ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆವರ್ ಸ್ಟಾಪ್ ಪ್ಲೇಯಿಂಗ್…

ಶೀಲಾ ಪೈ 

ವರ್ಗಾವಣೆಯ ಸಂಸಾರದ ನನಗೆ ಎಲ್ಲೋ ಸ್ನೇಹಿತರಾದವರು ಮುಂದೆಂದೋ ಮತ್ತೆಲ್ಲೋ ಸಿಗುತ್ತಿರುತ್ತಾರೆ. ದೇಶದ ಯಾವ ಮೂಲೆಗೆ ಹೋದರೂ ನಾವು ವಾಸ ಮಾಡುವುದು ಸರಕಾರಿ ಕ್ವಾರ್ಟರ್ಸ್ ನಲ್ಲಿ. ಹೀಗೆಯೇ ಹದಿನೈದು ವರ್ಷಗಳ ಹಿಂದೆ ನನ್ನ ಎದುರು ಮನೆಯಲ್ಲಿದ್ದವರು ಮತ್ತೆ ಬೆಂಗಳೂರಿನಲ್ಲಿ ಸಿಕ್ಕಿದರು. ಮಾತುಕತೆಯಲ್ಲಿ ಅವರೀಗ ಸಂಸ್ಕೃತ ಕಲಿಯುತ್ತಿದ್ದಾರೆ ಮತ್ತು ಕಲಿಸಿಕೊಡುತ್ತಲೂ ಇದ್ದಾರೆ ಎಂದು ತಿಳಿಯಿತು. ಯಾವಾಗಲೂ ಸೀರೆ ಒಡವೆ ಎಂದು ಸ್ನೇಹಿತೆಯರ ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದವರು ಹೀಗೆ ಹೊಸ ಹಾದಿ ತುಳಿಯುತ್ತಿರುವುದು ನನ್ನಲ್ಲಿ ಆಶ್ಚರ್ಯವನ್ನುಂಟುಮಾಡಿತು. ಅವರ ಮಗ ಇಂಜಿನಿಯರಿಂಗ್ ಓದಿಯೂ ಕ್ಯಾಂಪಸ್ ನಲ್ಲಿ ಸಿಕ್ಕ ನೌಕರಿಗೆ ಸೇರಿಕೊಳ್ಳದೆ, ಭಾರತೀಯ ಸೇನೆಗೆ ಸೇರಿಕೊಂಡನಂತೆ. ಅದೇನೂ ಸುಲಭವಾಗಿ ದಕ್ಕುವಂತದ್ದಲ್ಲ. ಕಠಿಣ ಪರಿಶ್ರಮ, ಅದೃಷ್ಟ ಎರಡೂ ಒಲಿದಾಗ ಮಾತ್ರವೇ ಸಿಗುವ ಭಾಗ್ಯ. “ಐ ವಾಸ್ ಬಾರ್ನ ಟು ದಿಸ್” ಎಂದು ಅವನು ಹೇಳಿದ್ದು, ಎರಡು ವರ್ಷ ಕಠಿಣ ತರಬೇತಿ ಪಡೆದುದರ ಬಗ್ಗೆ ಹೇಳಿಕೊಂಡರು. ಇದೇ ನನ್ನ ಪ್ಯಾಶನ್ ಎಂದು ಅವನು ಹೇಳುವ ರೀತಿಗೆ ಇವರಿಗೂ ನಾನೂ ಏನಾದರೂ ಮಾಡಬೇಕು ಎಂದೆನಿಸಿತಂತೆ. ಭಾಷೆಗಳ ಬಗ್ಗೆ ಮೊದಲಿನಿಂದಲೂ ಒಲವಿದ್ದವರ ಮುಂದೆ ತೆರೆದುಕೊಂಡ ಹಾದಿ ಸಂಸ್ಕೃತ ಕಲಿಕೆ.

ಅರುವತ್ತು, ಎಪ್ಪತ್ತು, ಎಂಬತ್ತರ ದಶಕದಲ್ಲಿ ಹುಟ್ಟಿದ ನಮ್ಮಂತಹ ಎಷ್ಟೋ ಮಧ್ಯಮ, ಮೇಲ್ಮಧ್ಯಮ ವರ್ಗದ ಹೆಣ್ಣುಮಕ್ಕಳ ಕತೆಯೇ ಹೀಗಾಗಿದೆ. ಸಾಂಪ್ರದಾಯಿಕ ಕುಟುಂಬಗಳಲ್ಲಿ ಬೆಳೆದು ಹಿರಿಯರು ಹೇಳಿದಂತೆ ಕೇಳಿಕೊಂಡು ಜೀವನ ಸಾಗಿಸಿದ ನಮ್ಮಲ್ಲನೇಕರು ಈಗ ಕಣ್ಣು ತೆರೆಯುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಮನೆಯಲ್ಲಿ ಕೂತದ್ದು ಪ್ರತಿಭೆಯಿಲ್ಲ, ತಾಕತ್ತಿಲ್ಲವೆಂದಲ್ಲ, ಸ್ವಂತದ ಹಿತದ ಬಗೆಗೆ ಯೋಚನೆ ಮಾಡದಿರುವುದರಿಂದ. ಆಗಿನ ದಿನಮಾನಗಳೂ ಹಾಗೆಯೆ ಇದ್ದವು. ಹೊರಗೆ ತಿನ್ನುವ, ಹೊರಗಿನಿಂದ ತರಿಸುವ, ಮನೆಕೆಲಸಗಳನ್ನು ಹಂಚಿಕೊಳ್ಳುವ ಪ್ರಶ್ನೆಯೇ ಇರಲಿಲ್ಲ. ಸ್ವಂತ ಕೈಗಳಿಂದಲೇ ಅಡಿಗೆ ಮಾಡಬೇಕು, ಮಕ್ಕಳನ್ನು ಬೆಳೆಸಲು ಸಹಾಯಕ್ಕೆ ಜನವಿಟ್ಟುಕೊಳ್ಳುವುದು ಮಹಾಪಾಪ ಎಂದುಕೊಂಡಿದ್ದ ಕಾಲವದು.

ಇವತ್ತಿನ ಯುವತಿಯರು, ಹೊರಗೆ ಕೆಲಸಕ್ಕೆ ಹೋಗುವವರು ಮನೆಕೆಲಸಕ್ಕೆ, ಅಡಿಗೆಗೆ ಜನವಿಟ್ಟುಕೊಂಡು ಮನೆಯನ್ನೂ ವೃತ್ತಿಯನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ನಾನು ನೋಡಿದಂತೆ ನಮ್ಮ ಕಾಲದಲ್ಲಿ ಹೊರಗಡೆ ಕೆಲಸಕ್ಕೆ ಹೋಗುವವರು ಮನೆಯಲ್ಲಿ ಮಾಡಿಟ್ಟು, ಆಫೀಸು, ಬ್ಯಾಂಕು ಶಾಲೆಗಳಿಗೆ ಹೋಗಿ ಸಂಜೆ ಮನೆಗೆ ಬಂದು ಮತ್ತೆ ರಾತ್ರಿಯ ಅಡಿಗೆ ನೋಡಿಕೊಳ್ಳಬೇಕಿತ್ತು. ಇದನ್ನೆಲ್ಲ ನೋಡಿ ನನ್ನಂತಹ ಎಷ್ಟೋ ಮಂದಿ ಸಿಕ್ಕ ಕೆಲಸವನ್ನು ಬಿಟ್ಟು ಈ ರಗಳೆಯೇ ಬೇಡ ಎಂದು ತೃಪ್ತಿಯಿಂದ ಮನೆಯಲ್ಲಿದ್ದುದು. ಕಳೆದ ದಶಕದಲ್ಲಿ ಕಾಲ ಇನ್ನಿಲ್ಲದಂತೆ ಬದಲಾಗಿದೆ. ಕಣ್ಣ ಮುಂದೆ ಹದಿವಯಸ್ಸಿನವರು ನನ್ನ ಪ್ಯಾಶನ್, ನನ್ನ ಇಂಟರೆಸ್ಟ್, ನನಗಿಷ್ಟ ಎಂದು ಬದುಕನ್ನು ರೂಪಿಸಿಕೊಳ್ಳುವುದನ್ನು ಕಾಣುತ್ತಿದ್ದೇವೆ. ಇವರನ್ನು ನೋಡಿ ನನ್ನಂತಹವರಿಗೆ ಒಳಗೆಲ್ಲೋ ಹುದುಗಿದ್ದ ಆಸಕ್ತಿಗಳನ್ನು ಹೊರತಂದು ಪೋಷಿಸುವೆಡೆ ಕಾರ್ಯಪ್ರವೃತ್ತರಾಗುವ ಅಸೆ ಮೂಡಿದೆ.

ಇತ್ತೀಚೆಗೆ ಇನ್ನೊಬ್ಬರು ಸ್ನೇಹಿತೆ ತನ್ನ ತಂಗಿಯೊಡನೆ ಸೇರಿ ಬೆಂಗಳೂರಿನ ಚಿತ್ರ ಕಲಾ ಪರಿಷತ್ತಿನಲ್ಲಿ ತಮ್ಮ ಪೇಂಟಿಂಗ್ ಪ್ರದರ್ಶನ ಮಾಡಿದರು. ಅರೆ ಇವರಿಗೆ ಇಷ್ಟು ಚೆನ್ನಾಗಿ ಪೇಂಟಿಂಗ್ ಮಾಡಲು ಬರುತ್ತದೆಯೇ ಎಂದು ಸಂಭ್ರಮಾಶ್ಚರ್ಯದಿಂದ ನೋಡಿ ಬಂದೆವು. ಮದುವೆಯಾದಮೇಲೂ ತಮ್ಮ ಹವ್ಯಾಸಗಳನ್ನು ಮುಂದುವರಿಸಿಕೊಂಡವರು, ವೃತ್ತಿಯಲ್ಲಿ ಯಶಸ್ಸು ಪಡೆದವರು ಇದ್ದಾರೆ, ಅವರಿಗೆ ನನ್ನ ಅಭಿನಂದನೆಗಳು ಆದರೆ ಅಂತಹವರ ಸಂಖ್ಯೆ ಬಹಳ ಕಡಿಮೆ.

“ಐರಿಸ್ ಆಪ್ಫೆಲ್” ( Iris apfel) ಎಂಬ ಅಮೇರಿಕನ್ ಮಹಿಳೆ ೨೦೧೯ ರಲ್ಲಿ ಮ್ಯಾಗ್ನಮ್ ಐಸ್ ಕ್ರೀಮ್ ನ ರೂಪದರ್ಶಿಯಾದಾಗ ಆಕೆಯ ವಯಸ್ಸು ೯೭ !! ಅವರು ಬಟ್ಟೆಯ ಉದ್ಯೋಗದಲ್ಲಿ ತೊಡಗಿಕೊಂಡು ಯಶಸ್ವೀ ಬಿಸಿನೆಸ್ ವುಮನ್ ಆಗಿದ್ದವರು . ಅಂತರ್ಜಾಲದಲ್ಲಿ ಇವರ ಬಗೆಗೆ ತಡಕಾಡಿದಾಗ ಸಿಕ್ಕ ಮಾಹಿತಿಗಳು ನನ್ನನ್ನು ಬೆರಗಾಗಿಸಿದವು . ಇವರ ಆತ್ಮ ವಿಶ್ವಾಸ , ಸ್ವಂತಿಕೆಗೆ ಮನಸೋತ ಮ್ಯಾಗ್ನಮ್ ಐಸ್ ಕ್ರೀಮ್ ಇವರನ್ನೇ ಹೋಲುವ ಸ್ಪೆಷಲ್ ಐಸ್ ಕ್ರೀಮ್ ಅನ್ನೂ ಮಾರುಕಟ್ಟೆಗೆ ತಂದಿತಂತೆ. “ನೆವರ್ ಸ್ಟಾಪ್ ಪ್ಲೇಯಿಂಗ್” ಅನ್ನುವುದೇ ಇವರು ಕೊಡುವ ಸಂದೇಶ . ಇದನ್ನೇ ಮ್ಯಾಗ್ನಮ್ ತನ್ನ ಟ್ಯಾಗ್ ಲೈನ್ ಮಾಡಿಕೊಂಡಿತ್ತು. ನಮ್ಮಲ್ಲಿ ಇದೇ ವೇಳೆಗೆ ಇದೇ ಐಸ್ ಕ್ರೀಮ್ ಮಾರಾಟಮಾಡಲು ಬಳಸಿದ ರೂಪದರ್ಶಿಗಳು ಕರೀನಾ ಕಪೂರ್ ಹಾಗೂ ಸೋನಂ ಕಪೂರ್ ಅವರು. ಈ ವ್ಯತ್ಯಾಸ ಗಮನಿಸಬೇಕಾದುದು. ಅಲ್ಲಿ ವಯಸ್ಸು , ಕನ್ ವೆನ್ಷನಲ್ ಸೌಂದರ್ಯದ ಪರಿಕಲ್ಪನೆ ಮುಖ್ಯವಾಗಿರಲಿಲ್ಲ, ಇಲ್ಲಿ ಬಾಹ್ಯ ಸೌಂದರ್ಯ, ವಯಸ್ಸು ಬಹಳ ಮುಖ್ಯ .

ಐದು ವರ್ಷಗಳ ಹಿಂದೆ ನಾನು ಚೆನ್ನೈಯಿಂದ ಬೆಂಗಳೂರಿಗೆ ನಮ್ಮ ಕಾಲನಿಗೆ ಬಂದಾಗ ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟು ಇದೆಯೆಂದು ಗಮನಿಸಿದೆ. ನನ್ನ ಬಾಲ್ಯದಲ್ಲಿ ಬೇಸಿಗೆಯ ರಜೆ ಶುರುವಾದೊಡನೆ ಮನೆಯ ಹಿಂದಣ ಹಿತ್ತಲಲ್ಲಿ ಅಣ್ಣ, ತಂದೆಯೊಡಗೂಡಿ ಕೈಯಲ್ಲಿ ಕಡ್ಡಿಪೊರಕೆ ಹಿಡಿದು ಕಲ್ಲುಗಳನ್ನು ಗುಡಿಸಿ ಆಡಲು ಅನುಕೂಲವಾಗುವಂತೆ ಶುಚಿ ಮಾಡುತ್ತಿದ್ದೆವು. ನಮ್ಮ ತಂದೆಗೆ ಬ್ಯಾಡ್ಮಿಂಟನ್ ಅಂದರೆ ಬಹಳ ಇಷ್ಟ. ಚೆನ್ನಾಗಿ ಆಡುತ್ತಿದ್ದರು. ಕಂದು ಬಣ್ಣದ ರಟ್ಟಿನ, ಆಟದ ನಿಯಮಾವಳಿಗಳು, ಕೋರ್ಟಿನ ಉದ್ದಗಲದ ವಿವರಗಳಿದ್ದ ಒಂದು ಪುಸ್ತಕವೂ ನಮ್ಮನೆಯಲ್ಲಿತ್ತು. ಅದರಲ್ಲಿ ನಮೂದಿಸಿದ್ದ ಅಳತೆಗಳಿಗನುಗುಣವಾಗಿ ಕೋರ್ಟು ಸಿದ್ಧವಾಗುತ್ತಿತ್ತು. ಸುಣ್ಣ ಬಳಸಿ ಲೈನುಗಳನ್ನು ಹಾಕುತ್ತಿದ್ದೆವು. ಆಮೇಲೆ ಮಳೆಗಾಲ ಶುರುವಾಗುವವರೆಗೆ ನಮ್ಮ ಮನೆಯಲ್ಲಿ ಆಟದ ಸುಗ್ಗಿಯೇ. ತಂದೆಯವರೊಡನೆ ಆಡಲು ಹಲವಾರು ನೆಂಟರಿಷ್ಟರು ಉಮೇದಿನಿಂದ ಬರುತ್ತಿದ್ದರು ಎಂದು ನೆನಪು. ದೊಡ್ಡವರೆಲ್ಲ ಆಡುವಾಗ ನಾನು ಮುರುಕು ಬ್ಯಾಟು ( racket) ಹಿಡಿದು ಬದಿಯಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದೆ.

ಮುಂದಿನ ವರ್ಷಗಳಲ್ಲಿ ಚಿಕ್ಕಪ್ಪ ದೊಡ್ಡಪ್ಪಂದಿರ ಮಕ್ಕಳೊಡನೆ ಆಡುತ್ತಿದ್ದ ನೆನಪುಗಳೂ ಧಾರಾಳವಾಗಿವೆ. ಮದುವೆಯಾದ ಮೇಲೆ ಆಡಿರಲಿಲ್ಲ. ನಮ್ಮ ಕಾಲನಿಯ ಕೋರ್ಟು ನೋಡಿ ಆಸೆಯಾಯಿತು . ನನ್ನ ಸಂಗಾತಿ ಶಾಂತಾರಾಮರು ಸ್ವಲ್ಪ ಗಡಿಬಿಡಿ ಸ್ವಭಾವದವರು, ನನ್ನೊಡನೆ ಆಡಲು ಸಂಭ್ರಮದಿಂದಲೇ ಬಂದರೂ ಎರಡನೇ ದಿನವೇ ಕನ್ನಡಕ ಕೆಳಗೆ ಬಿದ್ದು ಪುಡಿಯಾಯಿತು , ಅದಲ್ಲಿಗೆ ಮುಗಿಯಿತು. ಹೆಂಗಸರ ವಾಟ್ಸಪ್ಪ್ ಗುಂಪಿನಲ್ಲಿ ನಾನು ಆಡಲು ಸಿದ್ಧಳಿದ್ದೆನೆಂದೂ ಯಾರಾದರೂ ಜೊತೆಗೆ ಬೇಕೆಂದೂ ಮೆಸೇಜು ಹಾಕಿದೆ. ಒಬ್ಬರೂ ಪ್ರತಿಕ್ರಿಯಿಸಲಿಲ್ಲ. ನಾನು ಯಥಾಪ್ರಕಾರ ವಾಕಿಂಗು ಓದಿನಲ್ಲಿ ಮುಳುಗಿ ಹೋದೆ. ಒಂದು ವರ್ಷದ ನಂತರ ಒಬ್ಬರು ಮೆಸೇಜ್ ಮಾಡಿದರು . ನನ್ನ ಮೆಸೇಜ್ ನೋಡಿದ್ದರಂತೆ. ಅವರ ಮಗ ಪೀಯೂಸಿಯಲ್ಲಿ ಇದ್ದುದರಿಂದ ರೆಸ್ಪಾಂಡ್ ಮಾಡಿಲ್ಲ, ಈಗ ಬರಲು ರೆಡಿ ಅಂದರು. ಸರಿ ಇಬ್ಬರೂ ಸೇರಿ ಆಡಲು ಶುರು ಮಾಡಿದೆವು. ಅದು ಕೋವಿಡ್ ಕಾಲ. ಮಧ್ಯ ಮಧ್ಯ ಬ್ರೇಕ್ ಬೀಳುತ್ತಿತ್ತು. ಬಹಳಷ್ಟು ತಿಣುಕಾಡಿ ದಿನವೂ ಮುಕ್ಕಾಲು ಘಂಟೆ ಆಡುವಲ್ಲಿಗೆ ತಲುಪಿದೆವು. ಎಂಟು ತಿಂಗಳ ಹಿಂದೆ ಇಂದೋರ್ ನಿಂದ ವರ್ಗವಾಗಿ ಬಂದವರೊಬ್ಬರು ನಮ್ಮೊಡನೆ ಸೇರಿಕೊಂಡರು.

ಪಾದರಸದಂತಹ ಚುರುಕಿನವರು . ಅವರ ಅಣ್ಣ ಹಠಾತ್ ಹೃದಯಾಘಾತವಾಗಿ ಹೋಗಿಬಿಟ್ಟರಂತೆ. ಜೀವನ ಎಷ್ಟು ಕ್ಷಣಿಕ ಎಂದು ಅರಿವಾಗಿದೆ , ಸಾಧ್ಯವಾದಷ್ಟೂ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದೇನೆ ಅಂದರು. ಬರಿಯ ಮಾತಿನವರಲ್ಲ, ಬೆಳಿಗ್ಗೆ ಐದೂವರೆಗೆ ಎದ್ದು ಯೋಗ ಕ್ಲಾಸಿಗೆ ಹೋಗುತ್ತಾರೆ ಮನೆಗೆಲಸ ಅಡುಗೆ ಮುಗಿಸಿ ಸಂಜೆ ನಾಲ್ಕಕ್ಕೆ ಆಡಲು ರೆಡಿ. ಈಗ ಒಟ್ಟು ಎಂಟ್ಹತ್ತು ಜನರಿದ್ದೇವೆ. ನಮ್ಮ ಕಾಲನಿಯ ಬ್ಯಾಡ್ಮಿಂಟನ್ ಕೋರ್ಟು ಸಂಜೆಯ ಹೊತ್ತು ಗಲಗಲ. ಹೆಚ್ಚಿನವರು ಮದುವೆಯ ನಂತರ ಬ್ಯಾಟು ಮುಟ್ಟದವರು ಆದರೆ ಉಮೇದಿಗೆ ಕಡಿಮೆಯಿಲ್ಲ. ಶಟಲ್ ಕೆಳಗೆ ಬಿದ್ದರೆ ಹೆಕ್ಕುವಾಗ ಬೇಜಾರಿಲ್ಲ.

ಹೀಗಾದರೂ ಹೊಟ್ಟೆ ಸಣ್ಣದಾಗಲಿ ಎಂದು ನಗುತ್ತೇವೆ. ಮಂಡಿ ನೋವು, ಬೆನ್ನು ನೋವು, ಫ್ರೋಜನ್ ಶೋಲ್ಡರ್ ಎನ್ನುತ್ತಲೇ ಮತ್ತೆ ಮತ್ತೆ ಆಡಲು ಓಡುತ್ತಲೇ ಇರುತ್ತೇವೆ . ಒಂದೂವರೆ ಎರಡು ಘಂಟೆಗಳ ಕಾಲ ನಾವು ಮತ್ತೆ ಮಕ್ಕಳಾಗಿಬಿಡುತ್ತೇವೆ. ಹೊರಗಿನ ಪ್ರಪಂಚದ ನೆನಪೂ ಆಗುವುದಿಲ್ಲ. ಮಾಸ್ಲೋ ನ ಸೆಲ್ಫ್ ಅಕ್ಬುವಲೈಝೇಷನ್ ನಾವು ಓದಿಲ್ಲ ಆದರೆ ನಮ್ಮೊಳಗಿನ ನಮ್ಮನ್ನು ಅರಸುವ ಕಾಯಕ ನಡೆಯುತ್ತಿದೆ ಎನ್ನುವುದು ಖುಷಿ ಕೊಡುತ್ತದೆ. ಬದಲಾದ ದಿನಮಾನಗಳೊಂದಿಗೆ ಕಣ್ಣು ತೆರೆದು ಹೊಸತನ್ನು ಒಳಗೆ ಬಿಟ್ಟುಕೊಳ್ಳುವ, ಬೆಳೆಯುವ ಮನಗಳು ಬೆಳಗಲಿ, ಕಲಿಕೆ ನಿರಂತರವಾಗಲಿ ಎಂದೇ ಮನ ಹಾರೈಸುತ್ತದೆ.

Real change, enduring change happens one step at a time-Ruth Bader Ginsburg

‍ಲೇಖಕರು Admin

8 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading