ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೈಲ್ ನದಿಯ ಮಡಿಲಲ್ಲಿ : ’ಆದರೆ ವೇಟ್ ಯಾವುದರದ್ದು, ಬ್ಯಾಗಿಂದೋ ಇಲ್ಲ ನಮ್ಮದೋ?’

(ಇಲ್ಲಿಯವರೆಗೆ…)
ದೇಶದ ಇತರ ಭಾಗಗಳಿಂದ ಬರಬೇಕಾದವರ ನಿರೀಕ್ಷೆಯಲ್ಲಿ ಕುಳಿತೆವು. 11 ಗಂಟೆಯಾಗುತ್ತಿದ್ದಂತೆ ಗುಲ್ಬರ್ಗದಿಂದ ಬರಬೇಕಾದ ಇಬ್ಬರು ಸಹ ಪ್ರಯಾಣಿಕರು ಬಂದು ಸೇರಿದರು. ಅದರಲ್ಲಿ ಒಬ್ಬರಂತೂ ಧಡೂತಿ ದೇಹ, ಕೃಷ್ಣ ಬಣ್ಣ, ಅಜಾನುಬಾಹು ವ್ಯಕ್ತಿತ್ವ, ಆದರೆ ಹಸನ್ಮುಖ, ಹಸನ್ಮನ. ಅವರದು ತುಂಬಾ ಆತ್ಮೀಯತೆ, ಆದರ ಎನ್ನುವುದಕ್ಕಿಂತ ತುಂಬಾ ಮಮತೆ, ವಾತ್ಸಲ್ಯ ತುಂಬಿದ ಜೀವ. ಒಳ್ಳೆಯ ಕವಿಯಿತ್ರಿ ಕೂಡಾ. ಹೆಸರು ಸರಸ್ವತಿ ಚಿಮ್ಮಲಗಿ (62) ಆದರೂ ಮನಸ್ಸಿಗೆ ಮಕ್ಕಳ ಹುರುಪು. ಅವರ ವೃತ್ತಿ ಬೆಳವಣಿಗೆ ಮತ್ತೂ ಕುತೂಹಲಕಾರಿ. ಡಾಕ್ಟರೇಟ್ ಪಡೆದ ಅವರು ಪ್ರೊಫೆಸರ್. “ನಾವು ನಿಮ್ಮವರೆ ಸ್ವಾಮಿ”, “ಮುಳ್ಳು ಬೇಲಿ”, “ಕೋಡಿಲ್ಲದ ಕೊಡಗ”, “ಎಡಬಿಡಂಗಿ ದೇವರ ವಚನಗಳು”, “ಹಳೆ ನೆನಪು ಹಸಿರಾದಾಗ”, “ಸಾಹಿತ್ಯ ವಿಹಾರ”, “ಕಾವ್ಯಕುಂಜ” (ಗುಲ್ಬರ್ಗ ವಿಶ್ವ ವಿದ್ಯಾಲಯದ ಬಿ.ಎ ಭಾಗ 1ಕ್ಕೆ ಪಠ್ಯ ಪುಸ್ತಕವಾಗಿದೆ.) ಮುಂತಾದ ಕೃತಿ ರಚಿಸುವುದರೊಂದಿಗೆ ಸಮಾಜ ಸೇವೆ, ನಾಟಕಗಳಲ್ಲಿ ಅಭಿನಯಿಸಿ ಮತ್ತು ರಾಷ್ಟ್ರೀಯ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದವರು. ಯುಗದರ್ಶಿನಿ ಸಂಪಾದಿತ ಕೃತಿಗೆ ಪ್ರಶಸ್ತಿ ಪಡೆದವರು. ಇವರೇ ಎಐಪಿಸಿಯ ಅಧ್ಯಕ್ಷರು ಕೂಡ. ಇನ್ನೊಬ್ಬರು ಇಂದುಮತಿ (51) “ಬರಡು ಹಯನುವುದು ಕೊರಡು ಕೊನರುವುದು”, “ನನ್ನ ಸುತ್ತಲಿನ ಸತ್ಯಗಳು”, “ಕಬ್ಬಡ್ಡಿ”, “ಎಟುಝಡ್” ಮುಂತಾದ ಕೃತಿ ರಚಿಸಿ ಪ್ರಶಸ್ತಿ ಪಡೆದವರು.
ಇವರು ಬಂದ ಸ್ವಲ್ಪ ಹೊತ್ತಿನಲ್ಲೇ ಉಳಿದವರೆಲ್ಲರೂ ಬಂದರೂ, ಅಖಿಲ ಭಾರತ ಕವಿಯಿತ್ರಿ ಸಂಘದ ಸಂಘಟಕರಾದ ಡಾ. ಲಾರಿ ಆಝಾದ (55) ಇವರು ಪಾಡ್ವ್ರೋನಾ (padrauna ಖುಷಿನಗರ ಉತ್ತರ ಪ್ರದೇಶ) ಕಾಲೇಜಿನಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರು. ಹಲವಾರು ಐತಿಹಾಸಿಕ ಗ್ರಂಥಗಳನ್ನು ರಚಿಸಿ, ರೇಡಿಯೋ, ಟಿ.ವಿಗಳಿಗೆ ಒಂದು ನೂರಕ್ಕೂ ಮಿಕ್ಕಿ ಕಾರ್ಯಕ್ರಮ ನೀಡಿದವರು, ಹತ್ತು ಹಲವು ವಿದೇಶಗಳಿಗೆ ಆಹ್ವಾನಿತರಾಗಿ/ಅತಿಥಿ ಉಪನ್ಯಾಸಕರಾಗಿ ಹೋಗಿ ಬಂದವರು. ಹಲವಾರು ಸಂಚಿಕೆಗಳ ಸಂಪಾದಕರು, ಸಲಹೆಗಾರರು, ರಾಷ್ಟ್ರಪತಿಯವರಿಂದ ಸನ್ಮಾನಿತರು. ಇವರ ನೆನಪು ಮತ್ತು ಅವಲೋಕನ ಶಕ್ತಿಗಳು ಅತ್ಯದ್ಭುತ ಆಶ್ಚರ್ಯಕರ. ಮಾರ್ಗದರ್ಶಿ ಮನುವಿಗೆ ಇಪ್ಪತ್ತು ಜನರ ಹೆಸರು, ಊರು, ರಾಜ್ಯ ಸಹಿತ ಪರಿಚಯಿಸಿದರು.
ಸಂಘಟಕರ ಸ್ನೇಹಿತರೊಬ್ಬರು ಭಗವಾನ್ ಸಿಂಗ್ (61), ಸಿವಾನ್ (ಬಿಹಾರ)ದಿಂದ ಬಂದಿದ್ದರು. ಇವರು ಬಿ.ಎಸ್ಸಿ ಮಾಡಿ ಬ್ಯಾಂಕ್ನಲ್ಲಿ ಆಫೀಸರ್ ಆಗಿ ನಿವೃತ್ತಿ ಹೊಂದಿದವರು. ಇವರ ಸಾಹಿತ್ಯ ಕೃಷಿ ಅಪಾರವಾದುದು. ಬಿಹಾರಿಯಲ್ಲಿ ಭಾಸ್ಕರ ಲೋಕರಾಮಾಯಣ ಬರೆದವರು. ಇಂದ್ರ ಧನುಷ್ಯ, ಲೋಕ ಧರ್ಮ, ಬೋಜಪುರಿಕೆ ವಿವಾಹ ಗೀತ, ಮಂಗಲಗೀತ, ಗೂಂಜ ಲೋಕ ಗೀತನ ಕೆ, ಬಗಿಯಾ ಮೆ ಬೊಲೆ ಕೊಯಲಿಯಾ ಇಂಥ ಮಹತ್ವದ ಹತ್ತಾರು ಪುಸ್ತಕಗಳನ್ನು ಬರೆದು 400 ಕ್ಕೂ ಹೆಚ್ಚು ಲೇಖನ ಪ್ರಕಟಿಸಿದವರು, ಹತ್ತು ಹದಿನೆಂಟು ಪ್ರಶಸ್ತಿ ಪುರಸ್ಕೃತರು. ವಿಶೇಷವೆಂದರೆ ಇವರ ಜೀವನ ಸಾಹಿತ್ಯ ಕುರಿತು ಹಲವಾರು ಗ್ರಂಥಗಳು ಬರೆಯಲ್ಪಟ್ಟಿರುವುದು ಹಾಗೂ ಸಿವಾನ್ನಲ್ಲಿ ಒಂದು ರಸ್ತೆಗೆ ಇವರ ಹೆಸರನ್ನೇ ಇಡಲಾಗಿದೆ. ಇವರೊಂದಿಗೆಎಮ್. ಕೊಂಡಯ್ಯ ಮತ್ತು ಡಾ. ಎಮ್ ಶ್ರೀಲತಾ ದಂಪತಿಗಳು, ಹೈದ್ರಾಬಾದ್ (ಆಂದ್ರ ಪ್ರದೇಶ) ದಿಂದ ಬಂದಿದ್ದರು. ಶ್ರೀಲತಾ (46) ತೆಲಗು ಭಾಷೆಯ ಹೊಸತಲೆಮಾರಿನ ಪ್ರಸಿದ್ಧ ಲೇಖಕಿ. 20 ಪುಸ್ತಕಗಳನ್ನು ಪ್ರಕಟಿಸಿ ಹಲವಾರು ಪ್ರಶಸ್ತಿ ಪಡೆದವರು. ಡಾ. ಕೆ.ಪಿ. ಸುಧೀರಾ (54) ಕೊಝಿಕೊಡೆ (ಕೇರಳ) ಸೌಥಮಲಬಾರ್ ಗ್ರಾಮೀಣ ಬ್ಯಾಂಕಿನ ಅಧಿಕಾರಿ. ಪ್ರಶಸ್ತಿ ಪುರಸ್ಕೃತ ಲೇಖಕಿ. ಭುವನೇಶ್ವರ (ಒರಿಸ್ಸಾ)ದಿಂದ ಡಾ. ಶಕುಂತಲಾ ಬಲಿಯಾರಸಿಂಗ್ (62) ಮತ್ತು ಉಮಾರಾಣಿ ಪಾತ್ರಾ (56) ಬಂದಿದ್ದರು.
ಡಾ. ಶಕುಂತಲಾ ರಾಜಧಾನಿ ಕಾಲೇಜಿನ ನಿವೃತ್ತ ಪ್ರಾಚಾರ್ಯ. `ಭಿನ್ನಮತಿ ಭಿನ್ನ ಆಕಾಶ್, ಓರಿಯಾ ಸಾಹಿತ್ಯದಲ್ಲಿ ರಾಷ್ಟ್ರೀಯತೆ ಮುಂತಾದ ಗ್ರಂಥಗಳನ್ನು ಬರೆಯುವುದರೊಂದಿಗೆ ಸಮಾಜ ಸೇವೆಯನ್ನು ಕೈಗೊಂಡು 7 ಪ್ರಶಸ್ತಿ ಪಡೆದವರು. ಈಗಾಗಲೇ ಹಲವಾರು ದೇಶ ಸುತ್ತಿ ಬಂದವರು. ಉಮಾರಾಣಿ 8 ಗ್ರಂಥಗಳನ್ನು ಬರೆದು ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ ಭುವನೇಶ್ವರದ ಮಾಜಿ ಎಂ.ಎಲ್.ಎ. ಗೀತಾದಾಸ್ (60) ಗೊಅಲ್ಪಾರಾ (ಅಸ್ಸಾಂ) ಬಿ.ಎ. ಅರ್ಹತೆಯ ನಿವೃತ್ತ ಸರಕಾರಿ ಉದ್ಯೋಗಿ. 5 ಗ್ರಂಥಗಳನ್ನು ಬರೆದು 5 ಪ್ರಶಸ್ತಿ ಪಡೆದವರು. ಡಾ. ಮೆಹಜಬೀನ್ (53) ಮೈಸೂರಿನ ಯುವರಾಜ ಕಾಲೇಜಿನಲ್ಲಿ ಉರ್ದು ವಿಭಾಗದ ಮುಖ್ಯಸ್ಥೆ. ಆವೊಗಾಯೆ ಖುಷಿ ಮನಾಯೆ, ಉರ್ದು ಜಬಾನ ಕಾ ಜಾದೂ, ಪ್ಯಾಸ್, ಕೃಷ್ಣಚಂದರ ಕಾದಂಬರಿಗಳಲ್ಲಿ ಮಹಿಳಾ ಪಾತ್ರ ಮುಂತಾದ ಗ್ರಂಥಗಳನ್ನು ರಚಿಸಿ ಪ್ರಶಸ್ತಿ ಪಡೆದವರು. ಈ 21 ಜನ ಗುಂಪಿನೊಂದಿಗೆ ಟ್ರಾವೆಲ್ ರ ಏಜೆನ್ಸಿಯ ಮಾರ್ಗದರ್ಶಿ ಮನು 22ನೆಯವರು. ಎಲ್ಲರ ಕುಶಲೋಪರಿ ಮುಗಿದವು.
ಸರಿ ಏಜೆನ್ಸಿಯಿಂದ ಒಂದೊಂದು ಏರ್ ಬ್ಯಾಗ್ ಮತ್ತು ಒಂದು ಜಪಾನಿ ರೋಸ್ ಕೊಟ್ಟು ಪ್ರೀತಿಯಿಂದ ಮನು ಸ್ವಾಗತಿಸಿದರು. ನಮಗೆ ಆಗಲೇ ಗೊತ್ತಾದದ್ದು ನಾವು `ಸ್ಟೆಲ್ಲ್ ರ್ ಹಾಲಿಡೆಸ್ ಟ್ರಾವೆಲ್ ಏಜೆನ್ಸಿ ಮೂಲಕ ಪ್ರಯಾಣಿಸುತ್ತಿದ್ದೇವೆಂದು. ಮುಗ್ಧ ಮುಖದಿಂದ ಚಂದದ ನಗು ಬೀರಿ ಸ್ವಾಗತಿಸುವ ಪರಿ ಮೂವತ್ತೈದರ ಮನುವಿನ ಗೈಡ್ ವೃತ್ತಿಗೆ ಹೇಳಿ ಮಾಡಿಸಿದಂತಿತ್ತು. ಅದರೊಂದಿಗೆ ನಮ್ಮ ಪಾಸ್ಪೋರ್ಟ್ , ಇಲೆಕ್ಟ್ರಾನಿಕ್ ಟಿಕೇಟ್, 10 ದಿನದ ವಿದೇಶ ಪ್ರಯಾಣಕ್ಕಾಗಿ ಮಾಡಿಸಿದ ವಿಮಾ ಪತ್ರ ಎಲ್ಲವನ್ನು ಮನು ವಿತರಿಸಿದರು. ನಮ್ಮ ವಿಮಾನ ಜುಲೈ 16ರ ಬೆಳಗಿನ 4.45ಕ್ಕೆ. ಬೋರ್ಡಿಂಗ್ ಟೈಂ 4.15ಕ್ಕೆ check in ಆರಂಭವಾಗುವುದು 3 ಗಂಟೆಗೆ. ಮುಖ್ಯದ್ವಾರದ ಪ್ರವೇಶಕ್ಕೆ ಇನ್ನೂ 2 ಗಂಟೆ ಬಾಕಿ ಇತ್ತು. ಬೀಳ್ ಕೊಡಲು ಬಂದವರೆಲ್ಲಾ ತಮ್ಮ-ತಮ್ಮ ಸಂಬಂಧಿಕರಿಗೆ ಹಾರಹಾಕಿ, ಹೂಗುಚ್ಛ ನೀಡಿ ಸಿಹಿ ಹಂಚಿದರು. ಎಲ್ಲರೂ ಸಿಹಿ ತಿನ್ನುತ್ತಾ ಹಿಂದಿಯಲ್ಲಿ ಹಾಗೂ ಇಂಗ್ಲಿಷಿನಲ್ಲಿ ಪರಸ್ಪರ ಪರಿಚಯಿಸಿಕೊಳ್ಳುತ್ತ, ಅಸ್ಸಾಂ, ಒರಿಸ್ಸಾದವರ ಹಿಂದಿ ಉಚ್ಛಾರ ಕೇಳಿ ನಗುತ್ತಾ ಎಲ್ಲರೂ ಒಂದಾದೆವು. ಇಂಥ ಸಂದರ್ಭಗಳೇ ಅಲ್ಲವೇ ಭಿನ್ನ-ಭಿನ್ನ ಭಾಷೆ, ಸಂಸ್ಕೃತಿ, ಸಮುದಾಯ, ವೇಷಭೂಷಣ ಮತ್ತು ಮನಸ್ಸುಗಳನ್ನು ಬೆಸೆಯುವ ಕೊಂಡಿಗಳು? ಉಳಿದ 2 ಗಂಟೆ ಅಲ್ಲಿಯೇ ಹಾಸ್ಯ ಚೇಷ್ಟೆಗಳನ್ನು ಮಾಡುತ್ತಾ, ಕೆಲವರು ತೂಕಡಿಸುತ್ತಾ ಕಳೆದೆವು.
ಸರಿಯಾಗಿ ಮೂರು ಗಂಟೆಗೆ ಪಾಸ್ಪೋರ್ಟ್, ಟಿಕೇಟ್ ತೋರಿಸಿ ಟರ್ಮಿನಲ್ 2 ರೊಳಗೆ ಟ್ರೋಲಿ ತಳ್ಳುತ್ತ ಪ್ರವೇಶ ಮಾಡಿದೆವು. ಎಲ್ಲರನ್ನು ಒಂದೆಡೆ ನಿಲ್ಲಿಸಿ ಇಲ್ಲಿ ಯಾರ್ಯಾರು ಹಣ ವಿನಿಮಯ ಮಾಡಿ ವಿದೇಶಿ ಹಣ ಪಡೆಯುವುದಿದೆಯೋ ಅವರೆಲ್ಲಾ ಪಡೆಯಬಹುದು ಎಂದರು. ಇಸ್ತಾಂಬುಲ್ (ಟರ್ಕಿ ), ಕೈರೋ (ಈಜಿಪ್ತ್) ನಲ್ಲಿ ಯುರೋ ಹಾಗೂ ಡಾಲರ್ ಚಲಾವಣೆಗೊಳ್ಳುತ್ತವೆ. ಡಾಲರ್ ಜಗತ್ತಿನ ಎಲ್ಲ ಕಡೆಗೂ ಚಲಾವಣೆಗೊಂಡರೆ, ಯುರೋ ಟರ್ಕಿ, ಇಜಿಪ್ತ್, ಎರಡು ಕಡೆಗೂ ಚಲಾಯಿಸುವಂಥದ್ದು. ಲೀರಾ ಕೇವಲ ಇಸ್ತಾಂಬುಲ್ ನಲ್ಲಿ ಚಲಾಯಿಸುವಂಥದ್ದು. 1 ಲೀರಾ ಬೆಲೆ 30 ರೂಗಳು. 1 ಡಾಲರ್ 47ರೂಗಳು. 1 ಯುರೋ ಬೆಲೆ 60 ರೂಗಳು. ಇದು ಆ ಕ್ಷಣದ ಬೆಲೆ ಮಾತ್ರ. ಈ ಬೆಲೆ ಕ್ಷಣ ಕ್ಷಣಕ್ಕೂ ಹೆಚ್ಚು ಕಡಿಮೆಯಾಗುತ್ತಿರುತ್ತದೆ. ಅಲ್ಲಿಯೆ ಇಲೆಕ್ಟ್ರಾನಿಕ್ ಡಿಜಿಟಲ್ ಬೋರ್ಡ್ಸ್ ಮೇಲೆ ಈ ಮಾಹಿತಿಯ ಚಾರ್ಟ್ ಸತತವಾಗಿ ಪ್ರಕಟಗೊಳ್ಳುತ್ತಿರುತ್ತದೆ. ಬ್ಯಾಂಕಿನ ಕೌಂಟರನಿಂದ ಫಾರ್ಮ್ ಪಡೆದು ಭಾರತೀಯ ಹಣವೆಷ್ಟು, ಯಾವ ಕರೆನ್ಸಿಬೇಕು, ಎಂದೆಲ್ಲಾ ಮಾಹಿತಿ ತುಂಬಿ ಕೊಟ್ಟೆ. 20,000 ಭಾರತೀಯ ಹಣಕ್ಕೆ 425 ಡಾಲರ್ ಹಾಗೂ ಮತ್ತೆ 20,000ಕ್ಕೆ 333.3 ಯುರೋ ಲಭ್ಯವಾದವು. ಈಚೆಗೆ ಬಂದು ಕೂಡಿದರೆ 40,000ಕ್ಕೆ ಇಷ್ಟೇ ಡಾಲರ್ಸ್, ಯುರೋ ಎಂದು ಹುಬ್ಬೇರಿಸುತ್ತಾ ಎರಡನ್ನು ಪರ್ಸನ ಬೇರೆ ಬೇರೆ ಕಡೆಗಳಲ್ಲಿ ಇಟ್ಟುಕೊಂಡೆ. ಭಾರತೀಯ ಹಣವೂ ಪ್ರಸಂಗಕ್ಕೆ, ಭದ್ರತೆಗೆ ಇರಲಿ ಎನಿಸಿ ಐದು ಸಾವಿರ ಭಾರತೀಯ ಹಣ ಉಳಿಸಿಕೊಂಡು ಅದನ್ನು ಬ್ಯಾಗಿನ ಸಂಪೂರ್ಣ ತಳಕ್ಕೆ ಸೇರಿಸಿದೆ. ತಿರುಗಿ ಬರುವವರೆಗೆ ಅದರದ್ದೇನು ಕೆಲಸ?
ನಮ್ಮ ಹ್ಯಾಂಡ್ ಬ್ಯಾಗಗಳೊಂದಿಗೆ ತಪಾಸಣಾ ದ್ವಾರದ ಮೂಲಕ ಹಾಯ್ದು, ತಪಾಸಣಾ ಕೌಂಟರ್ನಲ್ಲಿ ಮಂತ್ರದಂಡದಿಂದ ತಪಾಸಿಸಿಕೊಂಡು, ಬ್ಯಾಗುಗಳನ್ನು ತಿರುಗುವ ಪಟ್ಟಿ ಮೇಲಿಟ್ಟು ತಪಾಸಣೆ ಆದ ಮೇಲೆ, ನಮ್ಮ ವಿಮಾನ ಹೋಗುವ ಸ್ಥಳದ ಪ್ರವೇಶ ದ್ವಾರಕ್ಕೆ ಸಂಬಂಧಿಸಿದ ರೂಮಿಗೆ ಇರುವ ನಂಬರ್ ಫಲಕ ಹುಡುಕಿ ಹೋಗಿ, ಆ ರೂಮಿನೊಳಗೆ ಕುಳಿತೆವು. ರಾತ್ರಿಯಾದ್ದರಿಂದ ನಿಂತ ವಿಮಾನಗಳು ಕಾಣಲಿಲ್ಲ. ಏರುವ ಇಳಿಯುವ ವಿಮಾನಗಳು ಮಾತ್ರ ಅವುಗಳ ಮಿನುಗುವ ಲೈಟ್ ಬೆಳಕಿನಿಂದ ಮತ್ತು ಸದ್ದಿನಿಂದಾಗಿ ಕಾಣುತ್ತಿದ್ದವು. ನಮಗೆ ನೀಡಿದ Boarding Pass ಎಷ್ಟಿತ್ತು ಅಂದರೆ ನಮ್ಮ ಸರಕಾರಿ ಬಸ್ ಗಳ ಡಿಜಿಟಲ್ ಟಿಕೇಟಿನ ಒಂದುವರೆ ಪಟ್ಟು ಅಷ್ಟೇ. ಅದನ್ನು ಜಾಗೃತೆಯಿಂದ ಕಾಯ್ದಿರಿಸುವುದೇ ದೊಡ್ಡ ಕೆಲಸ. ಅದರಲ್ಲಿ `ಟರ್ಕಿಶ್ ಏರ್ಲೈನ್ಸ್ ಬೋರ್ಡಿಂಗ್ ಪಾಸ್ ಎಂದು ಇಂಗ್ಲೀಷ್ ನಲ್ಲಿ ‘TURK HAVA YOLLARI-Binis Karti’ ಎಂದು ತುರ್ಕಿ ಭಾಷೆಯಲ್ಲಿಯೂ ಬರೆದಿದ್ದರು. ಬೋರ್ಡಿಂಗ್ ಪಾಸ್ ನಲ್ಲಿಯ ಮಾಹಿತಿ ಈ ಕೆಳಗಿನಂತಿತ್ತು.
ಹೆಸರು (ISIM)
ಎಲ್ಲಿಂದ (NEREDEN)
ಎಲ್ಲಿಗೆ (NEREYE)
ಫ್ಲೈಟ್ ನಂಬರ್
ಕ್ಲಾಸ್/ದಿನಾಂಕ (SINIF/TARIH)
ಸಮಯ (SAAT)
ಬೋರ್ಡಿಂಗ್ ಸಮಯ (BINISSAATI)
ಸೀಟ್ (KOLRUK)
ಬ್ಯಾಗೇಝ ಐಡಿ ನಂಬರ್
ಗೇಟ್ (KAPI)
ವೇಟ್
ಇಷ್ಟೆಲ್ಲ ಮಾಹಿತಿ ಇದ್ದ ಟಿಕೇಟಿನಲ್ಲಿ ಗೇಟ್ ನ ಮತ್ತು ವೇಟ್ ನ ಮಾಹಿತಿ ಇರಲಿಲ್ಲ. ಆದರೆ ವೇಟ್ ಯಾವುದರದ್ದು? `ಬ್ಯಾಗಿಂದೋ ಇಲ್ಲ ನಮ್ಮದೋ? ವಿಮಾನ ಮೇಲೆ ಹಾರುತ್ತದಲ್ಲ? ಅದಕ್ಕೆ ನಮ್ಮದೆ ವೇಟ್ ಇರಬೇಕು ಎಂದೆಲ್ಲಾ ಪರಾಮರ್ಶಿಸಿ ನಗೆಯಾಡಿದೆವು. ಏಕೆಂದರೆ ಅಲ್ಲಿದ್ದ ಯಾರೂ 70 ಕೆ.ಜಿ.ಗಿಂತ ಕಡಿಮೆಯವರಂತೂ ಇರಲಿಲ್ಲ.
ಫ್ಲೈಟ್ ನಂಬರ್-TK 717Y, , ನನ್ನ ಸೀಟ್ ನಂಬರ್ 38D ಆಗಿತ್ತು. ವಿಮಾನ ಪ್ರವೇಶಿಸಲು ಸನ್ನದ್ಧರಾಗಿದ್ದಾಗಲೇ ಪ್ರವೇಶ ಆರಂಭಗೊಂಡಿತು. ಗೋವಾದಲ್ಲಿಯಂತೆ ಇಲ್ಲಿ ವಿಮಾನ ಏರಲು ನೆಲದ ದಾರಿ ತುಳಿಯಬೇಕಿಲ್ಲ. ಕಟ್ಟಡದ ಬಾಗಿಲಿಗೂ ನಿಂತ ವಿಮಾನದ ಪ್ರವೇಶ ದ್ವಾರಕ್ಕೂ ಮಧ್ಯದಲ್ಲಿ ಒಂದು ಕೃತಕ ಪಾರದರ್ಶಕ ಸುರಂಗ ಮಾರ್ಗದಂತೆ ದಾರಿ ಇತ್ತು. ಒಳಗೆ ಹೋದರೆ ಅಬ್ಬಾ! ಅದರ ಬೃಹದಾಕಾರವೇ! ಅದು ಅಂತರ್ರಾಷ್ಟ್ರೀಯ ವಿಮಾನ. (ಗೋವಾದಿಂದ ಬಂದದ್ದು ಡೊಮೆಸ್ಟಿಕ್ ವಿಮಾನ. ದೇಶದೊಳಗಷ್ಟೇ ಸುತ್ತುವ ವಿಮಾನವದು.) ಇದು ಅಂತರ್ರಾಷ್ಟ್ರೀಯ ವಿಮಾನ, ಟರ್ಕಿಶ್ ವಾಯುಯಾನದ್ದು. ಈಚೆ ಕಿಟಕಿಯಿಂದ 3 ಸೀಟು, ಆಚೆ ಕಿಟಕಿಯಿಂದ 3 ಸೀಟು. ಮಧ್ಯದಲ್ಲಿ 4 ಸೀಟು. ಮಧ್ಯದ ಸೀಟುಗಳ ಆಚೆ ಈಚೆ ದಾರಿ. ನನ್ನ ಸೀಟ್ ವಿಮಾನದ ಹಿಂತುದಿಯ ಎಡಭಾಗದಲ್ಲಿರುವ ಮಧ್ಯದ ಸೀಟಾಗಿತ್ತು. ಸರೋಜಿನಿ ಭದ್ರಾಪುರ ಕಿಟಕಿಯ ಸೀಟು ನನಗೆ ಬಿಟ್ಟುಕೊಟ್ಟರು. ಅತ್ಯಂತ ವೈಭವೋಪೆತ ವಿಮಾನವದು. ಎತ್ತರವಾದ ಸೀಟುಗಳು. 38-ಇದು ಸಾಲು, `ಡಿ ಸೀಟು. 1 ರಿಂದ 40 ಸಾಲುಗಳಿದ್ದವು. ಒಂದೊಂದು ಸಾಲಿನಲ್ಲಿ 3+4+3=10 ಸೀಟುಗಳು, ಅಂದರೆ 400 ಜನ ಈ ಭಾಗದಲ್ಲಿ ಇದ್ದರು. ಪ್ರವೇಶ ದ್ವಾರದಲ್ಲಿದ್ದ ಗಗನ ಸಖಿಯ ಬಲಕ್ಕೆ ಅಂದರೆ ವಿಮಾನದ ಮುಂಭಾಗದಲ್ಲಿರುವ ಕಾಕ್ಪಿಟ್ ನ ಹಿಂಭಾಗ. ಸುಮಾರು 50 ಜನ ಕುಳಿತುಕೊಳ್ಳಬಹುದಿತ್ತು. ಅದು ಸಾಪಿಸ್ಟಿಕೇಟೆಡ್ ಜನರಿಗೆ. ನಾವಿದ್ದದ್ದಕ್ಕಿಂತ ಹೆಚ್ಚು ಹಣ ತೆತ್ತಬೇಕು.
ಅಲ್ಲಿಯೂ ಕಿಚನ್ ಕ್ಯಾಬಿನ್, ಶೌಚಾಲಯಗಳಿದ್ದವು. ನಾವು ಕುಳಿತ ಭಾಗದ ಆರಂಭ ಮತ್ತು ಕೊನೆಯಲ್ಲಿಯೂ ಇದ್ದವು. ಇಷ್ಟು ಜನರಲ್ಲದೆ ವಿಮಾನ ಸಿಬ್ಬಂದಿ ಬೇರೆ. ಅಂತೂ ಸರಿಸುಮಾರು 475 ರಿಂದ 500 ಜನರ ಸಾಮರ್ಥ್ಯ ಉಳ್ಳ ಬೃಹತ್ ವಿಮಾನವದು. ಕತ್ತಲೆ ಇದ್ದುದರಿಂದ ಹೊರ ಭಾಗ ನೋಡಲಾಗದಿದ್ದರೂ ಒಳಗಿನ ಭವ್ಯತೆ, ವೈಶಾಲ್ಯತೆ, ಅಚ್ಚುಕಟ್ಟುತನ, ವ್ಯವಸ್ಥೆ ಮತ್ತು ವೈಭವ ಕಂಡು ಜೀವಧನ್ಯ ಎನಿಸಿತು. ಸಣ್ಣದಾದ ಸ್ಥಳದಲ್ಲಿ ಎಲ್ಲ ವ್ಯವಸ್ಥೆಯನ್ನು ಹೇಗೆ ಮಾಡಬಹುದು ಎಂಬುದನ್ನುಅಲ್ಲಿರುವ ವ್ಯವಸ್ಥಾ ರೀತಿಯಿಂದ ಕಲಿಯಬೇಕು. ಕುಳಿತೊಡನೆ ಎದುರಿನ ಸೀಟಿನ ತಲೆಭಾಗದ ಹಿಂದೆ 5 ಒಂದು ಪುಟ್ಟ ಟಿ.ವಿ. ಎಡಗೈ ಇಡುವ ಹ್ಯಾಂಡಲ್ನಲ್ಲಿ ರಿಮೋಟ್ ಮತ್ತು ಬಟನ್ ಅಳವಡಿಸಲಾಗಿತ್ತು. ಓದುವುದಾದರೆ ಹಚ್ಚಿಕೊಳ್ಳಬಹುದಾದ ನೆತ್ತಿಯ ಮೇಲಿನ ಲೈಟ್ ಬಟನ್ ಕೂಡ ಅಲ್ಲಿಯೇ ಇತ್ತು. ಸೀಟಿನ ಮೇಲೆ ಒಂದು ಬಿಳಿ ದಿಂಬು, ಪ್ಲಾಸ್ಟಿಕ್ ಕವರ್ನಲ್ಲಿ ಶಾಲು (ಟರ್ಕಿ ಏರ್ಲಾಯಿನ್ಸ್ ಎಂದು ಬರೆದದ್ದು) ಇದ್ದವು. ಎರಡನ್ನು ಎತ್ತಿ ಸೀಟ್ ಮೇಲೆ ಕುಳಿತುಕೊಂಡೆ. ಮುಂದಿನ ಸೀಟಿನ ಬೆನ್ನಿಗೆ ಅಂದರೆ ಟಿ.ವಿ ಕೆಳಗೆ ಒಂದು ತಿರುಗಿಸುವ ಹುಕ್ ಇತ್ತು. ತಿರುಗಿಸಿದೆ ಅಲ್ಲಿ ಸಿಕ್ಕಿಸಿದ್ದ ಟ್ರೇ ನನ್ನ ಮುಂದೆ ಹೊರಳಿತು. ಆಚೆ ಈಚೆ ಅಲ್ಲಾಡಿಸಿ ನೋಡುವಷ್ಟರಲ್ಲೆ ಮತ್ತೂ ಹೊರಗೆಳೆಯಲ್ಪಟ್ಟಿತು.

ಒಟ್ಟು ಒಂದು ಬರೆಯುವ ಪ್ಯಾಡ್ ನಾ ಕಾರದಷ್ಟಿದ್ದ ಆ ಟ್ರೇ ಮೂಲೆಯಲ್ಲಿ ಗ್ಲಾಸ್ ಇಡಲು ತಗ್ಗಿನಂತೆ ಇತ್ತು. ಮತ್ತೆ ಒಳತಳ್ಳಿ ಮೇಲೆಳಿಸಿ ಹುಕ್ ಹಾಕಿದೆ. ಅದರ ಕೆಳಗೊಂದು ಕೇಸ್. ಸಿಂಥೇಟಿಕ್ ಬಟ್ಟೆಯದು. ಅದರಲ್ಲಿ ಟರ್ಕಿ ದೇಶದ ಮ್ಯಾಪ್, ಗ್ಲೋಬ್, ಅಟ್ಲಾಸ್ ಹಾಗೂ ಅಲ್ಲಿರಬಹುದಾದ ಪ್ರಮುಖ ಹೋಟೆಲ್, ಮಾರ್ಕೆಟಿಂಗ್ ಸ್ಥಳಗಳ ಮಾಹಿತಿಯಿರುವ ಪುಸ್ತಕ; ಅದರೊಂದಿಗೆ ವಿಮಾನ ಅಪಘಾತಕ್ಕೆ ಸಿಲುಕಿದರೆ ತೊಟ್ಟುಕೊಳ್ಳುವ ಗಾಳಿ ಉಡುಪಿನ ಬಗೆಗೆ ಮತ್ತು ತೊಟ್ಟುಕೊಳ್ಳುವ ಬಗೆಗೆ, ವಹಿಸಬೇಕಾದ ಮುಂಜಾಗರೂಕತೆಗಳ ಬಗೆಗಿನ ಮಾಹಿತಿ ಇರುವ ಪುಸ್ತಕ. ಮತ್ತೆರಡು ಮ್ಯಾಗ್ಝಿನ್ ಗಳಿದ್ದವು. ಅದರೊಂದಿಗೆ ಒಂದು ಜೊತೆ ಕಾಲುಚೀಲ, ಕಿವಿಯಲ್ಲಿ ಹಾಕಿಕೊಳ್ಳಲು ಕ್ಯಾಪ್ಸೂಲ್ ಆಕಾರದ ಸ್ಪಂಜ್ ಕಾಟನ್ ಇರುವ ಸುಂದರ ನೆಟ್ ಬಟ್ಟೆಯ ನೀಲಿ ಹ್ಯಾಂಡ್ ಪರ್ಸ್; ಒಂದು ಹೆಡ್ಫೋನ್ಸೆಟ್; ಇನ್ನೊಂದು ಪ್ಯಾಕೇಟ್ ಆಕಾರದ ಒಳಗೆ ಪ್ಲಾಸ್ಟಿಕ್ ಕೋಟ್ ಇರುವ ಕಾಗದದ ಚೀಲ. ಅದೇನೆಂದು ತಿರುಗಿಸಿ ನೋಡಿದರೆ `ಅದು ವಾಂತಿ ಬಂದಾಗ ಉಪಯೋಗಿಸುವುದು ಎಂದರು ಸರೋಜಿನಿ ಭದ್ರಾಪುರ. ತಿರುಗಿಸಿ ನೋಡಿದರೆ ‘For your waste’ ಎಂದು ಅದರ ಮೇಲೆ ಬರೆದುಕೊಂಡಿತ್ತು. ನಗುತ್ತಾ ಒಳಸೇರಿಸಿಟ್ಟೆ, ಇಷ್ಟೆಲ್ಲ ಆ ಕೇಸ್ ನಲ್ಲೇ ಇದ್ದವು. ಇನ್ನು ಸೀಟಿನ ಕೆಳಭಾಗದಲ್ಲಿ ಒಂದು ಬ್ರೀಫ್ ಕೇಸ್ ಇತ್ತು. ಅದರೊಳಗೆ ಕತ್ತು ಮತ್ತು ಸೊಂಟಗಳಿಗೆ ಕಟ್ಟಿಕೊಳ್ಳುವ ಗಾಳಿ ಉಡುಪಿತ್ತು. ಈ ಎಲ್ಲ ಆ ಆಗಾಧತೆಗಳನ್ನು ಕಾತುರದಿಂದ ನೋಡುತ್ತಿರುವಾಗಲೇ ಮೈಕ್ ನಲ್ಲಿ ಹೆಣ್ಣು ಧ್ವನಿಯೊಂದು ಸೂಚನೆ ಕೊಡತೊಡಗಿತು.
ಅದರೊಂದಿಗೆ ಮಧ್ಯದಲ್ಲಿ ಅಲ್ಲಲ್ಲಿ 3-4 ಕಡೆಗೆ ಸೀಟುಗಳ ನೆತ್ತಿಯ ಮೇಲೆ ಛಾವಣಿ (roof) ಗೆ ಹೊಂದಿದಂತೆ ಹಾಕಿರುವ 10″ ಟಿ. ವಿ. ಯಲ್ಲಿ ಪ್ರಕಟಗೊಳ್ಳಲು ಆರಂಭವಾಯಿತು. `ಇನ್ನೇನು ವಿಮಾನ ಹೊರಡುತ್ತದೆ, ಮುಂಜಾಗ್ರತೆಯಾಗಿ ಪ್ರಯಾಣಿಕರು ಏನೇನನ್ನು ಹೇಗೆ ಮಾಡಬೇಕು, ಯಾವುದನ್ನು ಮಾಡಬಾರದು, ಗಾಳಿ ಚೀಲ ಕಟ್ಟಿಕೊಳ್ಳುವ, ಜಿಗಿಯುವ ಬಗೆ ಎಲ್ಲವನ್ನು ಡೆಮೋ ಮೂಲಕ ತೋರಿಸಲಾಯಿತು. ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡು, ಕಿವಿಗೆ ಹತ್ತಿತುರುಕಿ, ಬಾಯಿಗೆ ಚ್ಯೂಯಿಂಗ್ಗಮ್ ಹಾಕಿಕೊಂಡು ಕಿಟಕಿಯಿಂದ ಹೊರ ನೋಡಿದರೆ ದೀಪಗಳ ಬೆಳಕು, ಅವುಗಳ ಜೋಡಣೆ, ದೀಪಗಳಿಂದಲೇ ಕಟ್ಟಿದ ಕಟ್ಟಡದಂತಿರುವ ಆ ಬೆಳಕಿನ ವೈಭವ ಇಂದಿರಾ ಗಾಂಧಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಭವ್ಯತೆಗೆ, ಸುವ್ಯವಸ್ಥೆಗೆ ಮತ್ತು ಬೃಹತ್ತತೆಗೆ ಸಾಕ್ಷಿಯಾಗಿದ್ದವು. ನಿಖರವಾಗಿ ಹೊರಟಿದ್ದು ಬೆಳಗಿನ 5.25ಕ್ಕೆ. ವಿಮಾನ ಕದಲಲು ಆರಂಭವಾಯಿತು. ಸುಮಾರು 2 ಕೀ. ಮೀ ನಷ್ಟು ರನ್ವೇ ಮೇಲೆ ಓಡಿ ಮೆಲ್ಲಗೆ ಮೇಲೆ ಹಾರಿತು. ಅದೇ ದಡದಡ ಶಬ್ದ… ಅದು ನಿಂತು ಹೋಗಿ ಸೊಂಯ್ಯನೆ ಮೇಲೆ ಹಾರಿದ ಅನುಭವ. ಈ ಬಾರಿ ಹೆಚ್ಚಿನ ಬದಲಾವಣೆ ಏನೂ ಅನಿಸಲಿಲ್ಲ. ವಿಮಾನ ಎತ್ತರಕ್ಕೆ ಹಾರಿದಂತೆ ಕಿವಿಗಳು ಮಾತ್ರ ಸ್ವಲ್ಪ ಗಡಚಿಕ್ಕುತ್ತಿದ್ದವು.
ಕಿಟಕಿಯಿಂದ ಕೆಳಗೆ ನೋಡಿದರೆ ದೀಪ ಜಗತ್ತು. ಒಂದೆಡೆ ದೀಪಗಳ ಜಾತ್ರೆ; ಇನ್ನೊಂದೆಡೆ ದೀಪಗಳ ಸಾಲು; ಮತ್ತೊಂದೆಡೆ ದೀಪಗಳ ಚಿತ್ತಾರ. ಈ ದೀಪಗಳ ಸಾಮ್ರಾಜ್ಯಕ್ಕೆ ಕಳಸವಿಟ್ಟಂತೆ ಬಾನಿನಲ್ಲಿ ಚಂದ್ರ ಶೋಭಿಸುತ್ತಿದ್ದ. ಕಳೆದ 11ನೇ ತಾರೀಖು ರವಿವಾರವಷ್ಟೇ ಅಮವಾಸ್ಯೆ ಮುಗಿದಿತ್ತು. ಇಂದು ಶುಕ್ರವಾರ ಹೀಗಾಗಿ ಚಂದ್ರ ಕಿಶೋರಾವಸ್ಥೆಯಲ್ಲಿದ್ದ. ಈ ಅವಸ್ಥೆಯಲ್ಲಿ ಚಂದ್ರ ಶುಭ್ರನಖದಂತೆ ಕಾಣಬೇಕಿತ್ತು. ಕುವೆಂಪು ಅವರು ಬಳಸಿದ ಶಬ್ದ “ಚಂದ್ರನಖಿ ಒಂದರಲ್ಲೇ ಚಂದ್ರನ ಶುಭ್ರತೆ, ಅಪಾರ ಸೌಂದರ್ಯ ಮತ್ತು ಆ ರೂಪ ಆಕಾರ, ಹಾಗೂ ಶೂರ್ಪನಖಿಯಲ್ಲಿರಬಹುದಾದ ಶುದ್ಧತೆ ಹಾಗೂ ಅಪಾರ ಸೌಂದರ್ಯರಾಶಿಯ ವರ್ಣನೆಯನ್ನು ಮೊಗೆಮೊಗೆದು ತುಂಬಿದ್ದಾರೆ. ಆದರಿಲ್ಲಿ `ಚಂದ್ರ ನಖದಂತಿರದೆ ಒಂದು ರೊಟ್ಟಿಯನ್ನು ಉದ್ದುದ್ದಕ್ಕೆ 4 ಸಮಭಾಗವಾಗಿ ಮುರಿದಾಗ, ಮೊದಲ ಮತ್ತು ಕೊನೆಯ ಭಾಗಗಳು ಹೇಗೆ ಕಾಣುತ್ತವೆಯೋ ಅದೇ ರೀತಿ ಕಾಣುತ್ತಿದ್ದ. ನೆಲದಿಂದ ಸುಮಾರು 20,000 ಅಡಿ ಎತ್ತರ ಹಾರಿ, ವಾಯುವ್ಯ ದಿಕ್ಕಿಗೆ ಚಲಿಸುತ್ತಿರುವುದರಿಂದ ಚಂದ್ರ ಹಾಗೇ ಕಾಣುತ್ತಿದ್ದ. ವಿಮಾನ ಮೇಲೇರಿದಂತೆ ಕಪ್ಪು ಬಟ್ಟೆಯ ಮೇಲೆ ಮಿಂಚು ಉದುರಿಸಿದಂತೆ ಭೂಮಿ ಮಿಣಮಿಣ ಮಿನಗುತಿತ್ತು. ಭೂಮಿಯ ಮೇಲೆ ಮಾನವರನ್ನು ಮಲಗಿಸಿ ದೀಪಗಳು ನರ್ತನಗೈಯುತ್ತಿದ್ದರೆ, ಆಕಾಶದಲ್ಲಿ ನಕ್ಷತ್ರಗಳು ಅದನ್ನು ನೋಡಿ ಮಿಣಕು ನಗುತ್ತಿದ್ದವು. ಚಂದ್ರನದೋ ತುಂಬು ನಗು, ಅದನ್ನುಳಿದರೆ ಎಲ್ಲೆಡೆ ಕಗ್ಗತ್ತಲು.
ಅಷ್ಟರಲ್ಲೇ ಒಬ್ಬ ಗಗನ ಸಖಿ ಬಂದು “ತಂಪು ಪೇಯ ಬೇಕೋ, ಬಿಸಿಪೇಯ ಬೇಕೋ? ಎಂದು ಇಂಗ್ಲೀಷ್ ನಲ್ಲಿ ಕೇಳಿದಳು. ವಿಮಾನದಲ್ಲಿ ವಾತಾನುಕೂಲವಿದ್ದುದರಿಂದ `ಹಾಟ್ ಡ್ರಿಂಕ್ಸ್ ಎಂದು ಹೇಳಿ ತಕ್ಷಣವೇ `ಕಾಫಿ ಓನ್ ಲಿ ಎಂದೆ. ಅವಳು ಮಂದಸ್ಮಿತಳಾಗಿ ಮುಂದೆ ಸರಿದು ಹೋದಳು. ಅಷ್ಟರಲ್ಲೇ ಕಾಲು ಲೀಟರ್ನ ನೀರಿನ ಬಾಟಲಿಗಳನ್ನು ತಂದುಕೊಟ್ಟರು. ಅದರ ಹಿಂದೆಯೇ ಇಬ್ಬರು ಗಗನ ಸಖಿಯರು ಫುಡ್ ಟ್ರೋಲಿಯೊಂದಿಗೆ ಬಂದರು. ಕೈಗೆ ಹ್ಯಾಂಡ್ ಗ್ಲೌಸ್ ಹಾಕಿಕೊಂಡಿದ್ದರು. 20 ಗ್ರಾಂನ ಒಂದು ಹಜಲ್ ನಟ್ ((miraclenut-HAZEL NUT)ನ ಒಂದು ಪ್ಯಾಕೆಟ್ ನೀಡಿ, ಯಾರಿಗೆ ಯಾವ್ಯಾವ ಪೇಯಬೇಕೋ ಅವನ್ನು ಹಾಕಿ ಕೊಡತೊಡಗಿದರು. ಅಲ್ಲಿ ಮ್ಯಾಂಗೋ, ಮಾಝಾ, ಕೋಲಾ, ಚೆರ್ರಿಜ್ಯೂಸ್, ಕಾಫೀ, ಟೀಯೊಂದಿಗೆ ಬ್ರಾಂಡಿ, ವಿಸ್ಕಿಗಳೂ ಇದ್ದವು. ಹಜಲ್ ಬೀಜದ ಗಾತ್ರ ನಮ್ಮಲ್ಲಿ ಸಿಗುವ ಹೈಬ್ರಿಡ್ ಬಿಳಿ ಕಡಲೆ ಕಾಳಿನಷ್ಟು. ರುಚಿ ಶೇಂಗಾ ಮತ್ತು ಗೋಡಂಬಿಯಂತೆ. ಬಣ್ಣ ಹಾಲು ಬಿಳಿ. ಆಕಾರ ಮೋದಕದ ಆಕಾರ. ನಾನು ಈ ಮೊದಲು ಇದನ್ನು ನೋಡಿರಲಿಲ್ಲ. ತಿಂದಿರಲಿಲ್ಲ. ಆ ಪ್ಯಾಕೆಟ್ ಮೇಲೆ ‘comes from Turkey’.
ನಿನ್ನೆ ಬೆಳಗಿನಿಂದ ವಿಶ್ರಾಂತಿ ಇಲ್ಲದಾಗಿತ್ತು. ಸೀಟಿಗೊರಗಿ ಕಣ್ಣು ಮುಚ್ಚಿದೆ. ಹಾಯ್ ಎನಿಸಿತು. ಗಗನ ಸಖಿಬಂದು ಮಲಗಿದವರ ನೆತ್ತಿ ಮೇಲಿರುವ ಹೈವೋಲ್ಟ್ ಬಲ್ಬ್ ಆರಿಸುತ್ತ ನನ್ನ ನೆತ್ತಿ ಮೇಲಿನ ಬಲ್ ಬನ್ನು ಆರಿಸಿದಳು. ಜಲಬಾಧೆ ಮುಗಿಯಿಸಿಕೊಂಡೇ ವಿಶ್ರಮಿಸಿದರಾಯಿತೆಂದು ಎದ್ದು ಸೀಟಿನಿಂದೀಚೆ ಬಂದು ಮುಂದೆ ಹೋಗಲೋ ಹಿಂದೆ ಹೋಗಲೋ ಎಂದು ನೋಡುತ್ತಿರುವಾಗ, ಒಬ್ಬ ಪರಿಚಾರಕ ಹಿಂಬದಿಯಿಂದ ಓಡಿಬಂದು `ಏನು ಬೇಕು ಎಂದು ಇಂಗ್ಲೀಷ್ ನಲ್ಲಿ ಕೇಳಿದ. ನಾನು `ಟಾಯಿಲೆಟ್ ಎಂದೆ. ಆತ `ವಾಶ್ರೂಮ್ ದ್ಯಾಟ್ ಸೈಡ್ ಎಂದ. ಅವರೆಲ್ಲಾ ಆಡುತ್ತಿದ್ದದ್ದು ಇಂಗ್ಲಿಷ್ ಭಾಷೆಯಾದರೂ ಉಚ್ಛಾರಣೆ ಮಾತ್ರ ಬೇರೆನೇ ಆಗಿರುತ್ತಿತ್ತು.
ವಾಶ್ರೂಮ್ ಒಳಗೆ ಹೋದೆ 3×4 ಅಡಿಯಷ್ಟಿರುವ ಸ್ಥಳದಲ್ಲಿ ಆಧುನಿಕ ಜಗತ್ತೇ ಇಳಿದು ಬಂದಂತಿತ್ತು. ಅದನ್ನಿಲ್ಲಿ ಹೇಳದಿದ್ದರೆ ವಿಷಯ ಅರ್ಧಮರ್ಧವಾಗುವುದೇನೋ? ಅಷ್ಟು ಪುಟ್ಟ ಸ್ಥಳಕ್ಕೆ ಸಣ್ಣದ್ವಾರ. ಅತೀ ದಪ್ಪಾಗಿದ್ದರೆ ಅಡ್ಡವಾಗಿ ಹೋಗಬೇಕು. ಒಳಗೆ ಹೆಜ್ಜೆ ಇಟ್ಟ ತಕ್ಷಣವೇ ಕಮೋಡ್. ಅದರ ಹಿಂದೆ ಸೊಂಟದ ಎತ್ತರಕ್ಕೆ ಕಟ್ಟೆಯಂತೆ, ಅಲ್ಲಿ ಫ್ಲಶ್ಬ (Flush) ಟನ್. ಎಡಕ್ಕೆ ಅಷ್ಟೇ ಎತ್ತರದ ಕಟ್ಟೆ ಅಲ್ಲಿ ಪುಟ್ಟ ಹ್ಯಾಂಡ್ ವಾಶ್ ಬೆಸಿನ್. ಪಕ್ಕದಲ್ಲಿಯೆ ಪಸ್ಟ್-ಏಡ್ ನ ಎಲ್ಲ ವಸ್ತುಗಳು. ಅವು ಆ ಕಟ್ಟೆಯೊಂದಿಗೆ ಬೆಸೆದ 2 ಪುಟ್ಟ ಪೆಟ್ಟಿಗೆಗಳಲ್ಲಿದ್ದವು. ಅದರ ಪಕ್ಕಕ್ಕೆ ಟಿಶ್ಯೂ ಪೇಪರ್ ನ ದೊಡ್ಡ ಸುರುಳಿ. ಕಟ್ಟೆಯ ಭಿತ್ತಿಗೆ ಅಂಟಿಕೊಂಡಂತೆ ಸೊಂಟದಿಂದ ತಲೆಯವರೆಗೆ ಪ್ರತಿಬಿಂಬಿಸುವ ಒಂದು ಕನ್ನಡಿ. ಕೆಳಗೆ ಕಮೋಡ್ ನ ಎಡಕಟ್ಟೆಯ ಭಿತ್ತಿಯೊಳಗೆ ಸಿಕ್ಕಿಸಿದ ಲೋಹದ ಪಟ್ಟಿಗೆ ಸುತ್ತಿದ ಟಿಶ್ಯೂ ಪೇಪರ್. ಅದು ಸಣ್ಣ ಸುರುಳಿ. ಜಲಭಾದೆ ಇರಲಿ, ಮಲಭಾದೆ ಇರಲಿ ಕಮೋಡ್ ಬಳಸಿಯಾದ ಮೇಲೆ ಸ್ವಚ್ಛತೆಗೆ ಬಳಸಬೇಕಾದುದು ಟಿಶ್ಯೂಪೇಪರ್ ಮಾತ್ರ. ಅಲ್ಲಿ ನೀರಿನ ವ್ಯವಸ್ಥೆ ಇರಲ್ಲ. ಇದು ನಮ್ಮ ಸ್ವಚ್ಛತೆಯಾದರೆ ಇನ್ನೂ ಕಮೋಡ್ ಸ್ವಚ್ಛತೆಗೂ ನೀರು ಇರುವುದಿಲ್ಲ. ಫ್ಲಶ್ ಬಟನ್ ಒತ್ತಿದ್ದರೆ ಜೋರಾಗಿ ಢರ್ಭರ್ ಸದ್ದಿನೊಂದಿಗೆ ಬಿರುಸಿನ ಗಾಳಿಯೆ ಅದನ್ನು ಒಳಗೆ ಎಳೆದುಕೊಳ್ಳುತ್ತದೆ. ಶ್ವಾಸ ಒಳಗೆ ಎಳೆದಂತೆ ಆ ರಭಸದ ಸದ್ದು ಇಷ್ಟು ಜೋರಾಗಿರುತ್ತದೆಂದರೆಯೆ ಅನನುಭವಿಯಾದ ನನ್ನ ಎದೆ ಒಡೆದೆ ಹೋಗಿತ್ತು.
ಎಲ್ಲಿ ಏನಾಯಿತು? ವಿಮಾನಕ್ಕೆ ಏನೋ ಆಯಿತೋ ಅಥವಾ ಏನೋ ಮುರಿದು ಬಿತ್ತೋ? ಒಂದೂ ತಿಳಿಯದೆ ಗಾಬರಿಯಿಂದ ಬಾಗಿಲ ತೆರೆದು ಹೊರ ಓಡಿ ಬರಲೆ ಎನಿಸಿ ಚಿಲಕ ತೆಗೆಯುವ ಮುನ್ನವೇ ಶಬ್ಧ ಮೆಲ್ಲನೇ ನಿಂತು ಹೋಯಿತು. ಆಗಲೇ ನನಗೆ ಗೊತ್ತಾದದ್ದು ಕಲ್ಮಶ ಎಳೆದೊಯ್ದದ್ದು ನೀರಲ್ಲ ಗಾಳಿ ಎಂದು. ಆ ಪುಟ್ಟ ಆಧುನಿಕ ಗುಹೆಯೊಳಗೆ ವಾತಾನೂಕೂಲ ಇದ್ದಾಗ್ಯೂ ಚಿಲ್ಲನೆ ಬೆವೆತೂ ಬಿಟ್ಟಿದ್ದೆ. ಬದುಕಿದೆ ಬಡ ಜೀವ ಎಂದು ದೊಡ್ಡ ಸಾಹಸ ಮಾಡಿ ಗೆದ್ದು ಬಂದಂತೆ ಹೊರಬಂದೆ. ನಿಜಕ್ಕೂ ನೀರೊಳಗಿದ್ದೂ ಬೆವೆತ ದುರ್ಯೋಧನನ ಅನುಭವ ನನಗಾಗಿತ್ತು. ಆದರೆ ಎಲ್ಲವೂ ಸರಿಯಾಗಿಯೇ ಇತ್ತು. ಎಲ್ಲರೂ ನನ್ನನ್ನೇ ನೋಡುತ್ತಿರುವಂತೆ ಭಾಸವಾಗಿ ಸರಸರನೆ ಬಂದು ಸೀಟಿನಲ್ಲಿ ಕುಳಿತು `ಹಾರಿಬಲ್ ಟಾಯ್ಲೆಟ್ ಅಂದೆ. ಆಂಟಿ `ಯಾಕೆ ವಿದ್ಯಾ ಏನಾಯ್ತು? ಎಂದರು. ಸಾಹಸಗಾಥೆ ಹೇಳಿದಾಗ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಬಿಟ್ಟರು.
ನಾ ಬರುವುದರೊಳಗೆ ಅವರೆಲ್ಲಾ ಟಿ.ವಿ. ಹಚ್ಚಿಕೊಂಡಾಗಿತ್ತು. ನಾನೂ ಪ್ರಯತ್ನಿಸಿದೆ. ಬಟನ್ ಸಿಗದಿದ್ದಾಗ ಆಂಟಿಯಿಂದ ಹ್ಯಾಂಡಲ್ ನಲ್ಲಿ ರಿಮೋಟ್ ನ್ನು ಸಿಕ್ಕಿಸಿ ವಾಯರ್ ಮೂಲಕ ಟಿ.ವಿಗೆ ಸಂಪರ್ಕಕೊಟ್ಟಿದ್ದನ್ನು ತಿಳಿದುಕೊಂಡು ಟಿ.ವಿ ಹಚ್ಚಿದೆ. ಟರ್ಕಿ ಭಾಷೆಯ ಚಿತ್ರ ಬರುತ್ತಿತ್ತು. ಚಾನಲ್ ಬದಲಾಯಿಸಿದೆ. ನನಗೆ ದೊಡ್ಡ ಟಿ.ವಿಗಳಲ್ಲಿ ತೋರಿಸುತ್ತಿದ್ದ ಗಾಳಿ ತೆಕ್ಕೆಯಲ್ಲಿ ವಿಮಾನ ಬೀಸುತ್ತಿರುವ ರೆಕ್ಕೆ ಗುರುತುಗಳನ್ನು ನೋಡಬೇಕಾಗಿತ್ತು. ಚಾನಲ್ 1 ರಲ್ಲಿ ಅದಿತ್ತು. ರೂಟ್ ಮ್ಯಾಪ್, ಮ್ಯಾಪನ ಮೇಲೆ ವಿಮಾನ ಸಣ್ಣಗೆ ಚಲಿಸುತ್ತಿತ್ತು. 2-3 ನಿಮಿಷಗಳ ನಂತರ ಆ ಚಿತ್ರ ಸರಿದು, ಟರ್ಕಿಶ್ ಏರ್ಲೈನ್ಸ್ ನ ಗ್ರೌಂಡ್ ಸ್ಪೀಡ್ (KPH), ಈಗಿರುವ ಎತ್ತರ, ಕ್ರಮಿಸಿದ ದಾರಿ, ಕ್ರಮಿಸಬೇಕಾದ ಅಂತರ ಇವೆಲ್ಲವೂ ಬರುತ್ತಿದ್ದವು. ನಾನು ನೋಡಿದಾಗ ಗ್ರೌಂಡ್ ಸ್ಪೀಡ್ – 859 (KPH). ವಿಮಾನ 21,582 ಅಡಿ ಎತ್ತರದಲ್ಲಿ ಇತ್ತು. ಕ್ರಮಿಸಿದ ದೂರ 1507 ಕಿಲೋಮೀಟರ್. ಆದರೆ ಕ್ರಮಿಸಬೇಕಾದದ್ದು 3373 ಕಿಲೋ ಮೀಟರ್ ಇತ್ತು. ಈ ಎಲ್ಲ ಅಂಕಿ ಸಂಖ್ಯೆ, ಮಾಹಿತಿಗಳು ಪ್ರತಿಕ್ಷಣ ಕ್ಷಣಕ್ಕೂ ನಿಮಿಷ-ನಿಮಿಷಕ್ಕೂ ದಾರಿ ಕ್ರಮಿಸಿದಂತೆ (ಕ್ರಿಕೇಟ್ ಸ್ಕೋರಿನಂತೆ) ಬದಲಾಗುತ್ತಿದ್ದವು. ಆ ಮಾಹಿತಿ ಸರಿದು ಸಮಯದ ಮಾಹಿತಿ ಪರದೆ ಮೇಲೆ ಬಂದಿತು.
Time to destination – 2.15 min
Estimated arrival time – 9.03 am
Local time at origin – 7.48 am
Local time at Present postition – 6.48 am
Local time at Destination – 5.18 am
ಅಂದರೆ ಭಾರತದ ಸಮಯಕ್ಕೂ ಇಸ್ತಾಂಬುಲ್ ನ ಸಮಯಕ್ಕೂ ಸರಿಯಾಗಿ ಎರಡುವರೆ ತಾಸು ಅಂತರ. ಇಲ್ಲಿಗಿಂತ ಅಲ್ಲಿ ಎರಡುವರೆ ತಾಸು ಹಿಂದೆ ಇಲ್ಲಿಬೆಳಗಿನ 7.48 ಆದಾಗ ಅಲ್ಲಿ 5.18 ಆಗಿತ್ತು. ನನಗೆ ನಿದ್ದೆ ಹತ್ತಿರ ಸುಳಿಯಲೇ ಇಲ್ಲ. ದೃಷ್ಟಿ ಹರಿಸಿದತ್ತ ಹೊಸಜಗತ್ತು, ಹೊಸ ಅನುಭವ, ಕಣ್ಣು ಮುಚ್ಚಿದರೆ ಎಲ್ಲಿ ತಪ್ಪಿ ಹೋಗುತ್ತದೋ ಎಂದು ಕಾತುರದಿಂದ ಕಣ್ತುಂಬಿಸಿಕೊಳ್ಳುತ್ತಲೇ ಇದ್ದೆ. ಮತ್ತೆ ಟಿ.ವಿ ಯಲ್ಲಿಯ ವರ್ಲ್ಡ್ ಮ್ಯಾಪ್ ನಲ್ಲಿ ವಿಮಾನ ಮುಂದೆ ಸರಿಯುವ ದೃಶ್ಯ. ದೆಹಲಿ ಹಿಂದಿನ ಧ್ರುವ ಆದರೆ ಇಸ್ತಾಂಬುಲ್ ಮುಂದಿನ ಧ್ರುವ. ಇವುಗಳ ಮಧ್ಯದ ದಾರಿಯಲ್ಲಿ ವಿಮಾನ ಮೆಲ್ಲಗೆ ಸರಿಯುತ್ತಿರಬೇಕಾದರೆ ಅದರ ಬಲಕ್ಕೆ ಮುಲ್ತಾನ, ಪಾಕಿಸ್ತಾನ, ಅಫ್ಘಾನಿಸ್ತಾನ, ಕಾಬೂಲ, ತೆಹರಾನ್, ಇರಾಕ್-ಹೆಸರುಗಳು ಕಂಡರೆ ಎಡಕ್ಕೆ ಲಾಹೋರ, ಕರಾಚಿ, ಸರಾ-ಎ-ಅಹಮದಿ, ಕೆರಮನ್ ದೇಶಗಳ ರಾಜಧಾನಿಗಳ ಹೆಸರುಗಳು ಕಾಣುತ್ತಿದ್ದವು. ಇವುಗಳಿಗೆಲ್ಲಾ ರೆಕ್ಕೆ ಬೀಸುತ್ತ ವಿಮಾನ ಇಸ್ತಾಂಬುಲದತ್ತ ಸಾಗುತ್ತಿತ್ತು. ಈಗ ಏಷಿಯಾ ಖಂಡದತ್ತ ಬೆನ್ನು ಮಾಡಿ ಯೂರೋಪ ಖಂಡದತ್ತ ಮುಖ ಮಾಡಿ ನಮ್ಮ ಪ್ರಯಾಣ. ನಿದ್ದೆ ಇರಲಿಲ್ಲವಾದರೂ ಕಣ್ಣುಗಳು ಮಾತ್ರ ಮುಚ್ಚಲಿಲ್ಲ, ರೆಪ್ಪೆ ತೂಗಲಿಲ್ಲ.
6.00 ಗಂಟೆ. ಸೂರ್ಯ ಟರ್ಕಿಯಲ್ಲಿ ಉದಯಿಸತೊಡಗಿದ. ಬಾನಿನ ಕೆಂಪು, ಆರಂಭದ ಆ ಝಗ್ಗನೆ ಬೆಳಕು ನಮ್ಮ ಅಕ್ಕಪಕ್ಕದಲ್ಲೆ ಇದ್ದಂತೆ, ಕಿರಣಗಳು ಪಕ್ಕದಿಂದಲೇ ಪ್ರಸಾರಿಸತೊಡಗಿದವು. ಆಕಾಶದಲ್ಲಿ ಅರುಣೋದಯ, ಬಾನಬಟ್ಟೆಯಲ್ಲಿ ಮೋಡಗಳ ನಡುವಿನಿಂದ ಸೂರ್ಯೊದಯ ನೋಡುತ್ತಾ ಹೃನ್ಮನಸುಗಳು ಬಾನಾಡಿಯಾಗಿ ತೇಲುತ್ತಿದ್ದವು. ಕೆಂಜನೆ ಕೆಂಪು ಬೆಂಕಿ ಉಂಡೆ ಮೆಲ್ಲಮೆಲ್ಲನೆ ಮೇಲೆ ಮೇಲೆ ಬರುತ್ತಿತ್ತು. ಎಳೆ ಕಿರಣಗಳು ಭೂಮಿಯತ್ತ ಸಾಗಿದಾಗ, ಭೂಮಿ ಮೈಯೆಲ್ಲ ಫಳಫಳ. ಕಿಟಕಿಯಿಂದ ಕೆಳಗೆ ನೋಡುತ್ತಿದ್ದೆ. ದಟ್ಟ ನೀಲಿ ಬಣ್ಣದ ಸಮುದ್ರ, ತಿಳಿ ನೀಲಿ ಬಣ್ಣದ ದಡ. ಅದರಂಚಿಗೆ ಬೆಳ್ಳನೆಯ ಅಂಕುಡೊಂಕಾದ ಗೆರೆ. ಬಂದು ಹೋಗುವ ತೆರೆಗಳ ಚಿತ್ತಾರವದು. ಪ್ರಕೃತಿಯ ಪರಿ-ಪರಿಯ ಕಲಾಕೃತಿ. ಪ್ರಕೃತಿಯ ಮುಗುಳ್ ನಗುವಿನಲ್ಲೊಂದು ಚಿತ್ತಾರ. ತುಂಬುನಕ್ಕರಿನ್ನೊಂದು ಚಿತ್ತಾರ. ವಿಕಟ ಅಟ್ಟಹಾಸದಲ್ಲೊಂದು ಚಿತ್ತಾರ. ದುಃಖಿಸಿದರೊಂದು ಚಿತ್ರ. ಅತ್ತರಂತೂ ಕಣ್ಣೀರಿನ ಚಿತ್ಕಾರ. ಸೊರಗಿದರಂತೂ ಬಣ-ಬಣ ವಣ-ವಣ ಚಿತ್ರ. ಇಲ್ಲಿ ಮಾತ್ರ ಪ್ರಕೃತಿಯದ್ದು ಗಂಭೀರ ಸ್ವರೂಪ. ಎಷ್ಟು ನೋಡಿದರೂ ಕಣ್ತಣಿಯದು. ಪಕ್ಕನೆ ಮೊಬೈಲ್ ಕ್ಯಾಮೆರಾ ತೆಗೆದು, ವಿಮಾನ ಕಿಟಕಿಯಿಂದಲೇ ಒಂದು ಫೋಟೋ ಕ್ಲಿಕ್ಕಿಸಿದೆ. ಸಮುದ್ರದ ದಡ ಉಸುಕಿನ ವಿಶಾಲವಾದ ಹರುವು. ಮುಂದೆ ಸ್ವಲ್ಪ ಖಾಲಿ ಭೂಮಿ. ನಂತರ ಹೊಲಗಳು, ಹಸಿರು ಬಣ್ಣದಲ್ಲಿ ಎಷ್ಟು ಶೇಡ್ಗಳನ್ನು ಮಾಡಲು ಸಾಧ್ಯವೋ ಅಷ್ಟು ಹಸಿರು ಶೇಡ್ ಗಳುಳ್ಳ ಚಿಕ್ಕ-ಚಿಕ್ಕ ಟೈಲ್ಸ್ ಗಳನ್ನು ಚೌಕು, ಆಯತ, ತ್ರಿಕೋನಾಕರದಲ್ಲಿ ಕೊನೆ ಇಲ್ಲದಂತೆ ಒಂದರ ಪಕ್ಕದಲ್ಲೊಂದು ಜೋಡಿಸಿದಂತೆ ಕಾಣುತ್ತಿತ್ತು. ಊರುಗಳಿರುವಲ್ಲಿ ಕಟ್ಟಡದ ಛಾವಣಿ ಭಾಗಗಳೂ ಕೂಡ ಇಟ್ಟಂಗಿಗಳನ್ನು ಜೋಡಿಸಿ ಒಂದೆಡೆ ಇಟ್ಟಂತೆ ಕಾಣುತ್ತಿದ್ದವು. ನಂತರ ನೆಲ, ಹೊಲಗಳಿದ್ದರೆ ಮಣ್ಣಿನ ಬಣ್ಣದ ಟೈಲ್ಸ್ ಗಳನ್ನು ಜೋಡಿಸಿದಂತೆ ಕಾಣುತ್ತದೆ. ಬರೀ ನೆಲವಿದ್ದರೆ ಎತ್ತೆತ್ತಲೋ ಮಣ್ಣಿನ ಬಣ್ಣ ಬಳಿದಂತೆ ಅಲ್ಲಲ್ಲಿ ಇರುವ ಸಮುದ್ರದ ಒತ್ತು, ನದಿಗಳು ಹಾಗೂ ಕೆರೆಗಳು ದಟ್ಟ ನೀಲಿ ಬಣ್ಣ ಚೆಲ್ಲಾಡಿದಂತೆ. ದೊಡ್ಡ ಊರುಗಳಿದ್ದಲ್ಲಿ ಇಟ್ಟಂಗಿಗಳ ಸಾಲು-ಸಾಲು ರಾಶಿಗಳು. ಈ ದೃಶ್ಯದಿಂದಾಗಿ ಟರ್ಕಿಯಲ್ಲಿ ಬ್ರಿಟಿಷ್ ಕಟ್ಟಡಗಳಂತೆ ಕೆಂಪು ಹಂಚಿನ ಬಹು ಅಂತಸ್ತಿನ, ಕಟ್ಟಡಗಳೇ ಇರಬಹುದು ಎನಿಸಿತು.
ಬೆಳಗಿನ 6 ಗಂಟೆಯಿಂದಲೇ ಒಬ್ಬೊಬ್ಬರೇ ಎದ್ದು ವಾಶ್ ರೂಮ್ ಗೆ ಹೋಗಿ ಮುಖ ತೊಳೆದು ಬರುತ್ತಿದ್ದರು. ಇನ್ನೂ ಕೆಲವರು ಗೊರಕೆ ಹೊಡೆಯುತ್ತಲೇ ಇದ್ದರು. 7 ಗಂಟೆಗೆ ಗಗನ ಸಖಿ, ಪರಿಚಾರಕರು ಫುಡ್ ಟ್ರೋಲಿಯೊಂದಿಗೆ ಹಾಜರ್. ಬಂದವರೇ ಪಿಂಕ್ ಬಣ್ಣದ 3 ಮಡಿಕೆ ಮಡಿಚಿದ ಕಾರ್ಡೊಂದನ್ನು ಕೊಟ್ಟರು. ಅದರ ಮೇಲೆ who is in the kitchen today? ಎಂದು ಇಂಗ್ಲಿಷ್ ನಲ್ಲಿ(Mutfakta kimvar?) ಎಂದು ಟರ್ಕಿಶ್ ನಲ್ಲಿ ಬರೆದಿತ್ತು. ತೆರೆದು ನೋಡಿದರೆ ಅದು ಮೆನ್ಯು. ಆರಂಭದ ಭಾಗದಲ್ಲಿ “ಮೋಡಗಳೆತ್ತರದಲ್ಲಿಯ ರೆಸ್ಟೊರೆಂಟ್ ಗೆ ಸ್ವಾಗತ ಕೋರುತ್ತ, ಕಿಚನ್, ಎಕ್ಸ್ ಪರ್ಟ್ಸ್ ಬಳಸುವ ಪದಾರ್ಥಗಳ ಬಗೆಗೆ ಹೇಳುತ್ತಾ “We hope that tastes in your mouth will last beyond your journey’’ Bon apptit – ಎಂದು ಒಳ್ಳೆಯ ಆಹಾರಕ್ಕೆ ಹಾರೈಕೆಗಳನ್ನು ವ್ಯಕ್ತಪಡಿಸಲಾಗಿತ್ತು. ಅದರ ಮಧ್ಯಭಾಗದಲ್ಲಿ Humus (ಸಾವಯುವ ಬೆಳೆಗಳಿಂದ ತಯಾರಿಸಿದವುಗಳೋ ಏನೋ?) ಶೀರ್ಷಿಕೆಯಡಿಯಲ್ಲಿ ಸ್ಪೈಸಿ, ಟೊಮೆಟೋ ಪೇಸ್ಟ್; ಬ್ಲಾಕ್ ಓಲಿವ್; ಗ್ರಿಲ್ಡ್ ಚಿಕನ್ ಬ್ರೆಸ್ಟ್, ಡೆಮಿ, ಗ್ಲೇಸ್ ಸಾಸ್, ಅದಕ್ಕೊಪ್ಪುವ ಮಿಕ್ಸಡ್ ವೆಜಿಟೆಬಲ್ಸ್; ಗ್ರಿಲ್ಡ್ ಸಾಲ್ಮನ್, ಮಿಕ್ಸಡ್ ವೆಜಿಟೆಬಲ್ಸ್, ಪೊಟ್ಯಾಟೋ ಪುರಿ; ಫ್ರೆಶ್ಕ್ರೀಮ್; ಓವನ್ ಫ್ರೆಶ್ ಬ್ರೆಡ್ ಸೆಲೆಕ್ಷನ್, ಫ್ರೆಶ್ ಬ್ರೆಡ್ ಕಾಫಿ ಅಥವಾ ಟೀ ಇವುಗಳ ಪಟ್ಟಿ ಇತ್ತು. ಕೊನೆಭಾಗದಲ್ಲಿ BEVARAGES (ಪಾನೀಯಗಳು) ಶೀರ್ಷಿಕೆಯಡಿಯಲ್ಲಿ ವಿಸ್ಕಿ, ಜಿನ್, ವೊಡಕಾ, ರಾಶಿ; ಬೀರ್ಸ್; ಜ್ಯೂಸಸ್ (ಆರೆಂಜ್, ಟೊಮ್ಯಾಟೊ, ಚೆರ್ರಿ); ಸಾಫ್ಟ್ ಡ್ರಿಂಕ್ಸ್ ಕೋಲಾ, ಕೋಲಾ ಲೈಟ್, ಸ್ಪ್ರೈಟ್, ಐಸ್ ಟೀ, ಮಿನರಲ್ ವಾಟರ್; ಹಾಟ್ ಡ್ರಿಂಕ್ಸ್-ಪ್ರೆಶ್ಲಿ, ಬ್ರೇವ್ಡ್ ಕಾಫೀ, ಟೀ; ಆಯ್ದ ಅಂತರ್ರಾಷ್ಟ್ರೀಯ ಮತ್ತು ಟರ್ಕಿಯ ವಾಯ್ ನ ರೆಸ್ಟೊರೆಂಟೊಂದಕ್ಕೆ ಹೋಗಿ ಕುಳಿತ ಅನುಭವ.
ಮೆನು ನೀಡಿ ಹತ್ತು ನಿಮಿಷದೊಳಗೆ ಫುಡ್ ಟ್ರೋಲಿ ಬಂದೇ ಬಿಟ್ಟಿತು. ಆಹಾರ ಟ್ರೇ ಕೊಡುವ ಮೊದಲು ನಮ್ಮ ಮುಂದೆ ಇರುವ ಸೀಟಿನ ಬೆನ್ನಿನಿಂದ ಟ್ರೇ ತೆಗೆದು, ಹೊರ ಎಳೆದು ಏನು ಬೇಕೆಂಬಂತೇ ನಮ್ಮತ್ತ ನೋಡಿದಳು ಹ್ಯಾಂಡ್ ಗ್ಲೌಸ್ ಹಾಕಿದ ಗಗನ ಸಖಿ. ಶಾಖಾಹಾರ ಕೇಳಿದಾಗ ಶಾಖಾಹಾರ ಇಡುವ ಭಾಗದಿಂದ ಒಂದು ಟ್ರೇ ಎತ್ತಿ ನನ್ನ ಮುಂದಿದ್ದ ಟ್ರೇ ಮೇಲಿಟ್ಟು, ಚಿಮಟದಿಂದ ಒಂದು ಬನ್ ಕೊಟ್ಟು ಡ್ರಿಂಕ್ಸ್? ಎಂದು ಬಿಸಿ ಬಿಸಿ ಕಪ್ಪು ನೀರನ್ನು, ಬಳಸಿ ಎಸೆಯುವ ಲೋಟಕ್ಕೆ ದೊಡ್ಡ ಥರ್ಮಾಸ್ ನಿಂದ ಬಗ್ಗಿಸಿ, ಒಂದು ಸಕ್ಕರೆ, ಒಂದು ಹಾಲಿನ ಪುಡಿ ಇರುವ ಬೆರಳುದ್ದುದ ಚೀಟಿ ನೀಡಿ, ಮತ್ತೊಬ್ಬರೆಡೆಗೆ ಗಮನ ಹರಿಸಿದಳು.
ಈ ಟಿಫನ್ ತಟ್ಟೆಯ ಮಹಿಮೆ ಇಲ್ಲಿ ಹೇಳಲೇಬೇಕು. ಕೊಟ್ಟ ಟ್ರೇನಲ್ಲಿ ಪ್ಲಾಸ್ಟಿಕ್ ಸೀಲ್ ಆದ ಒಂದು ಚೌಕಾಕಾರದ ಕೇಕ್, ಒಂದು ಚೌಕಾಕಾರದ ಬಿಳಿ ಫೈಬರ್ನ ಪುಟ್ಟ ಬಟ್ಟಲಲ್ಲಿ ಒಂದು ಬ್ಲಾಕ್ ಓಲಿವ್ ಹಣ್ಣು, ನಾಲ್ಕು ದ್ರಾಕ್ಷಿ, ಒಂದು ಕಲ್ಲಂಗಡಿ ಹೋಳು, ಒಂದು ಆಫ್ರಿಕಾಟ್, (ಇನ್ನೊಂದು ಹಣ್ಣಿನ ಹೋಳು ಯಾವುದೆಂದು ಗೊತ್ತಾಗಲಿಲ್ಲ) ಇವನ್ನುಳ್ಳ ಬಟ್ಟಲನ್ನು ಪಾರದರ್ಶಕ ಪ್ಲಾಸ್ಟಿಕ್ ಪೇಪರ್ನಿಂದ ಪ್ಯಾಕ್ ಮಾಡಿದ್ದರು. ಅದರೊಂದಿಗೆ ಕೈ ಒರೆಸಲು ಬಳಸಲು ಮೊಳ ಉದ್ದನೆ ಟಿಶ್ಯೂ ಪೇಪರ್ನಲ್ಲಿ-ಒಂದು ಸ್ಟೀಲ್ ಚಮಚ, ಒಂದು ಪೋರ್ಕ್, ಇನ್ನೊಂದು ಜಾಮ್ ಹಚ್ಚಲು ಬಳಸುವ ಸಾಧನ, ರಿಫ್ರೆಶಿಂಗ್ ಟೊವೆಲ್ ಪೌಚ್ (ಸುವಾಸನಾಯುಕ್ತ ತೊಯ್ದ ಕರವಸ್ತ್ರದಷ್ಟಿರುವ ಟಿಶ್ಯೂ ಪೇಪರ್) (ಇದು miles and smiles ಕಂಪನಿಯ ಟರ್ಕಿ ಉತ್ಪನ್ನ); ಒಂದು ಬೆಣ್ಣೆಯ ಪ್ಯಾಕೆಟ್, ಒಂದು ಚೀಜ್ ಪ್ಯಾಕೆಟ್ (ಚಿಕ್ಕ ಸೋನಾ ಪಾಪಡಿ ಪ್ಯಾಕನಂತೆ) ಒಂದು ಜೇನು ತುಪ್ಪದ, ಒಂದು ಜಾಮ್ನ ಪೌಚ್ ಗಳು, ಉಪ್ಪು ಕಾಳು ಮೆಣಸಿನ ಪುಡಿ ಇರುವ 1ಳಿ 1½ x 1½² ನ ಎರಡು ಪಾಲಿಥಿನ್ ಪ್ಯಾಕೆಟ್ ಗಳು-ಇವಿಷ್ಟನ್ನೂ ಸುತ್ತಿ ಇಡಲಾಗಿತ್ತು. ಪೇಪರ್, ಪ್ಲಾಸ್ಟಿಕ್, ಪಾಲಿಥಿನ್ ಗಳೊಳಗೆ ಒಂದು ಮಿನಿ ಅಡಿಗೆ ಮನೆಯೆ ಸಿದ್ಧರೂಪ (instant) ದಲ್ಲಿ ಬಂಧಿಯಾಗಿ, ಮುಕ್ತಿಗಾಗಿ ಕಾಯುತ್ತಿತ್ತು. ಒಂದೇ ಬನ್ ಯಾವುದರೊಂದಿಗೆ ತಿನ್ನುವುದು? ಜಾಮ್, ಬೆಣ್ಣೆ, ಚೀಜ್, ಜೇನುತುಪ್ಪ…? ಮೊದಲು ಬಿಸಿ-ಬಿಸಿ ಕಾಫಿ ಕುಡಿಯೋಣ ಎನಿಸಿ ಕಾಫಿ ಲೋಟಕ್ಕೆ ಹಾಲಿನ ಪುಡಿ, ಪುಡಿ ಸಕ್ಕರೆ ಹಾಕಿ ಅಲ್ಲಾಡಿಸಿ ಕುಡಿದರೆ ಹಾಲಿನ ರುಚಿಯೂ ಇಲ್ಲ. ಸಕ್ಕರೆ ರುಚಿಯೂ ಇಲ್ಲ, `ಇದರೊಳಗೆ ಏನೂ ಇಲ್ಲ ಎನ್ನುತ್ತ ಮತ್ತೆರಡು ಸಕ್ಕರೆ ಮತ್ತು ಹಾಲಿನ ಪುಡಿಯ ಚೀಟಿಗಳನ್ನು ಕೇಳಿ ಪಡೆದೆ. ಜಾಮ್, ಬೆಣ್ಣೆಯೊಂದಿಗೆ ಬನ್ ತಿಂದೆ. ಹೊಟ್ಟೆ ತುಂಬಲಿಲ್ಲ. “ಚೆರ್ರಿ ಜ್ಯೂಸ್ ಚೆನ್ನಾಗಿದೆ ತಗೋ ಎಂದು ಸರೋಜ ಕೂಗಿ ಹೇಳಿದಳು. ಚೆರ್ರಿ ಜ್ಯೂಸ್ ಕುಡಿದೆ. ಪರವಾಗಿಲ್ಲ ಎನಿಸಿತು: ಹೊಟ್ಟೆ ಮಾತ್ರ ತುಂಬಲಿಲ್ಲ.
ಹ್ಯಾಂಡ್ ಗ್ಲೌಸ್ ಹಾಕಿದ ಗಗನ ಸಖಿಯರು ಬಂದು ಖಾಲಿ ಪ್ಲೇಟ್ ಗಳನ್ನು ಒಯ್ಯುತ್ತಿರುವಾಗಲೇ ವಿಮಾನ ಇಸ್ತಾಂಬುಲ್ ಸಮೀಪಿಸುತ್ತಿರುವ ಮಾಹಿತಿ ದೃಕ್ ಶ್ರವಣ ಮಾಧ್ಯಮಗಳೆರಡರಲ್ಲಿಯೂ ಬಿತ್ತರಗೊಳ್ಳತೊಡಗಿತು. ಇಸ್ತಾಂಬುಲ್ ಟರ್ಕಿ ದೇಶದ ಬೃಹತ್ ನಗರ. ಕೆಳನೋಡಿದರೆ ಕೆಂಪು ಇಟ್ಟಂಗಿಗಳ ಮಹಾಸಮ್ಮೇಳನವೇ ನೆರೆದಂತೆ, ಕೆಂಪು ಸಾಗರದಂತೆ; ಅದರಂಚಿಗೆ ಮಣ್ಣಿನ ಬಣ್ಣ (ಅದು ನೆಲ), ಅದರಂಚಿಗೆ ನೀಲಿಬಣ್ಣ (ಅದು ಸಮುದ್ರ) ಬಣ್ಣಿಸಲಸದಳ. ಇದು ಟರ್ಕಿಯ ಭೌತಿಕ ಸಾಮ್ರಾಜ್ಯದ ಛಾವಣಿ. ಹೊಟ್ಟೆಯಲ್ಲೂ, ಹೃದಯದಲ್ಲೂ ಮೇಲಿನಿಂದ ಕೆಳಗೆ ಬಿರುಸಿನಿಂದ ತೂಗುವಾಗಿನ ಅನುಭವ. ವಿಮಾನ ಹಂತ-ಹಂತವಾಗಿ ಕೆಳಗಿಳಿಯುತ್ತಾ ಕ್ರಮವಾಗಿ ವೇಗ ತಗ್ಗಿಸುತ್ತ ಸಾಗುತ್ತಿತ್ತು. ಒಮ್ಮೆ ಟಿ.ವಿ ಪರದೆ; ಇನ್ನೊಮ್ಮೆ ಕಿಟಕಿಯಿಂದ ಹೊರಗೆ ನೋಟ ಬದಲಾಯಿಸುತ್ತಲೆ ಇದ್ದೆ. ಮತ್ತಷ್ಟು ಭರದಿಂದ ಕೆಳಗಿಳಿಯುವ ಅನುಭವ. ವಿಮಾನ ನಿಲ್ದಾಣ ಸಮೀಪಿಸುತ್ತಿರುವ ಮಾಹಿತಿ… ಹೊರ ನೋಡಿದವಳೆ ಮೊಬೈಲ್ ಕ್ಯಾಮೆರಾ ತೆಗೆದು ಟರ್ಕಿ ವಿಮಾನ ನಿಲ್ದಾಣದ ವಿಹಂಗಮ ನೋಟವನ್ನು ಸೆರೆಹಿಡಿದು ಮೊಬೈಲ್ ಆಫ್ ಮಾಡಿಟ್ಟೆ.
(ಮುಂದುವರಿಯುವುದು…)

‍ಲೇಖಕರು G

6 March, 2014

ನಿಮಗೆ ಇವೂ ಇಷ್ಟವಾಗಬಹುದು…

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸನ್ನಿಧಿಯಲ್ಲಿ

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮತ್ತೆ ಮತ್ತೆ ಅದೇ ಜಾಗದಲ್ಲಿ ನಿಲ್ಲುತ್ತಿತ್ತು ಖಾಲಿ ಬೈಕ್

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading