ಪವಿತ್ರ ಆರ್ಥಿಕತೆಗಾಗಿ ಖ್ಯಾತ ರಂಗಕರ್ಮಿ, ದೇಸಿ ಚಳವಳಿಯನ್ನು ಹುಟ್ಟು ಹಾಕಿದ ಪ್ರಸನ್ನ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ‘ಇದೇನಿದು ಪವಿತ್ರ ಆರ್ಥಿಕತೆ?’ ಎನ್ನುವ ಪ್ರಶ್ನೆಗಳೂ ಎದ್ದಿವೆ.
ಈ ಬಗ್ಗೆ ನಾ.ದಿವಾಕರ ಅವರು ಬರೆದಿರುವ ‘ಪ್ರಸನ್ನ ಮತ್ತೊಬ್ಬ ಅಣ್ಣಾ ಹಜಾರೆಯಂತೆ ಕಾಣುತ್ತಾರೆ’ ಎನ್ನುವ ಲೇಖನ ‘ಜುಗಾರಿ ಕ್ರಾಸ್’ ಅಂಕಣದಲ್ಲಿ ಪ್ರಕಟವಾಗಿತ್ತು.
ಡಿ.ಎಸ್. ರಾಮಸ್ವಾಮಿ ಅವರು ‘ಪವಿತ್ರ ಆರ್ಥಿಕತೆ’ ಎಂಬ ಅರ್ಥವಿಲ್ಲದ ಪದ ಎಂದು ವಿಮರ್ಶಿಸಿದ್ದರು.
ಇದಕ್ಕೆ ‘ಅವಧಿ’ ಪ್ರತಿಕ್ರಿಯೆಯನ್ನು ಆಹ್ವಾನಿಸಿತ್ತು.
ಇದೀಗ ಎಲ್ ಸಿ ನಾಗರಾಜ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ-
ಎಲ್.ಸಿ.ನಾಗರಾಜ್
‘ಪವಿತ್ರ ಆರ್ಥಿಕತೆ’ ಎಂದರೆ ದುಡಿಯುವ ಕೈಗಳಿಗೆ ಕೆಲಸ ಕೊಡುವುದು ಮತ್ತು ಪರಿಸರ ವ್ಯವಸ್ಥೆಯನ್ನ ರಕ್ಷಣೆ ಮಾಡಿಕೊಳ್ಳುವುದು ಅಂತಾ ಗ್ರಾಮ ಸೇವಾ ಸಂಘ, ಚರಕ ಸಂಸ್ಥೆಯ ಸ್ಥಾಪಕ ಪ್ರಸನ್ನ ಅವರು ಬಿಡಿಸಿ ಹೇಳಿರುವಾಗಲೂ ಫೇಸ್ಬುಕ್ನ ಆಚಾರ್ಯರು ಯಾಕೆ ಟ್ರೋಲ್ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ .
ಯೂರೋಪಿನಿಂದ ಏನನ್ನೂ ಕಡ ತಂದು ಹೇಳಬೇಡಿ, ಜನರಿಗೆ ಅರ್ಥವಾಗುವ ಅಚ್ಛಕನ್ನಡದಲ್ಲೇ ಹೇಳಿ ಅಂತಾ ಹೇಳುವ ಫೇಸ್ಬುಕ್ ಆಚಾರ್ಯರಿಗೆ ಪವಿತ್ರ ಎನ್ನುವುದು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ಪದ ಎಂಬುದು ತಿಳಿಯದೇ? ಹಾಗೆ ನೋಡಿದರೆ ಪವಿತ್ರ ಎಂಬ ಪದ ಗಾಂಧಿ ಪರಂಪರೆಯಲ್ಲಿ ಈ ಹಿಂದಿನಿಂದಲೂ ಬಳಕೆಯಲ್ಲಿದೆಯಷ್ಟೇ ಅಲ್ಲ ಅದರ ವಿವಿಧ ಅರ್ಥ ಛಾಯೆಗಳು ವಿಜ್ಞಾನದಲ್ಲೂ ಚಾಲ್ತಿಯಲ್ಲಿವೆ .
ದೇಸಿ ಬೀಜ ಸಂಪನ್ಮೂಲಗಳ [ Original Land race germplasm ] ಬದಲು ಬೀಜ ಕಂಪನಿಗಳ ಮೇಲೆ ಕೃಷಿಕರ ಅವಲಂಬನೆಯನ್ನ ಹೆಚ್ಚಿಸುವ ವಿಧಾನವನ್ನ ಡಾ. ವಂದನಾಶಿವ Profane Seeds ಅಂದರೆ ಅಪವಿತ್ರ ಬೀಜಗಳು ಎಂದೇ ವಿವರಿಸುತ್ತಾರೆ, ಗಾಂಧೀಜಿ ಬರೆದಿರುವ ಮನುಷ್ಯರ ಕರ್ತವ್ಯಗಳನ್ನ ಪವಿತ್ರ ಕರ್ತವ್ಯಗಳು ಎಂದೇ ಕರೆದಿದ್ದಾರೆ .

ಯೂರೋಪಿನ ಪರಿಕಲ್ಪನೆಗಳನ್ನ ತರಬೇಡಿ ಎನ್ನುವ ಫೇಸ್ಬುಕ್ನ ಆಚಾರ್ಯರು Lynching is a western construct ಎಂದ ಭಾಗವತಿಕೆ ಮೇಳದಲ್ಲಿ ತಾಳಮದ್ದಲೆಗೆ ಕುಂತವರೊ ಎಂಥದೊ ಕಾಣೆ. ಪ್ರಸನ್ನ ತಾವು ನಂಬಿದ್ದ ತತ್ವಗಳಿಗೆ ನಿಷ್ಟರಾಗಿ ಇದುವರೆಗೆ ಗೌರವಯುತ ಕಾರ್ಯಗಳನ್ನ ಮಾಡಿರುವಾಗ, ತಾವು ಮಾಡಿರುವ ಕಾರ್ಯಗಳು ನೂರಾರು ಮನೆಯ ದೀಪ ಹಚ್ಚಿರುವುದು ನಮ್ಮ ಕಣ್ಣ ಮುಂದಿರುವಾಗ ಅದನ್ನ ಪವಿತ್ರ ಆರ್ಥಿಕತೆ ಅಂತಾ ಕರೆದುಕೊಂಡಿದ್ದರೆ ತಪ್ಪೇನಿದೆ?
ನರ್ಮದಾ ನದಿಗೆ ಅಣೆ ಕಟ್ಟುವಾಗ ಇದೇ ಆಚಾರ್ಯರುಗಳು ಮೇಧಾ ಪಾಟ್ಕರ್ ಮುಳಗಡೆಯಾಗಲಿರುವ ಆದಿವಾಸಿಗಳ ಜೊತೆ ಉಪವಾಸ ಕೂತಾಗಲೂ ಮೇಧಾ ಪಾಟ್ಕರ್ ಅಭಿವೃದ್ಧಿಯ ವಿರೋಧಿ ಎಂಬ ಹುಯಿಲೆಬ್ಬಿಸಿದ್ದು ಇನ್ನೂ ನೆನಪಿನಿಂದ ಆರಿಲ್ಲ .
ನರ್ಮದಾ ಅಣೆಕಟ್ಟು ನೀರಾವರಿಗೆ ಒಳಪಡಿಸಿದ ಭೂಮಿಯ ವಿಸ್ತಾರಕ್ಕಿಂತ ಮುಳುಗಡೆಯಾದ ಅರಣ್ಯದ ಪ್ರಮಾಣವೇ ಹೆಚ್ಚು, ಬೃಹತ್ ಅಣೆಕಟ್ಟೆಗಳು ನೀರಾವರಿ ಮಾಡಿದ ಭೂಮಿಯ ವಿಸ್ತಾರಕ್ಕಿಂತ ಉಂಟು ಮಾಡಿದ ಜವುಗು ಪ್ರದೇಶವೇ ಹೆಚ್ಚು [ Indian National Trust for Arts and Cultural Heritage ಸಂಸ್ಥೆಯ ಅಧ್ಯಯನ ] ಎಂಬ ವಾಸ್ತವಿಕತೆ ಹುಯಿಲೆಬ್ಬಿಸುವ ಆಚಾರ್ಯರಿಗೆ ಗೊತ್ತಿರದಿದ್ದರೆ ಅದಕ್ಕೆ ಮೇಧಾ ಪಾಟ್ಕರ್ ಆಗಲೀ, ಆದಿವಾಸಿ ಸಮುದಾಯವಾಗಲೀ ಏನು ಮಾಡಲಿಕ್ಕೆ ಸಾಧ್ಯ ?
ಚರಕ ಎಂದರೆ ಮಾನವ ಶ್ರಮದಿಂದ ತಿರುಗಿ ನೂಲು ತೆಗೆಯುವ ಸಲಕರಣೆ ಅದನ್ನ ತಿರುಗಿಸಲು ಅವಶೇಷ ಇಂಧನಗಳ ( fossil fuels ) ಅಗತ್ಯವಿಲ್ಲ , ಅದು ಅವಶೇಷ ಇಂಧನಗಳಿಂದ ತಿರುಗುವ ಬೃಹತ್ ಯಂತ್ರವಲ್ಲ ಎಂಬುದು ಒಂದು ಪ್ರಾಥಮಿಕ ಹಂತದ ಪಾಠ; ಯಾವ ಯೂರೋಕೇಂದ್ರಿತ ಪರಿಕಲ್ಪನೆಯೂ ಇದರಲ್ಲಿಲ್ಲ .
ಅಮೆರಿಕದ ತತ್ವಜ್ಞಾನಿ ಲೀವಿಸ್ ಮಂಫರ್ಡ್ ತಾವೇ ಗಾಂಧಿ ಚಿಂತನೆಗೆ ಮಾರು ಹೋದವರು. ತಮ್ಮ Myth of the machine ಪುಸ್ತಕದಲ್ಲಿ ಅವರು ಬೃಹತ್ ಯಂತ್ರಗಳ ಬದಲಿಗೆ ವಿಕೇಂದ್ರೀಕೃತ ಸರಳ ಸಲಕರಣೆಗಳು ನಮ್ಮ ಆಯ್ಕೆಯಾದರೆ ಪರಿಸರ ವ್ಯವಸ್ಥೆ ಮುಕ್ಕಾಗದಂತೆ ನಿಗಾ ವಹಿಸಬಹುದೆಂದು ತಿಳಿಯುತ್ತಾರೆ.
ಬೌದ್ಧ ಅರ್ಥಶಾಸ್ತ್ರದ ಬಗ್ಗೆ ಬರೆಯುವ ಇ.ಎಫ್ . ಷುಮೇಷರ್ ಮಾನವ ಅಳತೆಯ ತಂತ್ರಜ್ಞಾನ ( Human scale technology )ಎನ್ನುತ್ತಾರೆ. ಶೈಕ್ಷಣಿಕ ಚಿಂತಕ ಇವಾನ್ ಇಲಿಷ್ Tools for conviviability ಎಂಬ ಪರಿಕಲ್ಪನೆ ಬಳಸುತ್ತಾರೆ; ಇವೆಲ್ಲವೂ ಗಾಂಧಿ ಚಿಂತನೆಗೆ ಹತ್ತಿರದವು ಮತ್ತು ಗಾಂಧಿಯ ಪ್ರಭಾವಕ್ಕೆ ಒಳಗಾದವೇ ಆಗಿವೆ .
ಈಗ ಬಾಗಲಕೋಟೆ, ಬೆಳಗಾವಿ ಮತ್ತು ಮಂಡ್ಯದ ಸಕ್ಕರೆ ಕಾರ್ಖಾನೆಗಳನ್ನೇ ಉದಾಹರಣೆಗೆ ತೆಗೆದುಕೊಳ್ಳೋಣ, ಪ್ರಸನ್ನ ಅವರ ನುಡಿಗಟ್ಟಿನಲ್ಲೇ ಹೇಳುವುದಾದರೆ ಇವು ನಾವು ನಿರ್ವಹಿಸಲಾಗದ ತಂತ್ರಜ್ಞಾನಗಳು; ಇವುಗಳನ್ನ ಬಿಚ್ಚಿಹಾಕುವುದೇ ಲೇಸು .
ವೈದ್ಯಕೀಯ ಸಂಸ್ಥೆಗಳ ಅಂಕಿ ಅಂಶಗಳು ತೋರುತ್ತಿರುವಂತೆ, ರೈತ ಸಂಘದ ಪುಟ್ಟಣ್ಣಯ್ಯನವರು ದೃಢಪಡಿಸಿರುವಂತೆ ನಗರ ಜನಸಂಖ್ಯೆಯ ಪೈಕಿ ಶೇ. 33 ರಷ್ಟು ಜನರು ಮದುಮೇಹಕ್ಕೆ ಬಲಿಯಾಗಿರುವಾಗ, ಸಕ್ಕರೆಯಲ್ಲಿ ಮನುಷ್ಯರು ಜೀರ್ಣಿಸಿಕೊಳ್ಳಲಾಗದ ಫ್ರಕ್ಟೋಸ್ ಇರುವಾಗ, ಕಬ್ಬು ಬೆಳೆದು ಕೊಟ್ಟ ರೈತರಿಗೆ ಈ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕಾಸನ್ನೇ ಕೊಡದೇ ಸತಾಯಿಸುತ್ತಿರುವಾಗ ಈ ಕಾರ್ಖಾನೆಗಳನ್ನ ಬಿಚ್ಚಿ ಹಾಕದೇ ಬೂದುಗುಂಬಳ ಕಾಯಿ ಒಡೆದು ಪೂಜೆ ಪುರಸ್ಕಾರ ಮಾಡಿಕೊಂಡು ಕುಂತಿರಲು ಸಾಧ್ಯವೇ ?
ಶೋಷಣೆಯ ವಿರುದ್ಧ ಹೋರಾಟ ಮಾಡುವುದು ಒಂದು ದಾರಿ, ಶೋಷಣೆಯೇ ಸಾಧ್ಯವಿರದಂತಹ, ಮಾನವ ಅಳತೆಯ ಸಾಧನಗಳಿಂದ ಸಂಪತ್ತು ಸೃಷ್ಟಿಸುವುದು ಇರುವ ಇನ್ನೊಂದು ದಾರಿ; ಆದ್ದರಿಂದ ಪ್ರಸನ್ನ ಒಳ್ಳೆಯ ಆಯ್ಕೆಯನ್ನೇ ಸೂಚಿಸುತ್ತಿದ್ದಾರೆ. ಅವರು ಇದೇ ಅರ್ಥದಲ್ಲಿ ‘ಪವಿತ್ರ ಆರ್ಥಿಕತೆ’ ಎಂಬ ಪದ ಬಳಕೆ ಮಾಡಿರುತ್ತಾರೆ .
ಮತ್ತೆ ನಾವು ಆಲೆಮನೆ ಕಟ್ಟದೇ ಸಕ್ಕರೆ ಕಾರ್ಖಾನೆಗಳನ್ನ ಬಿಚ್ಚಲಾರೆವು. ಇದು ಜನಸಮುದಾಯದ ನಡುವೆ ಇದ್ದು ಮಾಡಬೇಕಾದ ಕಾರ್ಯ; ಆದ್ದರಿಂದ ಪ್ರಸನ್ನ ಅವರು ತಮ್ಮ ಹಟ ಬಿಟ್ಟು ಅಮರಣಾಂತ ಉಪವಾಸವನ್ನು ಕೊನೆಗೊಳಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ.
ಒಳ್ಳೆಯ ಉದ್ದೇಶಕ್ಕೆ ಉಪವಾಸ ಮಾಡುತ್ತಿರುವ ಮನುಷ್ಯರ ಹತ್ತಿರ ಹೋಗಿ ಮನ ಒಲಿಸಿ ನೀರನ್ನೋ, ಹಣ್ಣಿನ ರಸವನ್ನೋ ಕುಡಿಸಿ ಉಪವಾಸ ನಿಲ್ಲಿಸುವುದು ಒಂದು ಮಾನವೀಯ ನಡವಳಿಕೆ; ನಮ್ಮ-ನಮ್ಮ ಸ್ವಸ್ಥಾನದಲ್ಲಿ ಕುಂತು ಟ್ರೋಲ್ ಮಾಡುವುದು, ವ್ಯಂಗ್ಯವಾಗಿ ಬರೆಯುವುದು ಅಮಾನವೀಯ ವರ್ತನೆ.






0 Comments