ಗೀಝಾದಲ್ಲಿ ಇಳಿದಾಗ ಬೆಳಗಿನ 5 ಗಂಟೆ. ಅಷ್ಟೊತ್ತಿಗೆ ರೈಲಿನಲ್ಲಿ ತಿಂಡಿ ಕಾಫಿ ಬಂದಿತ್ತು. ಕಾಫಿ ಕುಡಿದು ತಿಂಡಿ ಬ್ಯಾಗಿಗಿಳಿಸಿದೆವು. ಅಲ್ಲಿ ಯಾರೂ ಸ್ನಾನ ಮಾಡಲಿಲ್ಲ. ಮಾಡುವಷ್ಟು ಸುವ್ಯವಸ್ಥೆ ಇರಲಿಲ್ಲ. ಆದರೂ ಮಾಡಬಹುದಿತ್ತು. ಕೋಚಿನಲ್ಲಿ ಕುಳಿತು ಭಾರವಾದ ಬ್ಯಾಗ್ಗಳೊಂದಿಗೆ ಕೈರೋ ನಗರಕ್ಕೆ ಬಂದಾಗ 5.55. ಕೈರೋದಿಂದ ನಮ್ಮ ವಿಮಾನದ ಸಮಯ ಮಧ್ಯಾನ್ನ 1.40. ಇನ್ನೂ ಬೇಕಾದಷ್ಟು ಸಮಯವಿತ್ತು. ಎಲ್ಲರಿಗೂ ಮೊದಲು ಬಿಸಿ ಬಿಸಿ ಕಾಫಿ/ಚಹಾ ಬೇಕಾಗಿತ್ತು. ಇಳಿದು ಆಚೆ ಈಚೆ ಹುಡುಕಾಡಿ ಒಂದೆಡೆ ಕಾಫಿ ಕುಡಿದೆವು.
ಅಷ್ಟೊತ್ತಿಗಾಗಲೇ ಒಂದೊಂದೇ ಅಂಗಡಿಗಳು ತೆಗೆಯಲಾರಂಭಿಸಿದ್ದವು. ಇಜಿಪ್ತಿನಲ್ಲಿ ಕಡೆಯ ಶಾಪಿಂಗ್, ಎಲ್ಲರೂ ಅಂಗಡಿಗಳಿಗೆ ಲಗ್ಗೆ ಇಟ್ಟೆವು. ಎಲ್ಲರಿಗೂ ನೆನಪಿಗಾಗಿ ಕೊಡಲು ಏನಾದರೊಂದನ್ನ ಒಯ್ಯಬೇಕೆನಿಸಿ ಅಲ್ಲಿ ಬಾಲ್ಪೆನ್ ಮತ್ತು ಕೀ ಗೊಂಚಲುಗಳನ್ನು, ಮಗಳಿಗೆ ಬಳೆ, ಸರ, ಓಲೆ ಕೊಂಡುಕೊಂಡೆ. ಇಲ್ಲೊಂದು ಅಂಗಡಿಯಲ್ಲಿ ಅನುಸೂಯ ಅವರು ಟೀಶರ್ಟ್ ಕೇಳಿದಾಗ, ಒಳಗೆ ಒಳಗೆ ಕರೆದುಕೊಂಡು ಹೋದರು. ಅಲ್ಲಿಂದ ಮೇಲಟ್ಟ ಹತ್ತಿ ಹೋಗಬೇಕು. ಇನ್ನೊಂದೆಡೆ ಬ್ಯಾಗ್ಸ ಕೇಳುವಾಗಲೂ ಅಲ್ಲಿಯ ಅಂಗಡಿ ಹೀಗೇ ಇತ್ತು. ಯಾಕೋ ಒಳ ಹೋಗಿ, ಮೇಲೆ ಹತ್ತಿ ಹೋಗಲು ಹೆದರಿಕೆ ಎನಿಸುತ್ತಿತ್ತು. ಹೋಗದೇ ಮರಳಿ ಬಂದೆವು.
ಅಲ್ಲಿಯೂ ಅಂಗಡಿಯಲ್ಲಿಯ ಹುಡುಗರು, `ಅಮಿತಾಬ್ ಬಚ್ಚನ್, ಶಾರುಖಾನ್’ ಎಂದೇ ಕೇಳಿದ್ದರು. `ಐ ಲವ್ ಇಂಡಿಯಾ’ ಎಂದು ಸಿನೆಮಾ ಡೈಲಾಗನ್ನೆ ಹೇಳಿದರು. ಒಂದು ಜನರಲ್ ಸ್ಟೋರ್ನಲ್ಲಿ ಕೀ ಗೊಂಚಲು ನೋಡುವಾಗ 20-22 ವರ್ಷದ ಯುವಕ ನನ್ನ ಹಣೆಯ ಮೇಲಿನ ಬಿಂದಿ ನೋಡಿ, `ವಾಟ್ ಇಸ್ ದಿಸ್’ ಎಂದ. ಅದು ಹೆಣ್ಣು ಮಕ್ಕಳಿಗೆ ನಿರ್ಬಂಧಿತ ಮತ್ತು ಮದುವೆ ಆದ ಮೇಲೆ ಕಡ್ಡಾಯ ಹಚ್ಚಲೇಬೇಕು. ಕುಂಕುಮ, ಮಂಗಳಸೂತ್ರ ಸಂಸ್ಕೃತಿ ಸಂಕೇತಗಳೂ ಹೌದು ಎಂದು ಹೇಳಿದೆವು. ಆತನಿಗೆ ಖುಷಿಯಾಯಿತೇನೋ ನಿಜ. ಆದರೆ ತಟ್ಟನೆ ನನ್ನ ಹಣೆಯ ಬಿಂದಿ ಮುಟ್ಟಲು ಕೈ ಚಾಚಿದ. `ಏನು?’ ಎಂದೆ. `ನಾನದನ್ನ ಮುಟ್ಟಿ ನೋಡಬೇಕು’ ಎಂದ. `ನೀನದನ್ನ ಮುಟ್ಟಲಾರೆ, ನಿನಗೆ ಬೇರೆ ಕೊಡ್ತೀನಿ’ ಎಂದು ಬ್ಯಾಗಿನಿಂದ ಒಂದು ಬಿಂದಿ ತೆಗೆದುಕೊಟ್ಟೆ. ಇಷ್ಟಕ್ಕೆ ಸಲಿಗೆ ಎನಿಸಿತೋ ಏನೋ? ಎಲ್ಲರಿಗೂ ಬುಜ ಮುಟ್ಟಿ `ಯು ಆರ್ ಮೈ ಸಿಸ್ಟರ್’ ಎಂದು ಹೇಳುತ್ತಾ ತಾನು ರೇಟ್ ಹೊಂದಿಸಿ ಕೊಡುವುದಾಗಿ ಹೇಳಿದ. `ಓಕೆ ಯು ಆರ್ ಅವರ್ ಬ್ರದರ್, ಬಟ್ ಡೋಂಟ್ ಟಚ್ ಲೈಕ್ ದಿಸ್’ ಎಂದು ಹೇಳಿ, ನೀನೂ ಬೇಡ, ನಿನ್ನ ಸಾಮಾನೂ ಬೇಡ ಎಂದು ಅಲ್ಲಿಂದ ಹೊರ ಬಂದು ಬಿಟ್ಟೆವು.
ಎಲ್ಲ ಅಂಗಡಿಗಳು ತೆರೆದಿರಲಿಲ್ಲವಾದ್ದರಿಂದ ಸ್ವಲ್ಪ ದೂರ ನಡೆದು ಹೋದೆವು. ಅಲ್ಲಿ ವೈವಿಧ್ಯಮಯ ಉತ್ತತ್ತಿಗಳು ಮಾರಲಿದ್ದವು. ನಮ್ಮಲ್ಲಿರುವದಕ್ಕಿಂತ ಎರಡೂವರೆ ಪಟ್ಟು ದೊಡ್ಡವು. ಒಂದು ರೇಟ್ ಹೊಂದಿಸಿ 10 ಯೂರೋವಿಗೆ ಒಂದು ಕೆ.ಜಿ. ಉತ್ತತ್ತಿ ಖರೀದಿಸಿದೆವು. ಇಲ್ಲಿ ಬಹುಪಾಲು ಜನ ಉತ್ತತ್ತಿ ಖರೀದಿಸಿದರು. ನಾವು ನಡೆದು ಹೋದದ್ದು ಉದ್ದಕ್ಕೆ ಒಂದೇ ದಾರಿ. ಚಿಕ್ಕ ಚಿಕ್ಕ ಕಲ್ಲುಗಳಿಂದ ಅದು ಜೋಡಿಸಲ್ಪಟ್ಟಿದ್ದು ಕಸ, ರಾಡಿ, ನಾಯಿಗಳ ಗಲೀಜು, ಮದ್ಯದಲ್ಲಿಯೇ ಕಸದ ಗುಂಪು, ಎಲ್ಲೆಂದರಲ್ಲಿ ಹರಿದಾಡಿ ರಾಡಿ ಎಬ್ಬಿಸಿದ್ದ ನೀರು, ಮೂಗು ಮುಚ್ಚುಕೊಂಡು ದಾಟುತ್ತಾ ಜಿಗಿಯುತ್ತಾ ಹೋಗುವಂಥದ್ದಾಗಿತ್ತು. ಅಲ್ಲಿಯಂತೂ ಬೆಕ್ಕುಗಳೇ ತುಂಬಿದ್ದವು. ಅಲ್ಲಿಯ ವಸ್ತುಗಳು ಅದು ಅರಬ್ ದೇಶ ಎನ್ನುವುದನ್ನು ಸಾರಿ ಹೇಳುತ್ತಿದ್ದವು. ಸರಸ್ವತಿಯವರು ಕೇಳುತ್ತಲೇ ಅಲ್ಲಿಯೂ ಸಾಕಷ್ಟು ಖರೀದಿಸಿದರು. ರಾಧಾಕೃಷ್ಣರ ಖರೀದಿ ಎಷ್ಟಿತ್ತೆಂದರೆ ಇಬ್ಬರೂ ಮತ್ತೆ ಒಂದೊಂದು ಟ್ರೋಲಿ ಬ್ಯಾಗಗಳನ್ನೇ ಕೊಂಡರು. ಎಲ್ಲರೂ 4-5 ಗುಂಪುಗಳಲ್ಲಿ ಬೇರೆ-ಬೇರೆ ಅಂಗಡಿಗಳಲ್ಲಿ ಖರೀದಿಸುತ್ತಿದ್ದೆವು. ಲಾರಿಸರ್ ಉತ್ತತ್ತಿಯನ್ನಷ್ಟೇ ಖರೀದಿಸಿ ಅಲ್ಲೇ ನಿಂತು ಇನ್ನೇನು ನೋಡಬಹುದೆಂದು ಆಚೆ ಈಚೆ ವಿಚಾರಿಸುತ್ತಿರುವಾಗ ಅಲ್ಲೇ ಪಕ್ಕದಲ್ಲಿಯೇ `ಅಲ್ ಹಜರ್’ ವಿಶ್ವವಿದ್ಯಾಲಯ ಇರುವುದಾಗಿ ತಿಳಿದು ಎಲ್ಲರನ್ನು ಕರೆದುಕೊಂಡು ಬರಲು ಮನುವನ್ನು ಕಳುಹಿಸಿದರು. ಆತ ಬರುವಷ್ಟರಲ್ಲೇ ನಾವು ನಾಲ್ಕು ಜನ ಬಂದಾಗಿತ್ತು. ಉಳಿದವರನ್ನು ಹುಡುಕಲು ಅಂಗಡಿ ಅಂಗಡಿ ಹಣಿಕಿಕ್ಕಿ ಸುಸ್ತಾಗಿ ಹೋದರು ಮನು.
`ಸರಿ ಇದ್ದವರಷ್ಟೇ ಹೋಗೋಣ. ನಮ್ಮ ಸಮಯ ಯಾಕೆ ಹಾಳು ಮಾಡ್ಕೊಳ್ಳಬೇಕು. ನಡೆದು ಹೋಗುವಷ್ಟು ದೂರ ಇದೆ.’ ಎಂದರು ಲಾರಿಸರ್. ಜೊತೆಗೆ ಆರು ಜನ ಹೊರಟೆವು. ಪ್ರಭಾ ನೇರಲಗಿ ಬಸ್ಸಿನಲ್ಲೇ ಕುಳಿತಿದ್ದರು. ಅವರ ಕಾಲುಗಳು ಹತೋಟಿ ಮೀರಿದ್ದವು. ಮನೆಕಂಡರೆ ಸಾಕು ಎನ್ನುವಂತಾಗಿತ್ತು ಅವರ ಸ್ಥಿತಿ. ಅವರಿಗೆ ಹೇಳಿ ಹೊರಟೆವು. ಎರಡೇ ನಿಮಿಷದಲ್ಲಿ ವಿಶ್ವವಿದ್ಯಾಲಯದ ಗೇಟಿನ ಮುಂದೆ ನಿಂತಿದ್ದೆವು. ಆದರೆ ಅಂದು ರಜೆ ಇತ್ತು. ಹಾಗಾಗಿ ಒಳ ಹೋಗಿ ನೋಡುವುದಾಗಲಿಲ್ಲ. ಭಾರತದಿಂದ ಬಂದುದಾಗಿ ಮತ್ತು ಸ್ವಲ್ಪ ಒಳಹೋಗಿ ನೋಡುವುದಾಗಿ ಕೇಳಿಕೊಂಡಾಗ ಕಾವಲುಗಾರ ಆವರಣದೊಳಗೆ ಸ್ವಲ್ಪ ಮುಂದೆ ಹೋಗಲು ಅನುಮತಿ ನೀಡಿದ ಅಷ್ಟೇ. ಅಲ್ಲಿಂದಲೇ ಕಂಡಷ್ಟು ನೋಡಿ ಒಂದು ಫೋಟೋ ತೆಗೆದುಕೊಂಡು ಮರಳಿಬಂದು, ಎಲ್ಲರೂ ಸೇರಿ ವಿಮಾನ ನಿಲ್ದಾಣದ ದಾರಿ ಹಿಡಿದಾಗ 11 ಗಂಟೆ. ಹೊಟ್ಟೆಯೊಳಗೆ ಹೆಗ್ಗಣ ಓಡಾಡತೊಡಗಿದ್ದವು. 11-30ಕ್ಕೆ ಏರ್ಪೋರ್ಟ ಪ್ರವೇಶಿಸಿ ಮೊದಲ ಒಳಹಂತದಲ್ಲಿ ಕುಳಿತೆವು. ಎರ್ಮಜೆನ್ಸಿ ಫುಡ್ ಬ್ಯಾಗಗಳು ಹೊರ ಬಂದವು. ಅಲ್ಲಿಯೇ ಸ್ವಲ್ಪ ಸ್ವಲ್ಪ ಒಣ ಅವಲಕ್ಕಿ, ಕೊಬ್ಬರಿ ವಡೆ ತಿಂದೆವು. ರೈಲಿನಲ್ಲಿ ಕೊಟ್ಟ ತಿಂಡಿಯ ಪ್ಯಾಕೆಟ್ಗಳೆಲ್ಲ ಕಸದ ತೊಟ್ಟಿ ಸೇರಿದವು.
ಖರೀದಿಸಿದ ಸಾಮಾನುಗಳೆಲ್ಲವನ್ನು ಬ್ಯಾಗಿನೊಳಗೆ ಹೊಂದಿಸುವುದರೊಳಗೆ ಬ್ಯಾಗೇಜ್ ಹೆಣಭಾರವಾಗಿತ್ತು. ಹೆಚ್ಚಿನ ಹೊಂದಾಣಿಕೆಗಿರುವ ಜಿಪ್ ನ್ನ ತೆರೆದೆ. ಎಲ್ಲ ಸಾಮಾನು ಒಂದರೊಳಗೆ ಹಿಡಿಸಿತಾದರೂ ಬ್ಯಾಗನ್ನು ಎಳೆದುಕೊಂಡೊಯ್ಯುವುದು ಕಷ್ಟವಾಗಿತ್ತು. ಇನ್ನು ಎತ್ತಿಡುವದ್ಹೇಗೆ? ಸರಸ್ವತಿಯವರದ್ದು ಮೂರು ಬ್ಯಾಗುಗಳಾದವು. `ಒಂದು 10 K.G. ಮಾಡಿ ಕೈಯಾಗ ಹಿಡ್ಕೋತೀನಿ, ಇನ್ನೆರಡು ಡಿಕ್ಕಿಗೆ ಹೋಗ್ತಾವ’ ಎಂದರು. ನಿರಾಳವಾಗಿ ‘ಎರಡು ಬ್ಯಾಗ ನಡೆಯುವುದಿಲ್ಲ. ಹ್ಯಾಂಗ ಮಾಡ್ತೀರಿ? ಎಂದ ಸರೋಜಾಗೆ ‘ನಮ್ಮದು ಗ್ರೂಪ್ ಜರ್ನಿ, ಅದ್ಕ ಎವರೆಜ್ ವೈಟ್ ಕೊಟ್ಟರಾಯ್ತು. ಒಬ್ಬರಿಗೆ ಗರಿಷ್ಠ 30 K.G. ಅದ. ಎವರೆಜ್ ಲೆಕ್ಕಕ್ಕ ಸರಿ ಆಗ್ತದ’ ಎಂದರು. ಹೊಸ ವಿಷಯ ತಿಳಿದು ತಲೆ ಅಲ್ಲಾಡಿಸಿದೆವು.
ಇಲ್ಲೊಂದು ವಿಶೇಷವೆಂದರೆ ನಾವು ಹೋಗುತ್ತಿರುವ ಏರ್ಲೈನ್ಸ್ ಟರ್ಕಿಶ್ ದ್ದೆ ಆಗಿದ್ದು, ಇದು ಕೈರೋದಿಂದ ಇಸ್ಥಾಂಬುಲ್ ಗೆ ಹೋದ ಮೇಲೆ ಅಲ್ಲಿ ಇಳಿದು ದೆಹಲಿಗೆ ಹೋಗುವ ವಿಮಾನಕ್ಕೆ ಸಂಪರ್ಕ (connected) ಹೊಂದಿತ್ತು. ಇಸ್ತಾಂಬುಲ್ ನಲ್ಲಿ ಬೋರ್ಡಿಂಗ್ ಪಾಸ್ ಕೊಡುತ್ತಾರಾದರೂ ಲಗೇಜನ್ನು ತೂಗುವ ಅಳೆಯುವ ತಪಾಸಿಸುವ ಕೆಲಸ ಇಲ್ಲ. ಏಕೆಂದರೆ ಆ ಲಗೇಜು ಇಸ್ಥಾಂಬುಲ್ ನಲ್ಲಿ ನಮ್ಮ ಕೈಗೆ ಬರುವುದೇ ಇಲ್ಲ. ಅದನ್ನು ಇಸ್ಥಾಂಬುಲ್ ತಲುಪಿದ ವಿಮಾನದಿಂದ ನೇರವಾಗಿ ದೆಹಲಿಗೆ ಹೊರಡುವ ವಿಮಾನಕ್ಕೆ ವರ್ಗಾಯಿಸಿ ಬಿಡುತ್ತಾರೆ. ಅವೆರಡೂ ವಿಮಾನಗಳು ‘ಕನೆಕ್ಟೆಡ್ ವಿಮಾನಗಳು’ ಒಂದಕ್ಕೊಂದು ಸಂಪರ್ಕ ಹೊಂದಿರುತ್ತವೆ. ಇದಕ್ಕೆ ‘Transit’ ಎನ್ನುತ್ತಾರೆ. ಹೀಗಾಗಿ ಬ್ಯಾಗು ಲಗೇಜುಗಳ ಮೇಲೆ ಬಾಲ್ ಪೆನ್ನಿನಿಂದ ತೀಡಿ, ತೀಡಿ ಹೆಸರು, ವಿಳಾಸ ಮೊಬೈಲ್ ನಂಬರ್ ಬರೆದೆವು. (ಒಂದೊಮ್ಮೆ ಬ್ಯಾಗ ತಪ್ಪಿ ಹೋದರೂ ತಿರುಗಿ ಅದೇ ವಿಳಾಸಕ್ಕೆ ಬರುತ್ತದೆ.)
12.55ಕ್ಕೆ ಬೋರ್ಡಿಂಗ್ ಪಾಸ್ ಪಡೆದೆವು. ನಮ್ಮ ಬ್ಯಾಗೇಜ್ ಗಳ ಮೇಲೆ“Transit Transfer international’’ ಎಂದು ಬರೆದ ದೊಡ್ಡ ಕಾರ್ಡನ್ನೇ ತೂಗು ಹಾಕಿದರು. 1.40ಕ್ಕೆ ವಿಮಾನದಲ್ಲಿ ಕುಳಿತೆವು. T.K.0691 ವಿಮಾನದಲ್ಲಿ 17F ಸೀಟು ನನ್ನದಾಗಿತ್ತು. ಕಿಟಕಿಯ ಸೀಟು ಖುಷಿಯಿಂದ ಉಬ್ಬಿ ಹೋಗಿದ್ದೆ. ಎಲ್ಲ ಸರಿ ಮಾಡ್ಕೊಂಡು ಕುಳಿತು ನೋಡಿದರೆ ಎರಡು ಗಂಟೆ, ವಿಮಾನ ಬಿಡ್ತಾ ಇಲ್ಲ. ಹೊಟ್ಟೆ ಚುರುಗುಟ್ಟುತ್ತಿದ್ದವು. ಬೆಳಿಗ್ಗೆಯೂ ಟಿಫಿನ್ ಆಗಿರಲಿಲ್ಲ. 2.10 ಆಗುವಾಗ ಯಾರೋ ಹೇಳಿದರಂತೆ ಏರ್ ಟ್ರಾಫಿಕ್ ಜಾಮ್ ಆಗಿದೆಯಂತೆ. ಅದಕ್ಕೆ ಲೇಟು. ಸರಿ ಮೂರು ಗಂಟೆಯಾಯಿತು. ಪ್ರತಿಕ್ರಿಯೆ ಇಲ್ಲ. ಎಲ್ಲರೂ ಹಸಿದ ಹುಲಿಗಳಾಗಿದ್ದೆವು. ಕೆಲವರು ಸಕ್ಕರೆ ಕಾಯಿಲೆ ಇರುವಂಥವರು ಮತ್ತದೆ ಬಿಸ್ಕಿಟ್ ಅವಲಕ್ಕಿ ತಿನ್ನತೊಡಗಿದರು. ಎಂಥ ಕಂಗಾಲಾಗಿದ್ದೆವೆಂದರೆ ಕುಡಿಯಲು ನೀರೂ ಇರಲಿಲ್ಲ. ಕೊಡುವವರೂ ಇರಲಿಲ್ಲ. ಪರಿಸ್ಥಿತಿಯೇ ಹಾಗಿತ್ತು. ಅಲ್ಲಿ ನೀರು ತೆಗೆದುಕೊಂಡು ಹೋಗಲು ಅನುಮತಿ ಇರುವುದಿಲ್ಲ. ವಿಮಾನ ಸಿಬ್ಬಂದಿಯೂ ಅಲ್ಲಿರಲಿಲ್ಲ. ಮನು, ಲಾರಿಸರ್ ಮೆಲ್ಲನೆ ಎದ್ದು ಹೊರನಡೆದರು. ಅವರೂ `ಏರ್ ಟ್ರಾಫಿಕ್ ಜಾಮ್ ಆಗಿದೆಯಂತೆ’ ಎಂದರು. ಕೊನೆಗೆ ಮನು ಹೊರಗಿದ್ದ ಸಿಬ್ಬಂದಿಗಳ ಮೂಲಕ ವಿಚಾರಿಸಿ ವಿಮಾನ ಕಚೇರಿಗೆ ಹೋಗಿ ಕೇಳಿದರೆ ಏನೋ ತಾಂತ್ರಿಕ ದೋಷದಿಂದಾಗಿ ತಡವಾಗ್ತಿದೆ ಎಂದರಂತೆ.

`ನಮನ್ನ ಕೆಳಗಾದ್ರು ಇಳಿಸಿ. ಏನಾದರು ತಿನ್ನಬಹುದು. ವಯಸ್ಸಾದ ಜನರಿದ್ದಾರೆ’ ಎಂದು ಅನೇಕ ಜನ ಕೇಳಿಕೊಂಡಾಗ ಅಂತೂ ಇಂತೂ 3.45ಕ್ಕೆ ಒಂದು ಚೀಸ್ ಮತ್ತು ಬಟ್ಟಲಲ್ಲಿ ಹಣ್ಣು ಪೂರೈಸತೊಡಗಿದರು. ಅಷ್ಟರಲ್ಲೆ (4 ಗಂಟೆಗೆ) ಕೆಳಗಿಳಿಯುವಂತೆಯೂ, ಅಲ್ಲಿ ತಿನ್ನಲು ಕುಡಿಯಲು ಪೂರೈಸುತ್ತಿರುವದಾಗಿಯೂ ಸೂಚನೆ ಬಂತು. ಎಲ್ಲರೂ ಕೆಳಗಿಳಿದು ಬಂದು ಕುಳಿತೆವು. ಆಗ ಒಂದು ಗೇಣುದ್ದದ ಬನ್, ಚೀಸ್, ಒಂದು ಬಟ್ಟಲು ಹಣ್ಣು ಹಾಗೂ ಮ್ಯಾಂಗೋ ಜ್ಯೂಸ್ ಪೂರೈಸಿದರು. ಅಲ್ಲಿ ಒಬ್ಬರಿಗೆ ಒಂದು ಸಿಕ್ಕರೆ ಇನ್ನೊಬ್ಬರಿಗೆ ಇನ್ನೊಂದು ಸಿಕ್ಕಿರಲಿಲ್ಲ. ಚೀಸ್ ತಿನ್ನಲು ಸಾಧ್ಯವಾಗಲೇ ಇಲ್ಲ. ಒಳಗಿನ ಚೀಸ್ ತೆಗೆದು ಒಂದು ಪೇಪರಲ್ಲಿ ಸುತ್ತಿ ಬ್ಯಾಗಿನೊಳಗೆ ಹಾಕಿಕೊಂಡು ಬನ್ ತಿಂದು, ಜ್ಯೂಸ್ ಕುಡಿದೆವು. ಒಳಗಿರುವ duty free ಅಂಗಡಿಗಳಲ್ಲಿ ಇನ್ನಷ್ಟು ಜ್ಯೂಸನ್ನಾದ್ರೂ ಕೊಳ್ಳೋಣವೆಂದು ಹೊರಟೆವು. ಅಷ್ಟರಲ್ಲಿ ವಿಮಾನ ಇನ್ನೇನು ಆರಂಭವಾಗಲಿದೆ, ಎಲ್ಲರೂ ವಿಮಾನದಲ್ಲಿ ಕುಳಿತುಕೊಳ್ಳಬೇಕೆಂದು ಬಿತ್ತರವಾಗತೊಡಗಿತು. ಕೆಲವರು ತಿಂದ ತುತ್ತು ಗಂಟಲಲ್ಲೆ ಇದ್ದಂತೆ ಲಗುಬಗೆಯಿಂದ ಹೋಗಿ ಕುಳಿತರು.
ಹಾಗೆ ಓಡೋಡಿ ಬಂದು ಕುಳಿತಾಗ ಐದು ಗಂಟೆ. 5ಕ್ಕೆ ವಿಮಾನ ಮೆಲ್ಲನೆ ಅಲುಗಾಡತೊಡಗಿತು. ಎಲ್ಲರೂ ಬೆಲ್ಟ ಹಾಕಿಕೊಂಡು ಕುಳಿತೆವು. ಸರಿಯಾಗಿ 5-45ಕ್ಕೆ ವಿಮಾನ ಟೇಕ್ ಓವರ್ ಆಯಿತು. ಎಲ್ಲರ ಹಸಿದು ಹಣ್ಣಾದ ಮುಖಗಳು ಬಿಸಿಲಿನ ತಾಪಕ್ಕೆ ಮಮ್ಮಿಗಳಾಗಿದ್ದವು. ಗಗನಸಖಿಯರು ಫುಡ್ ಟ್ರೋಲಿಯೊಂದಿಗೆ ಬಂದು ಫಾಸ್ಟ್ಫುಡ್ ಪ್ಲೇಟ್, ಜ್ಯೂಸ್ ಕೊಟ್ಟು ಹೋದರು. ಸೇರಿದಷ್ಟು ತಿಂದೆವು. ಮೂರು ಸಲ ಚೆರ್ರಿ ಜ್ಯೂಸ್ ಕುಡಿದೆ. ಸಂಜೆಯಾದರೂ, ಬಿಸಿಲಲ್ಲಿ ಬೆಂದ ಭೂಮಿ ಮೌನವದನೆಯಾಗಿ ಕಾಣುತ್ತಿತ್ತು. ಬಸವಳಿದ ಕಣ್ಣುಗಳಲ್ಲಿ ಚೈತನ್ಯ ಇರಲಿಲ್ಲ. ಮೆಲ್ಲನೆ ಮುಚ್ಚತೊಡಗಿದವು. ತೂಕಡಿಸುತ್ತ ಒಂದು ಸಲ ಹೊರ ನೋಡುತ್ತಾ ಕೂರುವಷ್ಟರಲ್ಲಿ ಮತ್ತೆ ಮುಚ್ಚುತ್ತಿದ್ದವು. ಕೆಳಗೆ ಸಮುದ್ರ, ಹಸಿರು, ಮಣ್ಣ ಬಣ್ಣಗಳು ಬಂದು ಹೋಗುತ್ತಿದ್ದವು. ಬಿಸಿಲು ಪ್ರಖರವಾಗಿಯೇ ಇತ್ತು. ಕಣ್ಣು ಮುಚ್ಚಿ ಕುಳಿತಿರಬೇಕಾದರೆ ತಲೆಯಲ್ಲಿ ವಿಚಾರ ಓಡುತ್ತಿತ್ತು. `ವಿಮಾನ ತಡವಾಗಿ ಬಿಡಲು ನಿಜವಾದ ಕಾರಣ ಏನು?’ ಎಂಬುದೇ ಗೊತ್ತಗಲಿಲ್ಲ. ಯಾರೋ ಇದು ಟರ್ಕಿ ವಿಮಾನ. ಇದು ಬಂದಿಳಿದ ಬಗ್ಗೆ ಎಲ್ಲಿಯೂ ಎಂಟ್ರಿನೇ ಇಲ್ಲವಂತೆ. ಹಾಗಾಗಿ ಸಿಬ್ಬಂದಿ ಹೊಂದಾಣಿಕೆ ಕಷ್ಟವಾಯ್ತಂತೆ ಎಂದರು. (ನನಗೆ ನಮ್ಮ ಹಳ್ಳಿ ಬಸ್ಸುಗಳು ನೆನಪಿಗೆ ಬಂದವು.) ಕೆಲವರು ವಿಮಾನ ನಿಲ್ದಾಣದ ಯಾವುದೋ ಅಧಿಕಾರಿಯನ್ನು, ಏನೋ ಕಾರಣಕ್ಕಾಗಿ ಬಂಧಿಸಿದ್ದಕ್ಕೆ ಸಿಬ್ಬಂದಿಯೆಲ್ಲಾ ಸೇರಿ ಹರತಾಳಕ್ಕೆ ಇಳಿದಿದ್ದಾರೆ ಎಂದರು. ಮತ್ತ್ಯಾರೋ ವಿಮಾನದ ಸಮಯ ತಪ್ಪಿಸಲಿಕ್ಕೆ ಹೀಗೆ ಮಾಡಿದರಂತೆ, ಎಕೆಂದರೆ ವಿಮಾನ ಅಪಹರಣಕಾರರಿಂದ ವಿಮಾನವನ್ನು ಕಾಪಾಡಲು ಎಂದರು. ನನಗೆ ಇಲಾಖಾ ಅನುಮತಿ ಪಡೆಯುವಾಗ ಡೈರೆಕ್ಟರ್ ಹೇಳಿದ ಮಾತುಗಳು ನೆನಪಿಗೆ ಬಂದವು.
ಮಂಗಳೂರು ದುರಂತ, ಕಂದಹಾರ್ ಅಪಹರಣ ಎಲ್ಲವೂ ಕಣ್ಮುಂದೆ ಹಾಯ್ದು ಹೋದವು. ಏನೇ ಇದ್ದರೂ ಸುಸೂತ್ರ ಹೋಗಿ ತಲುಪಿದರೆ ಸಾಕೆನಿಸುತ್ತಿತ್ತು. ಒಟ್ಟಿನಲ್ಲಿ ವಿಮಾನ 3.20 ನಿಮಿಷ ತಡವಾಗಲು ನಿಜವಾದ ಕಾರಣ ಏನು ಎಂಬುದು ನಿಖರವಾಗಿ ತಿಳಿಯಲೇ ಇಲ್ಲ. ವಾಣಿ ಬಿತ್ತರಿಸತೊಡಗಿತು. `ಇಸ್ಥಾಂಬುಲ್ ಸಮೀಪಿಸುತ್ತಿದೆ. ಬೆಲ್ಟ ಹಾಕಿಕೊಳ್ಳಿ’ ಎಂದು. ಕಣ್ಣು ತೆರೆದೆ. ಅಬ್ಬಾ! ಇಸ್ಥಾಂಬುಲ್ ಬಂದಾಯಿತು. ಸರಿಯಾಗಿ ಲ್ಯಾಂಡಿಂಗ್ ಆದ್ರೆ ಸಾಕಪ್ಪ ಎನಿಸುತ್ತಿತ್ತು. 7.25ಕ್ಕೆ ವಿಮಾನ ಭೂ ಸ್ಪರ್ಶಿಸಿತ್ತು. ಎಲ್ಲರೂ ಖುಷಿಯಿಂದ ಹೋ…. ಎಂದು ಚಪ್ಪಾಳೆ ತಟ್ಟಿದರು. ಸದ್ಯ ಯುದ್ಧ ಗೆದ್ದು ಬಂದವರಂತೆ ವಿಮಾನದಿಂದ ಹೊರ ಬಂದೆವು. 7.30 ಆದರೂ ಪೂರ್ಣ ಬಿಸಿಲಿತ್ತು. ಅತಾತುರ್ಕ ವಿಮಾನ ನಿಲ್ದಾಣ (Ataturk Havalimani) ದಲ್ಲಿ ಒಳಭಾಗದ ಒಂದು ಹಂತದಲ್ಲಿ ಕುಳ್ಳಿರಿಸಿ, ಟ್ರಾನ್ಸಿಟ್ ಪ್ರಯಾಣವಾದ್ದರಿಂದ ಎಲ್ಲರ ಬೋರ್ಡಿಂಗ್ ಪಾಸ್ ಪಡೆಯಲು ಎಲ್ಲರ ಪಾಸ್ಪೋರ್ಟ್ ಸಂಗ್ರಹಿಸಿಕೊಂಡು ಮನು ಒಬ್ಬರೇ ಹೋದರು.
ಎಂಟಾಯಿತು, ಎಂಟುವರೇಯಾಯಿತು, ಬರಲೇ ಇಲ್ಲ. ಲಾರಿಸರ್ ಮತ್ತು ಕೊಂಡಯ್ಯಾ ಇಬ್ಬರೂ ನೋಡಲು ಹೋದರು. ಪ್ರಭಾ ನೇರಲಗಿ ಪರಿಸ್ಥಿತಿಯಲ್ಲಿ ಸುಧಾರಣೆ ಇರಲಿಲ್ಲ. ಸರಸ್ವತಿಯವರು ಇದ್ದುದರಲ್ಲಿ ಚುರುಕಾಗಿದ್ದರು. ಅವರೊಂದಿಗೆ ಸರೋಜಿನಿ ಆಂಟಿ- ಮೂವರೂ ಉದ್ದನೆಯ ಆಸನಗಳ ಮೇಲೆ ಮಲಗಿಬಿಟ್ಟಿದ್ದರು. ಉಳಿದವರದ್ದೆಲ್ಲಾ ಕುಳಿತುಕೊಳ್ಳದ, ಮಲಗದ ಪರಿಸ್ಥಿತಿ. ಇಂದು ಬೆಳಿಗ್ಗೆಯಿಂದ ಸ್ನಾನವೂ ಇಲ್ಲ, ಊಟವಂತೂ ದೇವರೇ ಬಲ್ಲ. ಬಿಸ್ಕಿಟ್ ತಿನ್ನೋದು, ನೀರು ಕುಡಿಯೋದು, ವಾಶ್ ರೂಂಗೆ ಹೋಗಿ ಬರುವುದು ಮಾಡುತ್ತಾ ಸಮಯ ಕೊಲ್ಲುತ್ತಿದ್ದೆವು. ಅಷ್ಟರಲ್ಲಿ ಹೋದ ಮೂವರು ಬಂದು ‘ಕೈರೋದಿಂದ ಟರ್ಕಿಗೆ ಬರುವ ಮತ್ತು ಇಲ್ಲಿಂದ ದೆಹಲಿಗೆ ಹೋಗುವ ವಿಮಾನಗಳು ಸಂಪರ್ಕ ಸಂಬಂಧ ಹೊಂದಿದವುಗಳು. ಕೈರೋದಲ್ಲಿ ಬಿಡುವ ವಿಮಾನ ತಡವಾಯ್ತು. ಅದರೊಳಗಿನ ಪ್ಯಾಸೆಂಜರ್ನ ಕರೆದುಕೊಂಡು ಇಲ್ಲಿಂದ ದೆಹಲಿಗೆ ಹೊರಡುವ ವಿಮಾನ ಹೋಗಿಬಿಟ್ಟಿದೆ’ ಎಂದರು. ಅದಕ್ಕೇ ಈಗ ಬದಲಿ ವ್ಯವಸ್ಥೆ ಮಾಡಲು, ಆ ವಿಮಾನದಲ್ಲಿ ಬಂದಂಥ, ಬೇರೆಡೆ ಮುಂದಿನ ಪ್ರಯಾಣ ಮಾಡಲಿರುವ ಎಲ್ಲ ಪ್ರಯಾಣಿಕರು ಪರದಾಡುತ್ತಿದ್ದರು.
ನಾವು ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಬೇರೆ ಯಾವ ವಿಮಾನಗಳೂ ಇರಲಿಲ್ಲ. ಇದ್ದರೂ ಒಂದರಲ್ಲಿಯೇ 22 ಆಸನಗಳ ವ್ಯವಸ್ಥೆಯಾಗುವುದಿಲ್ಲ. ಅದನ್ನುಳಿದರೆ ನಾಳೆ ಸಂಜೆ 6-45ರವರೆಗೆ ಕಾಯಲೇಬೇಕು. ವೀಸಾ ಇಲ್ಲ. ಪೂರ್ಣ 24 ತಾಸು! ಎಲ್ಲಿ ಕಾಯುವುದು? ಅವರಿಂದಲೇ ಆದ ಈ ತಪ್ಪಿಗಾಗಿ ಅವರೇ ನಮಗೆ ಇಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು ಮತ್ತು ನಾಳೆ ಸಂಜೆಯವರೆಗೆ ಇಸ್ಥಾಂಬುಲ್ ನಲ್ಲಿ ತಿರುಗಾಡಲು ವೀಸಾ ಕೊಡಿಸಬೇಕು. ಈ ಎರಡು ಬೇಡಿಕೆಗಳನ್ನು ಸಂಬಂಧಿಸಿದ ಆಡಳಿತದ ಮುಂದಿಟ್ಟೆವು. ಆದರೆ ಅವರು ಮೊದಮೊದಲು ಅದಕ್ಕೆ ಸ್ಪಂದಿಸಿರಲಿಲ್ಲ. ಆದರೆ ಮನು ತಮ್ಮ ಶತ ಪ್ರಯತ್ನ ಬಿಡಲೇ ಇಲ್ಲ. ಲಾರಿಸರ್ ಕೊಂಡಯ್ಯಾ ಎಲ್ಲರೂ ಹೋಗಿ ವಿನಂತಿಸಿಕೊಂಡರು. ಅದಕ್ಕೆ ಪ್ರಯತ್ನಿಸ್ತೀವಿ ಎಂದು ಹೇಳಿದ್ದಕ್ಕಾಗಿ ಇವರೆಲ್ಲ ನಮ್ಮೆಡೆಗೆ ಬಂದು ವಿಷಯ ತಿಳಿಸುತ್ತಿದ್ದರು. ಮನು ನಿಂತು-ನಿಂತು ಅವರೊಡನೆ ವಾದ-ವಿವಾದ ಮಾಡಿ ಸುಸ್ತಾಗಿ ಹೋಗಿದ್ದರು.
ಇಲ್ಲಿ ಗಮನ ಸೆಳೆದದ್ದೆಂದರೆ- ಇವರು ಏನೇ ಚರ್ಚಿಸಿದರೂ ಅಲ್ಲಿ ಕೌಂಟರ್ನಲ್ಲಿದ್ದ 4 ಜನ ಜ್ಯೂನಿಯರ್ ಅಧಿಕಾರಿಗಳೊಂದಿಗೆನೆ ಚರ್ಚಿಸಬೇಕು. ಅವರು ಉಚ್ಚ ಅಧಿಕಾರಿಗಳೊಂದಿಗೆ ಫೋನ್ ಮೂಲಕ ಚರ್ಚಿಸುತ್ತಿದ್ದರು. ನಾವು ಕೂತಲ್ಲಿಂದಲೇ ಇದೆಲ್ಲ ಕಾಣುತ್ತಿತ್ತು. ಎಲ್ಲರೂ ಹಸಿದು ಹೈರಾಣದಾಚೆ ಮತ್ತೊಂದೇನಾದರೂ ಇದ್ದರೆ ಅದೂ ಆಗಿ ಹೋಗಿತ್ತು. ಆದರೆ ಅದರಾಚೆ ಅಂದಿನ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಮೇಲಾಗಿ ತಪ್ಪು ನಮ್ಮದಾಗಿರಲಿಲ್ಲ. ಅಲ್ಲಿ ವಿಮಾನ ತಡವಾದಾಗ ಇಲ್ಲಿಗೆ ಮಾಹಿತಿ ಕಳುಹಿಸಬೇಕಿತ್ತು. ಅದೇನಾಗಿದೆಯೋ? ಅದು ಅವರವರ ಆಡಳಿತ ದೋಷ. ಈಗ ಸರಿಪಡಿಸಬೇಕಾದದ್ದು ಅವರ ಜವಾಬ್ದಾರಿ ಮತ್ತು ಕರ್ತವ್ಯ ಕೂಡಾ. ಜುಲೈ 27ಕ್ಕೆ ದಿಲ್ಲಿಗೆ ಬಂದು ಇಳಿಯುತ್ತೇವೆ. 27ರಂದು ಒಂದು ಇಡೀ ದಿನ ದಿಲ್ಲಿಯನ್ನು ಸುತ್ತಿಕೊಂಡು 28ರ ಬೆಳಿಗ್ಗೆ 9ಕ್ಕೆ ರೈಲು ಏರಿದರಾಯಿತೆಂದು ಧಾರವಾಡದೆಡೆಗೆ ಹೋಗುವ ಏಳೂ ಜನರೂ 28ಕ್ಕೆ ‘ಮಂಗಲ ಲಕ್ಷದ್ವೀಪ’ ರೈಲಿಗೆ ಟಿಕೇಟ್ ಕಾಯ್ದಿರಿಸಿದ್ದೆವು. ಈಗ ಎಲ್ಲರಿಗೂ ಅನಿಸತೊಡಗಿತ್ತು – ‘ಒಂದು ದಿನ ತಡವಾಗಿ ರಿರ್ಸವೆಷನ್ ಮಾಡಿಸಿದ್ದು ಒಳ್ಳೆಯದೇ ಆಯಿತೆಂದು. ಕೊಂಡಯ್ಯ ದಂಪತಿಗಳು ಹೈದ್ರಬಾದ್ ಗೆ , ಶಕುಂತಲಾ ಮತ್ತು ಉಮಾರಾಣಿ- ಇಬ್ಬರೂ ಭುವನೇಶ್ವರಕ್ಕೆ 27ರಂದೇ ಫ್ಲೈಟ್ ರಿರ್ಸವೆಷನ್ ಮಾಡಿಯಾಗಿತ್ತು. ಆ ನಾಲ್ಕೂ ಜನರು ಪೇಚಾಡತೊಡಗಿದ್ದರು. ಒಂದೆಡೆ ಹಣದ ನಷ್ಟ, ಇನ್ನೊಂದೆಡೆ ಸಮಯಕ್ಕೆ ಸರಿಯಾಗಿ ಹೊರಡದ ಕಷ್ಟ, ಮತ್ತೊಂದೆಡೆ ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕಾದ ಸಂಕಟ.
ಮನು ಸ್ವಲ್ಪ ಸುಧಾರಿಸಿಕೊಂಡು ನಮ್ಮೊಳಗಿನ ನಾಲ್ಕು ಜನರನ್ನು ಕರೆದೊಯ್ದರು. ನಾನು ಸರೋಜಾ ಶಕುಂತಲಾ ಮತ್ತು ಸರೋಜಿನಿ ಭದ್ರಾಪೂರ ಹೋದೆವು. ನಾವೂ ವಿನಂತಿಸಿಕೊಂಡೆವು. ಕೊನೆಗೆ ಆಡಳಿತ ಮಂಡಳಿಯವರು ನಮ್ಮ ಮುಂದೆ ಆಯ್ಕೆ ಇಟ್ಟರು. ಒಂದು ವೀಸಾ ತಗೊಳ್ಳಿ ಇಲ್ಲವೇ ವಸತಿ ತಗೊಳ್ಳಿ. ಮನು ಎರಡೂ ಪಡೆಯಲು ಬಹಳಷ್ಟು ಪ್ರಯತ್ನಿಸಿದರೂ, `ನಿಮಗೆ ಒಂದನ್ನ ಮಾತ್ರ ಕೊಡಬಹುದು’ ಎಂದರು. ಎಲ್ಲರಿಗೂ ಊಟ ವಿಶ್ರಾಂತಿಯ ಅವಶ್ಯಕತೆ ಇತ್ತು. ಅನಾರೋಗ್ಯವುಳ್ಳವರಿಗಂತೂ ಬೇಕೇ ಆಗಿತ್ತು. ಹಾಗಾಗಿ ವಸತಿಯನ್ನೇ ಆರಿಸಿಕೊಂಡರು. ಇಷ್ಟೆಲ್ಲ ಆಗುವ ಹೊತ್ತಿಗೆ 9-30 ಆಗಿತ್ತು. ಊಟವನ್ನು ಅವರೇ ಅಂದಂದಿನ ಅವರ ಷೆಡ್ಯೂಲ್ ನ ಅನ್ವಯ ಏನೇನಿರುತ್ತೊ ಅದನ್ನು ಕೊಡುವುದು ಅಲ್ಲಿಯ ಪದ್ಧತಿ. ನಾವು ಬೇಡಿದ್ದನ್ನ ಅವರು ಕೊಡುವದಿಲ್ಲ. (ಬಹುಶಃ ಅದು ಇರುವುದೂ ಇಲ್ಲ.) ಏರ್ಪೋರ್ಟ್ ನಲ್ಲಿರುವ ದೊಡ್ಡ ಹೋಟೆಲ್ `ಗ್ಲೋರಿಯಾ ಜೀನ್ಸ್ ಕಾಫಿಸ್’. ಅಲ್ಲಿ ಅದರ ಮುಂದಿರುವ ಕುರ್ಚಿ ಟೇಬಲ್ ಗಳಲ್ಲಿ ಕುಳಿತೆವು. ಅರ್ಧ ಗಂಟೆಯವರೆಗೆ ಕಾಯ್ದ ಮೇಲೆ ಚೀಸ್ ಮತ್ತು ಕೋಲಾ ತಂದುಕೊಟ್ಟರು. ಮೈದಾ ಹಿಟ್ಟನ್ನು ಲಟ್ಟಿಸಿ ಅದರ ಮೇಲೆ ತರಕಾರಿ ಹಾಕಿ ಸ್ವಲ್ಪ ಒತ್ತಿ ಅದರ ಮೇಲೆ ಚಿಸ್ ಇಟ್ಟು ಓವನ್ದಲ್ಲಿ ಬೇಯಿಸಿ ಮಾಡುತ್ತಿದ್ದುದು ನಮಗೆ ಕಾಣುತ್ತಿತ್ತು. ಬಿಸಿಯಾಗಿತ್ತಾದರೂ ಅದು ತಿನ್ನುವ ಹಾಗಿರಲಿಲ್ಲ. ಇದರೊಂದಿಗೆ ಕೋಲಾವನ್ನೇ ಕುಡಿಯಬೇಕು. ನೀರು ಕೊಡುತ್ತಿರಲಿಲ್ಲ.
ಬಿಸಿ ತಗುಲಿದ ಮೇಲೆ ಚಿಸ್, ಚುಯಿಂಗ ಗಮ್ ಆದಂತಾಗಿತ್ತು. ಅದನ್ನೆಲ್ಲ ತೆಗೆದುಹಾಕಿ ಇಷ್ಟವಿದ್ದವರೂ, ಬೆಂದ ಹಿಟ್ಟನ್ನು ಬೆಂದ ಟೋಮೆಟೋವನ್ನು ತಿಂದರು. ಹಸಿದು ಹುಲಿಗಳಾಗಿದ್ದರೂ ಇಡೀ ಒಂದನ್ನು ತಿನ್ನಲಾಗಲಿಲ್ಲ. ಕೋಕೋ ಕೋಲಾ ಕುಡಿದು ಎದ್ದೆವು. ಆಗ ರಾತ್ರಿ 10.20 ಆಗಿತ್ತು. ಜೀವ ಹಾಸಿಗೆ ಹುಡುಕುತ್ತಿತ್ತು. ಊಟ ಮಾಡಿದ ಮೇಲೆ ಎಲ್ಲರನ್ನು ಹೋಟೆಲ್ನತ್ತ ಕರೆದೊಯ್ದರು. ಅದು ಹೀಗೇ ಇರಬಹುದು ಎನ್ನುವ ಕಲ್ಪನೆ ಕೂಡ ನಮಗಿರಲಿಲ್ಲ. ಅಲ್ಲಿ ಹೋದಾಗಲೇ ಗೊತ್ತಾದುದು `ಇಂಟರ್ನ್ಯಾಷನಲ್ ಹೋಟೆಲ್’ ಎಂದು. ಹೇಗ್ಹೇಗೆ ಕೂಡಿ ಹೋದೆವೋ ಹಾಗ್ಹಾಗೆ ಇಬ್ಬರಿಗೆ ಸೇರಿ ಒಂದೊಂದು door locking card ಳನ್ನು ಕೊಟ್ಟರು. ನಾನು ರಾಜನಂದಾ 9ನೇ ರೂಂಗೆ ಹೋದೆವು. ಬಾಗಿಲು ತೆಗೆದು ಒಳ ಹೋದರೆ ಬಾಗಿಲ ಬಣ್ಣ ಮೊದಲಾಗಿ ಎಲ್ಲವೂ ಬಿಳಿ. ಎಲ್ಲಿ ಮುಟ್ಟಿದರೆ ಹೊಲಸಾಗುತ್ತೋ ಎನ್ನುವಷ್ಟು ಬಿಳಿ. ಅಲ್ಲಿಯೂ ಮಿನಿ ಬಾರ್ ಇತ್ತು. ಜೊತೆಗೆ ಒಂದು ವಿಶೇಷವೆಂದರೆ ರೂಮಿನ ನಾಲ್ಕು ಗೋಡೆಗಳಲ್ಲಿಯ ಒಳ ಮಗ್ಗುಲಿನ ಒಂದು ಗೋಡೆ ಬರೀ ಗಾಜಿನದಾಗಿತ್ತು. ಲೈಟ್ ಹಾಕಲು ಬಟನ್ ಒತ್ತಿದಾಗ ಆ ಇಡೀ ಗೋಡೆಯೇ ಝಗ್ ಎಂದು ಬೆಳಕಾಯಿತು. ಸಖದಾಶ್ಚರ್ಯ! ಗಾಜಿನ ಗೋಡೆಯ ಮಧ್ಯ ಭಾಗದಲ್ಲಿ ಒಂದು ಟ್ಯೂಬ್ಲೈಟ್ ಕೂಡಿಸಿದ್ದರು. ಆ ಲೈಟ್ ಬೆಳಗಿದಾಗ ಇಡೀ ಗಾಜು ಹೊಳೆಯುತ್ತಿತ್ತು. ಹಿಂದೆಂದೂ ಕಂಡು ಕೇಳರಿಯದ ಅಚ್ಚರಿ! ಒಂದು ಶೀಲ್ಡ್ ಪ್ಲಾಸ್ಟಿಕ್ ಕವರ್ ಇತ್ತು. ತೆರೆದು ನೋಡಿದರೆ ಬಿಳಿ ಟರ್ಕಿ ಬಟ್ಟೆಯಿಂದ ಮೆಟ್ಟಲು ಅನುಕೂಲವಾಗುವಂತೆ ಮಾಡಿದ, ರೂಮಿನಲ್ಲಿ ಮಾತ್ರ ಉಪಯೋಗಿಸಬಹುದಾದ ಚಪ್ಪಲಿಗಳು. ಬಾಥರೂಂ ಬಾಗಿಲು, ಒಳಗಿನ ಸಿಂಕ್, ಬಾಥಟಬ್ ಕಮೋಡ್ ಎಲ್ಲವೂ ಬಿಳಿ ಫೈಬರ್ನಿಂದ ಮಾಡಿದವುಗಳು. ಬಾರಿಸಿದರೆ ಟಕ್-ಟಕ್ ಸಪ್ಪಳ ಬರುತ್ತಿತ್ತು. ಸಿಮೆಂಟ್ ಇಟ್ಟಿಗೆಗಳಿಂದಾಗಲಿ ಅಥವಾ ಬಿಳಿ ಶಿಲೆಗಳಿಂದಾಗಲಿ ಮಾಡಿದವುಗಳಾಗಿರಲಿಲ್ಲ.
ಇಷ್ಟೆಲ್ಲ ವೈಭವವಿದ್ದರೂ ನಮ್ಮೊಂದಿಗೆ ನಮ್ಮ ಬಟ್ಟೆಗಳಿರಲಿಲ್ಲ. ಏಕೆಂದರೆ ಲಗೇಜು ನಮ್ಮೊಂದಿಗಿರಲಿಲ್ಲ. ಜೊತೆ ಇದ್ದುದು ವ್ಯಾನಿಟಿ ಬ್ಯಾಗ್ ಒಂದೇ. ಕೈಕಾಲು ತೊಳೆದು ಫ್ರೆಶ್ ಆದರೂ ಬದಲಿಸಲು ಬಟ್ಟೆ ಇಲ್ಲ. ಬೆಳಿಗ್ಗೆಯಿಂದ ಸ್ನಾನವಿರಲಿಲ್ಲ. ಆದರೆ ಏನು ಮಾಡಲೂ ಸಾಧ್ಯವೂ ಇರಲಿಲ್ಲ. ಮಧ್ಯಾಹ್ನದಿಂದ ಬಿಸಿಲು ಬೆವರಿಗೆ ಬಟ್ಟೆ ಬದಲಿಸಬೇಕೆನಿಸಿದರೂ ಅಲ್ಲಿ ಆಯ್ಕೆಗಳೇ ಇರಲಿಲ್ಲ. ಪರಿಸ್ಥಿತಿ ಅನಿವಾರ್ಯವಾಗಿತ್ತು. ಸಹಿಸಲೇಬೇಕಿತ್ತು. ನಮ್ಮ ಮುಖಗಳೂ ಬೆಳ್ಳಗಾದವು. ಒಳ ಉಡುಪುಗಳನ್ನಷ್ಟೇ ತೊಳೆದು ಹಾಕಿ ಇದ್ದ ಬಟ್ಟೆಗಳ ಮೇಲೆ ಬೆಳ್ಳನೆಯ ಹೊದಿಕೆ ಹೊದ್ದುಕೊಂಡು ಮಲಗಿಬಿಟ್ಟೆವು. ಆಗ ಸಮಯ 11.45. ಯಾವ ದೇಶದವರೂ ಅಲ್ಲದವರಾಗಿ ಆ ರಾತ್ರಿ ಅಂತರ್ರಾಷ್ಟ್ರೀಯ ಹೋಟೆಲಿನಲ್ಲಿ ಅನಿರೀಕ್ಷಿತ ಅತಿಥಿಗಳಾಗಿ ಕಳೆಯ ಬೇಕಾಯಿತು.
(ಮುಂದುವರಿಯುವುದು…)
ನೈಲ್ ನದಿಯ ಮಡಿಲಲ್ಲಿ : ತಡವರಿಸಿದ ಮರುಪ್ರಯಾಣ


0 Comments
Trackbacks/Pingbacks