ಕಥೆಗಾರ ಅನಿಲ್ ಗುನ್ನಾಪೂರ ಬರೆದ ಕಥಾಸಂಕಲನ ‘ಸರ್ವೇ ನಂಬರ್—97’
‘ಹೊಂಗಿರಣ ಪ್ರಕಾಶನ’ ಈ ಪುಸ್ತಕ ಪ್ರಕಟಿಸಿದೆ.
ಈ ಕಥಾಸಂಕಲನದ ಕುರಿತ ದಾಕ್ಷಾಯಣಿ ಮಸೂತಿ ಅವರ ಅನಿಸಿಕೆ ಇಲ್ಲಿದೆ
–ದಾಕ್ಷಾಯಣಿ ಮಸೂತಿ
ರೈತ ಕುಟುಂಬದಿಂದ ಬಂದ ನನಗೆ ಪದೇ ಪದೇ ಅಪ್ಪನ ಬಾಯಲ್ಲಿ ಇಲ್ಲವೇ ಸಂಬಂಧಿಕರ ಬಾಯಲ್ಲಿ ಕೇಳುತ್ತಲೇ ಬೆಳೆದ ಪದ ಸರ್ವೇನಂಬರ್. ಇದೇ ಹೆಸರಿನ ಪುಸ್ತಕ ನೋಡಿ ಓದಲೇಬೇಕು ಅಂತ ಅನಿಸಿದಂತೂ ಸುಳ್ಳಲ್ಲ. ತಿಂಗಳುಗಳಿಂದ ಯಾರದೋ ಹೊಲದೊಳಗೆ ಸೇರಿಹೋದ ಅಪ್ಪನ ಹೊಲವನ್ನು ಹುಡುಕಿಕೊಂಡಲು ಅಪ್ಪ ಭೂಮಿ ಅಳತೆಗೆ ಅರ್ಜಿ ಹಾಕಿ ಈಗಲೂ ಕಛೇರಿಗೆ ಅಲೆಯುತ್ತಿದ್ದಾರೆ. ಅನಿಲ್ ಗುನ್ನಾಪುರವರ ಸರ್ವೆ ನಂಬರ್-97, ಓದಿ ಅಪ್ಪ ಕಣ್ಣು ಮುಂದೆ ಬಂದ. ಕಥೆಗಳಲ್ಲಿ ಕುತೂಹಲವಿದೆ.

ನಿತ್ಯ ಜೀವನದ ತೊಳಲಾಟವಿದೆ. ಜನಸಾಮಾನ್ಯರ ಪರಿಪಾಟಿನ ಎಳೆಗಳಿವೆ. ಸ್ವತಃ ಉತ್ತರ ಕರ್ನಾಟಕದವಳಾದ ನನಗೆ ನಮ್ಮದೇ ಆಡು ಭಾಷೆಯಲ್ಲಿ ಓದುವ ಮಜವನ್ನು ದಕ್ಕಿಸಿಕೊಂಡತಾಯಿತು. ನನ್ನ ಓದಿಗೆ ನಿಲುಕಿದ ಅಂಶಗಳೆಂದರೆ ಯಾವುದೇ ಕಥೆಯಲ್ಲಿ ಅತಿ ಉತ್ಪ್ರೇಕ್ಷೆ ಇಲ್ಲ. ಕಣ್ಣ ಮುಂದೆ ನಡೆಯುವ ಜೀವನದ ಏರುಪೇರುಗಳು ಅಕ್ಷರಗಳಾಗಿವೆ. ನಮ್ಮದೇ ಸುತ್ತಮುತ್ತ ಇರುವ ಲ್ಯಾಂಬ್ಟನ್, ಬಡತನ ಜೊತೆಗೆ ದೌರ್ಜನ್ಯದಲ್ಲಿ ಬೆಂದ ಕಸ್ತೂರಿ, ಪೀರಪ್ಪ, ಬಡೇಸಾಬ್, ಹೀಗೆ ಕಥೆಯ ಪಾತ್ರಗಳು ಜೀವಂತವಾಗಿ ಕಣ್ಣ ಮುಂದೆ ಓಡಾಡಿದಂತಾಗುವುದು ಕಥೆಗಳ ಹೆಗ್ಗಳಿಕೆ.
ಶಾಲೆಯಲ್ಲಿ ದೇವದಾಸಿಗಳ ಮಕ್ಕಳನ್ನು ನೋಡಿದ ನನಗೆ ಆ ಮಕ್ಕಳ ಅಭದ್ರತೆ, ಒಂಟಿತನ, ಅವರು ಅನುಭವಿಸುವ ಮೂದಲಿಕೆ ಮಾತುಗಳು ಲಿಂಗಾಯತ ಖಾನಾವಳಿಯ ಮಾದೇವ ಮತ್ತೊಮ್ಮೆ ನೆನಪಿಸಿ ಕಾಡಿದಂತೂ ಸುಳ್ಳಲ್ಲ. ಧರೆಪ್ಪ ಇಂದಿಗೂ ಮಾನವೀಯತೆ ಇದೆ ಎನ್ನುವುದರ ಪ್ರತೀಕ. ಅಲ್ಲಲ್ಲಿ ತುಸು ಜಾಸ್ತಿ ಕಥೆಗಳನ್ನು ಎಳೆದಿದ್ದಾರೆ ಅನ್ನುವುದ ಹೊರತುಪಡಿಸಿದರೆ ಕಥೆಗಳು ಸಮಾಜಮುಖಿಯಾಗಿವೆ.






0 Comments