ಹಾಪಿ

ಇದು ಅರ್ಧಪುರುಷ, ಅರ್ಧ ಮಹಿಳೆಯ ದೇಹಾಕಾರವಿರುವ ದೇವತೆ (ಅರ್ಧನಾರೀಶ್ವರನಂತೆ). ನೈಲ್ ನದಿಯ ನೀರಿನ ದೇವತೆ ಇವನು. ನದಿಯ ನೀರನ್ನು ಮುಂದೆ ನೂಕುವುದರಿಂದ ನೈಲ್ ನಲ್ಲಿ ಪ್ರವಾಹ, ನೆರೆ ಬರುತ್ತದೆ ಎಂಬ ನಂಬಿಕೆ. ನೆರೆ ಎಂದರೆ ಫಲವತ್ತಾದ ಹೂಳು! ಭೂಮಿಯ ಸತ್ವ, ಫಲವತ್ತತೆ ಕಡಿಮೆಯಾದಾಗ ನೆರೆಗಾಗಿ ಈ ದೇವತೆಯನ್ನು ಆರಾಧಿಸುತ್ತಿದ್ದರು. ಹರಿವು, ಮೀನಿನ ಸಂಕೇತ ಇವನದು. ಎಡಗೈಯಲ್ಲಿ ದಂಡ ಬಲಗೈಯಲ್ಲಿ `ಅಂಕ್’ ಧರಿಸಿರುತ್ತಾನೆ.
ಅನೂಬಿಸ್

ಇವನು ಶವ ಸಂಸ್ಕಾರ ವಿಧಿಯ ಮುಖ್ಯಸ್ಥ ಹಾಗೂ ಸಮಾಧಿ ಸ್ಥಳದ ರಕ್ಷಕ. ತೋಳದ ಮುಖ, ಮನುಷ್ಯ ದೇಹ, ಬಲಗೈಯಲ್ಲಿ ದಂಡ, ಎಡಗೈಯಲ್ಲಿ ಅಂಕ್ ಇವು ಇವನ ಚಿಹ್ನೆಗಳು. ಇವನು ಓಸಿರೀಸ್ ಮತ್ತು ನೆಪ್ರೀಸ್ ಳ (ಸೆತ್ನ ಪತ್ನಿ) ಮಗ.
ತವಾರೆತ (Tawaret)

ಇವಳು ಹೆರಿಗೆಯ ಅಧಿದೇವತೆ. ಇವಳು ಪ್ರಸವ ಕಾಲದಲ್ಲಿ ಹೆಂಗಸರನ್ನು ರಕ್ಷಿಸುವವಳು. (ಪ್ರಸವ ಕಾಲದಲ್ಲಿ ಮಗುವನ್ನು ಹೊರದೂಡುವ ಶಕ್ತಿ `ಬೆಸ್ಸ್’.) ಬೆಕ್ಕಿನ ಮುಖದ ಬೆಸ್ಸ್ ಗಳೊಂದಿ ತವಾರೆತ್ ಸೇರಿಕೊಂಡು ಶುಭ ಪ್ರಸವಕ್ಕೆ ನೆರವಾಗುತ್ತಾಳೆ.
ಇವಳಿಗೆ `ನೀರಾನೆಯ ಮುಖ ದೊಡ್ಡಗಾತ್ರದ ಸ್ತನ, ಹೊಟ್ಟೆಗಳಿಂದ ಕೂಡಿದ ಹೆಣ್ಣು ದೇಹಕ್ಕೆ ಸಿಂಹದ ಪಾದಗಳಿವೆ. ಬಲಗೈಯಲ್ಲಿ `ಸಾ’ ಎನ್ನುವ ಅಭಯದ ಚಿಹ್ನೆ ಇದೆ.
ನುತ್


ಆಕಾಶದ ಅಧಿದೇವತೆ. ರಕ್ಷಣೆಯ ಸಂಕೇತವಾಗಿ ಇವಳ ಇಡೀ ದೇಹ ಮುಂದಕ್ಕೆ ಬಾಗಿದೆ. ಭೂಮಿ ಈ ಬಾಗಿದ ಆಕಾರದೊಳಗಿದೆಯಂತೆ. ಇವಳು ಶವ ರಕ್ಷಕಿಯೂ ಹೌದು. ಆದುದರಿಂದ ಇವಳ ಚಿತ್ರವನ್ನು ಶವ ಪೆಟ್ಟಿಗೆಗಳ ಒಳಗೆ ಚಿತ್ರಿಸಿದ್ದಾರೆ. ಸೂರ್ಯ ಇವಳ ಬಾಯಲ್ಲಿ ಮುಳುಗಿದಾಗ ರಾತ್ರಿಯಾಗುತ್ತದೆ. ಯೋನಿಯಿಂದ ಹೊರಗೆ ಬಂದಾಗ ಬೆಳಗು ಎನ್ನಲಾಗುತ್ತದೆ.
ಗೆಬ್

ಇವನು ಭೂಮಿಯ ದೇವತೆ, ನುತ್ ಳ ಪತಿ. ಎರಡು ಅಂಕಣದ ಕಿರೀಟ ಇವನ ಲಾಂಛನ.
ಖ್ನೌಮ್ (Khnum)

ಮನುಷ್ಯ ದೇಹ, ಟಗರಿನ ತಲೆಯ ರೂಪದಲ್ಲಿರುವ ಸೃಷ್ಟಿಕರ್ತ ದೇವತೆ, ಬಲಗೈಯಲ್ಲಿ ದಂಡ ಎಡಗೈಯಲ್ಲಿ ಅಂಕವಿದೆ. ಇವನನ್ನು ನೈಲ್ ನದಿಯ ಪೋಷಕ ಎನ್ನಲಾಗಿದೆ. ಪ್ರವಾಹವನ್ನುಂಟು ಮಾಡಿ ದೇಶಕ್ಕೆ ಫಲವತ್ತತೆ ನೀಡುವನೆಂಬ ಕಾರಣಕ್ಕಾಗಿ ಆಸ್ವಾನ್ ದೇಗುಲಗಳ ಭಿತ್ತಿಗಳಲ್ಲಿ ಇವನನ್ನು ಚಿತ್ರಿಸಲಾಗಿದೆ.
ಮಿನ್

ಈತ ಫಲವತ್ತತೆಯ ದೇವರಿವನು. ಮರುಭೂಮಿಗಳ ರಕ್ಷಕ. ಈತನ ಕೈಯಲ್ಲಿ ಶವಸಂಸ್ಕರಣಕ್ಕೆ ಉಪಯೋಗಿಸುವ ಬಟ್ಟೆಯ ಪಟ್ಟಿ, ತಲೆಯ ಮೇಲೆ ತೆನೆಗಳ ಮಧ್ಯೆ ಪಾಮ್ ಹಣ್ಣಿರುವ ಕಿರೀಟ, ಎತ್ತಿ ಹಿಡಿದ ಎಡಗೈ, ನಿಮಿರಿರುವ ಶಿಶ್ನ, ಕತ್ತಿನಲ್ಲಿ ತಾವೀಜ. ಇದು ಇವನ ರೂಪ. (ನಮ್ಮಲ್ಲಿಯ ಜೋಕುಮಾರ ಸ್ವಾಮಿಯನ್ನು ನೆನಪಿಸುತ್ತದೆ)
ಹೀಗೆ ನೈತ್ (ಇವಳು ಬೇಟೆಯ ಅಧಿದೇವತೆ), ಮಾತ್ (ಇವಳು ನ್ಯಾಯ, ಶಿಸ್ತು ಹಕ್ಕುಗಳ ಪ್ರತೀಕ), ಮೂತ್ (ಇವಳು ನ್ಯಾಯ ವ್ಯವಸ್ಥೆಯ ಪ್ರತಿನಿಧಿ), ಪ್ತಾ (ವಾಯುದೇವ), ಈತ ಆಕಾಶ (ನುತ್), ಭೂಮಿ (ಗೆಬ್) ಗಳ ನಡುವಿನ ಸಂಚಾರಿ) (ಇವರು ತ್ರಿಮೂರ್ತಿಗಳು), ಸೂಕರ್ (ಸಮಾಧಿ ಸ್ಥಳಗಳ ರಕ್ಷಕ ದೇವತೆ) ಹೀಗೆ ಹತ್ತು ಹಲವಾರು ದೇವತೆಗಳು ಪ್ರಾಚೀನ ಇಜಿಪ್ತ ನಾಗರಿಕತೆಯಲ್ಲಿ ಆರಾಧಿಸಲ್ಪಟ್ಟಿವೆ. ದಂತಕಥೆಗಳ ಹಿನ್ನೆಲೆಯ ದೃಷ್ಟಿಕೋನದಿಂದ ನೋಡುವುದಾದರೆ ಭಾರತ ಮತ್ತು ಇಜಿಪ್ತ್ ಗಳೆರಡೇ ಈ ಥರದ ಪೌರಾಣಿಕ ಹಿನ್ನೆಲೆ ಹೊಂದಿವೆ. ಪ್ರಪಂಚದಲ್ಲಿಯೇ ಹೀಗೆ ತನ್ನದೇ ಆದ ಶಾಸ್ತ್ರ ಪುರಾಣ ಹೊಂದಿ ಇಜಿಪ್ತಾಲಜಿ ಮತ್ತು ಇಂಡೋಲಜಿಗಳೆಂದೇ ಕರೆಯಿಸಿಕೊಳ್ಳುವಂಥ ವಿಶೇಷಾದ್ಭುತ ಲಕ್ಷಣಗಳಿಂದ ಕೂಡಿದ ದೇಶಗಳೆಂದರೆ ಇಜಿಪ್ತ್ ಮತ್ತು ಭಾರತ.
ಮೆಮನ್ ಪ್ರತಿಮೆಗಳು [Colossi of Memnon]
ಕೋಚ್ ಏರಿದಾಗ ಸರಿಯಾಗಿ ಒಂದುವರೆಯಾಗಿತ್ತು. ಕಾರ್ನಾಕ್ ದೇವಾಲಯದ ಅಗಾಧತೆಯನ್ನೇ ಮೆಲುಕು ಹಾಕುತ್ತಾ ಸುಧಾರಿಸಿಕೊಳ್ಳುವುದರಲ್ಲಿಯೇ ಕೋಚ್ ಒಂದೆಡೆ ನಿಂತಿತು. ಯಾಕಪ್ಪಾ? ಎಂದು ಹೊರ ನೋಡಿದರೆ ಎಡಪಕ್ಕದಲ್ಲಿ ಎರಡು ಭಯಂಕರ ಪ್ರತಿಮೆಗಳು. ಅವು ಮೆಮನ್ ದೈತ್ಯ ಪ್ರತಿಮೆಗಳು.

ಇವುಗಳನ್ನು ಮುಮ್ಮಡಿ ಅಮೆನ್ಹೊಟೆಪ್ ನ ದೇವಾಲಯದ ಪ್ರಥಮ ಮಹಾದ್ವಾರಕ್ಕೆ ಎದುರಾಗಿ ಕಟ್ಟಲಾಗಿತ್ತಂತೆ. ಈಗ ಆ ದೇವಾಲಯ ಇಲ್ಲ. ಕ್ರಿ.ಪೂ 27ರಲ್ಲಿ ಆದ ಭೂಕಂಪಗಳಿಂದಾಗಿ ಬಿದ್ದು ಹೋಗಿದ್ದರಿಂದ ಸ್ಥಳೀಯರೆಲ್ಲ ಅದನ್ನು ತೆಗೆದು ಬಿಟ್ಟಿದ್ದಾರೆ. ಈ ಪ್ರತಿಮೆಗಳು 23 ಮೀ ಎತ್ತರವಾಗಿವೆ. ಈ ಪ್ರತಿಮೆಗಳ ಬೃಹದಾಕಾರ ಇದ್ದಿರಬಹುದಾದ ಆ ದೇವಾಲಯದ ಮಹೋನ್ನತಿಯನ್ನು, ಅಪ್ರತಿಮ ಬೃಹತ್ತತೆಯನ್ನು ಸಾರುತ್ತದೆ. ಪ್ರವಾಸಿಗರು ಚಿಂತನೆ ಮಾಡಿ, ಇದರ ಲಕ್ಷಣಗಳನ್ನು ನೋಡಿ ಇವನ್ನು ಟ್ರಾಯ್ (Troy) ಯುದ್ಧದಲ್ಲಿ ಅಖಿಲ್ಲಾಸ್ (Achillas)ಎಂಬ ಎದುರಾಳಿಯಿಂದ ಕೊಲ್ಲಲ್ಪಟ್ಟ ಮೆಮನ್ನ ಪ್ರತಿಮೆಗಳೆಂದು ಹೆಸರಿಸಿ ವ್ಯಕ್ತಿತ್ವಾರೋಪ ಮಾಡಿದ್ದಾರಂತೆ. ಮೆಮನ್ ಬಲಗಡೆಯ ಪ್ರತಿಮೆಯಲ್ಲಿ ತನ್ನ ತಾಯಿ ಮುತಂವಾಯ (Mutmwaya)ಳೊಂದಿಗೆ ಸಿಂಹಾಸನಾರೂಢನಾಗಿದ್ದರೆ ಎಡಗಡೆ ಪ್ರತಿಮೆಯಲ್ಲಿ ತನ್ನ ಹೆಂಡತಿ ಟೈ(Tye) ಳೊಂದಿಗೆ ಸಿಂಹಾಸನಾರೂಢನಾಗಿದ್ದಾನೆ. ಈ ದೈತ್ಯ ಮೂರ್ತಿಗಳು ಭೂಕಂಪನದಿಂದ ಭಗ್ನಗೊಂಡಾಗ, ಸೂರ್ಯೊದಯವಾದ ಕೆಲವೆ ಕ್ಷಣಗಳಲ್ಲಿ ಇವುಗಳಿಂದ ಒಂದು ರೀತಿಯ ಸಪ್ಪಳ ಬರುತ್ತಿತ್ತಂತೆ. ನಂತರ ದೊಡ್ಡ ಕಲ್ಲ ಛಪ್ಪಡಿಗಳಿಂದ ಇವನ್ನು ಜೀರ್ಣೊದ್ಧಾರ ಮಾಡಿದಾಗ ಸಪ್ಪಳ ನಿಂತು ಹೋಯಿತಂತೆ.
ಏಕಶಿಲಾ ಪ್ರತಿಮೆಗಳು ಭೂಕಂಪದ ಹೊಡೆತದಿಂದಾಗಿ, ತುಂಡು ತುಂಡು ಕಲ್ಲು ಜೋಡಿಸಿ ಮಾಡಿದಂತೆ ಕಾಣುತ್ತಿದ್ದವು. ಹೊಟ್ಟೆಗಳು ಚುರುಗುಟ್ಟುತ್ತಿದ್ದವು. ಬಿಸಿಲಿನ ತಾಪಕ್ಕೆ ಬಸ್ಸಿನೊಳಗಿದ್ದ ಶೈತ್ಯ ಪೆಟ್ಟಿಗೆಯಿಂದ ನಾವೇ ಬಾಟಲಿ ತೆಗೆದುಕೊಂಡು ನೀರನ್ನು ಕುಡಿದೆವು. ಅಲ್ಲಿಂದ ನೇರವಾಗಿ ಬಂದುದು The Taste of India ಹೋಟೆಲಿಗೆ. ಬಹಳ ವೈಭವಯುತವಾಗಿ ಅಲಂಕರಿಸಿದ ಬೃಹತ್ ಹೋಟೆಲದು. ಬ್ರಿಟಿಷರ ಮಾಲಿಕತ್ವದಲ್ಲಿ 2001ರಿಂದ ನಡೆಯುತ್ತಿರುವ ಈ ಹೋಟೆಲ್ ನಲ್ಲಿ ಸಿಕ್ಕ ಒಂದು ಹೊಸರುಚಿ ಎಂದರೆ ತಂದೂರಿ ರೋಟಿ. ಮನೆಬಿಟ್ಟು ಸರಿಯಾಗಿ ಹತ್ತನೆಯ ದಿನದಂದು ರೊಟ್ಟಿಯಂಥದ್ದೊಂದೇನೋ ತಿನ್ನಲು ಸಿಕ್ಕಿತು ಮರುಭೂಮಿಯಲ್ಲಿ ಓಯಾಸೀಸ್ ಸಿಕ್ಕಂತೆ. ಒಂದು ತಿನ್ನುವುದರೊಳಗೆ ಸಾಕು ಎನಿಸಿತು. ಬಹಳ ಆದರದಿಂದ ಸ್ವಾಗತಿಸಿ ಉಪಚರಿಸಿದರು. ಆ ಓಣಿಯಲ್ಲಿರುವ ಎಲ್ಲ ಬ್ಯಾಂಕ್, ಹೋಟೆಲ್ ಮತ್ತು ಅಂಗಡಿಗಳೆಲ್ಲ ಪಂಚತಾರಾ ವೈಭವ ಇರುವಂಥವು. ಊಟ ಮುಗಿದ ನಂತರ ಅಲ್ಲಿಯೇ ಸಮೀಪದಲ್ಲಿದ್ದ ಪಪಿರಸ್ (Papiras) ಜೊಂಡಿನಿಂದ ತಯಾರಿಸಿದ ಹಾಳೆಯಲ್ಲಿ ಮಾಡಿದ ವರ್ಣಚಿತ್ರಕಲೆಗಳಿರುವ ಆರ್ಟ್ ಗ್ಯಾಲರಿಗೆ ಕರೆದೊಯ್ದರು.
ಪಪಿರಸ್ ನ ಚಿತ್ರಕಲೆಗಳು (Papiras Paintings)
ಪಪಿರಸ್ ಒಂದು ಜೊಂಡು ಜಾತಿಯ ಸಸ್ಯ. ಸಣ್ಣ ಸಣ್ಣ ಹುಲ್ಲಿನ ನಡುವೆ ಒಂದು ಉದ್ದವಾದ ದಂಟು ಹುಟ್ಟುತ್ತದೆ. ಈ ದಂಟು ಸುಮಾರು 6 ಮೀಟರಿನಷ್ಟು ಉದ್ದವಾಗಿ ಬೆಳೆಯುತ್ತದೆ. ಮುಂದೆ ಗೋಲಾಕಾರದ ತೆನೆಗಿರುವ ಉದ್ದುದ್ದ ಎಸಳಿಗೆ ಬೀಜಗಳಿರುತ್ತವೆ. ಒಂದು ರೀತಿ ನೋಡಲು ಗಂಡು ಈರುಳ್ಳಿಯ ದಂಟು ಮತ್ತು ಹೂಬೀಜಗಳಂತೆ;

ಪಪಿರಸ್ ನ ದಂಟು ಗಟ್ಟಿಯಾಗಿರುತ್ತದೆ. ಇದು ಜೌಗು ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತದೆ. ಈ ಜೊಂಡು ಪ್ರಾಚೀನ ಇಜಿಪ್ಶಿಯನ್ನರ ಕಾಗದ ತಯಾರಿಕೆಯ ಮೂಲ ಮತ್ತು ಏಕೈಕ ಮೂಲ ಸಂಪತ್ತು. ಅಂಗಡಿಯಲ್ಲಿಯ ಮಾಲಿಕ ಮತ್ತು ಸಿಬ್ಬಂದಿ ಹಾರ್ದಿಕವಾಗಿ ಸ್ವಾಗತಿಸಿದರು. ಇದುವರೆಗೂ ಗೋರಿಗಳ ಒಳಗಿನ ಗುಹಾಭಿತ್ತಿಗಳಲ್ಲಿ ನೋಡಿದ ಒಂದೊಂದು ದೃಶ್ಯಗಳು, ಇಜಿಪ್ತ್ ದೇವತೆ, ಹ್ಯಾಟ್ಷೆಪ್ಸೂತ್, ಇಜಿಪ್ತ್ ಕ್ಯಾಲೆಂಡರ್, ರಾಜರಾಣಿಯರು, ಸಿಂಹಾಸನಾರೂಢ ರಾಜ ಮತ್ತು ಆಶೀರ್ವದಿಸುತ್ತಿರುವ ದೇವತೆ ಇವೇ ಮೊದಲಾದ ಸಾವಿರಾರು ಕಲೆಗಳು ನೈಸರ್ಗಿಕ ಬಣ್ಣಗಳಲ್ಲಿ ಪಪಿರಸ್ ನ ಹಾಳೆಗಳ ಮೇಲೆ ಅರಳಿ ನಿಂತಿದ್ದವು. ಅದೊಂದು ಅಪೂರ್ವ ಕಲಾಮಂದಿರ. ಎಲ್ಲ ಅಡ್ಡಾಡಿ ನೋಡುತ್ತಿರುವ ಹಾಗೆ ಅಂಗಡಿಯ ಮಾಲಿಕ ಒಂದು ಪಕ್ಕಕ್ಕಿರುವ ಎತ್ತರದ ಟೇಬಲಿನತ್ತ ನಮ್ಮನ್ನು ಕರೆದೊಯ್ದರು.
ಅಲ್ಲಿ ಒಬ್ಬ ಯುವಕ, ಒಂದು ಗೇಣುದ್ದದ ಹಸಿರು ದಂಟುಗಳನ್ನು ನೀರಲ್ಲಿ ನೆನೆಹಾಕಿದ ಬುಟ್ಟಿ, ಒಂದು ಚೌಕಾಕಾರದ ಕಟ್ಟಿಗೆಯ ಮಣೆ, ಒಂದು ಕಬ್ಬಿಣದ ಕುಟ್ಟುವ ಸಾಧನ, ದಪ್ಪ ಲಟ್ಟಣಿಗೆ ಹಾಗೂ ಮೇಲೆ ಕೆಳಗೆ ಒಂದೂವರೆ ಫೂಟಿನಷ್ಟು ಉದ್ದಗಲದ ಕಬ್ಬಿಣದ ದಪ್ಪ ಚೌಕುಗಳನ್ನು ಹೊಂದಿದ ಒತ್ತುವ ಯಂತ್ರಗಳೊಂದಿಗೆ ಆ ಟೇಬಲ್ಲಿನ ಹಿಂದೆ ನಿಂತಿದ್ದ. ನಾವೆಲ್ಲ ಸುತ್ತುವರೆದು ನಿಲ್ಲುವುದೇ ತಡ ಆತ ಡೆಮೋ ಮಾಡಿ ತೋರಿಸುತ್ತ ಇಂಗ್ಲೀಷ್ ನಲ್ಲಿ ಹೇಳತೊಡಗಿದ. ಬುಟ್ಟಿಯಲ್ಲಿರುವವು ಪೆಪಿರಸ್ ದಂಟಿನ ತುಂಡುಗಳು. ಮಣಿಸಿದರೆ ಲಟಕ್ ಎಂದು ಮುರಿದು ಬಿಡುತ್ತಿತ್ತು. ಎಷ್ಟುದ್ದದ್ದ ಅಳತೆ ಬೇಕೊ ಅಷ್ಟುದ್ದದ ತುಂಡುಗಳನ್ನಾಗಿಸಿ, ಇವನ್ನು ಹೀಗೆ ನೀರಿನಲ್ಲಿ 6 ದಿನಗಳ ಕಾಲ ನೆನೆಸಬೇಕು. ನಂತರ ಅದರ ಹಸಿರಿನ ಮೇಲ್ಪದರ ಅಥವಾ ತೊಗಟೆಯನ್ನು ಹರಿತ ಚಾಕುವಿನಿಂದ ಸುಲಿಯಬೇಕು. ಒಳಗಿನ ಹಾಲು ಬಣ್ಣದ ತಿರುಳನ್ನು ಕಬ್ಬಿಣದ ಕುಟ್ಟುವ ಸಾಧನದಿಂದ ಚೌಕು ಮಣೆಯ ಮೇಲಿರಿಸಿ ಕುಟ್ಟಬೇಕು. ಆತ ಕುಟ್ಟುತ್ತ ಹೋದಂತೆ ದುಂಡಗೆ ಗೇಣುದ್ದ ಇದ್ದ ತಿರುಳು ಉದ್ದಗಲಕ್ಕೆ ದೊಡ್ಡದಾಗುತ್ತಾ ಮತ್ತು ತೆಳ್ಳಗಾಗುತ್ತ ಹೋಯಿತು. ಸುಮಾರು 2-3 ಇಂಚು ಅಗಲ, ಎರಡು ಗೇಣಿನಷ್ಟು ಉದ್ದವಾಯಿತು. ಅದು ಇನ್ನೂ ತೆಳ್ಳಗಾಗಿ, ಅದರ ಎರಡೂ ಮೈ ಪಾತಳಿ ಸಮವಾಗಲು ದೊಡ್ಡ ಲಟ್ಟಣಿಗೆಯಿಂದ ಭಾರ ಹಾಕಿ ಲಟ್ಟಿಸಿದ. ಹೀಗೆ ನಾಲ್ಕು ತುಂಡುಗಳನ್ನು ಮಾಡಿ, ಅರ್ಧ ಇಂಚು ಒಂದರ ಮೇಲೊಂದು ಕೂರುವಂತೆ ಇರಿಸಿ ಮತ್ತೆ ಲಟ್ಟಿಸಿದ. ಅವುಗಳೊಳಗಿನ ತೇವಾಂಶದಿಂದಾಗಿ ಒಂದಕ್ಕೊಂದು ಅಂಟಿಕೊಂಡವು. ತಿರುಗಿಸಿ ಮತ್ತೊ ಮ್ಮೆ ಲಟ್ಟಿಸಿದ.
ಪಪಿರಸ್ ಈಗ ಚೌಕಾಕಾರದ ರೂಪ ಪಡೆಯಿತು. ಇದು ಅರ್ಧ ಇಂಚಿನಷ್ಟು ಒಂದರ ಮೇಲೊಂದು ಅಂಟಿದಷ್ಟೇ ಭಾಗ ದಪ್ಪವಾಗಿರುತ್ತದೆ. ಲಟ್ಟಿಸಿದಾಗ ಸಮವಾಗುತ್ತದೆ. ಹೀಗೆ ಲಟ್ಟಿಸಿದ ಈ ಹಾಳೆಯನ್ನು ಒತ್ತುವ ಯಂತ್ರದ ಕಬ್ಬಿಣದ ಪಟ್ಟಿಗಳ ನಡುವೆ ಇರುವ ಬಟ್ಟೆಯ ಮಧ್ಯದಲ್ಲಿ ಹಾಸಿ, ಆ ಯಂತ್ರವನ್ನು ಒತ್ತುವಂತೆ ತಿರುಗಿಸಬೇಕು. ಹಾಳೆ ಹೊರಳಿಸಿ ಮತ್ತೊಮ್ಮೆ ಒತ್ತಬೇಕು. ಇದರಿಂದ ಹೆಚ್ಚಾದ ನೀರಿನಂಶವನ್ನು ಬಟ್ಟೆ ಹೀರಿಕೊಳ್ಳುತ್ತದೆ. ಈ ಒತ್ತಿದ ಸ್ಥಿತಿಯಲ್ಲಿಯೇ ಆರುದಿನ ಬಿಡಬೇಕು. ಆರು ದಿನಗಳ ಬಳಿಕ ಒಣಗಿದ ಮತ್ತು ತೆಳ್ಳಗಿನ ಪಪಿರಸ್ ಹಾಳೆ ಸಂಪೂರ್ಣ ಸಿದ್ಧರೂಪದಲ್ಲಿ ಸಿಗುತ್ತದೆ. ಆ ಚಚ್ಚೌಕಾಕಾರದ ಹಾಳೆಯನ್ನು ತೆಗೆದು ತೋರಿಸಿದ. ಅದರ ಮೇಲೆ ನ್ಯಾಚುರಲ್ ಕಲರ್ಗಳಿಂದ ಪೇಂಟ್ ಮಾಡಲಾಗುತ್ತದೆ. ಅದರ ಮೇಲೆ ಬಣ್ಣ ಇಂಗುವುದಿಲ್ಲ ಹಾಗೂ ಹರಡುವುದಿಲ್ಲ ಎಂದ. ಈ ನೈಸರ್ಗಿಕ ಬಣ್ಣಗಳನ್ನು ದಾಳಿಂಬೆ ಸಿಪ್ಪೆ, ಭೃಂಗರಾಜ, ಅರಿಸಿನ, ಕೇಸರಿ ಬೀಜಗಳಿಂದ ತಯಾರಿಸುತ್ತಿದ್ದರಂತೆ.

ಈ ಹಾಳೆ ತಯಾರಿಸುವ ಕಲೆ ಪ್ರಾಚೀನ ಕಾಲದಿಂದಲೇ ಬಂದುದು. ಪ್ರಾಚೀನ ಈಜಿಪ್ಶಿಯನ್ನರಿಗೆ ಈ ಕಲೆ ತಿಳಿದಿತ್ತು. ಈ ರೀತಿಯ ಹಾಳೆ ತಯಾರಿಸಲು ಯಾವುದೇ ರಸಾಯನಿಕಗಳೂ ಬೇಕಾಗಿಲ್ಲ. ಇವುಗಳನ್ನು ಅಗತ್ಯಕ್ಕೆ ತಕ್ಕಂತೆ ಹಲವು ಆಕಾರಗಳಲ್ಲಿ ಮಾಡಿಕೊಳ್ಳಬಹುದು. ಇಂಥ ಹಾಳೆಗಳನ್ನು (ಸಾಮಾನ್ಯ ಜನರ) ಶವದ ಮುಖವಾಡ, ಪೀಠೋಪಕರಣಗಳು, ಪಾದರಕ್ಷೆ, ಟೋಪಿ, ಕೈ ಬೀಸಣಿಕೆ ಮಾಡಲು ಉಪಯೋಗಿಸುತ್ತಿದ್ದರು. ಇಂಥ ವಸ್ತುಗಳನ್ನು ಕೈರೋದ ವಸ್ತು ಸಂಗ್ರಹಾಲಯದಲ್ಲಿ ನೋಡಿದ್ದೆವು. ಇವಷ್ಟೇ ಅಲ್ಲದೆ ಪಪಿರಸ್ ನಿಂದ ತಯಾರಿಸಿದ ಮಂಚ, ಪೀಠೋಪಕರಣಗಳು, ಬುಟ್ಟಿ ದೋಣಿಗಳು ಮುಂತಾದವುಗಳು ಇಲ್ಲಿ ಕಾಣಸಿಗುತ್ತವೆ. ಪ್ರಪಂಚದಲ್ಲಿ ಮೊಟ್ಟ ಮೊದಲು ಹಾಳೆಗಳನ್ನು ಕಂಡು ಹಿಡಿದು, ಬರವಣಿಗೆಯನ್ನೂ ಮಾಡುತ್ತಿದ್ದವರು ಇಜಿಪ್ಶಿಯನ್ನರು. `ಪೇಪರ್’ ಎಂಬ ಶಬ್ದ ಉತ್ಪತ್ತಿಯಾದದ್ದು ಈ ಪಪಿರಸ್ ನಿಂದಲ್ಲೇ ! ಇಷ್ಟೆಲ್ಲ ಸುವ್ಯವಸ್ಥಿತ ನಾಗರಿಕತೆ ಹೊಂದಿರುವುದರಿಂದಲೇ `ಕಗ್ಗತ್ತಲೆಯ ಖಂಡ’ ಎಂಬ ಕುಖ್ಯಾತಿ ಕಳೆದು ಹೋಗಿ ಜಗತ್ತಿನ ಆಧುನಿಕತೆಗೆ ಮತ್ತು ತಂತ್ರಜ್ಞಾನಕ್ಕೆ ಸವಾಲಾಗಿ ನಿಂತಿದೆ ಇಜಿಪ್ತಿನ ನಾಗರಿಕತೆ. ಇಜಿಪ್ತಿನ ತುಂಬ ಎಲ್ಲಿ ನೋಡಿದಲ್ಲೆಲ್ಲ ಅದ್ಭುತದ ಚಿಲುಮೆಗಳೆ. ಒಂದಕ್ಕಿಂತ ಒಂದು ಗೂಢ ನಿಗೂಢ! ಅಗಾಧ-ಅಪ್ರತಿಮ! ಅವುಗಳಿಗೆ ಅವೇ ಮಾದರಿಗಳು.
ಕೆಲವರು ಈ ಪಪಿರಸ್ ವರ್ಣ ಚಿತ್ರಗಳನ್ನು ಕೊಂಡರು. ಅಲ್ಲಿಂದ ನಾವು ಬಂದುದು ಲಕ್ಸರ್ನ ರೈಲು ನಿಲ್ದಾಣಕ್ಕೆ. ಅಲ್ಲಿಗೆ ಬಂದಾಗ ಸಂಜೆಯಾಗುತ್ತಿತ್ತು. ಆ ನಿಲ್ದಾಣದಲ್ಲಿಯೂ ಒಂದು ತಾಸು ಕಾಯ್ದು 7 ಗಂಟೆಗೆ ರೈಲು ಹತ್ತಿದೆವು. ಹುಸೇನ್ ಭಾಯ್ ತನ್ನ ವಿಜಿಟಿಂಗ್ ಕಾರ್ಡ್ ಕೊಟ್ಟು “ಮತ್ತೊಮ್ಮೆ ಬನ್ನಿ” ಎಂದು ಹೇಳಿ ಕೈ ಬೀಸಿದ. ಬರುವಾಗ ಇದ್ದಂಥದ್ದೇ ರೈಲು, ಅದೇ ಊಟ. ಲಾರಿ ಸರ್ ಮತ್ತು ಮನು ಎಲ್ಲರನ್ನು ಕರೆದು `ನಾಳೆ ಕೈರೋದಿಂದ ಇಸ್ತಾಂಬುಲ್, ಇಸ್ತಾಂಬುಲ್ ನಿಂದ ದೆಹಲಿ ಪ್ರಯಾಣ. ಹಾಗಾಗಿ ಬೆಳಿಗ್ಗೆ ಸ್ನಾನ ಮಾಡುವವರು ಬೇಗನೆ ಎದ್ದು ಎಲ್ಲ ಮುಗಿಸಿಕೊಳ್ಳಿ’ ಎಂದು ಹೇಳಿದರು. `ಮತ್ತೆ ಹೀಗೆ ಎಲ್ಲರೂ ಒಂದೆಡೆ ಸೇರುವುದು ಸಾಧ್ಯವಾಗುವುದಿಲ್ಲ. ನಾಳೆಯಿಂದ ಎಲ್ಲರ ಮುಖಗಳು ನಿಮ್ಮ ನಿಮ್ಮ ಮನೆಕಡೆಗೆ ಇರ್ತವೆ’ ಎಂದಿದ್ದಷ್ಟೆ ತಡ ಅದಕ್ಕೇ ಎಲ್ಲರೂ ಇನ್ನೊಮ್ಮೆ ಹಾಡಿನ ಬಂಡಿ ಕಟ್ಟಿದೆವು. ನಗೆ ಚಟಾಕಿಗಳಾದವು. ಇಡೀ ಬೋಗಿಯೇ ನಮ್ಮದಾಗಿತ್ತು. ನಕ್ಕು ನಲಿದು ಕುಣಿದು ಕುಪ್ಪಳಿಸಿದರೂ ಯಾರು ಕೇಳುವವರಿರಲಿಲ್ಲ. ಅದೆಲ್ಲ ಮುಗಿಸಿ ಹೋಗುವಾಗ `ಮತ್ತೊಂದು ಬೋಗಿಯಲ್ಲಿ “ಮಿನಿಪಾರ್ಟಿ ಹಾಲ್” ಇದೆ ನೋಡಿ ಎಂದರು ಮಾರ್ಗದರ್ಶಿ ಮನು. ಅಲ್ಲಿ ಹೋದರೆ ಅದು ಮುಕ್ತಾಯಗೊಂಡಿತ್ತು. ಮೈ ತುಂಬಿಕೊಂಡ ಚಂದ್ರ ನಾಳಿನ ಪೌರ್ಣಿಮೆ ಮಿಲನೋತ್ಸವದ ಕನಸು ಕಾಣುತ್ತ, ತಣ್ಣಗೆ ಸದ್ದಿಲ್ಲದೆ ಸರಿಯತೊಡಗಿದ್ದ. ಕನಸ ಹೊತ್ತ ಕಣ್ಣೊಳಗಿನ ಹೊಳಪು ಮೈಯೆಲ್ಲ ಆವರಿಸಿದಾಗ ಅದರಿಂದ ಹೊರಬಿದ್ದ ಕಿರಣಗಳಲ್ಲಿ ಭೂಮಿ ಮಿಂದೆದ್ದು ಪುನೀತಳಾಗಿತ್ತು. ಬಂದಾಗಿನಿಂದ ಬೆಳೆಯುತ್ತಿದ್ದು, ಬೆಂಬಿಡದೆ ಬೆನ್ನು ಹತ್ತಿದ್ದ ಚಂದ್ರ ಯಶಸ್ವಿ ಪಯಣದ ಸಂಕೇತವಾಗಿದ್ದ; ಕಪ್ಪು ಕಲೆಗಳಿಂದಾಗಿ ಹೊಳಪಿನ ಪ್ರಖರತೆ ಇನ್ನು ಹೆಚ್ಚಾದಂತೆ ಕಾಣುತ್ತಿತ್ತು. 24ರ ರಾತ್ರಿ ರೈಲಿನಲ್ಲಿ ಕಳೆಯಿತು.
ಇನ್ನು ನಡೆಯಲಾಗದ ಹಿರಿಯ, ಸಹ ಪ್ರಯಾಣಿಕರಿಗೆ ಮನದಟ್ಟಾಗಿತ್ತು ಉದ್ದೇಶ ಪೂರ್ವಕವಾಗಿ ಅಲ್ಲದಿದ್ದರೂ ತಮ್ಮಿಂದಾಗಿ ಕೆಲವರಿಗೆ ನೆಮ್ಮದಿಯಿಂದ ನೋಡುವುದಾಗುತ್ತಿಲ್ಲ ಎಂದು. ಹಾಗಾಗಿ ಈ ಎಲ್ಲ ಕಡೆಗೂ ತಾವೇ ಸುಧಾರಿಸಿಕೊಂಡು ಬರುತ್ತಿದ್ದರು.
(ಮುಂದುವರಿಯುವುದು…)
ನೈಲ್ ನದಿಯ ಮಡಿಲಲ್ಲಿ – ಪಪಿರಸ್ ನ ಹಾಳೆಗಳು ತಯಾರಾಗಿದ್ದು ಹೀಗೆ…


0 Comments