ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೈಲ್ ನದಿಯ ಮಡಿಲಲ್ಲಿ : ಮಸಾಲ ಮಾರುಕಟ್ಟೆ ವೈಭೋಗ..

(ಇಲ್ಲಿಯವರೆಗೆ…)

ಮತ್ತೆ 6 ಗಂಟೆಗೆ `ವೇಕ್ ಅಪ್ ಕಾಲ್’, 7.30ಕ್ಕೆ ಅದೇ ರಸಪೂರಿತ ತಿಂಡಿ, ಎಲ್ಲವೂ ಪೂರ್ವ ನಿರ್ಧಾರದಂತೆ ಮುಗಿಸಿ ಇಂದು ನಡೆಯಲಿರುವ ನಮ್ಮ ಅಖಿಲ ಭಾರತೀಯ ಕವಿಯಿತ್ರಿ ಸಮ್ಮೇಳನದ ಉದ್ಘಾಟನೆಗಾಗಿ ಸಿದ್ಧರಾಗಲು ರೂಮ್ಗಳಿಗೆ ಹೋಗಿ, ಭಾರತದಿಂದ ತಂದಿದ್ದ ರೇಷ್ಮೆ ಸೀರೆಯನ್ನುಟ್ಟು ಸಿದ್ಧಳಾದೆ. ಎರಡನೆಯ ಮಹಡಿಯ ಎದುರಿನ ಭಾಗದಲ್ಲಿ ಒಳಗೆ ಒಂದು ವಿಶಾಲವಾದ ಸಭಾಂಗಣವಿತ್ತು. ಅಲ್ಲಿ ನಮ್ಮ ಸಮಾರಂಭ ಭರದಿಂದ ಏರ್ಪಟಾಗುತ್ತಿತ್ತು. ಅಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಟೇಬಲ್, ಕುರ್ಚಿ, ಒಂದು ಫೈಲ್, ಪೆನ್ಸಿಲ್, ರಬ್ಬರ್, ಬಿಸಲೆರಿ ಬಾಟಲ್ಗಳನ್ನಿಟ್ಟಿದ್ದರು. ಸರಿಯಾಗಿ 8.45ಕ್ಕೆ ಕಾರ್ಯಕ್ರಮ ಆರಂಭವಾಯಿತು. ಟರ್ಕಿ ಮತ್ತು ಭಾರತ ದೇಶದ ರಾಯಭಾರಿ ಎಚ್.ಇ.ವನ್-ಲಾಲ-ಹುಮಾ ಮುಖ್ಯ ಅತಿಥಿಗಳು.
ಇಸ್ತಾಂಬುಲ್ನ ಸಾಂಸ್ಕೃತಿಕ ಮಂತ್ರಾಲಯದ ಮಾಧ್ಯಮ ಪ್ರತಿನಿಧಿ (ಭಾರತೀಯರಾದ) ಸುಭಾಷ್ ಮತ್ತೋರ್ವ ಅತಿಥಿಯಾಗಿದ್ದರು. ಸಮಯಕ್ಕೆ ಸರಿಯಾಗಿ ಅತಿಥಿಗಳೆಲ್ಲ ಬಂದರು. ಅವರೊಟ್ಟಿಗೆ ಕೆಲವು ಸ್ಥಳೀಯ ಸಾಹಿತ್ಯಾಸಕ್ತರು, ಹೋಟೆಲ್ನ ಮ್ಯಾನೇಜರ್, ಅಸಿಸ್ಟಂಟ್ ಮ್ಯಾನೇಜರ್, ಮುಂತಾದವರೆಲ್ಲಾ ಪಾಲ್ಗೊಂಡಿದ್ದರು. ಕಾರ್ಯಕ್ರಮ ಸಡಗರದಿಂದ ನಡೆಯಿತು. `ಚೋಡೋ ಕಲ್ಕಿ ಬಾತೆ’ ಹಾಗೂ `ಹಮ್ ಹೊಂಗೆ ಕಾಮ್ ಯಾಬ್’ ಸಾಮೂಹಿಕ ಹಾಡುಗಳನ್ನು ಹೇಳಿದೆವು. ಇದೇ ಸಮಾರಂಭದಲ್ಲಿ ವನ್-ವಾಲ್ ಹುಮಾ ಅವರು ‘ಡಾಟರ್ ಆಫ್ ನೈಲ್” ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ನಾನು ಪ್ರಶಸ್ತಿ ಪಡೆಯುವಾಗ ಅದೊಂದು ಮರೆಯಲಾರದ ಕ್ಷಣ. ಇದೇ ವೇಳೆಯಲ್ಲಿ `ಮಿಸ್ ಎಐಪಿಸಿ ವರ್ಲ್ಡ್’ ಈ ಕಿರೀಟವನ್ನು ಸರಸ್ವತಿ ಚಿಮ್ಮಲಗಿಯವರಿಗೆ ತೊಡಿಸಲಾಯಿತು. ವನ್-ಲಾಲ್-ಹುಮಾ ಮಾತನಾಡಿ `ಎಐಪಿಸಿ ಎಲ್ಲ ಭಾರತೀಯ ಭಾಷೆ, ಸಂಸ್ಕೃತಿ, ಉಡುಗೆ, ತೊಡುಗೆ ಹಾಗೂ ಮಾನವೀಯತೆಯನ್ನು ಪ್ರತಿನಿಧಿಸುತ್ತದೆ. ಎಲ್ಲ ಭಾಷೆಗಳ ಸಮಾನತೆಯನ್ನು ಸಾರುವ ಮುಖೇನ ವಿಶ್ವ ಶಾಂತಿಯನ್ನು ಪ್ರಸಾರ ಮಾಡುತ್ತಿದೆ. ಶಾಂತಿ ಸಹನೆಗಳ ದೂತನಾಗಿ ಇದು ಕಾರ್ಯ ನಿರ್ವಹಿಸುತ್ತಿದೆ.’ ಎಂಬ ಅಭಿಪ್ರಾಯಪಡುತ್ತಾ ನಮ್ಮನ್ನೆಲ್ಲಾ ಹಾರೈಸಿದರು. ಪತ್ರಿಕಾ ಪ್ರತಿನಿಧಿ `ನಿಮ್ಮೆಲ್ಲರಿಂದ ಪ್ರಭಾವಿತನಾಗಿ, ನಾನೂ ಒಂದು ಕವನ ರಚನೆ ಮಾಡಿದ್ದೇನೆ’ ಎಂದು ಹಿಂದಿಯಲ್ಲಿ ಕವನ ಓದಿದರು.

`ಹೆಣ್ಣು ಮತ್ತು ಹುಣ್ಣಿಮೆಗಳ ನಿಯತಿ ಒಂದೇ ಇದೆ. ತನ್ನ ಸ್ವ ಅಸ್ತಿತ್ವವನ್ನು ಅರಳಿಸುತ್ತಾ, ಹಿಗ್ಗಿಸುತ್ತಾ ಪ್ರಕೃತಿಯನ್ನೂ ಬೆಳೆಸುತ್ತದೆ. ಇದು ಧರೆ ಮತ್ತು ವಸುಂಧರೆಯ ನಿಯತಿಯೂ ಆಗಿದೆ.’ ಎಂಬುದು ಅದರ ಅಂತರಾರ್ಥವಾಗಿತ್ತು. ಹೇಳುವುದರೊಂದಿಗೆ ನಮ್ಮನ್ನೆಲ್ಲಾ ಶುಭ ಕೋರಿದರು. ಅಲ್ಲಿ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಯಾವುದೇ ಭಾಷೆಯಲ್ಲಿ ಕವನ ಓದಿದರೂ ಅದರ ಸಾರವನ್ನು ಇಂಗ್ಲಿಷ್ನಲ್ಲಿ ಹೇಳಬೇಕು. ಇದರಿಂದಾಗಿ ಅಲ್ಲಿದ್ದವರೆಲ್ಲರೂ ಎಲ್ಲರ ಕವನಗಳನ್ನು ಸ್ವಲ್ಪವಾದರೂ ಅರ್ಥೈಸಿಕೊಳ್ಳುವಂತಾಯಿತು. ಇದಾದ ನಂತರ ಸಾಂಸ್ಕೃತಿಕ ಚಟುವಟಿಕೆಗಳು, ಇದರಲ್ಲಿ ಸಿಂಹ ಪಾಲು ಸರಸ್ವತಿ ಮತ್ತು ಇಂದುಮತಿಯರದ್ದು. ಅರೆ! ಸರಸ್ವತಿ ಏನು ಮಾಡ್ತಾರಪ್ಪಾ ಅಂತಿರಾ? ರಾಧಾ ಕೃಷ್ಣರ ಪ್ರಹಸನ. ಕೃಷ್ಣನ ಬಣ್ಣ ಮತ್ತು ನಗುವಿಗೆ ಸರಸ್ವತಿ ಚಿಮ್ಮಲಗಿಯವರದ್ದು ಹೇಳಿ ಮಾಡಿಸಿದ ರೂಪ. ಗಜದೇಹ ಆದರೇನು ಮಾಡಬೇಕೆನ್ನುವ ಹುರುಪು, ಹುಮ್ಮಸ್ಸು ಕಲಾಕೌಶಲ್ಯ ಮತ್ತು ಅದಕ್ಕೆ ತಕ್ಕ ವಸ್ತ್ರಾಲಂಕಾರ ಇದೆಯಲ್ಲ? ಅದು ಎಂಥವರನ್ನು ನಾಚಿಸುವಂಥದ್ದು. ಅಷ್ಟು ಸಿದ್ಧರಾಗಿಯೇ ಬಂದಿದ್ದರವರು. ರಾಧಾಕೃಷ್ಣನ ಸರಸ, ಸಲ್ಲಾಪ, ಚೇಷ್ಠೆಗಳನ್ನೊಳಗೊಂಡ ನೃತ್ಯ ಸುಮಾರು ಇಪ್ಪತ್ತು ನಿಮಿಷ ಅಡೆ ತಡೆ ಇಲ್ಲದೆ ಸಾಗಿತು. ಅಲ್ಲಿದ್ದ ಭಾರತೀಯರೊಂದಿಗೆ ಬಂದಂಥ ಗಣ್ಯಮಾನ್ಯರು ಮತ್ತು ಸ್ಥಳೀಯರು ತುಂಬಾ ಆಸ್ವಾದಿಸಿದರು. ಆನಂದಿಸಿದರು.
ಹನ್ನೆರಡು ಮೂವತ್ತಕ್ಕೆ ರಾಯಭಾರಿಗಳ ಪರವಾಗಿ ಒಂದು ಟೀ-ಪಾರ್ಟಿ ಕೊಡಲಾಯಿತು. 8 ತರಹದ ಕುರುಕುರು ತಿಂಡಿ; ಕಾಫೀ, ಟೀ, ಜ್ಯೂಸ್. ಅಲ್ಲಿಂದ ಬೀಳ್ಕೊಂಡು ನಾವು ಹೊರಟಿದ್ದು ಬಾಸ್ಪರಸ್ ಜಲಸಂಧಿಯತ್ತ. ಮಧ್ಯದಲ್ಲಿ ಇಸ್ತಾಂಬುಲ್ನ ಒಂದು ಮಾರ್ಕೆಟಿನಲ್ಲಿ ನಮ್ಮನ್ನಿಳಿಸಿ ಕೇವಲ ಒಂದು ಗಂಟೆ ಸಮಯ ನೀಡಿದರು. ಅಲ್ಲಿ 70% ಬಟ್ಟೆಗಳೇ ಇದ್ದವು. ಬೆಂಗಳೂರಿನ ಬೀದಿಗಳನ್ನು ನೆನಪಿಸುವ ಇಲ್ಲಿ ದೊಡ್ಡ ಅಂಗಡಿಗಳಿದ್ದವು. ಅಂಥ ಒಂದು ಅಂಗಡಿಯಲ್ಲಿ ಪೃಥ್ವಿ ಮತ್ತು ಪ್ರಜ್ಞಾ ಇಬ್ಬರೂ ಮಕ್ಕಳಿಗೂ 20 ಯುರೋ ಕೊಟ್ಟು ಎರಡೆರಡು ಜೊತೆ ಬಟ್ಟೆ, ಒಂದೊಂದು ಜಾಕೇಟ್ ಖರೀದಿಸಿದೆ. 50 ಯುರೋ ಸೆಂಟ್ (50 ಪೈಸೆ ಇದ್ದಂತೆ) ಅಂದರೆ ಅರ್ಧ ಯುರೋ ಕೊಟ್ಟು ತಿಳಿ ಗುಲಾಬಿ ಬಣ್ಣದ ನೇಲ್ ಪಾಲಿಶ್ ಖರೀದಿಸಿದೆ. ಸರೋಜಾ ಟೀಶರ್ಟ್ ಖರೀದಿಸಿದರೆ, ಸರಸ್ವತಿ ಮುಕ್ಕಾಲು ಅಂಗಡಿಯನ್ನೆ ಖರೀದಿಸಿದರು. ಬ್ಯಾಗ್ ಹೊರುವವರಾರು? ನಾನೊಮ್ಮೆ ಸರೋಜಾ ಒಮ್ಮೆ ಹಿಡಿದುಕೊಳ್ಳುತ್ತಾ ಬರುವಾಗ ಸ್ಥಳೀಯ ಜನರು ಸಾಮೂಹಿಕ ಘೋಷಣೆ ಕೂಗುತ್ತಿರುವುದನ್ನು ಕೇಳಿ ಒಂದು ಕ್ಷಣ ಹಿಂಜರಿಕೆಯಾದರೂ ಆ ಹರತಾಳದ ಮೆರವಣಿಗೆ, ಗದ್ದಲವಿಲ್ಲದೆ ಘೋಷಣೆಗಳೊಂದಿಗೆ ಸಾಗಿತ್ತು. ಅಂತೂ ಸರಸ್ವತಿ ಚಿಮ್ಮಲಗಿಯವರೊಂದಿಗೆ ಗಜಗಮನೆಯರಾಗಿ ಬಂದು ಕೋಚ್ ಏರಿದೆವು. ಊಟ ಮುಗಿಸಿ ನೇರವಾಗಿ ಬಂದದ್ದು ಬಾಸ್ಪರಸ್ನ ತೀರಕ್ಕೆ.
ಬಾಸ್ಪರಸ್ ಜಲಸಂಧಿ (Bosporus Striat)
ಈ ಜಲಸಂಧಿ ಉತ್ತರ ದಕ್ಷಿಣಗಳ ಮಧ್ಯ 31 ಕಿ.ಮೀ (17 ನಾಟಿಕಲ್ ಮೈಲ್) ಉದ್ದವಾಗಿದ್ದು, ದಕ್ಷಿಣ ಪ್ರದೇಶದಲ್ಲಿ 2826 ಮೀ. (1,526 ನಾ. ಮೈಲ) ಅಗಲ ಹೊಂದಿದ್ದರೆ, ಉತ್ತರ ಪ್ರದೇಶದಲ್ಲಿ 3329 ಮೀ (1.798 ನಾ. ಮೈಲ) ಅಗಲ ಹೊಂದಿದೆ. ಈ ಜಲಸಂಧಿಗೆ ಬಾಸ್ಪರಸ್ ಎಂದು ಹೆಸರು ಏಕೆ ಬಂದಿತು? ಎಂಬುದಕ್ಕೆ ಗ್ರೀಕ್ ಪುರಾಣಗಳಲ್ಲಿ ಒಂದು ದಂತಕತೆಯೇ ಇದೆ. ದೇವರ ದೇವನೆನಿಸಿದ ಜ್ಯೊಸ್ (Jeus)ನು, ಅರ್ಗೊಸ್ (Argos)ರಾಜನ ಮಗಳಾದ ಅಯೋ(Io)ಳೊಂದಿಗೆ ಪ್ರೇಮದಲ್ಲಿ ಸಿಲುಕಿ, ಅಯೋ ಗರ್ಭಿಣಿಯಾದಾಗ, ತನ್ನ ಹೆಂಡತಿ ಹೇರಾ(Hera)ಳ ಕೆಟ್ಟ ಕ್ರೌರ್ಯಕ್ಕೆ ಹೆದರಿ ಪ್ರಿಯತಮೆ ಅಯೋಳನ್ನು ಆಕಳಾಗಿ ರೂಪತಾಳುವಂತೆ ಮಾಡಿ, ಅಡಗಿಸಿದನು. ಇದನ್ನು ತಿಳಿದ ಹೇರಾ ಹಾರುಗುದುರೆಯಾಗಿ ಆಕಳು ನಿಂತಲ್ಲಿ ನಿಲ್ಲದಂತೆ, ಕುಂತಲ್ಲಿ ಕೂಡ್ರದಂತೆ ಮಾಡಿ ಕೂಳುಗೇಡಿಯಾಗಿಸಿದಳು. ಹೀಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಆಕಳು ತಪ್ಪಿಸಿಕೊಳ್ಳುತ್ತಿರುವಾಗ ಇಸ್ತಾಂಬುಲ್ನ ಈ ಇಕ್ಕಟ್ಟು (ಜಲಸಂಧಿ) ಪ್ರದೇಶವನ್ನು ಹಾಯ್ದು ಹೋಯಿತು [ಅದರಿಂದ ಇಸ್ತಾಂಬುಲ್ ಜಲಸಂಧಿಗೆ `ಬಾಸ್ಪರಸ್’ ಎಂಬ ಹೆಸರು ಬಂದಿತು] ಅಯೋ, ಕೆರಾಸ್ (ಈಗಿನ ಹ್ಯಾಲಿಕ್(Halic)ಬಂದರು) ಎಂಬಲ್ಲಿ ಕೇರೋಸ್ಸಾ(Keroessa)ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಮುಂದೆ ಕೇರೊಸ್ಸಾ ಸಮುದ್ರ ದೇವತೆಯಾದ ಪೊಸೈಡಾನ್(Poseidon)ನನ್ನು ಮದುವೆಯಾದಳು. ಇವರಿಗೆ ಹುಟ್ಟಿದ ಮಗನೇ ಬೈಜಾಸ್(Byzas)ಈತ ಬೈಜಾಂಟಿಯಂ ನಗರವನ್ನು ಸ್ಥಾಪಿಸಿ, ಈ ಜಲಸಂಧಿಗೆ `ಬಾಸ್ಪರಸ್’ ಎಂದು ಹೆಸರಿಟ್ಟನು. ಹ್ಯಾಲಿಕ್, ಮೊದಲ ನಗರದ ಪ್ರಕೃತಿದತ್ತ ಬಂದರಾಗಿತ್ತು. ಎರಡು ಬದಿಗಳನ್ನು ಸೇರಿಸುವ ಹೊಸ ಗಲಾಟಾ ಸೇತುವೆ, ಉಂಕಪಾನಿ ಸೇತುವೆ ಮತ್ತು ಅಟಾಟುರ್ಕ ಸೇತುವೆಗಳು ಈ ಬಂದರಿನ ಮೇಲೆ ಸ್ಥಿತಗೊಂಡಿವೆ.
ಈ ಬಾಸ್ಪರಸ್ ಜಲಸಂಧಿಗೆ ಕಟ್ಟಲಾದ ಮೊದಲ ಸೇತುವೆ `ಬಾಸ್ಪರಸ್ ಸೇತುವೆ’. ಈ ಬಾಸ್ಪರಸ್ ಬಹಳ ಮಹತ್ವ ಪೂರ್ಣವಾದ ಸ್ಥಳ. ಬಾಸ್ಪರಸ್ ಜಲಸಂಧಿಯ ಮೂಲಕ ಕಪ್ಪು ಸಮುದ್ರ, ಮರ್ಮೋರಾ ಸಮುದ್ರವನ್ನು ಸೇರುತ್ತದೆ. ಅಂದರೆ ಕಪ್ಪು ಸಮುದ್ರ ಮತ್ತು ಮರ್ಮೋರಾ ಸಮುದ್ರಗಳ ಸಂಗಮತಾನ ಬಾಸ್ಪರಸ್. ಜೀವನ ಧನ್ಯ ಎನಿಸಿತು.
`ಕಪ್ಪು ಸಮುದ್ರ’ ಎಂದರೆ ನೀರು ಕಪ್ಪಾಗಿಲ್ಲ. ಸಮುದ್ರದ ಆಳದಲ್ಲಿ ನೀರು ಕೆಲವು ಕಡೆಗೆ ಇದ್ದಂತೆಯೇ ಇರುವುದರಿಂದ, ಅದು ಇತರ ನೀರಿನಂತಿಲ್ಲದೆ ಸ್ವಲ್ಪ ಹೆಚ್ಚು ನೀಲಿ ಬಣ್ಣವನ್ನು ಹೊಂದಿದೆ. ಸಮುದ್ರದಲ್ಲಿ ಪ್ರಕ್ಷುಬ್ಧತೆ, ಮೋಡ ಕವಿದ ವಾತಾವರಣ ಸದಾ ಇರುವುದರಿಂದ, ಈ ಸಮುದ್ರದ ಮಾರುತ ಕಂಡು ಹೆದರಿದ ತುರ್ಕಿ ಜನ ಇದನ್ನು `ಕಪ್ಪು ಸಮುದ್ರ’ ಎಂದು ಕರೆದರು ಎಂಬ ಹೇಳಿಕೆ ಇದೆ. ಏನೇ ಆದರೂ ಪ್ರಕೃತಿಯ ಮುಂದೆ ಮಾನವನ ಕಲ್ಪನೆ, ಸಾಧನೆ ಎಷ್ಟರದ್ದು? ನೀರ ಮೇಲಿನ ಹೆಜ್ಜೆ!. ಚಂದ್ರ ಮೋಡದ ಮರೆಯಿಂದ ನಮ್ಮನ್ನೇ ನೋಡುತ್ತಿದ್ದ.
ಕ್ರೂಜರ್ನಲ್ಲಿ ಏರುವಾಗ ಬಹಳೇ ಭಯವೆನಿಸಿತು. ನಿಂತಿದ್ದರೂ ತೇಲುತ್ತಿದ್ದಂತೆ ಭಾಸವಾಗುವ ಕ್ರೂಜರ್ನಲ್ಲಿ ಕಾಲಿಡುವಾಗ ಹೆದರಿ, ಸಿಬ್ಬಂದಿ ಸಹಾಯದಿಂದ ಏರಿದೆವು. ನೂರು ಜನರ ಸಾಮಥ್ರ್ಯವಿರುವ ಆ ಕ್ರೂಜರ್ನಲ್ಲಿ ನಾವು ಇಪ್ಪತ್ಮೂರು ಜನ ಮಾತ್ರ ಇದ್ದೆವು. ಹೊಟ್ಟೆಯೊಳಗೋ ಸಮುದ್ರದ ಸರಭರ, ತಳಮಳ; ಕ್ರೂಜರ್ ಮುಂದೆ ಹೋದಂತೆ ಅಂಜಿಕೆ ಹೇಳದೆ ಹೊರಟು ಹೋಗಿತ್ತು. ರೋಚಕ ಪರ್ಯಟನ. ಗಾಳಿ ಮರ್ಜಿ ಕಾಯ್ದು ಸಾಗರ ಪರ್ಯಟನ ಮಾಡಿ, ಹೊಸ ಸಂಶೋಧನೆಯನ್ನೇ ಮಾಡಿದ ವಾಸ್ಕೋ-ಡಿ-ಗಾಮಾ ನೆನಪಾಗುತ್ತಿದ್ದ. ಸಮುದ್ರದ ಇಕ್ಕೆಲದಲ್ಲಿ ಪ್ರಾಚೀನ ಗೋಡೆಗಳು, ಕೋಟೆಗಳು, ಶಾಲೆಗಳು, ಬಂದರುಗಳು; ಎಲ್ಲವೂ ಹೊಸ ಜಗತ್ತಿಗೆ ಕರೆದೊಯ್ದಿದ್ದವು. ಕೊರೈ ಒಂದೊಂದೆ ಮಾಹಿತಿ ಕೊಡುತ್ತಿದ್ದರೂ ಕ್ರೂಜರ್ನ ಸದ್ದಿಗೆ ಸ್ಪಷ್ಟವಾಗಿ ಕೇಳುತ್ತಿರಲಿಲ್ಲ.
ಕ್ರೂಜರ್ ಪಶ್ಚಿಮಾಭಿಮುಖವಾಗಿ ಸಾಗಿತ್ತು. ಎಡಬದಿಗೆ ಒಂದು ಅರಮನೆ ಕಂಡಿತು. ಕೊರೈ ಹೇಳಿದರು-ಇದು ಸಿರಾಗನ್ ಅರಮನೆ (CIRAGAN); ಸುಲ್ತಾನ ಅಬ್ದುಲ್ ಜೇಬ 1863-1866ರ ಮಧ್ಯದಲ್ಲಿ ಈ ಅರಮನೆ ಕಟ್ಟಿಸಿದನು. ಇದರ ನೀಲನಕ್ಷೆ ಮತ್ತು ಯೋಜನೆಯನ್ನು ನಿಕೋಗಾಸ್(Nikogasf Balyan)ಮಾಡಿದರೆ ಇದರ ಕಟ್ಟುವ ಕೆಲಸವನ್ನು ಆತನ ಮಕ್ಕಳಾದ ಸರ್ಕಿಸ್ (Sarkis)ಮತ್ತು ಅಗೋಪ್(Agop Balyan)ಮಾಡಿದರು. ಐತಿಹಾಸಿಕ ಘಟನೆಯೊಂದಕ್ಕೆ ಸಾಕ್ಷಿಯಾದ ಈ ಭವ್ಯ ಅರಮನೆ 1910ರಲ್ಲಿ ಬೆಂಕಿಗಾಹುತಿಯಾಗಿತ್ತು. ಬಹುದಿನಗಳಿಂದ ಬಳಸದೆ ಉಳಿದ ಕಾರಣ, ಇತ್ತೀಚೆಗೆ ಅದನ್ನು ಹೋಟೆಲ್ ಆಗಿ ಪರಿವತರ್ಿಸಲಾಗಿದೆ. ಇಲ್ಲಿ ವಾಸಿಸಲು ಒಂದು ದಿನಕ್ಕೆ ಅದರ ಬೆಲೆ 2,500 ಯುರೋ ಅಂದರೆ 1,50,000 ರೂಪಾಯಿಗಳು. ಅಬ್ಬಾ! ಸದ್ಯ ಕೇಳುತ್ತಿರುವುದೇ ಸಾಕು ಎನಿಸಿತು.
ಮುಂದೆ ಸಾಗಿದಂತೆ ಎರಡು ದೊಡ್ಡ ಖಂಡಗಳ ಸಂಗಮ; ಒಂದು ಏಷ್ಯಾ, ಇನ್ನೊಂದು ಯುರೋಪ ದಡದಲ್ಲಿರುವ ಸಿಮೆಂಟ್ ಕಾಡು ಮತ್ತು ಹಸಿರು ಬೆಟ್ಟಗಳು, ಕಪ್ಪು ಸಮುದ್ರದೊಂದಿಗೆ ವೈರುಧ್ಯ ಬಣ್ಣಗಳೊಂದಿಗೆ ಸ್ಪರ್ಧೆಗಿಳಿದಿದ್ದವು. ಲಾರಿ ಸರ್ ಈ ಚಿತ್ರಣ ಸ್ವಿಟ್ಝ್ರ್ಲಂಡ್ನಲ್ಲಿಯ ಚಿತ್ರಗಳನ್ನು ಕಂಡ ಹಾಗೇ ಎನಿಸುತ್ತದೆ ಎಂದು ಹೇಳಿದರು. ಕಣ್ಣು ಕ್ಯಾಮೆರಾದಲ್ಲಿ ಇಂಚಿಂಚೂ ಬಿಡದೆ ಹಿಡಿದಿಟ್ಟೆ.
ಬಾಸ್ಪರಸ್ ಸೇತುವೆ(Bridge)
ಇದು ಆಗಾಧ ರೂಪ ಸೌಂದರ್ಯದಿಂದ ಹಗಲು ರಾತ್ರಿ ಎನ್ನದೆ ತನ್ನನ್ನು ಸಮರ್ಪಿಸಿಕೊಳ್ಳುತ್ತ ಏಷ್ಯಾ-ಯುರೋಪ್ ಖಂಡಗಳಿಗೆ ಕೊಂಡಿಯಾಗಿ ಮೈಚಾಚಿದೆ ಈ ಅನಿಶ್ಚಿತ ತೂಗು ಸೇತುವೆ `ಬಾಸ್ಪರಸ್’.

ಪೂರ್ವ ರೋಮನ್ ದೊರೆ, ಬೈಜಂಟೈನ್ ದೊರೆ ಹಾಗೂ ಸಾರ್ವಭೌಮ ಅಟ್ಟೊಮನ್ ತುರ್ಕ ಚಕ್ರವರ್ತಿ ಈ ಮೂವರ ಚಕ್ರಾಧಿಪತ್ಯಕ್ಕೆ ಅಥಿತೇಯವಾಗಿ ಇಸ್ತಾಂಬುಲ್ ನೆಲೆನಿಂತದ್ದು ಈ ಸೇತುವೆಯ ರೇಷ್ಮೆ ದಾರಿ(Silk Road)ಯಿಂದಾಗಿಯೇ. ಎಂಥ ಅನ್ವರ್ಥನಾಮ! ಸೇತುವೆ ಆದ್ದರಿಂದ ಸಿಲ್ಕ್ನಷ್ಟೇ ನಾಜೂಕು. ಅಷ್ಟೇ ಅತುಲ್ಯ, ಅಮೂಲ್ಯ.
ಇದು ಇಸ್ತಾಂಬುಲ್ನ ಮೊದಲ `ಬಾಸ್ಪರಸ್ ಸೇತುವೆ’ ಕೂಡಾ ಆಗಿದೆ. (ಟರ್ಕಿಶ್ ನಲ್ಲಿI BogaZici Koprusu ಎನ್ನುತ್ತಾರೆ.) ಈ ಜಲಸಂಧಿಗೆ ಟರ್ಕಿಯೇ ತಿರುವು ನೀಡುತ್ತದೆ. ಕಬ್ಬಿಣದ ಹೆಬ್ಬಾಗಿಲು ಹಾಗೂ ಕೊಕ್ಕೆಗಳುಳ್ಳ ಬಾಗಿದ ಅಂಚು ಅಥವಾ ಕಟ್ಟುಗಳೊಂದಿಗೆ ಗುರುತ್ವಾಕರ್ಷಣೆಯ ಆಧಾರದ ಮೇಲೆ ಲಂಗರುಗೊಂಡಿರುವ ಇದರ ಮೇಲಂತಸ್ತನ್ನು ಅಂಕುಡೊಂಕಾದ ಕಬ್ಬಿಣದ ಹಗ್ಗದಿಂದ ಸಿಕ್ಕಿಸಿ ತೂಗುಬಿಡಲಾಗಿದೆ. ಇದರ ಒಟ್ಟು ಉದ್ದ 1560 ಮೀ, ಅಗಲ 39 ಮೀಗಳು. ಸೇತುದಾರಿಯಿಂದ 105 ಮೀ ಎತ್ತರದಲ್ಲಿದ್ದರೆ ಸಮುದ್ರ ಮಟ್ಟದಿಂದ 64 ಮೀ. ಎತ್ತರದಲ್ಲಿದ್ದು ರಹದಾರಿಯನ್ನು ಮುಕ್ತಗೊಳಿಸಿದೆ. ಇದು ಜಗತ್ತಿನಲ್ಲಿಯೇ 13ನೇ ಸ್ಥಾನದಲ್ಲಿದೆ. ಇದು `ಎಮ್’ ಆಕಾರದಲ್ಲಿದೆ. ಮೆಹಮಥ್ ಸುಲ್ತಾನ್ ತನ್ನ ಆಳ್ವಿಕೆಯಲ್ಲಿ ಇದನ್ನು ನವೀಕರಣ ಮಾಡುವಾಗ ‘ಒ’ ಅಕ್ಷರದಾಕಾರದಲ್ಲಿರುವಂತೆ (ತನ್ನ ಹೆಸರಿನ ಮೊದಲ ಅಕ್ಷರ) ಬದಲಾವಣೆ ಮಾಡಿದನಂತೆ.
ಪತೇಹ ಸುಲ್ತಾನ ಅಹೆಮೆಥ್ ಸೇತುವೆ
(Fatih Sultan Ahemet Bridge)
ಇದು ಬಾಸ್ಪರಸ್ ಜಲಸಂಧಿಗಿರುವ ಎರಡನೆಯ ಸೇತುವೆ. ಕಬ್ಬಿಣದ ವಸ್ತುಗಳನ್ನೇ ಬಳಸಿ ನಿರ್ಮಿಸಿರುವ ಇದರ ಒಟ್ಟು ಉದ್ದ 1510 ಮೀ (4954 ಅಡಿ), ಅಗಲ 39 ಮೀ, (128 ಅಡಿ), 1986ರಲ್ಲಿ ಫ್ರೀಮನ್ ಪ್ಲೆಕ್ಸ್ ಮತ್ತು ಸಂಗಡಿಗರಿಂದ ನಿರ್ಮಿಸಲು ಆರಂಭಿಸಿ 3 ಜುಲೈ 1988ರಲ್ಲಿ ಮುಕ್ತಾಯಗೊಂಡಿದೆ. ಇದು ಬಾಸ್ಪರಸ್ ಸೇತುವೆಯ ಉತ್ತರಕ್ಕಿದೆ.
ಮೊದಲು ಬಾಸ್ಪರಸ್ ಸೇತುವೆಯ ರಹದಾರಿಯನ್ನೇ ಹಾಯ್ದು, ಸುಲ್ತಾನ ಮೆಹೆಮೆಥ್ ಸೇತುವೆ ತಲುಪುವ ಮೊದಲು, ಮಧ್ಯದಲ್ಲಿ ನಮ್ಮ ಕ್ರೂಜರ್ ಇದ್ದಾಗ, ಎರಡು ಸೇತುವೆಗಳ ನಡುವೆ ನನ್ನ ಮನಸ್ಸು ತೂಗುಯ್ಯಾಲೆಯಾಯಿತು. ಎರಡು ಸೇತುವೆಗಳ ಮೇಲೆ ಹಾಯ್ದು ಹೋಗುವ ವಾಹನಗಳು ನಮಗೆ ಆಟಿಕೆಗಳಂತೆ ಭಾಸವಾಗುತ್ತಿದ್ದವು. ಸೇತುವೆಗೆ ಕಟ್ಟಲಾದ ಕೆಂಪು ಧ್ವಜ ಪಟಪಟನೆ ಹಾರುತಿತ್ತು.
ಇಸ್ತಾಂಬುಲ್ ಗೋಡೆ ಮತ್ತು ಯಡಿಕುಲೆ ಕೋಟೆ
(Istanbul wall and yedikule fortress)
ಕ್ರೂಜರ್ ತೇಲುತ್ತ ಸಾಗುತ್ತಿತ್ತು. ಐತಿಹಾಸಿಕ ದೀಪಕಲ್ಪದಂತೆ ವಿಶಾಲ ಗೋಡೆಗಳಿಂದ ಸುತ್ತುವರೆದ ನಗರ ಇಸ್ತಾಂಬುಲ್ನಲ್ಲಿ ಥಿಯೋಡೋಸಿಸ್ನ (408-483) ಆಳ್ವಿಕೆಯ ಅವಧಿಯಲ್ಲಿ ಈ ಮಹಾಗೋಡೆಗಳನ್ನು ಕಟ್ಟಲಾಗಿದೆ. ಅಂಥ ಒಂದು ಗೋಡೆ ಕ್ರೂಜರ್ ಸಾಗಿದ ದಾರಿಯ ಎಡಬದಿಯಲ್ಲಿ ಕಾಣುತ್ತಿತ್ತು. 21 ಕಿ.ಮೀ ನಷ್ಟು ಉದ್ದವಿರುವ ಈ ಗೋಡೆಯನ್ನು ಭೂಗೋಡೆಗಳು, ಮರ್ಮೋರಾ ಸಮುದ್ರದ ಗೋಡೆಗಳು ಹಾಗೂ ಗೋಲ್ಡನ್ ಹಾರ್ನ್ (ಬಂದರು) ಗೋಡೆಗಳು ಎಂದು ಮೂರು ಭಾಗಗಳಲ್ಲಿ ವಿಂಗಡಿಸಿ ನಿರ್ಮಿಸಲಾಗಿದೆಯಂತೆ. ಇದಕ್ಕೆ 50 ಕ್ಕಿಂತ ಹೆಚ್ಚು ಪ್ರವೇಶ ದ್ವಾರಗಳು 300 ಕೋಟೆ ಬುರುಜಗಳಿರುವವು. ಸಿಮೆಂಟ್ ಕಾಡು, ಹಸಿರು ಕಾಡುಗಳೆರಡು ಬಾಸ್ಪರಸ್ ಸಮುದ್ರದೊಡನೆ ಸ್ಪರ್ಧೆಗಿಳಿದಂತೆ ದೃಷ್ಟಿ ಹರಿದಲ್ಲೆಲ್ಲ ಹಬ್ಬಿಕೊಂಡಿದ್ದವು. ನಾವು ಕುಳಿತ ಕ್ರೂಜರ್ ಓಲಾಟಕ್ಕೆ ಓಲಾಡುತ್ತಾ ಗಿರಕಿ ಹೊಡಿಸುತ್ತಿದ್ದರೆ, ಎರಡು ಬದಿಯ ಕಾಡು ಊರುಗಳು ಓಲಾಡುತ್ತಿರುವಂತೆ ಭಾಸವಾಗುತ್ತಿತ್ತು. ಕಪ್ಪು ಸಮುದ್ರದ ದಂಡೆಗುಂಟ ಮನೆಗಳನ್ನು ಹೊತ್ತ ಬೆಟ್ಟ ತೇಲುತ್ತಿರುವಂತೆ ಕಾಣುತ್ತಿತು. ಕ್ರೊಜರ್ ತಿರುಗಿಸಲು ದಡದತ್ತ ಸರಿಯುತ್ತಿರುವಷ್ಟರಲ್ಲೇ ಸಮುದ್ರ ಹಕ್ಕಿಯೊಂದು(Seagull)ಹಾರಿ ಬಂದು ಶಾಂತವಾಗಿ ಓಲಾಡುವ ನೀರಿನ ಮೇಲೆ ಕುಳಿತಿತ್ತು. ಶುಭ್ರವದನೆಯಾದ ಆ ಹಕ್ಕಿಗೆ ತಿಳಿಗೆಂಪು ಬಣ್ಣದ ಮಾಟವಾದ ಕೊಕ್ಕು, ಕಂದು ಬಣ್ಣದ ಕಣ್ಗಳಿಂದ ಪಿಳಿ ಪಿಳಿ ನೋಡುತ್ತಾ ಕೀಟಗಳಿಗೆ ಹುಡುಕಾಡುತ್ತಿತ್ತು. ನೀರಿನಲ್ಲಿ ತೇಲುತ್ತಾ, ಓಲಾಡುತ್ತ ನೀರಿನೊಂದಿಗೆ ಏರಿ ಇಳಿಯುತ್ತಿದ್ದ ಮೈತುಂಬಿ, ಮಾಟವಾದ ಹಕ್ಕಿ ನೋಡುವ ಕಣ್ಣಿಗೆ ಹಬ್ಬವಾಯಿತು.
ಕ್ರೂಜರಿನಲ್ಲಿ ಕುಳಿತು ಖುಷಿಯಿಂದ ಬೀಗುತ್ತಿದ್ದ ನನಗೆ `ನನ್ನ ಹಾಗೆ ತೇಲು ಬಾ ನೋಡೋಣ’ ಎಂದು ಹಕ್ಕಿ ಹೇಳಿದಂತೆನಿಸಿ ಎಷ್ಟು ಮುಂದುವರೆದರೇನು? ಪ್ರಕೃತಿಯ ಮುಂದೆ ಮನುಜ ಎಂದೆಂದಿಗೂ ಕುಬ್ಜನೆ! ಎಂದುಕೊಂಡೆ. ಸಹ ಕ್ರೂಜರ್ಗಳು ಪರ್ಯಟನ ಮಾಡುತ್ತಿದ್ದವು. ಎರಡು ಖಂಡಗಳ ನಡುವೆ ಜಲಸಂಧಿಯ ಆಳ ಸಮುದ್ರದ ಮೇಲೆ ತೇಲುತ್ತಿರುವುದನ್ನು ಕಣ್ಮುಚ್ಚಿ ಅನುಭವಿಸಿದೆ. ಎರಡು ಕಿ.ಮೀ ಅಂತರದಲ್ಲಿ ಎರಡು ಬೃಹದಾಕಾರದ ಸೇತುವೆಗಳು, ಪ್ರಕೃತಿ ಸೃಷ್ಟಿಸಿದ ಉಯ್ಯಾಲೆಗಳಂತೆ ಕಾಣುತ್ತಿದ್ದವು. ದೂರದಿಂದ ಬಾಸ್ಪರಸ್ ಸೇತುವೆ ನೋಡುವಾಗ ಆಟಿಗೆಯ ಕಾರು, ಬಸ್ ಹಾಗೂ ವಾಹನಗಳು ಓಡಾಡಿದಂತೆ ಕಾಣುತ್ತಿದ್ದವು. ಆ ಸೇತುವೆ ಕೆಳಗಿನಿಂದ ಹಾಯ್ದು ಕ್ರೂಜರ್ ಮುಂದೆ ಸಾಗಿದಂತೆ ಹಿಂದೊಂದು ಮುಂದೊಂದು ಮಹಾ ಸೇತುವೆಗಳು. ಬಲಕ್ಕೊಂದು ಎಡಕ್ಕೊಂದು ಖಂಡಗಳು, ಕೆಳಗೆ ಸಮುದ್ರ ಸಂಗಮ, ಮೇಲೆ ಅಖಂಡ ಆಗಸ. ಆಗಸದಲ್ಲಿ ಮುಂದೆ ಸೂರ್ಯ, ಹಿಂದೆ ಚಂದ್ರ! ಸೂರ್ಯನ ಹಿತವಾದ ಬಿಸಿ, ತಂಪು ತೀಡುವ ನೀರ ಮೇಲಿನ ಗಾಳಿ… ಅಹೋ ಭಾಗ್ಯ! ಎಲ್ಲ ಬಂಧನಗಳ ಬಿಡಿಸಿಕೊಂಡು ಅಧಮ್ಯ ಉತ್ಸಾಹದಲ್ಲಿ ನನ್ನತನವನ್ನು ಮರೆತು ಅಪ್ರತಿಮಳಾಗಿದ್ದೆ. `ವಿದ್ಯಾ, ಸಾಗರ ಕೀ ಯಾದ್ ಆಗಯಿ’ ಎಂದ ಲಾರಿಸರ್ ಧ್ವನಿ ಕೇಳಿ ಎಚ್ಚೆತ್ತು ಆಳ ನಿದ್ದೆಯಿಂದ ತಟ್ಟನೆ ಎದ್ದಂತೆ ಅವರನ್ನೇ ನೋಡತೊಡಗಿದೆ. ಸರ್ ನಕ್ಕು ಬಿಟ್ಟರು. `ಸರ್ ಖುಷಿಯನ್ನು ಆಸ್ವಾದಿಸುತ್ತಾ ಇದ್ದೀನಿ’ ಎಂದೆ. ಎರಡು ಸ್ಥಳಗಳನ್ನು, ಎರಡು ಊರುಗಳನ್ನು, ಎರಡು ತಾಲೂಕು, ಜಿಲ್ಲೆಗಳನ್ನು, ಎರಡು ರಾಜ್ಯಗಳನ್ನು ಸೇರಿಸುವ ಸೇತುವೆ ನೋಡಿದ್ದೆ. ಎರಡು ದೇಶಗಳನ್ನ ಸೇರಿಸುವ ಸೇತುವೆಯನ್ನ ದೂರದರ್ಶನದಲ್ಲಿ ನೋಡಿದ್ದೆ. ಆದರೆ ಎರಡು ಖಂಡಗಳನ್ನು ಸೇರಿಸುವ ಸೇತುವೆ ಮತ್ತು ಜಲಸಂಧಿಯನ್ನು ಈ ಮೊದಲು ನೋಡಿಯೇ ಇರಲಿಲ್ಲ. ಇದು ಕಟ್ಟ ಕಡೆಯ ಸಾಧ್ಯತೆಯೂ ಹೌದು. ಏಕೆಂದರೆ ಖಂಡಗಳಿಗಿಂತ ಬೃಹತ್ ಧ್ರುವಗಳು ಇನ್ಯಾವುವಿವೆ? – ಪ್ರಕೃತಿ ಆದ್ಯಂತಗಳಿಲ್ಲದ ತನ್ನ ಪಯಣದಲ್ಲಿ ಅಲ್ಲಲ್ಲಿ ಇಂಥ ಸ್ವರ್ಗ ಲೋಕದ ರಮ್ಯತಾನವನ್ನು ಸೃಷ್ಟಿಸಿದೆ. ನೋಡುವ ಹೃದಯ ಮನಸ್ಸುಗಳು ಬೇಕು ಅಷ್ಟೇ. ಇಪ್ಪತ್ತೆರಡು ಕ್ಯಾಮರಾ ಕಣ್ಣುಗಳು ಎಷ್ಟು ಸಲ ಕ್ಲಿಕ್ಕಿಸಿದರೇನು, ತುಂಬಿಕೊಳ್ಳಬಲ್ಲವೆ ಸಮುದ್ರ ಕೊಡದಲ್ಲಿ? ಕ್ರೂಜರ್ ಮರಳಿ ಮೂಲಸ್ಥಳದತ್ತ ಬರತೊಡಗಿತು. ಪಕ್ಕದಲ್ಲಿ ಬಂದ ಕ್ರೂಜರ್ನಲ್ಲಿಯ (ಟರ್ಕಿಗಳಂತೆ ಇದ್ದರು) ಜನ ಹೋ… ಎನ್ನುತ್ತ ಇಂದಿಯಾ, ಇಂದಿಯಾ (ಇಂಡಿಯಾ) ಎಂದು ಕೂಗಿದರು. ಅವರಿಗೆ ಎರಡೂ ಕೈ ಎತ್ತಿ ನಮಸ್ತೆ ಮಾಡಿ, ಟಾ ಟಾ ಬೈ ಬೈ ಹೇಳಿದೆವು. ಆಗಾಗ ಗಮನ ಸೆಳೆಯುತ್ತಿದ್ದ ನೀಲಾಕಾಶದ ಚಂದ್ರ ಹಿಂದಿನಿಂದ ಈ ಎಲ್ಲವನ್ನು ನೋಡುತ್ತಾ ಮುಗುಳ್ನಗುತ್ತಿದ್ದ.
ಕ್ರೂಜರ್ ಮೂಲಸ್ಥಳಕ್ಕೆ ಬಂದಾಗ ಮತ್ತೊಮ್ಮೆ ಸಿಬ್ಬಂದಿ ಸಹಾಯ ಪಡೆದೇ ಇಳಿಯಬೇಕಾಯಿತು. ಸಮುದ್ರದಲ್ಲಿ ಕಳೆದ ಮೂರು ತಾಸುಗಳು ಅವಿಸ್ಮರಣೀಯ. ಬಸ್ಸಿನಲ್ಲಿ ಬರುತ್ತಿರುವಾಗ, ಅಲ್ಲೊಂದು ವಿಷಯ ಗಮನ ಸೆಳೆಯಿತು. ಇಂಗ್ಲೀಷ್ನಲ್ಲಿಯ Telephone ಟರ್ಕಿಷಿನಲ್ಲಿ telefon, restaurant ನ್ನು restoron mlza ಎಂದು ಬರೆದದ್ದನ್ನು ಗಮನಿಸಿ ಪಕ್ಕದಲ್ಲಿದ್ದ ಸರಸ್ವತಿ ಚಿಮ್ಮಲಗಿಯವರಿಗೆ `ಅದನ್ನು ಉಚ್ಛರಿಸಿ’ ಎಂದೆ. `ಉಚ್ಛರಿಸುವುದು ಕಷ್ಟ ಕೆಲವು ಅಕ್ಷರಗಳು ನಮಗೆ ಗೊತ್ತೆ ಇಲ್ಲ’ ಎಂದರು ನಗುತ್ತ. ಅಲ್ಲಿಂದ ನೇರವಾಗಿ ಸ್ಪೈಸ್ ಮಾರ್ಕೆಟಿಗೆ ಕರೆತಂದರು ಕೊರೈ. ನಮಗೆ ಖರೀದಿಮಾಡುವುದೇನೂ ಇರಲಿಲ್ಲ. ಮತ್ತೊಂದು ಸ್ಥಳ ನೋಡಬಹುದಿತ್ತು. ಕೊರೈ ತಮ್ಮ ಕಾರ್ಯಕ್ರಮ ಯೋಜನೆಯಂತೆ ನಮ್ಮನ್ನು ಮಸಾಲಾ ಮಾರುಕಟ್ಟೆಗೆ ಹೋಗಿಸಿದರು.
ಮಸಾಲಾ ಮಾರುಕಟ್ಟೆ(Spice Bazzar)
ಬ್ರಿಟಿಷರನ್ನು ಭಾರತ ಆಕರ್ಷಿಸಿದ್ದು, ಆದರ ತೋರಿದ್ದು ಈ ಸಾಂಬಾರ ಪದಾರ್ಥಗಳೇ. ಇನ್ನು ಇದಂತೂ ಐರೋಪ್ಯ ಮಾರುಕಟ್ಟೆ. ಕೇಳುವುದುಂಟೆ? ಕೇವಲ ಮಸಾಲೆಯ ಪದಾರ್ಥಗಳು ಹಾಗೂ ಒಣ ಹಣ್ಣುಗಳು. ಗ್ರ್ಯಾಂಡ್ ಬಜಾರನ ಕಟ್ಟಡದಂತೆಯೇ ಇದೂ ಕೂಡ ಅಖಂಡ ಛಾವಣಿ ಹೊಂದಿದ್ದರೂ ಅದರಷ್ಟು ಬೃಹದಾಕಾರ ಇರಲಿಲ್ಲ. ಅದರೊಳಗೆ ಹೊಕ್ಕರೆ, ಕಪ್ಪು ದ್ರಾಕ್ಷಿ, ಬಿಳಿ ದ್ರಾಕ್ಷಿ, ಗೋಡಂಬಿ, ಬಾದಾಮು, ಗೇರು ಬೀಜ, ಒಣ ಅಂಜುರ, ಅಪ್ರಿಕಾಟ್ಸ್, ಉತ್ತತ್ತಿ ಇವಿಷ್ಟು ನಮಗೆ ತಿಳಿದ ಒಣ ಹಣ್ಣುಗಳು. ಇವನ್ನುಳಿದಂತೆ ಇನ್ನೂ ಏನೇನೂ ಒಣ ಹಣ್ಣುಗಳಿದ್ದವು. ನಮ್ಮಲ್ಲಿ ಸಿಗುವ ಎಲ್ಲ ರೀತಿಯ ಮಸಾಲೆಯೂ ಅಲ್ಲಿತ್ತು. ವಿಶೇಷವೆಂದರೆ ಅದರೊಂದಿಗೆ ನಮ್ಮಲ್ಲಿ ಬೆಳೆಸುವ, ಗುಲ್ಕಂದ ಗುಲಾಬಿ ಹೂ ಹಾಗೂ ಮೊಗ್ಗುಗಳನ್ನು ಒಣಗಿಸಿ, ಮಸಾಲೆಗಳ ಸಾಲಿಗೆ ಸೇರಿಸಿಟ್ಟಿದ್ದರು. ಇನ್ನೊಂದು ಬದಿಗೆ ಬರೀ ಖಾರದ ಅಂಗಡಿ. ಅಲ್ಲಿ ಕೆಂಪದರ ಜೊತೆಗೆ ಹಸಿರು ಮತ್ತು ಕಪ್ಪು ಪುಡಿಗಳಿದ್ದವು. ಇದೇನು ಎಂದು ಕೇಳಿದರೆ, `ಅದೂ ಖಾರದ ಪುಡಿಯೇ’ ಎಂಬುದು ಗೊತ್ತಾಗಿ ತುಂಬಾ ಆಶ್ಚರ್ಯಪಟ್ಟೆವು. ಅಲ್ಲಿ ಕರಿ ಮತ್ತು ಹಸಿರು ಮೆಣಸಿನ ಕಾಯಿಗಳೂ ಇದ್ದವು. ಅಫ್ರಿಕಾಟ್ಸ್, ಒಣ ಅಂಜೂರ ಹಾಗೂ ಖರ್ಜೂರಗಳು ತುಂಬಾ ಸಿಹಿಯಾಗಿ, ಭಾರತೀಯ ರುಚಿಗಿಂತ ಭಿನ್ನರುಚಿಯನ್ನು ಹೊಂದಿದ್ದವು. ಖರೀದಿಸೋಣ ಎಂದು ನಿರ್ಧರಿಸಿ 8 ಜನ ಸೇರಿ ಮಾರ್ಗದರ್ಶಿಗೆ ಒಳ್ಳೆ ಅಂಗಡಿಲಿ ಬೆಲೆ ಹೊಂದಿಸಿಕೊಡಲು ಹೇಳಿದೆವು. ಆತ ಒಂದು ಅಂಗಡಿಗೆ ಕರೆದೊಯ್ದು, ಅಲ್ಲಿ ಖರೀದಿಸಿದರೆ ಫ್ರೀ ಗಿಫ್ಟ್ ಕೊಡಿಸುವುದಾಗಿ ಹೇಳಿದರು. ಅಲ್ಲಿ ಎಲ್ಲ ರೀತಿಯ ಹಣ್ಣುಗಳನ್ನು 8 ಜನರಿಗೂ ರುಚಿ ನೋಡಲು ನೀಡುತ್ತಿದ್ದರು. ಗಾಜಿನ ಪೆಟ್ಟಿಗೆಯೊಳಗೆ ಹಣ್ಣುಗಳನ್ನು ಶೇಖರಿಸಿಡಲಾಗಿತ್ತು. ಕೆಂಪು ಮುಖದ ಸುಂದರ ಯುವಕ `ಇಲ್ಲಿ ಶಾರುಖಾನ್, ಶಶಿಕಪೂರ್ ಅವರೆಲ್ಲಾ ಬಂದು ಹೋದ ಅಂಗಡಿಯಿದು. ಚೆನ್ನಾಗಿರುತ್ತದೆ ಮಾಲು’ ಎಂದು ಅಭಿಪ್ರೇರಿಸುತ್ತಿದ್ದ. ಸರಿ ಒಂದು ಬೆಲೆ ಹೊಂದಿಸಿ 10 ಯುರೋಗೆ 1 ಕೆ.ಜಿ. ಖರ್ಜೂರ  11 ಯುರೋಗೆ 1 ಕೆ.ಜಿ. ಅಂಜೂರ, 9 ಯುರೋಗೆ 1 ಕೆ.ಜಿ ಅಫ್ರಿಕಾಟ್ಸ್ ಖರೀದಿಸಿದೆ.
ಸಿಲ್ವರ್ ಫೊಯ್ಲನೊಳಗೆ ಹಾಕಿ, ಪ್ಯಾಕಿನೊಳಗೆ ಗಾಳಿ ಉಳಿಯದಂತೆ ಹೈಜೆನಿಕ್ಕಾಗಿ ಮಸೀನ್ ಸೀಲ್ ಮಾಡಿ, ಪ್ಯಾಕ್ ಮಾಡಿಕೊಟ್ಟ. ಅದರಂತೆ ಎಲ್ಲರೂ ತಮಗಿಷ್ಟವಾದದನ್ನು ಖರೀದಿಸಿದರು. ಅಂಗಡಿಯವನಿಗೆ ಸಖತ್ ಲಾಭವಾಗಿತ್ತು. ಹೊರಬಂದು ಅಲ್ಲಿ ಪ್ರಸಿದ್ಧವಾಗಿರುವ ಪಿಂಗಾಣಿ ಬಟ್ಟಲು, ಶೋಪೀಸ್ಗಳನ್ನು ನೋಡುತ್ತಿರಬೇಕಾದರೆ, ಮುಂದೆ ಹೋಗಿದ್ದ ಸುಮನ್ ಬೇಗ ಬೇಗ ಬಂದು `ಹೇಂಗ ಕೆ.ಜಿ. ತಗೊಂಡ್ರಿ?’ ಅಂದರು. ಬೆಲೆ ಹೇಳಿದಾಗ, `ಅಯ್ಯೊ ಅಲ್ಲಿ 5-6 ಯುರೋಗೆ ಕೆ.ಜಿ. ಕೊಡ್ತಿದ್ದಾರೆ ಅಂದರು. ಖರೀದಿಸಿದವರೆಲ್ಲಾ ದಂಗಾಗಿ ಹೋದೆವು. ಹೆಚ್ಚು ಕಡಿಮೆ 30 ರಿಂದ 40 ಶೇಕಡಾದಷ್ಟು ಹೆಚ್ಚು ಬೆಲೆ ತೆತ್ತುಬಿಟ್ಟಿದ್ದೆವು. ನೋಡುತ್ತಾ ಮುಂದೆ ಸಾಗಿ ಎರಡ್ಮೂರ ಅಂಗಡಿಗಳಲ್ಲಿ ಕೇಳಿದಾಗ ಅದು ನಿಜವಾಗಿತ್ತು. ಒಂದು ವ್ಯತ್ಯಾಸವೆಂದರೆ ಅಲ್ಲಿ ಎಲ್ಲ ಫ್ರೂಟ್ಸ್ಗಳನ್ನು ತೆರೆದೇ ಇಟ್ಟಿದ್ದರು. ಹೈಜೆನಿಕ್ ಪ್ಯಾಕ್ ಪದ್ಧತಿ ಇರಲಿಲ್ಲ; ಬಿಲ್ ಕೊಡಲು ಇಲೆಕ್ಟ್ರಾನಿಕ್ ಯಂತ್ರ ಇರಲಿಲ್ಲ. ಇಷ್ಟು ವ್ಯತ್ಯಾಸ ಬಿಟ್ಟರೆ, ನಟರೆಲ್ಲಾ ಬಂದು ಹೋದದ್ದೆ ಬೇಡಿಕೆ ಹೆಚ್ಚಾಯಿತೇನೋ? ಅಂತೂ ದುಬಾರಿ ಆಗಿಬಿಟ್ಟಿತ್ತು. `ಆದರೆ ಕೊಟ್ಟಾಗಿದೆಯಲ್ಲ ಬಿಟ್ಟುಬಿಡಿ ಮೊದಲೇ ಗೊತ್ತಾಗಿದ್ರೆ ಕೇಳಬಹುದಾಗಿತ್ತು’ ಅಂದೆ. ಸರ್, ಸರೋಜಾ ಕೂಡಾ ಅದೆ ಅಭಿಪ್ರಾಯಪಟ್ಟರೂ ಉಳಿದವರು ಕೇಳಬೇಕಲ್ಲ? `ಕೊರೈ ತೋರಿಸಿದ ಅಂಗಡಿಯಿದು ಯಾಕ ಬಿಡಬೇಕು? ಬಹುಶಃ ಅವನಿಗೆ ಇಲ್ಲಿ ಕಮೀಶನ್ ಸಿಗ್ತಿರಬಹುದು. ಅದಕ್ಕೆ ಇಲ್ಲಿ ಕರ್ಕೊಂಡು ಬಂದಿದ್ದಾನೆ. ಅವನನ್ನೇ ಕೇಳೋಣ’ ಎಂದು ಎಲ್ಲೋ ತಿರುಗಾಡುತ್ತಿದ್ದ ಅವನನ್ನು ಕರೆದು ತಂದು ಅವನ ಬೆವರಿಳಿಸಿಬಿಟ್ಟೆವು.
ಅಂಗಡಿಯವನೊಂದಿಗೆ ಮಾತನಾಡಿ, `ಹಾಗಾದರೆ ಬೇಕಾದವರು ಮರಳಿ ಕೊಡಿ, ಇಲ್ಲದಿದ್ದರೆ ಪಿಂಗಾಣಿಯಿಂದ ಮಾಡಿ, ಹಿಂದೆ ಮ್ಯಾಗ್ನೆಟ್ ಅಳವಡಿಸಿದ ಚಿಕ್ಕ ಶೋಪಿಸ್ಗಳನ್ನು ಫ್ರೀ ಗಿಫ್ಟ್ ಆಗಿ ತೆಗೆದುಕೊಳ್ಳಿ’ ಎಂದು ಹೇಳಿದ. ಸರಿ ಫ್ರೀ ಗಿಫ್ಟೊಂದನ್ನು ತೆಗೆದುಕೊಂಡು ನಾನಂತೂ ಹೊರಬಂದೆ. ಕೊಡುವವರು ತಿರುಗಿ ಕೊಟ್ಟರು. `ಸಣ್ಣ ಪುಟ್ಟ ಮಾರ್ಕೆಟ್ನೊಳಗೆ ಏನೆಲ್ಲಾ ನಡಿತಾವಂತ…. ಇನ್ನು ಇದು ಅಂತರಾಷ್ಟ್ರೀಯ ಮಾರುಕಟ್ಟೆ ಎನಿಸಿಕೊಂಡದ್ದು ಕೇಳಬೇಕೆ?’ ಎಂದರು. ಎಲ್ಲ ಮಾರ್ಕೆಟ್ ತಿರುಗಾಡಿ ನೋಡಿ 6 .30ಕ್ಕೆ ತಿರುಗಿ ಹೋಟೆಲಿಗೆ ಬಂದೆವು. ಸರಸ್ವತಿ ಚಿಮ್ಮಲಗಿ, ಪ್ರಭಾ ನೇರಲಗಿ ಇವರಿಬ್ಬರ ಕಾಲುಗಳು ಬಾತುಕೊಂಡಿದ್ದವು. ನಡೆಯುವುದು ಕಷ್ಟವಾಗಿತ್ತು. ಮತ್ತೇ ಅಲ್ಲಿಯೇ ನಗರ ಸುತ್ತಲು ಹೋದರು. ಊಟವಾದ ಮೇಲೆ ಮನು ಮತ್ತು ಲಾರಿ ಸರ್ ನಾಳೆಯ ಕಾರ್ಯಕ್ರಮಗಳ ಬಗೆಗೆ ಮುನ್ಸೂಚನೆ ನೀಡುತ್ತಾ `ನಾಳೆ ನಾವು ಕೈರೋಗೆ ಹೋಗ್ತಾ ಇದ್ದೀವಿ. ಎಲ್ಲರೂ ಫ್ಯಾಕ್ಫ್ ಮಾಡ್ಕೊಳ್ಳಿ, ಬೆಳಿಗ್ಗೆ ಟಿಫಿನ್ ಮಾಡಿದ್ದೆ ತಡ ಈ ಹೋಟೆಲಿನಿಂದ ಬಿಡುಗಡೆ. ಅಲ್ಲಿಂದ ನೇರವಾಗಿ ಇಸ್ತಾಂಬುಲ್ನ ವಿಮಾನ ನಿಲ್ದಾಣಕ್ಕೆ ಹೋಗುವುದು’ ಎಂದರು. ರೂಮಿಗೆ ಹೋಗಿ, ಬರುವಾಗ ತಂದದ್ದು, ಅಲ್ಲಿ ಖರೀದಿಸಿದ್ದು ಎಲ್ಲವನ್ನು ಅಚ್ಚುಕಟ್ಟಾಗಿ ಟ್ರೋಲಿ ಬ್ಯಾಗಿಗೆ ತುಂಬಿದೆ. ಎತ್ತಿ ನೋಡಿದರೆ 14 ಕೆ.ಜಿ ಹೋಗಿ ಈಗ ಬ್ಯಾಗ್ 19 ಕೆ.ಜಿ ಯಷ್ಟು ಭಾರವಾಗಿತ್ತು. ಆದರೂ ಜಾಗ ಇನ್ನೂ ಖಾಲಿ ಇತ್ತು. ಟರ್ಕಿಯಲ್ಲಿ ಮೂರನೆಯ ರಾತ್ರಿ ಚಂದ್ರನಿಗೆ ಗುಡ್ನೈಟ್ ಹೇಳಿ ನಿದ್ದೆ ಹೋದೆ.
ಬೆಳಿಗ್ಗೆ 5.30 ಕ್ಕೆ `ವೇಕ್ ಅಪ್’ ಕಾಲ್. ಮನಸ್ಸಿಲ್ಲದೆ ಎದ್ದು ತಯಾರಾಗಿ ಬಂದರೆ ಕತ್ತಲಿದ್ದಂಗೆ ಇತ್ತು. 6.30ಕ್ಕೆ ಟಿಫಿನ್ ಮಾಡುವುದು ಅದೂ ಆ ಎಲ್ಲ ಪದಾರ್ಥಗಳು! ವಿಧಿ ಇರಲಿಲ್ಲ ತಿಂದೆವು. ತಿನ್ನಲಾಗಲಿಲ್ಲ. ಫುಡ್ ಕೌಂಟರ್ ಮ್ಯಾನೆಜರ್ನನ್ನು ಕೇಳಿ ಒಂದಿಷ್ಟು ಒಣಹಣ್ಣು ಮತ್ತು ಹಸಿ ಹಣ್ಣುಗಳನ್ನು ತೆಗೆದುಕೊಂಡೆವು. ನಾವು ಹೋಗುವ ದಿನ ಆದ್ದರಿಂದ ಹೋಟೆಲ್ ಸಿಬ್ಬಂದಿ ಮುತುವರ್ಜಿಯಿಂದ ಉಪಚರಿಸಿದರು. ಅವರೊಂದಿಗೆ ಅಲ್ಲಿ ಬಂದ ನಾಗರಿಕರೊಂದಿಗೆ ಫೊಟೋ ತೆಗೆಯಿಸಿಕೊಂಡೆವು. ಒಂದು ವಿಷಯ ಹೇಳವುದನ್ನು ಮರೆತೆ. ಅಲ್ಲಿಯ ಹೋಟೆಲ್ ಸಪ್ಲೈಯರ್ಸ್ ಕೂಡ ವಿಮಾನದಲ್ಲಿಯ ಗಗನಸಖಿಯರಂತೆಯೆ ಅದೇ ಬಣ್ಣದ ಸಮವಸ್ತ್ರದಲ್ಲಿದ್ದರು. ಲಿಪ್ಸ್ಟಿಕ್ ಒಂದನ್ನು ಬಿಟ್ಟು ವರ್ಣಾಲಂಕರ ಮಾತ್ರ ಇರಲಿಲ್ಲ. ಅದರಲ್ಲೊಬ್ಬಳಂತೂ ತುಂಬಾ ಎತ್ತರ ನಿಲುವಿನ ಯುವತಿ ಬಹಳ ಸುಂದರಿ. ಉದ್ಯೋಗ ಏನಾದರೇನು? ನಾಡು ಯಾವುದಾದರೇನು? ಮಾನವರೇ ಅಲ್ಲವೇ? ಅವರೆಲ್ಲರೊಂದಿಗೆ ಒಂದು ಫೋಟೋ ತೆಗೆಯಿಸಿಕೊಂಡೆವು. ಹೋಟೆಲ್ ಸಿಬ್ಬಂದಿ ಲಗೇಜ್ ಕೆಳಗೆ ತಂದಿಡುತ್ತಿದ್ದರು. ನಾನು ಸರೋಜ, ಸರೋಜಿನಿ ಭದ್ರಾಪೂರ, ಅನಸೂಯಾ ಅರಕೇರಿ ಹೊರಬಂದು ನಿಂತೆವು. ಅಲ್ಲೊಬ್ಬಳು ಶುಭ್ರ ಬಿಳಿಯ ಲುಂಗಿಯಂತಹ ಲಂಗ (ಲುಂಗಿ ತುದಿಗೆ ನೆರಿಗೆ ಹಚ್ಚಿದಂತೆ) ಮತ್ತು ಕಪ್ಪು ಬಿಳಿಪು ಚೌಕುಳಿ ಇರುವ ಉದ್ದ ತೋಳಿನ, ತೊಡೆಯವರೆಗಿದ್ದ ಬ್ಲೌಸ್ ಹಾಕಿ ತಲೆಗೆ ಬಿಳಿ ಸ್ಕಾರ್ಫ್ನ್ನು  ಹಣೆ ಮುಚ್ಚುವಂತೆ ಕಟ್ಟಿದ ಯುವತಿ ಪುಟ್ಟ ಮಗುವೊಂದನ್ನು ಎತ್ತಿಕೊಂಡು ನಿಂತಿದ್ದಳು. ಮಗು ತುಂಬಾ ಚೂಟಿಯಾಗಿತ್ತು. `ಸರೋಜ ನೋಡೆ ಮಗುವಿನ ಕಣ್ಣು ಗಾಜಿನ ಗೋಲಿ ಇದ್ಹಂಗಿದ್ದಾವೆ.’ ಎಂದ ನನಗೆ ಮಗುವನ್ನು ಎತ್ತಿಕೊಳ್ಳುವ ಮನಸ್ಸಾದರೂ ಮುಂದುವರೆಯಲಾಗದೆ ಹಿಂಜರಿದು ನೋಡುತ್ತ ನಿಂತೆ. ಅಷ್ಟರಲ್ಲೆ ಸರಸ್ವತಿ ಚಿಮ್ಮಲಗಿ, ಮನು ಅವರೆಲ್ಲಾ ಕೆಳ ಬಂದರು. ಬಹಳ ಜನ ಬಂದದ್ದನ್ನು ನೋಡಿ ಆ ಯುವತಿ ಕೈ ಒಡ್ಡಿ ಬೇಡತೊಡಗಿದಳು.
ಟರ್ಕಿಷ್ನಲ್ಲಿ ಏನೋ ಹೇಳುತ್ತ ಮಗುವನ್ನೊಮ್ಮೆ ಬಾಯಿಯನ್ನೊಮ್ಮೆ ತೋರುತ್ತಾ ಕೈ ಒಡ್ಡಿದಳು. ಅವಳು ಭಿಕ್ಷುಕಿ! ನನ್ನ ಕಣ್ಣುಗಳನ್ನೇ ನಂಬದಂತಾಯಿತು. ಮತ್ತೊಮ್ಮೆ ಮೇಲಿನಿಂದ ಕೆಳಗೆ ಅವಳನ್ನು ನೋಡಿದೆ. `ವೈಟ್ಕಾಲರ್ ಬೆಗ್ಗರ್’ ಹೌದೋ ಅಲ್ಲವೋ? ಬಿಳಿ ಉಡುಗೆ ಉಟ್ಟ ಭಿಕ್ಷುಕಿಯಂತೂ ಹೌದಾಗಿತ್ತು. ಅಷ್ಟರಲ್ಲಿ ಹೋಟೆಲ್ ಪರಿಚಾರಕರು ಅವಳನ್ನು ಅಲ್ಲಿಂದ ಓಡಿಸಿದರು. ಎಲ್ಲರೂ ಕೋಚ್ ಏರಿದೆವು.
ಕೋಚನಿಂದ ಇಳಿದು ಕೊರೈನನ್ನು ಬೀಳ್ಕೊಟ್ಟೆವು. ನೇರವಾಗಿ 9.20ಕ್ಕೆ ವಿಮಾನ ನಿಲ್ದಾಣಕ್ಕೆ ಬಂದು, ಎಲ್ಲ ಚೆಕ್-ಇನ್ ವಿಧಾನಗಳನ್ನು ಮುಗಿಯಿಸಿ ಸಾಲಿನಲ್ಲಿ ನಿಂತಿರಬೇಕಾದರೆ ಸುನಂದಾ ಅವರ ಪಾಸ್ಪೋರ್ಟ್ ಸಿಗದಾಯಿತು. ಲಾರಿಸರ್ ಕೆಂಡಾಮಂಡಲ. `ಅದು ನಿಮ್ಮ ಜವಾಬ್ದಾರಿ. ನೀವು ಹ್ಯಾಗ ಬರ್ತೀರೋ, ಎಲ್ಲಿ ಹೋಗ್ತಿರೋ ಗೊತ್ತಿಲ್ಲ’ ಎಂದು ಮೆತ್ತಗೆ ಕೂಗಾಡಿದರು. ಎಲ್ಲರದು ಮುಂದೆ ಹೋಗದ, ಹಿಂದೆ ಉಳಿಯದ ಸ್ಥಿತಿ. ಸರೋಜಾ ಹೋಗಿ ಇಡೀ ಬ್ಯಾಗನ್ನೇ ಜಾಲಾಡಿಸಿದಳು. ಸಿಗಲೇ ಇಲ್ಲ. ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸುವ ಲಾರಿಸರ್ ಅದ್ಯಾವಾಗ ನೋಡಿದ್ದರೋ ಏನೋ? ಸುನಂದಾ ಪಾಸ್ಪೋರ್ಟ್ನ್ನು ತನ್ನ ಬ್ಲೌಸಿನೊಳಗೆ ಇಟ್ಟುಕೊಳ್ಳುವುದನ್ನು ನೋಡಿದ್ದರಂತೆ. ಹಾಗಾಗಿ ಹಿರಿಯರಾದ ಸರೋಜಿನಿ ಭದ್ರಾಪೂರ ಅವರನ್ನು ಪಕ್ಕಕ್ಕೆ ಕರೆದು `ತಪ್ಪು ತಿಳಿದಿದ್ದರೆ, ಅವರಿಗೆ ಬ್ಲೌಸಿನೊಳಗೆ ಒಂದು ಸಲ ನೋಡಲ್ಹೇಳಿ’ ಎಂದರು. ಆಶ್ಚರ್ಯವೆಂದರೆ ಅದಲ್ಲೇ ಇತ್ತು. ಎಲ್ಲರೂ ನಿಟ್ಟುಸಿರುಬಿಟ್ಟೆವು. ಅಂದು ವಿಮಾನದಲ್ಲಿ ಕೂಡ್ರುವ ತನಕ ಈ ಘಟನೆ ನೆನೆದು ನಕ್ಕದ್ದೇ ನಕ್ಕದ್ದು. ಅದೇ ಟರ್ಕಿಶ್ ಏರ್ಲೈನ್ಸ್. ಇಸ್ತಾಂಬುಲ್ನಿಂದ ಕೈರೋಗೆ ಹೋಗುವ ವಿಮಾನ ನಂಬರ್ ET 2353749762044/c2, TK 0690, ನನ್ನ ಸೀಟ್ ನಂಬರ್ 20ಈ ಆಗಿತ್ತು. ಅಷ್ಟೇ ದೊಡ್ಡ ವಿಮಾನ, ಅದೇ ವ್ಯವಸ್ಥೆ. ವಿಮಾನ 11.10 ಗಂಟೆಗೆ `ಟೇಕ್ ಓವರ್’ ಆಯ್ತು ಜೀವ ಬರೀ ನೀರು ಬೇಡುತ್ತಿತ್ತು. ಕೊರೈ ಹಂಚಿದ ನೀರು ಯಾವುದಕ್ಕೂ ಸಾಲುತ್ತಿರಲಿಲ್ಲ. ಮತ್ತು ತಿನ್ನುವಾಗೆಲ್ಲ ನೀರು ಬೇಕೆಂದರೆ ಹಾಲು, ಜ್ಯೂಸ್, ಕಾಫಿ, ಟೀ, ಬ್ರಾಂಡಿ, ವಿಸ್ಕಿ ಕುಡಿದೇ ನುಂಗಬೇಕು. ಹೆಚ್ಚಿಗೆ ಕೊಂಡಿಡುತ್ತೇನೆಂದರೆ ವಿಮಾನದಲ್ಲಿ ಅದಕ್ಕೆ ಅವಕಾಶವಿಲ್ಲ, ಮಾಡುವುದೇನು? ಬಾಯಲ್ಲಿ ಚುಯಿಂಗ್ ಗಮ್ ಹಾಕಿ ಜಗಿಯುತ್ತಾ, ಪಕ್ಕದಲ್ಲಿ ಎರಡು ಸಾಲು ಹಿಂದೆ ಕುಳಿತ ಸರೋಜಾಗೆ ಕೂಗಿ ಹೇಳಿದೆ. `ಸೂಯುಬೇಕು’ ಎಂದು, `ಹಾಂ?’ ಎಂದು ಆಶ್ಚರ್ಯ ತುಂಬಿದ ಪ್ರಶ್ನೆ ಮಾಡಿದಳು ನಗುತ್ತಾ, ಸುತ್ತಲಿದ್ದ ಮಿಕ್ಕವರು ಕೊಳ್ಳನೆ ನಕ್ಕರು.
`ಸೂಯುಬೇಕು’ ಅಂದ್ರೆ ಅಲ್ಲಿ ಐತಿ ಹೋಗಿ ಬಾ’ ಎಂದಳು. ನನಗಂತೂ ನಗೂ ತಡೆಯಲಿಲ್ಲ. ಬಾಯಿಗೆ ಹೆಬ್ಬೆರ್ಹಚ್ಚಿ ಮುಷ್ಠಿ ಮೇಲೆ ಎತ್ತಿ ತೋರಿಸಿದೆ. `ಕುಡಿಯಲು ನೀರು’ ಅಂತಾ, `ಓಹೋ ನೀರು ಬೇಕಾ? ನಮ್ಗೂ ಅದೇ ಬೇಕಾಗೈತಿ’ ಅಂದಳು ನಗುತ್ತಾ, ಅಷ್ಟರಲ್ಲಿ ಗಗನ ಸಖಿ ಬಂದಳು. `ಅವಳಿಗೆ ಸೂಯು ಕೇಳು’ ಎಂದಳು. ಸರೋಜಾ ನಗೆಯಾಡುತ್ತ, ಕೇಳಿದರೆ, `ನಾನು ಕೊಡ್ತಿನಿ ನಾನ್ ಕೊಡ್ತಿನಿ’ ಎನ್ನುತ್ತಾ ಹೋದ ಗಗನ ಸಖಿ ಬೇಗ ಬರಲೇ ಇಲ್ಲ. ಬಂದದ್ದು ಫುಡ್ ಟ್ರಾಲಿಯೊಂದಿಗೆನೆ. ಮತ್ತೆ `ನೀರು’ ಎಂದೆ. ಗ್ಲಾಸಿಗೆ ಬಿಸ್ಲೆರಿಯಿಂದ ಬಗ್ಗಿಸಿಕೊಟ್ಟಳು. ಜೀವ ತಣ್ಣಗಾಗಿತ್ತು. ಈ ಸಲವು ಎಡಗಡೆಯ ಕಿಟಕಿಯೇ ಸಿಕ್ಕಿತ್ತು. ಊಟ ಮಾಡುತ್ತಾ ಹೊರ ನೋಡುತ್ತಿದ್ದೆ. ಆಯತಾಕಾರದ ತಟ್ಟೆ (ಟ್ರೇ)ಯಲ್ಲೊಂದು ಅಂಗೈಕ್ಕಿಂತ ದೊಡ್ಡದಾದ ಆಯತಾಕಾರದ ಟ್ರೇ. ಅದರೊಳಗೆ ಈಚೆ 30% ಭಾಗದಲ್ಲಿ ಹುಳಿಹಾಕಿ ಹುರಿದ ಬದನೆಕಾಯಿ, ಮಧ್ಯದಲ್ಲಿ 40% ಭಾಗ ಪಾಸ್ತಾ, ಆಚೆ 30% ಭಾಗ ಚೆನ್ನಂಗಿ ಕಾಳು ಪಲ್ಯ. ಬರಿ ಎಣ್ಣೆಮಯ. ಮಧ್ಯದಲ್ಲಿಯ ಪಾಸ್ತಾ ಎಣ್ಣೆಯಲ್ಲಿಯೇ ತೊಯ್ದು ಹೋಗಿತ್ತು. ಕೆಲವರಿಗೆ ಪಾಸ್ತಾ ಬದಲು ಅನ್ನವೂ ಬಂದಿತ್ತು. ಅದು ನಾನ್ ವೆಜ್ ತಗೊಂಡವರಿಗೆ ಮಾತ್ರ ಅನ್ನ ಇತ್ತು. ಹುಳಿಯಲ್ಲಿ ಹುರಿದ ಬದನೆಕಾಯಿ ನೆನಸಿಕೊಂಡರೆನೆ ತಿಂದದ್ದೆಲ್ಲ ಹೊರ ಬೀಳಬೇಕು ಹಾಗಿತ್ತು ಅದು. ಆದಷ್ಟು ಚೆರ್ರಿ, ಮ್ಯಾಂಗೋ, ಆರೆಂಜ್ ಜ್ಯೂಸ್ಗಳನ್ನೇ ಜಾಸ್ತಿ ಕುಡಿದೆವು. ಬೆಣ್ಣೆ, ಜಾಮ್, ಜೇನುತುಪ್ಪಗಳು ಬನ್ಗೆ ಜೊತೆಯಾಗುತ್ತಿದ್ದವು. ಈ ಸಲ ಉಳಿದೆಲ್ಲ ಸರಂಜಾಮುಗಳೊಂದಿಗೆ DO ಮತ್ತು CO ಕಂಪನಿಯ ಓಲಿವ್ ಎಣ್ಣೆಯ, ಎರಡು ಬೆರಳಗಲದ ಅಂಗೈ ಉದ್ಧದ ಪೌಚ್ ಒಂದಿತ್ತು. ಅದು ಯಾವುದಕ್ಕೆಂದು ಅರ್ಥವಾಗಲಿಲ್ಲ. ನಂತರ ನೀರಿನ ಕಾಲು ಲೀಟರಿನ ಬಾಟಲಿಕೊಟ್ಟರು. ಗಟಗಟನೆ ಕುಡಿದು ಖಾಲಿ ಮಾಡಿ ಮತ್ತೊಂದಕ್ಕೆ ಕೈ ಚಾಚಿದೆ. ಗಗನ ಸಖಿ ಪ್ರಶ್ನಾರ್ಥಕವಾಗಿ ನೋಡುತ್ತಾ, ಮತ್ತೊಂದನ್ನು ನೀಡಿದಳು. ಎಲ್ಲರ ಪರಿಸ್ಥಿತಿಯೂ ನೀರಿಗಾಗಿ ಹಪಹಪಿಸುವಂತಾಯಿತು.
ಊಟ ಮಾಡುತ್ತಾ ನಡು ಮಧ್ಯಾಹ್ನ ಸ್ವಚ್ಛ ಬೆಳಕಿನಲ್ಲಿ ಆಕಾಶದಿಂದ ಪೃಥ್ವಿಯನ್ನು ನೋಡುವ ಭಾಗ್ಯ. (ಟಿ.ವಿ. ಹಚ್ಚಲೆ ಇಲ್ಲ) ಕೆಲವು ಇಟ್ಟಂಗಿ ಚೂರುಗಳನ್ನು ಜೋಡಿಸಿದಂತೆ, ಮಧ್ಯದಲ್ಲಿ ಕಪ್ಪು ಕಾರ್ಪೆ ಟ್ ಗಳನ್ನು ಹಾಸಿದಂತೆ, ನೇರವಾದ ದಾರಿಗಳು. ಆ ದಾರಿ ಎಷ್ಟು ನೇರವಾಗಿತ್ತೆಂದರೆ ಆಚೆ ಈಚೆ ನಿಂತು ಹಗ್ಗ ಜಗ್ಗಿ ಹಿಡಿದಂತೆ ಕಾಣುತ್ತಿತ್ತು. ಊರು ಮುಗಿದು ನೀರು (ಸಮುದ್ರ) ಆರಂಭವಾದಾಗ ಸಮುದ್ರದಲ್ಲಿ ಹಡಗುಗಳು ಬಿಳಿ ಬಾಲದ ಹುಳುಗಳಂತೆ ಕಾಣುತ್ತಿದ್ದವು. ನೀರನ್ನು ಹಿಂದೆ ತಳ್ಳಿ ಹಡಗು ಮುಂದೆ ಹೋಗುವಾಗಿನ ದೃಶ್ಯವದು. ನೀರು ಮುಗಿಯಿತು, ದಟ್ಟ ಕಪ್ಪು ಹಸಿರು ಬಣ್ಣ ಹಚ್ಚಿ ನಡುವೆ ಬಿಳಿದಾರ ಬೀಸಾಡಿದಂತೆ ಗುಡ್ಡಗಾಡಿನ ರಸ್ತೆಗಳು; ಮತ್ತೆ ದಟ್ಟ ನೀಲಿ ಬಣ್ಣದ ನೀರು; ಅದು ಮುಗಿಯುತ್ತಿದ್ದಂತೆ ಮಣ್ಣಿನ ಬಣ್ಣ (ನೆಲ) ನಂತರ ಮತ್ತೊಂದು ಊರು (ದೇಶ). ಕೆಂಪು ಬಿಳಿ ಇಟ್ಟಂಗಿಗಳ ರಾಶಿ, ಮತ್ತೆ ದಟ್ಟ ನೀಲಿ ಬಣ್ಣವನ್ನು ಪೇಂಟ್ ಮಾಡಲು ಬಟ್ಟಲಲ್ಲಿ ತುಂಬಿಟ್ಟಂತೆ, ಸ್ವಲ್ಪವೇ ನೀರು; ವಿಮಾನ ನಲವತ್ತು ಸಾವಿರ ಮೀ, ಎತ್ತರದ ಮೇಲಿತ್ತು. ಊರುಗಳು ಕೆಂಪು, ಬಿಳಿ ಬಣ್ಣದಲ್ಲಿ ಮುಂಗೈನಷ್ಟು ಕಾಣುತ್ತಿದ್ದರೆ, ವಾಹನಗಳು ಕಾಣುತ್ತಲೇ ಇಲ್ಲ. ಪ್ರಕೃತಿಯ ಚಿತ್ರಕ್ಕೆ ಅರ್ಥಹುಡುಕಲಾದಿತೆ? ಬೀಸಾಡಿದ ಬಣ್ಣಗಳಲ್ಲಿ ಪೃಥ್ವಿ ಸೃಷ್ಟಿಗೊಂಡಂತೆ. ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವ… ಬರೀ ನೇರವಾದ ಮತ್ತು ಅಂಕುಡೊಂಕಾದ ಊರಿನಿಂದ ಕಾಡಿನತ್ತ, ಸಮುದ್ರದತ್ತ ಸಾಗುವ ದಾರಿಗಳು. ಸಮಯ 11.38 ನಿಮಿಷವಾಗಿತ್ತು. ಬರಿ ಊರುಗಳು ಮುಗಿದು ನೆಲದ ಮೇಲೆ ವಿರಳವಾಗಿ ಮರಗಳು. ಮಣ್ಣಿನ ಬಣ್ಣ ಹಚ್ಚಿ ಮೇಲೆ ಕಡು ಹಸಿರು ಬಣ್ಣ ಸಿಂಪಡಿಸಿದಂತೆ, ಅದು ಮುಗಿದ ಹಾಗೆ ದಟ್ಟ ಹಸಿರು ಬಣ್ಣ; ಕಾಡುಗಳು. ಒಮ್ಮೆಲೆ ವಿಮಾನ ಬಲಕ್ಕೆವಾಲಿದ ಅನುಭವ ಒಂದು ಕ್ಷಣ ಗಾಬರಿಯಾದೆ. ಬಲಗಡೆ ದಿಕ್ಕಿಗೆ ವಿಮಾನ ತಿರುಗುತ್ತಿತ್ತು. ಅಲ್ಲಲ್ಲಿ ಹಿಂಜಿದ ಹತ್ತಿಯಂತೆ ತೆಳುವಾಗಿ ಬಿಳಿ ಮೋಡ ಹಾರುತ್ತಿದ್ದರೆ ಭೂಮಿಯ ಮೇಲೆ ಅದರ ನೆರಳು ಕಪ್ಪು ಬಣ್ಣದ ಪ್ರಾಣಿ ಸರಿಯುತ್ತಿದ್ದಂತೆ ಭಾಸವಾಗುತ್ತಿತ್ತು. ಅಷ್ಟರಲ್ಲೆ ಅಂಚೆಲ್ಲ ಹರಿದ ಹಸಿರೆಲೆಯೊಂದು ಬಿದ್ದಂತೆ ಸಮುದ್ರದ ಒತ್ತು ಕಂಡಿತು. ಇಲ್ಲಿ ಸಮುದ್ರ ಕಡು ನೀಲಿ ಅನಿಸುತ್ತಿರಲಿಲ್ಲ. ಕಪ್ಪು ಹಸಿರು ಮತ್ತು ತಿಳಿ ಹಸಿರಾಗಿ ಕಾಣುತ್ತಿತ್ತು.
ಈಗ 29 ನಿಮಿಷಗಳಿಂದ ನೋಡ್ತಾ ಇದ್ದದ್ದು ಬರೀ ಊರು, ಹೊಲ, ಬೆಟ್ಟ, ದಾರಿಗಳು, ಅಲ್ಲಲ್ಲಿ ಒತ್ತುಗಳು. ಇವು ಕೆಂಪು, ಬಿಳಿ, ತಿಳಿ ಹಸಿರು, ಕಡು ಹಸಿರು ಟೈಲ್ಸ್ಗಳನ್ನು ಜೋಡಿಸಿದಂತೆ ನಡುವೆ ಹಾವು ಹರಿದಂತೆ ದಾರಿಗಳು. ಮತ್ತೊಂದು ಬಣ್ಣದ ಬಟ್ಟಲು, ಪ್ರಕೃತಿಯನ್ನು ಚಿತ್ರಿಸಲು ಬಟ್ಟಲಲ್ಲಿ ಹಸಿರು ಬಣ್ಣ ಹಾಕಿಟ್ಟಂತೆ; ಕ್ರಿಸ್ಮಸ್ ಟ್ರೀ ಅಲಂಕರಿಸಿದಂತೆ ಬೆಟ್ಟ. ಇದು ಮುಗಿದ ತಕ್ಷಣ ಮತ್ತೆ ಶರಧಿ, ಬಿಳಿ ಬಾಲದ ಹುಳುಗಳಂತೆ ಜಹಾಜಗಳು ಕಂಡರೆ, ದ್ವೀಪಗಳು ಅಲ್ಲಲ್ಲಿ ಹಸಿರುಬಣ್ಣದ ಬಟ್ಟಲಲ್ಲಿ ಕಲ್ಲೊಂದು ಬಿದ್ದಂತೆ ಕಾಣುತ್ತಿದ್ದವು. ಭೂಮಿ ಮೇಲೆ ನಿಂತು ಮೇಲೆ ನೋಡಿದರೆ ಆಕಾಶ ಹೇಗೆ ಕಾಣುವುದೋ ಹಾಗೆ ಆಕಾಶದಲ್ಲಿಂದ ಸಮುದ್ರ ಕಾಣುತ್ತಿತ್ತು. ವಿಮಾನ ಆಗಾಗ ಬಲಕ್ಕೆ, ಎಡಕ್ಕೆ ವಾಲುತ್ತಾ ದಿಕ್ಕನ್ನು ಬದಲಿಸುತ್ತಿತ್ತು. ನನ್ನ ಪಕ್ಕದಲ್ಲಿಯೇ ಹೊರ ಭಾಗದಲ್ಲಿ ವಿಮಾನದ ರೆಕ್ಕೆ ಇದ್ದುದರಿಂದ ವಾಲುವಾಗ ಹೊರನೋಡಿದರೆ ಹೆದರಿಕೆ ಆಗುತ್ತಿತ್ತು. ಅಷ್ಟರಲ್ಲೆ ಸಮುದ್ರದಲ್ಲಿ ಒಂದು ಅತಿ ದೊಡ್ಡ ಹಡಗು ಪರ್ಕ್ ಚಾಕೊಲೆಟ್ನಷ್ಟು ಕಾಣುತ್ತಿತ್ತು. ಅದರ ಸುತ್ತಮುತ್ತಲೂ ಬಹಳಷ್ಟು ಬಿಳಿ ಬಾಲದ ಹುಳುಗಳು. ಬಹುಶಃ ಬಂದರು ಸಮೀಪವಿತ್ತೇನೊ? ಮಣ್ಣಿನ ಹಾಸುಗಳು, ದಿಬ್ಬಗಳು; ಇಲ್ಲಿನ ಮಣ್ಣಿನ ಬಣ್ಣ ಬಿಳಿ ಬೆಲ್ಲದಂತಿತ್ತು. ಕೈರೋ ಸಮೀಪಿಸುತ್ತಿತ್ತು. ಅದು ಮರುಭೂಮಿ. ಅಂತೂ ಚಿತ್ರದಲ್ಲಿಯ ಭೂಪಟ!
ನಂತರ ದೊಡ್ಡ ಆಕಾರದಲ್ಲಿ ಊರು; ನಡುವೆ ದೊಡ್ಡ ಹಸಿರು ಹೆಬ್ಬಾವು ಕಡು ಹಸಿರನ್ನು ಇಕ್ಕೆಲದಲ್ಲಿ ಚಾಚಿಕೊಂಡು ಅಂಕುಡೊಂಕಾಗಿ ಬಿದ್ದಂತೆ, ಒಂದು ಕಡೆ ರಿಂಗ್ ರೋಡ್ನಂತೆ ಕಾಣುತ್ತಿತ್ತು. ಅದುವೇ ಇಜಿಪ್ತಿನ ಜೀವನಾಡಿ, ವರಪ್ರಸಾದ ನೈಲ್ನದಿ! ಕಣ್ಣುಗಳು ಧನ್ಯ! ಧನ್ಯ! ಈಗ ನಾವು ಏಷ್ಯಾ ಖಂಡ ದಾಟಿ, ಯೂರೋಪ್ ಖಂಡವನ್ನು ನೋಡಿ, ಆಫ್ರಿಕಾ ಖಂಡವನ್ನು ಪ್ರವೇಶ ಮಾಡುತ್ತಿದ್ದೆವು. ನೆನೆದು ಮೈ ರೋಮಾಂಚನವಾಯಿತು. ಚಂದ್ರ ಮಾತ್ರ ಬೆನ್ನು ಬಿಟ್ಟಿರಲೆ ಇಲ್ಲ. ನಮ್ಮೊಂದಿಗೆ ಬರ್ತಾನೆ ಇದ್ದ. ವಿಮಾನ ಕೆಳಗಿಳಿಯುತ್ತಿರುವ ಅನುಭವ; ಆ ಬಗೆಗೆ ಮಾಹಿತಿ ಬಿತ್ತರವಾಗುತ್ತಿತ್ತು. ಆಗ ಕಣ್ಣು ವೇಗವಾಗಿ ಅರಸತೊಡಗಿದವು… ಎಲ್ಲಾದರೂ ಪಿರ್ಯಾಮಿಡ್ ಕಾಣುವುದೆ? ಎಂದು. ವಾಹನಗಳು ಇರುವೆಯಂತೆ ನಂತರ ಆಟದ ವಾಹನಗಳಂತೆ ಕಾಣುತ್ತಿದ್ದವು. ಖರ್ಜೂರ, ಉತ್ತತ್ತಿ ಮರಗಳು ಪ್ಲಾಸ್ಟಿಕಿನ ಆಟಿಕೆಯ ಮರಗಳಂತೆ ಕಾಣತೊಡಗಿದವು. ಮತ್ತೂ ಕೆಳಗಿಳಿದಾಗ ದ್ವಿ ಚಕ್ರ ವಾಹನಗಳೂ ಕಾಣತೊಡಗಿದವು. ಗೋಧಿ, ಜೋಳ, ಕಬ್ಬು ಮುಂತಾದ ಬೆಳೆಗಳು ಸ್ಪಷ್ಟ ಗೋಚರವಾಗತೊಡಗಿದವು. ಕೈರೋ ಆಗಮಿಸಿತ್ತು. ಬೆಲ್ಟ್ ಕಟ್ಟಿಕೊಂಡೆವು. ಹೊಟ್ಟೆಯೊಳಗೆ ತಳಮಳ!
(ಮುಂದುವರಿಯುವುದು…)

‍ಲೇಖಕರು avadhi

11 March, 2014

ನಿಮಗೆ ಇವೂ ಇಷ್ಟವಾಗಬಹುದು…

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸನ್ನಿಧಿಯಲ್ಲಿ

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮತ್ತೆ ಮತ್ತೆ ಅದೇ ಜಾಗದಲ್ಲಿ ನಿಲ್ಲುತ್ತಿತ್ತು ಖಾಲಿ ಬೈಕ್

0 Comments

Trackbacks/Pingbacks

  1. ನೈಲ್ ನದಿಯ ಮಡಿಲಲ್ಲಿ : ಕೈರೋದಲ್ಲಿ ರಾಧೆ ಮತ್ತು ಕೃಷ್ಣರ ಜಗಳ! « ಅವಧಿ / Avadhi - [...] ನೈಲ್ ನದಿಯ ಮಡಿಲಲ್ಲಿ : ಕೈರೋದಲ್ಲಿ ರಾಧೆ ಮತ್ತು ಕೃಷ್ಣರ ಜಗಳ! March 12, 2014 by avadhinew (ಇಲ್ಲಿಯವರೆಗೆ…) [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading