ಸರಿಯಾಗಿ 6.30ಕ್ಕೆ ವೇಕ್ ಆಫ್ ಕಾಲ್; ಟಬ್ ಬಾತ್, `ಅಲ್-ಎಹರಂ’ ಹೋಟೆಲ್ ನಲ್ಲಿ ಅಂಥದ್ದೇ ಬೆಳಗಿನ ತಿಂಡಿ, ಎಲ್ಲವನ್ನು ಮುಗಿಸಿ ಪಿರ್ಯಾಮಿಡ್ ನತ್ತ ಹೊರಟಿತು ನಮ್ಮ ಸವಾರಿ. ಇಲ್ಲಿ ನಮ್ಮ ಮಾರ್ಗದರ್ಶಿವಾಗಿ ಬದಲಾಗಿ ಹುಸೇನ್ ಬಂದಿದ್ದ. ಹಸನ್ಮುಖಿಯಾದ, ಭಾರತೀಯ ಸೌಂದರ್ಯವನ್ನೇ ಹೊಂದಿದ, ಆದರೆ ಕೆಂಪು ಬಣ್ಣದ ಗ್ರಾಜ್ಯುಯೇಟ್ ಯುವಕ ತನ್ನ ಪರಿಚಯಿಸಿಕೊಂಡ.
ಸುಮಾರು ಎರಡು ಕಿ.ಮೀ ನಷ್ಟು ದೂರ ಕೋಚ್ ನಿಲ್ಲಿಸಿ ಅಲ್ಲಿ ಇಳಿದು ಪ್ರವೇಶದ್ವಾರದ ಮೂಲಕ ಒಳಹಂತಕ್ಕೆ ಬರಲು ತಿಳಿಸಿದ. ಕೋಚ್ ಸುತ್ತು ಹಾಕಿ ಒಳಹಂತಕ್ಕೆ ಬಂತು. ಅಷ್ಟರಲ್ಲೇ ಮಾದರಿ ಪಿರಾಮಿಡ್, ಒಂಟೆ, ರಾಜ, ರಾಣಿ, ದೇವತೆಗಳು ಮುಂತಾದವುಗಳನ್ನು ಮಾರುವ ಬಿಡಿ ವ್ಯಾಪಾರಸ್ಥರ ತಂಡ ನಮ್ಮ ಸುತ್ತುವರೆದಿತ್ತು. ಮತ್ತೆ ಕೋಚ್ ಹತ್ತಿ, ದೊಡ್ಡ ಪಿರ್ಯಾಮಿಡ್ ನ್ನು ನೋಡುವ ಸುಮಾರು 2 ಕೀ. ಮೀ ದೂರದ ಪಾಯಿಂಟ್ ಗೆ ತಂದು ನಿಲ್ಲಿಸಿದ ಹುಸೇನ್. ಅಲ್ಲಿಂದ ಬೆಳಗಿನ ಎಳೆ ಬಿಸಿಲಲ್ಲಿ ದೂರದ 3 ಪಿರ್ಯಾಮಿಡ್ ಗಳು ನೆರಳಂತೆ ಕಾಣುತ್ತಿದ್ದವು. ಬಲಬದಿಗೆ ಮೂರು ಸ್ಟೆಪ್ ಪಿರ್ಯಾಮಿಡ್ ಗಳಿದ್ದವು. ಅಲ್ಲಿಯೂ ಬಿಡಿ ವ್ಯಾಪಾರಿಗಳ ಕಿರಿಕಿರಿ ತುಂಬಿ ಹೋಗಿತ್ತು. ಮತ್ತೆ ಕೋಚ್ ಏರಿ ಪಿರ್ಯಾಮಿಡ್ ಗಳ ಸನ್ನಿಧಿಗೆ ತಂದಿಳಿಸಿದ.
ಮೈ ಪುಲಕ ಎಷ್ಟು ನೋಡಿದರೂ ಕಣ್ತುಂಬದು, ಮನ ತಣಿಯದು; ಕ್ಯಾಮರಾ ರೀಲುಗಳು ಮಾತ್ರ ಖಾಲಿಯಾಗುತ್ತಿದ್ದವು. ಕೈರೋ ಹೊರವಲಯದ ಗೀಝಾದಲ್ಲಿ ಪ್ರಾಚೀನ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ರಾಜಾ ಖುಫುವಿನ ಗ್ರೇಟ್ ಪಿರ್ಯಾಮಿಡ್ ಎದುರಿಗೆ ನಿಂತಿದ್ದೆವು. ತಳಭಾಗದಲ್ಲಿ ಹೊರಗೆ ಕಾಣುವ ಸುಣ್ಣದ ಕಲ್ಲುಗಳು ಮುರಿದು ಬಿದ್ದ ಗೋಡೆಯಂತೆ ಚೆಲ್ಲಾಪಿಲ್ಲಿಯಾಗಿದ್ದವು. ಇತ್ತೀಚೆಗೆ ಜನ ಮನೆ ಕಟ್ಟಲು ಕದ್ದೊಯ್ಯುತ್ತಿದ್ದಾರಂತೆ. ಪಿರ್ಯಾಮಿಡ್ ನ ಗಾತ್ರ ವಿಸ್ಮಯಕಾರಿ.

ಇದರ ಎತ್ತರ ಸುಮಾರು 146.649 ಮೀಟರ್ (480 ಅಡಿಗಳು). ಅಡಿಪಾಯದ ಉದ್ದ 235.5 ಮೀ. (768 ಅಡಿಗಳು). ನಾಲ್ಕು ಸಮಬಾಹುಗಳ ಎತ್ತರ 755 ಅಡಿಗಳು. ಉತ್ತರ ದಿಕ್ಕಿನೆಡೆಗಿರುವ ಬಾಹುವನ್ನು ಉತ್ತರ ದಿಕ್ಕಿಗೆ ಸಮಾನಾಂತರವಾಗಿ ನಿರ್ಮಿಸಿದ್ದಾರೆ. ಇದು ಎಷ್ಟು ಮಟ್ಟಸವಾಗಿದೆ ಎಂದರೆ ಒಂದು ಕಡೆಯಿಂದ ಇನ್ನೊಂದು ಅಂಚಿನಲ್ಲಿರುವ ವ್ಯತ್ಯಾಸ ಕೇವಲ ಅರ್ಧ ಅಂಗುಲ. ತಳಪಾಯದ ಕಲ್ಲುಗಳಲ್ಲಿ 15 ರಿಂದ 20 ಟನ್ ಗಾತ್ರದ ಶಿಲೆಗಳಿವೆಯಂತೆ. ಒಳಗೆ ರಾಜನ ಕೋಣೆಯ ಛಾವಣಿ ನಿರ್ಮಿಸಲು ಬಳಸಿದ ಒಂದೊಂದು ಕಲ್ಲಿನ ಭಾರ 50-80 ಟನ್. ಕೆಲವು 200 ಟನ್ನಿನ ಶಿಲೆಗಳೂ ಇವೆಯಂತೆ! ಎತ್ತರಕ್ಕೆ ಹೋದಂತೆ ಕಲ್ಲುಗಳ ಗಾತ್ರ, ಭಾರ ಕಡಿಮೆಯಾಗುತ್ತದೆ. ಹಾಗಾಗಿ ಒಟ್ಟು ಕಲ್ಲಿನ ಗಾತ್ರದ ಸರಾಸರಿ 2.5 ಮಿಲಿಯನ್ ಟನ್. ಇದು ಭೂತಳದ ಅದ್ಭುತ. ಇದು ನೀರಿನ ಮಟ್ಟದಿಂದ 50 ಮೀಟರ್ ಎತ್ತರದಲ್ಲಿ ಕಟ್ಟಲ್ಪಟ್ಟಿದೆಯಂತೆ. ಇದನ್ನು ಕಟ್ಟಲು 2.5 ಮಿಲಿಯನ್ ಸುಣ್ಣದ ಕಲ್ಲುಗಳು, 1 ಲಕ್ಷ ಜನ ಸೈನಿಕ ಸೇವಕರು ಏಕ ಕಾಲದಲ್ಲಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಇದು ನಿಜವಾಗಿಯೂ ಭೂತಳದ ಅದ್ಭುತವೇ! ಇಷ್ಟು ಜನ ಬಂದುದೆಲ್ಲಿಂದ? ಬೃಹತ್ ಕಲ್ಲು ತಂದುದೆಲ್ಲಿಂದ? ಎನ್ನುವಾಗ ದೂರದ ಆಸ್ವಾನ್ ಹಾಗೂ ಮುಖತ್ತಮ್ ಪರ್ವತಾವಳಿಗಳಿಂದ ಇವುಗಳನ್ನು ಸಕ್ಕರಾಗೆ ತರಲಾಯಿತು ಎಂಬುದು ಕೆಲವು ಚಿತ್ರಗಳಲ್ಲಿ ಕಾಣಿಸಿದ ದಾಖಲೆಗಳಿಂದ ತಿಳಿದು ಬಂದಿದೆಯಂತೆ.
1 ಸಾವಿರ ಕಿ.ಮೀ ದೂರದ ಎತ್ತರದಲ್ಲಿರುವ ಆಸ್ ವಾನ್ನಿಂದ ನೈಲ್ ನದಿಯ ಮೂಲಕ ದೋಣಿಗಳಲ್ಲಿ ಸಾಗಿಸಿ ತಗ್ಗು ಪ್ರದೇಶದಲ್ಲಿರುವ ಸಕ್ಕರಾಗೆ, ಭಾರಹೊತ್ತು ಪ್ರವಾಹದ ವಿರುದ್ಧ ಸಾಗುವುದು ಸುಲಭದ ಮಾತಾಗಿರಲಿಲ್ಲ. ಸಕ್ಕರಾದಿಂದ ನಿರ್ಮಾಣ ಸ್ಥಳಕ್ಕೆ, ನಿರ್ಮಾಣ ಸ್ಥಳದಿಂದ ಪಿರ್ಯಾಮಿಡ್ ನ ತುದಿಯವರೆಗೆ ಕಲ್ಲನ್ನು ಹೊತ್ತೊಯ್ದ ಶಕ್ತಿ ಯಾವುದು? ವಾಸ್ತುಶಿಲ್ಪಿ ಯಾರು? ಅಷ್ಟು ಜನರ ವ್ಯವಸ್ಥೆ ಹೇಗೆ, ಎಲ್ಲಿ ಮಾಡುತ್ತಿದ್ದರು? ಎಂಬೆಲ್ಲ ಪ್ರಶ್ನೆಗಳಿಗೆ ಪಿರ್ಯಾಮಿಡ್ ಕೊಡುವ ಬೃಹತ್ ಉತ್ತರ ಬರೀ ಮೌನ.
ಪಿರ್ಯಾಮಿಡ್ ನಿರ್ಮಾಣದ ನಿಯಮಗಳು ಖಗೋಳಶಾಸ್ತ್ರ ಹಾಗೂ ಜ್ಯಾಮಿತಿಯ ನಿಯಮಗಳಿಗೆ ಬದ್ಧವಾಗಿವೆ. ಪ್ರಾಚೀನ ಕಾಲದಲ್ಲಿ ಅನ್ಯಗ್ರಹ ಜೀವಿಗಳು ಭೂಮಿಗೆ ಬಂದಿದ್ದು, ಭೂ ಮಾನವರೊಡನೆ ಬದುಕಿದ್ದರು. ಮಾನವರಿಗಿಂತ ಸಾವಿರಾರು ಪಟ್ಟು ವಿಜ್ಞಾನದಲ್ಲಿ ಮುಂದುವರೆದಿದ್ದ ಅವರು ಇಂಥ ಬೃಹತ್ ನಿರ್ಮಾಣಗಳ ಹಿಂದಿರುವ ಕರ್ತೃಗಳು ಎಂಬ ವಾದವನ್ನು ಮೆಲಕು ಹಾಕುತ್ತಾ ಸುತ್ತುವರೆದು ನೋಡಿದೆವು. ಹುಸೇನ್ ಹೇಳುತ್ತಿದ್ದ-ಪ್ರಾಚೀನ ಇಜಿಪ್ತಿನ ಭೂಭಾಗದಲ್ಲಿ ಒಟ್ಟು 97 ಪಿರ್ಯಾಮಿಡ್ ಗಳು ದೊರಕಿವೆ. ಅವುಗಳಲ್ಲಿ ಈ 3 ಮಹತ್ವ ಉಳ್ಳವು. 5000 ವರ್ಷಗಳ ಹಿಂದೆ, ಬದುಕಿದ್ದಾಗಲೇ ಗೋರಿಕಟ್ಟಿಕೊಳ್ಳುವ ಮನಸ್ಥಿತಿ, ಶಾಶ್ವತವಾಗಿ ಯಾವುದೇ ತಿರಸ್ಕಾರವಿಲ್ಲದೇ ಹೀಗೆ ಪೂರ್ವ ನಿರ್ಮಿಸಿಕೊಳ್ಳುವ ಗಾಢ ನಂಬಿಕೆಗಳು, ಧಾರ್ಮಿಕ ಭಾವನೆಯನ್ನು ಅನಾವರಣಗೊಳಿಸುತ್ತವೆ. ಭಾರತದಲ್ಲಿ ಬದುಕಿದ್ದಾಗಲೇ ಸಾಧಿಸಿ ತೋರಿಸುವ ಅದ್ಭುತಗಳು ಸಾಕಷ್ಟಿವೆ. ಆದರೆ ಇಲ್ಲಿಯ ಚಿರಂಜೀವಿಯ ಕಲ್ಪನೆ ತಿರುವು ಮುರುವು.
ಕ್ರಿ.ಪೂ 2630ರಲ್ಲಿ ಜೋಸೇರ್ (Djoser) ಎನ್ನುವ ಫೇರೋ ಸಾಂಪ್ರದಾಯಿಕ ಅಂತಿಮ ವಿಶ್ರಾಂತಿ ತಾಣಗಳಿಗಿಂತ ಭಿನ್ನವಾಗಿ ತನ್ನ ಸಮಾಧಿ ಇರಬೇಕೆಂದು ಆಶಿಸಿ, `ಸಕ್ಕರಾ’ ಎಂಬ ಪ್ರಶಸ್ತ ಸ್ಥಳವನ್ನು ಆರಿಸಿ, ರಾಜಶಿಲ್ಪಿ ಇಮ್ ಹೊಟೇಪ್ ನನ್ನು ಶಿಲಾಮಯ ಗೋರಿಯೊಂದನ್ನು ನಿರ್ಮಿಸಲು ನೇಮಿಸಿದ. `ರಾಜಶಿಲ್ಪಿ ಪ್ರಾರಂಭದಲ್ಲಿ ಸಂಪ್ರದಾಯದಂತೆ’ `ಮಸ್ತಬಾ’ ಎಂದು ಕರೆಯುವ ವೇದಿಕೆಯಂಥ ಒಂದು ಸಪಾಟಾದ (ಸಮತಟ್ಟಾದ) ಸ್ಥಳ, ಅದರ ಮೇಲೆ ಶವ ಪೆಟ್ಟಿಗೆ ಇರಿಸಲು ವೇದಿಕೆ, ಸುತ್ತ ಕಲ್ಲಿನ ಇಟ್ಟಂಗಿಯ ಗೋಡೆಗಳ ಕಟ್ಟಡ. ಹೀಗೆ ಯೋಜನೆ ಹಾಕಿಕೊಂಡು ಕಟ್ಟಡ ಮೇಲೇರಿಸುತ್ತಾ ಹೋದಂತೆ, ಅವನ ಕಲ್ಪನೆಗೆ ಗರಿ ಮೂಡಿ ಆರು ಮೆಟ್ಟಿಲುಗಳವರೆಗೂ ಚಾಚಿತು. ಒಂದೇ ಒಂದು ಮಸ್ತಬಾದಲ್ಲಿ ಕೊನೆಗೊಳ್ಳಬೇಕಾದ ವೇದಿಕೆ ಆರು ಮೆಟ್ಟಿಲುಗಳಾಗಿ ಎತ್ತರಕ್ಕೇರಿ, ಸುತ್ತಲೂ ಸಣ್ಣ-ಸಣ್ಣ ಪಿರ್ಯಾಮಿಡ್ ಗಳು ಮೇಲೆದ್ದವು. ಅವುಗಳಲ್ಲಿ ಚಕ್ರವರ್ತಿ ಮತ್ತವನ ಅರ್ಚಕರು, ಪೂಜಾವಿಧಿಗಳನ್ನು ನಡೆಸಬಹುದಿತ್ತು. ನೆಲದಾಳದಲ್ಲಿ ಶವದಾನಿಯನ್ನಿಡುವ ಮುಖ್ಯಭಾಗ ಮತ್ತು ಅವನ ಸಾಮಾನುಗಳನ್ನಿಡಲು ಕೋಣೆಗಳು ಮೇಲೆದ್ದವು. ಕಟ್ಟಡದ ಪೂರ್ಣ ಒಳಭಾಗವನ್ನು ಹಾಸುಗಲ್ಲುಗಳಿಂದ, ವರ್ಣಚಿತ್ರ, ಚಿತ್ರಲಿಪಿಗಳಿಂದ ಸಿಂಗರಿಸಲಾಯಿತು.
ಇದು ಇತಿಹಾಸದ ಮೊದಲ ಪಿರ್ಯಾಮಿಡ್. ಇದನ್ನು ಹಂತ-ಹಂತವಾಗಿ ಕಟ್ಟಿರುವುದರಿಂದ `ಸ್ಟೆಪ್ ಪಿರ್ಯಾಮಿಡ್’ ಎಂದು ಕರೆಯಿಸಿಕೊಂಡಿತು. `ದಿ ಗ್ರೇಟ್’ ಪಿರ್ಯಾಮಿಡ್ ನನ್ನು ಕಟ್ಟಿದ ಫೇರೋ ಸೆನೆಫ್ರು ಕ್ರಿ.ಪೂ 2574ರಲ್ಲಿ ಸೆನೆಫ್ರು (Snefru) ಫೇರೋನ ಅವಧಿಯಲ್ಲಿ ಮೆಟ್ಟಿಲು ಪಿರ್ಯಾಮಿಡ್ ಗೆ ಹೊಸ ರೂಪ ಕೊಟ್ಟು, ಪಿರ್ಯಾಮಿಡ್ಡನ ಹೊರಮೈಯನ್ನು ಅತ್ಯುತ್ತಮ ಗುಣಮಟ್ಟದ ಸುಣ್ಣದ ಕಲ್ಲಿನ ಹಾಳೆಗಳನ್ನು ಹೊಳಪು ಬರುವಂತೆ ಮಾಡಿ, ಹಾಸಿನಂತೆ ಜೋಡಿಸಲಾಯಿತು. ಇಷ್ಟೊಂದು ನಿಶ್ಚಿತ, ನಿಖರ ನಿರ್ಮಾಣದ ಮುನ್ನಡೆಗೆ ಜಂಘಾಬಲವಾದವರೆಂದರೆ (ಖುಫುವಿನ ತಂದೆ) ಸೆನೆಫ್ರು. ಇವುಗಳ ಇಂಥ ಅತ್ಯದ್ಭುತ, ಸುಂದರ ಪಿರ್ಯಾಮಿಡ್ ನ ಸುತ್ತಮುತ್ತ ರಾಜನ ಸಂಬಂಧಿಕರಿಗಾಗಿ `ಸಪಾಟು ತಲೆಯ `ಮಸ್ತಬಾ’ ಶೈಲಿಯ ಸಮಾಧಿಗಳನ್ನು ನಿರ್ಮಿಸಲಾಯಿತು. ಶವ ಸಂಸ್ಕರಣ ದೇಗುಲಗಳ ಹಾಗೂ ಸುಂದರ ಹೂ-ಹಣ್ಣಿನ ತೋಟಗಳು ಈ ಪ್ರದೇಶವನ್ನು ಪ್ರೇಕ್ಷಣಿಯ ಯೋಗ್ಯ ಸ್ಥಳವನ್ನಾಗಿಸಿದವು. ಆನೆ ನಡೆದದ್ದೇ ಮಾರ್ಗ ಎಂಬಂತೆ ಸೆನೆಫ್ರು ನಂತರದ ಫೇರೋಗಳು ಶತಮಾನಗಳವರೆಗೆ ಅದೇ ಮಾರ್ಗದಲ್ಲೇ ನಡೆದರು. ನಂತರದ ಕಾಲದಲ್ಲಿ ಇಂಥ ಅಗಾಧ ಪಿರ್ಯಾಮಿಡ್ಡುಗಳು ನೂರಾರು ಸಂಖ್ಯೆಯಲ್ಲಿ ನಿರ್ಮಾಣಗೊಂಡವು. ರಾಜಧಾನಿ `ಥೀಬ್ಸ್’ನಿಂದ (ಇಂದಿನ ಲಕ್ಸರ್) ನೈಲ್ ನದಿಗೆ ಶವಧಾನಿ ಬರುತ್ತಿತ್ತು. ಅಲ್ಲಿ ವಿಧಿ ಕರ್ಮಾದಿಗಳು ನಡೆದು, ಮೆರವಣಿಗೆ, ಎತ್ತರದಲ್ಲಿ ನಿರ್ಮಿಸಿದ ಹಾದಿಯಲ್ಲಿ ಪಿರ್ಯಾಮಿಡ್ ಗೆ ಬರುತ್ತಿತ್ತು. ಅಲ್ಲಿ `ಶವಸಂಸ್ಕರಣ ಕ್ರಿಯಾ ದೇಗುಲ’ದಲ್ಲಿ ಉಳಿದ ವಿಧಿಗಳು ಜರುಗಿ, ಕೊನೆಗೆ ಅಂತಿಮ ವಿಶ್ರಾಂತಿ ಸ್ಥಾನವಾದ ಶಿಲೆಯ ಪೆಟ್ಟಿಗೆಗೆ ಸೇರುತ್ತಿತ್ತು. ಇದಕ್ಕೆ `ಸಾರ್ಕೊ ಫೇಗಸ್ಸ್’ ಎನ್ನುತ್ತಾರೆ.
ಪ್ರಾಚೀನ ಮತ್ತು ಮಧ್ಯಕಾಲದ ಆನಂತರ ಇಜಿಪ್ತಿನ ವೈಭವ ಇಳಿಮುಖವಾಯಿತು. ಅಧಿಕಾರ ಹಾಗೂ ಆರ್ಥಿಕತೆಗಳು ಕುಂಠಿತಗೊಂಡು, ಜನಬಲ, ಧನ ಬಲಗಳ ಶಿಥಿಲತೆ ಉಂಟಾಗಿ ಫೇರೋಗಳಿಗೆ ಬಿಸಿ ಮುಟ್ಟಿಸಿದವು. ತಮ್ಮ ಸಮಾಧಿಗಳಿಗೆ ಅಗತ್ಯ ಸಿರಿ ಹೊಂದಿಸಲಾಗದೆ, ಬೃಹತ್ ಪ್ರಮಾಣದಲ್ಲಿ ವ್ಯವಸ್ಥೆ ಮಾಡಲಾಗದೆ, ಶಿಲೆಯ ಬದಲಾಗಿ ಇಟ್ಟಿಗೆ ಬಳಸಿದರು. ನೆಲದ ಮೇಲೆ ಕಟ್ಟಡ ಕಟ್ಟುವ ಬದಲಾಗಿ ನೆಲದಾಳವನ್ನೇ ಕೊರೆದು, ಕಲ್ಲಿನ ಪರ್ವತಗಳನ್ನು ಕೊರೆದು ಸಮಾಧಿಗಳನ್ನು ರಚನೆ ಮಾಡತೊಡಗಿದರು. ಇಜಿಪ್ತಿನ ದಕ್ಷಿಣಭಾಗದಲ್ಲಿರುವ ಥೀಬ್ಸ್ ನಿಂದ ಉತ್ತರಭಾಗದಲ್ಲಿರುವ `ಸಕ್ಕರಾ’ಗೆ ಶವವನ್ನು ಸಾಗಿಸುವುದು ಅತಿ ವೆಚ್ಚದಾಯಕವಾಗಿತ್ತು. ಈ ಎಲ್ಲ ಕಾರಣಗಳಿಂದ ಭೂ ಮೇಲ್ಭಾಗದ ಪಿರ್ಯಾಮಿಡ್ ಪರಂಪರೆ ನಿಂತು ಹೋಗಿ `ಥೀಬ್ಸ್’ನ ಸುತ್ತಮುತ್ತಲಿರುವ ಸುಣ್ಣದ ಕಲ್ಲಿನ ಪರ್ವತಗಳ ಒಡಲಲ್ಲಿ ಕೊರೆದ ವಿಸ್ತಾರವಾದ ಗುಹೆಗಳಲ್ಲಿ ಸಮಾಧಿ ಮಾಡುವುದು ಬಳಕೆಗೆ ಬಂದಿತು.
ಇಡೀ ದೇಶದ ಜನತೆಯೂ ಕಾಲಗತಿಗನುಗುಣವಾಗಿ ಇದೇ ಕ್ರಮವನ್ನು ಅನುಸರಿಸಬೇಕಾಗಿತ್ತಾ? ಶ್ರೀ ಸಾಮಾನ್ಯನ ಪಾಡೇನು? ಜೀವನವಿಡೀ ಮಾಡುವುದೆಲ್ಲ ಈ ನಂಬಿಕೆ, ಈ ಸಮಾಧಿಗಾಗಿಯೆ? ಎಂಬೆಲ್ಲ ಪ್ರಶ್ನೆಗಳು ನನ್ನನ್ನು ಕಾಡತೊಡಗಿದವು. ಮಾರ್ಗದರ್ಶಿಯನ್ನು ಕೇಳಿಯೇ ಬಿಟ್ಟೆ. ಮಹಮ್ಮದ್ ಪ್ರಶ್ನೆ ಕೇಳಿದರೆ ಸಾಕು ಖುಷಿಯಿಂದ ಆ ಕೈಯೊಮ್ಮೆ, ಈ ಕೈಯೊಮ್ಮೆ ತೋರಿಸುತ್ತಾ ಉತ್ತರಿಸುತ್ತಿದ್ದರು. ಇಲ್ಲಿ ಶ್ರೀ ಸಾಮಾನ್ಯನ ಚಿತ್ರಣವೇ ಬೇರೆಯಾಗಿತ್ತು. ಭೂಮಿಯ ಮೇಲಿನ ಪಿರ್ಯಾಮಿಡ್ಡುಗಳೇ ಆಗಲಿ, ಸುಣ್ಣದ ಕಲ್ಲಿನ ಪರ್ವತಗಳ ಒಡಲಲ್ಲಿಯೇ ಆಗಲಿ, ಅಥವಾ ಭೂಗರ್ಭದೊಳಗೇ ಆಗಲಿ ಸಮಾಧಿಗಳನ್ನು ನಿರ್ಮಿಸುವುದು ಎಲ್ಲರಿಗೂ ಅಸಾಧ್ಯವಾದ ದುಬಾರಿ ಕೆಲಸವಾಗಿತ್ತು. ಕೆಲವೇ ಮಂದಿ ಶ್ರೀಮಂತರಿಗೆ ಮಾತ್ರ ಸಾಧ್ಯವಾಗುವ ವೆಚ್ಚದಾಯಕ ಕೆಲಸ ಇದಾಗಿತ್ತು. ಜನಸಾಮಾನ್ಯರಿಗೆ ಸಾಮಾನ್ಯ ರೀತಿಯ ಶವ ಪೆಟ್ಟಿಗೆಗಳಲ್ಲಿ ಸಂಸ್ಕಾರವಾಗುತ್ತಿತ್ತಂತೆ. ಇನ್ನೂ ಕೆಲವರಿಗೆ ಇದೂ ಲಭ್ಯವಿರಲಿಲ್ಲ. ನೇರವಾಗಿ ಭೂಮಿಯಲ್ಲಿ ಅಗೆದ ಹೊಂಡಗಳಲ್ಲಿ ಇವರನ್ನು ಧಪನ ಮಾಡಬೇಕಾಗಿತ್ತು. ಇವರ ದೇಹಗಳು, ಇಜಿಪ್ತಿನ ಮರಳುಗಾಡಿನ ಒಣ ಹವೆಯಲ್ಲಿ, ಕೊಳೆಯುವ ಬದಲು ಒಣಗಿ ಹೋಗುತ್ತಿದ್ದವಂತೆ. ಸಹಜವಾಗಿಯೇ `ಮಮ್ಮೀ’ ಕರಣ ನಡೆದು ಹೋಗುತ್ತಿತ್ತು.
ಈ ಸಾಮಾನ್ಯ ಜನರ ಮಮ್ಮಿಯ ಮುಖವಾಡವನ್ನು ತಯಾರಿಸುವ ರೀತಿ ಬೇರೆಯೇ ಆಗಿತ್ತು. ಅಂಟು ದ್ರವದಲ್ಲಿ ಪಪೈರಸ್ ಅಥವಾ ಸೆಣಬು ಬಟ್ಟೆಯನ್ನು ಅದ್ದಿ ಮನುಷ್ಯ ಮುಖದಂತೆ ಅಚ್ಚು ಹಾಕುತ್ತಿದ್ದರು. ಅದು ಮೃತ ವ್ಯಕ್ತಿಯನ್ನು ಹೋಲುವಂತಿರಬೇಕಿತ್ತು. ಹೀಗೆ ತಯಾರಾದ ಅಚ್ಚನ್ನು ತಮ್ಮ ಅನುಕೂಲ, ಅಂತಸ್ತಿಗೆ ತಕ್ಕಂತೆ ಸೂಕ್ಷ್ಮವಾದ ಚಿನ್ನದ, ಬೆಳ್ಳಿಯ, ಇಲ್ಲವೆ ಬಣ್ಣದ ತೆಳುವಾದ ಹಾಳೆಯಿಂದ ಸಿಂಗರಿಸುತ್ತಿದ್ದರು. ಈ ಕಾರ್ಯದಲ್ಲಿ ಮಣಿಸರಗಳು, ಹರಳುಗಳನ್ನು ಉಪಯೋಗಿಸುವ ರೂಢಿಯೂ ಇತ್ತು. ಅಂತೂ `ಓಸಿರೀಸ್ ದೇವತೆ’ಯ ಅಂತಿಮ ಅಲಂಕಾರದ ಪದ್ಧತಿಯನ್ನೇ ಇಲ್ಲಿ ಅನುಸರಿಸಲಾಗುತ್ತಿತ್ತು. ಅವರವರ ಶಕ್ತಿಗನುಗುಣವಾಗಿ ಸಮಾಧಿ ಸ್ಥಳದ ಗಾತ್ರ ಕುಗ್ಗುತ್ತಿತ್ತು ಅಥವಾ ಹಿಗ್ಗುತ್ತಿತ್ತು.
ಈ ಮರದ ಪೆಟ್ಟಿಗೆ, ಮುಖವಾಡ ತಯಾರಿಸುವ ಕರಕುಶಲಕರ್ಮಿಗಳಿಗೆ ಮತ್ತು ಕಾರ್ಯಕ್ಕೆ ಬಹುಮಾನ್ಯತೆ ಮತ್ತು ಬೇಡಿಕೆ ಇತ್ತು. ಪೆಟ್ಟಿಗೆಯನ್ನು ಚಿನ್ನದಿಂದ ತಯಾರಿಸಿ ಹಾಗೂ ಮುಖವಾಡವನ್ನು ಅಮೂಲ್ಯ ವಜ್ರ ಹರಳು, ಮುತ್ತು, ಹವಳಗಳಿಂದ ಅಳವಡಿಸಿ ತಯಾರಿಸುತ್ತಿದ್ದರು. ಕೈರೋ ಸಂಗ್ರಹಾಲಯದಲ್ಲಿರುವ ಟುತ್-ಅಂಕ್-ಅಮುನ್ನ ಮುಖವಾಡ ರತ್ನ, ಮಾಣಿಕ್ಯ, ನೀಲಮಣಿಯ ನೂರಾರು ಹರಳುಗಳನ್ನು ಕೂಡಿಸಿ ಚಿನ್ನದಲ್ಲಿ ಮಾಡಿದ್ದು, 11 ಕಿಲೋ ತೂಕಹೊಂದಿದೆ. ಇಂಥ ಅಸಂಖ್ಯ ಅಮೂಲ್ಯ ವಸ್ತುಗಳನ್ನು ಸಮಾಧಿ ಕೋಣೆಯಲ್ಲಿ ಇರಿಸಲಾಗುತ್ತಿತ್ತು. ಬಹುಶಃ ಇದೇ ಈ ಸಮಾಧಿಗಳಿಗೆ ಕಂಟಕವಾಯಿತೇನೋ…? (ಅಥವಾ ನಾಗರಿಕತೆಯ ಉತ್ಖನನಕ್ಕೆ, ಸಂಶೋಧನೆಗೆ ನಾಂದಿಯಾಯಿತೊ?) ಮುಂದೊಂದು ದಿನ ಬರ, ಕ್ಷಾಮ, ಹಸಿವು ತಲೆದೋರಿದಾಗ ಜನ ತಾವೇ ಕಟ್ಟಿದ ಗೋರಿಗಳನ್ನು ಕದಿಯ ತೊಡಗಿದರಂತೆ. ಕ್ರಿ. ಪೂ 30 ರಷ್ಟೊತ್ತಿಗೆ ಇಜಿಪ್ತಿನ ವೈಭವದ ಅಂತ್ಯಕಾಲ. ಗೋರಿ ನಿರ್ಮಿಸುವವರಿಗೆ ಸಂಬಳ ಕೊಡುವಷ್ಟು ಹಣ ಉಳಿಯದೆ ಸಂಬಳ ನೀಡದಿದ್ದಾಗ, ಕಂಗೆಟ್ಟ ಕೆಲಸಗಾರರು ತಾವೇ ಹುದುಗಿಸಿಟ್ಟ ಗೋರಿಗಳಿಂದ ಕದಿಯ ತೊಡಗಿದರು.
ಮೊದ ಮೊದಲು ಚಿಕ್ಕ ಪುಟ್ಟವುಗಳನ್ನು, ಬದುಕಲು ಸಾಕಾಗುವಷ್ಟನ್ನು ಕದ್ದು ಅಕ್ಕಸಾಲಿಗರಿಗೆ, ಶ್ರೀಮಂತರಿಗೆ ಗುಟ್ಟಾಗಿ ಮಾರುತ್ತಿದ್ದರು. ಅಕ್ಕಸಾಲಿಗರಿಗೆ ವಿದೇಶಗಳಲ್ಲಿ ಇವುಗಳಿಗೆ ಸಿಗಬಹುದಾದ ಬೆಲೆಯ ಅಂದಾಜಿತ್ತು. ಹಾಗಾಗಿ ಇವರು ಹಣದ ಆಮಿಷ ತೋರಿಸಿ ಇನ್ನಷ್ಟು. ಮತ್ತಷ್ಟು ತಂದುಕೊಡಲು ಒತ್ತಾಯಿಸತೊಡಗಿದರು. ಹೀಗಾಗಿ ಗೋರಿಗಳು ಬರಿದಾಗ ತೊಡಗಿದವು. ಪರಲೋಕವಾಸಿ ಚೈತನ್ಯದ ಶಾಂತಿಯನ್ನು ಭಂಗ ಮಾಡುವವರಿಗೆ ಭೀಕರ ಶಿಕ್ಷೆ ವಿಧಿಸಲಾಗುತ್ತಿತ್ತು. ಚೂಪಾದ ಹೆರೆದ ಕೋಲುಗಳಿಂದ ಚುಚ್ಚಿ ಕೊಲ್ಲಲಾಗುತ್ತಿತ್ತು. ಇವರ ಸಹಾಯಕರ ಕಿವಿ ಮೂಗು ಕತ್ತರಿಸಲಾಗುತ್ತಿತ್ತು. ಕ್ರಮೇಣ ಮರುಭೂಮಿಯ ಮೇಲೆ ಸತತ ಗಾಳಿ ಮತ್ತು ಬಿರುಗಾಳಿ ಬಿಸಿ, ಅವು ಹೊತ್ತು ತರುವ ಮರಳಿನಿಂದಾಗಿ ಈ ಗೋರಿಗಳು ಮುಚ್ಚಿ ಹೋದವಂತೆ ಗುರುತು ಸಿಗದ ಹಾಗೆ.
ಪಿರ್ಯಾಮಿಡ್ಗಳ ಕಥೆ ಕೇಳುತ್ತಾ ನಾಲ್ಕರಲ್ಲಿಯ ಒಂದು ಮಗ್ಗಲು ಮಾತ್ರ ನೋಡಿ ಬಂದು, ಫೋಟೋ ತೆಗೆದು ಸಂಭ್ರಮ ಪಟ್ಟೆವು. ಬಿಸಿಲಿನ ತಾಪ ಏರುತ್ತಿತ್ತು. 11.15 ಕ್ಕೆ 360 ಯಷ್ಟು ಉಷ್ಣಾಂಶ ಇತ್ತು. ಗ್ವಾಗಲ್ ತೆಗೆಯುವಂತೆಯೇ ಇರಲಿಲ್ಲ. ಒಂಟೆಗಳೊಂದಿಗೆ ಸವಾರರು ಒಂದೇ ಸಮನೆ ಬೆನ್ನು ಬಿದ್ದಿದ್ದರು. ಒಂಟೆ ಹತ್ತಲು ಎಷ್ಟು? ಎಂದು ಕೇಳಿದರೆ ಅವರು 25 ರಿಂದ 50 ಇಜಿಪ್ಶಿಯನ್ ಪೌಂಡ್ ಹೇಳುತ್ತಿದ್ದರು. (ಒಂದು ಇಜಿಪ್ಶಿಯನ್ ಪೌಂಡ್=10 ರೂಪಾಯಿ) ಕೊನೆಗೆ 10 ಇ.ಕ ಗೆ (ಇಜಿಪ್ಟ್ ಪೌಂಡ್) ಹೊಂದಿಸಿ, ಒಂಟೆ ಮೇಲೆ ಕುಳಿತೆವು. ಅಲ್ಲಿನ ಒಂಟೆಗಳು ಭಾರಿ ಎತ್ತರ. ಒಂಟೆಯನ್ನು ಕೆಳಗೆ ಕೂಡಿಸಿ ನಮ್ಮನ್ನು ಮೇಲೆ ಹತ್ತಿಸಿ ಕೂಡ್ರಿಸಿದ ಮೇಲೆ, ಒಂಟೆ ಎದ್ದು ನಿಂತು ಮುಂದೆ ಹೋಗುತ್ತಿತ್ತು. ಒಂಟೆ ಮೇಲೆ ಹತ್ತಿ ಕುಳಿತೆ. ಇನ್ನೇನು ಒಂಟೆ ಎದ್ದು ನಿಲ್ಲಬೇಕು! ಅದು ತನ್ನ ಮೊಳಕಾಲೂರಿ ಮುಂದೆ ಮುಂದೆ ಬಗ್ಗಿ ಮೇಲೇಳಬೇಕಾದರೆ, ಹಿಂದೆ ಜೋಲಿ ಹೋಗಿ ಬೀಳುತ್ತೇನೆ ಎಂದೆನಿಸಿ ಗೂಟವನ್ನು ಗಟ್ಟಿಯಾಗಿ ಹಿಡಿದೆ. ಹಿಂದಿನ ಕಾಲು ನೇರವಾಗಿಸಿಕೊಂಡು ಮುಂದಿನ ಕಾಲು ನೇರವಾಗುವುದರೊಳಗೆ ಮುಂದೆ ಬಿದ್ದೇ ಬಿಟ್ಟೆ ಎನಿಸಿ ಕಣ್ಣು ಮುಚ್ಚಿದೆ. ಒಂಟೆ ಸರಾಗವಾಗಿ ನಿಂತಿತ್ತು. ಸಧ್ಯ ನಾನು ಅದರ ಮೇಲೆ ಇದ್ದೆ. ಒಮ್ಮೆ ಹಿಂದೆ ಇನ್ನೊಮ್ಮೆ ಮುಂದೆ ನೂಕಿದಂತಾಗಿತ್ತು.
4 ಹೆಜ್ಜೆಯಷ್ಟೇ ನಡೆಸಿ, ಪೋಸು ಕೊಟ್ಟು ಕೆಳಗಿಳಿಯಬೇಕಾದರೆ, ಸವಾರ ತನ್ನ ತಲೆ ವಸ್ತ್ರವನ್ನು ಅರಬ್ಬರು ಸುತ್ತಿಕೊಳ್ಳುವಂತೆ ನನಗೂ ಸುತ್ತಿದ. ಮತ್ತೊಂದು ಫೋಸು ಕೊಟ್ಟು ಎಲ್ಲರೂ ಕೋಚ್ ನತ್ತ ನಡೆದವು. ಮತ್ತೊಂದು ಪೋಸಿಗಾಗಿ ಸವಾರ ಮತ್ತೆ ಹಣ ಕೇಳಿದ. ಲಾರಿಸರ್ `ಸರಿಯಾಯ್ತು’ ಎಂದು ನಮಸ್ಕರಿಸಿ ಬಂದು ಬಿಟ್ಟರು. ಮಂಗಲಾ ಮೆಟಗುಡ್ಡ ತಮ್ಮ ಇಂಪಾದ ಸಣ್ಣ ಧ್ವನಿಯೊಳಗೆ – `ಅಯ್ಯೋ ಅದರ ಹೆಣ ಎತ್ಲಿ, ಎಲ್ಲ ದುಡ್ಡ ಕಸಗೊಂಡ ನೋಡ’ ಎಂದು ಬೈಯುತ್ತಿದ್ದರು.
`ಯಾಕ್ ಆಂಟಿ ಏನಾಯ್ತು’ ಎಂದು ಸರೋಜಾ ಕೇಳಿದಾಗ- `ಆ ಹುಡುಗ ನನ್ನ ರೊಕ್ಕನ್ನೆಲ್ಲ ಕಸಗೊಂಡ ನೋಡ.’ ಎಂದರು. ಅಲ್ಲಿ ನಡದದ್ದೇನೆಂದರೆ ಮಂಗಲಾ ಆಂಟಿ ತನ್ನದೇ ಶೈಲಿಯಲ್ಲಿ, ತನ್ನದೇಯಾದ ಒಂದೊಂದು ರೀತಿ ಉಡುಪಿನಲ್ಲಿ, ತನ್ನದೇ ಠೀಕು ಠಾಕಿನಲ್ಲಿ ಇರುವಂಥವರು. ಅವರ ಉಡುಗೆ ತೊಡುಗೆ ನೋಡಿ ಹುಡುಗಿಯರೂ ನಾಚಬೇಕು ಹಾಗಿರುತ್ತಿದ್ದವು. ಪಿರ್ಯಾಮಿಡ್ ಹತ್ತಿರ ಬೇರೆ ಬೇರೆ ಗುಂಪುಗಳಲ್ಲಿ ಬೇರೆ-ಬೇರೆ ಕಡೆಗೆ ನೋಡುತ್ತಾ ಹಂಚಿ ಹೋದೆವು. ಮಂಗಲಾ ಮೆಟಗುಡ್ಡ ಒಂಟಿಯಾಗಿ ನೋಡುತ್ತಾ ಬಂದು, ಒಂಟೆ ಹತ್ತಲು ಒಬ್ಬ ಹುಡುಗ ಸವಾರನನ್ನು ಮಾತನಾಡಿಸಿ, ರೇಟ್ ಹೊಂದಿಸಿ, ಒಂಟೆ ಮೇಲೆ ಕೂರಲು ಹೋಗಿ ಕೂಗತೊಡಗಿದರಂತೆ (ಅದನ್ನು ದೂರದಿಂದ ನಮ್ಮ ಗುಂಪಿನವರು ಗಮನಿಸಿದ್ದರು). ಆಗ ಆ ಹುಡುಗ ತಾನೂ ಒಂಟೆ ಏರಿ ಕೂತು ಸವಾರಿ ಮಾಡಿಸಿ, ಕೆಳಗಿಳಿಸಿದ ಮೇಲೆ ಅಷ್ಟು ಇಷ್ಟು ಎಂದು ವಾದಿಸತೊಡಗಿದನಂತೆ. ಅಲ್ಲಿ ಬರುವ ಒಂದು ಸಮಸ್ಯೆ ಎಂದರೆ ಚಿಲ್ಲರೆ ವ್ಯಾಪಾರಿ ಮತ್ತು ಒಂಟೆ ಸವಾರರೊಂದಿಗಿನ ಯುರೋ ಪೌಂಡಗಳ ವ್ಯವಹಾರ. ಅವರಿಗೂ ಅದು ಸರಿಯಾಗಿ ಗೊತ್ತಾಗುವುದಿಲ್ಲ. ಹೊಸಬರಿಗೆ ಸ್ವಲ್ಪ ಸಮಯ ಬೇಕು.
ಹಾಗೆನೇ ಮಂಗಲ ಅವರು ಮೂವತ್ತೈದು ಪೌಂಡ್ಗಳನ್ನು ಎಣಿಸಿಕೊಡುವಾಗ ಆ ಹುಡುಗ ಕೈಲಿದ್ದ ಅಷ್ಟೂ ನೋಟುಗಳನ್ನು ಕಸಿದುಕೊಂಡು ಒಂಟೆ ಅಲ್ಲೆ ಬಿಟ್ಟು ಓಡಿ ಹೋಗಿ ಬಿಟ್ಟನಂತೆ. ಮಂಗಲಾ ಮೆಟಗುಡ್ಡ ಒಬ್ಬರೇ! ಅಸಹಾಯಕಿ, ಕಾಡುವ ಸ್ವಾಭಿಮಾನ ಬೇರೆ, ಏನೂ ಮಾಡುವ ಹಾಗಿರಲಿಲ್ಲ. ಹಾಗಾಗಿ ಕೂಗೋದು, ಕರಿಯೋದು ಮಾಡದೆ ಸುಮ್ಮನೆ ಈ ಕಡೆಗೆ ಬಂದು ಬಿಟ್ಟಿದ್ದಾರೆ. ಒಂಟಿಯಾಗಿ ಹೋದ ತಪ್ಪಿಗೆ, ಒಂಟೆ ಸವಾರ ಮಾಡಿದ ಪಜೀತಿಗೆ ಶಾಪ ಹಾಕುತ್ತಾ ಅವರು ಅಳುವುದೊಂದೇ ಬಾಕಿ ಉಳಿದಿತ್ತು. ಏಕೆಂದರೆ ಅವರು ಸುಮಾರು ಎರಡು ಸಾವಿರದವರೆಗೆ ಹಣ ಕಳೆದುಕೊಂಡಿದ್ದರಂತೆ. ಅವರಿಗೂ ಲೆಕ್ಕ ಸಿಕ್ಕಿರಲಿಲ್ಲ. ಇದರಿಂದಾಗಿ ಅಲ್ಲಿರಬಹುದಾದ ಹಸಿವು, ಬಡತನಗಳನ್ನು ಅಳೆಯುತ್ತಾ, ಜಗತ್ತಿನ ಅದ್ಭುತದಡಿಯಲ್ಲಿಯೇ ಇದ್ದರೇನು? ಹೊಟ್ಟೆ ಪಾಡಿಗೆ ಯಾವುದು ಲೆಕ್ಕಕ್ಕಿಲ್ಲ. ಅದು ಹಸಿದರೆ ಅದನ್ನು ತುಂಬಬೇಕು, ಅದಕ್ಕಾಗಿ ಏನನ್ನಾದರೂ ಮಾಡಬೇಕು. ಇದು ಅಗತ್ಯತೆಯ ನಿಯಮ ಅಲ್ಲವೇ? ಆದರೆ ಅದ್ಭುತ ಸೃಷ್ಟಿಸಿದವರ ಅಂಗಳದಲ್ಲಿ ಅಟ್ಟಹಾಸಗೈಯುತ್ತಿರುವ ಈ ಅಘಟಿತ… ಅಸಹ್ಯ ಹುಟ್ಟಿಸಿತು. ಏನೇ ಆದರೂ ನಮಗೆ ಪರಿಚಿತವಲ್ಲದ ನೆಲದಲ್ಲಿ ಜಾಗರೂಕರಾಗಿರಬೇಕಾದುದು ಜಾಣತನ ಅಲ್ಲವೆ?
ಮಾರ್ಗದರ್ಶಿ ಮನುವಿಗೆ ಎಲ್ಲ ಹೆಂಗಳೆಯರನ್ನು ಬೇಗ ಬೇಗ ಒಂದೆಡೆ ಸೇರಿಸುವುದು, ಹೊರಡಿಸುವುದು, ಹಂಚಿ ಹೋದಾಗ ಎಲ್ಲರನ್ನು ಅವಲೋಕಿಸುವುದು ಸ್ವಲ್ಪ ಕಷ್ಟವೇ ಆಗಿತ್ತು. ಕೋಚಲ್ಲಿ, ಒಂಟೊಂಟಿಯಾಗಿ ಹೋಗದಂತೆ ಮತ್ತೊಮ್ಮೆ ಎಚ್ಚರಿಕೆ ನೀಡಿದರು. ಮಹಮ್ಮದ್ ಮಾರ್ಗದರ್ಶಿ ಮತ್ತೆ ಆರಂಭಿಸಿದ. ವೇಗವಾಗಿ ಮಾತನಾಡುವ ಪರಿಗೆ, ಉಚ್ಛಾರಣಾ ರೀತಿಗೆ ಒಂದೂ ಸ್ಪಷ್ಟವಾಗುತ್ತಿರಲಿಲ್ಲ. ಮೇಲಾಗಿ ಬಾಯಿಯಿಂದ ಉಗ್ಗುವ ಕಾರಂಜಿ ಬೇರೆ! ಆದರೂ ಕುಣಿಯುತ್ತ ಹೇಳುತ್ತಲೇ ಇದ್ದ.
(ಮುಂದುವರಿಯುವುದು…)
ನೈಲ್ ನದಿಯ ಮಡಿಲಲ್ಲಿ : ದುಡ್ಡು ಹೋಗಿ ಒಂಟೆ ಬಂತು ಡುಂ ಡುಂ ಡುಂ


0 Comments
Trackbacks/Pingbacks