ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪದ್ಮಕ್ಕ..

ಆರ್ ಟಿ ವಿಠ್ಠಲಮೂರ್ತಿ 

ಸೆಲೆಬ್ರಿಟಿ ಎಂದರೆ ದೊಡ್ಡವರಾಗುವುದಲ್ಲ
ಸರಳವಾಗಿ ಬದುಕಲು ಕಲಿಯುವವರು

ಮನಸ್ಸೇಕೋ ಕಲ್ಲಿನ ಮೇಲೆ ಬಡಿದು ಹಾಕಿದ ಬಟ್ಟೆಯಂತೆ ಮುದ್ದೆಯಾಗಿ ಹೋಗಿದೆ.

ರಾತ್ರಿ ಮಳೆ ಬಂದು ಜೀವ ಉಸ್ಸಪ್ಪಾ ಅಂತ ಸಮಾಧಾನಪಡುತ್ತಿರುವಾಗ ಗೆಳೆಯನೊಬ್ಬ ಫೋನು ಮಾಡಿ,ವಿಠ್ಠೂ ಗೊತ್ತಾಯಿತಾ?ಪದ್ಮಕ್ಕ ತೀರಿಕೊಂಡರಂತೆ ಕಣೋ ಎಂದು ನೋವಿನಿಂದ ಹೇಳಿದ.

ನಾನು ಅರೆಕ್ಷಣ ಮೂಕನಾಗಿ ಕುಳಿತೆ.ಹೊರಜಗತ್ತಿಗೆ ಅವರು ನಟಿ ಪದ್ಮಕುಮಟಾ,ಆದರೆ ನಮಗೆ ಅಕ್ಕರೆಯ ಪದ್ಮಕ್ಕ.ನನ್ನೂರು ಸಾಗರ ಹಲವು ದಶಕಗಳ ಹಿಂದೆ ಕಂಡ ಸೆಲೆಬ್ರಿಟಿ ಅವರು.ಚೋಮನದುಡಿ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಪದ್ಮಕ್ಕ ಆಗಿಂದಾಗ ಊರಿಗೆ ಬರುತ್ತಿದ್ದರು.ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅನ್ನಿಸಿಕೊಂಡಾಗ ಅವರ ವಯಸ್ಸು ಕೇವಲ ಹದಿನೇಳು.

ಅವರ ತಂದೆ ಎಸ್.ಎಸ್.ಕುಮಟಾ ತುಂಬ ದೊಡ್ಡ ವ್ಯಕ್ತಿ.ಸಮಾಜವಾದಿ ಹೋರಾಟಗಾರ.ಶಾಂತವೇರಿ ಗೋಪಾಲಗೌಡ,ಹೆಚ್.ಗಣಪತಿಯಪ್ಪ ಸೇರಿದಂತೆ ಹಲ ಮಂದಿಯ ಒಡನಾಟವಿದ್ದವರು.ನಾನು ಬಲ್ಲಂತೆ ಅವರೊಂದು ವಿಶ್ವಕೋಶ.

ನಮಗೆ ಅಮೇರಿಕದ ವಾಟರ್ ಗೇಟ್ ಹಗರಣದ ವಿವರಗಳಿಂದ ಹಿಡಿದು,ಸಮಾನತೆಗಾಗಿ ಜಗತ್ತಿನ ಯಾವ್ಯಾವ ದೇಶಗಳಲ್ಲಿ ಯಾವ್ಯಾವ ರೀತಿಯ ಹೋರಾಟಗಳು ನಡೆದಿವೆ?ಮನುಷ್ಯ ಯಾವ್ಯಾವ ರೀತಿ ಹೋರಾಡುತ್ತಾ ಬಂದಿದ್ದಾನೆ?ಸೋತರೂ ಅದನ್ನು ಹೇಗೆ ಮುಂದುವರಿಸಿಕೊಂಡು ಬಂಧಿದ್ದಾನೆ?ಅನ್ನುವುದನ್ನು ವಿವರವಾಗಿ ತಿಳಿಸಿ ಹೇಳುತ್ತಿದ್ದವರು ಅವರು.

ನಾನು ಅವರ ಮಗ ಸುಬ್ಬು(ಸುಬ್ರಮಣ್ಯ ಕುಮಟಾ)ಸಾಗರದ ಸರ್ಕಾರಿ ಕಾಲೇಜಿನ ಮಹಾತರಲೆಗಳ ಪಟ್ಟಿಯಲ್ಲಿದ್ದವರು.ದಿನ ಬೆಳಗಾದರೆ ನಮ್ಮದು ದಶಾವತಾರ.ಶಾಲೆಯ ಹೆಂಚು ಒಡೆಯುವುದು,ಕಿಟಕಿಯ ಸರಳುಗಳನ್ನೇ ಕಿತ್ತು ಹಾಕುವುದು,ಪಾಠ ಮಾಡಲು ಲೆಕ್ಚರರು ಸೆಕ್ಷನ್ನಿಗೆ ಬರದಂತೆ ಮಾಡುವುದು,ಹೀಗೆ ಒಂದಲ್ಲ,ಹಲವು ತರಲೆಗಳು.

ಇದೇ ಕಾರಣಕ್ಕಾಗಿ ಒಂದು ಸಲ ಪ್ರಿನ್ಸಿಪಾಲರಾಗಿದ್ದ ಮಾಧವ ಪೈ ಹಾಗೂ ಉಪನ್ಯಾಸಕರಾದ ಎಸ್.ಎಸ್.ಎಂ.ಗೌಡರ್ ಸೇರಿ ನಮ್ಮಿಬ್ಬರನ್ನೂ ಕಾಲೇಜಿನಿಂದ ಡಿಸ್ ಮಿಸ್ ಮಾಡಲು ತೀರ್ಮಾನಿಸಿದ್ದರು.ಆಗ ಸರ್ಕಾರಿ ಶಾಲೆಯ ಕಮಿಟಿಯಲ್ಲಿ ಎಸ್.ಎಸ್.ಕುಮಟಾ ಅವರೂ ಇದ್ದರು.

ಅವರನ್ನು ಕರೆಸಿ ಈ ಕುರಿತು ಪ್ರಸ್ತಾಪಿಸಿದಾಗ,ರೀ,ನನ್ನ ಮಗ,ತಾರನ ಮಗ ಇನ್ನೊಬ್ಬರ ಮಗ ಅಂತ ನಾನು ಪ್ರತ್ಯೇಕವಾಗಿ ಪ್ರಸ್ತಾಪಿಸುವುದಿಲ್ಲ.ಡಿಸ್ ಮಿಸ್ ಮಾಡಬೇಕಾ?ಮಾಡಿ.ಆದರೆ ನೆನಪಿಡಿ,ಶಾಲೆಯ ಹೆಂಚು ಒಡೆದರು ಅಂತ ನೀವು ಇವತ್ತು ಅವರನ್ನು ಕಾಲೇಜಿನಿಂದ ಹೊರಹಾಕಿದರೆ ನಾಳೆ ಅವರು,ಕಂಡವರ ಮನೆಯ ಹೆಂಚು ಒಡೆಯುವ ಮಕ್ಕಳಾಗಿ ಬೆಳೆಯುತ್ತಾರೆ.ಅದರ ಬದಲು ಅವರು ಮಾಡಿದ ತಪ್ಪೇನು ಅಂತ ಅವರಿಗೆ ಕನ್ ವಿನ್ಸ್ ಮಾಡಿ.ಇವತ್ತು ನಾಲ್ಕು ಹೆಂಚು ಒಡೆದ ಮಕ್ಕಳು ನಾಳೆ ನಾಲ್ಕು ಮನೆ ನೆರಳು ಕಾಣಲು ಅಗತ್ಯವಾದ ಹೆಂಚುಗಳನ್ನು ಕೂರಿಸುವ ಶಕ್ತಿ ಪಡೆಯುತ್ತಾರೆ.ತಪ್ಪು ಅವರು ಮಾಡದೆ ನಾವು ಮಾಡಲು ಸಾಧ್ಯವಿಲ್ಲ.ಚಿಕ್ಕವರು ಬೆಬ್ಬೆಬ್ಬೆ ಎಂದರೆ ಬಾಲ್ಯ.ದೊಡ್ಡವರು ಬೆಬ್ಬೆಬ್ಬೆ ಎಂದರೆ ವಂಚಕರು ಅಂತ.ಇದನ್ನು ಗಮನದಲ್ಲಿಟ್ಟುಕೊಳ್ಳೋಣ.ಇಲ್ಲಿ ವಿದ್ಯೆ ಕಲಿತು ಹೋದ ಮಕ್ಕಳು ಹೊರಗೆ ನಾಲ್ಕು ಜನರಿಗೆ ಬೇಕಾದವರಾಗಬೇಕು,ನಾಲ್ಕು ಜನರಿಗೆ ಹೊರೆಯಾಗುವಂತಾಗಬಾರದು.ನಾನು ನಿಶ್ಚಿತವಾಗಿ ಹೇಳುತ್ತೇನೆ.ನಾಲ್ಕು ಜನರಿಗೆ ಅವರು ಬೇಕಾದವರಾಗುತ್ತಾರೆ.ಅದರಲ್ಲಿ ನಿಮಗೆ ಅನುಮಾನವಿದ್ದರೆ ಕಿತ್ತು ಹಾಕಿ.ನಾನೇನೂ ಹೇಳುವುದಿಲ್ಲ ಎಂದು ಎದ್ದು ಹೋದರು.

ಈ ಬೆಳವಣಿಗೆಯ ನಂತರ ನನಗೆ ಅವರು ಬಹಳ ಹತ್ತಿರವಾದರು.ಅವರ ಮಗ ಸುಬ್ಬು ನನ್ನ ಸಹಪಾಠಿಯೇ ಆದ್ದರಿಂದ ನಾನು ಸಹಜವಾಗಿಯೇ ಅವರ ಮನೆಗೆ ಪದೇ ಪದೇ ಹೋಗುತ್ತಿದ್ದೆ.ಹೀಗಾಗಿ ಮೇಲಿಂದ ಮೇಲೆ ಬೆಂಗಳೂರಿನಿಂದ ಬರುತ್ತಿದ್ದ ಪದ್ಮಕ್ಕನನ್ನು ನೋಡಿ ಮಾತನಾಡುತ್ತಿದ್ದೆ.
ಸಾಗರದ ಸರ್ಕಾರಿ ಆಸ್ಪತ್ರೆಯ ಎದುರು ಭಾಗದಲ್ಲಿದ್ದ ಓಣಿಯೊಳಗೆ ನುಗ್ಗಿದರೆ ಅವರ ಮನೆ.ಸರಳವಾದ ಹೆಂಚಿನ ಮನೆ.ನಾವೆಲ್ಲ ಚಿಕ್ಕವರಿದ್ದಾಗ ಟೆರೇಸು ಮನೆಗಳು ಅಪರೂಪ.ಇದ್ದವೆಲ್ಲ ಮಂಗಳೂರು ಹೆಂಚು ಅಥವಾ ನಾಡ ಹೆಂಚಿನ ಮನೆಗಳು.ಆದರೆ ಹೆಂಚಿನ ಕಿಂಡಿಯಿಂದ ಹೊಮ್ಮುತ್ತಿದ್ದ ಸೂರ್ಯನ ಕಿರಣಗಳ ತರವೇ ಜನರಲ್ಲಿ ಮತ್ತೊಬ್ಬರ ಬಗ್ಗೆ ಪ್ರೀತಿ ಹೊಮ್ಮುತ್ತಿತ್ತು ಅಂತ ಈಗನ್ನಿಸುತ್ತದೆ.
ಅಂದ ಹಾಗೆ ಪದ್ಮಕ್ಕ ಚೋಮನದುಡಿ ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಾಗ ಇಡೀ ಊರೇ ಸಂಭ್ರಮಪಟ್ಟಿತ್ತು.ಆದರೆ ನಾನು ನೋಡುತ್ತಾ ಬಂದಂತೆ ಪದ್ಮಕ್ಕ ಯಾವತ್ತೂ ಸೆಲೆಬ್ರಿಟಿ ಎಂಬಂತೆ ವರ್ತಿಸಲೇ ಇಲ್ಲ.ಊರಿಗೆ ಬಂದಾಗ,ನಾವು ನೋಡಿದಾಗಲೆಲ್ಲ ಅದೇ ನಗು.ಅದೇ ಪ್ರೀತಿ.ಅದೇ ಲಕ,ಲಕ ಮಾತು.

ಮುಂದೆ ಬೆಂಗಳೂರಿಗೆ ಬಂದ ಮೇಲೆ ಅದೊಂದು ದಿನ ಸುಬ್ರಮಣ್ಯ ಕುಮಟಾ:ಬಾರೋ,ಪದ್ಮಕ್ಕನ ಮನೆಗೆ ಹೋಗಿ ಬರೋಣ ಎಂದು ಕರೆದುಕೊಂಡು ಹೋಗಿದ್ದ.ಆವರ ಮನೆ ಆರ್.ಟಿ.ನಗರದಲ್ಲಿತ್ತು.ಮನೆಗೆ ಹೋದಾಗ ಎತ್ತಿದ ಮಾತಿಗೇ ಪದ್ಮಕ್ಕ,ಇವನು ನಮ್ಮ ತಾರಣ್ಣನ ಮಗ ವಿಠ್ಠೂ ಅಲ್ವಾ?ಎಷ್ಟು ದೊಡ್ಡವನಾಗಿದ್ದಾನೆ?ಅಂತ ಖುಷಿಪಟ್ಟಿದ್ದರು.

ಆಗಲೂ ಅಷ್ಟೇ.ಪದ್ಮಕ್ಕ ವೆರಿ ಸಿಂಪಲ್ ವುಮನ್.ಏನು ಮಾಡುತ್ತಿದ್ದೀಯೋ?ಅಂತ ಅಕ್ಕರೆಯ ಮಾತು.ಜರ್ನಲಿಸ್ಟು ಪದ್ಮಕ್ಕ ಅಂದಾಗ,ಹೌದಾ?ಒಳ್ಳೆಯ ಕೆಲಸ ಕಣೋ.ಯಾರಾದರೂ ತಪ್ಪು ಮಾಡಿದಾಗ ಮುಲಾಜಿಲ್ಲದೆ ಹೇಳೋ.ಬದುಕಿರುವುದೆಷ್ಟು ದಿನವೋ?ಒಳ್ಳೆಯದನ್ನುಮಾಡಿ ಹೋಗಿ ಬಿಡಬೇಕು.ಹಾಗೆಯೇ ಮೈತುಂಬ ಕೆಲಸ ಅಂಟಿಸಿಕೊಳ್ಳಬೇಕು.ಇಲ್ಲದಿದ್ದರೆ ನಾವು ಪರಾವಲಂಬಿಗಳಾಗಿ ಬಿಡ್ತೀವಿ.ಹಾಗಾಗಬೇಡ ಅಂದಿದ್ದರು.

ಆಗೆಲ್ಲ ನಾನು ಕುತೂಹಲದಿಂದ,ಪದ್ಮಕ್ಕ,ನೀವು ಅಷ್ಟು ಚಿಕ್ಕ ವಯಸ್ಸಿಗೆ ಸೆಲೆಬ್ರಿಟಿಯಾದಿರಲ್ಲ?ಎಲ್ಲರ ಮೆಚ್ಚುಗೆ,ಪ್ರೀತಿ,ಗೌರವ ಸಿಗುತ್ತಿದ್ದಾಗ ನಿಮಗೆ ಏನನ್ನಿಸಿತ್ತು?ಅಂತ ಕೇಳಿದ್ದೆ.ಅದಕ್ಕವರು ನಕ್ಕು:ಅಯ್ಯೋ,ಸೆಲೆಬ್ರಿಟಿ ಎಂದರೆ ದೊಡ್ಡ ಮನುಷ್ಯರಾಗುವುದು ಅಂತಲ್ಲ ಕಣೋ,ಮತ್ತಷ್ಟು ಸರಳರಾದ ಮನುಷ್ಯರಾಗುವುದು ಅಂತ ಹೇಳಿದ್ದರು.

ಮುಂದೆ ಪದ್ಮಕ್ಕ ವಿಪರೀತ ಅನ್ನುವಷ್ಟು ಬ್ಯುಸಿಯಾದರು.ಕಿರುತೆರೆ ಧಾರಾವಾಹಿಗಳಲ್ಲಂತೂ ಪದ್ಮಕ್ಕ ಕಾಣದ ದಿನವೇ ಇರಲಿಲ್ಲ.ಹೀಗಾಗಿ ಅವರು ನಮ್ಮ ಅಕ್ಕ ಪಕ್ಕದಲ್ಲೇ ಇದ್ದಾರೆ ಅನ್ನಿಸುತ್ತಿತ್ತು.ಮೊನ್ನೆ ಸಾಗರಕ್ಕೆ ಮಾರಿಕಾಂಬ ಜಾತ್ರೆಗೆ ಅಂತ ಹೋದಾಗ ಪದ್ಮಕ್ಕ ಸಿಕ್ಕಿದ್ದರು ಅಂತ ನನ್ನಣ್ಣ ಹೇಳಿದ್ದ.ಪದ್ಮಕ್ಕ ಅವರಿಗೆ ನನ್ನಣ್ಣನ ಮಗ ಚಿಂಟು ಎಂದರೆ ಬಹಳ ಪ್ರೀತಿ.

ಜಾತ್ರೆಯ ಟೈಮಿನಲ್ಲಿ ಯಾರೇ ಸಾಗರದ ಕಡೆ ಹೋಗುತ್ತಿದ್ದಾರೆ ಎಂದು ಗೊತ್ತಾದರೆ,ರೀ,ಅಲ್ಲಿ ನನ್ನ ಮಗನಂತಿರುವ ಚಿಂಟು ಇದ್ದಾನೆ.ಏನೇ ಇದ್ದರೂ ಅವನಿಗೆ ಹೇಳಿ.ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ.ಏನೂ ತೊಂದರೆಯಾಗದಂತೆ ಜಾಗೃತೆ ವಹಿಸುತ್ತಾನೆ ಎನ್ನುತ್ತಿದ್ದರು.
ಹೀಗೆ ಪದ್ಮಕ್ಕ ವ್ಯಕ್ತಪಡಿಸುತ್ತಿದ್ದ ಪ್ರೀತಿಗಾಗಿಯೋ ಏನೋ?ನಾನು ಮೊನ್ನೆ ಊರಿಗೆ ಹೋಗುವುದಕ್ಕೂ ಕನ್ನಡ ಚಿತ್ರರಂಗದ ಖ್ಯಾತ ನಟರಾದ ಶರಣ್ ಹಾಗೂ ಶೃತಿಯ ತಂದೆ,ತಾಯಂದಿರು ಮನೆಗೆ ಬರುವುದಕ್ಕೂ ಸರಿ ಹೋಯಿತು.

ಹೀಗೆ ಬಂದು ತುಂಬ ಹೊತ್ತು ಕುಳಿತು ಮಾತನಾಡಿದ್ದ ಶೃತಿ ಹಾಗೂ ಶರಣ್ ಅವರ ತಂದೆ,ತಾಯಿಯರು:ಪದ್ಮಾ ಕುಮಟಾ ಚಿಂಟು ಬಗ್ಗೆ ತುಂಬ ಪ್ರೀತಿಯ ಮಾತನಾಡುತ್ತಿರುತ್ತಾರೆ ಅಂತ ಹೇಳಿ ಹೋಗಿದ್ದರು.

ಅರೇ,ಹೌದಲ್ಲ ಪದ್ಮಕ್ಕನನ್ನು ನೋಡದೆ ಇಪ್ಪತ್ತು ವರ್ಷಗಳ ಮೇಲಾಗಿ ಹೋದವು.ಬರೀ ಟಿ.ವಿ.ಯಲ್ಲಿ ನೋಡುವುದೇ ಆಯಿತು.ಒಮ್ಮೆ ಹೋಗಿ ಮಾತನಾಡಿಸಿಕೊಂಡು ಬರಬೇಕು ಅಂದುಕೊಂಡೇ ಸಾಗರದಿಂದ ಬೆಂಗಳೂರಿಗೆ ಬಂದಿದ್ದೆ.ಬಂದು ವಾರವೂ ಕಳೆದಿಲ್ಲ.ಪದ್ಮಕ್ಕನನ್ನು ಸ್ವತ: ಭೇಟಿ ಮಾಡಲು ಆಗಲೇ ಇಲ್ಲ.ಅಷ್ಟರಲ್ಲೇ ಈ ಸುದ್ದಿ.

ಶೂಟಿಂಗಿಗೆ ಅಂತ ಹೋಗಿದ್ದ ಪದ್ಮಕ್ಕ, ಅಲ್ಲಿ ಹಾಕಿದ್ದ ದಟ್ಟ ಹೊಗೆಯನ್ನು ಕಂಡು ಹೃದಯಸ್ತಂಭನವಾಗಿ ತೀರಿಕೊಂಡರಂತೆ.ಹೊರಗೆ ಮಳೆ,ಒಳಗೆ ಮತ್ತೆ ಧಗೆ.ಮನಸ್ಸು ಕಲ್ಲಿಗೆ ಬಡಿದು ಹಾಕಿದ ಬಟ್ಟೆಯಂತೆ ಮುದ್ದೆ,ಮುದ್ದೆ.

‍ಲೇಖಕರು avadhi

7 March, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading