ಪ್ರಸಾದ
ಕುಸುಮ ಬಾಲೆ

ಅಪ್ಪ ಆವತ್ತು ಮಾತಾಡುತ್ತಿದ್ದರೆ ನಾನು ಬಿದ್ದೂ ಬಿದ್ದೂ ನಗುತ್ತಿದ್ದೆ. ಅಪ್ಪನಿಗೆ ತನ್ನ ಮಾತಿಗೆ ಆಶ್ಚರ್ಯ ಸೂಚಿಸದೆ, ಅಪಹಾಸ್ಯ ಮಾಡುತ್ತಿರುವುದಕ್ಕೆ ಸಣ್ಣಗೆ ಸಿಟ್ಟೇರುತ್ತಿತ್ತು. ಏ ನಗದ್ ನೋಡು ನಿಜ ಕ ಕುಸು ಸೂರ್ಯ ನೆತ್ತಿಗೇರೋ ಹೊತ್ಲಿ ಚಪ್ಪಲೀಲ್ ಹೊಡೆದ್ರೆ ಹೊಡೆಸಿಕೊಂಡೋನಿಗೆ ಭಾರೀ ಜಯಮಾನವಂತೆ ಹೊಡೆದವನ ಕತೆ ಮುಗೀತು. ಹೊತ್ತಿಳಿಯೋ ಹೊತ್ತಲ್ ಹೊಡೆದ್ರೆ ಹೊಡೆದವನಿಗೆ ಹೆಚ್ಚೊಕ್ಕಲು ಹೊಡೆಸಿಕೊಂಡವನು ಪಾತಾಲ ಸೇರೊಯ್ತನೆ. ಅಂದ್ರು, ಓ ಹಂಗಾದ್ರೆ ಯಾರ್ಯಾರ್ ಕಷ್ಟದಲ್ಲಿದಾರೋ ಅವರೆಲ್ಲ ಸೂರ್ಯ ನೆತ್ತಿಗೇರೋ ಹೊತ್ತಲ್ಲಿ ಎಕ್ಕಡದೇಟು ತಿಂದ್ರೆ ಆಯ್ತು. ಅಂತ ಭಾರತದ ಬಡತನಕ್ಕೆಲ್ಲಾ ಪರಿಹಾರ ಸಿಕ್ಕ ಖುಷಿಯಲ್ಲೂ, ಅಪ್ಪನ ವಾದವನ್ನ ಖಂಡಿಸುವ ಸ್ವರದಲ್ಲೂ ಹೇಳಿದೆ. ಅಪ್ಪ ಅಂಗಾದ್ದ? ಬೇಕ್ ಬೇಕು ಅಂತ್ ಒಡಿಸ್ಕಂಡ್ರಾಬುಟ್ಟದಾ? ಆ ಥರ ಸಮಯ ಸಂದರ್ಭ ತಾನಾಗೇ ಬರ್ಬೇಕು. ಅಂದರು.ಈ ಎಕ್ಕಡದೇಟಿನ ಸಮಾಚಾರ ನಡೆದದ್ದು ಹೀಗೆ.
ಚಾಮರಾಜನಗರದ ಟಗರುಪುರ ಅನ್ನೋ ಊರಿಂದ ಸಂಸಾರ ಸಮೇತ ಗುಳೇ ಬಂದ ಮಾದಪ್ಪ. ಬಸುರಾಜಣ್ಣನ ಜಮೀನನ್ನ ಭೋಗ್ಯಕ್ಕೆ ಹಾಕೊಂಡ, ಕಬ್ಬು ಕೂರಿಸಿದ, ಕಷ್ಟಪಟ್ಟು ದುಡಿದದ್ದಕ್ಕೆ ಮೊದಲ ವರ್ಷ ಕಬ್ಬಿನಲ್ಲಿ ಒಳ್ಳೆ ಲಾಭವೂ ಸಿಕ್ಕಿತ್ತು. ನಮ್ಮೂರ ಕೆಲ ಫಿಟಿಂಗ್ ಮಾಸ್ಟರ್ಗಳು ಬಸುನ್ಗುಡಿ ಮುಂದೆ ಕೂತು ಬೀಡಿ ಸೇದ್ತಾ ಏ ಅದ್ಯಾಕ್ಲಾ ಬಸುರಾಜ ಒಲ ಬೋಗ್ಯ ಮಾಡ್ಬುಟ್ಟೆ? ಊರಿಂದೂರಿಗ್ ಬಂದು ಕಬ್ಬಾಕಂಡು ಲಕ್ಸ ದುಡಿತಾನಲ್ಲ ಮಾರಾಯ. ಅದೇ ಕೆಲ್ಸ ನೀನೇ ಮಾಡಕಾಯ್ತಿರ್ನಿಲ್ವಾ ಬಡ್ಡಿಕೂಸೆ? ಅಂತ ಹೇಳಿದಾಗೆಲ್ಲ ಬಸುರಾಜಣ್ಣನಿಗೆ ತನ್ನ ನಿರ್ಧಾರದ ಬಗ್ಗೆ ಒಳಗೊಳಗೇ ಬೇಸರವಾಗುತ್ತಿತ್ತು.
ಮಾದಪ್ಪನ ತೋಟದ ಎರಡನೆ ಬೆಳೆ ಕಬ್ಬೂ ಚಿಗುರಿ ನಿಂತು, ಊರ ಎಲ್ಲ ಕಬ್ಬು ತೋಟಗಳನ್ನೂ ನಾಚಿಸುವಂತಿತ್ತು. ಮಾದಪ್ಪನ ಹೆಂಡತಿ ಬಗ್ಗೆಯೂ ಊರಲ್ಲೆಲಲಾ ಮಾತು. ಅದೇನಾರಿ ಕೆಲ್ಸಮಾಡೀಳೋ ನನ್ ತಾಯೀ, ಒಂದ್ ಗರಿಕೆ ಬುಡಲ್ಲ ಹೊಲದಲ್ಲಿ. ಬೆಳಿಗ್ಗೆ ಅಸ ಬುಟ್ಕಂಡ್ ಬಂದ್ರೆ ಸಂದ್ಗೇ ಅಟ್ಟಿಗೋಗದು. ಏಡಾಳಿನ್ ಕೆಲ್ಸ ಮಾಡ್ತಳ ಅಂತ ಆಳುಗಳ ರಿಪೋರ್ಟು.
ಎರಡನೆ ಬೆಳೆ ಕಬ್ಬು ಇನ್ನೆರಡು ತಿಂಗಳಾದ್ರೆ ಕಟಾವಿಗೆ ಬರುತ್ತೆ. ಬಣ್ಣಾರಿ ಅಮ್ಮನ್ ಶುಗರ್ಸ್ನ ಫೀಲ್ಡ್ ಆಫಿಸರ್ ಒಳ್ಳೆ ರೇಟಿನ ಭರವಸೇನೂ ಕೊಟ್ಟಿದಾನೆ. ಇನ್ನೊಂದೈದ್ ವರ್ಷ ಬಸುರಾಜನ ಜಮೀನು ಭೋಗ್ಯ ಮುಂದುವರೆಸಿದ್ರೆ ಚೆನ್ನಾಗಿ ಸಂಪಾದನೆ ಮಾಡಿಕೊಂಡು. ಇಲ್ಲೆ ಒಂದೆರಡೆಕರೆ ಜಮೀನು ತಗೊಂಡು ಆಯರಳ್ಳಿ ಗ್ರಾಮಸ್ಥನೇ ಆಗುವ ಕನಸು ಮಾದಪ್ಪನ ಮನಸಲ್ಲಿ ಮೂಡಿಯಾಗಿತ್ತು. ಆ ಒಂದು ಘಟನೆ ನಡೀದೇ ಹೋಗಿದ್ರೆ ಆ ಕನಸು ನನಸಾಗಲೂ ಬಹುದಿತ್ತೇನೋ.
ನಮ್ಮೂರ ಬಸುನ್ಗುಡಿ ಪೂಜೆ ಮಾಡಿಕೊಂಡು, ಇದ್ದ ಒಂದಿಷ್ಟು ಪುಡಿ ಜಮೀನು ನೋಡಿಕೊಂಡು ಒಂದೆರಡ್ ಹಸ ಕಟ್ಕಂಡು, ಹೇಗೋ ಜೀವನ ಉರುಳಿಸುತ್ತಿದ್ದ ತಮ್ಮಡಿ ನಾಗರಾಜ. ಆವತ್ತವನು ಈ ಟಗರುಪುದ ಮಾದಪ್ಪನ ಜಮೀನಿನ ಪಕ್ಕದ ತೆವರೀಲಿ ಹಸ ಮೇಯಿಸೋಕ್ ಹೋಗಿದ್ನಂತೆ. ಮಧ್ಯಾಹ್ನದ ಟೈಂ ಯಾರೂ ಇಲ್ಲದ್ದನ್ನ ಖಾತ್ರಿ ಮಾಡಿಕೊಂಡು ಈ ತಮ್ಮಡಿ ನಾಗರಾಜ ಮಾದಪ್ಪನ ಹೆಂಡತಿ ಸೆರಗು ಹಿಡಿದ್ನಂತೆ, ಆಕೆ ಜೋರಾಗಿ ಕೂಗಿಕೊಂಡ್ಳಂತೆ, ಮಾದ್ಪಪಣ್ಣ ಗೊಬ್ಬರ ತರೋಕೆ ಅಂತ ಹದಿನಾರಿಗೆ ಹೋಗಿದ್ದರಂತೆ, ಸುತ್ತ ಮುತ್ತ ಇದ್ದವರು ಬರೋಷ್ಟರಲ್ಲಿ, ಅದಾಗಲೇ ನಾಗರಾಜನಿಗೆ ಚಪ್ಪಲಿ ಏಟು ಬಿದ್ದಾಗಿತ್ತಂತೆ, ಬಂದವರಿಗೆ ಆಕೆ ಒಪ್ಪಿಸಿದ ನ್ಯಾಯ ರಾತ್ರಿ ವೇಳೆಗೆ ಮನೆ, ಮನೆ ಸುದ್ದಿಯಾಗಿತ್ತು. ಮಲ್ಲೇಶಣ್ಣನಾದಿಯಾಗಿ ಊರ ಮುಖಂಡರೆಲ್ಲ ಮಠದಲ್ಲಿ ಸೇರಿದಾಗ ಮಾದಪ್ಪನ ಹೆಂಡತಿಯೂ, ತಮ್ಮಡಿ ನಾಗರಾಜನೂ ತಮ್ಮ ತಮ್ಮ ಮಕ್ಕಳ ತಲೆ ಮೇಲೆ ಕೈ ಇಟ್ಟು ಆಣೆ ಮಾಡಿ ತಮ್ಮ ವಾದ ಮಂಡಿಸಿದಾಗ ಇಬ್ಬರೂ ಮಕ್ಕಳ್ ಮೇಲ್ ಆಣೆ ಮಾಡಿದ್ರೆ ನಾವೇನೇಳದು? ದೇವ್ರೇ ತೋರುಸ್ತನ ಬುಡ್ರಯ್ಯ ಅಂದು ಎದ್ದು ಬಂದಿದ್ದರು. ಆದರೂ ಊರವರಿಗೆಲ್ಲ ನಾಗರಾಜನ ಮೇಲೆ ಅನುಮಾನ ಇದ್ದೇ ಇತ್ತು.
ಇದಾದ ಮೇಲೆ ಮಾದಪ್ಪನ ಜೀವನವೂ ತಮ್ಮಡಿ ನಾಗರಾಜನ ಜೀವನವೂ ತಿರುಗಿದ ದಿಕ್ಕು ಮಾತ್ರ ಆಶ್ಚರ್ಯಕರವಾಗಿತ್ತು. ಮಾದಪ್ಪನ ಕಬ್ಬಿಗೆ ಕಟಾವಿಗೆ ಒಂದು ತಿಂಗಳಿರುವಾಗ ರೋಗ ಹತ್ತಿಕೊಂಡಿತು. ಮತ್ತೆ ಹಳೆ ಕಬ್ಬನ್ನೆಲ್ಲ ಕಿತ್ತು ಹೊಸ ಕಬ್ಬು ನೆಟ್ಟು, ಮೊದಲ ಬೆಳೆಯ ಲಾಭವನ್ನೆಲ್ಲ ಬಂಡವಾಳವನ್ನಾಗಿಸಿ, ಎಷ್ಟೇ ಶ್ರಮ ಸುರಿದರೂ, ಕಬ್ಬು ಕೈಗೂಡಲಿಲ್ಲ. ಸಾಲ ಮಾಡಿ ಬಾಳೆ ಹಾಕಿದರೂ ಅದೂ ಫಲ ಕೊಡಲಿಲ್ಲ. ಒಬ್ಬರ ಮೇಲ್ ಸುಮ್ಸುಮ್ನೆ ಅನ್ಯಾಯ ಒರಿಸಿದ್ರ ದೇವ್ರ್ ಸುಮ್ಮನ್ ಬುಟ್ಟನ? ಅಂತ ನಾಗರಾಜ ಸಿಕ್ಕಸಿಕ್ಕವರಿಗೆಲ್ಲ ಹೇಳಿಕೊಂಡು ತಿರುಗತೊಡಗಿದ್ದ. ನಷ್ಟದ ಮೇಲೆ ನಷ್ಟ ಅನುಭವಿಸಿದ ಮಾದಪ್ಪನ ಸಂಸಾರ ಕಡೆಗೆ ಊರನ್ನೆ ಬಿಡಬೇಕಾಯ್ತು.
ಇದೆಲ್ಲ ಆದದ್ದು ನಾನು ದೇವಲಾಪುರದ ಕಾಲೇಜಲ್ಲಿ ಪಿಯುಸಿಯಲ್ಲಿದ್ದಾಗ. ಇದಾಗಿ ಈಗ 8-10 ವರ್ಷಗಳೇ ಕಳೆದಿರಬೇಕು. ಬೆಂಗಳೂರಿಗೆ ಬಂದು ಟಿವಿ ದಾರಾವಾಹಿಗಲಲ್ಲಿ ಕಳೆದುಹೋದ ನನಗೆ ಊರಿನಷ್ಟೇ,ಊರರೊಚಕ ಕಥೆಗಳೂ ಅಪರೂಪವಾಗಿಹೋದವು. ಇದೆಲ್ಲದರ ನಡುವೆ ಮದುವೆಯಾಗಿ ಎರಡು ವರ್ಷವಾದರೂ ಮಕ್ಕಳಾಗಲಿಲ್ಲ ಅಂತ ಚಿಂತೆ ಹತ್ತಿಕೊಂಡ ಅಮ್ಮ ಅಮಾವಾಸ್ಯೆಯ ದಿನ ಊರಿಗೆ ಬಾ. ಬಿಳಿಕೆರೆಮಾದಪ್ಪನ ದೇವಸ್ಥಾನದಲ್ಲಿ ತಣ್ಣೀರಲ್ಲಿ ಸ್ನಾನ ಮಾಡಿ, ತಮ್ಮಡಿ ನಾಗರಾಜನ ಕೈಲಿ ಪ್ರಸಾದ ತಗೊಂಡ್ರೆ ಮಕ್ಕಳಾಗುತ್ತಂತೆ. ಯಾವ್ಯಾವ್ ಊರಿಂದ ಬರ್ತಾರೆ ಗೊತ್ತಾ? ಅಂತ ದುಂಬಾಲು ಬಿದ್ದಳು. ಫೋನು ಮಾಡಿದಾಗೆಲ್ಲ ಇದೇ ಮಾತು. ಕಡೆಗೆ ಅಂಗಲಾಚಿದ ಅಮ್ಮನಿಗೆ ಬೇಸರ ಮಾಡಲಾಗದೇ ಊರಿಗೆ ಹೋದದ್ದೂ ಆಯಿತು.

ಬಿಳಿಕೆರೆ ಮಾದಪ್ಪನ ದೇವಸ್ಥಾನದಲ್ಲಿ ಬೇಕಾದ್ದು ಮಾಡ್ತೀನಿ ಆದ್ರೆ ಆ ತಮ್ಮಡಿ ನಾಗರಾಜನ ಮನೆಗೆ ಬರೊಲ್ಲ. ಅವನು ಪ್ರಸಾದ ಕೊಟ್ರೆ ಮಕ್ಕಳಾಗತ್ತೆ ಅನ್ನೋದ್ರಲ್ಲಿ ನನಗೆ ಖಂಡಿತಾ ನಂಬಿಕೆ ಇಲ್ಲ. ಯಾವ್ ಕಾಲದಲ್ಲಿದೀರಮಾ ನೀವೆಲ್ಲ? ನನಗೆ ಬೇಕಾದಷ್ಟು ಹಾರ್ಮೋನಲ್ ಸಮಸೈಗಳಿವೆ. ಔಷಧಿ ತಗೋತಿದೀನಿ ಡಾಕ್ಟರ್ ಅದನ್ ಸರಿಮಾಡ್ತಾರೆ. ಆ ತಮ್ಮಡಿ ನಾಗರಾಜ ಏನ್ ಮಾಡ್ತಾನೆ? ಬುದ್ದಿ ಇಲ್ಲ ನಿಮಗೆ ಅಂದದ್ದೇ ತಡ ಅಮ್ಮ ಅತ್ತಳೋ, ಬೈದಳೋ, ಗೊತ್ತಾಗದೇ ಹಾಳಾಗಿಹೋಗ್ಲಿ ಅಂತ ಒಪ್ಪಿಕೊಂಡೆ.
ಮಾದಪ್ಪನ ದೇವಸ್ಥಾನದಲ್ಲಿ ತಣ್ಣೀರ ಕೊಳ ಮುಳುಗಿ ಅಡ್ಡಡ್ಡ ಮಲಗಿ,ಹದಿನಾರಿಂದ ಪ್ರತಿ ಅಮಾವಾಸ್ಯೆಗೆ ತಾನಾಗೇ ನಡೆದು ಬರೋ ಬಸವಣ್ಣ ದೇವರ ಕೈಲಿ ದಾಟಿಸಿಕೊಂಡದ್ದೂ ಆಯಿತು. ಮತ್ತೆ ಮನೆಗೆ ಬಂದು ವದ್ದೆ ಬಟ್ಟೆ ತೆಗೆದು , ಮಡಿಉಡಿಸಿ, ತಮ್ಮಡಿ ಮನೆಗೆ ಎಳೆದೊಯ್ದಳು ಅಮ್ಮ.
ತಮ್ಮಡಿ ಮನೆ ಈಗ ಸಣ್ಣ ಹೆಂಚಿನ ಮನೆಯಾಗಿ ಉಳಿದಿರಲಿಲ್ಲ. ತಾರಸಿ ಹೊದ್ದು, ಗೇಟು ಹಾಕೊಂಡಿತ್ತು. ಒಳಗೆ ಹೋದಾಗ ಸ್ಟೋರ್ ರೂಮು ಕಮ್ ತಮ್ಮಡಿಯ ಆಫೀಸು. ಒಂದು ಬದೀಲಿ ಭತ್ತದ ಮೂಟೆಗಳು, ಹೊಲದ ಸಲಕರಣೆಗಳು. ಮತ್ತೊಂದು ಕಡೆ. ನೆಲದ ಮೇಲೆ ಸ್ವಾಮೀಜಿಗಳು ಕೂರೋ ಥರದ ಮೆತ್ತನೆ ಆಸನದಲ್ಲಿ ಕೂತುಕೊಂಡಿದ್ದ ತಮ್ಮಡಿ ನಾಗರಾಜ. 8-10 ಜನ ಅದಾಗಲೇ ಸರದಿಯಲ್ಲಿದ್ದರು. ನನ್ನನ್ನೂ ಅಮ್ಮನನ್ನೂ ಗೌರವದಿಂದ ಬರಮಾಡಿಕೊಂಡು. ಕೂರಿಸಿದ. ಎದುರಿಗಿದ್ದವರಿಗೆ ನಿಂಬೆಹಣ್ಣು ಮಂತ್ರಿಸಿ ಕೊಟ್ಟು ನಾಕು ದಿನ ಪೂಜೆ ಮಾಡಿ ಆಮೇಲ್ ಶರಬತ್ತು ಮಾಡ್ಕಂಡು ಕುಡಿ ಎಲ್ಲ ಸರ್ಯಾಯ್ತದ ಓಗು ಅಂದ. ಅಷ್ಟರಲ್ಲಿ ಅದಾಗಲೇ ಹೊರಟಿದ್ದ ಮತ್ತೊಬ್ಬ ವಾಪಸು ಬಂದು, ಒಂದ್ ಎಳೆ ಕೊಡಿ ನನ್ ಎಂಡ್ತಿ ಕಾಲ್ ನೌವು ಅಂತಳ ಅಂದ. ನಾಗರಾಜ ಅದೇನೂ ಬ್ಯಾಡ ಕಣೋಗಯ್ಯ. ಇಂಬಿಹಣ್ ಕೊಟ್ಟಿನೆಲ್ಲ ಅದೇ ಸಾಕು ಓಗು ಅಂದರೂ ಕೇಳದೆ, ಕೊಡಿ ಒಂದೆಳ್ಯಾ ಅಂತ ಹಠಕ್ಕೆ ಬಿದ್ದ. ನಾಗರಾಜ ಅದೆಲ್ಲೆಂದಲೋ ಒಂದು ಹಳದಿ ದಾರದ ಉಂಡೆ, ಕೆಂಪು ದಾರದ ಉಂಡೆ ಎರಡನ್ನೂ ತೆಗೆದು, ಎರಡರಿಂದಲೂ ಕಾಲಿಗೆ ಕಟ್ಟೋಷ್ಟು ಉದ್ದದ ದಾರ ಕತ್ತರಿಸಿ,ಎರಡನ್ನೂ ಸೇರಿಸಿ ಕೊಟ್ಟದ್ದನ್ನ ಎಳೆ ಕೇಳಿದಾತ ಭಕ್ತಿಯಿಂದ ಸ್ವೀಕರಿಸಿದ್ದನ್ನ ನೋಡಿ, ಅಮ್ಮನನ್ನೂ ಬೈದುಕೊಂಡು ಕೂತೆ.
ನಾಗರಾಜ ಅಲ್ಲಿ ಕೂತ ಮಹಾಜನತೆಗೆ ಕೂತ್ಕಳಿ ಒಂದ್ಗಳಿಗ, ಈ ತಾಯಿ ಬೆಂಗಳೂರಿಂದ್ ಬಂದಳ ಅಂದು ಬಾ ತಾಯಿ ಅಂತ ನನ್ನನ್ನು ಕರೆದ. ಕೈಗೆ ಕವಡೆ ಕೊಟ್ಟು, ಬಿಡು ಅಂದ. ಬಿಟ್ಟ ಕವಡೆ ಎಣಿಸಿ, ಜಿನಾ ರಾತ್ರನಾಗ ಕಾಲ್ ನೊಂದದ ತಾಯಿ? ಕೇಳಿದ. ಇಲ್ಲ ಅಂದೆ. ಕನಸ್ಲಿ ಆವ್ ಕಾಣಿಸ್ಕತದ ಅಲ್ವ? ಇಲ್ಲ ಅಂದೆ ಅವನ ನಾಲ್ಕೈದು ಪ್ರಶ್ನೆಗೂ ನಾನು ಇಂಥ ಉತ್ತರವನ್ನೇ ಕೊಟ್ಟ ಮೇಲೆ ಕವಡೆ ಸಹವಾಸ ಬಿಟ್ಟು, ಬಸುನ್ ದಾಟ್ಸಿದರಿ ಅಲ್ವ? ಸರೋಯ್ತದ ಬುಡಿ ಅಂದು ಪ್ರಸಾದ ನೀಡಲು ಮುಂದಾದ. ಒಂದು ಬಾಳೆ ಹಣ್ಣು ಮಂತ್ರಿಸಿ, ಅದನ್ನು ಮುರಿದು ನನ್ನ ಕೈಗಿಟ್ಟು, ಉದ್ದರಣೆಯಿಂದ ಮೂರು ಸಲ ನೀರು ಹಾಕಿ, ಆ ನೀರ್ ಸಮೇತ ಹಣ್ ತಿನ್ನು ತಾಯಿ ಅಂದ. ಅಮ್ಮನ ಮುಖ ನೋಡಿದರೆ ಅವಳು ಶ್ರಧ್ದಾಭಕ್ತಿಗಳಿಂದ ಕೈಮುಗಿದು ಕುಳಿತುಬಿಟ್ಟಿದ್ದಳು ನಾಗರಾಜನ ಕೈಯ ಕುಂಕುಮವೂ ಮೆತ್ತಿಕೊಂಡಿದ್ದ ಆ ಹಣ್ನನ್ನು ನುಂಗುವಾಗ(ಅಥವಾ ಕುಡಿಯುವಾಗ) ನಗು, ಕೋಪ ಎರಡೂ ಬಂತು. ಆಮೇಲೆ ನನಗೂ ಆ ಹಳದಿ, ಕೆಂಪು ಮಿಶ್ರಿತ ಎಳೆ ಕಟ್ಟಿ ಚಿಲ್ಲನೆ ನೀರು ಚಿಮುಕಿಸಿದ.
ಮನೆಗೆ ಬಂದು ಬಿದ್ದೂ ಬಿದ್ದೂ ನಗತೊಡಗಿದೆ. ಅಮ್ಮ ಹಾಗೆ ನಕ್ಕರೆ ದೇವರು ಫಲ ಕೊಡ್ತಾನಾ? ನಿನ್ನಿಷ್ಟ ಬಂದ್ಹಾಗ್ ಮಾಡುಅಂತ ಕೋಪ ತೋರಿಸಿದರೂ ನನ್ನ ನಗು ನಿಲ್ಲಲಿಲ್ಲ. ಆಗಲೇ ಅಪ್ಪ ಈ ಕಥೆ ಹೇಳಿದ್ದು, ಟಗರುಪುರದ ಮಾದಪ್ಪನ ಹೆಂಡತಿ ಕೈಲಿ ಎಕ್ಕಡದೇಟು ತಿಂದ ಮೇಲೆ ನಾಗರಾಜನಿಗೆ ದೆಸೆ ತಿರುಗಿತಂತೆ, ಅಮಾವಾಸ್ಯೆಗಳಲ್ಲಂತು ಕಾಲಿಡೋಕೆ ಆಗದಷ್ಟು ಜನವಂತೆ. ಮಾದಪ್ಪ ದಿಕ್ಕೆಟ್ಟು, ಊರೂರು ಅಲೆದು ಕಡೆಗೆ ನಂಜನಗೂಡಲ್ಲಿ ಪಾನಿಪುರಿ ವ್ಯಾಪಾರ ಮಾಡ್ತಿದಾನಂತೆ.
ಬೆಂಗಳೂರಿಗೆ ಬಂದು ನಾನು ಮತ್ತೆ ನನ್ನ ಕೆಲಸದಲ್ಲಿ ಬ್ಯುಸಿಯಾದೆ. ಹಾರ್ಮೋನಲ್ ಔಷಧ ಮುಂದುವರೆದಿತ್ತು. ಒಂದೆರಡು ತಿಂಗಳು ಬಿಟ್ಟು ಹಳೇ ಸಮಸ್ಯೆಗಾಗಿ ಡಾಕ್ಟರನ್ನು ಭೇಟಿಯಾದೆ. ಪರೀಕ್ಷೆ ನಡೆಸಿದ ಡಾಕ್ಟರ್ ಪಾಸಿಟಿವ್ ಅಂದರು.




0 Comments