ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೈಲ್ ನದಿಯ ಮಡಿಲಲ್ಲಿ – ’ಸಮಾನರಾರಿಹರು ರೊಟ್ಟಿಯ ಸಮಾನರಾರಿಹರು?!’

(ಇಲ್ಲಿಯವರೆಗೆ…)

ಮಣ್ಣು ಮೆತ್ತದ ದಾರಿಗಳು
ಬೆಳಿಗ್ಗೆ ಸರಿಯಾಗಿ 6.00 ಗಂಟೆಗೆ ವೆಕ್-ಅಪ್-ಕಾಲ್ ಬಂತು. ಹೊರನೋಡಿದರೆ ಇನ್ನೂ ಕತ್ತಲೆ. `ನೀ ಸ್ನಾನ ಮಾಡು ನಾ ಆಮೇಲೆ ಮಾಡ್ತಿನಿ’ ಎಂದು ಹೇಳಿ ಸರೋಜ ಮುಸುಕು ಹಾಕಿದಳು. ಒಮ್ಮೆ ಎಚ್ಚರಾದ ಮೇಲೆ ನಿದ್ದೆ ಎನ್ನುವುದು ಸುಳ್ಳು. ಎದ್ದು ಸಿದ್ಧರಾಗಿ 7.10ಕ್ಕೆ ಮಧ್ಯದ ಮಹಡಿಯ ಬಲಭಾಗಕ್ಕೆ ಬಂದೆವು. ಅಲ್ಲಿ ತಿಂಡಿ ಸಿದ್ಧವಾಗಿತ್ತು. ಮೆಲ್ಲಗೆ ಒಳಗೆ ಕಾಲಿಟ್ಟೆ.
ಎಡಬದಿಗೆ ಫುಡ್ ಟೇಬಲ್. ಅದು ಮುಗಿದಾದ ಮೇಲೆ ಬಲಬದಿಗೆ ವಿವಿಧ ಬ್ರೆಡ್, ಬನ್ಸ್ ಗಳ ಕೌಂಟರ್. ಅದರ ಮುಂದೆ ಎಡಬದಿಗೆ ಚಾಚಿಕೊಂಡಂತೆ ಕುಳಿತುಕೊಳ್ಳಲು ಆಸನಗಳು. ಗೋಲಾಕಾರದ ಟೇಬಲ್, ಸುತ್ತ 4 ಕುರ್ಚಿಗಳು. ಟೇಬಲ್ ಗಳ ಮೇಲೆ ಪುಟ್ಟ-ಪುಟ್ಟ ಹ್ಯಾಂಕಿ ಹಾಸಿ ಅದರ ಮೇಲೆ ಚಮಚ, ಫೋರ್ಕ್, ಜಾಮ್ ಹಚ್ಚುವುದು ಮತ್ತು ತ್ರಿಕೋನಾಕಾರದಲ್ಲಿ ಎತ್ತರಕ್ಕೆ ಮಡಚಿಟ್ಟ ಟಿಶ್ಯೂ ಪೇಪರ್. ಫುಡ್ ಕೌಂಟರ್ಗೆ ಬಂದು ಬಿಳಿಯ ಪ್ಲೇಟ್, ಬಟ್ಟಲು ಮತ್ತು ಚಮಚ ತೆಗೆದುಕೊಂಡು ಉದ್ದಕ್ಕೆ ದೃಷ್ಟಿ ಹಾಯಿಸಿದೆ. ಐದು ತರದ ಬನ್ ಗಳು, ಶಂಖಾಕೃತಿಯ ಸುರುಳಿ ಸುತ್ತಿದ, ಚಪ್ಪಟೆಯಾಕಾರದ ಮತ್ತು ನಮ್ಮಲ್ಲಿ ಸಿಗುವಂಥವುಗಳು; ಕಲ್ಲಂಗಡಿ, ಖರಭುಜ, ಸೇಬುಹಣ್ಣಿನ ಹೋಳುಗಳು; ಚೆರ್ರಿ, ದ್ರಾಕ್ಷಿ (ಕಪ್ಪು, ಹಸಿರು) ಕಪ್ಪು ಓಲಿವ್ ಹಣ್ಣುಗಳು, ಎರಡು ರೀತಿಯ ಬೆಣ್ಣೆ, ಚೀಸ್, ಪಾಸ್ತಾ, ಎರಡು ರೀತಿಯ ಜೇನುತುಪ್ಪ, ಜಾಮ್ ಪೌಚ್ ಗಳು; ಮಾಂಸಾಹಾರದ ತಿಂಡಿ ಪದಾರ್ಥಗಳು; ಕಾಫಿ, ಟೀ, ಹಾಲಿನ (ಬಿಸಿ ಮತ್ತು ತಂಪು) ದೊಡ್ಡ ಪ್ಲಾಸ್ಕ್ ಗಳು; ಅರೇಂಜ್ ಜ್ಯೂಸ್. ಒಂದಾದ ಮೇಲೊಂದರಂತೆ ಓರಣವಾಗಿ, ಅವುಗಳಿಗೆ ತಕ್ಕುದಾದ ಗಾಜಿನ ಪಾತ್ರೆ, ಬಟ್ಟಲು, ಪ್ಲೇಟ್ ಗಳಲ್ಲಿ ಹಾಕಿ, ಮುಚ್ಚಿ ಎಲ್ಲವುಗಳ ಪಕ್ಕದಲ್ಲಿ ಚಿಮಟ, ಪೋರ್ಕ್, ಚಮಚಗಳನ್ನಿಟ್ಟಿದ್ದರು. ಅವು ಯಾವ ಯಾವ ಪದಾರ್ಥಗಳು ಎಂಬುದನ್ನು ಬರೆದು (ಇಂಗ್ಲೀಷ್ ಮತ್ತು ಟರ್ಕಿಷ್ ನಲ್ಲಿ) ಲೇಬಲ್ ಅಂಟಿಸಿದ ಪುಟ್ಟ ಪಾರದರ್ಶಕ ಸ್ಟ್ಯಾಂಡ್ ಗಳನ್ನು ಪ್ರತಿಯೊಂದರ ಹಿಂದೆ ಇಟ್ಟಿದ್ದರು. ಆ ಹಾಲ್ ನ ಮಧ್ಯ ಕಂಬದ ಸುತ್ತಲೂ, ಒಣ ಹಣ್ಣುಗಳು ದ್ರಾಕ್ಷಿ (ಕೆಂಪು, ಕಪ್ಪದ್ದು), ಆಪ್ರಿಕಾಟ್ಸ್, ಅಂಜುರ; ಆರ್ರಾರೋಟ್, ಮೂರು ರೀತಿಯ ಕಾರ್ನಪ್ಲೇಕ್ಸ್ [ಹಸಿ ಹಾಲಲ್ಲಿ ಬೆರೆಸಿ ತಿನ್ನುವ ಪದಾರ್ಥ). ಇವಿಷ್ಟೂ ಗೊತ್ತಾದವು. ಗೊತ್ತಾಗದಿರುವ ಪದಾರ್ಥಗಳೂ ಕೆಲವಿದ್ದವು. ಇಷ್ಟೆಲ್ಲಾ ಇದ್ದರೂ ಕುದಿಸಿ ಬೇಯಿಸಿದ ಒಂದು ಪದಾರ್ಥವೂ ಇರಲಿಲ್ಲ. ಆಹಾರದ ಮುಖ್ಯ ಭಾಗ ಬನ್. ಎಸಿಡಿಟಿ ಪ್ರಕೃತಿಯ ನನಗೆ ಬ್ಯಾಗಿನೊಳಗಿನ ಗುಳಿಗೆಗಳು ಕೂಗು ಹಾಕಿದಂತಾಯಿತು. ಮನೆಯೊಳಗಿನ ರೊಟ್ಟಿ ಪಲ್ಯಗಳು ಕಣ್ಮುಂದೆ ಹಾಯ್ದು ಹೋದವು. ಆದರೂ ಒಮ್ಮೆ ನೋಡೆ ಬಿಡೋಣ (ತಿನ್ನದೇ ಗತಿಯೂ ಇರಲಿಲ್ಲ) ಎಂದು ಬನ್, ಬೆಣ್ಣೆ, ಜೇನುತುಪ್ಪ, ಜಾಮ್ ನೊಂದಿಗೆ ತಿಂದು ಒಣ ಹಣ್ಣು, ಹಸಿ ಹಣ್ಣೂ ತಿಂದೆ. ಹಾಲಿನೊಂದಿಗೆ ಅದ್ದಿ ಮತ್ತೆರಡು ಶಂಖಾಕಾರದ ಬನ್ ತಿಂದೆ. ಹಾಲು ಕುಡಿದೆ. ಊಹುಂ! `ಸಮಾನರಾರಿಹರು ರೊಟ್ಟಿಯ ಸಮಾನರಾರಿಹರು ಸಮಸ್ತ ಜಗದಲಿ ಜೋಳದ ಬೆಳೆಗೆ ಸಮಾನರಾರಿಹರು?’… ಸಣ್ಣಗೆ ಹಾಡತೊಡಗಿದೆ. `ಖರೆ ನೋಡ್ ಏನ್ ತಿಂದರ ಏನ್ ಐತಿ, ಹೊಟ್ಟೆ ತುಂಬದಿದ್ರ, ನಮ್ಮ ರೊಟ್ಟಿ ಚಟ್ನಿ ತಿಂದರ ಅದರ ಮಜಾನೆ ಬ್ಯಾರೆ. ಇದೇನಿದ, ಅಲ್ಲದ ಟೈಮ್ ದಾಗ ಇಲ್ಲದ ತಿಂದರಂತ….’ ಅಂದರು ಬೈಲಹೊಂಗಲದಿಂದ ಬಂದಿದ್ದ ಮಂಗಲಾ ಮೆಟಗುಡ್ಡ.
ಎಲ್ಲರೂ 8.30ಕ್ಕೆ ಅದೇ ಕೋಚ್ ನಲ್ಲಿ ನೇರವಾಗಿ ಸ್ಥಳ ವೀಕ್ಷಣೆಗೆ ಹೊರಟೆವು. ಎಲ್ಲೆಲ್ಲಿ ಹೋಗಿ, ಏನೇನು ನೋಡುವುದು ಎಂಬ ಬಗ್ಗೆ ಮಾರ್ಗದರ್ಶಿ ಕೊರೈ ಹೇಳುತ್ತಿದ್ದರು. ಬೇಕಾದಷ್ಟು ಸೀಟುಗಳೆಲ್ಲಾ ಖಾಲಿ ಇದ್ದವು. ಎದ್ದು ಬಂದು ಹಿಂದಿನ ಕಿಟಕಿಗೆ ಕುಳಿತು ಹೊರ ನೋಡಿದರೆ ಚಂದ್ರ `ಹಾಯ್’ ಎನ್ನುತ್ತಿದ್ದ. ಸ್ಪಷ್ಟವಾಗಿ ಕಾಣುತ್ತಿರುವ ಚಂದ್ರ ಮತ್ತಷ್ಟು ಮೈ ತುಂಬಿಕೊಂಡಿದ್ದ. `ಏಯ್ ನೋಡ್ಲೆ ಸರೋಜಾ’ ಎಲ್ಲಿ ಹೋದ್ರು ಇಂವ ನಮ್ಮ ಜೊತೆನ ಬರಾಕಹತ್ತಾನ’ ಎಂದೆ ತಕ್ಷಣ ಸರೋಜಾ `ಯಾರು?’ ಎಂದಳು. `ಹೊರಗ ಮ್ಯಾಲ ನೋಡು’ ಎಂದು ಆಕಾಶದತ್ತ ತೋರಿದೆ. `ನಿನ್ನ ನಿನ್ನ’ ಎಂದು ನಗಾಡಿದಳು.
ಅಯಾಸೋಫಿಯಾ ಸಂಗ್ರಹಾಲಯ(AYASOFYA)
ಇದು ಆಯಾಸೋಪಿಯಾ ಸಂಗ್ರಹಾಲಯ ಎಂದು ಕರೆಯಲ್ಪಡುವ ಇಗರ್ಜಿ. 532-537ರ ಮಧ್ಯ 5 ವರ್ಷದಲ್ಲಿ ಕಟ್ಟಿದ, ಪೌರಾತ್ಯ ರೋಮ್ ಚಕ್ರವರ್ತಿ ಪ್ರಥಮ ಉಸ್ಲೆನಿಯನ್ಸ್ ಕಾಲದ್ದಾಗಿದೆ. ಇದರ ವಾಸ್ತುಶಿಲ್ಪಿಗಳು ಟ್ರೇಲ್ಸ್ ನ (Tralles) ಅಂಥೆಮಿಯಸ್ ಹಾಗೂ ಮಿಲೆಟಸ್ (Miletus) ನ ಇಸಿಡೊರಸ್. ಸಭೆ ಹಾಗೂ ನ್ಯಾಯಾಲಯಗಳಿಗಾಗಿ ಉಪಯೋಗಿಸುವ ಸಾರ್ವಜನಿಕ ಗೃಹದ ಯೋಜನೆಯಲ್ಲಿ ಇದನ್ನು ಕಟ್ಟಲಾಗಿದೆ. ಮೇಲೆ ಮೊಗಸಾಲೆ (Galleries) ನಿರ್ಮಿಸಿ, ಭಿತ್ತಿಯ ಮೇಲ್ಭಾಗದಲ್ಲಿ ಆಚೆ-ಈಚೆ-ಮಧ್ಯ-ಮೂರು ಗುಂಬಜಗಳಿವೆ. ಇದರಲ್ಲಿ ಮೇರಿ, ಮಗು ಯೇಸು ಮತ್ತು ಯೇಸುವಿನ ಆಳೆತ್ತರದ ಚಿತ್ರಗಳಿವೆ. ಈ ಚರ್ಚ್ನ ಒಳ ಅಳತೆ 100 ಮೀ 70 ಮೀ. ಗುಮ್ಮಟದ ಅಂದಾಜು ವ್ಯಾಸ 31.5 ಮೀ ಮತ್ತು ಎತ್ತರ ನೆಲದಿಂದ 55 ಮೀ ಗುಮ್ಮಟಕ್ಕೆ ನಗಾರಿಯೊಳಗೆ 40 ಕಿಟಕಿಗಳಿವೆ. ನೆಲದ ಮೇಲೆ 40 ಕಂಬಗಳು, ಗ್ಯಾಲರಿ ಮೇಲೆ 67 ಒಟ್ಟು 107 ಕಂಬಗಳನ್ನು ಬಳಸಿ ಕಟ್ಟಲಾಗಿದೆ. ಒಳಗೋಡೆಗಳು ಹಲವಾರು ಬಣ್ಣದ ಅಮೃತ ಶಿಲೆಯ ಛಪ್ಪಡಿಗಳಿಂದ ರಚಿತವಾಗಿದೆ. ಒಂದು ಅಮೃತಶಿಲೆಯನ್ನು ಮೇಲ್ಪದರಷ್ಟನ್ನೇ ಕೆತ್ತಿ ಎರಡು ಭಾಗವಾಗಿಸಿ ಹಾಗೆಯೇ ಗೋಡೆಗೆ ಅಂಟಿಸಿದಂತಿದೆ. ಮೇಲ್ಭಾಗದ ಗೋಡೆಗಳು, ಗುಮ್ಮಟ, ಕಮಾನುಗಳು ಬಂಗಾರ ಲೇಪಿತ ಮೊಜಾಯಿಕ್ ಗಳಿಂದ ಹೊದಿಸಲ್ಪಟ್ಟಿವೆ. ಕಾಲಕಾಲಕ್ಕೆ ಆಳಿದ ರಾಜರ ಶಿಲಾಮೂರ್ತಿಗಳು, ಶಿಲಾಕೆತ್ತನೆಗಳು ಇಲ್ಲಿವೆ. 1453ರಲ್ಲಿ ಸುಲ್ತಾನ ಮೊಹಮ್ಮದನ ವಿಜಯದ ನಂತರ ಚರ್ಚನ್ನು ಮಸೀದಿಯಾಗಿ ಪರಿವರ್ತಿಸಲಾಯಿತು. ಇದರ ರಚನೆಯನ್ನು ನವೆಂಬರ್ 24, 1934ರಲ್ಲಿ ಸಂಗ್ರಹಾಲಯವಾಗಿ ಪರಿವರ್ತಿಸಿ, 1935 ರಿಂದ ಸಾರ್ವಜನಿಕರ ದರ್ಶನಕ್ಕೆ ತೆರೆಯಲಾಗಿದೆ. ಸರಿಯಾಗಿ ಹನ್ನೊಂದು ಗಂಟೆಗೆ ಆಯಾ ಸೋಫಿಯಾ ಮ್ಯೂಸಿಯಂನಲ್ಲಿರುವ ಸರಕಾರಿ ವ್ಯಾಪಾರ ಮಳಿಗೆಗೆ ಹೋಗಿ ಒಂದು ಪುಸ್ತಕ ಮತ್ತು ಕೆಲವು ಗೃಹಾಲಂಕಾರ ವಸ್ತುಗಳನ್ನು ಖರೀದಿಸಿ ಹೊರಬಂದೆವು.
ತೊಪಕಾಪಿ ಅರಮನೆ(TOPKAPI SARAYI)

ಟರ್ಕಿಷ್ ನಲ್ಲಿ ಅರಮನೆಗೆ SARAYI ಎನ್ನುತ್ತಾರೆ. ಈಗ ಇದು ಮ್ಯೂಸಿಯಂ. ಮುಖ್ಯನಗರದಿಂದ 5. ಕಿ.ಮೀ ದೂರ ಇರುವ ಇಲ್ಲಿಗೆ 10 ನಿಮಿಷದಲ್ಲಿ ಬಂದೆವು. ಬಸ್ಸಿನಿಂದಿಳಿದು ಓಣಿ-ಓಣಿಸುತ್ತಿ ಬೆಟ್ಟಹತ್ತಿ ಬಂದೆವು. ಈ ಅರಮನೆಯನ್ನು ಮೊಹಮ್ಮದನ ಆಳ್ವಿಕೆ (1472-1478)ಯಲ್ಲಿ ಕಟ್ಟಲಾಗಿದೆ. ಎತ್ತರದ ಮೇಲಿರುವುದರಿಂದ ಮರ್ಮೋರಾ ಸಮುದ್ರ, ಇಸ್ತಾಂಬುಲ್ ನ ಓಣಿಗಳು ಅಲ್ಲಿಂದ ಕಲಾತ್ಮಕವಾಗಿ ಕಾಣುತ್ತವೆ. 5 ಕಿ.ಮೀ ಉದ್ದಳತೆಯ ಕೋಟೆ ಗೋಡೆಯೊಳಗೆ ನಾಲ್ಕು ದಿಕ್ಕುಗಳಿಗೆ, ತೆರೆದ ಬೃಹತ್ ಅಂಗಳಗಳಲ್ಲಿ ಸುಂದರ ತೋಟ ನಿರ್ಮಿಸಿದ್ದಾರೆ. ಅಲ್ಲಿಯ ಹೂಗಳು ಅವುಗಳ ಹಳದಿ ಬಣ್ಣ, ಗುಚ್ಛಗುಚ್ಛವಾಗಿ ಬೆಳೆದ ರೀತಿ, ಎಷ್ಟೊಂದು ವೈವಿಧ್ಯ ವರ್ಣಮಯ! ಕಣ್ಣಿಗೆ ತಂಪನ್ನು ಮನಸಿಗೆ ಸೊಂಪನ್ನಿಯುವಂತಿತ್ತು. ಭಾರತದಲ್ಲಿ ಇಂಥ ಹೂಗಳು ಕಾಣಸಿಗುತ್ತವೆಯಾದರೂ ಬೆಳೆಯುವುದಿಲ್ಲ. ಸುತ್ತುವರೆದ ಕೋಟೆ ಗೋಡೆಯನ್ನು `ಸುರ್-ಯು-ಸುಲ್ತಾನಿ’ ಎಂದು ಕರೆಯುತ್ತಾರೆ.
ಆಗಾಗ ಬಂದ ಸುಲ್ತಾನರ ಸ್ವಾರ್ಥ ಹಾಗೂ ಸ್ವೇಚ್ಛಾಚಾರಕ್ಕೆ ಒಳಗಾಗಿದ್ದರೂ ಈ ಅರಮನೆ ತನ್ನತನ ಕಳೆದುಕೊಂಡಿಲ್ಲ. ನಾಲ್ಕು ಹೊರಾಂಗಣಗಳು, ಒಳಗೆ ವಿಶಿಷ್ಟ ವಾಸ್ತುಶಿಲ್ಪ ರಚನೆಗಳಿದ್ದು, ಒಂದರೊಳಗೊಂದು ತಿರುವುಗಳನ್ನು ಹೊಂದಿದೆ. ಈ ಒಂದರೊಳಗೊಂದು, ಒಂದರ ಪಕ್ಕದಲ್ಲಿ ಇನ್ನೊಂದು ಕೋಣೆಗಳಲ್ಲಿ ಇರುವ ಪ್ರಾಚೀನ ಯುಗದಿಂದ ಆಧುನಿಕ ಯುಗದವರೆಗೆ ಆಳಿ ಹೋದ ರಾಜಮನೆತನಗಳ ಪರಿಚಯ, ರಾಜ ಪರಿವಾರದ ವೈಭವೋಪೇತ ಉಡುಗೆ-ತೊಡಿಗೆಗಳು, ಶಸ್ತ್ರಾಸ್ತ್ರಗಳು, ಯುದ್ಧದ ಉಡುಗೆಗಳು, ಕಬ್ಬಿಣದ ಶಿರಾಸ್ತ್ರ, ಖಡ್ಗಗಳು, ಢಾಲುಗಳು, ಅವರ ಸರ್ವಾಲಂಕಾರದ ಆಭರಣಗಳು, ಬಳಸಿದ `ನವರತ್ನ’ ಖಚಿತ, ಬಂಗಾರದ, ಬೆಳ್ಳಿಯ ನಿತ್ಯ ಉಪಯೋಗಿ ವಸ್ತುಗಳು, ಆಸನಗಳು, ಚಳಿಗಾಲದ ವೇಷಭೂಷಣ, ಅಂತಃಪುರ… ಅಬ್ಬಾ! ಕಣ್ಣು ಕೋರೈಸುವಂತಿದ್ದವು. ನೋಡಿ ಅರಗಿಸಿಕೊಳ್ಳುವುದು ಅಷ್ಟು ಸರಳವಾಗಿರಲಿಲ್ಲ. ನೋಡಿ ನೋಡಿ ಕಣ್ಣು ಮನಸ್ಸುಗಳು ಸೋತು ಹೋದವು. ಅಷ್ಟೊಂದು ಭಾರೀ ಪ್ರಮಾಣದಲ್ಲಿ, ಕಲ್ಪನಾತೀತ, ಊಹಾತೀತವಾದ, ಹಿಂದೆಂದೂ ಕೇಳಿ ಕಂಡರಿಯದ ವಸ್ತು ವೈವಿಧ್ಯ, ವಸ್ತು ವೈಭವ; ಗೌರಿ ಕಣ್ಣಿನಾಕಾರದ (ಶಂಖಾ ಕೃತಿಯ) ಒಂದು ಬಿಳಿಹರಳು, ಚಿಕ್ಕ ಬಟ್ಟಲಿನಷ್ಟು ದೊಡ್ಡದಿತ್ತು. ಮುತ್ತು-ಮಾಣಿಕ್ಯ, ವಜ್ರ, ವೈಡೂರ್ಯ, ರತ್ನ, ಹವಳ, ನೀಲ, ಪಚ್ಚೆಗಳು ಅವುಗಳ ಗಾತ್ರ ಮತ್ತು ಚಿನ್ನದಲ್ಲಿ ಹುದುಗಿಸಿ ಮಾಡಿದ ಚಿತ್ತಾರದ ಆಭರಣಗಳು ಕಲಾಕಾರನ ಮತ್ತು ಸಾಮ್ರಾಜ್ಯದ ಕಲಾ ಸಂಪತ್ತಿಗೆ ಹಾಗೂ ರಾಜೈಶ್ವರ್ಯಕ್ಕೆ ಸಾಕ್ಷಿಯಾಗಿದ್ದವು. ಕೆಲವು ಆಭರಣಗಳಲ್ಲಿಯ ಕಲಾತ್ಮಕತೆ ಕುಸುರಿ ಕೆಲಸ, ಮಾಡಿದ ರೀತಿ, ಆ ಚಿತ್ತಾರ, ಅದರ ಚೆಲವುಗಳಲ್ಲಿ ಭಾರತೀಯ ಕೌಶಲ್ಯದ ಕ್ಷಮತೆ ಇತ್ತು, ಮೆರಗಿತ್ತು, ಸೊಬಗಿತ್ತು ಮತ್ತು ಮಣ್ಣ ಸುವಾಸನೆಯೂ ಇತ್ತು. ಆದರೆ ಮೂಸಿದ ಸುವಾಸನೆಯನ್ನು ಹರಡುವ ಸಾಮರ್ಥ್ಯ ವಿದೇಶಿ ಮಣ್ಣ ಮೇಲೆ ನಿಂತ ನಮಗೆಲ್ಲಿತ್ತು? (ಏಕೆಂದರೆ ಹಿಂದೆ ಕ್ಯೂ ಹನುಮಂತನ ಬಾಲದಂತಿತ್ತು)
ಸುಮ್ಮನೆ ನೋಡುತ್ತಾ ಸಾಧ್ಯವಾದರೆ ಅದರ ಬಗೆಗೆ ಬರೆದ ಮಾಹಿತಿ ಓದುತ್ತಾ ಸಾಗಿರಬೇಕಾದರೆ ಒಂದು ಕಡೆಗೆ ಕಣ್ಣುಗಳು ತಟಸ್ಥವಾದವು. ಶರೀರ ನಿಶ್ಚಲವಾಯಿತು. ಕಣ್ಣು ಹಿಗ್ಗಿಸಿ ನೋಡ ತೊಡಗಿದಂತೆ ಭವ್ಯ ಭಾರತದ ಪರಂಪರೆ, ಅಷ್ಟೈಶ್ವರ್ಯ ಸಂಪತ್ತು, ಸಮೃದ್ಧಿ, ಕರಕುಶಲತೆ ಕಲಾಕ್ಷಮತೆ ಮತ್ತು ಕಾರ್ಯವೈಖರಿಗಳು ಒಮ್ಮೆಲೆ ಕಣ್ಮುಂದೆ ಹಾದು ಹೋದವು. ಜೊತೆಗಿದ್ದ ಮಂಗಲಾ ಮೆಟಗುಡ್ಡ `ಅಬ್ಬಾ! ಮಯೂರ ಸಿಂಹಾಸನ’ ಎಂದರು. ಬಂಗಾರದ ತಗಡಿನಲ್ಲಿ ಮುತ್ತು, ರತ್ನ, ವಜ್ರ, ವೈಡೂರ್ಯ, ಪಚ್ಚೆ, ಮಾಣಿಕ್ಯಗಳನ್ನು ಅಚ್ಚೊತ್ತಿ ಮಾಡಿದ ಮಯೂರ ಸಿಂಹಾಸನ. 1739ರಲ್ಲಿ ಪರ್ಷಿಯಾ ದೊರೆ ನಾದಿರ್ ಷಾ ದೆಹಲಿಯನ್ನು ಮುತ್ತಿ, ಲೂಟಿ ಮಾಡಿದಾಗ ಕೊಳ್ಳೆ ಹೊಡೆದ ಅಗಣಿತ ಸಂಪತ್ತಿನಲ್ಲಿದ್ದ ಅಮೂಲ್ಯ ವಸ್ತುಗಳಲ್ಲಿ ಈ ಸಿಂಹಾಸನವೂ ಒಂದಾಗಿತ್ತು. ಹಾಗಂತ ಬರೆದು ಹಚ್ಚಿದ ಫಲಕ ಅಲ್ಲಿತ್ತು. ಇಡೀ ಮ್ಯೂಸಿಯಂನಲ್ಲಿ `ಭಾರತದಿಂದ ತಂದದ್ದು’ ಎಂದು ಹಣೆಪಟ್ಟಿ ಇರುವ, ಅಖಂಡ ಭಾರತದ ಏಕೈಕ ಅಮೋಘ ಸಂಕೇತ. ಈ ಮಯೂರ ಸಿಂಹಾಸನದ ಕಥೆಯನ್ನಿಲ್ಲಿ ಹೇಳದಿದ್ದರೆ ನಾನು ಭಾರತೀಯಳ್ಹೇಗಾದೆನು? ಮೊಗಲ್ ರ ಪ್ರಸಿದ್ಧ ದೊರೆಗಳಲ್ಲಿ ಷಾಜಹಾನ್ನೂ ಒಬ್ಬ. 1628ರಲ್ಲಿ ಪಟ್ಟಕ್ಕೆ ಬಂದು ಅನೇಕ ಸಂಸ್ಥಾನಗಳನ್ನು ಗೆದ್ದು, ಪ್ರಾಂತಗಳನ್ನು ವಶಪಡಿಸಿಕೊಂಡು ಖುರ್ರಂ, ಷಾಜಹಾನ್ (ಚಕ್ರವರ್ತಿ ಅಥವಾ ಜಗದೊಡೆಯ)ನಾದ. ಅದು ವೈಭವದ ಕಾಲ. ರಾಜ ಭಂಡಾರದಲ್ಲಿ ಅಪೂರ್ವ ಮುತ್ತುರತ್ನ, ವಜ್ರ, ವೈಡೂರ್ಯ, ಚಿನ್ನ, ಬೆಳ್ಳಿ ಸಂಗ್ರಹವಾಗಿ ತುಂಬಿ ತುಳುಕುತ್ತಿದ್ದ ಕಾಲ. ಸಂಪತ್ತನ್ನು ಒಳಗಿಟ್ಟು ಮಾಡುವುದೇನು? ಮನೋಹರವಾದ ಸಿಂಹಾಸನ ಒಂದನ್ನು ಮಾಡಿಸಬೇಕೆಂದು ನಿರ್ಧರಿಸಿ ಸುಮಾರು 1648ರಲ್ಲಿ ಅದ್ಭುತ ಸಿಂಹಾಸನದ ರಚನೆಗೆ ಆದೇಶವಿತ್ತ. ಇದಕ್ಕೆ 50,000 ಮಿನ್ನಾಳ ತೂಕದ ವಜ್ರಗಳನ್ನು (ಆಗ ಇದರ ಬೆಲೆ 30 ಲಕ್ಷ ರೂಪಾಯಿ) ಆರಿಸಿ, ಲಕ್ಷ ತೊಲ ಶುದ್ಧ ಚಿನ್ನ (ಆಗ ಇದರ ಬೆಲೆ 14 ಲಕ್ಷ ರೂಪಾಯಿ) ಕೊಟ್ಟು, ಪ್ರತಿದಿನ ಬಂದು ಸಿಂಹಾಸನದ ಕೆಲಸ ಪರಿಶೀಲಿಸಿ ಸಲಹೆ ನೀಡುತ್ತಿದ್ದನಂತೆ ಷಾಜಹಾನ್.
ಆರು ಅಡಿ ಉದ್ದ ಹಾಗೂ ನಾಲ್ಕು ಅಡಿ ಅಗಲ ಎಂಟು ಅಡಿ ಎತ್ತರವಿರುವ ಬಂಗಾರದ ಸಿಂಹಾಸನದ ಮೆಟ್ಟಿಲು ಬೆಳ್ಳಿಯದು. ಕೆಂಪು ಮಖಮಲ್ ನ ಬಟ್ಟೆ ಸುತ್ತಿದ ಹಿಡಿಕೆಯುಳ್ಳ, ಎಂಟು ಅಡಿ ಎತ್ತರದ ರಾಜಛತ್ರಿಯ ಸುತ್ತಲೂ ಮುತ್ತು ರತ್ನಗಳು ಜೋಲಾಡುತ್ತಿದ್ದವು. ಛತ್ರಿಯನ್ನು ಆಧರಿಸಿ ಸುತ್ತಲೂ 12 ಕಂಬಗಳು, ಕಂಬಗಳ ನಡುವೆ ಕೆಂಪು ಮಖಮಲ್ ಬಟ್ಟೆ, ಇದರಲ್ಲಿ ಕುಸುರಿ ಕೆಲಸ. ಕಮಾನು, ಛಾವಣಿ, ಕಂಬ ಎಲ್ಲಕ್ಕೂ ಚಿನ್ನದ ತಗಡಿನ ಹೊದಿಕೆ ಇದರ ಮೇಲೆ ಮುತ್ತು ರತ್ನಗಳನ್ನು ಹುದುಗಿಸಿದ ಕುಸುರಿ ಕೆಲಸ. ಹನ್ನೆರಡು ಕಂಬಗಳಿಗೂ ಪ್ರತಿಯೊಂದರ ಮೇಲೂ ಒಂದಕ್ಕೊಂದು ಬೆನ್ನು ತಾಗಿಸಿ ಕುಳಿತ ಎರಡೆರಡು ನವಿಲುಗಳು. ನವಿಲಿನ ಗರಿಯಲ್ಲಿರುವ ಕಣ್ಣುಗಳಿಗೆ ನೀಲ ಮತ್ತಿತರ ರತ್ನಗಳ ಜೋಡಣೆ, ನವಿಲಿನ ಮೈತುಂಬ ರತ್ನ ಹುದುಗಿಸಿದ ಬಂಗಾರದ ತಗಡು, ಎದೆಯಲ್ಲಿ ಕೆಂಪುರತ್ನ, ಪ್ರತಿ ನವಿಲಿನ ಕೊಕ್ಕಿನಿಂದ ಇಳಿ ಬಿದ್ದಿರುವ ಒಂದು 50 ಕ್ಯಾರೆಟ್ ತೂಕದ ಮುತ್ತು, ನವಿಲಿನ ಎರಡೂ ಪಕ್ಕಗಳಲ್ಲಿ ಅಷ್ಟೇ ಎತ್ತರವಾದ ರತ್ನ ಖಚಿತ ಚಿನ್ನದ ಹೂಗುಚ್ಛಗಳು; ಛತ್ರಿಯ ಕೆಳಗೆ, ಸಿಂಹಾಸನದ ಮೇಲೆ ಹಾಸಿಗೆ ಮತ್ತು ಒರಗು ದಿಂಬು, ಆಸನದ ಸುತ್ತಲೂ ಮತ್ತು ಕಾಲುಗಳಿಗೆ ಬಂಗಾರದ ತಗಡಿನ ಮೇಲೆ ಮುತ್ತು ಮತ್ತು ಮಾಣಿಕ್ಯಗಳಿಂದ ಮಾಡಿದ ಹೂವಿನಾಕಾರದ ಚಿತ್ತಾರಗಳು. ಕಣ್ಣುಗಳು ತಪ್ತವಾದವು? `ಈ ರೀತಿಯ ಮಯೂರ ಸಿಂಹಾಸನ 1665ರಲ್ಲಿ ಪೂರ್ಣಗೊಂಡಿತು. ಷಾಜಹಾನ್ ಆ ವರ್ಷ ಮಾರ್ಚ್ ತಿಂಗಳಲ್ಲಿ ವೈಭವದಿಂದ ಮಯೂರ ಸಿಂಹಾಸನವನ್ನೇರಿದ. ದೆಹಲಿಯ ಕೆಂಪು ಕೋಟೆಯ ಮುಖ್ಯದ್ವಾರದ ಆಚೆ ತುದಿಯಲ್ಲಿ ಸಿಗುವ ದಿವಾನ್-ಇ-ಆಮ್ ನಲ್ಲಿರುವ ಅಮೃತ ಶಿಲೆಯ ಸಿಂಹಾಸನ ಪೀಠ ಮತ್ತು ಅಮೃತ ಶಿಲೆಯ ಛತ್ರಿಯ ಕೆಳಗೆ ದಿವ್ಯಾಲಂಕಾರ ಭೂಷಿತನಾದ ಶಹಾಜಹಾನ ಮಯೂರ ಸಿಂಹಾಸನಾ ರೂಢನಾಗಿ, ದಿನಕ್ಕೆ ಎರಡು ಬಾರಿ ದರ್ಬಾರು ನಡೆಸುತ್ತಿದ್ದನಂತೆ. ಮೊಘಲ್ ಚಕ್ರವರ್ತಿಗಳ ಎಣೆಯಿಲ್ಲದ ಐಶ್ವರ್ಯ, ಕಲಾಭಿಜ್ಞತೆ ಹಾಗೂ ಕುಶಲಕರ್ಮಿಗಳ ಜಾಣ್ಮೆಗೆ ಸಾಕ್ಷಿಯಂತಿದ್ದ ಮಯೂರ ಸಿಂಹಾಸನವನ್ನು, 1739ರಲ್ಲಿ ಪರ್ಷಿಯಾದ (ಇಂದಿನ ಇರಾನಿನ) ನಾದಿರ್ ಷಾ ದಾಳಿಮಾಡಿ, ದೆಹಲಿಯ ಮಹಮ್ಮದ ಷಾನನ್ನು ಸೋಲಿಸಿ ವಿಜಯ ಸಾಧಿಸಿದ ಪ್ರತೀಕವಾಗಿ, ಪರ್ಷಿಯಕ್ಕೆ ಹಿಂದಿರುಗುವಾಗ 15 ಕೋಟಿ ರೂಪಾಯಿ ನಗದು, ಕೊಹಿನೂರ್ ವಜ್ರ, ಮಯೂರ ಸಿಂಹಾಸನ, ಅರಮನೆಯ ಎಲ್ಲ ವಸ್ತುಗಳನ್ನು ಕೊಳ್ಳೆ ಹೊಡೆದು, ಹೊತ್ತೊಯ್ದ.
ಕೊಹಿನೂರ್ ವಜ್ರವು ನಾದಿರ್ ಷಾ ನಂತರ ಅಪಘಾನಿಸ್ತಾನದ ದುರಾನಿ ಅರಸರಲ್ಲಿಗೆ, ಈ ವಂಶದ ಅಹಮದ್ ಷಾನಿಂದ ಭಾರತದ ಪಂಜಾಬಿನ ರಣಜೀತ್ಸಿಂಗ್ (1813) ನಲ್ಲಿಗೆ, ಈತನ ಕಾಲಾನಂತರ ಈಸ್ಟ್ ಇಂಡಿಯಾ ಕಂಪೆನಿಗೆ ಓಡಾಡುತ್ತಾ 1849 ರಿಂದ ವಿಕ್ಟೋರಿಯಾ ರಾಣಿ ಕಿರೀಟದಲ್ಲಿ ಕುಳಿತಿದೆ. ಆದರೆ ಮಯೂರ ಸಿಂಹಾಸನ ಪರ್ಷಿಯಾದಿಂದ ಟರ್ಕಿಗೆ ಹೇಗೆ ಬಂದಿತೋ? ಅಂತೂ ಈಗ ಟರ್ಕಿ ತೋಪಕಾಪಿ ಸಂಗ್ರಹಾಲಯದಲ್ಲಿ ಭಾರತದ ಕಲೆ, ಸಂಸ್ಕೃತಿ, ಶ್ರೀಮಂತಿಕೆ (ಮತ್ತು ಅಸಹಾಯಕತೆ) ಯ ಕುರುಹಾಗಿ ನಿಂತಿದೆ.
ಅದು ಭಾರತದ್ದೇ ಎಂಬ ಬರಹವಿರುವ ಫಲಕ ನೋಡಿ ರೋಮಾಂಚನವಾಯಿತು. ಆದರೆ ಅದು ಸಿಂಹಾಸನವಲ್ಲ. ಬರೀ ಸಿಂಹಾಸನದ (ಅವಶೇಷ) ಭಾಗ ಮಾತ್ರ. ಅದಕ್ಕಿರುವ ಪ್ರಭಾವಳಿ, ಪ್ರಭಾವಳಿ ಮೇಲಿನ ಧ್ವಜಗಳು ಸಂಗ್ರಹಾಲಯದ ಒಂದೊಂದು ಕಡೆಗೆ ಒಂದೊಂದು ಭಾಗಗಳಿದ್ದವು. 1739ರಲ್ಲಿ ನಾದಿರ್ ಷಾ ಇಲ್ಲಿಂದ ದೋಚಿ ಒಯ್ಯಬೇಕಾದರೆ ಸಿಂಹಾಸನದ ಬೃಹತ್ ಗಾತ್ರ ಹಡಗಿನಲ್ಲಿ ಹಿಡಿಸದ್ದರಿಂದ ಅದನ್ನು ಮುರಿದು, ತುಂಡಾಗಿಸಿ, ತುರುಕಿಕೊಂಡು ಹೊತ್ತೊಯ್ದಿದ್ದನಂತೆ. ಎಲ್ಲೊ ಕೇಳಿದ/ಓದಿದ ನೆನಪು. ಹೊಟ್ಟೆಯೊಳಗೆ ಕೋಲಾಹಲವೇ ಆಯಿತು. ನಾಲ್ಕು ದಿಕ್ಕುಗಳಲ್ಲಿ ಹಬ್ಬಿ ಹರಡಿರುವ ಈ ಅರಮನೆ ನೋಡಲು ದೇಶ ವಿದೇಶಗಳಿಂದ ಬಂದ ಸಹಸ್ರಾರು ಜನ ಮುಪ್ಪರಿಗೊಂಡಿದ್ದರು. ಅಸಾಧ್ಯ ಜನದಟ್ಟಣೆ. ಒಂದೆಡೆ ನಿಂತು ಕಡೆ ಪಕ್ಷ ಕಣ್ಣುಗಳನ್ನಾದರೂ ತುಂಬಿಸಿಕೊಳ್ಳೋಣವೆಂದರೆ ಗನ್ ಮ್ಯಾನಗಳು `ಮೂವ್ ಮೂವ್’ ಎನ್ನುತ್ತಿದ್ದರು. ಎಲ್ಲೆಡೆಗೂ ಸಿಸಿ ಕ್ಯಾಮರಾಗಳು. ಅದಕ್ಕಿಂತ ಹರಿತಕಣ್ಣು ಗನ್ ಮ್ಯಾನ್ಗಳದ್ದು. ಒಳಗಡೆ ಎಲ್ಲಿಯೂ ಕ್ಯಾಮರಾ ಹೊರತೆಗೆಯುವ ಹಾಗಿರಲಿಲ್ಲ.
ನೂರಾರು, ಸಾವಿರಾರು ಅಮೂಲ್ಯ ವಸ್ತುಗಳಿದ್ದವು. ಪ್ರತಿಯೊಂದನ್ನು ದಪ್ಪ ಗಾಜಿನ ಪೆಟ್ಟಿಗೆಯೊಳಗೆ, ಹಾಗೂ ಗೋಡೆಯ ಮಾಡಿನೊಳಗೆ ಭದ್ರಗೊಳಿಸಿ ಪ್ರತಿ ಹೆಜ್ಜೆ ಹೆಜ್ಜೆಗೂ ಗನ್ ಮ್ಯಾನ್ ಗಳನ್ನು ನಿಲ್ಲಿಸಿದ್ದರು.ಜೊತೆಗಿದ್ದ ಮಂಗಲಾ ಮೆಟಗುಡ್ಡ `ನಮ್ಮವನೆಲ್ಲಾ ತಂದ ಇಲ್ಲಿ ಪ್ರದರ್ಶನಕ್ಕೆ ಇಟ್ಟಾರ. ಇವೆಲ್ಲಾ ನಮ್ಮೂನ… ಅದಾವ್, ಹೊಟ್ಟಿ ಉರಿತೈತಿ’ ಎಂದು ಶಪಿಸುತ್ತಾ ಹೊರ ಬಂದರು. ಅಲ್ಲಿನ ತಣ್ಣನೆಯ ನೀರು ಕುಡಿದು ಹಸಿರು ಹುಲ್ಲಿನ ಮೇಲೆ ಕುಳಿತಾಗ ಸಮಯ 2.00 ಗಂಟೆ. ಅಲ್ಲೊಂದು ಔಡಲ ಜಾತಿಯ ಮರ ಇತ್ತು. ಅದಕ್ಕೆ ಒಳಗೊಬ್ಬ ಮನುಷ್ಯ ಕುಳಿತುಕೊಳ್ಳಬಹುದಾದಷ್ಟು ದೊಡ್ಡ ಪೊಟರೆ ಇತ್ತು. ಅಲ್ಲಿನ ಕಾವಲುಗಾರನನ್ನು ಕೇಳಿದಾಗ ಅದು ಚಿನಾರ್ (Chinar) ಗಿಡ ಎಂದು ಹೇಳಿದ. ಹೊಟ್ಟೆ ಚುರುಗುಡುತಿತ್ತು. ನೇರವಾಗಿ dubb ಹೋಟೆಲ್ ಗೆ ಹೋಗಿ ಊಟ ಮುಗಿಸಿ ಸಿನೆಟರ್ ಹೋಟೆಲಿಗೆ ಹೋಗಿ ವಿಶ್ರಾಂತಿ ಪಡೆದವು. ಸಂಜೆ ಟೀ ಕುಡಿಯಲು ಹೋದೆವು ನಾನು ಮತ್ತು ಸರೋಜಾ. ಒಂದು ಟೀ ಬೆಲೆ 4.5 ಲೀರಾ, ಒಂದು ಕಾಫಿ ಬೆಲೆ 5.5 ಲೀರಾ. `ಎದ್ದು ಬರುವುದ್ಹೇಗೆ? ಬೈಟು ಮಾಡಿ ಕಾಫಿ ಕುಡಿದು 165 ರೂ ಕೊಟ್ಟು ಹೊರಬಂದೆವು. ಗಂಡ-ಮನೆ-ಮಕ್ಕಳು ನೆನಪಾಗತೊಡಗಿದವು. ಬೂತ್ ನಿಂದ ಫೋನ್ ಮಾಡಲು ಹೋದೆವು. 1 ನಿಮಿಷದ ಅಂತರಾಷ್ಟ್ರೀಯ ಕರೆಗೆ 1 ಲೀರಾ; ನನ್ನ ಸಂಗಾತಿಯೊಡನೆ ಮತ್ತು ಮಗಳೊಡನೆ ಎರಡೆಂದರೆ ಎರಡೇ ನಿಮಿಷ ಮಾತನಾಡಿ `ನಾವು’ ಬಂದು ಮುಟ್ಟಿದ್ದೀವಿ, ಆರಾಮ ಇದ್ದೀನಿ, ನೀವು ಹ್ಯಾಗಿದ್ದೀರಿ? ಮಗಳು ಕೇಳಿದ `ಅಮ್ಮಾ ಯಾವಾಗ ಬರ್ತಿ?’ ಪ್ರಶ್ನೆಗೆ ಮುಂದಿನ ವಾರ ಎನ್ನುತ್ತಲೆ 1.59 ಸೆಕೆಂಡಿಗೆ ಪಕ್ಕನೆ ಫೋನಿಟ್ಟೆ. 60 ರೂ ಕೊಟ್ಟು ಹೊರ ಬಂದೆ. ಅಲ್ಲಿ ಸಂಪ್ರದಾಯಸ್ಥ ಮತ್ತು ಅಶಿಕ್ಷಿತ ಅಜ್ಜನೊಬ್ಬನಿದ್ದ. ಲೀರಾ, ಯುರೋ ಲೆಕ್ಕ ಆತನಿಗೆ ತಿಳಿಯದಾಗಿ `ಎಲ್ಲವನ್ನು ನೀವೆ ತೆಗೆದುಕೊಂಡು ಹೋಗಿ’ ಎಂದು ಹಣವನ್ನು ಟೇಬಲ್ ಮೇಲೆ ಎಸೆದು ಕೂಗಾಡ ತೊಡಗಿದ. ಅವನ ಭಾಷೆ ನಮಗೆ ತಿಳಿಯದು, ನಮ್ಮದು ಅವನಿಗೆ ಬರದು, ಪಕ್ಕದಂಗಡಿಯವನನ್ನು ಕರೆದೆವು. ಆತ ತಿಳಿಸಿ ಹೇಳಿ ಬಗೆಹರಿಸಿದ. ಎಲ್ಲ ಕಡೆಗೂ ಎಲ್ಲ ರೀತಿಯ ಜನ ಇರುವುದು ಪ್ರಕೃತಿ ಸಹಜ ಎನಿಸಿತು.
ಸೂರ್ಯ ಇನ್ನೂ ಮುಳುಗಿರಲಿಲ್ಲ. 8.15ರವರೆಗೆ ಶ್ಯಾಪಿಂಗ್ ಹೋಗಬಹುದು ಎಂದರು. ನಾಲ್ಕು ಜನ ಸೇರಿ ಹೋಟೆಲ್ ಪಕ್ಕದ ಓಣಿ ಹಿಡಿದು ನೇರ ಮಾರ್ಕೆಟ್ಗೆ ಹೋದೆವು. ಮೊದಲು ಏನೇನಿದೆ? ಎಷ್ಟು ಬೆಲೆ? ಎಂಬುದನ್ನು ಕೇಳುತ್ತಾ ಹೋಗಿ ಒಂದಿಷ್ಟು ಪರ್ಸ್, ನಜರ್ಬಂದ್ ವಾಲ್ಪೀಸ್ ಗಳು, ಮಗಳಿಗೆ ವಿಶೇಷ ಕುಸುರಿ ಕಲೆ ಇರುವ ಮಾಟವಾದ ಚಪ್ಪಲಿ ಮುಂತಾದವುಗಳನ್ನು ಕೊಂಡುಕೊಂಡೆನು. ಅಂಗಡಿಗಳಷ್ಟೇ ಫುಟ್ಪಾಥ್ ಮಾರಾಟಗಾರರು ದೆಹಲಿಯ, ಮೀನಾ ಬಝಾರ್, ಚೋರ್ ಬಝಾರನಂತೆ ಮುಪ್ಪರಿಗೊಂಡಿದ್ದರು. ಅಲ್ಲಿಯ ಟರ್ಕಿ ಜನ ನಮ್ಮ ಕುಂಕುಮ ಬೊಟ್ಟು (ಬಿಂದಿ) ನೋಡಿದ್ದೆ `ಇಂದಿಯಾ’… ಎನ್ನುತ್ತಿದ್ದರು. ಹಾಗೂ ಶಾರೂಖ್ ಖಾನ್, ಅಮಿತಾ ಬಚ್ಚನ್ ಎನ್ನುತ್ತಿದ್ದರು. ಅಯ್ಯೋ! ದೇಶದ ಮಾದರಿಗಳು, ಪ್ರತಿನಿಧಿಗಳು ಇವರೇನಾ? ಎನಿಸಿತು. ಅಲ್ಲಿಯ ಬೆಲೆ ಭಾರತದ ಬೆಲೆಗೆ ಹೋಲಿಸಿದಂತೆ ತುಂಬಾ ತುಟ್ಟಿಯೇ ಎನಿಸುತ್ತಿದ್ದರೂ ವಸ್ತುಗಳ ಗುಣಾತ್ಮಕತೆ ಮತ್ತು ಕಲಾತ್ಮಕತೆ ಭಿನ್ನವಾಗಿಯೇ ಇದ್ದವು. ಹೋಲಿಸುತ್ತಾ ಕುಳಿತರೆ ಖರೀದಿ ಮಾಡಲಾಗದು ಎನಿಸಿ ಪರವಾಗಿಲ್ಲ ಎನಿಸಿದ್ದಷ್ಟನ್ನು ಕೊಂಡು ಕೊಂಡೆ. ಉಳಿದವರು ಸಾಕಷ್ಟು ಖರೀದಿಯನ್ನೇ ಮಾಡಿದರು. 8.30ಕ್ಕೆ ಊಟಕ್ಕೆ ಹೋದಾಗ `ಅದು ಚೆನ್ನಾಗಿದೆ, ಇದು ಚೆನ್ನಾಗಿದೆ ನನಗೂ ತೋರಿಸು ನನಗೂ ಕೊಡಿಸು’ ಎಂದು ಕೇಳಿಕೊಳ್ಳತೊಡಗಿದರು. ಊಟ ಮುಗಿಸಿ ಬಂದು ಮ್ಯಾನೇಜರ್ ಗೆ ಮತ್ತೂ ಮಾರ್ಕೆಟಿಂಗ್ ಹೋಗುವುದಾಗಿ ಹೇಳಿದಾಗ ಆತ ಹೋಗಬಹುದು ಎಂದ. ಆಗ ಸಮಯ ರಾತ್ರಿ 10.00 ಗಂಟೆ. ಕೆಲವು ಅಂಗಡಿಗಳು ಮಾತ್ರ ಮುಚ್ಚಿದ್ದವು. 75% ಅಂಗಡಿಗಳು ತೆರೆದೇ ಇದ್ದವು. ಜೊತೆಗೆ ಫುಟ್ಪಾತ್ ನ ಮಾರಾಟಗಾರಂತೂ ತುಂಬಿದ್ದರು. ಸರಸ್ವತಿ, ಇಂದುಮತಿ ಆಂಟಿಯರು ನಾನು ಸರೋಜ ಹಾಗೂ ಲಾರಿಸರ್ ಕೂಡ ಜೊತೆಯಲ್ಲಿ ಬಂದರು. ಯಾರ್ಯಾರಿಗೆ ಏನೇನು ಬೇಕೋ ಅವನ್ನೆಲ್ಲಾ ಖರೀದಿಸಿದರು. ಹೋಗೋಣ ಎಂದು ಸಮಯ ನೋಡಿದಾಗ ರಾತ್ರಿ 12.00 ಗಂಟೆ. ಲಾರಿಸರ್ `ಮುಝೆ ಬಸ್ ಹೋ ಗಯಾ, ಥಕ್ ಚುಕಾ ಹೂಂ ಮೈ ಚಲತಾ ಹೂಂ’ ಎಂದು ಹೋಟೆಲಿನತ್ತ ನಡೆದರು. ಮತ್ತೆ ಸ್ವೆಟರ್ಸ್, ಟೀ ಶರ್ಟ್ ಖರೀದಿಸಿದ ನನ್ನದೂ ಖರೀದಿ ಮುಗಿದಿತ್ತು. ನಡೆಯಲಾಗದೆ ಒದ್ದಾಡುತ್ತಿದ್ದ ಸರಸ್ವತಿ ಆಂಟಿ ಹೊರಲಾರದಷ್ಟು ಖರೀದಿಸಿದ್ದರೂ `ವಿದ್ಯಾ, ಸರೋಜಾ ಅಲ್ಲಿ ಆ ವಾಚ್ ನ ಅಂಗಡಿಗೆ ಹೋಗಿ ಸೆಲೆಕ್ಟ್ ಮಾಡಿ ರೇಟ್ ಹೊಂದಿಸದಿದ್ದದ್ದಕ್ಕ ಬಿಟ್ಟು ಬಂದೀನಿ. ಅವನ್ನು ತಂದು ಕೊಡ್ರಿವಾ ಪುಣ್ಯಾ ಹತ್ತದ’ ಎಂದರು. ಸರಿ ತಿರುಗಿ ಅಂಗಡಿಗೆ ಹೋಗಿ ತಂದು ಕೊಟ್ಟೆವು. ತುಂಬಾ ಬಳಲಿ, ಹೊರಲಾರದ ದೇಹದೊಂದಿಗೆ ಏಗುತ್ತಿದ್ದ ಸರಸ್ವತಿ ಆಂಟಿ ಆಚೆ ಒಬ್ಬರೂ, ಈಚೆ ಒಬ್ಬರ ಮೇಲೆ ಕೈಹಾಕಿ ಪ್ರಯಾಸದಿಂದ ಮೆಲ್ಲಗೆ ನಡೆದು ಬಂದರು. ಹೊಟೇಲ್ ತಲುಪಿದಾಗ 12.30. ರಾತ್ರಿ ಆತಂಕ, ಆಶ್ಚರ್ಯ, ಆನಂದ. ಗಾಂಧೀ ಹೇಳಿದ ಮಾತನ್ನು ಮೆಲಕು ಹಾಕುತ್ತಾ ಕಿಟಕಿ ತೆರೆದು ಮಲಗಿಕೊಂಡೆ. ಇಸ್ತಾಂಬುಲನಲ್ಲಿ ಎರಡನೆಯ ರಾತ್ರಿ ಅದು. ಸಂಜೆಯಿಂದ ನಿಚ್ಚಳವಾಗಿ, ಜೊತೆಗಿದ್ದ ಚಂದ್ರ ಮುಗುಳ್ನಗುತ್ತಿದ್ದ. ನಾಲ್ಕು ಹತ್ತರಷ್ಟು ದೊಡ್ಡವನಾಗಿದ್ದ.
ಕಣ್ಣೆವೆೆಗಳು ಕೂಡುವ ಮುನ್ನ ಮನಸ್ಸು ಇಸ್ತಾಂಬುಲ್ ನ ದಾರಿಗಳನ್ನು ಮೆಲಕು ಹಾಕುತ್ತಿತ್ತು. ಎರಡು ದಿನ ತಿರುಗಾಡಿದರೂ ಒಂಚೂರೂ ಮಣ್ಣು ಕಾಣಸಿಗಲಿಲ್ಲ. ಬೇಕಾದಷ್ಟು ಸಸ್ಯರಾಶಿ ಅಲ್ಲಿ ಕಾಣುತ್ತಿದ್ದರೂ ಮಣ್ಣು ಮಾತ್ರ ಅದೃಶ್ಯ. ಕಪ್ಪು ಒರಟಾದ ಕಲ್ಲುಗಳನ್ನು ಅಂಗೈಯಗಲದಷ್ಟು ಚೌಕಾಕಾರದಲ್ಲಿ ಕೊರೆದು ಇಸ್ತಾಂಬುಲ್ ನ ಎಲ್ಲದಾರಿಗಳಿಗೂ ಕಮಾನಿನಾಕಾರದಲ್ಲಿ ಜೋಡಿಸಲಾಗಿದೆ. ಹೀಗಾಗಿ ಕಸ, ರಾಡಿಗಳಿಗಿಲ್ಲಿ ಇಂಬಿಲ್ಲ. ಎಲ್ಲಿ ಹೋದರಲ್ಲಿ ಈ ಕಲ್ಲು ಕಮಾನುಗಳ ದಾರಿ. ಸುಖದಾಶ್ಚರ್ಯ, ಸುಖದಾನಂದ. ಇಸ್ತಾಂಬುಲ್ ಹಲವು ಶ್ರೀಮಂತ ಸಂಸ್ಕೃತಿಗಳ ನೆಲೆಬೀಡು ಎನ್ನುವುದರಲ್ಲಿ ಮತ್ತೊಂದು ಮಾತಿಲ್ಲ. ಇನ್ನೂ ಅಲ್ಲಿಯ ಓಣಿಗಳನ್ನು ಕಟ್ಟಿದ ಪರಿ ವರ್ಣಿಸಲಸದಳ. ಅವು ಪದರು ಓಣಿಗಳು. ಆಕಾಶದೆತ್ತರಕ್ಕೆ ಹೊಮ್ಮಿದ ಬೆಟ್ಟ, ಗೋಪುರಾಕಾರದ ಈ ಬೆಟ್ಟವನ್ನು ಅಡಿಯಿಂದಲೇ ಸಿಮೆಂಟ್ ಕಾಡು ಆವರಿಸಿದೆ. ಕೆಳಗೊಂದು ಸಾಲು ಸಿಮೆಂಟ್ ಕಾಡು, ಮೇಲೊಂದು ಸಾಲು ಬೆಟ್ಟ, ಅದರ ಮೇಲೆ ಸಿಮೆಂಟ್ ಕಾಡು. ಅದರ ಮೇಲೆ ಬೆಟ್ಟ… ಹೀಗೆ ನಾಲ್ಕು…ನಾಲ್ಕು ಸಾಲುಗಳು ಪದರು ಓಣಿಗಳನ್ನು ಸೃಷ್ಟಿಸಿವೆ. ನೋಡಲು ಆಶ್ಚರ್ಯವೆನಿಸಿದರೂ ಪ್ರತ್ಯಕ್ಷ ಸತ್ಯ. ಗೋಪುರಾಕಾರದ ಬೆಟ್ಟವನ್ನು ಕೊರೆದು ಮನೆಗಳನ್ನು ನಿರ್ಮಿಸುವಾಗ ಈ ಚಿತ್ತಾರದ ರಚನೆಯಾಗಿದೆ. ಪದರು ಓಣಿ, ಪದರು ಶಿಲೆಗಳು ಎದುರುಬದುರು; ಮಧ್ಯದಲ್ಲಿ ನಮ್ಮ ಕೋಚ್ ಓಡುತ್ತಿದ್ದ ಆ ಅದ್ಭುತ ಚಿತ್ರವನ್ನು ಮೆಲಕು ಹಾಕುತ್ತಾ ನಿದ್ದೆ ಹೋದದ್ದೇ ಗೊತ್ತಾಗಲಿಲ್ಲ.
(ಮುಂದುವರಿಯುವುದು…)

‍ಲೇಖಕರು avadhi

10 March, 2014

ನಿಮಗೆ ಇವೂ ಇಷ್ಟವಾಗಬಹುದು…

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸನ್ನಿಧಿಯಲ್ಲಿ

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮತ್ತೆ ಮತ್ತೆ ಅದೇ ಜಾಗದಲ್ಲಿ ನಿಲ್ಲುತ್ತಿತ್ತು ಖಾಲಿ ಬೈಕ್

0 Comments

Trackbacks/Pingbacks

  1. ನೈಲ್ ನದಿಯ ಮಡಿಲಲ್ಲಿ : ಮಸಾಲ ಮಾರುಕಟ್ಟೆ ವೈಭೋಗ.. « ಅವಧಿ / Avadhi - [...] ನೈಲ್ ನದಿಯ ಮಡಿಲಲ್ಲಿ : ಮಸಾಲ ಮಾರುಕಟ್ಟೆ ವೈಭೋಗ.. March 11, 2014 by avadhinew (ಇಲ್ಲಿಯವರೆಗೆ…) [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading