ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೈಲ್ ನದಿಯ ಮಡಿಲಲ್ಲಿ : ಅಲೆಕ್ಸಾಂಡ್ರಿಯಾದಲ್ಲಿ…

(ಇಲ್ಲಿಯವರೆಗೆ)

21ರ ಬೆಳಿಗ್ಗೆ ಕೋಚ್ ಮೂಲಕ ಅಲೆಗ್ಸಾಂಡ್ರಿಯಾ ನಗರಕ್ಕೆ ಹೋಗುವುದಿತ್ತು. ಹಾಗಾಗಿ 5.30ಕ್ಕೆ ವೆಕ್ ಆಪ್ ಕಾಲ್, 6.30ಕ್ಕೆ ಟಿಫಿನ್, 7.30ಕ್ಕೆ ಲಗೇಜ್ ಸಮೇತ ಕೆಳಗಿಳಿದೆವು. ಮೊದಲೇ ಬಂದಿದ್ದವರಲ್ಲಿ ಕೆಲವರು ರಿಸಪ್ಶನ್ ಕೌಂಟಿರಿನಿಂದಲೇ ಕರೆ ಮಾಡುತ್ತಿದ್ದರು. ನಾನು ನನ್ನ ಸಂಗಾತಿಗೆ ಕರೆ ಮಾಡಿದೆ. ಅಲ್ಲಿಂದ ಕೋಚ್ ಮೂಲಕ ಉತ್ತರ ದಿಕ್ಕಿಗೆ ಮೆಟರೆನಿಯನ್ ಸಮುದ್ರದತ್ತ ಪ್ರಯಾಣ ಆರಂಭವಾಯಿತು. ನಮ್ಮ ಪಯಣ ಮೆಡಿಟರೆನಿಯನ್ ತೀರದ ಅಲೆಝ್ಸಾಂಡ್ರಿಯಾ ನಗರದತ್ತ ಸಾಗಿತ್ತು.
ಅಲೆಗ್ಸಾಂಡ್ರಿಯಾ ಇಜಿಪ್ತಿನ ದೊಡ್ಡ ವ್ಯಾಪಾರ ಕೇಂದ್ರ ಹಾಗೂ ಕೈಗಾರಿಕಾ ಕೇಂದ್ರವೂ ಹೌದು. ದೇಶದ ಎರಡನೆಯ ದೊಡ್ಡ ಪಟ್ಟಣ ಮತ್ತು ಬಂದರು. ಈ ದೇಶದ ರಫ್ತು ಈ ಬಂದರಿನ ಮೂಲಕವೇ ನಡೆಯುತ್ತದೆ. ಈ ಅಲೆಗ್ಸಾಂಡ್ರಿಯ ಬಂದರಿನ ಪೂರ್ವಕಥೆ ಕುತೂಹಲಕರ. ಸುಮಾರು ಕ್ರಿ.ಪೂ 332ರಲ್ಲಿ ಅಲೆಗ್ಸಾಂಡರ್ ಇಜಿಪ್ತನ್ನು ಗೆದ್ದ. ಯುರೋಪಿನ ಜೊತೆ ಸಂಪರ್ಕ ಸಾಧಿಸುವಂಥ ಬಂದರನ್ನು ನಿರ್ಮಿಸುವ ಆಶಯದಿಂದ ನೈಲ್ ನದಿಯ ಮೇಲೆ ಪ್ರಯಾಣ ಬೆಳೆಸಿದ. ಮೆಡಿಟರೆನಿಯನ್ ಸಮುದ್ರಕ್ಕೂ ಮಾರಿಯೋಟಸ್ ಎಂಬ ಸರೋವರಕ್ಕೂ ನಡುವೆ ಇರುವ ನಡುಗಡ್ಡೆಯನ್ನು ತಲುಪಿದ ಮತ್ತು ಅಲ್ಲಿಯೇ ಬಂದರು ನಿರ್ಮಿಸಿದ.(ಈತನ ನಂತರ ಸುಮಾರು ಕ್ರಿ.ಪೂ. 285ರಲ್ಲಿ ಎರಡನೆಯ ಟಾಲಮಿ ಆಳ್ವಿಕೆಯಲ್ಲಿ ಇದರ ಬಳಿ ಇರುವ ಫೇರೊನ ದ್ವೀಪದಲ್ಲಿ ದೀಪಗೋಪುರ ನಿರ್ಮಿಸಿದರು. 91.5 ಮೀ ಎತ್ತರದ ಗೋಪುರ, ಕೆಳಗೆ 30.5 ಮೀ ಎತ್ತರದ ಗದ್ದುಗೆಯ ಮೇಲೆ ನಿಂತಿತು. ಇದರ ಒಟ್ಟು ಎತ್ತರ 122 ಮೀ. 48 ಕಿ.ಮೀ ಪ್ರದೇಶ ಪರಿಸರಕ್ಕೆ ಬೆಳಕು ತೋರುವ ಈ ದೀಪ ಗೋಪುರ ಪ್ರಪಂಚದಲ್ಲಿಯೇ ಮೊಟ್ಟ ಮೊದಲನೆಯದು ಹಾಗೂ ಪುರಾತನ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿತ್ತು. 15 ಶತಮಾನಗಳ ಕಾಲ ಜಲಮಾರ್ಗಿಗಳಿಗೆ ದಾರೀ ದೀಪವಾಗಿದ್ದ ಇದು ಕ್ರಿ.ಪೂ 955ರಲ್ಲಿ ಆದ ಭೂಕಂಪದಿಂದ ಶಿಥಿಲಗೊಂಡು 1300ರ ಹೊತ್ತಿಗೆ ಸಂಪೂರ್ಣ ನಾಶವಾಯಿತು.)* ಅದೇ ಬಂದರು ಇಂದಿಗೂ ಪ್ರಸ್ತುತ. ಇಂಥ ಪ್ರಾಚೀನ ಮಹತ್ವವುಳ್ಳ ಮಹಾನಗರ ನೋಡಲು ಕಾತುರದಿಂದ ಹೊರಟಿದ್ದೆವು. ಬಿಸಿಲಿನ ಧಗೆ, ಧೂಳು…A/C ಕೋಚ್ ಇದ್ದುದ್ದಕ್ಕೆ ಸದ್ಯ ತೊಂದರೆ ಇರಲಿಲ್ಲವಾದರೂ ಹಿತಕರ ಎನಿಸುತ್ತಿರಲಿಲ್ಲ. ಚಂದ್ರ ಬಿಸಿಲಪುರದಲ್ಲಿ ಮಸುಕಾಗಿದ್ದ.
ಅಲೆಗ್ಸಾಂಡ್ರಿಯಾದ ಮೊದಲ ಹೆಸರು ಸಿಕಂದರಿಯಾ. ಗ್ರೀಕ್ ಅಕ್ಷರಮಾಲೆಯಲ್ಲಿ `ಸ’ ಅಕ್ಷರ ಇಲ್ಲ. ಹೀಗಾಗಿ ಇಕಂದರಿಯಾ ಉಚ್ಚಾರಣೆ ಮುಂದೆ ಅಲೆಗ್ಸಾಂಡ್ರಿಯಾ ಆಯಿತಂತೆ. (ಸಿಂದ್>ಹಿಂದ್>ಇಂಡಸ್ ಆದ ಹಾಗೆ). ಅಲೆಗ್ಸಾಂಡ್ರಿಯಾದ ದಾರಿ ಚತುಷ್ಟಥ. ಎಡ ಬಲದಾರಿಗಳ ನಡುವೆ ಹೂ ಗಿಡಗಳು. ಹೆಚ್ಚಾಗಿದ್ದದ್ದು ಕೆಂಪು ಪಕಳೆ ದಾಸವಾಳ, ಕೆಂಪು ಚುಂಗಿನ ತೆನೆಯಂಥ ಹೂಗಿಡಗಳು ಮತ್ತು ಗುಲ್ಮೊಹರ್ ಹೂಗಿಡಗಳು. ಗುಲ್ಮೊಹರ್ ಗಿಡಗಳಿಗೆ ಸಂಕೇಶ್ವರದ ಭಾಗದಲ್ಲಿ `ಸಂಕೇಶ್ವರದ ಹೂವಿನ ಗಿಡಗಳು’ ಎನ್ನುತ್ತಾರೆ. ನಮ್ಮೂರ ಹೆಸರಿನ ಹೂಗಿಡಗಳು ಇಲ್ಲಿವೆಯಲ್ಲ ಎಂದು ತುಂಬ ಖುಷಿ ಪಟ್ಟೆ.
ಕೋಚ್ ಹೊರಟಿದ್ದ ದಾರಿ ಬದಿಯ ಹೊಲಗಳಲ್ಲಿ ಹೆಚ್ಚಾಗಿ ಕಂಡ ಬೆಳೆಗಳೆಂದರೆ ಗೋವಿನ ಜೋಳ, ಕಬ್ಬು, ಶೇಂಗಾ, ದ್ರಾಕ್ಷಿ, ಟೊಮೆಟೋ, ಚಕೋತ, ದಾಳಿಂಬೆ, ಮಾವು, ಮೋಸಂಬಿ, ಚೆರ್ರಿ. ಯಾವ ಬೆಳೆಯೇ ಇರಲಿ ಹೊಲದ ಒಡ್ಡುಗಳಲ್ಲಿ ಖರ್ಜೂರ ಮರಗಳಂತೂ ಸರ್ವೆ ಸಾಮಾನ್ಯ. ಹೆಚ್ಚಾಗಿ ತುಂತುರು (ಹನಿ) ನೀರಾವರಿ. ಕಂಡು ಬರುತ್ತಿತ್ತು. ಬೆಳಿಗ್ಗೆ ಬೇಗನೆ ಬಿಟ್ಟಿದ್ದೆವಾದ್ದರಿಂದ ವಾಶ್ರೂಂಗಾಗಿ ವೆಟ್ ಎಲಿರಾ ನಗರದಂಚಿನ `ಮಾಸ್ಟರ್ ಹೋಟೆಲ್’ ಬಳಿ ನಿಂತರೂ ದುಡ್ಡು ಕೊಟ್ಟು ಉಪಯೋಗಿಸುವ ಶೌಚಾಲಯ ಉಪಯೋಗಿಸಬೇಕಾಯಿತು. ಅಲೆಗ್ಸಾಂಡ್ರಿಯಾ ಸಮೀಪಿಸುತ್ತಿದ್ದಂತೆ ದಾರಿಯುದ್ದಕ್ಕೂ ಕೈಗಾರಿಕೆಗಳದ್ದೇ ನೋಟ. ಅಲ್ಲಿಯ ಕಾರ್ಖಾನೆಗಳ ಚಿಮಣಿಗಳು ನಮ್ಮಲ್ಲಿಯವಕ್ಕಿಂತ ಎರಡು-ಮೂರು ಪಟ್ಟು ದೊಡ್ಡವು. ಅಲ್ಲಲ್ಲಿ ಕೋಳಿ ಸಾಕಾಣಿಕಾ ಕೇಂದ್ರಗಳು ಮತ್ತು ಆಯಿಲ್ ಬಂಕ್ ಗಳು ಕಂಡು ಬಂದವು. ಅಲೆಗ್ಸಾಂಡ್ರಿಯಾ ಟೋಲ್ಗೇಟ್ ಹತ್ತಿರ ಟೋಲ್ ಕೊಡಲು ಕೋಚ್ ನಿಂತಿತು. ದಾರಿಯ ಆಚೆ ಈಚೆ ಹೊಲಗಳಿದ್ದುದ್ದರಿಂದ ಹಕ್ಕಿ-ಪಕ್ಕಿಗಳು ಸರ್ವೆ ಸಾಮಾನ್ಯ. ಅಲ್ಲೊಂದು ಗುಬ್ಬಿಗಳ ದಂಡೇ ಕುಳಿತು ಕಾಳುಗಳನ್ನು ಹೆಕ್ಕುತ್ತಿದ್ದವು. ನಾಶಿ, ಬಿಳಿ ಬಣ್ಣದ ಅಲ್ಲಲ್ಲಿ ಕಪ್ಪು ಚುಕ್ಕೆಗಳಿರುವ ಪುಟ್ಟ ಗುಬ್ಬಿಗಳು. ಅಪ್ಪಟ ದೇಸಿ ಹಕ್ಕಿಗಳು. ನಾನು ಚಿಕ್ಕವಳಿದ್ದಾಗ ಸಂಕೇಶ್ವರದ ಸಕ್ಕರೆ ಕಾರ್ಖಾನೆಯ ಕಾಲೋನಿಯಲ್ಲಿರಬೇಕಾದರೆ ಇಲೆಕ್ಟ್ರಿಕಲ್ ತಂತಿಗಳ ಮೇಲೆ ಹಿಂಡು ಹಿಂಡಾಗಿ ಕುಳಿತಿರುತ್ತಿದ್ದ ಗುಬ್ಬಿಗಳೂ ಹೀಗೆ ಇದ್ದವು. ಕಾಳು ಒಣಗಲು ಹಾಕಿದಾಗ, ಮತ್ತು ಕಾಲೋನಿಯ ಸುತ್ತಲಿನ ಪ್ರದೇಶದಲ್ಲಿದ್ದ ಕಬ್ಬು, ಗೋವಿನ ಜೋಳದ ಹೊಲಗಳಲ್ಲಿ ಹಿಂಡಾಗಿಯೇ ದಾಳಿ ಇಡುತ್ತಿದ್ದವು. ಕಲ್ಲು ಒಗೆದಾಗ ಹಿಂಡಿಗೆ ಹಿಂಡೆ ಬುರ್ರ್… ಎಂದು ಹಾರುತ್ತಿದ್ದವು. ಅಂಥದೇ ಪ್ರಸಂಗ. ಹಿಂಡು ಗುಬ್ಬಿಗಳು ಚುಟುಕು ಚುಂಚುಗಳಿಂದ ಪಕಪಕನೆ ಹೆಕ್ಕುತ್ತಿದ್ದವು. ಹಾರಿಸಿಬಿಡಲೆ ಎಂದುಕೊಳ್ಳುತ್ತಿರುವಷ್ಟರಲ್ಲಿ ಕೋಚ್ ಹೊರಟೇ ಬಿಟ್ಟಿತು.
ಅಲೆಗ್ಸಾಂಡ್ರಿಯಾ ಸಮೀಪಿಸುತ್ತಿದ್ದಂತೆ ಮಣ್ಣು, ಧೂಳು ಕಡಿಮೆಯಾಯಿತು. ಸರಿಯಾಗಿ ಮೂರುವರೆ ಗಂಟೆ ಪ್ರಯಾಣ. ಈ ನಗರ ಹೆಚ್ಚು ಕಡಿಮೆ ಮುಂಬಯಿ ನಗರದಂತೆ. ಗಗನ ಚುಂಬಿ ಕಟ್ಟಡಗಳು, ಹತ್ತರಿಂದ ಇಪ್ಪತ್ತೈದು ಅಂತಸ್ತಿನವರೆಗೂ ಏರಿದ ಅಪಾರ್ಟ್ ಮೆಂಟ್ ಗಳು. ಕತ್ತೆತ್ತಿ ನೋಡಿದರೆ ಕಿಟಕಿಗಳ ಹೊರಗಡೆ ಬಳ್ಳೊಳ್ಳಿ ಸೂಡುಗಳನ್ನು, ಇನ್ನೂ ಕೆಲವು ಕಡೆ ಉತ್ತತ್ತಿ ಸೂಡುಗಳನ್ನು ನೇತು ಹಾಕಿದ್ದು ಕಂಡು ಮಂದಹಾಸ ಮೂಡಿತು. ಕಟ್ಟಡ ಎಷ್ಟು ಎತ್ತರವಿದ್ದರೇನು? ಹೊಟ್ಟೆಗೆ ತಿನ್ನೋದು ಅನ್ನವನ್ನೇ ಅಲ್ಲವೇ? ಅದೇ ಅಲ್ಲವೆ ಬದುಕಿನ ಮೂಲ ಅಗತ್ಯ?
ಕೊಮ್-ಎಲ್-ಶೋಕಾಫಾ ಸ್ಮಾರಕಗಳು
(Kom-El-Shokafa Monuments)

ಅಲೆಗ್ಸಾಂಡ್ರಿಯಾದಲ್ಲಿ ರೋಮನ್ರ ಆಳ್ವಿಕೆಯಲ್ಲಿ ನಿರ್ಮಿಸಲಾದ ಜಿಯೋಸ್, ಅಪೋಲೊ ಮತ್ತು ಸಿರಾಬೆಸ್ ಎಂಬ ದೇವತಾ ಮೂರ್ತಿಗಳನ್ನು ನೋಡಿದೆವು. ಇವು ಗ್ರೀಕ್ ರ ಕಾಲದ ನಿರ್ಮಿತಿಗಳಂತೆ. ಇವುಗಳನ್ನು ಕ್ರಿ.ಪೂ 1800 ರಲ್ಲಿ ಶೋಧಿಸಲಾಗಿದೆ. ಇಲ್ಲಿ ನೆಲವನ್ನೇ ಕೊರೆದು ನೆಲಗರ್ಭದೊಳಗೆ ಗೋರಿಗಳನ್ನು ಮಾಡಿಕೊಂಡಿದ್ದಾರೆ. ಕೂಡಲ ಸಂಗಮದಲ್ಲಿ ಬಸವಣ್ಣನವರ ಐಕ್ಯ ಸ್ಥಳದವರೆಗೆ ಹೋಗಲು ಸುತ್ತುತ್ತಾ ಸುತ್ತುತ್ತಾ ಕೆಳಗಿಳಿದು ಬರುವ ದಾರಿಯಂತೆಯೇ ಇಲ್ಲಿಯೂ ಕಡಿದಾದ ದಾರಿಯಲ್ಲಿ, ನೆಲದಲ್ಲಿಯೇ ಕಡಿದ ಮೆಟ್ಟಿಲುಗಳ ಮೂಲಕ ಬಹು ಹಂತಗಳನ್ನು ಇಳಿದು ಹೋಗಬೇಕು. ಇದಕ್ಕೆ ಸ್ಪೈರಲ್ ಸ್ಟೇರ್ಕೇಸ್ ಎನ್ನುತ್ತಾರೆ. ಬಹುಹಂತಗಳನ್ನು ಇಳಿದಂತೆ ಸುಮಾರು 6 ಹಂತಗಳಲ್ಲಿ `ಕುಟುಂಬ ಗೋರಿ’ ಗಳಿದ್ದವು. ಅಂದರೆ ತಂದೆ, ತಾಯಿ, ಮಕ್ಕಳು, ಮೊಮ್ಮಕ್ಕಳು, ಸಂಬಂಧಿಕರು ಅಂತೂ ಕುಟುಂಬದಲ್ಲಿ ಇರುವವರೆಲ್ಲರ ಗೋರಿಗಳು ಒಂದೇ ಹಂತ (ಕೋಣೆ) ದಲ್ಲಿ ಇರುತ್ತಿದ್ದವು. ಒಂದೊಂದು ಹಂತದಲ್ಲಿ ಗೋಡೆಯನ್ನು ಕೆತ್ತಿ, ಕಡೆದು, ಚೌಕಾಕಾರದಲ್ಲಿ ಮೇಲೆ ನಾಲ್ಕು ಕೆಳಗೆ ನಾಲ್ಕು, ಕೆಲವು ಕಡೆಗೆ ಆರಾರು ಗೂಡುಗಳನ್ನು ಮಾಡಲಾಗಿತ್ತು. 7 ರಿಂದ 8 ಅಡಿ ಉದ್ದದ ಇವುಗಳಿಗೆ ಚೌಕಾಕಾರದ ದಪ್ಪನೆಯ ಕೆಂಪು ಕಲ್ಲು ಚಪ್ಪಡಿಯೇ ಬಾಗಿಲು. ಸನ್ನೆಯಿಂದ ಎತ್ತಿ ಆ ಗುಹೆಗೆ ಹೊಂದಿಸಿದರೆ ಅದಲ್ಲೆ ಭದ್ರವಾಗುತ್ತಿತ್ತು. ಸಂಸ್ಕರಣಗೊಳಿಸಿದ ಮಮ್ಮಿಗಳನ್ನು ತಂದು ಈ ಒಂದು ಗೂಡಿನೊಳಗೆ ಇಡಲಾಗುತ್ತಿತ್ತಂತೆ.
ಈ ಗೂಡುಗಳ ದ್ವಾರಪಟ್ಟಿಕೆ ಅಂದರೆ ಚೌಕಟ್ಟುಗಳನ್ನು ಕೆತ್ತಿದ ಶಿಲಾಸ್ತಂಭಗಳಿಂದ, ಮೂರ್ತಿಗಳಿಂದ, ಶವ ಪೆಟ್ಟಿಗೆಯಿಂದೊಡಗೂಡಿ, ರೋಮನೋ ಇಜಿಪ್ತ ಧಾರ್ಮಿಕ ಸಂಕೇತಗಳಿಂದ ಶೃಂಗರಿಸಲಾಗಿದೆ. ಶವ ಮಮ್ಮೀಕರಣದ ವಿಧಿ ವಿಧಾನ ಮುಗಿದು ಹೂತಾದ (?) ಮೇಲೆ ಎಲ್ಲರಿಗೂ ಕುಳಿತು ಊಟ ಮಾಡಲು, ಹಿಂದೆ ಬಾಕ್ ನಂತೆ, ಮುಂದೆ ಟೇಬಲ್ ನಂತೆ, ಅರ್ಧ ಗೋಲಾಕೃತಿಯಲ್ಲಿ ಕಡೆಯಲಾದ `ಬಾಂಕ್ವೆಟ್ ಹಾಲ್’ ಕೂಡ ಇಲ್ಲಿದೆ. ಅಲ್ಲಿ ಕುಳಿತು ಊಟ ಮಾಡಿ, ಕೊನೆಗೆ ಎಲ್ಲರೂ ಮೇಲೇರಿ ಬರುತ್ತಿದ್ದರಂತೆ. ಇದು ಸುಮಾರು 60 ಅಡಿ ಆಳವಾಗಿತ್ತು. ಆ ಆಳ ನೆಲದೊಳಗಿನ ನೀರಿನ ಮಟ್ಟಕ್ಕೆ ಹೋಗಿ ತಲುಪಿತ್ತು. ಕೊನೆಯ ಹಂತದಲ್ಲಿ ಮೊಳಕಾಲವರೆಗೂ ನೀರಿತ್ತು. ವಿಶೇಷವೆಂದರೆ ನೀರು ಹರಿಯುತ್ತಿತ್ತು. ಅದರ ಮೇಲೆ ದೊಡ್ಡ ದೊಡ್ಡ ಚಪ್ಪಟೆ ಕಲ್ಲುಗಳನ್ನು ಹಾಕಿ, ಉದ್ದ, ಅಗಲ ಕಟ್ಟಿಗೆ ಪಟ್ಟಿಗಳನ್ನು ಇಡಲಾಗಿದೆ. ಆದಾಗ್ಯೂ ಪಾದ ಮುಳುಗಿಸಿಕೊಂಡು, ಅದರ ಮೇಲಿನಿಂದ ದೊಂಬರಾಟ ಮಾಡುತ್ತಾ ಸಾಗಿ, ಹೋಗಿ ನೋಡಬೇಕು. ಒಳಗೆ ವಾತಾನುಕೂಲದಂತೆ ತಂಪಾಗಿತ್ತು. ಒಬ್ಬರ ಹಿಂದೆ ಇನ್ನೊಬ್ಬರು ಹೋಗಬೇಕಾಗಿರುವುದರಿಂದ ಇದರ ಬಗೆಗೆ ಹೆಚ್ಚಿನ ಮಾಹಿತಿ ಕೇಳಿಸಿಕೊಳ್ಳಲಾಗಲಿಲ್ಲ.
ಅಮುದ್ ಎಲ್ ಸವಾರಿ(Amud-El-Sawari)


ಇದೊಂದು ಮಹಾಸ್ತಂಭ. ರಾಜಕೀಯ ಮುತ್ಸದ್ಧಿ ಹಾಗೂ ಮಹಾ ಸೇನಾಧಿಪತಿಯಾದ ಪೋಂಪಿಸ್ ನ ವಿಜಯೋತ್ಸವದ ಪ್ರತೀಕವಾಗಿ ಈ ದೈತ್ಯ ಕಂಬವನ್ನು ನಿಲ್ಲಿಸಲಾಗಿದೆ. ಈತನ ಆಳ್ವಿಕೆ ಕಾಲ ಕ್ರಿ.ಪೂ 106, ಸೆಪ್ಟೆಂಬರ್ 29 ರಿಂದ ಕ್ರಿ. ಪೂ 48 ಸೆಪ್ಟೆಂಬರ್ 29 ರವರೆಗೆ. ಪ್ರಾಚೀನ ಕಾಲದ, ಎತ್ತರದ ಮಾದರಿ ಪರ್ವತದಲ್ಲಿರುವ ಇದು ಅಲೆಗ್ಸಾಂಡ್ರಿಯಾ ನಗರದ ಸ್ಮಶಾನಕ್ಕೆ ಹೊಂದಿಕೊಂಡಂತಿದ್ದು ಮೂಲತಃ ದೇವಾಲಯದ ಒಂದು ಭಾಗವಾಗಿತ್ತು. ಇದರ ಕಂಬದ ಎತ್ತರ 30 ಮೀಟರ್ (90 ಅಡಿ) ಎತ್ತರವಾಗಿದ್ದರೆ, ಪೀಠ ಭಾಗ 27 ಮೀ (81 ಅಡಿ) ಎತ್ತರವಾಗಿದೆ. ತಳಭಾಗದಲ್ಲಿ ಇದರ ವ್ಯಾಸ 27 ಮೀಟರ್ ಗಳಾದರೆ, ತುದಿ ಭಾಗ 24 ಮೀಟರ್ ಇದೆ. ಇದು ಸುಮಾರು 396 ಟನ್ ತೂಕದ ಈ ಏಕಶಿಲಾ ಸ್ತಂಭದ ಫನ್ ಪರಿಮಾಣ ((Cubic Meter) 132 ಮೀಟರುಗಳು. ಇಂಥ ಹಲವಾರು ಸ್ತಂಭಗಳು ಅಲ್ಲಿದ್ದುವಂತೆ. ಈಗ ಉಳಿದಿರುವುದು ಒಂದೇ ಒಂದು ಸ್ತಂಭ ಮಾತ್ರ.
ಅಲ್ಲಿಂದ ಹೋಗಬೇಕಾದರೆ ಎದುರಿಗೆ ಮೆಡಿಟರೆನಿಯನ್ ಸಮುದ್ರ ಕಾಣತೊಡಗಿತು. ಅದರ ದಂಡೆಗುಂಟ ಹಾಯ್ದು ನೇರವಾಗಿ ಬಂದದ್ದು ಜಗದ್ವಿಖ್ಯಾತ `ಅಲೆಗ್ಸಾಂಡರ ಗ್ರಂಥಾಲಯ’ ಕ್ಕೆ. ಕ್ರಿ.ಪೂ 322ರಲ್ಲಿ ಅಲೆಗ್ಸಾಂಡರ್ ಇಜಿಪ್ತನ್ನು ಗೆದ್ದು, ಆಳ್ವಿಕೆ ನಡೆಸಿದ್ದಾಗ ಆತ ಗ್ರಂಥಾಲಯ ಕಟ್ಟಿಸಿದ್ದನಂತೆ. ಆದರೆ ದಾಳಿಕೋರರ ದಾಳಿಗೆ ಬಲಿಯಾಗಿ ಬಹುಭಾಗ ನಾಶವಾಯಿತು. ಮುಂದೆ ಅಮ್ರ್ ಎಂಬಾತ ಅಲೆಗ್ಸಾಂಡ್ರಿಯ ಕೈವಶ ಮಾಡಿಕೊಂಡಾಗ ಉಳಿದ ಭಾಗವನ್ನೂ ನಾಶಮಾಡಿದನಂತೆ. ಆದರೆ ಅದೇ ಸ್ಥಳದಲ್ಲಿಯೇ ಈಗ ಇರುವ ಗ್ರಂಥಾಲಯ ಜಗತ್ತಿನಲ್ಲಿ ಅತೀ ಪ್ರಾಚೀನ ಗ್ರಂಥಾಲಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಇಲ್ಲಿ ಐದು ಲಕ್ಷಕ್ಕೂ ಮಿಕ್ಕಿ `ಪಪಿರಸ್’ ಸುರುಳಿಗಳು ಹಾಗೂ ಪೆರ್ಗೆಮಮ್ ನಲ್ಲಿ 2 ಲಕ್ಷಕ್ಕೂ ಮಿಕ್ಕಿ ಗ್ರಂಥಗಳು ಸಂಗ್ರಹವಾಗಿವೆ. ಈಗ ಆಧುನಿಕ ಗ್ರಂಥಗಳಂತೂ ಅಸಂಖ್ಯ. ಈ ಗ್ರಂಥಾಲಯದ ಕಟ್ಟಡದ ಮುಂದಿನ ಭಾಗ, ಆಚೆ, ಈಚೆ ಇರುವ ಸುಮಾರು 10 ಅಡಿ ಎತ್ತರದ ಬೃಹತ್ ಸ್ತಂಭಗಳ ಮೇಲೆ, ಅಖಂಡ ಶಿಲೆಯಲ್ಲಿ ಚಿತ್ರಲಿಪಿ ಕಡೆದ ಗೋಡೆ ಇದೆ. ಅಸಂಖ್ಯ ವಿದ್ಯಾರ್ಥಿಗಳು ಅಲ್ಲಿ ಕುಳಿತು ಅಧ್ಯಯನದಲ್ಲಿ ಮಗ್ನರಾಗಿದ್ದರು. ಓದುವ ವಿಭಾಗಕ್ಕೆ ನಾವು ಹೋಗಲಿಲ್ಲ. ಆದರೆ ಶಕುಂತಲಾ ಬಲಿಯಾರ್ಸಿಂಗ್ ಕೇಳಲೆ ಇಲ್ಲ. `ಲೈಬ್ರರಿ ನೋಡಲು ಅಲ್ಲ ಓದಲು ಬರಬೇಕು. ಓದಿ ಅನುಭವಿಸಬೇಕು. ನಾನು ಹೋಗ್ತಿನಿ ಪುಸ್ತಕ ಕೊಂಡ್ಕೊಬೇಕು.’ ಎಂದು ಒಬ್ಬರೆ ಹೋಗಿ ಹತ್ತು ಪುಸ್ತಕ ಖರೀದಿಸಿಕೊಂಡೇ ಬಂದರು. ಗ್ರಂಥಾಲಯ ಆವರಣದಲ್ಲಿ ತೋಟ ಆಧುನಿಕ ತಂತ್ರಜ್ಞಾನದಿಂದ ನಿರ್ಮಿತವಾಗಿ ನಯನ ಮನೋಹರವಾಗಿತ್ತು.
ನಾನು ಆ ದಿನ ಕಡು ಗುಲಾಬಿ ಬಣ್ಣದ ಬಿಳಿಯಂಚಿನ ಸೀರೆ ಉಟ್ಟಿದ್ದೆ. ಈ ವೈರುಧ್ಯ ಬಣ್ಣಗಳಿಂದ ಸೀರೆ ತುಂಬಾ ಆಕರ್ಷಕವಾಗಿತ್ತು. ಇದು ಅಲ್ಲಿ ಬಂದ ಜನರ ಗಮನ ಕೂಡಾ ಸೆಳೆದಿತ್ತು. ಒಂದು ಮಗುವಿನೊಂದಿಗೆ ಬಂದ ಜೋಡಿಯಲ್ಲಿ, ಪುರುಷ ಮುಂದೆ ಬಂದು ತನ್ನ ಮಗುವಿನೊಂದಿಗೆ ಒಂದು ಫೋಟೋ ತೆಗೆಯಿಸಿಕೊಳ್ಳಲು ವಿನಂತಿಸಿದ. `ಯಾಕಿಲ್ಲ’ ಎಂದು ತುಂಬ ಖುಷಿಯಿಂದ ಆ 4 ವರ್ಷದ ಮಗುವನ್ನು ಎತ್ತಿಕೊಳ್ಳಲು ಹೋದೆ. ಅಬ್ಬಾ! ಹೆಬ್ಬಂಡೆ ಭಾರ. ಅದೇನು ತಿನಿಸಿದ್ದರೋ? ಬೆನ್ನು ಹುರಿ ಚಳಕ್ ಎಂದಿತು. ಹಾಗೇ ಮೆಲ್ಲಗೆ ಎತ್ತಿಕೊಂಡು ಮಗುವಿನೊಂದಿಗೆ, ಅವನ ಪತ್ನಿಯೊಂದಿಗೆ ಫೋಟೋ ತೆಗೆಯಿಸಿಕೊಂಡೆ. ಮತ್ತೊಂದು ಜೋಡಿ ಬಂತು. ಮತ್ತೇ ಫೋಟೋ. ನಮ್ಮ ಸೀರೆ ಮತ್ತು ಕುಂಕುಮಗಳು ಭಾರತೀಯ ಕುರುಹಾಗಿದ್ದವು. ಆ ಯುವತಿ ಉರ್ದುವಿನಲ್ಲಿ ಕೇಳಿದಳು. `ಭಾರತದಿಂದ ಬಂದಿದ್ದಿರಾ?’ ಎಂದು. `ಈ ಉಡುಗೆ ಚೆನ್ನಾಗಿದೆ’ ಎಂದೂ ಹೇಳಿದಳು. `ಧನ್ಯವಾದ’ ಹೇಳಿ ತಿರುಗಿದರೆ, ಎಲ್ಲ ಸಂಗಡಿಗರ ಗುಂಪು `ಏಯ್ ವಿದ್ಯಾನ ಡಿಮ್ಯಾಂಡ್ ಭಾಳ ಆತಪಾ’ ಅಂದ್ರೆ, ಲಾರಿಸರ್ `ನಯಾ ಫ್ರೆಂಡ್ಶಿಪ್ ಹೋಗಯಾ?’ ಎಂದು ಕೇಳಿದರು. ನಾನಂತೂ ಸೀರೆ ಮತ್ತು ಕುಂಕುಮ ನೆನೆದು ಅಭಿಮಾನದಿಂದ ಬೀಗುತ್ತಿದ್ದೆ. ಅಲ್ಲಿಯೇ ಉದ್ಯಾನವನದಲ್ಲಿ, ಅಲೆಗ್ಸಾಂಡರ್ ಮೂರ್ತಿ ಎದುರು ಫೋಟೋಗಳಾದವು.
ಹೊಟ್ಟೆ ಚುರುಗುಟ್ಟುತ್ತಿದ್ದವು. `ಹೋಟೆಲ್ ಅಲೆಗ್ಸಾಂಡರ್’ನಲ್ಲಿ ಊಟ ಮಾಡಿದೆವು. ಎಲ್ಲಿ ಹೋದರೂ ಅದೇ ರೀತಿಯ ಊಟ, ಇಲ್ಲಿ ಫೀಝಾ ಒಂದು ಸೇರ್ಪಡೆಯಾಗಿತ್ತು. ಅನ್ನದೊಂದಿಗೆ ಕೋಸಂಬರಿ ಮತ್ತು ಹಣ್ಣುಗಳನ್ನು ತಿಂದು ಎದ್ದೆವು. ಸಮಯ 3.00 ಗಂಟೆ. ಅಲ್ಲಿಂದ ಮೆಟರೆನಿಯನ್ ಸಮುದ್ರದ ದಂಡೆಗುಂಟ ಕೋಚ್ ಸಾಗುತ್ತಿತ್ತು. ಸುಮಾರು ಒಂದು ಗಂಟೆ ಸಮುದ್ರ ದಡದ ಮುಖ್ಯರಸ್ತೆ ಮೇಲೆ ಕೋಚ್ ಸಾಗುತ್ತಿರಬೇಕಾದರೆ ಅಷ್ಟೂ ಉದ್ದದವರೆಗೂ ಬೀಚ್ ಮೇಲೆ ಜನಜಾತ್ರೆ. ಜಾತ್ರೆ ಅಂದರೆ ಜಾತ್ರೆಯೆ. ಅಷ್ಟೊಂದು ಜನನಿಭೀಡವಾಗಿತ್ತು. ಜನವಿಲ್ಲದ ದಡ ಒಂದಿಂಚೂ ಕಾಣಲಿಲ್ಲ. ಹೀಗಾಗಿ, ನೀಲಿ, ಹಸಿರು ಮಿಶ್ರಿತ ಸಮುದ್ರದಂಚಿನ ಬಿಳಿಯ ತೆರೆಗಳಂಚಿಗೆ, ಜನರಿರುವ ಜೀವಿಗಳಂಚೊಂದು ನಿರ್ಮಾಣವಾಗಿತ್ತು. ಕೆಂಪು ಮತ್ತು ನೀಲಿಬಣ್ಣದ, ಉಸುಕಿನಲ್ಲಿ ಹುದುಗಿಸಿ ನಿಲ್ಲಿಸಿದ ನೆರಳೀಯುವ ಛತ್ರಿಗಳು ಒಂದು ರೀತಿಯ ಚಿತ್ತಾರವನ್ನೇ ಸೃಷ್ಟಿಸಿದ್ದವು.
ಅಲೆಗ್ಸಾಂಡ್ರಿಯ ನಗರದ ಒಂದು ಭಾಗದಲ್ಲಿ ಸಮುದ್ರ ತಳ್ಳಿಕೊಂಡು ಬಂದಂತೆ ಗೋಲಾಕಾರದಲ್ಲಿ ನಗರದ ಒಳಹರಿದಿದೆ. ಆ ಒಳ ಒತ್ತಿನ ಮೇಲೆ ಸೇತುವೆ. ಅಲ್ಲಿ ನಮ್ಮ ಕೋಚ್ ಹಾಯ್ದು ಹೋಗುತ್ತಿತ್ತು. ಅದು ಸ್ಟ್ಯಾಲಿನ್ ಬ್ರಿಡ್ಜ್. ಅಲ್ಲಿಯೂ ಪುಟ್ಟ ಬೀಚ್ ಇತ್ತು; ಜನರಿದ್ದರು. ಕೋಚ್ ನೊಳಗಿಂದ ಗಗನ ಚುಂಬಿತ ಕಟ್ಟಡಗಳ ನಡುವೆ ಅದು ಹೇಗೆ ಕಾಣುತ್ತಿತ್ತೆಂದರೆ ದೊಡ್ಡ ಈಜುಕೊಳದಂತೆ. ಎಡಕ್ಕೆ ಮೆಡಿಟರೆನಿಯನ್ ಸಮುದ್ರ, ಬಲಕ್ಕೆ ಗಗನ ಚುಂಬಿ ಕಟ್ಟಡಗಳು. ಅಲ್ಲಿ ಗಮನ ಸೆಳೆದದ್ದೆಂದರೆ ಸಮುದ್ರದಲ್ಲಿ ಕೃತಕ ದ್ವೀಪ ನಿರ್ಮಿಸಿ, ಹೋಟೆಲ್ ಕಟ್ಟಲು ಬುನಾದಿ ಹಾಕುತ್ತಿದ್ದುದ್ದು. ಟನ್ ಗಟ್ಟಲೇ ಭಾರದ ಶಿಲೆಗಳು! ಅವುಗಳನ್ನು ಎತ್ತಿ ಹಾಕಲು ದೈತ್ಯಾಕಾರದ ಕ್ರೇನ್ ಗಳು! ಅಂತೂ ಅರ್ಧ ಕೀ.ಮೀ. ನಷ್ಟು ಸೇತುವೆ ನಿರ್ಮಿಸಿ, ಬುನಾದಿ ಸಿದ್ಧವಾಗುತ್ತಿತ್ತು. ಒಂದು ಗಂಟೆಯ ನಂತರ ಒಂದು ಸುರಂಗ ಮಾರ್ಗದಲ್ಲಿ ಹಾಯ್ದು, ಕೋಚ್ ಮರಳಿ ಅದೇ ದಾರಿಯ ಮೂಲಕ ಕೈರೋದತ್ತ ಹೊರಟಿತು. ಕೈರೋಗೆ ಬರುವಾಗ ದಾರಿಯಲ್ಲಿ Petrozet ಎಂಬ ಬೃಹತ್ ಪೆಟ್ರೋಲಿಯಂ ಉತ್ಪಾದಕ ಕೈಗಾರಿಕೆಯನ್ನು ನೋಡಿದೆವು. ವಾತಾನುಕೂಲವಿದ್ದರೂ ಬಿಸಿಲಿನ ತಾಪ ಎಷ್ಟಿತ್ತೆಂದರೆ ಕಿಟಕಿ ಪರದೆ ಎಳೆದು, ಮುಖದ ಮೇಲೆ ಟೊವೆಲ್ ಗಳನ್ನು ಹಾಕಿಕೊಂಡರೂ ಜಳ ನಿಯಂತ್ರಿಸುವುದು ಕಷ್ಟ ಸಾಧ್ಯವಾಗಿತ್ತು. ಬಿಸಿಲಿನ ತಾಪಕ್ಕೆ ಚಂದ್ರನೂ ಮಂಕಾಗಿದ್ದ. ಎಲ್ಲರೂ ಚಡಪಡಿಸುತ್ತಿದ್ದರೆ ಕೆಲವರು ತೂಕಡಿಸತೊಡಗಿದರು.
ಮೂರುವರೆಗಂಟೆ ಪಯಣಿಸಿ ಕೈರೋ ರೈಲು ನಿಲ್ದಾಣಕ್ಕೆ ಬಂದಾಗ ಸಮಯ 7 ಗಂಟೆ. ಕೋಚ್ ನ ಹೊಟ್ಟೆಯೊಳಗಿಂದ ಲಗೇಜ್ ನೆಲ್ಲ ಇಳಿಸಿ, ನಿಲ್ದಾಣ ಪ್ರವೇಶ ಮಾಡುವಾಗ ಸರಿಯಾಗಿ 8 ಗಂಟೆ. ನಮ್ಮ ರೈಲು 9 ಗಂಟೆಗಿತ್ತು. ರೈಲು ನಿಲ್ದಾಣದಲ್ಲಿ ಕೀ ಗೊಂಚಲು, ಪೆನ್ನಿನ್ಸೆಟ್, ಮುಂತಾದವುಗಳನ್ನು ಕೆಲವರು ಖರೀದಿಸಿದರು. ಸರಿಯಾದ ಸಮಯಕ್ಕೆ ರೈಲು ಬರಲೇ ಇಲ್ಲ. ಹಸಿವೆಯಾಗಿತ್ತು. ಕೆಲವರು ಸಕ್ಕರೆ ಕಾಯಿಲೆಯವರು `ತುರ್ತು ಪರಿಸ್ಥಿತಿಯ ಚೀಲ’ ತೆರೆದು ಒಣ ಅವಲಕ್ಕಿ, ಕೊಬ್ಬರಿ ವಡೆ, ಬಿಸ್ಕೆಟ್ ಮುಂತಾದವುಗಳನ್ನು ಹಂಚಿದರು. ಇಡೀ ಗುಂಪಿನಲ್ಲಿರುವ ಒಂದೇ ಒಂದು ಜೋಡಿ ಎಂದರೆ ಶ್ರೀ ಲತಾ ದಂಪತಿಗಳದ್ದು. ಹಾಗಾಗಿ ಕಾಡಿಸಿ ಪೀಡಿಸಿ, ಮಾಡಿದ ಕರಾರಿನಂತೆ ಶ್ರೀಲತಾ ದಂಪತಿಗಳು ಎಲ್ಲರಿಗೂ ಮ್ಯಾಂಗೋ ಜ್ಯೂಸ್ ಕೊಡಿಸಿದರು. 10 ಗಂಟೆಗೆ ರೈಲು ಬಂದಿತು. ಮಾರ್ಗದರ್ಶಿ ಮಹಮ್ಮದ್ ಆಳುಗಳ ಸಹಾಯದಿಂದ 45 ಬ್ಯಾಗಗಳನ್ನು ಸಾಗಿಸಿದ. ರೈಲಿನ ಒಳಗೆ A/C ಕ್ಯಾಬಿನನ್ನೇ ಕಾಯ್ದಿರಿಸಿದ್ದರು. ನಮ್ಮ ಭಾರತೀಯ ರೈಲುಗಳಲ್ಲಿ ಅಡಿಗೆ ವಿಭಾಗದ ಬೋಗಿ ಇರುವಂತಿತ್ತು ಅದು.
ಒಂದು ಬದಿಗೆ ಉದ್ದಕ್ಕೆ ಎರಡು ಅಡಿ ಜಾಗ, ತಿರುಗಾಡಲು. A/C ಕ್ಯಾಬಿನ್ ಗಳು 10x 10 ಅಳತೆಯವಿರಬಹುದೇನೊ? ಅಷ್ಟರೊಳಗೆ ಒಂದು ಪುಟ್ಟ ಮನೆಯೇ ಅವತಾರವೆತ್ತಿತ್ತು. ಬಾಗಿಲಿನ ಎಡಕ್ಕೆ ಮೂರು ಸೀಟಿನ ಒಂದು ಸೋಫಾ, ಅದರಷ್ಟೇ ಉದ್ದ ಜಾಗದಲ್ಲಿ ಸೋಪಾದ ಎಡ ತುದಿಯ ಎದುರಿಗೆ ಒಂದು ಬೊಗಸೆಗಿಂತ ಸ್ವಲ್ಪ ದೊಡ್ಡ ಸಿಂಕ್. ಅದರ ಮೇಲೆ ಒಂದು ಬಾಗಿಲು; ತೆರೆದರೆ ಅಲ್ಲೊಂದು ಚಿಕ್ಕ ಕಪಾಟು. ಅಲ್ಲಿ ಎರಡು ಚಿಕ್ಕ, ಹಳದಿ ಟರ್ಕಿ ಟೊವೆಲ್, 2 ಸೋಪ್, 2 ಶ್ಯಾಂಪುಗಳು; ಅಲ್ಲಿಯೇ ಸ್ವಿಚ್ ಬೋರ್ಡ್ (ಮೊಬೈಲ್ ಚಾರ್ಜಿಂಗ್ಗೆ ) ಆ ಬಾಗಿಲಿಗೆ ಕನ್ನಡಿ, ಕೆಳ ತುದಿಗೆ ಮಧ್ಯದಲ್ಲಿ ಗುಮ್ಮಟದಂತೆ ಆಕಾರ. ಅದು ಬಾಗಿಲು ಹಾಕಿದಾಗ ಸಿಂಕನ ಮುಚ್ಚಳವಾಗುತ್ತಿತ್ತು. ಅದರ ಪಕ್ಕದಲ್ಲೆ ಹ್ಯಾಂಗರ್ಗಳೊಂದಿಗೆ ಸ್ಟೀಲ್ರಾಡ್. ಮೇಲೊಂದು ಪುಟ್ಟ ಸ್ಟೋರ್ಕೇಸ್. ಅಲ್ಲಿ ದಿಂಬು ಮತ್ತು ಬ್ಲಾಂಕೆಟ್ ಗಳು. ಸೋಪಾ ಬಲಬದಿಗೆ ಕುಳಿತರೆ ಪಕ್ಕದ ಭಿತ್ತಿಯಲ್ಲಿಯೇ ರೇಡಿಯೋ, ಟೇಪರಿಕಾರ್ಡರ; ಸಂಗೀತ ಕೇಳಬಹುದಿತ್ತು. ಆದರೆ ಒಬ್ಬರು ಓಡಾಡಬೇಕು, ಒಬ್ಬರು ಕುಳಿತುಕೊಳ್ಳಬೇಕು. ನಾನು ಪ್ರಭಾ ನೇರಲಗಿ ಒಂದು ಕ್ಯಾಬಿನೊಳಗಿದ್ದೆವು. ಅವರ ಕಾಲುಗಳು ಬಾತುಕೊಂಡು ಚಲನೆ, ಸಂವೇದನೆ ಕಳೆದುಕೊಂಡಂತಾಗಿದ್ದವು. ಅವರ ಎರಡು ಬ್ಯಾಗುಗಳು ಮತ್ತು ನನ್ನದೊಂದು ದೊಡ್ಡ ಬ್ಯಾಗ್, ಎಳೆದು ಒಳ ಇಟ್ಟೆ. ಬಾಗಿಲು ಹಾಕಲು ಬರಲೇ ಇಲ್ಲ. ಒಂದನ್ನೆತ್ತಿ ಸೋಫಾ ಮೇಲಿಟ್ಟು ಬಾಗಿಲು ಹಾಕಿದೆವು. ಬಟ್ಟೆ ಬದಲಿಸಿ ಮುಖ ತೊಳೆಯಬೇಕು ಎನ್ನುವಷ್ಟರಲ್ಲೇ ಊಟ ಬಂತು. ಸಪ್ಲಾಯರ್ ನನಗೆ ಕೂರಲು ಹೇಳಿದ. ಇಲ್ಲದಿದ್ದರೆ ಆತನಿಗೆ ಒಳಬರಲಾಗುತ್ತಿರಲಿಲ್ಲ.
ಅಲ್ಲಿಯೇ ಸಿಂಕ್ ನ ಕೆಳ ಕಬೋರ್ಡ್ನಲ್ಲಿದ್ದ ಟ್ರೇಗಿಂತ ಸ್ವಲ್ಪ ದೊಡ್ಡದಿರುವ ಮತ್ತು ಉದ್ದದ ಒಂದು ಮೂಲೆ ಒಂದಿಂಚು ಚಾಚಿಕೊಂಡಂತಿರುವುದನ್ನು ತೆಗೆದು, ಭಿತ್ತಿಯೊಳಗಿದ್ದ ಅಗಲವಾದ ತೂತಿನೊಳಗೆ ಸಿಕ್ಕಿಸಿದ. ಡೈನಿಂಗ್ ಟೇಬಲ್ ಸಿದ್ಧ. ಊಟವೇ! ಅದೇ ಹುರಿದ ಬದನೆಕಾಯಿ, ಪಾಸ್ತಾ, ಒಂದು ಬನ್, ಜಾಮ್, ಬೆಣ್ಣೆ, ಉಪ್ಪು, ಕಾಳು ಮೆಣಸಿನ ಪುಡಿ ಮತ್ತು ಸಕ್ಕರೆ ಚೀಟಿಗಳು, ಒಂದು ಕೇಕ್ ನಂತಹ ಸಿಹಿ ತಿಂಡಿ, ದುಂಡಗೆ ಕತ್ತರಿಸಿ ಕುದಿಸಿದ ಸೌತೆ ಮತ್ತು ಬಟಾಟೆಯ ಎರಡೆರಡು ತುಂಡುಗಳು, ಕಲ್ಲಂಗಡಿ, ಕರಬೂಜದ ಎರಡು ಹೋಳು, ಎರಡು ದ್ರಾಕ್ಷಿ, ಒಂದು ಬ್ಲಾಕ್ ಓಲಿವ್ ಹಣ್ಣು; ಒಂದು ಗ್ಲಾಸ್ ಜ್ಯೂಸ್, ಚಮಚ ಪೊರ್ಕ ಇತ್ಯಾದಿ…ಅಬ್ಬಬ್ಬಾ! ರೊಟ್ಟಿ ಎಂದು ಸಿಕ್ಕೀತು ಎನ್ನುವಂತಾಗಿತ್ತು. ನಾನು ಪಾಸ್ತಾ ಬದಲು ಅನ್ನ ಕೇಳಿದೆ. ಸಪ್ಲಾಯರ್ ಹೋಗಿ ನೋಡಿ ಬಂದು ಖಾಲಿಯಾಯಿತು ಎಂದ.
ಅಲ್ಲಿಯ ಸಿಬ್ಬಂದಿಗೆ, ಸಂಬಂಧಿಸಿದ ಇಂಗ್ಲಿಷ್ ತಾಂತ್ರಿಕ ಪದಗಳು ಮಾತ್ರ ಅರ್ಥವಾಗುತ್ತಿದ್ದವು, ಅಷ್ಟರಲ್ಲೆ ನಮ್ಮ ಸಂಭಾಷಣೆ ಜರುಗುತ್ತಿತ್ತು. ಬಟಾಟೆ, ಸೌತೆ ಹಳಸಿದಂತಾಗಿದ್ದವು. ಹಣ್ಣುಗಳು ಫ್ರೀಜ್ ನೊಳಗೆ ಎಷ್ಟು ದಿನದಿಂದ ಇದ್ದವೋ! ರುಚಿ ಕಳೆದುಕೊಂಡಿದ್ದವು. ಬನ್ ಒಂದನ್ನು ತಿಂದು ಜ್ಯೂಸ್ ಕುಡಿದೆ. ಪ್ರಭಾ ನೇರಲಗಿ ಎರಡು ಬಿಸ್ಕೆಟ್ ತಿಂದು ಸಕ್ಕರೆ ರಹಿತ ಕಾಫೀ ಕುಡಿದರು. ತಡವಿಲ್ಲದೆ, ಸಪ್ಲಾಯರ್ ಬಂದು ತಟ್ಟೆಗಳನ್ನು ತೆಗೆದು, ಮೇಲಿನ ಭಿತ್ತಿಯಲ್ಲಿ ಕೀಲಿ ಹಾಕಿ ಭದ್ರಗೊಳಿಸಿದ ಸ್ಟೀಲ್ ಕಾಟನ್ನು ತೆರೆದು, ಎತ್ತಿ ಮೇಲೆ ಹರಡಿ, ಹಾಸಿ, ಸ್ಟೋರ್ಕೇಸ್ ನಲ್ಲಿಯ ದಿಂಬು, ಹೊದಿಕೆ ಇಟ್ಟು, ಮೇಲೇರಲು ನಾಲ್ಕು ಹಲ್ಲುಗಳಿರುವ ಸ್ಟೀಲ್ ಏಣಿಯನ್ನು ಗೋಡೆಯೊಳಗಿಂದ ಈಚೆ ಎಳೆದು ಮೇಲಿನ ಕಾಟಿಗಿರುವ ಹುಕ್ಕಿಗೆ ಸಿಕ್ಕಿಸಿ, ಕೆಳಗಿನ ಸೋಪಾ ಎಳೆದುಬಿಟ್ಟ, ಕುಳಿತಿದ್ದದ್ದು ಹಾಸಿಕೊಂಡಿತು. ಗುಡ್ ನೈಟ್ ಹೇಳಿ ಬಾಗಿಲು ಹಾಕಿ ಸರ್ರನೆ ಹೊರಟು ಹೋದ. ಪ್ರಭಾ ನೇರಲಗಿಗೆ ಅಸಾಧ್ಯ, ಅವ್ಯಕ್ತ ನೋವಿತ್ತು. ಅವರ ಕಾಲು ಒತ್ತಿ, ನೋವು ಸಾಯುವ ಔಷಧಿ ಉಗ್ಗಿದೆವು ನಾನು ಮತ್ತು ಸರೋಜಾ.
ಮಲಗೋಣವೆಂದರೆ ರೂಮ್ ತುಂಬ ಔಷಧಿಯ ವಾಸನೆ. A/C ಇದ್ದುದ್ದರಿಂದ ಉಸಿರುಗಟ್ಟಿದಂತಾಯಿತು. ಬಾಗಿಲು ತೆರೆದು ಬಿಟ್ಟು, ಹೊರಬಂದೆ. ಅಯ್ಯ! ಎಂಬ ಉದ್ಗಾರ ಹೊರಬಿತ್ತು. ಫಳ ಫಳ ಹೊಳೆಯುವ ಚಂದ್ರ, ಗೋಲಾಕಾರಕ್ಕೆ ತಿರುಗುತ್ತಿದ್ದು ರೈಲಿನೊಂದಿಗೆ ಓಡೋಡಿ ಬರುತ್ತಿದ್ದ. ಕೆಳಗೆ ಭತ್ತ, ಗೋವಿನ ಜೋಳ ಮುಂತಾದ ಬೆಳೆಗಳ ಮೇಲೆ ಮಂದ ಬೆಳದಿಂಗಳು ಹರಡಿತ್ತು. ಉದ್ದನೆಯ ಕಾರಿಡಾ ರ್ ನಲ್ಲಿ ನಿಂತು, ಉದ್ದದ ಅಖಂಡ ಪಾರದರ್ಶಕ ಪೈಬರ್ನ ಕಿಟಕಿಯಲ್ಲಿ ನೋಡಿದಾಗ ಪ್ರಕೃತಿ ಹಾಲುದಿಂಗಳಲ್ಲಿ ಮಿಂದು ಎದ್ದಂತೆ ಕಾಣುತ್ತಿತ್ತು. ನಮ್ಮ ಪ್ರಯಾಣ ಆಸ್ವಾನ್ ನಗರದತ್ತ ಸಾಗಿತ್ತು. ಬಂದು ಬಾಗಿಲು ಹಾಕಿ ಮೇಲೇರಿದೆ. ಅರೆಹೊಟ್ಟೆಯ ಸಂಕಟ, ಆಯಾಸ, ಹೊಸಜಾಗ, ಹೊಸ ರೀತಿ… ಒದ್ದಾಡಿ ಒದ್ದಾಡಿ ಎಷ್ಟೊತ್ತಿಗೆ ನಿದ್ದೆ ಹತ್ತಿತ್ತೋ? ಆ ರಾತ್ರಿ ಕಳೆದುಹೋಯಿತು. ಬೆಳಿಗ್ಗೆ 5.30ಕ್ಕೆ ದಬದಬ ಬಾಗಿಲು ಬಡಿದಾಗಲೇ ಗಡಬಡಿಸಿ ಗಾಢ ನಿದ್ರೆಯಿಂದ ಎದ್ದು ಬಾಗಿಲು ತೆರೆದೆ. ಪರಿಚಾರಕ ಎಲ್ಲರನ್ನು ಎಬ್ಬಿಸುತ್ತಿದ್ದ. ಬೆಳಗಿನ ಕ್ರಿಯಾ ಕರ್ಮಾದಿಗಳನ್ನು ಮುಗಿಸಿ ರೂಮ್ ನಲ್ಲಿಯೇ ಹಲ್ಲುಜ್ಜಿ ಮುಖ ತೊಳೆದೆವು. ಪುಟಾಣಿ ಸಿಂಕ್ ನಲ್ಲಿ ಬಿಸಿ ನೀರು ಬರುತ್ತಿತ್ತು. ನಾವಿನ್ನು ಸಿದ್ಧರಾಗಿರಲಿಲ್ಲ.
6.30ಕ್ಕೆ ಟಿಫಿನ್ ತಂದು ಬಿಟ್ಟಿದ್ದ. ಅಲ್ಲಿದ್ದ ಯಾವುವೂ ಬೇಯಿಸಿದ ಪದಾರ್ಥಗಳಾಗಿರಲಿಲ್ಲ. ಅದೇ ಕೇಕ್ ನಂಥದ್ದು, ಏನೇನೋ ಇದ್ದವು. ಅಷ್ಟೊತ್ತಲ್ಲಿ ಇಂಥಾ ತಿಂಡಿ? ಒಂದು ಕ್ಯಾರಿಬ್ಯಾಗಿಗೆ ಹಾಕಿಕೊಂಡೆವು. ಬರೀ ಕಾಫಿ ತರಿಸಿ ಕುಡಿದೆವು. ಸಿದ್ಧರಾಗಿ ಎಷ್ಟೊತ್ತು ಕಾಯ್ದರೂ ನಮ್ಮ ನಿಲ್ದಾಣ ಬರುವುದೇ ಇಲ್ಲ. ರೈಲು ತಲುಪುವ ಸಮಯ 8 ಗಂಟೆ. ಒಂದು ತಾಸು ತಡವಾಗಿ ಹೊರಟದ್ದು, ಎರಡು ತಾಸು ತಡವಾಗಿ ತಲುಪಿತು. ಅಂತೂ 10 ಗಂಟೆಗೆ ಆಸ್ವಾನದಲ್ಲಿ ಇಳಿದೆವು. ಊರು ಸಮೀಪವಿದ್ದಾಗ, ಬಿಳಿ ಮಣ್ಣಿನ ಮೇಲ್ಮುದ್ದೆ ಮನೆಗಳಂಥ ಮನೆಗಳೇ ಕಾಣುತ್ತಿದ್ದವು. ಅದನ್ನು ನೋಡುತ್ತಿದ್ದರೆ ವಿಜಾಪುರ ಜಿಲ್ಲೆಯ ಮೇಲ್ಮುದ್ದೆ ಮನೆಗಳನ್ನು ಕಂಡಂತಾಗುತ್ತಿತ್ತು. ಮನೆಗಳಿಗೆ ಹಿನ್ನೆಲೆಯಾಗಿ ಪದರು ಪದರಾಗಿರುವ ಬಿಳಿಗುಡ್ಡ.
(ಮುಂದುವೆರಿಯುವುದು…)

‍ಲೇಖಕರು avadhi

16 March, 2014

ನಿಮಗೆ ಇವೂ ಇಷ್ಟವಾಗಬಹುದು…

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸನ್ನಿಧಿಯಲ್ಲಿ

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮತ್ತೆ ಮತ್ತೆ ಅದೇ ಜಾಗದಲ್ಲಿ ನಿಲ್ಲುತ್ತಿತ್ತು ಖಾಲಿ ಬೈಕ್

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading