ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಪಾರ್ಕನಲ್ಲಿ ಕಂಡ ಮುಖ' ಸಣ್ಣ ಕಥೆ

ತಿರುಪತಿ ಭಂಗಿ

ಮದ್ಯಾನ ಹನ್ನೆರಡು ಗಂಟೆ ಸಮಯ. ನಗರದ ತುದಿ ಅಂಚಿನಲ್ಲಿರುವ ಹಚ್ಚ ಹಸಿರಾದ ತುಳಸಿ ಪಾರ್ಕನ ಅಂಚಿನಲ್ಲಿ ಆಕಾಶದೆತ್ತರ ಬೆಳೆದುನಿಂತ ಮರದ ಕೆಳಗೆ ಒಬ್ಬರಿಗೊಬ್ಬರು ತಬ್ಬಿಕೊಂಡು ಕುಳಿತ ಎರಡು ಆಕೃತಿ ದುತ್ತನೆ ನನ್ನ ಮಾಯಾ ಕಣ್ಣುಗಳಿಗೆ ಗೋಚರಿಸಿದಾಗ, ಮಾಡುವವನ ಸುಖಕಿಂತ ನೋಡುವ ಸುಖವೇ ಹೆಚ್ಚು ತೃಪ್ತಿ ಎಂದು ನನ್ನ ಹುಚ್ಚ ಮನಸು ನಿರ್ದರಿಸಿತು, ಯಾಕೋ ನನ್ನ ಹಟಮಾರಿ ಕಾಲುಗಳು ಅಲ್ಲಿಂದ ಮುಂದೆ ಹೋಗಲು ಹಿಂಜೆರದವು. ತಬ್ಬಿಕೊಂಡ ದೇಹಗಳು ಲೋಕಭೀತಿ ಇಲ್ಲದೆ, ತಮ್ಮದೇ ಲೋಕದಲ್ಲಿ ಮುಳಗಿದ್ದವು.
ತುಳಸಿ ಪಾರ್ಕನಲ್ಲಿ ಹಿಂತ ಚಿಲ್ಲರೆ ವಿಷಯಗಳು ದಿನವಿಡಿ ಸಾಕಷ್ಟು ನೆಡೆಯುತ್ತಿದ್ದವು. ಅಲ್ಲಿರುವ, ಅಲ್ಲಿಗೆ ಬರುವ ಜನರಿಗೆ ಇದೆನೂ ಹೊಸತನ ಎನಿಸುತ್ತಿರಲಿಲ್ಲ. ಅನೇಕ ಕಾಲೇಜ ಹುಡಗ ಹುಡುಗಿಯರು ತಮ್ಮ ಕುರುಡು ಪ್ರೀತಿಯ ಪರೀಕ್ಷೆಗೆ ಈ ಪಾರ್ಕನ್ನೇ ಅರಸಿ ಬರುತಿದ್ದರು. ಅನೇಕ ಮುಗ್ದ ಎಳೆಯ ಹೈಸ್ಕೂಲ್ ಹುಡಗ ಹುಡುಗಿಯರೂ ಹೆತ್ತವರ ಕಣ್ಣು ತಪ್ಪಸಿ, ಅಕ್ಷರ ಕಲಿಸುವ ಮಾಸ್ತರನ ಕಣ್ಣಿಗೆ ಮನ್ನೆರಚಿ ಬಂದು, ಅದೇ ಪಾರ್ಕ್ ನ ಮೆತ್ತನೆ ಹಾಸಿನಲ್ಲಿ ಬೆಚ್ಚಗೆ ಕುಳಿತು, ಅನುರಾಗ ಗೀತೆ ಹಾಡುತಿದ್ದರು. ಹೀಗೆಲ್ಲ ಲಲ್ಲೆಮಾಡಿ ಹೋದವರ ಮೇಲೆ ಆ ಪಾರ್ಕ ಎಂದೂ ಬೇಸರಮಾಡಿಕೊಂಡಿರಲಿಲ್ಲ.
ನನ್ನ ಅನೇಕ ಗೆಳೆಯರು ಆ ಪಾರ್ಕ್ ಗೆ ಹೋಗಿದ್ದರು. ಅಲ್ಲಿ ಬಣ್ಣ ಬಣದ್ಣ ಬೆಡಗಿಯರು, ಎಳೆ ವಯಸ್ಸಿನ ಹುಡುಗಿಯರು, ಎಲ್ಲಂದರಲ್ಲಿ ತಬ್ಬಿಕೊಂಡು ಜಗತ್ತಿನ ಜಂಜಾಟ ಮರೆತು ಇರುವ ಆ ಒಂದು ಪರಿಯನ್ನು ಕಾವ್ಯ ಕಟ್ಟಿ ವರ್ಣಿಸುತ್ತಿದ್ದರು. ಅರವತ್ತು ವಯಸ್ಸಿನ ಆಸುಪಾಸಿನ ಒಬ್ಬ ಪ್ರಿಯಕರ ಇಪ್ಪತ್ತರ ಹರೆಯದ ಹುಡುಗಿಯನ್ನು ಪಾರ್ಕ್ ಗೆ ಕರೆತಂದು ಅಲ್ಲಿದ್ದ ಎಲ್ಲರ ಗಮನ ಸೆಳೆದ ಕಥೆ ಹೇಳಿ ನಕ್ಕಿದ್ದರು. ಇಷ್ಟೆಲ್ಲ ಕುತೂಹಲ ಮೂಡಿಸಿದ ಆ ಪಾರ್ಕನೊಮ್ಮೆ ನಾನೂ ನೋಡಬೇಕೆಂದು ಮನದಲ್ಲಿ ಲೆಕ್ಕಹಾಕಿದ್ದೆ.
ಯಾವೊಂದು ಹುಡಗಿಯ ಸಹವಾಸ ಇಲ್ಲದ ನನಗೆ ಆ ಪಾರ್ಕ್ ನ ಗೆಳೆತನ ಅಷ್ಟಕಷ್ಟೆ. ಅಂದು ಮದ್ಯಾನ ಸುರಿಯುವ ಭಯಂಕರ ಬಿಸಿಲಿನ ತಾಪಕ್ಕೆ ಬಳಲಿದಂತಾಗಿ, ಹಾಕಿಕೊಂಡ ಬಟ್ಟೆಯಲ್ಲ ವದ್ದೆಯಾಗಿ, ಮೈಯಿಂದ ಹೆಂತದೋ ಒಂದು ವಾಸನೆ ಮುಗಿಗೆ ಲಗ್ಗೆ ಇಟ್ಟು, ಮನಸಿಗೆ ಅಸಯ್ಯ ಎನಸಿ. ಥೂ..! ಯಾಕಾದ್ರು ಬರ್ತೈತಿ ಈ ಹಾಳಾದ ಬ್ಯಾಸಗಿ’, ಅಂತ ಮನದಲ್ಲಿ ವಟಗುಡುತ್ತಿರುವಾಗಲೇ ನೆನಪಾದದ್ದು ಈ ತುಳಸಿ ಪಾರ್ಕ. ಅಲ್ಲಿ ಹೋಗಿ ತಂಪನೆಯ ನೆರಳಿಗೆ ದೇಹ ಚಲ್ಲಿ ಒಂದಿಷ್ಟು ಹೊತ್ತು ಅಲ್ಲೆ ಇದ್ದು ಬರಬೇಕೆಂದು ಮನಸು ಹೇಳದೆ ಕೇಳದೆ ನಿರ್ಧರಿಸಿಕೊಂಡಿತ್ತು. ಹೀಗಾದಾಗ ಅಲ್ಲಿಗೆ ಹೋಗುವ ಕುತೂಹಲ ಮತ್ತಷ್ಟು ಇಮ್ಮಡಿಸಿತು. ಅಲ್ಲಿ ಬೇಜಾರವಾದ್ರೆ, ಒಂದಿಷ್ಟು ಏನಾದರೂ ಓದಿಕೊಳ್ಳಬೇಕೆಂದೆನಿಸಿದರೆ, ಇರಲಿ ಅಂತ ಪುಸ್ತಕ ಕೈಯೊಳಗೆ ಹಿಡಿದುಕೊಂಡು, ಕೆಂಡ ಉಗಳುವ ಬಿಸಲಿನ ಹೊಡೆತ ತಾಳಿಕೊಂಡು ಪಾರ್ಕ ಹೊಕ್ಕೆ. ಆಗ ನನ್ನನ್ನು ಪಾರ್ಕಗಿಂತಲೂ ಹೆಚ್ಚು ಆಕರ್ಷಿಸಿದ್ದು ತಬ್ಬಿಕೊಂಡು ಕುಳಿತ ಆ ಎರಡು ದೇಹಗಳು.

ಪಾರ್ಕ್ ನ ಮೂಲೆಯೊಂದರಲ್ಲಿ ಇಬ್ಬರು ಪೋಲಿಸರು ಗಸ್ತು ತಿರಗುವವರಂತೆ ಅಲೆದಾಡುತ್ತಿದ್ದರು. ಎಲ್ಲಿಗ್ಹೋದ್ರು ಈ ಖಾಕಿ ಮಂದಿ ಕಾಟ ತಪ್ಪಿದ್ದಲ್ಲ ಅಂತ ಮನದಲ್ಲೇ ವಟಗೂಡಿ,ಅಲ್ಲೆ ಇರುವ ಕಲ್ಲುಹಾಸಿನ ಬೆಂಚಿನ ಮೇಲೆ ನನ್ನ ಎಪ್ಪತ್ತೆರಡು ಕೆ.ಜಿ.ಬಾರದ ದಡೂತಿ ದೇಹ ಹರವಿಕೊಂಡು ಕುಳಿತೆ, ಪಾರ್ಕ ನನ್ನ ಕಣ್ಣಿಗೆ ಪುಟ್ಟ ಸ್ವರ್ಗದಂತೆ ಕಂಡಿತು. ಹಚ್ಚ ಹಸುರಾದ ಆಕಾಶದೆತ್ತರ ಬೆಳೆದುನಿಂತ ಮರಗಳು ದಿವ್ಯ ಮೌನವಾಗಿದ್ದವು. ಹುಲ್ಲುಹಾಸಿನ ಮೆತ್ತನೆಯ ಹಾಸಿನ ಮೇಲೆ ಅಲ್ಲಲ್ಲಿ ಕುಳಿತುಕೊಂಡ ಪ್ರೇಮಿಗಳನ್ನು ನೋಡುವ ಕಣ್ಣುಗಳು ಪಾವನಗೊಂಡಿದ್ದವು. ಕವಿಗಳಿಗೆ ಅನೇಕ ಕಾವ್ಯ ಹುಟ್ಟಿಸುವ ತಾಣದಂತೆ ತೋರಿತು. ಒಬ್ಬಂಟಿಯಾಗಿ ಕುಳಿತ ನನ್ನನ್ನು ನೋಡಿ ಅಲ್ಲಿರುವ ಗಿಡ- ಮರಗಳು ನಕ್ಕಂತೆ ಅನಿಸಿತು. ಆಗ ಕೈಯಲ್ಲಿದ್ದ ಪುಸ್ತಕದ ಪೇಜು ಹೊಳಸುತ್ತ ಅನಾಯಾಸಾಗಿ ಮತ್ತೆ ತಬ್ಬಿಕೊಂಡು ಕುಳಿತವರನ್ನೇ ನೋಡುವ ಮೂರ್ಖತನಕ್ಕೆ ನನ್ನ ಮನಸು ಜಾರಿಕೊಂಡಿತು. ಯಾರೊಬ್ಬರ ಅರಿವಿಲ್ಲದೇ ಆ ಪ್ರೇಮಿಗಳು ಮೈಮರತಿದ್ದರು. ಇವರು ನಿಜವಾಗ್ಲೂ ಅಮರ ಪ್ರೇಮಿಗಳಾ? ಇಲ್ಲವೆ, ದೇಹ ಸುಖಕ್ಕೆ ಮಂದಿಯ ಕಣ್ಣ ತಪ್ಪಿಸಿ ಹೀಗೆ ಕುಳಿತುಕೊಂಡವರಾ? ಎಂಬ ಅನುಮಾನ ನನ್ನ ಕಾಡದೇ ಇರಲಿಲ್ಲ.
ನಾಚಿಕೆ ಇಲ್ಲದೆ ಆ ಪ್ರೇಮಿಗಳನ್ನೇ ನೋಡುತ್ತ ಕುಳಿತೆ. ಹುಡುಗ ನೋಡಲು ತುಂಬಾ ಮಡಿವಂತನಂತೆ ಕಾಣುತ್ತಿದ್ದ. ಹುಡುಗಿ ಯಡಬಿಡಂಗಿಯಂತೆ ತುಂಟತನದ ವಯಸ್ಸಿನವಳು.ಹುಡುಗನ ಮಾತಿಗೆ ಬೆರಗಾಗಿ ಅವನ ಸಂಗ ಬಯಸಿದಂತೆ ಕಾಣುತ್ತಿದ್ದಳು. ಸುಮಾರು ಗಂಟೆಗಳ ಕಾಲ ತಬ್ಬಿಕೊಂಡು ಬೆರಗು ಮೂಡಿಸಿದರು. ಎಷ್ಟೋ ಹೊತ್ತಿನ ನಂತರ ಹುಡುಗ ಅತ್ತಲಿತ್ತಲೊಮ್ಮೆ ನೋಡಿ, ಪೋನಿನಲ್ಲಿ ಮಾತಾಡಿ, ಮತ್ತೆ ಹುಡುಗಿಯ ಪಕ್ಕದಲ್ಲಿ ಕುಳಿತು ತಬ್ಬಿಕೊಂಡವರಂತೆ ನಟಿಸಿ.ಮತ್ತೆ ಮೇಲೆದ್ದು ದೂರ ಕಣ್ಣು ಹಾಯಿಸಿ ಯಾರದೋ ದಾರಿ ಕಾಯುವವರಂತೆ ಪಾರ್ಕ ಸುತ್ತಲೂ ಕಣ್ಣಾಡಿಸುತ್ತಿದ್ದ. ಒಮ್ಮಿಂದೊಮ್ಮಲೆ ಹುಡುಗಿಯ ಕೆನ್ನೆಗೆ ಜೋರಾಗಿ ಹೊಡೆದು ಬಾಯಿಗೆ ಜೋಬಿನಲ್ಲಿದ್ದ ಕರ್ಚೀಪ ತುರಕುವುದನ್ನು ನನ್ನ ನತದೃಷ್ಟ ಕಣ್ಣುಗಳು ನೋಡಿ ಬೆರಗಾದವು. ಮತ್ತೆ ಅವಳನ್ನು ತಬ್ಬಿ ಕೊಂಡು ಮತ್ತಿನ ಮಳೆ ಸುರಿಸಿದ. ಅವಳೂ ಮತ್ತೆ ನಗುತ್ತಲೇ ಅವನ ತೋಳತೆಕ್ಕೆ ಸೇರಿದಳು. ಇದನೆಲ್ಲ ನೋಡಿತ್ತಿದ್ದ ನನ್ನ ತಲೆ ಚಿಟ್ಟುಹಿಡಿಯಿತು. ಕೈಯಲ್ಲಿದ್ದ ಪುಸ್ತಕ ಜಾರಿ ಕೇಳಗೆ ಬಿತ್ತು. ಅದನ್ನು ತಗೆದು ಕೊಳ್ಳುವಾಗ ಕೈಗಳು ನಡುಗಿದವು, ಎದೆ ಕಂಪಿಸತೊಡಗಿತು.
ಸುತ್ತಲಿದ್ದ ಅಮರ ಪ್ರೇಮಿಗಳ ಲಕ್ಷ ಇವರತ್ತ ಇರಲಿಲ್ಲ. ಅವರು ತಮ್ಮ ಪಾಡಿಗೆ ತಾವು ಮೈಮರೆತು ನಲಿಯುತ್ತಿದ್ದರು. ಇವರು ಹೆಂತ ಪ್ರೇಮಿಗಳು ಎಂಬ ಅನುಮಾನ ನನ್ನ ಎದೆಯಲ್ಲಿ ಏಳುವಷ್ಟರಲ್ಲಿಯೇ ಆತನನ್ನು ಪೋಲಿಸರು ಹಿಡಿದುಕೊಂಡಿದ್ದರು. ಏನೆನೋ ಕೇಳತೊಡಗಿದರು.. ಮರದ ಮರೆಯಲ್ಲಿ ಇರುವ ಹುಡುಗಿಯತ್ತ ಹೋಗಿ ಮತ್ತಷ್ಟು ವಿಚಾರ ನೆಡಸಿದರು. ಹುಡುಗಿ ಹೆದರಿದ ಜಿಂಕೆಯಂತೆ ಪೋಲಿಸರಿಗೆ ಏನೆನೋ ಹೇಳಿದಳು. ಇಬ್ಬರಿದ್ದ ಪೋಲಿಸರ ಸಂಖೆ ಆರಕ್ಕೆ ತಲುಪಿತು. ಅದರೊಳಗೊಬ್ಬ ದೊಡ್ಡ ಸಾಹೇಬ ಇರುವುದು ಸ್ಪಷ್ಟವಾಯಿತು. ಈ ಸುಂದರವಾದ ದೃಶ್ಯವನ್ನು ಅನಾಯಾಸಾಗಿ ಬಂದು ಕೆಡಸಿದ ಪೋಲಿಸರನ್ನು ಕಲ್ಲು ವಗೆದು ಓಡಿಸಬೇಕೆಂದು ಅನಿಸಿತು. ಅದು ಸಾದ್ಯವಾಗದ ಸಹಾಸ ಎಂದು ಅರಿತು ತೆಪ್ಪಗಾದೆ.
ಪೋಲಿಸರ ಕಿರಕಿರಿಯಿಂದ ಅಲ್ಲಿದ್ದ ಎಷ್ಟೋ ಪ್ರೇಮಿಗಳು ಚದುರಿ ಹೋದರು. ನನ್ನಂತ ಪಡಪೋಶಿಗಳು ಇಲ್ಲಿ ಏನ ನೇಡ್ಯಾಕತ್ತೈತಿ ಒಂದ ಕೈ ನೋಡಿಯೇ ಹೋಗೂಣ ಎಂದು ನಿರ್ದರಿಸಿದವರು ಮಾತ್ರ ಅಲ್ಲಲ್ಲಿ ಕಾಣಿಸಿಕೊಂಡೆವು.
ಸ್ವಲ್ಪ ಹೊತ್ತಿನ ನಂತರ ಅವನು ರಿಕ್ಷಾ ಓಡಿಸುವ ಒಬ್ಬ ಮಾಮೂಲಿ ಡ್ರೈವರ್ ಎಂಬ ಗುಮಾನಿ ಸುದ್ದಿ ಅಲ್ಲಿ ಸುಳಿದಾಡಿತು. ಅದೆಷ್ಟು ನಿಜವೋ ಎಂಬ ಅನುಮಾನದಲ್ಲಿ ಪೋಲಿಸರಿದ್ದರು. ಅವನೊಟ್ಟಿಗೆ ಬಂದವಳು ಶ್ರೀಮಂತ ಮನೆತನದ, ಇನ್ನೂ ಹೈಸ್ಕೂಲ್ ಓದುತ್ತಿರುವ ತರುಣಿ ಎಂಬುದು ಪೋಲಿಸರಿಬ್ಬು ಚೌಕಾಸಿಮಾಡಿ, ಹುಡಗನನ್ನು ಚನ್ನಾಗಿ ತಳಿಸಿ. ಜೀಪಿನಲ್ಲಿ ಹಾಕಿಕೊಂಡು ಹೋದಾಗ ತುಳಸಿ ಪಾರ್ಕನಲ್ಲಿದ್ದ ನನ್ನಂತ ಅನೇಕರು ಅವರನ್ನೆ ದುರುಗುಟ್ಟಿದರು. ಆಗಷ್ಟೆ ಪೋಲಿಸರ ಮೇಲೆ ನನಗೊಂದಿಷ್ಟು ಕೋಪ. ಈ ಪೋಲಿಸ ಮಂದಿಗೆ ಪ್ರೇಮಿಗಳ್ನ ಕಂಡ್ರೇ ಯಾಕೆ? ಇಷ್ಟೊಂದು ಹೊಟ್ಟೆ ಉರಿ..! ಎಂದು ಪಾರ್ಕನಿಂದ ಆ ಸಂಜೆ ನಡೆದುಕೊಂಡು ಹೋಗುವಾಗ ದಾರಿಯೂದ್ದಕ್ಕೂ ಪೋಲಿಸರಿಗೆ ದಿಕ್ಕಾರ ಹೇಳುವ ರೀತಿಯಲ್ಲಿ ಮನಸು ಹಟಕ್ಕೆ ಬಿದ್ದಿತ್ತು. ನನ್ನ ರೂಮಿನ ಬಾಗಿಲ ತಗೆದು ಕೈಯಲ್ಲಿದ್ದ ಪುಸ್ತಕ ಟೆಬಲ್ ಮೇಲೆ ಇಟ್ಟು, ಟಿ. ವಿ ಬಟನ್ ಆನ್ ಮಾಡೂವರೆಗೂ ಪೋಲಿಸರನ್ನು ಬೈಯತ್ತಲೇ ಇದ್ದೆ.
ಟಿ. ವಿ ಪರದೆ ಮೇಲೆ ಅದೇ ಪೋಲಿಸರು, ಪಾರ್ಕನಲ್ಲಿದ್ದ ಆ ಕಾಮುಕನನ್ನು ಮದ್ಯ ನಿಲ್ಲಿಸಿಕೊಂಡು ಗೆಲುವಿನ ನಗೆ ಬೀರುತಿದ್ದರು. ಅವನ ಮೋತಿಗೆ ಕಪ್ಪು ಬಟ್ಟೆ ಹಾಕಿ ಕಾನೂನಿನ ಜವಬ್ದಾರಿ ಉಳಿಸಿದ್ದರು. ಪೋಲಿಸರ ನಟ್ಟನಡುವೆ ಪಾಪಿ ತಲೆ ತಗ್ಗಿಸಿ ನಿಂತದ್ದ. ಟಿ.ವಿ ವರದಿ ಗಾರ್ತಿ ಕುಕ್ಯಾತ ರೇಪಿಷ್ಟನನ್ನು ಹಿಡಿದ ಪೋಲಿಸರ ಸಹಾಸ ಮೆಚ್ಚತಕ್ಕದ್ದು, ತಿಂಗಳದಲ್ಲಿ ಸುಮಾರು ಮೂರ್ನಾಲ್ಕು ಹೈಸ್ಕೂಲ್ ಹುಡಗಿಯರನ್ನು ಮರಳು ಮಾಡಿ. ಅವರ ಮೇಲೆ ಕ್ರೂರವಾಗಿ ಅತ್ಯಾಚಾರವೇಸಗಿ, ಬರ್ಬರವಾಗಿ ಕೋಲೆ ಮಾಡಿ, ಕಾನದಂತೆ ಪರಾರಿಯಾಗುವ ‘ಅನಿ’ ಆಲಿಯಾಸ ‘ಅನಿರುದ್ಧ ಹೊಸಕೋಟಿ’ ಇಂದು ಮತ್ತೊರ್ವ ಹುಡುಗಿಯ ಬದುಕು ಹಾಳು ಮಾಡುವ ಮುನ್ನವೇ ಪೋಲಿಸರಿಗೆ ವಶವಾಗಿದ್ದಾನೆ ಎಂದು ಒಂದೇ ಉಸಿರಿನಲ್ಲಿ ಆ ಟಿ.ವಿ ವರದಿಗಾರ್ತಿ ಕೂಗಿ ಕೂಗಿ ಹೇಳುತಿದ್ದಳು. ಪೋಲಿಸರು ಕಾರ್ಗಲ್ ಯುದ್ಧದಲ್ಲಿ ವೈರಿಗಳನ್ನು ಸೇದೆಬಡೆದ ಉತ್ಸಾಹಿಗಳಂತೆ ಮೀಸೆಯ ಮೇಲೆ ಕೈ ಇಟ್ಟುಕೊಂಡರು. ಆಗ ನನಗೆ ಮನಸು ಹಗುರವಾಗಿ,ಪೋಲಿಸರ ಕ್ರೂರತೆಯಲ್ಲಿ ಸದಾ ಒಂದು ಸತ್ಯ ಅಡಗಿರುತ್ತೆ ಎಂಬ ಅರಿವಾಯಿತು. ಅಂದಿನಿಂದ ಪೋಲಿಸರು ನನ್ನೆದುರಿಗೆ ಎಲ್ಲಾದರೂ ಕಂಡರೆ ಎದೆಯಲ್ಲಿ ಎಂತದೋ ಒಂದು ಅಭಿಮಾನ ಉಕ್ಕಿ ಹರಿಯುತ್ತದೆ.
 

‍ಲೇಖಕರು G

20 August, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading