ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೈಲ್ ನದಿಯ ಮಡಿಲಲ್ಲಿ – ಇಸ್ತಾಂಬುಲ್ ಸುತ್ತುತ್ತಾ…

(ಇಲ್ಲಿಯವರೆಗೆ…)

ಪ್ಯಾರಾ ಇಸ್ತಾಂಬುಲ್

ವಿಮಾನ ಟರ್ಕಿ ನೆಲ ಸ್ಪರ್ಶಿಸಿದಾಗ ಶುಭ ಸಮಯ ಸರಿಯಾಗಿ ಬೆಳಗಿನ 9.5 (ಆಗ ಭಾರತದಲ್ಲಿ 11.35) ಬಿಟ್ಟ ಕಣ್ಣು ಬಿಟ್ಟಂತೆ ವಿಮಾನಗಳ ಜಾತ್ರೆಯನ್ನೇ ನೋಡುತ್ತಿದ್ದೆ. ಬರೀ ಬಸ್, ರೈಲು ನಿಲ್ದಾಣಗಳನ್ನು ಮಾತ್ರ ನೋಡಿದ ನನಗೆ ಇದನ್ನು ನೋಡಿ ಸಂಭ್ರಮ ಮುಗಿಲು ಮುಟ್ಟಿತು. ಭೂಸ್ಪರ್ಶಿಸಿದ ವಿಮಾನ ಇನ್ನೇನು ಈಗ ನಿಲ್ಲುತ್ತೋ ಆಗ ನಿಲ್ಲುತ್ತೋ ಎಂದು ಕಾದಿದ್ದೆ ಬಂತು. ವಿಮಾನ ನಿಲ್ದಾಣದ ತುಂಬ ಎಷ್ಟು ಸುತ್ತು ಹಾಕಿತೋ? ಎಲ್ಲೆಲ್ಲಿ ಸುತ್ತಿತೋ? ಒಂದೂ ತಿಳಿಯಲಿಲ್ಲ. ಅಂತೂ ಬೃಹದಾಕಾರದ ವಿಮಾನ ನಿಲ್ದಾಣ, 20-30 ಮಹಡಿ ಕಟ್ಟಡಗಳು, ದಿಕ್ಸೂಚಿ ಇರುವ ಗಗನ ಚುಂಬಿ ಗೋಪುರ ಎಲ್ಲವೂ ಸಿನಿಮಾ ಪರದೆ ಮೇಲೆ ನೋಡುತ್ತಿರುವಂತೆ ಕಾಣುತ್ತಿದ್ದವು. ಅಷ್ಟೊಂದು ವಿಶಾಲವಾಗಿತ್ತು. ನಿಲ್ದಾಣ ದರ್ಶನ ಸಾಗಿಯೇ ಇತ್ತು. ನಂತರ ಟ್ರಾಫಿಕ್ ಜಾಮ್ ಇರುವುದರಿಂದ ಗ್ರೀನ್ ಸಿಗ್ನಲ್ ಬಿದ್ದಿಲ್ಲ ಎಂಬುದು ತಿಳಿಯಿತು. ಇಪ್ಪತ್ತೈದು ನಿಮಿಷ ಸುತ್ತಿದ ಬಳಿಕ 9.30 ನಿಮಿಷಕ್ಕೆ ವಿಮಾನ ನಿಂತಿತು. ನಾವು ಕ್ರಮಿಸಿದ ದೂರ ನಾಲ್ಕು ಸಾವಿರದಾ ನಾಲ್ಕು ನೂರ ಎಂಬತ್ತು ಕಿ.ಮೀಗಳಾದರೆ ಅವಧಿ ಸರಿಯಾಗಿ 6 ಗಂಟೆ 10 ನಿಮಿಷಗಳು. ಚಂದ್ರ ಮಸುಕಾಗಿ ಕಾಣುತ್ತಿದ್ದ.
ವಿಮಾನ ಕಿಟಕಿಯಿಂದ ಹೊರ ನೋಡಿದರೆ ನಿಲ್ದಾಣದ ತುಂಬ ಹಳದಿ ಬಸ್ ಗಳು. ಅಲ್ಲಿ ಬಸ್ ಗಳಿಗೆ ಕೋಚ್ (Coach)ಎನ್ನುತ್ತಾರೆ. ಇಳಿದ ಸ್ಥಳದಿಂದ ವಿಮಾನ ನಿಲ್ದಾಣದ ಮುಖ್ಯ ಕಟ್ಟಡದವರೆಗೆ ಕರೆದೊಯ್ಯಲು ಸ್ವಯಂ ಚಾಲಿತ ಬಾಗಿಲುಗಳಿರುವ ಈ ಕೋಚ್ ಗಳು 12 ನಿಮಿಷ ಚಲಿಸಿ ನಮ್ಮನ್ನಿಳಿಸಿದವು. ಈ ಕೋಚ್ ಲ್ಲಿ , ವಿಮಾನ ನಿಲ್ದಾಣದಲ್ಲಿ ಕೆಂಪು-ಕೆಂಪು ಬಣ್ಣದ, ಎತ್ತರ ನಿಲುವಿನ, ನೀಳ ಮೂಗಿನ, ಕೆಂಪು ಮಿಶ್ರಿತ ಬಿಳಿ ಕೂದಲಿನ ದೃಢ ಶರೀರವಿರುವ ಜನ. ಬೆರಗಿನಿಂದ ನೋಡುತ್ತಾ ನಿಲ್ದಾಣದೊಳಗೆ ಬಂದೆವು. ಮುಂದೆ ಎಸ್ಕಲೇಟರ್ನಲ್ಲಿ ಕೆಳಗಿಳಿದು, ಉದ್ದನೆಯ ಕಟ್ಟಡದ ಆಚೆ ತುದಿಗೆ ಹೋಗಿ ನಿಂತೆವು.
ಧ್ವನಿವರ್ಧಕದಿಂದ ಮಾಹಿತಿ ಕೇಳಿ ಬರುತ್ತಿತ್ತು; ಎಲ್ಲಿಂದ ಬಂದ, ಯಾವ ನಂಬರಿನ ವಿಮಾನಕ್ಕೆ ಸಂಬಂಧಿಸಿದ ಬ್ಯಾಗೇಜುಗಳು, ಯಾವ ನಂಬರಿನ ರಿವಾಲ್ ವಿಂಗ್ ಬೆಲ್ಟ್ ಮೇಲೆ ಬರುತ್ತವೆ ಎಂಬುದರ ಕುರಿತು ಮಾಹಿತಿ ಬಿತ್ತರವಾಗುತ್ತಿತ್ತು. ಅಲ್ಲಿ 5 ರಿವಾಲ್ ವಿಂಗ್ ಬೆಲ್ಟ್ ಗಳಿದ್ದವು. ಒಂದು ಬೆಲ್ಟ್ ಮೇಲೆ ಬರುತ್ತಿರುವ ಬ್ಯಾಗೆಜ್ ಗಳು ನಮ್ಮವೆಂದು ಗೊತ್ತಾಗಿ ಅಲ್ಲಿ ಹೋಗಿ, ಬ್ಯಾಗೆಜ್ ಪಡೆದು, ಚೆಕ್ ಔಟ್ (Check out) ಮುಗಿಸಿ, ಮತ್ತೊಂದು ದ್ವಾರಕ್ಕೆ ಬಂದೆವು. ಅಲ್ಲಿ ನಮ್ಮನ್ನು ಸ್ವಾಗತಿಸಲಿಕ್ಕೆ ನಿಂತಿದ್ದ ಕೆಂಪು ಮುಖ, ಕೆಂಪು (ಬೊಕ್ಕ) ತಲೆ, ಬೆಕ್ಕಿನ ಕಣ್ಣಿನ ಎತ್ತರ ನಿಲುವಿನ ಒಬ್ಬ ಯುವಕ, ಎಲ್ಲರಿಗೂ ಚೆಂಡು ಹೂವಿನಂಥ, ಕೆಂಪಾದ ಹೂ ಮತ್ತು ಕಲ್ಲಿನಂಥ ನೀಲಿ ಗಾಜಿನಿಂದ ಮಾಡಿದ ದೃಷ್ಟಿ ದೋಷ ನಿವಾರಕ (ನಝರ್ಬಂದ್) ಕೀಲಿಗೊಂಚಲು ನೀಡಿ ದೊಡ್ಡ ನಗುವಿನೊಂದಿಗೆ ಎಲ್ಲರನ್ನೂ ಸ್ವಾಗತಿಸಿದನು. ಆತ ಟ್ರಾವೆಲ್ ಏಜೆನ್ಸಿಗೆ ಸಂಬಂಧಿಸಿದ ಇಸ್ತಾಂಬುಲ್ ನ ಲ್ಲಿಯ ಮಾರ್ಗದರ್ಶಿ. ಹೆಸರು ಕೊರಾಯ್ (Koray). ಕೊರಾಯ್ ಕೋಚಲ್ಲಿ ದಾರಿಯುದ್ದಕ್ಕೂ ಧ್ವನಿವರ್ಧಕದ ಮೂಲಕ ಹಿಂದಿಯಲ್ಲಿ ಮತ್ತು ಇಂಗ್ಲಿಷಿನಲ್ಲಿ ಮಾತನಾಡುತ್ತಿದ್ದನಾದರೂ ಇಪ್ಪತ್ತೈದು ಶೇಕಡಾದಷ್ಟು ಮಾತ್ರ ಆ ಉಚ್ಛಾರಣೆ ಅರ್ಥವಾಗುತ್ತಿತ್ತು.
ಇಸ್ತಾಂಬುಲ್, ಟರ್ಕಿ ಗಣರಾಜ್ಯದ ಅತ್ಯಂತ ಬೃಹತ್ ನಗರ. ಎರಡು ಖಂಡಗಳಲ್ಲಿ ಚಾಚಿಕೊಂಡಿರುವ ಕೆಲವು ದೇಶಗಳಲ್ಲಿ, ಟರ್ಕಿಯೂ ಒಂದು. ಮಧ್ಯ ಪ್ರಾಚ್ಯ (Middle east) ದೇಶವಾದ ಇದು ಏಷ್ಯಾ-ಯೂರೋಪ್ ಎರಡೂ ಖಂಡಗಳಲ್ಲೂ ವ್ಯಾಪಿಸಿದೆ. 36ಡಿಗ್ರಿ 49′ ಉತ್ತರದಿಂದ 42ಡಿಗ್ರಿ 06′ ಉತ್ತರ ಅಕ್ಷಾಂಶದ ಮೇಲೆ ಹಾಗೂ 26ಡಿಗ್ರಿ 03′ ಪೂರ್ವದಿಂದ 45ಡಿಗ್ರಿ 49′ ಪೂರ್ವ ರೇಖಾಂಶದ ಮೇಲೆ ನೆಲೆಗೊಂಡಿದೆ. ಏಷ್ಯಕ್ಕೆ ಸೇರಿರುವ ಭಾಗವನ್ನು “ಅಂತೋಲಿಯಾ” (ಪ್ರಾಚೀನ ಕಾಲದ-ಏಷ್ಯಾ ಮೈನರ್) ಎಂದೂ, ಯೂರೋಪ್ ಕಡೆಗಿರುವ ಭಾಗವನ್ನು “ಥ್ರೇಸ್” ಎಂದೂ ಕರೆಯುತ್ತಾರೆ. ಅಂತೋಲಿಯಾ ಎಂದರೆ `ಸೂರ್ಯ ಹುಟ್ಟುವ ನಾಡು’ ಎಂದರ್ಥ. ಈ ದೇಶವನ್ನು ಕಪ್ಪು ಸಮುದ್ರ, ಅಜಿಯನ್ (Aegean) ಸಮುದ್ರ ಮತ್ತು ಮೆಡಿಟರೆನಿಯನ್ ಸಮುದ್ರಗಳು ಮೂರು ಕಡೆಗೆ ಬಳಸಿವೆೆ. ಇದರ ಭೂ ವಿಸ್ತೀರ್ಣ 7,76,723 ಚ. ಕೀ.ಮಿಗಳು. ಇಲ್ಲಿಯ ಜನಸಂಖ್ಯೆ ಸುಮಾರು 72 ದಶಲಕ್ಷ. ಇಲ್ಲಿ 99% ಜನ ಮುಸ್ಲಿಂರು, ಉಳಿದ 1% ಲ್ಲಿ ಕ್ರಿಶ್ಚಿಯನ್ ಮತ್ತು ಜೆವಿಶ್ ಧರ್ಮದಲ್ಲಿ ನಂಬಿಕೆ ಇಟ್ಟವರಿದ್ದಾರೆ. ಇಲ್ಲಿ ಗಣರಾಜ್ಯ ಸರಕಾರವಿದೆ.
ಟರ್ಕಿಯ ಪೂರ್ವ ದಿಕ್ಕಿನಲ್ಲಿ ಗೊರ್ಜಿಯಾ, ಅರ್ಮೇನಿಯಾ, ನಖಿಚೆವಾನ್ ಮತ್ತು ಇರಾನ್, ದಕ್ಷಿಣದಲ್ಲಿ ಸಿರಿಯಾ ಮತ್ತು ಇರಾಕ್, ಪಶ್ಚಿಮದಲ್ಲಿ ಗ್ರೀಸ್ ಮತ್ತು ಬಲ್ಗೇರಿಯಾ ದೇಶಗಳಿಂದ ಸುತ್ತುವರೆಯಲ್ಪಟ್ಟಿದೆ. ಕಂಕಾಲೆ ಜಲಸಂಧಿ ಮತ್ತು ಮರ್ಮೋರಾ ಜಲಸಂಧಿಗಳು ದೇಶದ ಭೂಭಾಗವನ್ನು ಎರಡು ಭಾಗವಾಗಿ ವಿಂಗಡಿಸಿದೆ. ಜಲಸಂಧಿ ಎಂದರೆ `ಎರಡು ದೇಶಗಳನ್ನು ಬೇರ್ಪಡಿಸುವ ಅಥವಾ ಎರಡು ಸಮುದ್ರಗಳನ್ನು ಒಂದುಗೂಡಿಸುವ ಅಥವಾ ಭೂಮಿಯ ಕಡೆಗೆ ಚಾಚಿಕೊಂಡಿರುವ ಸಮುದ್ರ ಭಾಗ’. ಇದು ಭೌಗೋಳಿಕ ಅರ್ಥ; ಕಾನೂನು ಬದ್ಧವಾಗಿ `ಎರಡು ದೇಶಗಳ ಸಮುದ್ರ ಸೇರುವಿಕೆ’ ಎಂದರ್ಥ. ಅನೇಕ ದೇಶಗಳು ತೀರದಿಂದ ಇಂತಿಷ್ಟು (ಸುಮಾರು 4.8 ಕಿ.ಮೀ) ಸಮುದ್ರ ತಮ್ಮದೆಂದು ಹಕ್ಕು ಸ್ಥಾಪಿಸುವುದರಿಂದ, ಜಲಸಂಧಿಯ ಅಗಲ ಇಷ್ಟೆ ಎಂದು ನಿಖರವಾಗಿ ಹೇಳಲಾಗದು. ಎರಡು ಖಂಡಗಳಲ್ಲಿ ಹಂಚಿ ಹೋಗಿರುವ ಮರ್ಮೋರಾ ಭೂಭಾಗ ಎತ್ತರವಾಗಿದೆ. ಏಷ್ಯಾ ಮೈನರ್-ಪರ್ವತಗಳಿಂದ ಕೂಡಿದ ಎತ್ತರ ಪ್ರದೇಶ. ಎರಡು ಪರ್ವತಗಳ ನಡುವಿನ ಪ್ರಸ್ಥಭೂಮಿ. ಉಪ್ಪು ನೀರಿನ ಸರೋವರಗಳಿಂದ ತುಂಬಿದೆ. ಪಶ್ಚಿಮ ಭಾಗ ಫಲವತ್ತಾಗಿದೆ. ತೀರ ಪ್ರದೇಶಗಳಲ್ಲಿ ಮೆಡಿಟರೆನಿಯನ್ ಹವಾಗುಣ; ಮಳೆ ಹೆಚ್ಚು. ಪ್ರಸ್ಥಭೂಮಿ ಮತ್ತು ಪರ್ವತ ಪ್ರದೇಶಗಳಲ್ಲಿ ಚಳಿ ಮತ್ತು ಸೆಕೆ ಬಹಳ . ಕಿಜಲ್, ಇರ್ಮಾಕ್, ಸಕರ್ಯಾ ದೊಡ್ಡ ನದಿಗಳು. ಆದರೆ ಉಪ್ಪು ನೀರು. ಇತರ ನದಿಗಳು ಮಳೆ ಬಂದಾಗ ರಭಸವಾಗಿ ಹರಿದು ಬೇಸಿಗೆಯಲ್ಲಿ ಒಣಗಿ ಹೋಗುತ್ತವೆ. ಗೋದಿ, ದ್ರಾಕ್ಷಿ, ಪಿಗ್, ಹತ್ತಿ, ಓಲಿವ್, ತಂಬಾಕು ಇಲ್ಲಿಯ ಜನರ ಜೀವನಾಧಾರಗಳು. ಟರ್ಕಿ ದೇಶ ಒಟ್ಟು 7 ಭೌಗೋಳಿಕ ಲಕ್ಷಣಗಳನ್ನು ಹೊಂದಿದೆ.

ವೈವಿಧ್ಯಮಯ ಭೌಗೋಳಿಕ ಲಕ್ಷಣ ಹೊಂದಿರುವ ಈ ದೇಶಕ್ಕೆ ಪ್ರಚಂಡ ಇತಿಹಾಸವೇ ಇದೆ. ಬೈಜಾಂಟಿಯಂ ರಾಜ್ಯ, ಬಾಸ್ಪರಸ್ ಜಲಸಂಧಿಯ ದಡದಲ್ಲಿ ಬೈಜಾಸ್ ಎಂಬುವನಿಂದ ಸ್ಥಾಪಿತವಾಯಿತು. ಅವನು ತನ್ನ ಹೆಸರನ್ನೇ ರಾಜ್ಯಕ್ಕೂ ಇಟ್ಟ. ಇದು ಯುರೋಪ್ ಮತ್ತು ಏಷ್ಯಾ ಮೈನರ್ ಗಳ ವ್ಯಾಪಾರ ಮಾರ್ಗ ಸೇರುವ ಕಡೆ ಇದ್ದುದರಿಂದ ಗ್ರೀಕ್ ರಾಜ್ಯಗಳು ಅದರ ಒಡೆತನಕ್ಕಾಗಿ ಹೊಡೆದಾಡುತ್ತಿದ್ದವು. 323ರಲ್ಲಿ ಕಾನ್ಸ್ಟೆಂಟೈನ್, ರೋಮನ್ ಚಕ್ರವರ್ತಿ ಅಸಿನಿಯಸ್ ನನ್ನು ಸೋಲಿಸಿದ. ಅವನ ವಿಶಾಲ ಚಕ್ರಾಧಿಪತ್ಯದ ಪೂರ್ವ ಭಾಗವೇ ಬೈಜಾಂಟಿಯಂ. 330ರಲ್ಲಿ ಕಾನ್ ಸ್ಟೆಂಟೈ ನ್ ತನ್ನ ರಾಜಧಾನಿಯನ್ನು ಕಾನ್ ಸ್ಟಾoಟಿನೋಪಲ್ ಎಂದು ಕರೆಯಲಾರಂಭಿಸಿದನು. ಆ ಅರಸ ನಗರವನ್ನು ಪುನಃ ನಿರ್ಮಿಸಿ ಕೋಟೆಗಳನ್ನು ಕಟ್ಟಿದ. ಇದು ಪ್ರಪಂಚದ ಅತೀ ದೊಡ್ಡ ಸಂಪದ್ಭರಿತ ನಗರವಾಗಿತ್ತು. ಇಲ್ಲಿನ ಭವ್ಯ ಅರಮನೆಗಳು, ಮನೋಹರವಾದ, ಇಗರ್ಜಿ ಮತ್ತು ಅಂಗಡಿಗಳನ್ನು ನೋಡಲು ದೂರದ ದೇಶಗಳಿಂದ ಜನ ಬರುತ್ತಿದ್ದರು. (ಇವೂ ಈಗಲೂ ಇವೆ)
ಅರಸನ ನಿಧನಾ ನಂತರ ಉತ್ತರಾಧಿಕಾರಿಗಳಿಗೆ ವಿಶಾಲ ಚಕ್ರಾಧಿಪತ್ಯ ಆಳುವುದು ಕಷ್ಟವಾಗಿ 395ರಲ್ಲಿ ಪಶ್ಚಿಮ ಭಾಗವನ್ನು ರೋಮಿನಿಂದಲೂ ಪೂರ್ವ ಭಾಗವನ್ನು ಕಾನ್ ಸ್ಟಾoಟಿನೋಪಲಿನಿಂದಲೂ ಎರಡು ಭಾಗವಾಗಿ ಆಳ ತೊಡಗಿದರು. 379ರಿಂದ 395ರವರೆಗೆ ಥಿಯೋಡೋಸಿಯಸ್ ಚಕ್ರವರ್ತಿ ಕಾಲದಲ್ಲಿ ಕ್ರೈಸ್ತಧರ್ಮ ರಾಜ್ಯಧರ್ಮವಾಗಿತ್ತು. 476 ರಿಂದ 565ರವರೆಗಿನ ಅವಧಿ `ಸಾಮ್ರಾಜ್ಯದ ಸ್ವರ್ಣಯುಗ’ ವೆನಿಸಿತ್ತು. ಜಸ್ಟಿನಿಯಸ್ ಕಟ್ಟಿಸಿದ ಸ್ಯಾಂಕ್ಟಾ ಸೋಫಿಯ ಇಗರ್ಜಿ ಈಗ ವಸ್ತು ಸಂಗ್ರಹಾಲಯವಾಗಿದೆ. ಯುರೋಪಿನಿಂದ ಮಧ್ಯ ಪ್ರಾಚ್ಯ ದೇಶಗಳವರೆಗಿನ ದಾರಿಯೂ ಕಾನ್ ಸ್ಟಾoಟಿನೋಪಲನ್ನು ಹಾದು ಹೋಗುತ್ತಿತ್ತು. ಹೀಗಾಗಿ ತನ್ನ ರಾಜಧಾನಿಯಿಂದ ಒಳಕ್ಕೆ ಹೋಗುವ ಮತ್ತು ಹೊರಕ್ಕೆ ಬರುವ ವಸ್ತುಗಳಿಗೆ ರಾಜ ಕರ ವಸೂಲಿ ಮಾಡುತ್ತಿದ್ದ. ಒಂದೊಂದು ವಸ್ತುವನ್ನು ರಾಜಧಾನಿಯ ಒಂದೊಂದು ಭಾಗದಲ್ಲಿ ಮಾರಾಟ ಮಾಡುವ ಏರ್ಪಟಿತ್ತು. ವಿದೇಶಿ ವಸ್ತುಗಳು ಇಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದವು.
ಬೈಜಾಂಟಿಯಂನ ಕಲೆ, ಪಾಂಡಿತ್ಯ ಹೊರದೇಶಗಳಿಗೂ ಪಸರಿಸಿತ್ತು. ಹತ್ತರಿಂದ ಹನ್ನೆರಡನೆಯ ಶತಮಾನದವರೆಗೆ ಕಲೆ ಉತ್ತುಂಗ ಶಿಖರಕ್ಕೇರಿತ್ತು. ಬಹು ಬೆಲೆಬಾಳುವ ಚಿನ್ನ, ಬೆಳ್ಳಿ ಉಪಯೋಗಿಸಿ, ಬಣ್ಣಗಳ ಸಹಾಯದಿಂದ ಕಲೆಗೆ ರೂಪಗೊಡುತ್ತಿದ್ದರು. ಇಗರ್ಜಿಗಳಲ್ಲಿ ಅವರ ಕಲೆಗಾರಿಕೆ ಈಗಲೂ ಎದ್ದು ತೋರುತ್ತದೆ. ಕ್ರೈಸ್ತ ದೇವಾಲಯದ ಪಾತ್ರೆಗಳಿಗೆ, ಭಿತ್ತಿಗಳಿಗೆ ಬಂಗಾರದ ಮೆರಗು ಕೊಟ್ಟು ಹರಳುಗಳನ್ನು ಕೂಡಿಸುತ್ತಿದ್ದರು. ಬಟ್ಟೆಗೆ ಚಿನ್ನದ ಎಳೆ ಕೂಡಿಸಿ ನೇಯುತ್ತಿದ್ದರು. ಜಾರ್ಜ್ ಪಿಸಿಡಿಸ್ ನಿಂದ ಮಹಾಕಾವ್ಯಗಳು ರಚನೆಯಾದದ್ದೂ ಈ ಅವಧಿಯಲ್ಲಿಯೆ. 1204ರಲ್ಲಿ ಪಶ್ಚಿಮದಿಂದ ಧಾರ್ಮಿಕ ಯುದ್ಧ ಆರಂಭವಾಯಿತು. ಜಯಿಸಿದ ಪಶ್ಚಿಮ ದೇಶದವರು 1216ರವರೆಗೆ ಆಡಳಿತ ನಡೆಸಿದರು.
1881ರಲ್ಲಿ ಹುಟ್ಟಿದ ಮುಸ್ತಫಾ ಕೆಮಾಲ್, ಹಳೆಯ ಸಂಪ್ರದಾಯಗಳ ಬಂಧಿಯಾಗಿ ಹಿಂದುಳಿದಿದ್ದ ದೇಶವನ್ನು, ಹದಿನೈದು ವರ್ಷಗಳಲ್ಲಿ ಆಧುನಿಕ ರಾಷ್ಟ್ರಗಳ ಪಟ್ಟಿಗೆ ತಂದು ಸೇರಿಸಿದ ಅಸಾಧಾರಣ ಪುರುಷ. ಮಿತಭಾಷಿ, ಏಕಾಂಗಿಯಾಗಿರುತ್ತಿದ್ದ ಈತ, 19ನೇ ವಯಸ್ಸಿನಲ್ಲಿ ಕಾನ್ ಸ್ಟಾoಟಿನೋಪಲ್ ಗೆ ಸಬ್ ಲೆಪ್ಟಿನೆಂಟ್ ಆಗಿ ಹೋದಂಥವ. ಅಲ್ಲಿ ತುರ್ಕಿ ಯುವಕರು, ಸುಲ್ತಾನರ ನೀತಿಭ್ರಷ್ಠ ಆಳ್ವಿಕೆ ವಿರುದ್ಧ ಸ್ಥಾಪಿಸಿದ, ಸಂಘದ ಮೂಲೋದ್ದೇಶಗಳಿಂದ ಪ್ರಭಾವಿತನಾಗಿ, ಪ್ರಪಂಚದ ಮೊದಲ ಮಹಾಯುದ್ಧ (1914-1918)ದಲ್ಲಿ ಜರ್ಮನಿಯ ಪಕ್ಷ ವಹಿಸಿ, ಡಾರ್ಡ್ ನೆಲ್ಸ್ ನಲ್ಲಿ ಕಮಾಲ್ ಗಳಿಸಿದ ಅದ್ಭುತ ವಿಜಯ ಅವನನ್ನು ದೇಶದ ಕಣ್ಮಣಿಯನ್ನಾಗಿಸಿತು. ಅಂತೋಲಿಯದಲ್ಲಿದ್ದ ಸೈನಿಕರನ್ನು ನಿವೃತ್ತಗೊಳಿಸಿ, ಹಿಂದಕ್ಕೆ ಕಳುಹಿಸುವ ಕಾರ್ಯವನ್ನು ಸುಲ್ತಾನನ ಆದೇಶದಂತೆ ಪಾಲಿಸುತ್ತ, ರಹಸ್ಯವಾಗಿ ಒಂದು ಸೈನ್ಯವನ್ನೇ ಸಿದ್ಧಗೊಳಿಸಿ, 1923ರಲ್ಲಿ ಸುಲ್ತಾನನನ್ನು ಪದಚ್ಯುತಿಗೊಳಿಸಿ, ತುರ್ಕಿ ಒಂದು ಗಣರಾಜ್ಯವೆಂದು ಸಾರಿದ ಮತ್ತು ಕೆಮಾಲ್ ಅದರ ಪ್ರಥಮ ರಾಷ್ಟಾಧ್ಯಕ್ಷನಾದ.
ಆಗ ತುರ್ಕಿಯ ಚರಿತ್ರೆಯಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ಈತ ಮಹತ್ವಪೂರ್ಣ ಸುಧಾರಣೆಗಳನ್ನು ತಂದನು. 1924ರಲ್ಲಿ ಖಿಲಾಫತ್ ರದ್ದುಗೊಳಿಸಿ, 1925ರಲ್ಲಿ ಪೇಸ್ಟೋಪಿಯನ್ನು ಬಹಿಷ್ಕರಿಸಿ, ಮಹಿಳೆಯರನ್ನು `ಬುರುಕಾ’ ದಿಂದ ಮುಕ್ತಗೊಳಿಸಿ, ಅವರಿಗೆ ಸ್ವಾತಂತ್ರ್ಯ ನೀಡಿದ. ಕಡ್ಡಾಯ ಶಿಕ್ಷಣ ಕ್ರಮ ಜಾರಿಗೆ ಬಂತು. ಕಷ್ಟಕರವಾದ ಅರೇಬಿಕ್ ಲಿಪಿಯನ್ನು ತೆಗೆದು ಹಾಕಿ ರೋಮನ್ ಲಿಪಿ ಜಾರಿಗೆ ತಂದ. ಇದರಿಂದ ಟರ್ಕಿಶ್ ಭಾಷೆ ರೋಮನ್ ದೇಶಗಳಲ್ಲೂ ಕಲಿಯುವಂತಾಯಿತು. ಎಲ್ಲ ಗಂಡಸರು ಉಪನಾಮಗಳನ್ನು ಇಟ್ಟುಕೊಳ್ಳಬೇಕೆಂದು ವಿಧಿಸಿ ತಾನೂ `ಅಟಾ ಟುರ್ಕ್ (ತುರ್ಕಿಯ ತಂದೆ) ಎಂದು ಹೆಸರಿಟ್ಟುಕೊಂಡ. ಕಾನ್ ಸ್ಟಾoಟಿನೋಪಲ್ ಆಗಿದ್ದ ಬೈಜಾಂಟಿಯಂ 1925ರಲ್ಲಿ ಕಾನೂನು ಬದ್ಧವಾಗಿ `ಇಸ್ತಾಂಬುಲ್’ ಎಂದು ಹೊಸದಾಗಿ ನಾಮಕರಣ ಹೊಂದಿತು. ಗ್ರೀಕ್ ಮೂಲದ ‘Eisten Pali’ ಎಂಬ ಪದದಿಂದ ವ್ಯುತ್ಪತ್ತಿಯಾದ ಇಸ್ತಾಂಬುಲ್ ‘towards city’ ಎಂಬ ಅರ್ಥ ಹೊಂದಿದೆ. ಆನಂತರ ಬಂದ ಅಟ್ಟೋಮನ್ ಒಂದೊಂದಾಗಿ ಒಂದೊಂದಾಗಿ ರಾಜ್ಯಗಳನ್ನೆಲ್ಲಾ ಗೆದ್ದು ಕೊನೆಗೆ 1953ರಲ್ಲಿ ರಾಜ್ಯವಿಲ್ಲದ ರಾಜಧಾನಿಯಾಗಿದ್ದ ಕಾನ್ ಸ್ಟಾoಟಿನೋಪಲ್ ನ್ನು ವಶಪಡಿಸಿಕೊಂಡನು. ರಾಜಧಾನಿ ಅಂಕಾರಾ ಹಳೆಯ ಚಿಕ್ಕ ನಗರವಾದರೆ ಇಸ್ತಾಂಬುಲ್ ಹೊಸ ಬೃಹತ್ ನಗರ.
ಇಂಥ ಅಪೂರ್ವ ಇತಿಹಾಸ ಹೊಂದಿರುವ ಇಸ್ತಾಂಬುಲ್ ಪೂರ್ವ-ಪಶ್ಚಿಮಗಳನ್ನು, ಏಷ್ಯಾ-ಯುರೋಪ್ ಗಳನ್ನು, (ಎರಡು ಖಂಡಗಳು) ಎರಡು ಸಂಸ್ಕೃತಿಗಳನ್ನು, ಎರಡು ಹೃನ್ಮನಗಳನ್ನು ಬೆಸೆಯುವ, ಸಂಗಮಿಸುವ ಹಾಗೂ ಜಲಸಂಧಿಯ ಎರಡೂ ದಡಗಳಲ್ಲಿ ನೆಲೆಯೂರಿರುವ ಅಪರೂಪದ ತಾಣ. ಇಂಥ ಇಸ್ತಾಂಬುಲ್ ನಲ್ಲಿ ನಮಗೆ ಇಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದ `ಬೆಸ್ಟ್ ವೆಸ್ಟರ್ನ ಸಿನೆಟರ್’ ಹೋಟೆಲ್ ನತ್ತ ಎ.ಸಿ ಕೋಚ್ ನಲ್ಲಿ ಕರೆದೊಯ್ದರು. ಇದು ನಗರದ ಹೃದಯ ಭಾಗದಲ್ಲಿರುವುದರಿಂದ ನಗರ ಸುತ್ತಿ-ಸುತ್ತಿ ಹೋಟೆಲ್ ತಲುಪಿದೆವು. `ಡೋರಲಾಕ್ ಕಾರ್ಡ್’ ಕೊಡುವ ಮೊದಲು ನಮ್ಮೆಲ್ಲರ ಪಾಸ್ಪೋರ್ಟ್ಗಳನ್ನು ತೆಗೆದುಕೊಂಡು, ರೂಮ್ ನಂಬರ್ ಬರೆದು, ಹೋಟೆಲಿನ ಲೇಬಲ್ ನ್ನು ಬ್ಯಾಗಿಗೆ ಅಂಟಿಸಿದ ಸಿಬ್ಬಂದಿ, ಬ್ಯಾಗ್ಗಳನ್ನು ಲಿಫ್ಟ್ ಮೂಲಕ ಮೇಲೆ ಸಾಗಿಸಿದರು. 10-45 ರಿಂದ 11.45 ಒಂದು ತಾಸಿನಲ್ಲಿ ಸಿದ್ಧರಾಗಿ ಬರಲು ಹೇಳಿದರು ಮನು ಮತ್ತು ಕೊರೈ.
ನನ್ನ ರೋಮ್ ನಂಬರ್ 221. ರೂಮಿನಲ್ಲಿ ಒಳಗೆಲ್ಲ ವ್ಯವಸ್ಥೆಗೊಳಿಸುವ ರೀತಿ ಭಾರತದಲ್ಲಿಯಂತೆಯೇ ಇದ್ದರೂ ಅಲ್ಲಿಯ ವಸ್ತುಗಳೆಲ್ಲ ಆಧುನಿಕವಾಗಿದ್ದವು. ಅಲ್ಲದೆ ಪರದೆಗಳು, ಬೆಡ್ ಲ್ಯ್oಪ್ಸ್, ಕಮೋಡ್ ಮತ್ತು ಬಾತ್ ಟಬ್ ಗಳು ಹೊಂದಿಕೊಂಡಿರುವ ಬಾತ್ರೂಂ ಹಾಗೂ ಮಿನಿ ಬಾರ್ ಇಲ್ಲಿರುವ ವಿಶೇಷಗಳು. ಹಣ್ಣಿನ ರಸಗಳಿಂದ ಮಾಡಿದ ವಿಸ್ಕಿ, ಬಿಯರ್, ಬ್ರಾಂಡಿಗಳ ಚಿಕ್ಕ ಚಿಕ್ಕ ಬಾಟಲಿಗಳನ್ನು ಟೇಬಲ್ಲಿನೊಳಗೇನೆ ಇರುವ ಒಂದು ತಂಪು ಪೆಟ್ಟಿಗೆಗೆ ಮೇಲೆ ಕಾಣುವಂತೆ ಗಾಜಿನ ಮುಚ್ಚುವ ಬಾಗಿಲು ಇರುತ್ತದೆ. ಕೆಲವು ಕಡೆ ಗೋಡೆ ಕಪಾಟುಗಳ ಮಾಡಿನಲ್ಲಿಯೇ ಈ ತಂಪು ಪೆಟ್ಟಿಗೆಗಳನ್ನು ಇರಿಸಿರುತ್ತಾರೆ. ಇವುಗಳನ್ನು ಉಪಯೋಗಿಸುವವರು ಪ್ರತ್ಯೇಕ ಚಾರ್ಜ್ ಕೊಡಬೇಕು. ಒಂದೊಮ್ಮೆ ಉಪಯೋಗಿಸಿದ ಮೇಲೂ ತಿಳಿಸದೆ ಉಳಿದರೆ ಅದು ಮ್ಯಾನೆಜರ್ನಿಗೆ ತಿಳಿಯುವ ಆಂತರಿಕ ವ್ಯವಸ್ಥೆ ಅಲ್ಲಿ ಇತ್ತು. ಹೋಟೆಲ್ ಖಾಲಿ ಮಾಡಿಕೊಂಡು ಹೋಗುವಾಗ ಬಿಲ್ ನಮ್ಮ ಮುಂದೆ ಹಿಡಿಯುತ್ತಾರೆ. ಬಿಸ್ಲೆರಿ ಬಾಟಲ್, ಕುರುಕುರು ತಿಂಡಿ ನಮಗಾಗಿ ಇರಿಸಲಾಗಿತ್ತು. ಸಮುದ್ರದ ದಡದಲ್ಲಿಯ ನಗರವಾದ್ದರಿಂದ ಸೆಕೆ ಸುರಿಯುತ್ತಿತ್ತು. ಬೇಗ-ಬೇಗನೆ ಸ್ನಾನಕ್ಕೆಂದು ಬಾತ್ ರೂಂ ಹೊಕ್ಕರೆ ಅಲ್ಲಿ ಸೋಪ್, ಶ್ಯಾಂಪೂ, ಬಾತ್ ಟೊವೆಲ್, ಹ್ಯಾಂಕಿಸ್ ಸಿದ್ಧವಾಗಿದ್ದರೂ ಟಬ್ಬಿಗೆ ಇಳಿಯುವುದು, ಸ್ನಾನ ಮಾಡುವುದು ದುಸ್ತರವಾಯಿತು. ಅಲ್ಲಿ ಒಂದೇ ಒಂದು ಚೊಂಬು ಇರಲಿಲ್ಲ. ಟಬ್ಬಿಗಿಳಿದು ಸ್ನಾನ ಮಾಡಲು ಬರಲಿಲ್ಲ. ಅಷ್ಟಷ್ಟೇ ದೇಹದ ಭಾಗಕ್ಕೆ ಸೋಪ್ ಹಚ್ಚುವುದು ಟಬ್ ನಲ್ಲಿಯ ನಳ ತಿರುವಿ ತೊಳೆಯುವುದು. ಹೀಗೆ ಏನೇನೋ ಸರ್ಕಸ್ ಮಾಡಿ ಸ್ನಾನ ಅಂತ ಒಂದನ್ನ ಮಾಡಿ, ಸಿದ್ಧರಾಗಿ, ಹೊರ ಬರುವಾಗ, ಬಾಗಿಲು ಹಾಕಲು ಕಾರ್ಡನ್ನು (ಎ.ಟಿ.ಎಮ್ ನಂತಿರುವ) ಡೋರ್ ಲಾಕ್ ನೊಳಗೆ ಹಾಕಿ ತೆಗೆದವು. ಆ ಪದ್ಧತಿ ತಿಳಿಯಲಿಲ್ಲ. ಕೆಳಹೋಗಿ ಅಲ್ಲಿಯ ಸಿಬ್ಬಂದಿಗೆ ಹೇಳ ಹೋದರೆ ಅವರಿಗೆ ಭಾಷೆ ತಿಳಿಯಲ್ಲ. ಮ್ಯಾನೆಜರ್ ನ್ನುಳಿದು ಅಲ್ಲಿ ಯಾರಿಗೂ ಹಿಂದಿ, ಇಂಗ್ಲಿಷ್ ಬರುತ್ತಿರಲಿಲ್ಲ.
ಆದರೆ ಪರಸ್ಪರರನ್ನು ಬೆಸೆಯುವ ಹೃದಯದ ಭಾಷೆ ಒಂದಿದೆಯಲ್ಲ… ಸಂಜ್ಞೆ. ಆ ಮೂಲಕ ಹೇಳಿದಾಗ ಆತ ಬಂದು ಲಾಕ್ ಮಾಡುವುದನ್ನು ಪ್ರಯೋಗ ಮಾಡುವ ಮೂಲಕ ತೋರಿಸಿಕೊಟ್ಟ. ಕೆಳಗಿಳಿದು ಬಂದಾಗ ಅಲ್ಲಿ ಚಲಾವಣೆಯಲ್ಲಿರುವ ಸ್ಥಳೀಯ ಕರೆನ್ಸಿ ಲೀರಾ ಆಗಿದ್ದು, ಆ ಹೋಟೆಲ್ ಮ್ಯಾನೆಜರ್ ನ ಹತ್ತಿರ ಡಾಲರ್ ಅಥವಾ ಯುರೋ ಕೊಟ್ಟು ಲೀರಾ ತೆಗೆದುಕೊಳ್ಳಬಹುದು ಎಂಬುದು ಗೊತ್ತಾಗಿ 200 ಯುರೋ ಕೊಟ್ಟು 400 ಲೀರಾ ತೆಗೆದುಕೊಂಡೆ. ತಪ್ಪಿಸಿಕೊಂಡರೆ, ಹಿಂದುಳಿದರೆ ರಕ್ಷಣೆಗಾಗಿ ಇರಲೆಂದು ಹೋಟೆಲಿನ ವಿಸಿಟಿಂಗ್ ಕಾರ್ಡ್ ನೀಡಿದರು. ಮೊದಲು ಸಿದ್ಧರಾಗಿ ಬಂದವರೆಂದರೆ ನಾನು ನನ್ನ ರೂಮೆಟ್ ಸರೋಜಾ. ಮ್ಯಾನೆಜರ್ನ ಕೌಂಟರ್ ಅಲ್ಲದೆ ವಿಸಿಟರ್ಸ್ ರೂಮಿನಲ್ಲೊಂದು `ಹಾಟ್ ಡ್ರಿಂಕ್ಸ್’ ಇರುವ ಕೌಂಟರ್ ಇತ್ತು. ಅದೆಲ್ಲ ನೋಡಿ ಹೊರ ಹೋಗಲು ಅಲ್ಲಿದ್ದ ದೊಡ್ಡ ಗ್ಲಾಸ್ ಬಾಗಿಲಿನತ್ತ ಬರುತ್ತಿದ್ದಂತೆಯೇ ಬಾಗಿಲು ತಾನಾಗೇ ತೆರೆಯಿತು.
ಹೊರಗೆ ಒಂದು ಟೀಪಾಯಿ 4 ಬಿದರಿನ ಕುರ್ಚಿಗಳಿದ್ದವು. ಅಲ್ಲೊಂದು ಜೋಡಿ ಕುಳಿತ್ತಿತ್ತು. ಇಬ್ಬರೂ ಸಿಗರೇಟ್ ಸೇದುತ್ತಿದ್ದರು. ಅವಳು ಸಿಗರೇಟ್ ಬಾಯಿಗಿಟ್ಟುಕೊಳ್ಳುವುದನ್ನು, ಹೊಗೆ ಎಳೆದು ಬಿಡುವುದನ್ನು ಕಾತುರದಿಂದ ನೋಡಿದೆ. ಸರಿಯಾಗಿ 12.30ಕ್ಕೆ `ಹಾರ್ಮೊನಿ’ ಹೋಟೆಲಿಗೆ (ಭಾರತೀಯ ಆಹಾರವಿರುವ ಹೋಟೆಲ್ದು) ಕರೆದೊಯ್ದರು. ಬೆಬಿಕಾರ್ನ್, ಬೆಂಡಿ ಪಲ್ಯ, ಟೊಮೇಟೋ -ಈರುಳ್ಳಿ ಮೊಸರು ಕಲಿಸಿದ ಕೋಸಂಬರಿ, ಹುರಿದ ಬದನೆಕಾಯಿ, ಬೀಟ್ರೂಟ್, ಕ್ಯಾರೆಟ್, ಈರುಳ್ಳಿ, ಟೊಮೆಟೋ, ಕ್ಯಾಬೆಜ್ (ಹಸಿರು ತರಕಾರಿಗಳು) ಬಟಾಣಿ ಕುರ್ಮಾ ಮತ್ತು ಅನ್ನ; ಜೊತೆಗೆ ಚಿಕನ್. ಭಾರತೀಯ ಅಡುಗೆಯಂತಿತ್ತು ಅಷ್ಟೇ. ಹಸಿದ ಕಾರಣ ರುಚಿಸಿದ್ದಷ್ಟನ್ನೂ ತಿಂದು ನೇರವಾಗಿ ಬ್ಲೂ ಮಾಸ್ಕ್ ನೋಡಲು ಹೋದೆವು.
(ಮುಂದುವರಿಯುವುದು…)

‍ಲೇಖಕರು avadhi

7 March, 2014

ನಿಮಗೆ ಇವೂ ಇಷ್ಟವಾಗಬಹುದು…

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸನ್ನಿಧಿಯಲ್ಲಿ

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮತ್ತೆ ಮತ್ತೆ ಅದೇ ಜಾಗದಲ್ಲಿ ನಿಲ್ಲುತ್ತಿತ್ತು ಖಾಲಿ ಬೈಕ್

2 Comments

  1. Venkatesha G

    ಟರ್ಕಿಯ ಇತಿಹಾಸವನ್ನು ತುಂಬ ಸಸಂಕ್ಷಿಪ್ತವಾಗಿ, ಆಪ್ತವಾಗಿ ನಿರೂಪಿಸಿದ್ದೀರಿ.ಇಷ್ಟವಾಯಿತು.

  2. vithalmalali

    Avadhi

Trackbacks/Pingbacks

  1. ’ನೈಲ್ ನದಿಯ ಮಡಿಲಲ್ಲಿ’- ಬ್ಲೂ ಮಾಸ್ಕ್ ನೋಡುತ್ತಾ « ಅವಧಿ / Avadhi - [...] ’ನೈಲ್ ನದಿಯ ಮಡಿಲಲ್ಲಿ’- ಬ್ಲೂ ಮಾಸ್ಕ್ ನೋಡುತ್ತಾ March 9, 2014 by avadhinew (ಇಲ್ಲಿಯವರೆಗೆ) [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading