲೂ /ಗುಲಾಬಿ ನಗು./
ಅತ್ತು ಅತ್ತು ಕಣ್ಣೀರು/ಸೋರಿಹೋದ ನಂತರವೇ/
ಹೃದಯ ಹಗುರ/
ಕತ್ತಲು ಹೊಚ್ಚಿ ದಣಿದ ಮೈಮನ ತಣಿದು/ಹೊಸ ಸಂಭ್ರಮದ ದಿನದ ಬೆಳಗು(.ಪು. ೫೩.)

ಶೀರ್ಷಿಕೆ ಕವನ ‘ಸ್ಪರ್ಶ ಶಿಲೆ’ಯಲ್ಲೂ ಇರುವುದು ಇದೇ ಧ್ವನಿ. ಹೆಣ್ಣಿನ ಬದುಕೇ ಇತರರ‌ ಸೇವೆಯಲ್ಲಿ ಸವೆಯುವ ಕಲ್ಲಿನಂತೆ.‌ ಆದರೂ ಅನುಭವಗಳ ಸ್ಪರ್ಶವು ಅವಳನ್ನು ಗಟ್ಟಿಯಾಗಿಸುತ್ತ ಸೋತು ಗೆಲ್ಲುವ ಕಲೆಯನ್ನು ಕರಗತವಾಗಿಸಿಕೊಳ್ಳುವಂತೆ ಮಾಡುತ್ತದೆ :
ಸೋತು ಗೆಲ್ಲುವ ಕಲೆಯ ತೆಕ್ಕೆಗೀಗ
ಅಡುಗೆಮನೆಯ ಜತೆಜತೆಗೇ
ಆಫೀಸು ರಾಜಕಾರಣ ರಾಯಭಾರ
ಅಂತರಿಕ್ಷಯಾನ
ಬೆವರ ಬಸಿರಲ್ಲೂ ಒಲಿದ ಆತ್ಮಸಮ್ಮಾನ… (ಪು.೨೩)

ಲಾವಣ್ಯ ಅವರ ಹೆಚ್ಚಿನ ಕವಿತೆಗಳಲ್ಲೂ ಇಂಥ ಸುಂದರ ಪದಪುಂಜಗಳುಳ್ಳ ಸಾಲುಗಳನ್ನು ಕಾಣಬಹುದು. ಕಾವ್ಯ ಪರಂಪರೆಯ ಪ್ರಾಸಬದ್ಧ ಶೈಲಿಯನ್ನು ಅವರು ಅನುಸರಿಸಿಲ್ಲ. ಎಲ್ಲ ಕವಿತೆಗಳಲ್ಲೂ ಇರುವುದು ಮುಕ್ತ ಛಂದ. ಆದರೆ ಪದಗಳ ಬಳಕೆಯಲ್ಲಿ ಅವರು ಬಹಳ ಎಚ್ಚರಿಕೆ ವಹಿಸುತ್ತಾರೆ ಮತ್ತು ಲಯಬದ್ಧ ಸಾಲುಗಳನ್ನು ಸೃಷ್ಟಿಸುತ್ತಾರೆ.ಆದ್ದರಿಂದ ಅವರ ಕವನಗಳು ಓದಿನ ಸುಖವನ್ನು ನೀಡುತ್ತವೆ.

‍ಲೇಖಕರು avadhi

18 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading