ನೆನೆಯಬೇಕಾದದ್ದು ಕೆಂಗಲ್ ಹನುಮಂತಯ್ಯನವರನ್ನು..

 

 

 

 

 

ಜಿ ಎನ್ ನಾಗರಾಜ್ 

 

 

 

 

ವಿಧಾನಸೌಧದ ನಿರ್ಮಾರ್ತೃ ಕೆಂಗಲ್ ಹನುಮಂತಯ್ಯನವರ ಮುಖ್ಯ ಕೊಡುಗೆ ಕರ್ನಾಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ :

ವಿಧಾನಸೌಧ ನಿರ್ಮಾಣದ ಬಗ್ಗೆ ಅನವಶ್ಯಕ ವೈಭವದ ಉತ್ಸವ ಉದ್ಘಾಟಿಸುತ್ತಿರುವ ದಿನ ನೆನೆಯಬೇಕಾದ್ದು ಕೆಂಗಲ್ ಹನುಮಂತಯ್ಯನವರ ವ್ಯಕ್ತಿತ್ವವನ್ನು ಮತ್ತು ಕರ್ನಾಟಕಕ್ಕಾಗಿ ಮುಖ್ಯಮಂತ್ರಿ ಸ್ಥಾನವನ್ನೇ ತ್ಯಾಗ ಮಾಡಿದ ಪ್ರಸಂಗವನ್ನು.

ವಿಧಾನಸೌಧದ ನಿರ್ಮಾಣಕ್ಕಾಗಿ ಹಲವು ರೀತಿಯ ಕಷ್ಟ, ನಿಂದೆಗಳನ್ನು ಎದುರಿಸಿದರೂ ಕೂಡ ಛಲ ಬಿಡದೆ ಅದನ್ನು ಪೂರ್ಣಗೊಳಿಸಿದರು. ರಾಜನ ವಾಸ ಸ್ಥಾನವಾದ ಅರಮನೆಯೇ ಅಧಿಕಾರದ ಕೇಂದ್ರ ಮತ್ತು ಸಂಕೇತವಾದ ಮನಸ್ಥಿತಿಯನ್ನು ಬದಲಿಸಲು ಪ್ರಜಾಪ್ರಭುತ್ವದ ಆಡಳಿತ ಕೇಂದ್ರವಾಗಿ ವಿಧಾನಸೌಧ ಅರಳಬೇಕೆಂಬ ತಾತ್ವಿಕ ತಳಹದಿಯನ್ನು ಬಲವಾಗಿ ಪ್ರತಿಪಾದಿಸಿದರು.

ಅವರು ಮೈಸೂರು ಸಂಸ್ಥಾನದ ಕಾಂಗ್ರೆಸ್ ಪಕ್ಷದಲ್ಲಿ ಕರ್ನಾಟಕ ರಾಜ್ಯ ಸ್ಥಾಪನೆಗೆ ಇದ್ದ ವಿರೋಧವನ್ನು ಲಕ್ಷಿಸದೆ, ತಮ್ಮ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವ ಸಂಭವವನ್ನೂ ಲೆಕ್ಕಕ್ಕಿಡದೆ ಕರ್ನಾಟಕ ರಾಜ್ಯ ಸ್ಥಾಪನೆಯನ್ನು ಬೆಂಬಲಿಸಿ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡರು. ಹೀಗೆ ಅವರು ವಿಧಾನಸೌಧದ ಉದ್ಘಾಟನೆಯಾಗುವ ವೇಳೆಗೆ ಅದರಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಂಡರು.

ಸ್ವಾತಂತ್ರ್ಯ ಚಳುವಳಿಯ ಸ್ಮಾರಕವಾಗಿ ಶಿವಪುರದ ಧ್ವಜ ಸತ್ಯಾಗ್ರಹ ಸೌಧ ಅವರ ಮತ್ತೊಂದು ಕೊಡುಗೆ.

ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯನ್ನು ಸ್ಥಾಪಿಸಿದರು. ಅಧಿಕಾರಶಾಹಿಯ ವಿರೋಧವನ್ನು ಲೆಕ್ಕಿಸದೆ ಪ್ರಾಧ್ಯಾಪಕರಾಗಿದ್ದ ಎ.ಎನ್.ಮೂರ್ತಿರಾವ್ ರವರನ್ನು ಮೊದಲ ನಿರ್ದೇಶಕರನ್ನಾಗಿ ನೇಮಿಸಿದರು. ಅದರ ಮೊದಲ ಪ್ರಕಟನೆಯಾಗಿ ಕುವೆಂಪು ಮತ್ತು ಮಾಸ್ತಿಯವರ ಸಂಪಾದಕತ್ವದಲ್ಲಿ ಕುಮಾರವ್ಯಾಸ ಭಾರತದ ಪ್ರಕಟನೆ ಮನೆ ಮಾತಾಯಿತು.

ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಹಲವು ಮಹತ್ತರ ಬದಲಾವಣೆಗಳನ್ನು ತರುವ ಅವರ ಪ್ರಯತ್ನಕ್ಕೆ ಅಂದಿನ ಅಧಿಕಾರಶಾಹಿಗಳ ಜೊತೆಗೆ ಅವರ ಮಂತ್ರಿ ಮಂಡಲದ ಸಹೋದ್ಯೋಗಿಗಳೂ ಸೇರಿ ಅಡ್ಡಿಯಾದರು. ಅದರಲ್ಲೊಂದು ಕೃಷಿಕರು ಮತ್ತು ಕೃಷಿಕೂಲಿಕಾರರ ಶಿಕ್ಷಣಕ್ಕೆ ಅನುಕೂಲವಾಗುವಂತೆ ಬಿತ್ತನೆ ಮತ್ತು ಸುಗ್ಗಿಯ ಕಾಲದಲ್ಲಿ ದೀರ್ಘ ರಜೆ ನೀಡುವ ಮೂಲಕ ಅವರ ಶಿಕ್ಷಣಕ್ಕೆ ಅನುಕೂಲ ಮತ್ತು ಕೃಷಿಯಲ್ಲಿ ಭಾಗವಹಿಸುವ ಮೂಲಕ ಪ್ರಾಯೋಗಿಕ ಅನುಭವ ಪಡೆಯುವ, ಶ್ರಮ ಮತ್ತು ಶ್ರಮಿಕರ ಬಗೆಗೆ ಗೌರವ ಬೆಳೆಸಿಕೊಳ್ಳಲು ಅವಕಾಶ ಒದಗಿಸಬೇಕೆಂಬ ಅವರ ಪ್ರಯತ್ನವನ್ನು ಪುರೋಹಿತಶಾಹಿಯ ಭಾರಿ ವಿರೋಧದ ಕಾರಣವಾಗಿ ಕೈಬಿಡಬೇಕಾಯಿತು ಎಂಬುದು ನಮ್ಮ ಶಿಕ್ಷಣದ ದುರಂತ ಘಟನೆ.

ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ರಾಜಪ್ರಭುತ್ವದ ವಿರುದ್ಧವಾಗಿ, ಪ್ರಜಾಪ್ರಭುತ್ವ ಮೌಲ್ಯಗಳಿಗಾಗಿ ಸೆಣಸಿದರು. ರಾಜರು ದಸರಾದಲ್ಲಿ ಅಧಿಕಾರ ಕಳೆದುಕೊಂಡ ಮಾಜಿ ರಾಜರ ಜಂಬೂಸವಾರಿಯನ್ನು ವಿರೋಧಿಸಿ ಇಂದು ರೂಢಿಯಲ್ಲಿರುವ ದೇವಿ ಪ್ರತಿಮೆಯ ಮೆರವಣಿಗೆ ರೂಢಿಗೆ ಬರಲು ಕಾರಣರಾದರು .
ಅವರು ಕೇಂದ್ರ ಮಂತ್ರಿಯಾಗಿದ್ದು ಇಂದಿರಾಗಾಂಧಿಯನ್ನು ಎದುರುಹಾಕಿಕೊಂಡದ್ದು ಮಂತ್ರಿ ಸ್ಥಾನ ಕಳೆದುಕೊಂಡದ್ದು, ಭಾರತದ ಆಡಳಿತ ಸುಧಾರಣಾ ಸಮಿತಿಯ ಅಧ್ಯಕ್ಷರಾಗಿದ್ದು ಇವು ಬೇರೆಯೆ ಪ್ರಸಂಗಗಳು.

‍ಲೇಖಕರು avadhi

October 25, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. G.N.Nagaraj

    ಕರ್ನಾಟಕವನ್ನು ಏಕೀಕರಿಸುವ ಬಗ್ಗೆ , 1952 ರಲ್ಲಿಯೇ ನೆಹರೂ ಮೊದಲಾದ ನಾಯಕರನ್ನೊಳಗೊಂಡ ಹೈಕಮಾಂಡ್ ಅನ್ನು ಎದುರುಹಾಕಿಕೊಂಡು ಏಐಸಿಸಿಯಲ್ಲಿ ಭಾಷಾವಾರು ಪ್ರಾಂತಗಳ ಸ್ಥಾಪನೆಯ ವಿರುದ್ಧ ಕೈಗೊಂಡ ತೀರ್ಮಾನವನ್ನು ಕಟುವಾಗಿ ವಿರೋಧಿಸಿದರು. ಕರ್ನಾಟಕದ ಬಗ್ಗೆ ಜನಾಭಿಪ್ರಾಯ ರೂಪಿಸಲು ಮೈಸೂರು ಸಂಸ್ಥಾನದ ಹೊರಗಿನ ಪ್ರದೇಶಗಳಿಗೆ ಪ್ರವಾಸ ಮಾಡಿ ಅಲ್ಲಿಯ ಬಹಿರಂಗ ಸಭೆಗಳಲ್ಲಿ ಜನರ ಸಂಶಯಗಳನ್ನು ಬಗೆಹರಿಸಿದರು. ಆದರೆ ಮೈಸೂರು ಸಂಸ್ಥಾನದ ಕಾಂಗ್ರೆಸ್ ನಲ್ಲಿ ಅಂದಿನ ಮುಖ್ಯ ನಾಯಕರಾಗಿದ್ದ ಎಚ್.ಕೆ.ವೀರಣ್ಣಗೌಡ, ಕೆ.ವಿ ಶಂಕರಗೌಡ, ಹುಚ್ಚಮಾಸ್ತಿಗೌಡ, ದೇವರಾಜ ಅರಸು ಮತ್ತು ಅವರದೆ ಸಚಿವ ಸಂಪುಟದ ಮೂರು ಜನ ಮಂತ್ರಿಗಳೂ ವಿರೋಧಿಸಿದರು. ಏಕೀಕರಣವಾದರೆ ಒಕ್ಕಲಿಗರ ಪ್ರಧಾನ್ಯತೆ ಹೋಗುತ್ತದೆ ಎಂಬುದು ಅವರ ಭಯ. ಮೈಸೂರು ಅರಸರ ಬೆಂಬಲವೂ ಈ ಗುಂಪಿಗಿತ್ತು. ಅವರು ಎರಡು ಕರ್ನಾಟಕ ಎಂಬ ಸೂತ್ರವನ್ನು ಮುಂದಿಟ್ಟರು. ಕೆಂಗಲ್ ಸ್ವತಃ ಒಕ್ಕಲಿಗರಾದರೂ ಈ ಜಾತೀಯ ವಾದವನ್ನು ಒಪ್ಪಲಿಲ್ಲ. ಅದರಿಂದಾಗಿ ಅವರ ಜಾತಿಯ ಶಾಸಕರ ಬೆಂಬಲವನ್ನು ಕಳೆದುಕೊಂಡರು
    ಇಷ್ಟೆಲ್ಲಾ ಆದರೂ ಕರ್ನಾಟಕವನ್ನು ಏಕೀಕರಿಸುವ ನಿರ್ಣಯವನ್ನು ಮೈಸೂರು ಸಂಸ್ಥಾನದ ವಿಧಾನಸಭೆಯಲ್ಲಿ ಮಂಡಿಸಿದ್ದು ಮತ್ತು ವಿಧಾನ ಸಭೆಯ ಅಂಗೀಕಾರವನ್ನು ಪಡೆದದ್ದು ಅವರ ಹೆಮ್ಮೆಯ ಗರಿಯಾಯಿತು. ಆದರೆ ಅವರ ನೆಚ್ಚಿನ ವಿಧಾನಸೌಧದ ಉದ್ಘಾಟನೆಯನ್ನು 1956 ರ ವಿಜಯದಶಮಿಯ ದಿನ ಏರ್ಪಡಿಸಿದರು
    ಆದರೆ ಕೆಂಗಲ್ ರವರು , ವಿಧಾನ ಸೌಧದ ಉದ್ಘಾಟನೆ ಮತ್ತು ಕರ್ನಾಟಕ ರಾಜ್ಯ ( ಅಂದು ವಿಶಾಲ ಮೈಸೂರು ) ದ ಮೊದಲ ರಾಜ್ಯೋತ್ಸವದ ದಿನದಲ್ಲಿ ಹೆಮ್ಮೆಯಿಂದ ಬೀಗಲು ಅವಕಾಶ ಕೊಡಲಿಲ್ಲ. ಈ ಕೆಳಗಿನ ದಿನಾಂಕಗಳು ಈ ವಿಷಯವನ್ನು ಕಣ್ಣಿಗೆ ರಾಚುವಂತೆ ಮಾಡುತ್ತವೆ-
    ಕೆಂಗಲ್ ರವರ ರಾಜೀನಾಮೆ-16-8-1956
    ವಿಧಾನಸೌಧದ ಉದ್ಘಾಟನೆ- 10 -10-1956
    ರಾಜ್ಯೋತ್ಸವ 1-11-1956

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: