ಈ ಪಿರ್ಯಾಮಿಡ್ ಕಲ್ಲುಗಳನ್ನು ಇಷ್ಟು ನಿಖರವಾಗಿ ಕಡೆಯಲು ಉಪಯೋಗಿಸಿರಬಹುದಾದ ಯಾವುದೇ ಸಾಧನಗಳು ಉತ್ಖನನದಲ್ಲಿ ಈವರೆಗೂ ಲಭ್ಯವಾಗಿಲ್ಲ. ಆ ಕಾಲದಲ್ಲಿ ತಾಮ್ರದ ಉಪಯೋಗವಿತ್ತಾದರೂ ಅದು ಮೃದು ಲೋಹ. ಅದರಿಂದ ಕಲ್ಲನ್ನು ಕೆತ್ತಲಾಗದು. ಇದರ ನಿಖರತೆ, ಸಮಾನತೆ, ಒಂದು ಇನ್ನೊಂದರ ನಡುವೆ ಕ್ಷೌರದ ಬ್ಲೇಡನ್ನು ಹಾಯಿಸಲಾರದಂಥ ಜೋಡಣೆಗಳು. ಇಂದಿನ ವಾಸ್ತುಶಿಲ್ಪ ಪರಿಣಿತರಿಗೂ, ಖಗೋಳ ಶಾಸ್ತ್ರಜ್ಞರಿಗೂ ಸವಾಲಾಗಿ ನಿಂತಿವೆ. ಪ್ರಾಚೀನ ಇಜಿಪ್ಶಿಯನ್ನರ ಅತೀಂದ್ರಿಯ ಶಕ್ತಿಗಳು, ಪ್ರಯೋಗ ಸಾಧನೆಗಳ ಸಂಕೇತವಾಗಿ ನಿಂತಿವೆ.
ನಮ್ಮ ಕೋಚ್ ಸ್ಪಿಂಕ್ಸ್ ಇರುವ ಕಡೆಗೆ ಸಾಗಿತ್ತು. ಗೀಝಾ ಪಿರ್ಯಾಮಿಡ್ ಗಳಲ್ಲಿಯೇ ಅತಿ ದೊಡ್ಡದಾದುದನ್ನು ಕಟ್ಟಿದವ ರಾಜ ಖುಫು. ಅವನ ಮಗ ಖೇಫರ್ ಪಿರ್ಯಾಮಿಡ್ ಸಮುಚ್ಛಯದ ರಕ್ಷಣಾ ದೇವತೆಯಾಗಿ ಸ್ಫಿಂಕ್ಸ್ ನನ್ನು ನಿರ್ಮಿಸಿದನೆಂದು ಒಂದು ದಂತಕಥೆ ಹೇಳುತ್ತದೆ. ಇನ್ನೊಂದು ದಂತಕಥೆಯ ಪ್ರಕಾರ ಖುಫು ಪಿರ್ಯಾಮಿಡ್ಡಿಗೆ ಅಡ್ಡವಾಗಿ ಬೃಹದಾಕಾರದ ಬಂಡೆ ಇತ್ತು. ಅದು ಪಿರ್ಯಾಮಿಡ್ ನ ಸೌಂದರ್ಯ ಹಾಳು ಮಾಡುತ್ತದೆಂದು ಅದನ್ನು ಸಿಂಹದ ದೇಹ, ಮನುಷ್ಯ ಮುಖದ ಪ್ರತಿಮೆಯಾಗಿಸಲಾಯಿತು. ಇದರ ಮುಖ ಲಕ್ಷಣಗಳು ಖೇಫರನ ಮೂರ್ತಿಶಿಲ್ಪದ ಲಕ್ಷಣಗಳನ್ನೇ ಹೋಲುತ್ತವೆಯಂತೆ. ಅಂತೂ 22 ಮೀಟರ್ (66 ಅಡಿಗಳು) ಎತ್ತರ 73 ಮೀ ಉದ್ದ (219 ಅಡಿಗಳು) ಇರುವ ಬೃಹತ್ ಪ್ರತಿಮೆ ಇದು. ಸ್ವಿಂಕ್ಸ್ ಎಂದರೆ-ಹೆಷ್ಫ್-ಅಂಕ್-ಅತುಮ್ (ಸೃಷ್ಟಿಕರ್ತ ದೇವ – ಅತುಮ್ ನ ಜೀವಂತ ಪ್ರತೀಕ). ಇದು ಇರುವಲ್ಲಿಗೆ ಹೋಗಬೇಕಾದರೆ ಒಂದು ಕೀ.ಮೀ ನಡೆಯಬೇಕು. ಏರುತ್ತಿರುವ ಬಿಸಿಲಿನ ತಾಪವಿದ್ದರೂ ಹುರುಪು, ಹುಮ್ಮಸ್ಸು ಅದಕ್ಕಿಂತ ಹೆಚ್ಚಿತ್ತು. ಅದರ ಅಕ್ಕಪಕ್ಕದಲ್ಲಿರುವ ಕಂಬಗಳಿಂದ ಮತ್ತು ಗೋಡೆಗಳಿಂದ ಕಟ್ಟಲಾದ ಸಮುಚ್ಛಯದೊಳಗೆ ಹಾಯ್ದು, ಸುತ್ತಿ ಸ್ಪಿಂಕ್ಸ್ ಮುಂದೆ ಹೋಗಿ ನಿಂತೆವು. ಸ್ಪಿಂಕ್ಸ್ ಕುಳಿತ ಭಂಗಿಯಲ್ಲಿದೆ. ಮುಖ ಹಾಳು ಹಂಪೆಯಂತೆ ಭಗ್ನಗೊಂಡಿದೆ. ಈಗ ಮೂಗು, ಮೇಲ್ದುಟಿ, ಕಣ್ಣುಗಳ ಸುತ್ತಲಿನ ಭಾಗವೆಲ್ಲ ಭಗ್ನಗೊಂಡು ಅಸಹ್ಯವಾಗಿ ಕಾಣುತ್ತಿತ್ತು. ಮೊದಲು ಇದರ ಗದ್ದದ ಮೇಲೆ ಉದ್ದದ ಗಡ್ಡ, ತಲೆಯ ಮೇಲೆ ಹಾವಿನ ಕೆತ್ತನೆಗಳಿದ್ದುವಂತೆ; ಇಜಿಪ್ತಿನಲ್ಲಿರುವ ಪ್ರತಿಯೊಂದು ಸ್ಪಿಂಕ್ಸ್ ಪ್ರತಿಮೆಯೂ ಗಂಡು. ಹೆಣ್ಣು ಸ್ಪಿಂಕ್ಸ್ ಎಂದರೆ ಅಪಶಕುನ ಎಂಬ ನಂಬಿಕೆ ಇದೆ.
ಈ ಸ್ಪಿಂಕ್ಸ್ ನ ಬೃಹತ್ ಪ್ರತಿಮೆ ಸಾವಿರಾರು ವರ್ಷಗಳ ಕಾಲ ಮರಳಿನ ರಾಶಿಯಡಿ ಹುದುಗಿ ಹೋಗಿತ್ತು. ತಲೆಯ ಮೇಲ್ಭಾಗ ಸ್ವಲ್ಪವೇ ಹೊರಗೆ ಕಾಣುತ್ತಿತ್ತಂತೆ. ಒಂದು ದಿನ ರಾಜಕುಮಾರ ತುತ್ಮೋಸಿಸ್, ಬೇಟೆಗೆಂದು ಬಂದವನು, ದಣಿದು ವಿಶ್ರಮಿಸಿಕೊಳ್ಳಲೆಂದು ಸ್ಪಿಂಕ್ಸ್ ಪ್ರತಿಮೆ ಹುದುಗಿದ್ದ ದಿಬ್ಬದ ನೆರಳಿನಲ್ಲಿ ಅಡ್ಡಾದನಂತೆ (ಮಲಗಿದನಂತೆ). ಆಗ ಬಿದ್ದ ಕನಸಿನಲ್ಲಿ ಭೂಮ್ಯಾಕಾಶ ಸಂಧಿಸುವಲ್ಲಿ ಓಸಿರೀಸ್ ಮತ್ತು ಈಸೀಸರ ಮಗ ಹೊರೆಸ್ ಕಾಣಿಸಿಕೊಂಡು, ಮುಚ್ಚಿ ಹೋದ ಸ್ಪಿಂಕ್ಸ್ ನನ್ನು ಮರಳಿನಿಂದ ಮುಕ್ತಗೊಳಿಸಿ, ತನ್ನಿಚ್ಛೆಯನ್ನು ಪೂರ್ಣಗೊಳಿಸಲು ಆದೇಶಿಸಿದನಂತೆ. ಅವನ ಆಜ್ಞೆಯಂತೆ ತುತ್ಮೋಸಿಸ್ ಎಚ್ಚೆತ್ತ ಮೇಲೆ ಕಾರ್ಯಗತನಾದ. ಸ್ಪಿಂಕ್ಸ್ ಮೇಲೆದ್ದು ನಿಂತಿತು. ಅವನದನ್ನು ದುರಸ್ತಿಗೊಳಿಸಿದ, ಬಣ್ಣ ಬಳಿಸಿ ಚೆಂದಗೊಳಿಸಿದ. ತನ್ನ ಆಜ್ಞೆಯನ್ನು ಪರಿಪಾಲಿಸಿದ್ದಕ್ಕೆ ಹೊರೆಸ್ ಇವನನ್ನು ಚಕ್ರವರ್ತಿಯಾಗಿ ಮಾಡಿದ. ಇವನೇ ಮುಂದೆ ಐದನೆಯ ತುತ್ಮೋಸಿಸ್ ಎಂದು ಪ್ರಖ್ಯಾತನಾದನಂತೆ.
ಸ್ಪಿಂಕ್ಸ್ ನ ಅತೀ ಸಮೀಪಕ್ಕೆ ಹೋದರೆ ಅದರ ಸುತ್ತಲೂ ತಗ್ಗಿನಲ್ಲಿ ಇಳಿಜಾರಾದ ದಾರಿ ಇದೆ. ಅದರಲ್ಲಿ ನಡೆದು ಹೋಗಿ, ಕಟ್ಟೆ ಹತ್ತಿ, ಇಳಿದು ಫೋಟೋ ತೆಗೆಯಿಸಿಕೊಂಡೆವು. ಅಲ್ಲಿಯೂ ಜನಸಾಗರವಿತ್ತು. ಸುತ್ತುವರೆದು ಆ ಆವರಣದಿಂದ ಹೊರಗೆ ಬಂದೆವು. ದೂರದಿಂದ ಸ್ಪಿಂಕ್ಸ್ ನ ಅಡಿಯಲ್ಲಿ ಒಂದು ಬಾಗಿಲು ಕಾಣಿಸಿತು. ಮುಂದೆ ಹೋಗಿ ನೋಡಿದರೆ ಅದು ಗುಹೆ. ಅದನ್ನು ಕಬ್ಬಿಣ ಸರಳುಗಳಿರುವ ಬಾಗಿಲನ್ನು ಕೂಡ್ರಿಸಿ ಭದ್ರಗೊಳಿಸಲಾಗಿತ್ತು. ಮುಂದೆ ಹೋಗಿ ನೋಡಲಾಗದಂತೆ ಅಲ್ಲಿ ಕಸ-ಕಡ್ಡಿ, ಕೊಳಕು, ಕತ್ತೆಯ ಲದ್ದಿ, ಕತ್ತೆಗಳೂ ಅಲ್ಲೆ ಮಲಗಿದ್ದು ದುರ್ನಾತವೆದ್ದಿತ್ತು. ಯಾರೋ ಪಾಶ್ಚಾತ್ಯನೊಬ್ಬ ಕತ್ತೆಗಳನ್ನು ಓಡಿಸಿ ಮುಂದೆ ಹೋಗಿ ನೋಡುತ್ತಿದ್ದ. ನಾನು ಸರೋಜ ಕೂಡ ಮುಂದೆ ಹೋಗಿ ನೋಡಿದರೆ ಅಲ್ಲಿ ಗುಹಾ ಮಾರ್ಗವಿತ್ತು. ಹೀಗೆ ಸ್ಪಿಂಕ್ಸ್ ಕೆಳಗೆ ಎಷ್ಟೋ ಗುಹೆಗಳಿವೆಯಂತೆ. ಒಳಹೋದರೆ ಉಸಿರು ಕಟ್ಟುತ್ತದೆ ಎಂದು ಹೇಳುತ್ತಾರೆ. (ಹೋಗಲು ಅವಕಾಶವೇ ಇಲ್ಲ) ಮರಳಿ ಸುತ್ತು ಹಾಕಿ ಬರಬೇಕಾದರೆ ಜೀವವೇ ನೀರಾಗಿ ಹೋಯಿತು. ಇಳಿಯುತ್ತಿದ್ದ ಬೆವರನ್ನು ಒರೆಯಿಸಿಕೊಳ್ಳಲು ಹಾಕಿದ ಗಾಗಲ್ ಸರಿಸಿದರೆ ಕಣ್ಣು ತೆಗೆಯಲಾಗಲಿಲ್ಲ. ಗಾಗಲ್ ಇಲ್ಲದೆ ಕಣ್ಣು ತೆರೆಯಲಾರೆ ಎನಿಸಿತು. ಇಷ್ಟೊತ್ತು ಗಾಗಲ್ ಹಾಕಿಕೊಂಡೇ ಇದ್ದೆ ಎಂಬುದು ಆಗ ಅನುಭವಕ್ಕೆ ಬಂದಿತು. ಅಷ್ಟೊಂದು ಬಿಸಿಲಿತ್ತು ಅಲ್ಲಿ. ದೂರದಲ್ಲಿ ನಿಂತು ಸ್ಪಿಂಕ್ಸ್ ನ ಮುಂಬದಿಯಿಂದ ನೋಡಿದರೆ ಹಿನ್ನೆಲೆಯಾಗಿ ಮೂರು ಪಿರ್ಯಾಮಿಡ್ ಗಳು ಕಾಣುತ್ತಿದ್ದವು. ಅಲ್ಲೇ ಇದ್ದ ತಂಪು ನೀರಿನ ಟ್ಯಾಂಕರ್ನಿಂದ ನೀರು ಕುಡಿದು ಉಸ್ಸಪ್ಪಾ! ಎಂದು ಕೋಚಲ್ಲಿ ಬಂದು ಕೂತೆವು. ಕೋಚ್ ಆರಂಭವಾಗುವವರೆಗೂ ಚಿಲ್ಲರೆ ವ್ಯಾಪಾರಿಗಳು ಬೆನ್ನು ಬಿಡದೆ ಹಿಂದೆ ಬಿದ್ದಿದ್ದರು.
ಬಿಸಿಲಿನ ತಾಪಕ್ಕೆ ಬಸವಳಿದು ಬೆಂಡಾಗಿ ಹೋದ ಜೀವಕ್ಕೆ ತಂಪಾಗಲಿ ಎಂದೋ ಏನೋ, ಗಿಝಾದಲ್ಲಿಯೇ ಇದ್ದ ಒಂದು `ಸುವಾಸನಾ ಎಣ್ಣೆ’ ಯ ಅಂಗಡಿಗೆ ಕರೆದೊಯ್ದ ಮಾರ್ಗದರ್ಶಿ ಮಹಮ್ಮದ್.
ಸುವಾಸನೆಯ ಅರಮನೆಯೊಳಗೆ ಸುಸ್ವಾಗತ
(ALAMIR PERFUMES PALACE )
ಕೋಚ್ ನಲ್ಲಿ ವಾತಾನುಕೂಲ ಇದ್ದುದರಿಂದ ಒಳಗಿದ್ದಾಗ ಆರಾಮ ಎನಿಸುತ್ತಿತ್ತು. ಹೊರಗೆ ಬಂದರೆ ಬಿಸಿಲ ಝಳ. ಇಳಿದು ಬೇಗ ಬೇಗನೆ ಗಾಜಿನ ಕದ ತಳ್ಳಿ ಒಳ ಹೆಜ್ಜೆ ಇಟ್ಟರೆ ಸುವಾಸನೆ ಸ್ವಾಗತ ಕೋರುತ್ತಿತ್ತು. ಗಾಜಿನ ಕಪಾಟಿನೊಳಗೆ ಹತ್ತು ಹಲವು ಆಕಾರದ, ಬಣ್ಣದ ಗಾಜಿನ ಅತ್ತರ ದಾನಿಗಳು, ಸೀಸೆಗಳು, ನೀರ ಮೇಲಿನ ಗುಳ್ಳೆಯಿಂದ ತಯಾರಿಸಿಟ್ಟಂತೆ ಹೊಳೆಯುತ್ತಿದ್ದವು. ನಾಲ್ಕು ಜನ ಕೆಂಪಗಿನ ಗಂಡಸರು ನಮ್ಮನ್ನು ಸ್ವಾಗತಿಸಿದರು. ಸುತ್ತಲೂ ಇರುವ ಬಾಕ್ ಗಳ ಮೇಲೆ ಕುಳಿತೆವು. ಎಲ್ಲರ ಕುಶಲೋಪರಿಯನ್ನು ಔಪಚಾರಿಕವಾಗಿ ಕೇಳಿ (ಹಿಂದಿಯಲ್ಲಿ) ಒಳ ಕೋಣೆಗೆ ಕರೆದೊಯ್ದರು. ಎಲ್ಲರನ್ನುಅಲಲ್ಲಿ ಕೂಡ್ರಿಸಿ ಸುವಾಸನಾ ಎಣ್ಣೆಗಳನ್ನು ನೋಡುವ ಮೊದಲು, ಅವುಗಳ ದಾನಿಗಳನ್ನು ನೋಡಿ ಎಂದು ಇಪ್ಪತ್ತು-ಇಪ್ಪತ್ತೈದು ತೆರೆದ ಹೂಜಿ, ಲೋಟ, ಗಡಿಗೆಗಳಾಕಾರದ ಮೇಲೆ ಹೂವಿನಾಕಾರದ ಕಂಠ ಮತ್ತು ಮುಚ್ಚಳಗಳಿರುವ ದಾನಿಗಳನ್ನು ತೋರಿಸಿದರು. ಬಿಳಿ, ಹಸಿರು, ಹಳದಿ ಮತ್ತು ಬೆಲ್ಲದ ಬಣ್ಣಗಳಿಂದ ಕೂಡಿದ ಬಾಟಲ್ ಗಳು. ತೆಳುವಾದ ಗಾಜಿನ ಪದರುಗಳಿಂದ ಮಾಡಿದವುಗಳು. ಮನಮೋಹಕ ಕಲಾಕೃತಿಗಳು. ಅವರವರ ರುಚಿ ಮತ್ತು ಶಕ್ತ್ಯಾನುಸಾರ ಆಯ್ಕೆ ಮಾಡಬಹುದಿತ್ತು. ಎಲ್ಲರೂ ಮಂತ್ರಮುಗ್ಧರಾಗಿ ನೋಡುತ್ತಿದ್ದರು.
ಆ ನಾಲ್ವರಲ್ಲಿ ಸ್ವಲ್ಪ ಯುವಕನಂತಿರುವವ ಮುಂದೆ ಬಂದು `ನನ್ನ ಹೆಸರು ಹಸನ್! ಹಾಗಾದರೆ ಈ ಬಾಟಲುಗಳು ಹೇಗೆ ತಯಾರಾಗುತ್ತವೆ ಎಂಬುದನ್ನು ನೋಡಿ’ ಎಂದು ರೂಮಿನ ಇನ್ನೊಂದು ಪಕ್ಕಕ್ಕೆ ಕರೆದೊಯ್ದು, ಅರ್ಧಗೋಲಾಕಾರದಲ್ಲಿ ಎಲ್ಲರನ್ನೂ ನಿಲ್ಲಿಸಿದ ಮಧ್ಯದಲ್ಲಿ ಒಬ್ಬ ಯುವಕ ಉರಿಯನ್ನು ಬಿಡುವ ಊದು ನಳಿಕೆ (ಅಕ್ಕ ಸಾಲಿಗರ ಅಂಗಡಿಯಲ್ಲಿರುವಂಥದ್ದು) ಯೊಂದಿಗೆ ಎತ್ತರದ ಕಟ್ಟೆಯ ಮೇಲೆ ಕುಳಿತಿದ್ದ. ಬೆರಳುದ್ದದ ಗಾಜಿನ ಕೊಳವೆಯನ್ನು ಎಡಗೈಯಲ್ಲಿ ಹಿಡಿದು ಉರಿಯಿಂದ ಕಾಯಿಸಿ, ತತ್ಕ್ಷಣವೇ ಒಂದು ಚಿಮಟದಿಂದ ಕಾಯ್ದ ಭಾಗದ ತುದಿ ಹಿಡಿದು ಎಳೆದ. ಹಾಗೂ ಈಚೆ ತುದಿ ಬಾಯಿಗೆ ಹಿಡಿದು ಬಲೂನ್ ಊದುವಂತೆ ಊದಿದ; ಕ್ಷಣಾರ್ಧದಲ್ಲಿ ಗಾಜಿನಗೋಲ ದಾನಿಯ ಕೆಳಭಾಗ ತಯಾರಾಯಿತು. ತಿರುಗಿಸಿ ಹಿಡಿದು ಆಚೆ ತುದಿ ಕಾಯಿಸಿ ಚಿಮಟದಿಂದ ಅಗಲ ಮಾಡಿ; ಕೆಳಗಿನ ಗೋಲ ದಾನಿಯನ್ನು ಎರಡು ಅಂಗೈ ನಡುವೆ ಹಿಡಿದು ಹಗುರವಾಗಿ ಗರ್ರನೆ ತಿರುಗಿಸಿದ. ದಾನಿಯ ಕಂಠ ಮೂರು ಅಲೆಗಳಂತೆ ಮೇಲೆ ಕೆಳಗೆ ಆಗಿ ಹೂಪಕಳೆಯಂತೆ ಕಾಣತೊಡಗಿತು. ಅದಕ್ಕೊಂದು ಸರಿಹೊಂದುವಂಥ ಗಾಜಿನ ಬಿರಡೆ ತಂದು ಹಾಕಿದ. ಅತ್ತರದಾನಿ ಸಿದ್ಧ. ಹೀಗೆಯೇ ಮತ್ತೊಂದು ತರದ ಬಾಟಲಿ ಮಾಡುವುದನ್ನು ತೋರಿಸಿದ. ಅದನ್ನೂ ಅಷ್ಟೇ ಶೀಘ್ರವಾಗಿ, ಸೂಕ್ಷ್ಮವಾಗಿ ಕುಶಲತೆಯಿಂದ ಮಾಡಿ ತೋರಿಸಿದ. ಎಲ್ಲರೂ ಮತ್ತೊಂದು ಮಾಡಲು ಹೇಳಿ ಖುಷಿ, ಕಾತರದಿಂದ ನೋಡುತ್ತಿರಬೇಕಾದರೆ ಕೊಳವೆ ಕಾಯಿಸಿ ಊದುವಾಗ ಸ್ವಲ್ಪ ಹೆಚ್ಚಿಗೇನೆ ಊದಿಬಿಟ್ಟ. ಅದು ಟಫ್… ಎನ್ನುವ ಶಬ್ಧದೊಂದಿಗೆ ಚೂರಾಗಿ ಬಿಟ್ಟಿತು.

ಎಲ್ಲರೂ ಹೆದರಿ ಸರ್ರನೆ ಹಿಂದೆ ಸರಿದರೆ, ಮಾಡುವವ ನಗುತ್ತಿದ್ದ. ನಮಗೆ ಚೇಷ್ಟೆ ಮಾಡಲು ಹಾಗೇ ಮಾಡಿದರೂ, ಏನೂ ಆಗುವುದಿಲ್ಲ ಎನ್ನುವುದನ್ನು ಅದರಿಂದ ತೋರಿಸುವ ಮತ್ತೊಂದು ಉದ್ದೇಶವೂ ಅಲ್ಲಿತ್ತು. ಕೆಳಗೆ ನೋಡಿದರೆ ಗಾಜಿನ ತುಂಡುಗಳಿರಲಿಲ್ಲ. ಅದು ಗಾಜಿನ ಹಾಳೆ! ತುಂಡಾದರೂ ಕಾಣುವುದಿಲ್ಲ. ಸೋಜಿಗ! ಒಬ್ಬರಿಗೊಬ್ಬರು ಗುಸು ಪಿಸು ಮಾತನಾಡಿಕೊಳ್ಳುವಷ್ಟರಲ್ಲಿ ಸುವಾಸನೆಗಳ ವಿಶೇಷತೆ ಮತ್ತು ತಯಾರಿಕೆಗಳ ಕುರಿತ ಕರಪತ್ರಗಳನ್ನು ತಂದು ಕೊಟ್ಟರು. ಹಾಗೇನೇ ಮತ್ತೊಂದು ಒಳರೂಮಿಗೆ ಕರೆದೊಯ್ದರು. ಪ್ರತಿಯೊಬ್ಬರನ್ನು ವಿಚಾರಿಸಿ ಅಲ್ಲಿ ನಾವಿಷ್ಟಪಟ್ಟ ಪಾನೀಯಗಳನ್ನು ನೀಡಿದರು. ಅಲ್ಲಿಯ ಸೋಫಾಸೆಟ್ ಗಳು ಕುರ್ಚಿಗಳು, ಅತ್ಯಂತ ಕುಶಲತೆಯಿಂದ ಕಟ್ಟಿಗೆಯಲ್ಲಿ ಮಾಡಿದ ಐಶಾರಾಮಿ ಆಸನಗಳು. ಇಪ್ಪತ್ಮೂರೂ ಜನರು ಆರಾಮಾಗಿ ಕುಳಿತುಕೊಳ್ಳುವಷ್ಟು ದೊಡ್ಡ ರೂಮದು. ಒಂದು ಪಕ್ಕದ ಮಧ್ಯ ಭಾಗದಲ್ಲಿ ಡೆಮೊಟೆಬಲ್. ಮೇಲೆ ಒಂದೊಂದೆ ಬಾಟಲಿ, ಸೀಸೆ, ಬಟ್ಟಲುಗಳನ್ನು ತಂದಿಟ್ಟು ಯಾವ ದ್ರವ್ಯ, ಯಾವ-ಯಾವ ಮೂಲ ವಸ್ತುಗಳಿಂದ ತಯಾರಿಸಿದೆ ಎನ್ನುವುದನ್ನು ಎಲ್ಲರ ಕೈಗಳಿಗೆ, ಬಟ್ಟೆಗಳಿಗೆ ಒಂದೊಂದು ಹನಿ ಹಚ್ಚುವುದರ ಮೂಲಕ ತೋರಿಸತೊಡಗಿದ ಆ ಯುವಕ.
ಪ್ರಾಚೀನ ಕಾಲದಿಂದಲೂ, ಇಜಿಪ್ತಿನ ಫೆರೋಗಳು ಮಮ್ಮೀಕರಣ ಮಾಡುವಾಗ ಮತ್ತು ದೇವತೆಗಳಿಗೆ ಕಾಣಿಕೆ ಕೊಡುವಾಗ, ಹೂವಿನಿಂದ ತಯಾರಿಸಿದ ಸುವಾಸನಾ ಎಣ್ಣೆಗಳನ್ನು, ದ್ರವ್ಯಗಳನ್ನು ಬಳಸುತ್ತಿದ್ದರು. ಕೆಲವರು ಔಷಧಿಯಾಗಿ ಸುವಾಸನಾ ವಿದ್ಯೆ ಅಥವಾ ಸುಗಂಧ ಶಾಸ್ತ್ರ(Aromatherapy) ದಲ್ಲಿ ಗಿಡಮೂಲಿಕೆಗಳನ್ನು ಉಪಯೋಗಿಸುತ್ತಿದ್ದರು. ಇಜಿಪ್ತಿನ ಇತಿಹಾಸದಲ್ಲಿ ಶಿಶು ಜೀಸಸ್ ಜನಿಸಿದಾಗ ಒಬ್ಬ ಮಹಾಮಾನವ ಬಂದು ಆತನಿಗೆ ಕೊಟ್ಟನೆನ್ನಲಾದ ಚಿನ್ನ, ಅಂಟು ಮತ್ತು ಚಂದನ (ಗೋಪರಸ) ರಸಗಳಲ್ಲಿ ದೇಹದ 7 ಅಂಗಾಂಗಗಳ ರೋಗಗಳಿಗೆ (ಸಪ್ತ ಚಕ್ರಗಳು) ಉಪಚರಿಸಲು ಬಳಸುವ ದ್ರವ್ಯಗಳಿರುವ ಉಲ್ಲೇಖ ಬೈಬಲ್ಲಿನಲ್ಲಿದೆಯಂತೆ. ಪ್ರಾಕೃತಿಕ ಎಣ್ಣೆಗಳಾದ ಕರ್ಪೂರದ ಎಣ್ಣೆಯನ್ನು ನೆಗಡಿಗೆ, ಶ್ರೀಗಂಧದ ಎಣ್ಣೆಯನ್ನು ಶೃಂಗಾರಕ್ಕೆ, ಮತ್ತು ಗಂಧ, ಚಂದನಗಳ ಮಿಶ್ರಣವನ್ನು ಮುಖಾಲಂಕಾರಕ್ಕೆ ಹಾಗೂ ಬೊಕ್ಕ ತಲೆಯ ಉಪಚಾರಕ್ಕೆ ಕಮಲವನ್ನು ಬಳಸುತ್ತಿದ್ದುದು ಪ್ರಾಚೀನ ಇಜಿಪ್ತಿನಲ್ಲಿ ರೂಢಿಯಲ್ಲಿತ್ತು. ಅಂಟಿನಲ್ಲಿ ಕೂಡಿದ ಮಲ್ಲಿಗೆ (ಜಸ್ಮಿನ್) ಕ್ರೀಡಾ ಪಟುಗಳ ರಕ್ತವಾಹಕವಾಗಿ ಸಹಾಯಮಾಡುತ್ತದೆ. ಇದರೊಂದಿಗೆ ಕಸ್ತೂರಿ ಎಣ್ಣೆ ಸೇರಿಸಿದರೆ ದಾಂಪತ್ಯದಲ್ಲಿ ಧನಾತ್ಮಕ ಫಲಿತಾಂಶ ನೀಡುವುದರೊಂದಿಗೆ ಫಲವತ್ತತೆಯನ್ನೂ ಹೆಚ್ಚಿಸುತ್ತದೆಯಂತೆ.
ಕೇಳುತ್ತಾ ಹೋದಂತೆ ಹೊಸ ಜಗತ್ತೇ ತೆರೆದುಕೊಂಡಂತೆ, ಹಲವು ವೈವಿಧ್ಯ, ವೈಚಿತ್ರ್ಯ, ವಿಶೇಷವಾದ ವಿಷಯಗಳು ಗಮನಕ್ಕೆ ಬಂದವು. ಹೂವಿನ ಪರಿಮಳಗಳಿರುವ ಹದಿನಾರು, ಮಿಶ್ರಣಗಳಿಂದ ತಯಾರಿಸಿದ ಇಪ್ಪತ್ತೆರಡು ಹಾಗೂ ಮಸಾಲೆಯುಕ್ತ ಪರಿಮಳಗಳಿರುವ ಒಂಬತ್ತು ಒಟ್ಟು ನಲವತ್ತೇಳು ಸುವಾಸನಾ ದ್ರವ್ಯಗಳಿರುವ ಒಂದು ಪಟ್ಟಿಯನ್ನು ಕೊಟ್ಟರು. ಒಂದಾದ ಮೇಲೆ ಮತ್ತೊಂದರಂತೆ ದ್ರವ್ಯಗಳನ್ನು ಎಷ್ಟು ಪ್ರಮಾಣದಲ್ಲಿ ಬೆರೆಸಲಾಗುತ್ತದೆ ಎಂಬುದರ ಡೇಮೊ ಮಾಡಿ ತೋರಿಸಿ, ಹಲವಾರು ದ್ರವ್ಯಗಳನ್ನು ಕೈಗೆ, ಬಟ್ಟೆಗಳಿಗೆ ಹಚ್ಚುವ ಮೂಲಕ, ವಾಸನೆಗಳ ಮೂಲ ರೂಪ ಹೇಗಿರುತ್ತದೆ ಎಂಬುದನ್ನು ವಾಸನೆಗಳ ಮೂಲಕ ಅನುಭವಿಸಿಯೇ ತಿಳಿಯುವಂತೆ ಹೇಳಿದರು. ಬಹಳಷ್ಟು ಜನ ಬೇರೆ-ಬೇರೆ ಸುವಾಸಿತಗಳನ್ನು ಖರೀದಿಸಿದರು. 25 ಮಿ. ಲೀ.ನ ಸೀಸೆಗೆ 35 ಇಜಿಪ್ತಿಯನ್ ಪೌಂಡ್! ಅಂಥ 3 ಸೀಸೆಗಳ 1 ಪ್ಯಾಕ್ ಖರೀದಿಸಿದರೆ ಒಂದು ಸುಂದರ ಅತ್ತರದಾನಿ ಉಚಿತವಾಗಿತ್ತು. ಅವಿವಾಹಿತ ಸರೋಜಾಳಿಗೆ “ಮದ್ವೆ ಆದ್ಮೇಲೆ ಉಪಯೋಗಕ್ಕೆ ಬರುತ್ತೆ ತಗೊಳ್ಳೆ” ಎಂದು ಒಂದಿಷ್ಟು ಕಾಡಿಸಿ-ಪೀಡಿಸಿದೆವು. ಆ ಅಂಗಡಿ ಎಷ್ಟು ದೊಡ್ಡದಾಗಿತ್ತು ಎಂದರೆ ಹೀಗೆ ಮೂರ್ಮೂರು ಕೋಣೆಗಳಿರುವ ಮೂರು ಮಹಡಿಗಳು. ವಾಶ್ ರೂಂವರೆಗೂ ಎಲ್ಲ ವ್ಯವಸ್ಥೆಗಳು ಅಲ್ಲಿದ್ದವು. ಅಂತೂ ಇಜಿಪ್ಶಿಯನ್ನರು ಹೂಗಳನ್ನು ಬೆಳೆದು, ಸುವಾಸನಾಯುಕ್ತ ದ್ರವ್ಯ ಮಾಡಿ, ಎಲ್ಲ ರೀತಿಯಲ್ಲಿ ಉಪಯೋಗಿಸುವುದರಲ್ಲಿ ಅನಾದಿ ಕಾಲದಿಂದಲೂ ಪರಿಣಿತರೂ ಎಂಬುದನ್ನು ಒಪ್ಪಲೇಬೇಕು.
ಇಜಿಪ್ಶಿಯನ್ ಸಂಗ್ರಹಾಲಯ
ಸಮಯ ಎರಡು ಗಂಟೆ ಆಗುತ್ತಿತ್ತು. ಬೇಗ ಬೇಗನೆ ಊಟ ಮಾಡಿ ಸರಿಯಾಗಿ ಎರಡು ಗಂಟೆ ಹದಿನೈದು ನಿಮಿಷಕ್ಕೆ, ವಿಶ್ವದ ಗಮನ ಸೆಳೆದಿರುವ, ಇಜಿಪ್ತಿನ ಆದಾಯದ ಮೂಲವಾಗಿರುವ `ಇಜಿಪ್ಶಿಯನ್ ಮ್ಯೂಸಿಯಂ’ನ ಎದುರಿಗಿರುವ ಪ್ರವೇಶದ್ವಾರದಲ್ಲಿದ್ದೆವು. ಅಲ್ಲಿಂದ ಕಟ್ಟೆ ಏರಿ ಮೇಲೆ ಹೋದರೆ ಅಲ್ಲಿ ಮ್ಯೂಸಿಯಂನ ಎಡಗಡೆ “ಬ್ಯಾಂಕ್ ಆಫ್ ಕೈರೋ” (BANQUE DU CAIRE) ಇತ್ತು. ಬೇಕಾದವರು ಇಲ್ಲಿ ಇಜಿಪ್ಶಿಯನ್ ಪೌಂಡ್ಸ್ ಖರೀದಿಸಬಹುದು ಎಂದರು. ಒಂದು ಇಜಿಪ್ಶಿಯನ್ ಪೌಂಡ್ ಎಂದರೆ ಭಾರತೀಯ ಹತ್ತು ರೂಪಾಯಿ ಚಿಲ್ಲರೆ ಪೈಸೆ. ಇನ್ನೂ 4-5 ದಿನ ಇಲ್ಲೇ ಇರಬೇಕಲ್ಲ! ಚಿಕ್ಕ ಪುಟ್ಟ ವ್ಯಾಪಾರಕ್ಕೆ ಇ.ಕ (ಇಜಿಪ್ಟ್ ಪೌಂಡ್) ಅವಶ್ಯಕವಾಗಿದ್ದವು. ಬೇಕಾದವರೆಲ್ಲಾ ವಿನಿಮಯ ಮಾಡಿಕೊಂಡರು. ಬಿಸಿಲಿನ ತಾಪ ಅಸಾಧ್ಯ-ಅಸಹ್ಯವಾಗಿತ್ತು. ತಿರುಗಿ ಬರುವಷ್ಟರಲ್ಲಿಯೇ ಅಲ್ಲಿರುವ ಮಾರ್ಗದರ್ಶಿ ಹೇಳುವುದು ನಮಗೆ ಕೇಳಿಸಲಿ ಎಂಬುದಕ್ಕೆ ಹಿಯರಿಂಗ್ ಬಡ್ಸ್ ಗಳೊಂದಿಗೆ ಮಾರ್ಗದರ್ಶಿ ಮತ್ತು ಲಾರಿಸರ್ ನಿಂತಿದ್ದರು. ಎಲ್ಲರಿಗೂ ಒಂದೊಂದು ನೀಡಿ, ಒಂದೊಂದು ಪೌಂಡ್ ಪಡೆದುಕೊಂಡರು. ಅವು ಬೇಕಾದವರು ಅಲ್ಲಿಯೆ ಹಣಕೊಟ್ಟು ಪಡೆಯುವಂಥವಾಗಿದ್ದವು. ಅಲ್ಲಿ ನಮ್ಮಂಥ ಸಾವಿರಾರು ಜನರು; ಅವರಿಗೆ, ಒಬ್ಬೊಬ್ಬರು ಮಾರ್ಗದರ್ಶಿಗಳು; ಬೃಹತ್ ಕಟ್ಟಡ ಬೇರೆ. ಈ ಎಲ್ಲ ಗದ್ದಲಗಳ ನಡುವೆ ಹೇಳಿದ್ದು ಕೇಳಿಸದೆ ಇರಬಹುದೆಂದು ಈ ಹಿಯರಿಂಗ್ ಬಡ್ಸ್, ಅದರ ಮೇಲೆ ಮಾರ್ಗದರ್ಶಿಯ ಕೋಡ್ ನಂಬರ್ ಇತ್ತು.
ಸಂಗ್ರಹಾಲಯ ನೆಲಮಹಡಿಗೂಡಿ 4 ಅಂತಸ್ತು ಹೊಂದಿದ್ದು, ಒಂದೊಂದು ಅಂತಸ್ತಿಗೂ ಉಪದಾರಿ, ಒಳದಾರಿ, ತಿರುವುಗಳು ಲೆಕ್ಕವಿಲ್ಲದಷ್ಟು. ಇಲ್ಲಿರುವ ಪ್ರತಿಯೊಂದು ವಸ್ತುವು ಪಕ್ಕಾ ಮೂಲ ವಸ್ತುವೇ. ಪ್ರತಿಕೃತಿಗಳು ಒಂದೂ ಇರಲಿಲ್ಲ. ಒಳಗೆ ಪ್ರವೇಶಿಸುತ್ತಿದ್ದಂತೆ ಎದೆ ಮೇಲೆ ಕೈಕಟ್ಟಿ ನಿಂತ ದೇವತೆಗಳ ಬೃಹತ್ ಶಿಲಾವಿಗ್ರಹಗಳು. ಕಲ್ಲಿನ ಶವಪೆಟ್ಟಿಗೆಗಳು; ಶವವನ್ನು ಸಂಸ್ಕರಿಸುವ (ಆಪರೇಷನ್) ಕಲ್ಲಿನ ಟೇಬಲ್, 3000 ವರ್ಷದ್ದು. ಸುಮಾರು 8 ಅಡಿ ಉದ್ದ, 2 ಅಡಿ ಅಗಲ, 4 ಅಡಿ ಎತ್ತರ; ಅದರ ಮುಂದೆ ಅಂಥದ್ದೇ ಸ್ವಲ್ಪ ಚಿಕ್ಕದು. ಅಂಥದ್ದೇ ಮತ್ತೊಂದು, ಸಾಲಾಗಿ ಇಟ್ಟಿದ್ದಾರೆ. ಇಂದು ಆಸ್ಪತ್ರೆಗಳಲ್ಲಿರುವ ಆಪರೇಷನ್ ಟೇಬಲ್ಲಿಗೂ ಅದಕ್ಕೂ ಶೇಕಡಾ ಒಂದರಷ್ಟು ಅಂತರವಿಲ್ಲ (ಒಂಚೂರು ಅಂತರವಿಲ್ಲ). ಮಧ್ಯದಲ್ಲಿ ದೇಹ ಹಿಡಿಸುವಂತೆ ಸ್ವಲ್ಪ ತಗ್ಗು, ತೊಡೆ ಕೆಳಗೆ ದ್ರವ(?) ಪದಾರ್ಥ ಹರಿದು ಹೋಗಲು, ಕೈ ತೊಳೆಯಲು ಇರುವಂಥ ಬುಟ್ಟಿ (ಸಿಂಕ್), ಕೆಳಗೆ ನೆಲದವರೆಗೂ ಒಂದು ತೂತು ನೀರು ಇಳಿದು ಹೋಗಲು, ಇವತ್ತಿನ ಆಪರೇಷನ್ ಟೇಬಲ್ಗಳಿಗೆ ಇವೆ ಮಾದರಿ ಆಗಿರಬಹುದೇನೋ?; ಓಸಿರೀಸ್ ಮತ್ತು ಈಸೀಸ್ ಪರಮ ದೇವತೆಗಳ ಪ್ರತಿಮೆಗಳು. ಪಪೈರಸ್ ಹಾಳೆಯ ಮುಖವಾಡಗಳು. ಇವು 2500 ವರ್ಷಗಳಷ್ಟು ಹಳೆಯವು. ಕೆಳಗಿನ ನೆಲಮಹಡಿಯಲ್ಲಿ ಬರೀ ಕಲ್ಲಿನಲ್ಲಿ ಮಾಡಿದ ಮತ್ತೂ ಬೃಹದಾಕಾರದ ವಸ್ತುಗಳಿದ್ದವು.
ಮೊದಲ ಮಹಡಿಗೆ ಏರಿ ಹೋದರೆ ಅಲ್ಲಿ ಟುತ್-ಅಂಕ್-ಅಮುನ್ನ ಸಮಾಧಿ ಮತ್ತು ಅದರಲ್ಲಿನ ಅತ್ಯಮೂಲ್ಯ ವಸ್ತುಗಳು. ಈ ಸಂಗ್ರಹಾಲಯದಲ್ಲಿ ನೋಡಲೇಬೇಕಾದ ಅಪೂರ್ವ ವಸ್ತುಗಳಲ್ಲಿ ಇವು ಕೆಲವು. ಟುತ್-ಅಂಕ್ ಅಮುನ್ನ ಪ್ರತಿಮೆ ಬಂಗಾರದ ಪ್ರತಿಮೆಯಾಗಿದೆ. ಮೊದಲು ಈತ ಯಾರು ಎಂಬುದನ್ನು ತಿಳಿಯಬೇಕು. `ಅಮುನ್’ ಎಂದರೆ “ದೇವರ ಜೀವಂತ ರೂಪ”. ಅಮೂನ್ ತ್ರಿಮೂರ್ತಿಗಳ ಅಧಿದೇವತೆ. ಆ ದೇವರ ಮನುಷ್ಯ ರೂಪವೇ ಈ ಟುತ್-ಅಂಕ್ ಅಮುನ್. ಇವನ ಕಾಲ ಕ್ರಿ.ಪೂ 1361-1352, ಈತ ಪ್ರಾಚೀನ ಹಾಗೂ ಆಧುನಿಕ ಇಜಿಪ್ತಿನ ಸೇತು ಪ್ರತಿನಿಧಿ. ಈತನೆಂದರೆ ಇಜಿಪ್ತ್; ಇಜಿಪ್ತ್ ಎಂದರೆ ಈತ ಎನ್ನುವಷ್ಟು ಈತನ ಜನಪ್ರಿಯತೆ ಇತ್ತು.

ಇವನ ಮೂಲ ಹುಡುಕುತ್ತಾ ಹೊರಟವರಿಗೆ ಸಿಕ್ಕದ್ದು ಅಪಾರ ಸಿರಿ ಸಂಪತ್ತುಗಳ ಅಗಾಧ ಸ್ವರ್ಣ ಲೋಕ. ಆದರೆ ಸಮಾಧಿಯ ಒಳಗಿನಕ್ಕಿಂತ ಹೊರಗೆ ಸಂಪಾದಿಸಿದ, ಸಂಗ್ರಹಿಸಿದ ವಿಷಯಗಳ ಪ್ರಕಾರ ಈತ ಹುಟ್ಟಿದ ಕಾಲದಲ್ಲಿ ಇಜಿಪ್ತ್ ಅತ್ಯಂತ ಶ್ರೀಮಂತ ಮತ್ತು ಬಲಿಷ್ಠ ರಾಷ್ಟ್ರ. ತಂದೆ ಐದನೆಯ ಅಮೆನ್ ಹೋಟೆಫ್ s(Amenhotep) ಕಾಲ ಸುಮಾರು ಕ್ರಿ.ಪೂ 1353-1335. ಇವನು ಪ್ರಗತಿಪರ ಮನೋಭಾವದವನಾದರೂ ಅಸ್ವಸ್ಥ ಮನಸ್ಥಿತಿಯವ. ಸಿಂಹಾಸನ ಏರುತ್ತಿರುವಂತೆಯೇ ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನ, ದೇವರು-ದೇವತೆಗಳನ್ನು ನಿಷೇಧಿಸಿ `ಏಕದೇವ ಆರಾಧನಾ ಪದ್ಧತಿ’ (Monotheism)ಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದನು. ಆ ದೇವರೇ “ಸೂರ್ಯ”, “ಅಟೆನ್” (ಅಮುನ್ ಅಥವಾ ಅತುಮ್)
ಇವನಿಗೆ ಆಕಾಶದಲ್ಲಿ ಬೆಳಗುವ ರೂಪವಿತ್ತು. ಗೋಲಾಕಾರದ ಸೂರ್ಯನಿಂದ ಅಸಂಖ್ಯ ಕಿರಣಗಳು ಹೊರ ಸೂಸುತ್ತಿದ್ದವು. ಆ ಕಿರಣಗಳ ಕೊನೆಯಲ್ಲಿ ಎಂಟು ಪುಟ್ಟ ಹಸ್ತಗಳಿದ್ದವು. ಮಧ್ಯದಲ್ಲಿ `ಅಂಕ್’ನ ಸಂಕೇತ. ಇದು ಆರಾಧನಾ ಸಂಕೇತ ಮಾತ್ರವಲ್ಲ, ರಾಜಲಾಂಛನವೆಂದೂ ಪರಿಗಣಿತವಾಗಿತ್ತು. ಶ್ರೀ ಸಾಮಾನ್ಯ, ರಾಜ ಅಥವಾ ರಾಣಿಯರನ್ನು ಮಧ್ಯವರ್ತಿಯಾಗಿರಿಸಿಕೊಂಡೇ ಈ ದೇವರನ್ನು ಪೂಜಿಸಬೇಕಿತ್ತು. ಈ ಹೊಸ ದೇವರಿಗಾಗಿ “ಅಮಾರಾನಾ” ಎಂಬ ಹೊಸ ವೈಭವೋಪೇತ ನಗರವನ್ನು ಸ್ಥಾಪಿಸಿ, ಅದರಲ್ಲಿ ಸುಂದರ ತೋಟಗಳು, ಪುಷ್ಕರಣಿಗಳು, ದೇವಸ್ಥಾನಗಳು, ಅರಮನೆಗಳನ್ನು ನಿರ್ಮಿಸಿ ರಾಜಧಾನಿಯಾಗಿ ಘೋಷಿಸಿದನಂತೆ ಅಮೆನ್ಹೊಟೆಪ್. ಅರ್ಚಕವರ್ಗದ ಪ್ರಾಬಲ್ಯತೆಯನ್ನು ಹತ್ತಿಕ್ಕುವುದು ಇಲ್ಲಿಯ ಮತ್ತೊಂದು ಉದ್ದೇಶವಾಗಿತ್ತು. ದೇವರ ಆರಾಧನೆಗೆಂದು ಹುಟ್ಟಿದ ವರ್ಗ ಬಲಿಷ್ಠವಾಗುವುದು ಪ್ರಪಂಚದ ಚರಿತ್ರೆಯಲ್ಲಿ ಮೇಲಿಂದ ಮೇಲೆ ಕಂಡುಬರುತ್ತದೆ. ಎಲ್ಲ ಮತಗಳಲ್ಲಿಯೂ ಸಂಪ್ರದಾಯ, ಆಹಾರ, ಪದ್ಧತಿಗಳು ಮುಖ್ಯವಾದಾಗ ಅರ್ಚಕವರ್ಗ ಪ್ರಬಲವಾಗುತ್ತದೆ. ಇದಕ್ಕೆ ವಿರೋಧ ಬಂದು ಹೊಸ ಶಾಖೆಗಳು ಕಾಣಿಸಿಕೊಳ್ಳುತ್ತವೆ. ಒಮ್ಮೊಮ್ಮೆ ಈ ವಿರೋಧ ಯಶಸ್ವಿಯಾಗುತ್ತದೆ. ಒಮ್ಮೊಮ್ಮೆ ಸರ್ವನಾಶವಾಗುತ್ತದೆ. ಅಮೆನ್ ಹೊಟೆಪ್ ಈ ಅರ್ಚಕ ವರ್ಗದ, ದುರಾಚಾರ ಪ್ರಾಬಲ್ಯವನ್ನು ಹತ್ತಿಕ್ಕಲು ಉಳಿದೆಲ್ಲ ದೇವತೆಗಳನ್ನು ಧಿಕ್ಕರಿಸಿ `ಸೂರ್ಯ’ನೊಬ್ಬನನ್ನೇ ದೇವರೆಂದು, ಅವನನ್ನು ಪೂಜಿಸಲು ರಾಜರಾಣಿಯರು ಮಧ್ಯವರ್ತಿಗಳು ಎಂಬ ನಿಯಮ ಜಾರಿಗೆ ತಂದ.
ಈತನ ರಾಣಿ ಜಗದ್ವಿಖ್ಯಾತ ಸುರಸುಂದರಿ ನೆಫರ್ಟೀಟೀ. ಇವರಿಗೆ ಆರು ಜನ ಹೆಣ್ಣು ಮಕ್ಕಳಾದರೂ ಪುತ್ರ ಸಂತಾನವಾಗಲಿಲ್ಲ. ತನ್ನ ಉತ್ತರಾಧಿಕಾರಿಗಾಗಿ ದೈವ `ಅಟೆನ್’ನನ್ನು ಇನ್ನಿಲ್ಲದಂತೆ ಆರಾಧಿಸಿದನಂತೆ. ಈತನಿಗೆ ಉಪಪತ್ನಿಯರೇನೂ ಕಡಿಮೆ ಇರಲಿಲ್ಲ (ಪತ್ನಿ ಎಷ್ಟು ಸುಂದರಿ… ಸುಶೀಲೆ ಸುಶಿಕ್ಷಿತೆಯಾದರೇನು? `ರಾಜಪತಿ’ ಯನ್ನು ಹಂಚಿಕೊಳ್ಳಲೇಬೇಕು. ಅಂದು ಅದು ರಾಜ ಪುರುಷರ ಜನ್ಮ ಸಿದ್ಧ ಹಕ್ಕಾಗಿತ್ತು) ಇವನ ಜೀವಿತ ಕಾಲದಲ್ಲಿ ಇವನಿಗೆ ಒಟ್ಟು ಎರಡು ನೂರಾ ಹದಿನೇಳು ಮಕ್ಕಳಾದವಂತೆ. ನೂರಾ ಇಪ್ಪತ್ತು ಹೆಣ್ಣು; ತೊಂಬತ್ತೇಳು ಗಂಡು ಮಕ್ಕಳು. ಇವರಲ್ಲಿ ಮೊದಲನೆಯ ಗಂಡು ಮಗನೇ ಟುತ್-ಅಂಕ್-ಅಮುನ್. ಪ್ರೀತಿಯ ಉಪ ಪತ್ನಿ ಕೀಯಾಳ ಪುತ್ರ ಇವನಾಗಿದ್ದ.
ಕ್ರಿ.ಪೂ 1335ರಲ್ಲಿ ರಾಜ ಅಮೆನ್ ಹೊಟೆಪ್ ಗಿ ಮರಣ ಹೊಂದಿದಾಗ ರಾಜಕುಮಾರ ಟುತ್-ಅಂಕ್-ಅಮೂನ್ನಿಗೆ ಒಂಬತ್ತು ವರ್ಷ. ಇವನ ಪಟ್ಟಾಭಿಷೇಕದೊಂದಿಗೆ, ಪದ್ಧತಿಯಂತೆ ಸಹೋದರಿ `ಅಂಖೆಸೆನ್ ಮುನ್’ ಳೊಂದಿಗೆ ವಿವಾಹ ಜರುಗಿತು.
ತೀರ ಕಿರಿಯ ವಯಸ್ಸಿನವನಾದರೂ ಕೂಡಾ ಇಜಿಪ್ತನ್ನು ಸಮರ್ಥವಾಗಿ ಆಳಿದ ರಾಜರಲ್ಲಿ ಇವನೂ ಒಬ್ಬ. ಪ್ರಜೆಗಳ ಮನಸ್ಥಿತಿಗೆ ಸ್ಪಂದಿಸುತ್ತ, ಪಟ್ಟ ಏರಿದ ಕೂಡಲೇ ಮೊದಲು ರಾಜಧಾನಿ `ಅಮಾರಾನಾ’ವನ್ನು ಹಿಂದಿದ್ದ `ಥೀಬ್ಸ್’ಗೆ ಮರಳಿ ವರ್ಗಾಯಿಸಿ, ತನ್ನ ತಂದೆ ಬಾಗಿಲು ಮುಚ್ಚಿ, ಬೀಗ ಜಡಿದಿದ್ದ ದೇವಸ್ಥಾನಗಳನ್ನು ಪ್ರಜೆಗಳಿಗೆ, ಮುಕ್ತಗೊಳಿಸಿದನಂತೆ. ಇವನ ಕಾಲದಲ್ಲಿ ಇಜಿಪ್ತ ಪ್ರಗತಿಯ ಉತ್ತುಂಗದಲ್ಲಿ ಮೆರೆಯಿತು. ಆದರೆ ಈತ ಕೇವಲ ಹತ್ತು ವರ್ಷ ಮಾತ್ರ ರಾಜ್ಯವಾಳಿದ. ಈತನ ಸಾವು ಹಠಾತ್ ಸಂಭವಿಸಿತು. ಅದರ ಕುರಿತು ಬಹಳಷ್ಟು ಊಹಾಪೋಹಗಳಿವೆ. ತಲೆ ಬುರುಡೆ ಮೇಲೆ ಕಂಡುಬರುವ ಮೂಳೆ ಮುರಿತದ ಗುರುತಿನಿಂದ ಕೊಲೆಯಾಗಿರಬಹುದು ಎಂದು ನಂಬಲಾಗಿತ್ತು. ಆದರೆ ಇತ್ತೀಚೆಗೆ ನಡೆಸಿದ ಡಿ.ಎನ್.ಎ ಸಂಶೋಧನೆಗಳಿಂದ ಮಲೇರಿಯಾದಿಂದ ಸಾವು ಸಂಭವಿಸಿದೆ ಎಂಬುದು ದೃಢಪಟ್ಟಿದೆಯಂತೆ.
ಈತನಿಗೆ ಪುತ್ರ ಸಂತಾನವಿಲ್ಲದ್ದರಿಂದ ಇವನ ಉತ್ತರಾಧಿಕಾರಿಯಾಗಿ ಇವನ ಸಹೋದರ ಸಂಬಂಧಿ `ಐ’ ಅಥವಾ `ಅ’ ಸಿಂಹಾಸನಾರೂಢನಾಗಿ, ನಾವೀಗ ನೋಡುತ್ತಿರುವ ಟುತ್-ಅಂಕ- ಅಮುನ್ನ ಅತುಲ್ಯ ವೈಭವದ ಗೋರಿಯನ್ನು ಕಟ್ಟಿಸಿದನು. ಇಲ್ಲೊಂದು ವಿಶೇಷ ಎಂದರೆ ಟುತ್-ಅಂಕ್-ಅಮುನ್ನ ಸಾವು ಹಠಾತ್ ಸಂಭವಿಸಿದ್ದರಿಂದ ಅವನ ಸಮಾಧಿ ಸ್ಥಳ ಇನ್ನು ತಯಾರಾಗಿರಲಿಲ್ಲ. ತಾತ್ಕಾಲಿಕವಾಗಿ ಅವನನ್ನು, ಬೆಟ್ಟದಲ್ಲಿ ಕೊರೆದ ಸಣ್ಣದೊಂದು ಗೋರಿಯಲ್ಲಿ ಮುಖ್ಯ ಸಮಾಧಿಗಳಿಂದ ದೂರವಾಗಿ ಹೂಳಲಾಯಿತು. (ಇವನಿಗಾಗಿ ತಯಾರಾಗುತ್ತಿದ್ದ ಸಮಾಧಿ ಕಾಲಾಂತರದಲ್ಲಿ ಐದನೆಯ ರ್ಯಾಮಸೆಸ್ ನ ಪಾಲಾಯಿತು) ಟುತ್-ಅಂಕ್-ಅಮುನ್-ಅಪಾರ ಸಂಪತ್ತಿನೊಂದಿಗೆ ಚಿಕ್ಕ ಸಮಾಧಿಯಲ್ಲೇ ಉಳಿದು ಹೋದ. ಕಾಲಕ್ರಮೇಣ ಸಮಾಧಿಯ ಮುಂದೆ ಕಸಕಡ್ಡಿಗಳ ರಾಶಿ ಬಿದ್ದು, ಬಿರುಗಾಳಿಯ ಮರಳಿನಿಂದ ಪ್ರವೇಶದ್ವಾರ ಮುಚ್ಚಿ ಹೋಗಿ, ಹೇಳ ಹೆಸರಿಲ್ಲದಂತಾಯಿತು. ಇಲ್ಲಿ ಗಮನ ಸೆಳೆಯುವ ವಿಷಯವೆಂದರೆ, ಇದೇ ಕಾರಣದಿಂದಾಗಿ ಇದು ಗೋರಿ ಕಳ್ಳರ (ಗ್ರೇವ್ ಡಿಗ್ಗರ್) ಕಣ್ಣಿಗೆ ಬಿದ್ದಿರಲಿಲ್ಲ. ಟುತ್-ಅಂಕ್-ಅಮುನ್ ಸುದೀರ್ಘ ನಿದ್ದೆಯಲ್ಲಿ ಇದ್ದು ಬಿಟ್ಟ. ಕ್ರಿ.ಪೂ 1922ರಲ್ಲಿ ಲಾರ್ಡ್ ಕಾರ್ನವಾಲಿಸ್ ಮತ್ತು ಲಾರ್ಡ್ ಕಾರ್ಟರ್ ಎಂಬುವರ ಕಾಲಿಗೆ ಅನಿರೀಕ್ಷಿತವಾಗಿ ಇದು ತೊಡರುವವರೆಗೆ ಯಾರ ಕಣ್ಣಿಗೂ ಇದು ಬಿದ್ದಿರಲಿಲ್ಲ.
(ಮುಂದುವರಿಯುವುದು…)
ನೈಲ್ ನದಿಯ ಮಡಿಲಲ್ಲಿ : ಸುವಾಸನೆಯ ಅರಮನೆಯೊಳಗೆ ಕಳೆದುಹೋಗುತ್ತಾ…


0 Comments
Trackbacks/Pingbacks