ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನೈಲ್ ನದಿಯ ಮಡಿಲಲ್ಲಿ’- ಬ್ಲೂ ಮಾಸ್ಕ್ ನೋಡುತ್ತಾ

(ಇಲ್ಲಿಯವರೆಗೆ)

ಸುಲ್ತಾನ ಅಹಮಥ್ ಮಸೀದಿ (ಬ್ಲೂ ಮಾಸ್ಕ್)

(Sultan Ahamet Mosque (Blue Mosque and social complex)

ಈ ಮಸೀದಿ ಆಟೋಮನ್ ಸುಲ್ತಾನ್ ಪ್ರಥಮ ಅಹಮೆಥ್ ನ ಆಳ್ವಿಕೆಯ ಕಾಲದಲ್ಲಿ (1603-1617) ಪ್ರಮುಖ ಶಿಲ್ಪಿಯಾದ ಸೆದೆಪ್ಕರ್ ಮೆಹಮೆಥ್ ಆಗಾನಿಂದ ಕಟ್ಟಲ್ಪಟ್ಟಿದೆ.

1609ರಲ್ಲಿ ಕಟ್ಟಲು ಆರಂಭಿಸಿದ ಈ ಮಸೀದಿ ಮುಕ್ತಾಯಗೊಂಡದ್ದು 1617ರಲ್ಲಿ. ಸಮಾಜ ಸಂಕೀರ್ಣ ಹಾಗೂ ಇತರ ಭಾಗಗಳು ಮುಕ್ತಾಯಗೊಂಡದ್ದು 1620ರಲ್ಲಿ. ಸುಲ್ತಾನ ಅಹಮೆಥ್ 1617ರಲ್ಲಿ ಮಸೀದಿ ಪ್ರವೇಶವಾದ ಮೇಲೆ ಮರಣಹೊಂದಿದನು. ಅವನ ಗೋರಿಯನ್ನು ಅವನ ಮಗ ದ್ವಿತೀಯ ಓಸ್ಮಾನ್ ತನ್ನ ಆಳ್ವಿಕೆಯ ಕಾಲ 1620ರಲ್ಲಿ, ಅಲ್ಲಿಯೇ ಕಟ್ಟಿಸಿದನು.
ಈ ಮಸೀದಿ ಅಪೂರ್ವವಾದ ಅಟ್ಟೋಮನ್ ಯುಗದ ಶಿಲ್ಪಕಲೆಗೆ ಸಾಕ್ಷಿಯಾಗಿದೆ. ಆ ಯುಗದ ಭವ್ಯವಾದ ಮತ್ತೂ ಸೊಗಸಾದ ಕಲಾತ್ಮಕತೆ ಇಲ್ಲಿ ಮೆವೆತ್ತಿದೆ. ಇಡೀ ಮಸೀದಿ ಬಹುದೊಡ್ಡ ಹೊರಾಂಗಣ ಒಳಗೊಂಡಿದ್ದು ಇದಕ್ಕೆ 8 ಪ್ರವೇಶದ್ವಾರಗಳಿದ್ದು, ಮೂರುದ್ವಾರಗಳು ಮುಂದಿವೆ. ಒಳಾಂಗಣಕ್ಕೆ ಈ ಮೂರು ದ್ವಾರಗಳಿಂದ ಒಳಬಂದರೆ ಅಲ್ಲಿ 26 ಕಂಬಗಳ ಮೇಲೆ 30 ವಿಹಾರಗಳು ಗುಮ್ಮಟಗಳೊಂದಿಗೆ ಶೋಭಿಸುತ್ತವೆ. ಅಲ್ಲೊಂದು ಕಾರಂಜಿ ಮತ್ತು ಅಷ್ಟಭುಜದ ನೀರಿನ ಟ್ಯಾಂಕ್ ಕಂಬಗಳ ಮೇಲೆ ಗುಮ್ಮಟದೊಂದಿಗೆ ಕಟ್ಟಲ್ಪಟ್ಟಿದೆ. ಮಸೀದಿಯ ಒಳಭಾಗದ ಅಳತೆ 64 ಮೀ ಥ 72 ಮೀ. ಬಹುಭಾಗ ಆವರಿಸಿರುವ ಮುಖ್ಯ ಗುಮ್ಮಟದ ಎತ್ತರ 43 ಮೀ ಹಾಗೂ ವ್ಯಾಸ 23.5 ಮೀ ಇದ್ದು, ಕಮಾನುಗಳಿಂದ ಸಂಧಿಸುವ ನಾಲ್ಕು ಬಹುದೊಡ್ಡ ಕಂಬಗಳ ಮೇಲೆ ನಿಂತಿದೆ. ಆನೆ ಕಾಲಿನಂಥ ಕಂಭದ ಸುತ್ತ ನಾವು ನಾಲ್ಕು ಜನ ವರ್ತುಳಾಕಾರದಲ್ಲಿ ಕೈಕೈ ಹಿಡಿದುಕೊಂಡು ನಿಂತರೂ ಸ್ವಲ್ಪ ಭಾಗ ಪೂರ್ಣಗೊಳ್ಳದೆ ಉಳಿಯಿತು. ಅಷ್ಟು ದೊಡ್ಡದಾಗಿದೆ.

ಮುಖ್ಯ ಗುಮ್ಮಟ ನಾಲ್ಕು ಉಪಗುಮ್ಮಟಗಳ ಆಧಾರದ ಮೇಲಿದ್ದು, ಉಪಗುಮ್ಮಟಗಳಿಗೆ ಕಮಾನುಗಳು ಆಧಾರವಾಗಿವೆ. ಈ ಮಸೀದಿಗೆ ಆರು ಮಸೀದಿ ಸ್ತಂಭಗಳಿವೆ. ಪ್ರತಿಯೊಂದು ಸ್ತಂಭಕ್ಕೆ, ಹೊರಭಾಗವನ್ನು ಮತ್ತು ಒಳಾಂಗಣವನ್ನು ನೋಡಲು ಸಾಧ್ಯವಾಗುವಂತೆ ಕೈ ಸಾಲೆಗಳು (Balconies)ಇವೆ. ಇದು ಇಡೀ ಜಗತ್ತಿನಲ್ಲಿಯೇ ಆರು ಮಸೀದಿ ಸ್ತಂಭಗಳಿರುವ ಏಕೈಕ ಮಸೀದಿಯಾಗಿದೆ. ಪ್ರವೇಶದ್ವಾರ ಮತ್ತು ಒಳಗಿನ ಎರಡು ಬದಿಗಳಲ್ಲಿ ಸುಲ್ತಾನನ ಸಂದೇಶಗಳಿವೆ. ಕಮಾನಿನ ಮಾಡುಗಳು ಹಾಗೂ ಉಪದೇಶ ವೇದಿಕೆಗಳನ್ನು ಮಾರ್ಬಲ್ ಗ ಳಿದ ಅಲಂಕರಿಸಿ ಕಟ್ಟಿದ್ದಾರೆ. ಇದಕ್ಕೆ 260 ಕಿಟಕಿಗಳಿದ್ದು ಕಮಾನನ್ನು ಸುತ್ತುವರೆದಿವೆ. ಛಾವಣಿ ಕೆಳಗಿನ ಒಳಗೋಡೆಗಳು ಅಲಂಕಾರಿಕ ಟೈಲ್ಸ್ ಗಳಿಂದ ಹೊದಿಸಲ್ಪಟ್ಟಿವೆ. ಈ ಟೈಲ್ ಗಳ ಹಿಂಬದಿಗೆ 16ನೇ ಶತಮಾನದಲ್ಲಿ ಆರಂಭವಾದ ಮತ್ತು 17ನೇ ಶತಮಾನದಲ್ಲಿ ಪೂರ್ಣಗೊಂಡ ದಿನಾಂಕಗಳನ್ನು ಬರೆಯಲಾಗಿದೆಯಂತೆ. ಮುಖ್ಯ ಗುಮ್ಮಟ, ಉಪಗುಮ್ಮಟಗಳು ಹಾಗೂ ಕಮಾನುಗಳನ್ನು ಕುಸುರಿ ಕೈ ಕೆಲಸಗಳಿಂದ ಸಿಂಗರಿಸಲಾಗಿದೆ. ನೀಲಿ ಟೈಲ್ಸ್ ಮತ್ತು ಕೈಕುಸುರಿ ಅಲಂಕಾರಗಳಿಂದಾಗಿ ಇದನ್ನು `ಬ್ಲೂ ಮಾಸ್ಕ’ ಎಂದು ಕರೆಯುತ್ತಾರೆ. ಕಪ್ಪೆ ಚಿಪ್ಪು ಮತ್ತು ಜೇಡರ ಬಲೆಯಂಥ ಈ ವಾಸ್ತುಶಿಲ್ಪಕಲೆಯ ಕಾರ್ಯಕುಶಲತೆ ಸಾಧ್ಯವಾದದ್ದು ಸೆದೆಪ್ಕರ್ ಮೆಹಮೆಥ್ ಆಗಾನಿಂದ ಮಾತ್ರ. (ಆಗ್ರಾದಲ್ಲಿಯ ತಾಜಮಹಲಿನ ವಾಸ್ತುಶಿಲ್ಪಿ ಈ ಸೆದೆಪ್ಕರ್ ಮಹಮ್ಮದನ ಖಾಸಾ ಶಿಷ್ಯನಂತೆ.) ಮಸೀದಿಯೊಳಗಿನ ಕೈ ಬರಹ ಆ ಕಾಲದ ಪ್ರಸಿದ್ಧ ಲಿಪಿಕಾರನಾದ ಅಹಮೆಥ್ ಗುಬಾರಿಯದು. ಮಸೀದಿಯ ಹೊರ ಅಂಚಿಗೆ ಸಮಾಜ ಸಂಕೀರ್ಣಗಳನ್ನು ಕಟ್ಟಲಾಗಿದೆ. ಅವುಗಳಲ್ಲಿ ಶಾಲೆಗಳು, ಆಸ್ಪತ್ರೆಗಳು ಗ್ರಂಥಾಲಯಗಳು (ದಾರ್-ಎಲ್-ಕುರ್ರಾ) ಸಾರ್ವಜನಿಕ ಕಾರಂಜಿಗಳು ಮತ್ತು ಅಂಗಡಿಗಳು, ಧಾರ್ಮಿಕ ಮತ್ತು ಶೈಕ್ಷಣಿಕ ಸಂಘ ಸಂಸ್ಥೆಗಳೂ ಇವೆ. ಈಗ ಕಾರ್ಪೆಟ್ (ಹಾಸುಗಂಬಳಿ)ಗಳ ಸಂಗ್ರಹಾಲಯವಾಗಿರುವ ಭಾಗ ಮೊದಲು ಸುಲ್ತಾನರ ಕ್ರೀಡಾ ಮಂಟಪವಾಗಿತ್ತಂತೆ.
ಭವ್ಯವಾದ ಮಸೀದಿಯನ್ನು ಅಲಂಕರಿಸಲು ಬಳಸಿದ ಟೈಲ್ಸ್ ಗಳಲ್ಲಿ ನೀಲಿ ಬಣ್ಣಗಳಿಂದಲೇ ಚಿತ್ರಗಳನ್ನು ಬಿಡಿಸಲಾಗಿತ್ತು. ಗುಮ್ಮಟದ ಒಳಭಾಗ ಮತ್ತು ಲಿಪಿಗಳನ್ನು ಬಂಗಾರ ಕರಗಿಸಿ, ಆ ದ್ರವದಿಂದ ವರ್ಣಾಲಂಕಾರ ಮಾಡಲಾಗಿದೆ. ಎಂಥಹ ಭೂಕಂಪಗಳು ಇದನ್ನು ಕದಲಿಸಲಾರವು. ಈ ಮಸೀದಿ ಗ್ರೀಕ್ ದೊರೆಗಳ ಕಾಲದಲ್ಲಿ ಚರ್ಚ್ ಆಗಿತ್ತು ಎನ್ನುವುದಕ್ಕೆ ಉಪಕಮಾನುಗಳು ಸೇರುವ ಎರಡು ಮೂಲೆಗಳಲ್ಲಿ ಕಾಣುವ ಏಸುವಿನ ಮುಖ ಸಾಕ್ಷಿಯಾಗಿದೆ. ಇನ್ನೆರಡು ಮೂಲೆಗಳಲ್ಲಿ ಅಷ್ಟದಳ ಕಮಲದ ರೇಖಾಕೃತಿಇತ್ತು. ಇದರ ಒಳಪದರಿನಲ್ಲಿ ಏಸುವಿನ ಚಿತ್ರಗಳೇ ಇವೆಯಂತೆ. ತುರ್ಕರು ಅಳತೊಡಗಿದಾಗ ಈ ಕ್ರಿಶ್ಚಿಯನ್ ಧರ್ಮದ ಕಲಾಕೃತಿಗಳ ಮೇಲೆ ಬಣ್ಣ ಬಳಿದು ಮುಚ್ಚಿ ಹಾಕಿದ್ದರಂತೆ. ಆದರೆ ಈಗಿನ ಟರ್ಕಿ ಸರ್ಕಾರ ಮೇಲ್ಪದರನ್ನು ಕೆತ್ತಿಸಿ ತೆಗೆದು ಒಂದೆರಡೂ ಬದಿಗಾದರೂ ಯೇಸುವಿನ ಮೂಲ ಚಿತ್ರ ಕಾಣುವಂತೆ ಮಾಡಿದ್ದಾರೆ.
ಮಾರ್ಗದರ್ಶಿ ಕೊರಾಯ ಮಸೀದಿಯಲ್ಲಿ ಎಲ್ಲರನ್ನೂ ಕೂಡ್ರಿಸಿ ಎಲ್ಲ ಮಾಹಿತಿಯನ್ನು ಹೇಳಿದನು. ಉಷ್ಣತೆ ಹೆಚ್ಚಾಗಿರುವ ಇಸ್ತಾಂಬುಲ್ ನಲ್ಲಿ ಮಸೀದಿಯ ಒಳಗೆ ಕುಳಿತಾಗ ವಾತಾನುಕೂಲದೊಳಗೆ ಕುಳಿತಂತಾಗಿತ್ತು. ಅಷ್ಟು ತಂಪಿತ್ತು ಅಲ್ಲಿ.
ಮಸೀದಿ ನೋಡಿ ಹೊರಬರುವಾಗ ಪುಸ್ತಕ ಮಳಿಗೆಯಿಂದ 18 TL ಕೊಟ್ಟು‘SilkRoad’ ಪ್ರಕಾಶನದ‘Country of Civilization-TURKEY’ ಪುಸ್ತಕ ಖರೀದಿಸಿದೆ.
ಶಾಸನಸ್ತಂಭ (OBELISK) 2 ಇದೊಂದು ಶಾಸನಸ್ತಂಭ.

ಕ್ರಿ.ಪೂ 1471ರಲ್ಲಿ ಇಜಿಪ್ತಿನ ಫೇರೋ (ರಾಜ) ಮೂರನೆಯ ತುತಮೊಸಿಸ್ (Tutmosis)ನು ಯುಫಾರೆಟ್ಸ್ (Euphrates) ನದಿಯನ್ನು ಆಚೆವರೆಗೂ ಯಶಸ್ವಿಯಾಗಿ ಪ್ರಯಾಣಿಸಿದ ಸ್ಮರಣಾರ್ಥ ಕಾರ್ನಾಕ್ ದೇವಾಲಯದ ಎದುರು ಇದನ್ನು ನಿಲ್ಲಿಸಲಾಗಿದೆ. ಈ ಶಿಲಾಸ್ತಂಭ ತಿಳಿ ಗುಲಾಬಿ ಬಣ್ಣದ ಅಖಂಡ ಗ್ರೈನೇಟ್ ಆಗಿದ್ದು, ನಾಲ್ಕು ಮೂಲೆಗಳನ್ನು ಹೊಂದಿದ ಇದರ ಮೇಲೆ ಚಿತ್ರಲಿಪಿ ಇದೆ. ಈ ಶಿಲಾಸ್ತಂಭವನ್ನು ಇಜಿಪ್ತಿನಿಂದ ಕಾನ್ಸ್ ಸ್ಟಾoಟಿನೋಪಲ್ಲಿಗೆ ಗ್ರಾಂಡ್ ಥಿಯೋಡಾಸಿಸ್ (Theodosis)£ ಕಾಲದಲ್ಲಿ (378-395) ತರಲಾಯಿತು. ಕೆಳಗಿರುವ ಎಂಟಡಿ ಎತ್ತರದ, ಚೌಕು ಶಿಲಾಪೀಠದ ಮೇಲೆ ನಾಲ್ಕೂ ಮೂಲೆಗಳಿಗೆ ಲೋಹದ ನಾಲ್ಕು ಚೌಕಾದ ಗಟ್ಟಿಗಳನ್ನಿಟ್ಟು ಅವುಗಳ ಮೇಲೆ ಶಿಲಾಸ್ತಂಭ ನಿಲ್ಲಿಸಲಾಗಿದೆ.
ಹಾಸುಗಂಬಳಿಗಳ ಸಂಗ್ರಹಾಲಯ
(Museum of Corpets by General derectorates of foundations)

ಒಂದು ಮಳಿಗೆಗೆ ಮಾತ್ರ ಹೋದೆವು. ಅದರ ಹೆಸರು ಕಾರ್ಪೆಟರಿ ಮೆಟಿಸ್. ಔಪಚಾರಿಕವಾಗಿ ನಮ್ಮನ್ನು ಅಲ್ಲಿ ಸ್ವಾಗತಿಸಲಾಯಿತು. ಒಳಗೆ 22 ಜನ ಗೋಡೆಗುಂಟ ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆ ಇತ್ತು. ಅಂಗಡಿ ಮಾಲಿಕರು ಅಲ್ಲಿ ನಮಗೆ ಕೋಲ್ಡ್ ಟೀ ಕೊಟ್ಟು ಉಪಚರಿಸಿದರು. ಇದೆಲ್ಲ ಮುಗಿದ ನಂತರ ಭಿತ್ತಿಗಳಿಗೆ ತೂಗುಬಿಟ್ಟ, ಸುತ್ತಿಟ್ಟ ಸಿಲ್ಕುಗಳಿಂದ ರಾಶಿ-ರಾಶಿಯಾಗಿ ಸುಂದರ ಕಲಾಕೃತಿಯ, ವರ್ಣಮಯವಾದ ಅನೇಕ ಅಳತೆಗಳುಳ್ಳ ಕೈ ಮಗ್ಗದ ಕಾರ್ಪೆಟ್ ಗಳನ್ನು ಬೇಸರವಿಲ್ಲದೆ ತೋರಿಸಿದರು. 2X 4 ಅಡಿ ಉದ್ದದ ಕಪ್ಪು ಹಸಿರು ಬಣ್ಣದ ಸುಂದರ ಕಾರ್ಪೆಟ್ ನ ಬೆಲೆ 1600 ಡಾಲರ್. ಅಂದರೆ 75,200 ರೂಪಾಯಿಗಳು. ಕಾರ್ಪೆಟ್ ಗಳನ್ನು ಮೂರ್ನಾಲ್ಕು ವಿಧದ (ಚಿತ್ರಗಳನ್ನವಲಂಬಿಸಿದೆ) ದಪ್ಪನೆಯ ತುರ್ಕಿ ದಾರ ಬಳಸಿ. ನೇಯುವುದನ್ನು ಡೆಮೋ ಮಾಡಿ ತೋರಿಸಿದರು. ಲುಂಗಿಯಂತಹ ಲಂಗ ಮತ್ತು ಬ್ಲೌಸ್ ಹಾಕಿದ್ದ ಗುಂಗುರು ಕೂದಲಿನ ಒಬ್ಬ ಯುವತಿ ಒಂದು ಕೈಯಲ್ಲಿ ಹರಿತವಾದ ಚಿಕ್ಕ ಚಾಕು ಹಾಗೂ ಇನ್ನೊಂದು ಕೈಯಲ್ಲಿ ನೈಲಾನ್ ದಪ್ಪದಾರದ ಲಡಿ ಹಿಡಿದು ಚಕಚಕನೆ ಮಾಡುತ್ತಿದ್ದ ನೇಯ್ಗೆ ತುಂಬಾ ಖುಷಿ ನೀಡಿತು. ಕಸೂತಿ ಗೊತ್ತಿರುವ ನನಗೆ ಈ ನೇಯ್ಗೆಯಲ್ಲಿಯ ಹೊಸತನ ಕಾತುರ ಹುಟ್ಟಿಸಿತು. ಮತ್ತೊಮ್ಮೆ ಮಾಡಿಸಿ ನೋಡಿದೆ. ಪೂರ್ವ ಯೋಜಿತ ಮಾದರಿ ಚಿತ್ರದಂತೆ ಎಷ್ಟು ಸಲ ಯಾವ ಬಣ್ಣದ ದಾರ ಹಾಕಬೇಕು ಎಂಬುದನ್ನು ನೋಡಿಕೊಂಡು, ಮೊದಲೇ ಬಿಗಿದಿಟ್ಟ ಹಾಸುಗಳಲ್ಲಿ ಹೊಕ್ಕೆಳೆಗಳಾಗಿ ಲಾಡಿಯ ದಾರವನ್ನು ಸರಗಂಟುಗಳಾಗಿ ಒಂದು ಕೈಯಿಂದ ಸಿಕ್ಕಿಸುವುದು, ಇನ್ನೊಂದು ಕೈ ಚಾಕುವಿನಿಂದ ಕತ್ತರಿಸುವುದು, ಸಿಕ್ಕಿಸುವುದು, ಕತ್ತರಿಸುವುದು ಮಾಡುತ್ತಾರೆ. ಅವರ ಚಾಕಚಕ್ಯತೆ, ಕೈ ಚಳಕ ಸುಲಭಕ್ಕೆ ಬರುವಂಥದ್ದಲ್ಲ. ಎಲ್ಲ ಮುಗಿದ ಮೇಲೆ ಮೇಲ್ಸ್ ತರವನ್ನು ಕತ್ತರಿಯಿಂದ ಸಮಾಂತರಗೊಳಿಸುತ್ತಾರೆ. ಬಣ್ಣಗಳ ಜೋಡಣೆ, ಚಿತ್ರಗಳ ಆಯ್ಕೆ, ನೇಯ್ಗೆ ಎಲ್ಲವೂ ಕೌಶಲ್ಯ ಪೂರ್ಣ ಕಾರ್ಯಗಳು. ಅವುಗಳ ಭಾರ ಬ್ಯಾಗಿಗೆ ಹೆಚ್ಚಾದರೆ, ಬೆಲೆಯ ಭಾರ ಪರ್ಸ್ಗೆ ಹೆಚ್ಚಾಗುತಿತ್ತು. ಯಾರೂ ಕಾರ್ಪೆಟ್ ಖರೀದಿಸಲಿಲ್ಲ. ಆದಾಗ್ಯೂ ಅಂಗಡಿ ಮಾಲಿಕರು “No problem its our pleasure and proud of our country’’ ಎಂದು ಹಸನ್ಮುಖರಾಗಿ ಬೀಳ್ಕೊಟ್ಟರು.
ಗ್ರ್ಯಾಂಡ್ ಬಝಾರ್
ಅಲ್ಲಿಂದ ನೇರವಾಗಿ ವ್ಯಾಪಕವಾಗಿ ಹರಡಿದ ಗ್ರಾಂಡ್ ಬಝಾರ್ಗೆ ಬಂದೆವು. ಇದು ಪ್ರತಿ ಮೂಲೆಗೂ ಇರುವ ಶೌಚಾಲಯಗಳ ಮೋರಿಗೆ ಒಳ ಜೋಡಣೆ ಕಲ್ಪಿಸಿರುವ, ನೆಲದ ಕೆಳಗೆ ಒಂದು ಅಸಾಧಾರಣ ನೀರಿನ ಟ್ಯಾಂಕ್ ಹೊಂದಿರುವ ಮತ್ತು ಒಂದೇ ಛಾವಣಿ ಅಡಿಯಲ್ಲಿ 4000ಕ್ಕೂ ಹೆಚ್ಚು ಅಂಗಡಿಗಳನ್ನು ಹೊಂದಿರುವ ಜಗತ್ತಿನ ಅತೀ ಹಳೆಯ ಮತ್ತು ಅತ್ಯಂತ ದೊಡ್ಡ ಏಕ ಛತ್ರ ವ್ಯಾಪಾರ ಮಳಿಗೆ (Mall) ಯಾಗಿದೆ. ಗ್ರಾಂಡ್ ಬಝಾರ್ ಇರುವ ಸ್ಥಳ ಬೈಜಾಂಟಿನ್ನ ಅವಧಿಯಲ್ಲಿ ವ್ಯಾಪಾರ ಕೇಂದ್ರವಾಗಿತ್ತು. ಸಾಮ್ರಾಟ್ ಮಹಮದ್ ಈ ಛಾವಣಿ ಬಝಾರ್ ಮತ್ತು ಶ್ರೀಗಂಧ ಬಝಾರ್ಗಳನ್ನು 1445-1461 ರ ಮಧ್ಯದಲ್ಲಿ ಕಟ್ಟಿಸಿದ. ಆ ಮೂಲಕ ನಗರದ ಆರ್ಥಿಕ ಜೀವನವನ್ನು ಸಂಪದ್ಭರಿತಗೊಳಿಸಿದನು. ಇದು 4000ಕ್ಕೂ ಹೆಚ್ಚು ಅಂಗಡಿಗಳು, 65 ಓಣಿಗಳು, 8 ದೊಡ್ಡ, 10 ಸಣ್ಣ ಪ್ರವೇಶದ್ವಾರಗಳನ್ನು ಹೊಂದಿದ ಬೃಹತ್ ಏಕಛತ್ರ ವ್ಯಾಪಾರಿ ಮಳಿಗೆ. ಇಲ್ಲಿ ಅಂಗಡಿಗಳು ಬೆಳಿಗ್ಗೆ 10 ರಿಂದ ರಾತ್ರಿ 10ರವರೆಗೂ, ಹಲವು ಅಂಗಡಿಗಳು ಹೊತ್ತು ಮೀರಿದ ಮೇಲೂ ತೆರೆದಿರುತ್ತವೆ. ಸಾವಿರಾರು ಕಮಾನು ಮತ್ತು ಗುಮ್ಮಟಗಳುಳ್ಳ ಛಾವಣಿಯ ಅಡಿ ಒಂದು ದಾರಿಯಲ್ಲಿ ಖರೀದಿಗೆ ಹೋದರೆ ಮರಳಿ ಮೂಲಸ್ಥಾನಕ್ಕೆ ಬರುವುದು ಕಷ್ಟ. ಅಲ್ಲಿಯ ವಸ್ತು ವೈವಿಧ್ಯತೆ ನೋಡಿ, ನಾಲ್ಕು ಜನ ಕೂಡಿ ಹೋದೆವು. ಇಲ್ಲಿ 90% ಮುಸ್ಲಿಂ ಜನಾಂಗ ಉಣ್ಣುವ, ತಿನ್ನುವ, ತೊಡುವ, ಧರಿಸುವ, ಮೂಸುವ ಹಾಗೂ ಮನೆಯ ಎಲ್ಲ ಅಲಂಕಾರಿಕ ಮೂಲ ಸಾಮಗ್ರಿಗಳೆಲ್ಲವೂ ಅಲ್ಲಿದ್ದವು. ನೋಡುತ್ತಾ ಹೋಗಿ, ಹೊರ ಬಂದಾಗ ನಾವು ಅಲ್ಲಿಯವರೆಗೆ ಬಂದ ರಸ್ತೆ ಯಾವುದೆಂದೇ ತಿಳಿಯಲಿಲ್ಲ. ನಾವು ಬಂದದ್ದು ಗೇಟ್ 1 ರಿಂದಾದರೂ ಬಹಳ ದೂರ ಇತ್ತು. ಎತ್ತ ನೋಡಿದರೂ ಒಂದೇ ಆಕಾರ, ಒಂದೇ ರೀತಿಯ ತಿರುವು. ಅವೇ ಅವೇ ವಸ್ತುಗಳು, ಅದೇ ದೀಪದ ಝಗಮಗ. ನಾಲ್ವರೂ ನೀರಾಗಿ ಬಿಟ್ಟೆವು. ಎರಡು ಮೂರು ಕಡೆಗೆ ಹೋಗಿ, ಮರಳಿ, ಕೊನೆಗೆ 1ನೇ ಗೇಟಿಗೆ ಬಂದು ಉಸ್ ಎಂದೆವು. ಕುಳಿತುಕೊಳ್ಳಲು ಎಲ್ಲಿಯೂ ಆಸ್ಪದವಿರಲಿಲ್ಲ. ಹೊರಗೆ ಮೂರು ಯುರೋಗೆ ಅರ್ಧ ಲೀಟರ್ ನ ಮಿನರಲ್ ನೀರಿನ ಬೋಟಲ್ ಖರೀದಿಸಿ ಕುಡಿದೆವು. ಕೊಟ್ಟ ಒಂದು ಗಂಟೆ ಸಮಯ ಮುಗಿದರೂ ಇನ್ನೂ ಯಾರೊಬ್ಬರು ಅಲ್ಲಿ ಬಂದು ಸೇರಿರಲಿಲ್ಲ. ಅಲ್ಲಿಯೇ ಇದ್ದ ನಾಲ್ಕನೆಯ ಆಭರಣದ ಅಂಗಡಿಯಲ್ಲಿ ಕಾಲಹರಣಕ್ಕೆ ಆಭರಣ ನೋಡುತ್ತಾ ನಿಂತಾಗ, ನನ್ನ ಮನಸೆಳೆದ ಮಧ್ಯದಲ್ಲಿ ಹಸಿರು ಜೇಡ ಇರುವ ಸುತ್ತಲೂ ಬಿಳಿ ಹರಳಿರುವ ಬೆಳ್ಳಿಯ ಲ್ಯಾಕೆಟ್ ಒಂದನ್ನು 14 ಯುರೋ ಕೊಟ್ಟು ಖರೀದಿಸಿದೆ. ಅರ್ಧ ಗಂಟೆ ಕಳೆಯುವಷ್ಟರಲ್ಲೇ ಮನು ಮತ್ತು ಕೊರೈ ಬಂದು “ಎಲ್ಲರೂ ಬಂದರೆ? ನಡೀರಿ-ನಡೀರಿ” ಎಂದು ಆತುರಾತುರವಾಗಿ ಕರೆಯ ತೊಡಗಿದರು.
ಎಲ್ಲರೂ ಬಸವಳಿದು ಹೋಗಿದ್ದೆವು. 15ರ ಬೆಳಿಗ್ಗೆಯಿಂದ 16ರ ಸಂಜೆವರೆಗೂ ಸ್ವಲ್ಪವೂ ವಿಶ್ರಾಂತಿ ನಿದ್ದೆ ಬರಲಿಲ್ಲ. ಹೊಸ-ಹುರುಪು ಎಲ್ಲವನ್ನೂ ಹಿಂದೆ ತಳ್ಳಿ ಮುಂದೆ ಸೆಳೆಯುತ್ತಿತ್ತು. 7.30ಕ್ಕೆ ಮರಳಿ ಬೆಸ್ಟ್-ವೆಸ್ಟರ್ನ್ ಸಿನೆಟರ್ ಹೋಟೆಲಿಗೆ ಬಂದೆವು. ಸೂರ್ಯ ಆಗ ಮುಳುಗುತ್ತಿದ್ದ. ಅಲ್ಲಿ ನಾವು ಕುಡಿಯುವ ಪಾನೀಯಗಳೇನೂ ಇರಲಿಲ್ಲ. ಮುಖ ತೊಳೆದಾಗ ಜೀವ ಉಲ್ಲಾಸಭರಿತವಾಯಿತು. 8.10 ರವರೆಗೆ ವಿಶ್ರಾಂತಿ ಪಡೆದು ಡಿನರ್ ಗಾಗಿ ಕೆಳಗೆ ಇಳಿದು ಬಂದೆವು. ಕೋಚ್ ಲ್ಲಿ dubb ಹೋಟೆಲ್ಲಿಗೆ ಹೋಗಿ ಭಾರತೀಯ ಊಟ ಮಾಡಿ ಬಂದಾಗ ದೇಹ ಹಾಸಿಗೆ ಹುಡುಕುತ್ತಿತ್ತು. ಅಖಂಡ 36 ತಾಸುಗಳ ಜೊತೆಗೆ ಎರಡುವರೆ ಗಂಟೆ ಕೂಡಿಸಿದರೆ ಮೂವತ್ತೆಂಟುವರೆ ತಾಸುಗಳ ಅವಿಶ್ರಾಂತಿ, ಮೇಲಾಗಿ ದೊಡ್ಡ ಹಗಲು ಬೇರೆ, ಬೆಡ್ ಲ್ಯಾಂಪ್ ಹಚ್ಚಿದರೆ ನಿದ್ದೆ ಬಾರದೆಂದು ಅದನ್ನು ಆರಿಸಿ ಮಲಗಿದೆ. ಹೊದಿಕೆಗಾಗಿ ಹುಡುಕಿದರೆ ಹೊದಿಕೆ ಇರಲೇ ಇಲ್ಲ. ಕೊನೆಗೆ ಬೆಡ್ ಸೀಟ್ ಎತ್ತಿದೆವು. ಅದರ ಕೆಳಗೊಂದು ಹೊದಿಕೆ, ಹೊದಿಕೆ ಕೆಳಗೊಂದು ಬೆಡ್ ಸೀಟ್ ಇದ್ದವು. ಬೆಡ್ ಸೀಟ್ ಜೊತೆಗೆ ಹೊದಿಕೆಯನ್ನು ಆಚೆ ಈಚೆ ಬೆಡ್ ಕೆಳಗೆ ಸಿಕ್ಕಿಸಿದ್ದನ್ನು ಎಳೆದು ತೆಗೆಯುವುದು ಸ್ವಲ್ಪ ಕಷ್ಟವೇ ಆಯಿತು. ಅರ್ಧ ಎಳೆದು ತೆಗೆದು, ಇನ್ ಅರ್ಧದೊಳಗೆ ನಾನೇ ಸೇರಿಕೊಂಡೆ. ಅತೀವ ದಣಿವು, ಬೆವರು, ಬಸವಳಿಕೆ, ಹೊಸ ಜಾಗ ಬೇರೆ, ವಾತಾನುಕೂಲ ಇದ್ದರೂ ದೇಹ ಜೀವಕ್ಕೆ ನಿದ್ದೆ ಬರಲಿಲ್ಲ. ಯಾಕೋ ಏನೋ ಉಸಿರುಗಟ್ಟಿದಂತೆ; ನೈಸರ್ಗಿಕ ಗಾಳಿ ಬೇಕೆನಿಸುತ್ತಿತ್ತು. ಭೂಮಿಯ ಒಂದೆಡೆಯಿಂದ ಹಾರಿ ಬಂದು ಇನ್ನೊಂದೆಡೆ ಬಿದ್ದಂತಾಗಿತ್ತು. ಮನೆ, ಮಕ್ಕಳು ನೆನಪಾಗತೊಡಗಿದವು. ಉಫ್… ಕಿಟಕಿ ತೆಗೆಯೋಣವೆನಿಸಿ ಪರದೆ ಮುಟ್ಟಿದರೆ ಟರ್ಕಿ ಟೊವೆಲ್ ನಷ್ಟೆ ದಪ್ಪಾದ ಮತ್ತು ಒರಟಾದ ಬಟ್ಟೆ, ಪಕ್ಕಕ್ಕೆ ಸರಿಸಿ ಗಾಜಿನ ಬಾಗಿಲು ತೆರೆದೆ. ಹಾಯ್ ಎನಿಸಿತು. ಕಿಟಕಿಗೆ ಮುಖಮಾಡಿ ಮಲಗಿದರೆ… ಮೂರ್ಹತ್ತರಷ್ಟಿದ್ದ ಚಂದ್ರ ಪಕ್ಕನೆ ನಕ್ಕಂತಾಯಿತು. ಅವನನ್ನೇ ನೋಡುತ್ತಾ ನಿದ್ದೆ ಹೋದೆ. ವಿದೇಶದಲ್ಲೊಂದು ದಿನ ಕಳೆದು ಹೋಯಿತು.
(ಮುಂದುವರಿಯುವುದು…)

‍ಲೇಖಕರು avadhi

9 March, 2014

ನಿಮಗೆ ಇವೂ ಇಷ್ಟವಾಗಬಹುದು…

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸನ್ನಿಧಿಯಲ್ಲಿ

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮತ್ತೆ ಮತ್ತೆ ಅದೇ ಜಾಗದಲ್ಲಿ ನಿಲ್ಲುತ್ತಿತ್ತು ಖಾಲಿ ಬೈಕ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading