ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆರಳು ಬೆಳಕಿನ ಮಾಂತ್ರಿಕ ವಿ ಕೆ ಮೂರ್ತಿ ಬಗ್ಗೆ ಇನ್ನಷ್ಟು – ಮಂಜುನಾಥ್ ಚಾಂದ್

ಭಾರತ ಕಂಡ ಅದ್ಭುತ ಕ್ಯಾಮೆರಾ ಮಾಂತ್ರಿಕ ಮೂರ್ತಿಯವರ ಬಗ್ಗೆ ಮಂಜುನಾಥ್ ಚಾಂದ್ ಅವರು ಬರೆದಿದ್ದ ಲೇಖನದ ಮೊದಲ ಭಾಗ ’ಅವಧಿ’ಯಲ್ಲಿ ಪ್ರಕಟವಾಗಿತ್ತು.

ಅದರ ಮುಂದುವರೆದ ಭಾಗ ಇಲ್ಲಿದೆ :

ಮಂಜುನಾಥ್ ಚಾಂದ್

ಚಂದ್ರಮುಖಿ


ಪಾಲಿ ಮಿಶ್ರಿ ಎಂಬ ಅಪ್ಪಟ ಕಲಾಕಾರನ ಜೊತೆಗೆ…
ಆಗ ಒಂದೊಂದು ಫಿಲ್ಮ್ ಶೂಟಿಂಗ್ ಮುಗಿದ ಮೇಲೂ ಒಂದು ಎರಡು ತಿಂಗಳು ಬ್ರೇಕ್ ಇರುತ್ತಿತ್ತು. ಈ ಬಿಡುವಿನ ಸಂದರ್ಭದಲ್ಲಿ ನಾನೊಂದು ಫಿಲ್ಮ್ ನೊಡಿದ್ದೆ; ಅಮ್ರಪಾಲಿ ಅಂತ. ಅದರ ಫೋಟೋಗ್ರಫಿ ಬ್ಯುಟಿಫುಲ್. ಇಂಗ್ಲಿಷ್ ಪಿಕ್ಚರ್ ಗೆ ಫೋಟೊಗ್ರಫಿ ಮಾಡಿದಂತಿತ್ತು. ಪಾಲಿ ಮಿಶ್ರಿ ಅಂತ ಅದರ ಫೋಟೋಗ್ರಾಫರ್. ಆವತ್ತು ಪ್ರಕಾಶ್ ಸ್ಟುಡಿಯೋದಲ್ಲಿ ನೂರು ರೂ. ಸಂಭಾವನೆ ಪಡೆಯಲು ಹೋಗಿದ್ದಾಗ, ನನ್ನ ಜೂನಿಯರ್ ಕರೆದು, `ಪಾಲಿ ಮಿಶ್ರಿ ತುಮ್ಕೊ ಬುಲಾರಹೇ ಜಾವೋ’ ಎಂದ. ನನಗೆ ಭಾರೀ ಅಚ್ಚರಿ. `ಮಜಾಕ್ ಕರ್ ರಹೇ ಹೋ’ ಅಂತ ಅವನನ್ನೇ ಬೈದೆ. ಆದರೆ, ಅದು ನಿಜವಾಗಿತ್ತು. ಇನ್ನೊಂದು ಸ್ಟುಡಿಯೊದಲ್ಲಿ ಅವರಿಗಾಗಿ ನಾನು ಕಾದೆ. ವೈಟ್ ಶರ್ಟ್ , ವೈಟ್ ಪ್ಯಾಂಟು ಹಾಕ್ಕೊಂಡ ಸ್ಮಾರ್ಟ್  ಆಜಾನುಬಾಹು ಪಾರ್ಸಿ ಬಂದು ಕಾರಿನಿಂದ ಇಳಿದರು. ನನ್ನನ್ನು ನೋಡಿ `ಆರ್ ಯೂ ಕೃಷ್ಣಮೂರ್ತಿ’ ಅಂತ ಕೇಳಿದರು. ನನಗೋ ಆಶ್ಚರ್ಯ. `ಐ ಹರ್ಡ್  ಯು ವಾಂಟು ವರ್ಕ್  ವಿದ್ ಮೀ?’ ಎಂದು ಕೇಳಿದರು. “ಯೆಸ್ ಸರ್! ಇಟ್ಸ್ ಮೈ ambition” ಅಂದೆ. ’ಕಮಾನ್’  ಅಂತ ಒಳಗಡೆ ಕರ್ಕೊಂಡು ಹೋದರು. ನನಗೆ ಮಾತೇ ಬಂದಾಗಿ ಹೋಗಿತ್ತು. ಆವತ್ತು ಬೆಳಗಿಂದ ಸಂಜೆ ತಂಕ ಅವರ ಜೊತೆ ಕೆಲಸ ಮಾಡಿದೆ. ಸಂಜೆ ನನ್ನ ಕರೆದು ಹೇಳಿದರು,`ನನ್ನ ಜೊತೆ ಇಲ್ಲಿ ತನಕ 23 ಜನ ಅಸಿಸ್ಟೆಂಟ್ಸ್ಚ ಆಗಿ ಕೆಲಸ ಮಾಡಿದ್ದಾರೆ. ನೀನು 24ನೇಯವನು. ಯು ಆರ್ ದಿ ಬೆಸ್ಟ್” ಅಂತ.  ಮೊದಲನೇ ದಿನವೇ ಆಗಿರುವು ಘಟನೆ ಇದು, ನನಗೋ ಅಪರಿಮಿತ ಸಂತೋಷ. ’……..  ಕಮ್ ಚ ಟುಮಾರೋ’ ಅಂತ ಹೇಳಿ ಬೆನ್ನು ತಟ್ಟಿ ಕಳಿಸಿದರು. ಅವರ ಜೊತೆ ನಾನು ನಾಲ್ಕು ವರ್ಷ ಕಾಲ ಸಹಾಯಕನಾಗಿ ಕೆಲಸ ಮಾಡಿದೆ.
ಗುರುದತ್ ಗೆಣೆತನ…


ಬಳಿಕ ಗುರುದತ್ ನಮ್ಮ ಸ್ಟುಡಿಯೋನಲ್ಲಿ ಒಂದು ಪಿಕ್ಚರ್ ಮಾಡಬೇಕು ಅಂತ ಬಂದ. ಫೇಮಸ್ ಸ್ಟುಡಿಯೋ ಅಂತ ಆಗ ತಾನೆ ಬಾಂಬೆನಲ್ಲಿ ಆರಂಭವಾಗಿತ್ತು. ತುಂಬಾ ಅತ್ಯಾಧುನಿಕ ಸ್ಟುಡಿಯೋ ಆಗಿನ ಕಾಲಕ್ಕೆ. ಒಳ್ಳೆಯ ಸೆಟ್ಟಿಂಗ್, ಸಾಕಷ್ಟು ರೂಮ್ಗಳು, ಒಳ್ಳೆಯ ಕ್ಯಾಮರಾ ಎಲ್ಲ ಇದ್ದವು. ಆಗ ಗುರುದತ್ ಬಾಝಿ ಅಂತ ಫಿಲಂ ಮಾಡಲು ಅಲ್ಲಿಗೆ ಬಂದ. ನಾನು ಇನ್ನೊಬ್ಬರು ಸಿನಿಯರ್ ಫೋಟೋಗ್ರಾಫರ್ಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದೆ. ಆ ಫಿಲ್ಮನಲ್ಲಿ ಒಂದು ಸಾಂಗ್ ಪಿಕ್ಚರೈಶೇಷನ್ ಸಂದರ್ಭದಲ್ಲಿ ನಾನು ಕೆಲವು ಹೊಸ ಸಲಹೆಗಳನ್ನು ಕೊಟ್ಟೆ. ಗುರುದತ್ಗೆ ಇದು ತುಂಬಾ ಇಷ್ಟವಾಯಿತು. ಆದರೆ, ನಮ್ಮ ಕ್ಯಾಮರಾಮ್ಯಾನ್ ಈ ಶಾಟ್ ತಗೊಳ್ಳಲಿಕ್ಕೆ ಸಾಧ್ಯವಿಲ್ಲ ಅಂದ. ಯಾಕೆಂದ್ರೆ ಆತ ಸಲ್ಪ ದಪ್ಪಗಿದ್ದ. ಹಾಗಾಗಿ ಅವನಿಗೆ ಎದ್ದು ಕೂತು ಮಾಡಲು ಸಾಧ್ಯವಿರಲಿಲ್ಲ. ಕ್ಯಾಮರಾಮನ್ಗೆ ಕೇಳಿ ನೋಡು, ಅವನಿಗೆ ಸಾಧ್ಯವಿಲ್ಲಾಂದ್ರೆ ನಾನು ಈ ಶಾಟ್ ಶೂಟ್ ಮಾಡ್ತೇನೆ ಅಂದೆ. ಗುರುದತ್ ಹೋಗಿ ಕೇಳಿದ. ಅದಕ್ಕೆ ಕ್ಯಾಮರಾಮನ್ ಒಪ್ಪಿಗೆ ಕೊಟ್ಟ. ನಾನು ಅದನ್ನು ಶೂಟ್ ಮಾಡಿದೆ. ಆವತ್ತೇ ಗುರುದತ್ ಹೇಳಿದ; ಇನ್ನು ಮುಂದೆ ನಾನು ನೀನು ಒಟ್ಟಿಗೆ ಕೆಲಸ ಮಾಡುವ ಅಂದ. ಮುಂದೆ ಇನ್ನೊಂದು ಫಿಲ್ಮ್ಗೆ ಗುರುದತ್ ಕೈ ಹಾಕಿದ. ಅಲ್ಲಿಂದ ಅವ ಸಾಯುವ ತನಕ ಅವನ ಜೊತೆಗೇ ಕೆಲಸ ಮಾಡಿದೆ. ಗುರುದತ್ ತುಂಬಾ ಸಿಂಪಲ್ ಮನುಷ್ಯ. ಎಲ್ಲರ ಜೊತೆ ಆತ ತುಂಬಾ ಅನ್ಯೋನ್ಯವಾಗಿ ಇರುತ್ತ್ತಿದ್ದ. ಗುರುದತ್ ಬಿಟ್ಟು ಬೇರೆಯವರ ಜೊತೆ ಕೆಲಸ ಮಾಡಲು ನನಗೆ ಮನಸ್ಸಿರಲಿಲ್ಲ. ಕೆಲಸದಲ್ಲಿ ನನಗೆಷ್ಟು ಆಸಕ್ತಿ ಇತ್ತೋ, ಅದಕ್ಕಿಂತ ಹೆಚ್ಚು ಆಸಕ್ತಿ ಗುರುದತ್ಗೆ ಇತ್ತು.
ವೇವ್ಲೆಂಥ್ ಸೂಪರ್…
ನನಗೂ ಗುರುದತ್ ನಡುವಿನ ಕೆಮೆಸ್ಟ್ರಿ, ವೇವ್ ಲೆಂತ್ ಸೂಪರ್ ಆಗಿತ್ತು. ಇಬ್ರೂ ಕೆಲಸಕ್ಕೋಸ್ಕರ ಅನೇಕ ಬಾರಿ ಜಗಳ ಮಾಡಿದ್ವಿ. ಅದನ್ನ ಹೀಗೆ ಶೂಟ್ ಮಾಡಬೇಡ, ಸರಿ ಹೋಗಲ್ಲ ಅಂದ್ರೆ, ನಾನು ಹಠ ಮಾಡಿ ಹಾಗೇ ಶೂಟ್ ಮಾಡ್ತಾ ಇದ್ದೆ. `ಕಾಗಜ್ ಕೆ ಫೂಲ್’ ಅಂತ ಫಿಲ್ಮ್ ಮಾಡಿದೆವಲ್ಲ, ಅದು ಫಿಲ್ಮ್ ಹಿಸ್ಟರಿಯಲ್ಲಿ ದೊಡ್ಡ ಮೈಲಿಗಲ್ಲು. ಈ ಚಿತ್ರ ಆರಂಭ ಮಾಡುವುದಕ್ಕೆ ಮುಂಚೆ ಅವನಿಗೆ ಹೇಳಿದೆ ನಾನು, ಲೋ ಈ ಸಬ್ಜೆಕ್ಟೇ ಬೇಡ, ಸರಿ ಹೋಗಲ್ಲ ಅಂದಿದ್ದೆ. ಫಿಲ್ಮ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವವರು ಅಂದ್ರೆ ಅವರ ಬಳಿ ದಂಡಿಯಾಗಿ ದುಡ್ಡಿರತ್ತೆ ಎಂದು ಭಾವಿಸುತ್ತಾರೆ. ಅವರಿಗೂ ಕಷ್ಟಗಳಿವೆ ಅಂತ ಗೊತ್ತಾಗುವುದಿಲ್ಲ. ಈ ಚಿತ್ರ ಮಾಡುವುದು ಬೇಡ ಅಂದೆ. ಏಯ್, ಇಲ್ಲ ಕಣೋ ನಾನು ಮಾಡಲೇಬೇಕು ಅಂತ ಪಟ್ಟು ಹಿಡಿದ ಗುರುದತ್. ತುಂಬ ಹಠವಾದಿಯಾಗಿದ್ದ ಆತ. ಏನಾದರೂ ಮಾಡಬೇಕು ಅಂದ್ರೆ ಮಾಡಲೇಬೇಕು. ಆದರೆ, ಏನಾದರೂ ಸಿಟ್ಟು ಮಾಡಿಕೊಂಡ್ರೆ, ಮರುದಿನ ಅದನ್ನು ಮರೆತೂ ಬಿಡುತ್ತಿದ್ದ. ಅಷ್ಟೊಂದು ಫ್ರೆಂಡ್ಲಿ ಆಗಿರುತ್ತಿದ್ದ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಗುರುದತ್ ನಂತರ ಅಷ್ಟೊಂದು ಕ್ರಿಯೇಟಿವ್ ಆಗಿರೋರು ಬೇರೆ ಡೈರೆಕ್ಟರ್ ನನಗೆ ಸಿಗಲೇ ಇಲ್ಲ. ಶ್ಯಾಮ್ ಬೆನಗಲ್ ನನಗೆ ತುಂಬಾ ಹಿಡಿಸುತ್ತಿತ್ತು, ಆದರೆ ಅವರ ಸ್ಟೈಲೇ ಬೇರೆ ಇತ್ತು. ಅವರದ್ದು ಸ್ವಲ್ಪ ಡಾಕ್ಯುಮೆಂಟರಿ ಸ್ಟೈಲ್. ಡ್ರಮ್ಯಾಟಿಕ್ ಸ್ಟೈಲ್ ಅವರಿಗೆ ಕಷ್ಟವಾಗಿತ್ತು. ನನ್ನ ಬಳಿಯೇ ಟ್ರೈನಿಂಗ್ ಪಡೆದು ಒಳ್ಳೆ ನಿರ್ದೇಶಕರಾದವರು ಅಂದ್ರೆ ಗೋವಿಂದ ನಿಹಲಾನಿ.

ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಬೇಕು ಎಂಬ ಮಹದಾಸೆ ನನಗಿತ್ತು. ಆದರೆ ಯಾವ ನಿರ್ದೇಶಕರೂ ಆಸಕ್ತಿ ವಹಿಸಲಿಲ್ಲ. ಕೊನೆಯಲ್ಲಿ ನನಗೊಂದು ಪಾತ್ರ ಅಂತ ಕೊಟ್ಟವರು ರಾಜೇಂದ್ರ ಸಿಂಗ್ ಬಾಬು ಅವರು. ಅವರ `ಹೂವು ಹಣ್ಣು’ ಚಿತ್ರದಲ್ಲಿ ಅಭಿನಯ ಮಾಡಿದೆ. ಅದನ್ನು ಬಿಟ್ಟರೆ ಬೇರೆ ಯಾರೂ ನನ್ನನ್ನು ಕರೆಯಲಿಲ್ಲ. ನನ್ನ ಸಂದರ್ಶನಕ್ಕೆ ಬಂದ ಅನೇಕರು ಇಂತಹ ಪ್ರಶ್ನೆಗಳನ್ನೇ ಕೇಳಿದ್ದಾರೆ. ನೀವು ಈ ಪ್ರಶ್ನೆಯನ್ನು ನಿರ್ದೇಶಕರಿಗೆ ಕೇಳಿ ಅಂತ ಹೇಳುತ್ತ್ತಿದ್ದೆ. ನೀವೇ ಒಂದು ಸಿನೆಮಾ ನಿರ್ದೇಶನ ಮಾಡಿ ಎಂದು ಕೆಲವರು ನನಗೆ ಆಫರ್ ಕೊಟ್ಟಿದ್ದಿದೆ. ಆದರೆ, ನಾನು ಆ ಬಗ್ಗೆ ಹೆಚ್ಚು ಆಸಕ್ತಿ ವಹಿಸಲಿಲ್ಲ.
ಕ್ಯಾಮರಾಮನ್ ಹೆಚ್ಚು ಕ್ರಿಯೇಟಿವ್…
ಒಂದು ವಿಷಯ ನಿಮಗೆ ಸ್ಪಷ್ಟವಾಗಿ ಹೇಳಿಬಿಡುತ್ತೇನೆ. ಒಬ್ಬ ನಿರ್ದೇಶಕನಿಗಿಂತ ಒಬ್ಬ ಕ್ಯಾಮೆರಾಮನ್ ಹೆಚ್ಚು ಕ್ರಿಯೇಟಿವ್ ಆಗಿರುತ್ತಾನೆ. ಆತ ಶೂಟಿಂಗ್ ಮಾಡುವಾಗ ಅತ್ಯಂತ ಡೆಡಿಕೇಟ್ ಆಗಿ, ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ. ಬೆಳಿಗ್ಗೆ 9.30ಕ್ಕೆ ಸ್ಟುಡಿಯೋಗೆ ಶೂಟಿಂಗ್ ಮಾಡೋಕೆ ಅಂತ ಎಂಟರ್ ಆದ್ರೆ ಸಂಜೆ 6.30 ತನಕ ಅವನ ಮನಸ್ಸು, ದೇಹ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ. ಒಂದು ನಿಮಿಷವೂ ಪುರುಸೊತ್ತು ಇರುವುದಿಲ್ಲ. ಮೋಸ್ಟ್ ಹಾರ್ಡ್ ವರ್ಕಿಂಗ್ ಪರ್ಸನ್ ಅಂದ್ರೆ ಕ್ಯಾಮರಾಮನ್. ಇದೆಲ್ಲರ ಜೊತೆಗೆ ಕ್ಯಾಮರಾಮನ್ ಒಂದು ಸನ್ನಿವೇಶದ ಬಗೆಗಿನ ನಿರ್ಧಾರವನ್ನು ಆ ತಕ್ಷಣವೇ ಆನ್ ದಿ ಸ್ಪಾಟ್ ಕೈಗೊಳ್ಳಬೇಕಾಗುತ್ತದೆ. ನಿರ್ದೇಶಕನಾದರೆ ಯಾವ್ಯಾವುದನ್ನು ಹೇಗೆ ಮಾಡಬೇಕು ಅಂತ ಮೊದಲೇ ಮನೆಯಲ್ಲಿ ಕುಂತೇ ನಿರ್ಧಾರ ಕೈಗೊಳ್ಳಬಹುದು. ಬಟ್ ಸ್ಟುಡಿಯೋಗೆ ಬಂದಾಗ ಕ್ಯಾಮರಾಮನ್ ಕ್ರಿಯೇಟಿವ್ ವರ್ಕ್  ಮಾತ್ರ ಲೆಕ್ಕಕ್ಕೆ ಬರೋದು.
ಕಲರ್ ಕಾಲ…
`ಕನೀಜ್’ ನಾನು ಮಾಡಿದ ಮೊದಲ ಕಲರ್ ಫಿಲ್ಮ್. ಗುರುದತ್ ಈ ಫಿಲ್ಮ್ ಅನ್ನು ಕಲರ್ನಲ್ಲಿ ಮಾಡೋಣ ಅಂತ ಹೊರಟ. ಅದನ್ನು ಪೂರ್ತಿ ಮಾಡಲಿಕ್ಕೆ ಅವನಿಂದ ಸಾಧ್ಯವಾಗಲಿಲ್ಲ. ಇಷ್ಟ ಆಗಲಿಲ್ಲ ಅವನಿಗೆ. ಅರ್ಧಕ್ಕೆ ಬಿಟ್ಟುಬಿಟ್ಟ. ಆಮೇಲೆ ಕೈಗೆತ್ತಿಕೊಂಡಿದ್ದು `ಚೌದುವಿಕಾ ಚಾಂದ್’. ಈ ಫಿಲ್ಮ್ ಸೂಪರ್ ಹಿಟ್ ಚಿತ್ರ ಆಗೋಯ್ತು. ಆಗಿನ ಕಾಲದಲ್ಲಿ ಸಿಲ್ವರ್ ಜುಬಿಲಿ ಆಯ್ತು. ಫಿಲ್ಮ್ ಡಿಸ್ಟ್ರಿಬ್ಯುಟರ್ ಎಲ್ಲ ಬಂದು ಇನ್ನೊಂದಿಷ್ಟು ಚಿತ್ರ ಮಾಡಿ ಅಂತ ಕೇಳ್ತಾ ಇದ್ರು. ಆವಾಗೊಂದು ಕ್ರೇಜ್ ಬಂದಿತ್ತು; ಒಂದೋ ಎರಡೋ ಸಾಂಗ್ ಕಲರ್ನಲ್ಲಿ ಮಾಡುವುದು. ಪೂರ್ತಿ ಫಿಲ್ಮ್ ಕಲರ್ನಲ್ಲಿ ಮಾಡುವುದು ಕಷ್ಟ ಇತ್ತು ಬಿಡಿ. ಪ್ರೊಡಕ್ಷನ್ ತುಂಬಾ ದುಬಾರಿ ಇತ್ತು.
ಅಮ್ಮಾ ಅಂದ್ರೆ ಲಾಸ್ಟ್ ವರ್ಡ್!
ಗುರುದತ್ನ ಪರ್ಸನಲ್ ಲೈಫ್ ಹೇಗೋ ಏನೋ ಗೊತ್ತಿಲ್ಲ ನನಗೆ. ಆತ್ಮಹತ್ಯೆ ಮಾಡಿಕೊಳ್ಳೋ ಟೆಂಡೆನ್ಸಿ ಅವನ ಬ್ಲಡ್ನಲ್ಲೇ ಇತ್ತು ಅನಿಸತ್ತೆ. ಗುರುದತ್ ಮಗ ಕೂಡ ಆತ್ಮಹತ್ಯೆ ಮಾಡಿಕೊಂಡ. ಗುರು ತನ್ನ ವೈಯಕ್ತಿಕ ಜೀವನದ ಸಂಗತಿಗಳನ್ನು ಯಾರ ಹತ್ತಿರವೂ ಹೇಳಿಕೊಳ್ಳುತ್ತ್ತಿರಲಿಲ್ಲ. ಇನ್ ಫ್ಯಾಕ್ಟ್ ಅವರ ವೈಫ್ ಗೀತಾ ದತ್ ಮಾತ್ರ ನನ್ನ ಮನೆಗೆ ಬಂದು ಕೆಲವು ವಿಷಯ ಹೇಳಿಕೊಳ್ತಾ ಇದ್ಲು. ಆದರೆ, ಅವಳಿಗೆ ನಾನು ಹೇಳ್ತಾ ಇದ್ದೆ; ಒಂದು ವಿಷಯ ಹೇಳು, ನೀನು ಹ್ಯಾಪಿಯಾಗಿದ್ದಿಯೋ ಇಲ್ಲವೋ? ಗುರು ನಿನ್ನನ್ನು, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ತಾ ಇದ್ದಾನೋ ಇಲ್ಲವೋ? ಆತ ಮೂರು ಮಕ್ಕಳನ್ನೂ ಚೆನ್ನಾಗಿ ನೋಡಿಕೊಳ್ತಾ ಇದ್ದ. ಎಲ್ಲರನ್ನೂ ಹ್ಯಾಪಿಯಾಗಿ ಇರಿಸಿದ್ದ. ಅದನ್ನು ಬಿಟ್ಟು ಹೊರಗಿನವರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ತಿಯಾ? ಅಳೋದು ಎಲ್ಲ ಮಾಡಬೇಡ. ಅಂತ ಹೇಳಿ ಕಳಿಸ್ತಾ ಇದ್ದೆ. ಅವಳೇ ಹೇಳಿದ್ಲು, ಆ ವಿಷಯದಲ್ಲಿ ಗುರುದತ್ ಬಗ್ಗೆ ಯಾವುದೇ ಕಂಪ್ಲೇಂಟ್ ಇಲ್ಲ ಅಂತ.
ಗುರುದತ್ ಅನ್ಯಮನಸ್ಕನಾಗಿದ್ದಾಗ ನಾನೂ ಹೇಳಿದ್ದಿದೆ; ಯಾಕೆ ಏನೇನಕ್ಕೋ ತಲೆ ಕೆಡಿಸಿಕೊಳ್ತಿಯಾ ಅಂತ? ಏಯ್ ಅದೆಲ್ಲ ಬಿಡು, ಅವೆಲ್ಲ ನೀನು ಕೇಳೋಕೆ ಬರಬೇಡ ಅಂತಿದ್ದ. ಏನಾದರೂ ಸಮಸ್ಯೆ ಇದ್ದರೂ ಇರಬಹುದು, ಆದರೆ, ನಾನು ಅವನ ಪರ್ಸನಲ್ ವಿಷಯದಲ್ಲಿ ಮಧ್ಯಪ್ರವೇಶ ಮಾಡಲು ಹೋಗುತ್ತಿರಲಿಲ್ಲ. ಅವನ ಅಮ್ಮನ ಹತ್ರಾನೂ ಹೇಳಿಕೊಳ್ತಾ ಇರಲಿಲ್ಲ; ಆದ್ರೆ ಅಮ್ಮನನ್ನು ತುಂಬಾ ಪ್ರೀತಿ ಮಾಡ್ತಾ ಇದ್ದ. ಅಮ್ಮಾ ಅಂದ್ರೆ ಅವನಿಗೆ ಲಾಸ್ಟ್ ವರ್ಡ್.
ನಮ್ಮ ಮಾತು ಅವರ ಪತ್ನಿ ಸಂಧ್ಯಾ ಅವರ ಬಗ್ಗೆ ಹೊರಳಿತು. ಅವರ ಬಗ್ಗೆ ಕೊಂಚ ಮಾತಾಡಿ ಅಂದ್ವಿ ಅದಕ್ಕೆ ಅವರು ಅಂದಿದ್ದು ಇಷ್ಟು’ …best kind of woman any man can have…in all respects. She was highly educated woman, her father is much more famous than me… ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರನ್ನೂ ಪ್ರೀತಿ ಮಾಡ್ತಾ ಇದ್ರು. ಯಾವತ್ತೂ ಒಂಚೂರೂ ಅಹಂಕಾರ ಮಾಡಿದವರಲ್ಲ. ಯಾರನ್ನೂ ತಾರತಮ್ಯದಿಂದ ನೋಡಿದವರಲ್ಲ……’ ಹೀಗೆ ಹೇಳುತ್ತಾ ಮೂರ್ತಿ ಅವರು ತಮ್ಮ ಹಿಂದಿನ ಬದುಕಿನ ಕ್ಷಣಗಳನ್ನು ನೆನೆಸಿಕೊಳ್ಳುತ್ತಾ ಕೆಲಕ್ಷಣ ಮೌನಕ್ಕೆ ಜಾರಿದರು…
 

‍ಲೇಖಕರು G

10 April, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading