ಪ್ರಯಾಣದ ಹೊಸತು
(ಇಲ್ಲಿಯವರೆಗೆ…)
ಧಾರವಾಡದಲ್ಲಿ ತವೇರಾ ಏರಿದಾಗ ಸಮಯ 8:45. ಕಿತ್ತೂರ, ಬೀಡಿ, ಖಾನಾಪೂರ, ಅನಮೋಡ ಮಾರ್ಗವಾಗಿ ಗೋವಾದತ್ತ ವಾಹನ ಸಾಗಿತ್ತು. ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಿಂದ ಒಟ್ಟು 10 ಜನ ಹೊರಟಿದ್ದೆವು.
ಮಾರ್ಗದಲ್ಲಿ ಎದುರಾಗುವ ಹಸಿರು ತುಂಬಿದ ಬೆಟ್ಟಗಳು, ಅಲ್ಲಿಯ ಮನಮೋಹಕ ರಮ್ಯತೆ ಮನಕ್ಕೆ ಮುದನೀಡುತ್ತಿತ್ತು. ದಟ್ಟವಾದ ಬೆಟ್ಟದೊಳಗಿಂದ ಊಧ್ರ್ವಮುಖವಾಗಿ ಹೊರಹೊಮ್ಮುತ್ತಿರುವ ಆವಿ, ಹಸಿರು ಹಂಚಿನ ಮನೆಯಿಂದ ಹೊಗೆ ಹೊರಬರುತ್ತಿರುವಂತೆ ಭಾಸವಾಗುತ್ತಿತ್ತು. ಆಗಾಧ ವನ್ಯರಾಶಿಯ ರಮಣೀಯತೆ ಹೃದಯ ತೃಪ್ತಿಗೊಳಿಸುವಂತಿತ್ತು. ಸುತ್ತಮುತ್ತಲಿರುವ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ, ಅದರ ತನ್ಮಯತೆಯಲ್ಲಿ ಮೀಯುತ್ತಾ ಗೋವಾ ಏರ್ಪೋರ್ಟ್ ತಲುಪಿದಾಗ ಸರಿಯಾಗಿ 2.00 ಗಂಟೆ. ಮೊದಲ ಸಲ ಏರ್ಪೋರ್ಟ್ ನ ಒಡನಾಟಕ್ಕೆ ಬಂದಿರುವುದಾದ್ದರಿಂದ ನಾನಂತೂ ಬೆರಗು ಕಣ್ಣುಗಳಿಂದ ನೋಡುತ್ತಲಿದ್ದೆ. ಸಂಪೂರ್ಣ ಭದ್ರತೆಯಲ್ಲಿ ಸುವ್ಯವಸ್ಥಿತ, ಸುವಿಶಾಲವಾದ ಏರ್ಪೋರ್ಟ್ ನ ಆವರಣದಲ್ಲಿ ಕಾಲಿರಿಸಿದಾಗ ಕಾತುರ, ಆತಂಕ, ಸ್ವಲ್ಪ ಭಯ, ಹಿಂಜರಿಕೆ, ಖುಷಿಗಳೊಂದಿಗೆ ಮೇಳೈಸಿದ ಮನಸ್ಥಿತಿಯಲ್ಲಿ ಹೊರಗಿದ್ದ ಟ್ರೋಲಿಗಳನ್ನು ತೆಗೆದುಕೊಂಡು ಆನೆ ಭಾರದ ಟ್ರೋಲಿಸೂಟ್ಕೇಸ್ ಗಳನ್ನು ಅದರ ಮೇಲಿಟ್ಟುಕೊಂಡು ತಳ್ಳುತ್ತ ಮುಖ್ಯದ್ವಾರ ಪ್ರವೇಶಿಸುವಾಗ ಕೂಗು ಹಾಕಿ ಬಿಡಲೆ? ಎನ್ನುವಷ್ಟು ಖುಷಿ, ಪುಳಕ.
ಅಲ್ಲಿ boarding pass ತೆಗೆದುಕೊಳ್ಳಲಿಕ್ಕೆ 4-5 ಕೌಂಟರಗಳಿದ್ದವು. boarding pass ಎಂದರೆ ಸೂಟ್ಕೇಸ್ (ಲಗೇಜ್) ಪಡೆದು ನೀಡುವ ಪಾಸ್. ಕೌಂಟರ್ಗಳಲ್ಲಿ 20 ರಿಂದ 25 ವಯಸ್ಸಿನೊಳಗಿನ ಸುಂದರ ಯುವಕ-ಯುವತಿಯರು ಮನಕಲಕಿದರು. ನೋಡುಗರ ನೆಟ್ಟ ದೃಷ್ಟಿ ಅಲುಗಾಡದಷ್ಟು ಅಲಂಕಾರದ ಶಿಸ್ತಿನಲ್ಲಿದ್ದರು. ಶುಭ್ರ ಮಿರಿ-ಮಿರಿ ಮಿಂಚುವ ಪ್ರಫುಲ್ಲಿತ ಚರ್ಮದೊಂದಿಗೆ ಗಲ್ಲಕ್ಕೆ ಹಚ್ಚಿದ ರೋಜ್ ಸ್ಪರ್ಧೆಗಿಳಿದಿತ್ತು. ಕಣ್ಣಿಗೆ ಹಚ್ಚಿದ ಆಯ್ಲೈನ್ ಮತ್ತು ಆಯ್ಲ್ಯಾಶ್, ಆಯ್ಶಾಡೋಗಳದ್ದೇ ಅಲಂಕಾರದ ಪ್ರಮುಖ ಭಾಗವಾಗಿತ್ತು. ಮೇಲ್ರೆಪ್ಪೆಯ ಮೇಲ್ಫಾಗದಲ್ಲಿ ಲೇಪಿಸಿದ ಐಶಾಡೋ ನನ್ನನ್ನೇ ನೋಡಿ ಎನ್ನುವಂತಿತ್ತು. ತುಟಿಗೆ ತಕ್ಕ ಲಿಪ್ಸ್ಟಿಕ್ ಹಚ್ಚಿ ಕೂದಲು ಎತ್ತಿಕಟ್ಟಿ ಒಂದೆಳೆಯೂ ಏಳದಂತೆ ತಲೆತುಂಬ ಕ್ಲಿಪ್ ಹಾಕಲಾಗಿತ್ತು. ಇವರು ನಿರಾಭರಣೆಯರಾದರೂ ವರ್ಣ (ಬಣ್ಣ)ಲಂಕೃತ ಸುಂದರಿಯರು ಎಂದರೆ ಸರಿಯಾಗುವುದೇನೋ?
ಬಿಳಿ ಶರ್ಟನ ಮೇಲೆ ಕಡು ನೀಲಿ ಬಣ್ಣದ over ಕೋಟ್ ಮತ್ತು ಫ್ಯಾಂಟ್ ಇಲ್ಲವೆ ಕಡು ನೀಲಿ ಬಣ್ಣದ ಕಟ್ ಮಿಡಿ; ಇವು ಶಾರ್ಟ್ಸ್ ಆಗಿರುವುದರಿಂದ ಕಾಲ್ಗಳಿಗೆ ಕಡು ನೀಲಿ ಬಣ್ಣದ ತೆಳ್ಳನೆಯ ಜಾಳಿಗೆಯ ಕಾಲುಚೀಲ. ಅದು ಬೆರಳಿನಿಂದ ತೊಡೆಯವರೆಗೂ ಇರುವುದರಿಂದ ತೊಡೆಗಳ ಕೆಳರ್ಧಭಾಗ ಕಾಣುತ್ತವೆ ಎನ್ನುವ ಹಿಂಜರಿಕೆ, ನಾಚಿಕೆಯಪ್ರಶ್ನೆಯೇ ಬರುವುದಿಲ್ಲ. ಅದು ಜಾಳಿಗೆ ಆದ್ದರಿಂದ ಅದೊಂದು ರೀತಿಯ ವಿಚಿತ್ರ ಬಣ್ಣವನ್ನೇ ಸೃಷ್ಟಿಸಿತ್ತು. ನೋಡಿದ ತಕ್ಷಣವೇ ಅರೆ! ಇದೇನು? ಕಾಲ್ಗಳು ಯಾಕಿಷ್ಟು ಕಪ್ಪು? ಎನ್ನುವ ಪ್ರಶ್ನೆ ಎದುರು ನಿಲ್ಲುತ್ತಿತ್ತು. ಈ ಇವುಗಳನ್ನು, ಬಣ್ಣಗಳನ್ನು ಕಳಚಿ ಬಿಟ್ಟರೆ ನಿಜವಾಗಿಯೂ ಅವರು ಸುಂದರಿಯರೇ. ಅದು ವಾಯುಯಾನ ನೇಮಕಾತಿ ನಿಯಮ ಕೂಡ. ಕೌಂಟರಿನಲ್ಲಿದ್ದ ವರ್ಣಾಲಂಕೃತ ನಿರಾಭರಣ ಸುಂದರಿ ಪಾಸ್ಪೋರ್ಟ್ ಮತ್ತು ಟಿಕೇಟ್ ಕೇಳಿದಳು. ಅವಳಿಗೆ ಅವುಗಳನ್ನು ಕೊಡುವುದರಲ್ಲಿಯೇ ಅಲ್ಲಿಯೇ ಇದ್ದ ಸಹಾಯಕ ಸಿಬ್ಬಂದಿ ಯುವಕ ಟ್ರೋಲಿಯನ್ನು ಕೌಂಟರ್ಗೆ ಹೊಂದಿಕೊಂಡಂತೆ ಇರುವ ಒಂದು ಗೇಣು ಎತ್ತರದಷ್ಟಿರುವ ಕಟ್ಟೆಗೆ ತಾಗಿ ನಿಲ್ಲಿಸುವಂತೆ ಹೇಳಿದ.
ಅಲ್ಲಿ ನಿಲ್ಲಿಸಿದ ತಕ್ಷಣವೇ ಲಗೇಜ್ ನ್ನು ಸಲಿಸಾಗಿ ಎತ್ತಿ, ಸಾಗಿಸುವ ಪಟ್ಟಿ ತುದಿ ಮೇಲೆ ಇಟ್ಟು ಲಗೇಜಿನ ತೂಕ, ಎಷ್ಟು ಬ್ಯಾಗಗಳು, ನಮ್ಮ ಫ್ಲೈಟ್ ನಂಬರ್, ಸೀಟ್ ನಂಬರ ಎಲ್ಲವನ್ನೂ ದಾಖಲಿಸಿ, ಬಾರ್ಕೋಡ್ ಇರುವ ಸ್ಟ್ರೀಪ್ ತೆಗೆದು ಬ್ಯಾಗಿಗೆ ಅಂಟಿಸಲಾಯಿತು. ಇದರೊಂದಿಗೆ ನಮ್ಮೊಂದಿಗಿದ್ದ ಹ್ಯಾಂಡ್ ಬ್ಯಾಗ್, ವ್ಯಾನಿಟಿಬ್ಯಾಗ್ಗೂ(Carry on Baggage)ಒಂದು ಬಾರ್ಕೋಡ್ ಇರುವ ಮತ್ತು ಯಾವ ಏರ್ಲೈನ್ಸ್ ಎಂಬುದನ್ನು ಬರೆದು, ಅಂಟಿಸಿಕೊಳ್ಳಲು ಕೊಡುತ್ತಾರೆ. ಈ ಮಾಹಿತಿಯ ಸ್ಟ್ರೀಪ್, ಟಿಕೇಟ್, ಪಾಸ್ಪೋರ್ಟ್ ಹಿಂದಿರುಗಿಸುತ್ತಿದ್ದಂತೆ ಪರಿಚಾರಕ ಪಕ್ಕಕ್ಕೆ ಸರಿದು ಬ್ಯಾಗ್ ಉದ್ದುದ್ದಕ್ಕೆ ಇಟ್ಟು, ಬಟನ್ ಅದುಮಿದ. ಸಾಗಿಸುವ ಪಟ್ಟಿ (ರಿವಾಲ್ವಿಂಗ್ ಬೆಲ್ಟ್) ಮೇಲಿನ ಸಕ್ಕರೆ ಚೀಲದಂತೆ ಬ್ಯಾಗ್ ಸುಯ್ಯನೆ ಒಳ ಸರಿಯಿತು. ಎಲ್ಲರೂ ಬೋರ್ಡಿಂಗ್ ಪಾಸ್ ಪಡೆದಾಗ ಮೂರು ಗಂಟೆ ಸಮಯ. ನಮ್ಮ ವಿಮಾನ À Goairg8/173 ರ8/173 ನಂಬರ್ ಇತ್ತು. ವಿಮಾನದ ಸಮಯ 4 ಗಂಟೆ. ಅಲ್ಲಿವರೆಗೆ ಅಲ್ಲಿಯೆ ಹೊರಭಾಗದಲ್ಲಿರುವ ಊಟ ಮಾಡುವ ರೂಮಿನಲ್ಲಿ ಕಟ್ಟಿಕೊಂಡ ಬುತ್ತಿ ಬಿಚ್ಚಿ ಎಲ್ಲರೂ ಊಟ ಮಾಡಿದೆವು.
ಅಷ್ಟರಲ್ಲೇ ಚೆಕ್-ಇನ್ ಆರಂಭವಾಯಿತು. ಮತ್ತೇ ಪಾಸ್ಪೋರ್ಟ್ , ಬೋರ್ಡಿಂಗ್ ಪಾಸ್ ಕೈಯಲ್ಲಿ ಹಿಡಿದುಕೊಂಡು ಕ್ಯೂನಲ್ಲಿ ನಿಂತೆವು. ಒಬ್ಬೊಬ್ಬರೆ ಮುಂದೆ ಸರಿಯತೊಡಗಿದಂತೆ ಪಾಸ್ಪೋರ್ಟ್ ನ್ನು swipe ಮಾಡಿ ಅಂದರೆ ತಪಾಸಣಾ ಯಂತ್ರದೊಳಗೆ ಹಾಕಿ ಎಳೆದು ನೋಡಿ ನಮ್ಮ ಟಿಕೇಟ್, ಬೋರ್ಡಿಂಗ್ ಪಾಸ್ ಹಿಂದಿರುಗಿಸಿದರು. ಮೈಗ್ರೆಷನ್ ಕ್ಲಿಯರನ್ಸ್ ಮುಗಿದು ಕೌಂಟರ್ನಿಂದ ಪಾಸ್ ಆಗಿ ಮುಂದೆ ಹೋದರೆ, ಇದು ಸಾಮಾನ್ಯವಾಗಿ ಎಲ್ಲ ಬ್ಯಾಂಕ್ ಗಳಲ್ಲಿರುವಂತೆ ಕಟ್ಟಿಗೆಯ ಚೌಕಟ್ಟು, ಪಾದ ಊರಲು ಆಚೆ, ಈಚೆ ಇಳಿಚಾರುವ ಕಟ್ಟೆಯಂತಹ ಪ್ರದೇಶ. ಆ ಚೌಕಟ್ಟಿನೊಳಗಿಂದಲೇ ಪಾದ ಊರುವುದೇ ತಡ ಇಲೆಕ್ಟ್ರಾನಿಕ್ ಸದ್ದು ಬರುತ್ತದೆ. ಅದು ದಾಟಿದ ಮೇಲೆ ಮಹಿಳೆಯರಿಗೆ ಒಂದು ಕಡೆ ಪುರುಷರಿಗೆ ಒಂದು ಕಡೆ ಪ್ರವೇಶಗಳು. ಮಹಿಳೆಯರಿಗೆ ಅಡ್ಡಗೋಡೆಯ ಒಂದು ರೂಮಿನಂತೆ ಮರೆ ಇತ್ತು. ಅಲ್ಲಿದ್ದ ಮಹಿಳಾ ಭದ್ರತಾ ಸಿಬ್ಬಂದಿ ನಮ್ಮನ್ನು ಆ ಮರೆಯಲ್ಲಿ ನಿಲ್ಲಿಸಿ ಬ್ಯಾಗ್ ಒಂದೆಡೆ ಇಡಿಸಿ ಎರಡು ಕೈ ಮೇಲೆತ್ತಲು ಹೇಳಿ ಇಲೆಕ್ಟ್ರಾನಿಕ್ ತಪಾಸಣಾ ಯಂತ್ರದಿಂದ ಕತ್ತಿನಿಂದ ಎದೆ, ಹೊಟ್ಟೆ, ತೊಡೆ, ಕಾಲ್ಗಳವರೆಗೂ ಮಂತ್ರ ದಂಡದಂತೆ ಆಡಿಸಿದಳು. ನನ್ನ ತಾಳಿ ಆ ಯಂತ್ರಕ್ಕೆ ಸ್ಪರ್ಶಿಸಿತು. ನಾನು ಚೂಡಿದಾರ ಹಾಕಿದ್ದರಿಂದ ಮೇಲೆ ಕತ್ತಿನಲ್ಲಿದ್ದ ಕರಿಮಣಿಸರ ಕಾಣುತ್ತಿರಲಿಲ್ಲ. ಹೊಟ್ಟೆ ಮೇಲ್ಭಾಗದತ್ತ ತೋರಿಸುತ್ತಾ `ಸಮ್ ಥಿಂಗ್ ಈಜ್ ಹಿಯರ್ ಎಂದಳು. ಪಕ್ಕನೇ ಸರ ಹಿಡಿದು ತಾಳಿ ಹೊರತೆಗೆದೆ. `ಓ…ಓ..ಕೆ ಎಂದವಳೇ ಮುಂದೆ ಕಳುಹಿಸಿದಳು. ಸರಿ ಟರ್ಮಿನಲ್ 2ಕ್ಕೆ ಬಂದು ಕುಳಿತೆವು. ಎದುರಿಗೆ ಗಾಜಿನ ಗೋಡೆ ಅದರೊಳಗಿಂದ ನಿಲ್ದಾಣದಲ್ಲಿ ನಿಂತ ವಿಮಾನಗಳು ಕಾಣತೊಡಗಿದವು. ಮೈ ಪುಳಕಗೊಂಡಿತು. ಇದರಲ್ಲಿ ಕೂಡೋದು ಹೇಗೆ? ಹೋಗುವುದ್ಹೇಗೆ? ಏನಾಗುತ್ತೋ ಏನೋ? ದುಗುಡ ಆತಂಕಗಳಿದ್ದರೂ ಹಂಬಲ ಮಾತ್ರ ಆಕಾಶದೆತ್ತರ, ವಿಮಾನ ಪ್ರಯಾಣಕ್ಕೆ ಜೈ. ಆಗ ಸಂಜೆ 3.45 ಗಂಟೆ.

ಇಷ್ಟೆಲ್ಲ ಮುಗಿದು ಲೋಹದ ಹಕ್ಕಿಗಳ ಹಾರುವ ಇಳಿಯುವ ಆಟವನ್ನು ಬೆರಗು ಕಂಗಳಿಂದ ನೋಡುತ್ತಿರುವಾಗ, ಮುಂದೆ ಇರುವ ಗಾಜಿನ ಬಾಗಿಲು 3.55ಕ್ಕೆ ತೆರೆಯಿತು. ಅಲ್ಲಿಂದ ಎಲ್ಲರೂ ಸಾಲಾಗಿ ವಿಮಾನದತ್ತ ನಡೆದೆವು. ವಿಮಾನಕ್ಕೆ ಹತ್ತಲು ಇಳಿಯಲು ನೆಲಸಮದಿಂದ ಎರಡು ದಾರಿ ಇರುವ ಕೃತಕ ಮೆಟ್ಟಿಲು ಜೋಡಿಸಲಾಗಿತ್ತು. ಅದನ್ನು ಹತ್ತುವ ಮೊದಲು, ಒಂದು ಫೋಟೋ ತೆಗೆಯಿಸಿಕೊಂಡೆ. ವಿಮಾನದಲ್ಲಿ ಪಾದಾರ್ಪಣೆಯಾಯಿತು. ಗೋವಾದಿಂದ ದೆಹಲಿಗೆ ಹೋಗುವ ಈ ವಿಮಾನ ಸುಮಾರು 100 ಜನ ಸಾಮರ್ಥ್ಯ ಇರುವಂಥದ್ದು. ಸೀಟುಗಳು ರಾಜಹಂಸ ಬಸ್ಸಿನ ಸೀಟುಗಳಂತಿದ್ದವು. ಎಡಕ್ಕೆ ಮೂರು ಬಲಕ್ಕೆ ಮೂರು ಸೀಟು. ನನಗೆ ಕಿಟಕಿ ಕಡೆಯ ಸೀಟು ಸಿಕ್ಕಿರಲಿಲ್ಲ. ಅದರ ಪಕ್ಕದ (ಮಧ್ಯದ) ಸೀಟು ಸಿಕ್ಕಿತ್ತು. ಅದಾಗ್ಯೂ ಹೊರಗಿನದ್ದನ್ನು ತಕ್ಕ ಮಟ್ಟಿಗೆ ನೋಡಬಹುದಿತ್ತು. ಪ್ರಥಮ ಅನುಭವ, ಒಂದು ಲೆಕ್ಕದಲ್ಲಿ ಕಿಟಕಿ ಸಿಗದಿರುವುದೇ ಒಳ್ಳೆಯದೆನಿಸಿತು.
ಸ್ಪೀಕರ್ ಮೂಲಕ ಧ್ವನಿಯೊಂದು ಕೇಳಿ ಬರತೊಡಗಿತು. `ಇನ್ನೇನು ವಿಮಾನ ಹೊರಡಲಿದೆ, ನೀವು ನಿಮ್ಮ ಸೀಟ್ ಬೆಲ್ಟುಗಳನ್ನು ಹಾಕಿಕೊಳ್ಳಿ ಎಂದೂ ಹಾಗೂ ಅಚಾತುರ್ಯ ಸಂಭವಿಸಿದಲ್ಲಿ ನಾವು ಕೈಗೊಳ್ಳಬಹುದಾದ ಮುನ್ನೆಚ್ಚರಿಕೆಗಳ ಕುರಿತು ಮಾಹಿತಿ ನೀಡತೊಡಗಿತು. ಬೇಗ ಬೇಗನೆ ಬ್ಯಾಗಿನಲ್ಲಿರುವ ಹತ್ತಿಯನ್ನು ತೆಗೆದು ಕಿವಿಗಿಟ್ಟುಕೊಂಡು, ಚ್ಯೂವಿಂಗ್ಗಮ್ ಬಾಯಿಗೆ ಹಾಕಿಕೊಂಡು ಜಗಿಯುತ್ತ ಇನ್ನೇನು ವಿಮಾನ ಹಾರುತ್ತದೆ, ಹೊಟ್ಟೆಯಲ್ಲಿ ರುಮ್ ಅನ್ನತ್ತೋ, ತಲೆಸುತ್ತುತ್ತೋ, ವಾಂತಿ ಬರುತ್ತೋ ಎಂದೆಲ್ಲಾ ಗೇನಿಸುತ್ತಾ, ಜೀವ, ರೆಕ್ಕೆ ಬಲಿಯುತ್ತಿರುವ ಹಕ್ಕಿಮರಿಯಾಯಿತು.
ಸರಿಯಾಗಿ 4ಕ್ಕೆ ವಿಮಾನ ಕದಲತೊಡಗಿತು. ಹಿಂದೆ ಸರಿದು, ತಿರುಗಿ, ಸರಿಯಾಗಿ ರನ್ವೇಯಲ್ಲಿ ನಿಂತು ದಡದಡ ಓಡತೊಡಗಿತು. ಗಾಲಿಗಳುರುಳುವ ಅನುಭವ, ಹೃದಯದ ಮೂಲೆಯಲ್ಲೆಲ್ಲೋ ಢವಢವ… ಆತಂಕ… ಖುಷಿ… ಒಮ್ಮೆಲೆ ಗಾಲಿಗಳುರುಳುವ ಸದ್ದು ನಿಂತು ಸುಂಯ್ಯ ಎಂದು ಮೇಲೆ ಎತ್ತಿದ ಅನುಭವ. ಒಂದು ಸಲ ಗಟ್ಟಿಯಾಗಿ ಕಣ್ಣು ಮುಚ್ಚಿ ತೆರೆದೆ. ಪಕ್ಕದಲ್ಲಿ ಯಾರೋ `ಟೆಕೋವರ್ ಆಯ್ತು ಎಂದರು. ಗಾಜಿನ ಕಿಟಕಿಯಿಂದ ಹೊರನೋಡತೊಡಗಿದೆ. ವಿಮಾನ ಮೋಡಗಳ ನಡುವೆ ಹಾರುತ್ತಿತ್ತು. ಬಿಳಿ ಮೋಡಗಳು 1800 ಮೀಟರ್ ಎತ್ತರದಲ್ಲಿ ಪೂರ್ವಾಭಿಮುಖವಾಗಿ ವಿಮಾನ ಹಾರುತ್ತಿತ್ತು. ಹತ್ತಿ ಹಿಂಜಿ ಹರಡಿದಂತೆ, ಆಕಾಶ ಕಾಯಗಳಿಗೆ ಉಣ್ಣೆಯನ್ನು ಹಿಂಜಿ ಮಾಡಿದ ಹಂಸ ತೂಲಿಕೆಯೋ ಎಂಬಂತೆ ಭಾಸವಾಗುತ್ತಿತ್ತು. ಎಷ್ಟು ಎತ್ತರದ ಮೇಲೆ, ಎಷ್ಟು ವೇಗದಲ್ಲಿ, ಯಾವ ಭಾಗದಲ್ಲಿ, ಯಾವ ದಿಕ್ಕಿನತ್ತ ವಿಮಾನ ಚಲಿಸುತ್ತಿದೆ ಎಂಬುದನ್ನು ಆಗಾಗ ಬಿತ್ತರಿಸುತ್ತಿದ್ದರು. ಒಂದೆಡೆ ನೋಡಿದರೆ ಚೂರು-ಚೂರಾದ ಮೋಡಗಳೋ, ಬಿಳಿ ಗಾಳಿಪಟಗಳೋ, ತರಗೆಲೆಗಳೋ ಎಂಬಂತೆ, ಇನ್ನೊಂದೆಡೆ ನೋಡಿದರೆ ಬೃಹತ್ ಬೆಣ್ಣೆ ಬೆಟ್ಟ, ಹತ್ತಿಯ ರಾಶಿ. ಅದರಂಚಿಗೆ ಬೆಳ್ಳಿ ಬಣ್ಣ ಲೇಪಿಸಿ, ಅದರ ಮೇಲೆ ಬೆಳಕು ಚೆಲ್ಲಿದಂತೆ ಕಣ್ಣು ಕೂರೈಸುವ ಅಂಚು.
ಅಬ್ಬಾ! ಪ್ರಕೃತಿ ವೈಚಿತ್ರ್ಯವೇ! ವೈಶಿಷ್ಟ್ಯವೇ…! ವಿಮಾನ ಮೇಲೆ ಏರಿದಂತೆ ಸಾಮಾನ್ಯ ವಾಯುಭಾರಕ್ಕಿಂತ ಭಿನ್ನವಾದ ವಾತಾವರಣವಿರುವುದರಿಂದ ಸ್ವಲ್ಪ ಕಿವಿಗಡಚಿಕ್ಕಿದಂತಾಯಿತು. ಚೂಯಿಂಗ್ ಗಮ್ ನ್ನು ಜೋರಾಗಿ ಜಗಿಯುತ್ತಾ ಕಾತುರದಿಂದ ಕಿಟಕಿಯತ್ತ ವಾಲಿ ಗಾಜಿಗೆ ಕಣ್ಣು ಹಚ್ಚಿ ಭೂಮಿಯನ್ನು ನೋಡಿದೆ. ಭೂ ಕಟ್ಟಡದ ನೀಲನಕ್ಷೆ ಎಂಬಂತೆ ತೋರುತ್ತಿತ್ತು ಪೃಥ್ವಿ. ಸಂಜೆಯಾದ್ದರಿಂದ ಬೆಳಕು ಕಡಿಮೆಯಾಗುತ್ತಿತ್ತು. ಗಗನ ಸಖಿಯರು ಪುಡ್ಟ್ರೋಲಿಯೊಂದಿಗೆ ಬಂದು, ಕಡಲೆ ಹಿಟ್ಟು ಹಾಕಿ ಕರಿದ ಶೇಂಗಾದ ಒಂದೊಂದು ಪ್ಯಾಕೆಟ್ಗಳನ್ನು ಹಾಗೂ ತಂಪು/ಬಿಸಿ ಪಾನೀಯಗಳನ್ನು ತಂದುಕೊಟ್ಟರು. ಅವುಗಳನ್ನು ಸೇವಿಸುತ್ತ ಹೊಸ ಅನುಭವದಲ್ಲಿ ತೇಲುತ್ತಿರುವಾಗಲೇ 6 ಗಂಟೆ ಸಮಯ. ವಿಮಾನ ದೆಹಲಿ ಡೊಮೆಸ್ಟಿಕ್ ಏರ್ಪೋರ್ಟ್ನಲ್ಲಿ ಲ್ಯಾಂಡಿಂಗ್ ಆಗುವ ಕುರಿತು, ಸೀಟ್ಬೆಲ್ಟ್ ಹಾಕಿಕೊಳ್ಳುವ ಕುರಿತು ಮಾಹಿತಿ ಬಿತ್ತರವಾಗತೊಡಗಿತು. ಸರಿಯಾಗಿ 6.20ಕ್ಕೆ ವಿಮಾನ ಲ್ಯಾಂಡಿಂಗ್ ಆಗ ತೊಡಗಿತು. ವಿಮಾನ ಕೆಳಗಿಳಿಯುತ್ತಿರುವ ಅನುಭವ ಹೊಟ್ಟೆಯಲ್ಲಿಯ ಎಲ್ಲವೂ ಮೇಲೆದ್ದು ಗರ್ನೆ ತಿರುಗಿ ಸುಮ್ಮನೆ ನಿಂತಂತೆ, ಕೆಳಗಿಳಿಯುತ್ತ ಇಳಿಯುತ್ತ ಭೂಸ್ಪರ್ಶವಾದೊಡನೆ ಸುಯ್ಯನೆ ಸಲೀಲವಾಗಿ ಸಾಗುವ ವೇಗದ ಅನುಭವ ನಿಂತುಹೋಗಿ ಸ್ವಲ್ಪ ಬಿರುಸಿನ ವೇಗದ ಅನುಭವ. ತೀವ್ರ ವೇಗ ಕಡಿಮೆಯಾಗತೊಡಗಿದಂತೆ ಗಾಲಿಗಳು ದಡದಡಿಸುವ, ವೇಗ ಕಡಿಮೆ ಕಡಿಮೆಯಾಗುತ್ತ ವಿಮಾನ ಸರಿಯಾದ ಸ್ಥಳಕ್ಕೆ ಬಂದು ನಿಂತಿತು. ಜೊತೆಗಿದ್ದವರು ’ಅಬ್ಬಾ! ಸಧ್ಯ ವಿಮಾನಯಾನ`ಸಕ್ಸಸ್ ಎಂದರು. ಬೆಲ್ಟ್ ಬಿಚ್ಚಿ ಎಲ್ಲರೂ ಮಂದಸ್ಮಿತರಾಗಿ ವಿಮಾನದಿಂದ ಹ್ಯಾಂಡ್ ಬ್ಯಾಗೆಜ್ ಸಮೇತ ಹೊರಬಂದೆವು. ಕೊಳವೆ ಬೋಗಿಯಂತಿರುವ ಮಾರ್ಗದ ಮೂಲಕ ವಿಮಾನ ನಿಲ್ದಾಣದ ಕಟ್ಟಡದೊಳಗೆ ಹೋದೆವು.
ಅದು ದೆಹಲಿಯ ಡೊಮೆಸ್ಟಿಕ್ ಏರ್ಪೋರ್ಟ್. ಗೋವಾ ಏರ್ಪೋರ್ಟ್ ಗಳಂತ ಸ್ವಲ್ಪ ದೊಡ್ಡದು. ಎಲ್ಲರೂ ಒಂದೆಡೆ ಸೇರಿ ನಮ್ಮ ಬ್ಯಾಗೆಜ್ ಗಳೆಲ್ಲ ಯಾವ ನಂಬರಿನ ಸುತ್ತುವ ಪಟ್ಟಿ ಮೇಲೆ ಬರುತ್ತವೆ ಎಂಬುದನ್ನು ಸ್ಪೀಕರ್ ಮೂಲಕ ಬಿತ್ತರಿಸುತ್ತಿದ್ದುದನ್ನು ಆಲಿಸಿ, ಪಕ್ಕದಲ್ಲೇ ಇದ್ದ ಲಗೇಜ್ ಟ್ರೋಲಿಯೊಂದಿಗೆ ಆ ನಂಬರಿನ ಸುತ್ತುವ ಪಟ್ಟಿಯ ಜಾಗಕ್ಕೆ ಬಂದು ನಿಂತೆವು. ಸಕ್ಕರೆ ಚೀಲಗಳಂತೆ ಬಣ್ಣ-ಬಣ್ಣದ ಸೂಟ್ಕೇಸ್, ಏರ್ಬ್ಯಾಗ್, ಟ್ರೋಲಿ ಬ್ಯಾಗ್ ಗಳು ಸುತ್ತುತ್ತಿದ್ದವು. ಸುಮಾರು 50 ಅಡಿ ಉದ್ದ, ಒಂದು ಮೀಟರ್ ಅಗಲದ ಪಟ್ಟಿ ಅಡ್ಡ ಸಿಲಿಂಡರ್ನಾಕಾರದಲ್ಲಿ ತಿರುಗುತ್ತಿರುತ್ತದೆ. ಸುತ್ತುವ ಆ ಪಟ್ಟಿ ಮೇಲೆ ನಾವು ನಿಂತಲ್ಲೆ ನಮ್ಮ ಬ್ಯಾಗ್ ಬಂದ ತಕ್ಷಣವೇ ಬ್ಯಾಗನ್ನು ಎತ್ತಿ, ಎಳೆದುಕೊಳ್ಳಬೇಕು. ಸ್ವಲ್ಪ ತಡವಾದರೂ ಬ್ಯಾಗ್ ಮುಂದೆ ಸಾಗಿ ಹೋಗುತ್ತದೆ. ಹಾಗೇನಾದರೂ ಆದರೆ ಮತ್ತೇ ಒಂದು ಸುತ್ತು ತಿರುಗಿ ಬರೋವರೆಗೂ ಕಾಯಲೇಬೇಕು. ಮುಂದೆ ಓಡಿ ಹೋಗಿ ತೊಗೊಳ್ಳೋಣ ಅಂದ್ರೆ ಎಲ್ಲ ಬದಿಗೂ ಜನ ನಿಂತುಬಿಟ್ಟಿರುತ್ತಾರೆ. ಎಲ್ಲರೂ ಲಗೇಜ್ ಪಡೆದು ಟ್ರೋಲಿಗಳನ್ನು ತಳ್ಳಿಕೊಂಡು ಹೊರ ಬರುವ ಮಾರ್ಗದ ಮೂಲಕ ಬಂದೆವು.
ಒಂದು ವೇಟಿಂಗ್ ರೂಮ್ ನಲ್ಲಿ ಕುಳಿತೆವು. ಒಳಗೆಲ್ಲ ವಾತಾನುಕೂಲ ಇರುವುದರಿಂದ ಚಳಿ ಎನಿಸತೊಡಗಿತು. ಮೆಲ್ಲಗೆ ಎಲ್ಲರ ಸ್ವೆಟರ್, ಶಾಲ್ ಗಳು ಹೊರಬಂದು, ಮೈ ತಬ್ಬಿಕೊಂಡವು. ಎಲ್ಲರೂ ಅಲ್ಲಿ ಊಟ ಮುಗಿಸಿಯೇ ಇಂದಿರಾ ಗಾಂಧಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗೋಣ ಎಂದುಕೊಂಡು ಉಳಿದ ಚಪಾತಿ, ಪಲ್ಯ, ಮೊಸರನ್ನ ಹಂಚಿಕೊಂಡು ತಿಂದೆವು. ಕೆಲವರು ಕುರುಕು ತಿಂಡಿ ತಿಂದರು. ಬೇಕಾದವರು ಟೀ, ಕಾಫಿ ಏನೇನು ಬೇಕೋ ಅದನ್ನು ತೆಗೆದುಕೊಂಡರು. ಕೆಲವರು ಕಂಬದಲ್ಲಿರುವ ಸ್ವೀಚ್ಛ್ ಬೋರ್ಡ್ ಗೆ ಮೊಬೈಲ್ ಚಾರ್ಜಿಂಗ್ ಹಾಕಿ ಕಂಬಕ್ಕೆ ಆತು ನಿಂತುಕೊಂಡರು. ಅಲ್ಲೊಂದು ಸಣ್ಣ ಗಲಿಬಿಲಿ ಚಿಲಿಪಿಲಿ ಗದ್ದಲವೇ ಏರ್ಪಟ್ಟಿತ್ತು. ಹಾಗಾಗಿ airport ನ ಸಿಬ್ಬಂದಿಯವರು ನಮ್ಮತ್ತ ಪದೇ ಪದೇ ನೋಡತೊಡಗಿದ್ದರು.
ಅಂಥದ್ದರಲ್ಲಿ ಮಂಗಲರವರ ಬ್ಯಾಗ್ ನ ನಂಬರ್ ಕೀ ಬಿಚ್ಚಲೇ ಇಲ್ಲ. ಕೋಡ್ ಮರೆತು ಹೋಗಿತ್ತು. ಅಷ್ಟರಲ್ಲೆ ಸುಂದರ ಗುಜರಾತಿ ಜೋಡಿಯೊಂದು 8 ವರ್ಷದ ಮಗನೊಂದಿಗೆ ಬಂದಿತು. ಗುಜರಾತಿ ಸ್ಟೈಲ್ ನಲ್ಲಿ ಯುವತಿ ಉಟ್ಟ ಸೀರೆ ತುಂಬಾ ಗ್ರ್ಯಾಂಡಾಗಿತ್ತು. ಝಗಮಗಿಸುವ ಟಿಕಳಿ, ಕುಸುರಿ ಕೆಲಸ, ಬಣ್ಣಗಳ ಹೊಂದಾಣಿಕೆ, ತಲೆ ತುಂಬ ಹೊದ್ದ ಸೆರಗು ಅವಳ ಸೌಂದರ್ಯಕ್ಕೆ ಹೆಚ್ಚಿನ ಮೆರಗು ನೀಡಿತ್ತು. ಅದೇ ನಮ್ಮ ಗಮನ ಸೆಳೆದದ್ದು. ಬಂದವರೇ ತಮ್ಮ ಬ್ಯಾಗ್ ಬಿಚ್ಚಿ ಕೆಲವು ಬಟ್ಟೆ ತೆಗೆದು ನೇರ Wash room ಗೆ ಹೋದಳು. ಅವಳು ಮತ್ತು ವಸ್ತ್ರಾಲಂಕಾರ ಹಾಗೂ ಸೌಂದರ್ಯ ಮತ್ತೆ ನೋಡಬೇಕೆನಿಸುವಂತಿತ್ತು. ಹಾಗಾಗಿ ಕಣ್ಣುಗಳು ಅತ್ತಲೇ ಕಾಯುತ್ತಿದ್ದವು. ಅವಳು ಹೊರ ಬಂದಾಗ ಘನ ಆಶ್ಚರ್ಯ! ಹೊಸ ಅವತಾರವೇ ಮೂರ್ತಿವೆತ್ತಂತೆ. ಮೇಲೆ ಟೀಶರ್ಟ್, ಕೆಳಗೆ ಮಿಡಿ, ಕಟ್ಟಿದ ಮುಡಿ ಬಿಚ್ಚಿ, ಕಾಲಿಗೆ ಹೈಹೀಲ್ಡ್ ಬಂದಿದ್ದವು. ಆ ಥರದ ವೇಷ ಭೂಷಣ ಹೊಸದೇನೂ ಅಲ್ಲದಿದ್ದರೂ, ಭಾರತೀಯತೆ ಪಾಶ್ಚಾತ್ಯೀಕರಣ ಆಗುವ ರೀತಿ, ಸ್ಥಳ! ಒಂದು ಕ್ಷಣ ತಬ್ಬಿಬ್ಬುಗೊಳಿಸಿದವು. ನಾವು ನೋಡಲು ಹೋಗಿದ್ದು ಹೊಸ ಜಗತ್ತನ್ನಲ್ಲವೇ?


ಮೇಡಂ, ನಿಮ್ಮ ಪ್ರವಾಸ ಕಥನ ನಿನ್ನೆಯಿಂದ ಶುರುವಾಗಿದೆ. ಓದುತ್ತಿದ್ದೇನೆ. ನಿಮ್ಮ ಕಳಕಳಿ, ನಿರೀಕ್ಷೆ, ಕುತೂಹಲ, ಆತಂಕ, ಚಡಪಡಿಕೆಗಳೆಲ್ಲವೂ ಕುತೂಹಲಕಾರಿಯಾಗಿ ನಿರೂಪಿತವಾಗಿದೆ.ನಿಮ್ಮಎರಡನೆ ಕಂತು ಮುಂದಿನವಾರ ಎಂದು ತಿಳಿದಿದ್ದೆ.ಮರುದಿನವೇ ಬಂದಿದ್ದು ಖುಷಿಯಾಯ್ತು. ನಿಮ್ಮ ಪ್ರವಾಸ ಕಥನದೊಂದಿಗೆ, ನಮ್ಮ ಪ್ರಯಾಣವು ಸಹ.
thank u payana purnagolisi…..
ತುಂಬಾ ಆಪ್ತವಾಗಿ ಓದಿಸಿಕೊಂಡು ಹೋಗುತ್ತಿದೆ ಮೇಡಂ, ಕಾಯುವಂತೆ ಮಾಡಿದೆ.