ಪಂಪ ಪ್ರಶಸ್ತಿ ಘೋಷಣೆಯಾದ ಸಂದರ್ಭದಲ್ಲಿ ಬಿ.ಎ.ಸನದಿ ಅವರ ಜೊತೆ ಹಮ್ಮಿಕೊಂಡಿದ್ದ ಸಂವಾದವನ್ನು ನಾಗರಾಜ ಹರಪನಹಳ್ಳಿ ಇಲ್ಲಿ ಸ್ಮರಿಸಿಕೊಂಡಿದ್ದಾರೆ
ನಾಗರಾಜ ಹರಪನಹಳ್ಳಿ
ಪಂಪ ಪ್ರಶಸ್ತಿ ವಿಜೇತ ಕವಿ ಬಿ.ಎ.ಸನದಿ ಅವರ ಜೊತೆ ಸಂವಾದ: ನೆನಪಿನ ದೋಣಿ ಬಿಚ್ಚಿಟ್ಟ ಜನಸ್ನೇಹಿ ಕವಿ
ಕನ್ನಡ ಭಾಷೆಗೆ ಸಾವಿಲ್ಲ- ಕವಿ ಕಲಾವಿದರು ಜನರೊಂದಿಗೆ ಬೆರೆಯಬೇಕು – ಬಿ.ಎ.ಸನದಿ
ಕನ್ನಡ ಭಾಷೆಗೆ ಸಾವಿಲ್ಲ. ಇತರೆ ಭಾಷೆಗಳ ಸತ್ವಹೀರಿ ಬೆಳೆಯುತ್ತಿರುವ ಕನ್ನಡ ಆಲದ ಮರವಿದ್ದಂತೆ. ಮರಾಠಿ ಭಾಷೆ ನನಗೆಂದೂ ನನ್ನೊಳಗಿನ ಕನ್ನಡ ಅಂತಃಸತ್ವವನ್ನು ಕಡಿಮೆ ಮಾಡಲೇ ಇಲ್ಲ ಎಂದು ಪಂಪ ಪ್ರಶಸ್ತಿ ವಿಜೇತ ಬಿ.ಎ.ಸನದಿ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.
ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಆಶ್ರಯದಲ್ಲಿ ಕನ್ನಡ ಸಂಸ್ಕøತಿ ಇಲಾಖೆ ಮತ್ತು ಕಾರವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಪಂಪ ಪ್ರಶಸ್ತಿ ವಿಜೇತ ಕವಿಯ ಜೊತೆ ಸಂವಾದ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸನದಿ ಅವರು ತಮ್ಮ ಸಾಹಿತ್ಯ ಬದುಕಿನ ನೆನಪಿನ ದೋಣಿಯನ್ನು ಬಿಚ್ಚಿಟ್ಟರು.
ಹುಟ್ಟೂರು ಬೆಳಗಾವಿ ಸಿಂಧೊಳ್ಳಿ ಗ್ರಾಮದಲ್ಲಿನ ಹಿಂದೂ ಮುಸ್ಲಿಂ ಸೌಹಾರ್ದ ವಾತಾವರಣವನ್ನು ಸ್ಮರಿಸಿಕೊಂಡ ಕವಿ ಬಾಬಾಸಾಹೇಬ್ ಅಹಮ್ಮದ್ ಸನದಿ ಅವರು ವಚನ ಸಾಹಿತ್ಯ ತಮ್ಮ ಮೇಲೆ ಬೀರಿದ ಪ್ರಭಾವವನ್ನು ನೆನೆದು ಭಾವುಕರಾದರು.
ವಚನಗಳನ್ನು ಹಾಡುತ್ತಾ ಶಾಲೆಗೆ ಹೋಗುತ್ತಿದ್ದ ದಿನಗಳನ್ನು ಮೆಲುಕು ಹಾಕಿದ ಅವರು ಬಸವಣ್ಣ ಮತ್ತು ಬಿಜ್ಜಳ ಹಾಗೂ ನೀಲಾಂಬಿಕೆಯ ಕತೆಯನ್ನು ವಿದ್ಯಾರ್ಥಿಗಳಿಗೆ ವಿವರಿಸುವಾ ಕಣ್ಣಂಚಲ್ಲಿ ಕಂಬನಿ ಮೂಡಿದವು. ಬಸವಣ್ಣ ಮಹಾ ವಿಚಾರವಾದಿ, ದಾಸೋಹ ಪರಂಪರೆಯನ್ನು ಆರಂಭಿಸಿದ ಮಹಾಪುರುಷ. ಆದರೆ ಕ್ರೂರಿ ಬಿಜ್ಜಳನ ಮನಸ್ಸುನ್ನು ಆತನ ಸುತ್ತಲಿನವರು ಕಿವಿಯೂದಿ ಕೆಡಿಸಿದರು. ಬಸವಣ್ಣನನ್ನು ದೂರ ಮಾಡಿದ ನೀನು ಸುರಕ್ಷಿತವಲ್ಲ ಎಂದು ಬಿಜ್ಜಳನಿಗೆ ನೀಲಾಂಬಿಕೆ ಎಚ್ಚರಿಸಿದ ಘಟನೆಯನ್ನು ಸಾಂದರ್ಭಿಕವಾಗಿ ಪ್ರಸ್ತಾಪಿಸಿದರು.
ನವ್ಯಕಾವ್ಯದ ಬೇರು ವಚನ ಸಾಹಿತ್ಯದಲ್ಲಿದೆ ಎಂದು ಸಹ ಸನದಿ ಸಂವಾದಕರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಸಂವಾದದಲ್ಲಿ ಬಂದ ಗುಜರಾತ್ ಗಲಭೆ ಮತ್ತು ಮುಂಬಯಿ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸವಿವರವಾಗಿ ಮಾತನಾಡಿದ ಅವರು ಗಾಂಧಿ ನಾಡಲ್ಲಿ ಕೋಮು ಹಿಂಸೆ ಕಂಡು ನನ್ನ ಮನಸು ನೊಂದಿತ್ತು. ಅಹಮದಾಬಾದ್ ನಿಂದ ಮುಂಬಯಿಗೆ ಮುಂದೆ ವರ್ಗಾವಣೆ ಮಾಡಿಸಿಕೊಂಡೆ ಎಂದರು.
ಕವಿ ಜನಸಾಮಾನ್ಯರ ಜೊತೆ :
ಕವಿ ಜನಸಾಮಾನ್ಯರ ಜೊತೆ ಬೆರೆಯಬೇಕು. ಕವಿ ಕಲಾವಿದರು ಜನರಿಂದ ದೂರವಾಗಬಾರದು. ಆಗ ಮಾತ್ರ ಬರವಣಿಗೆ ಪ್ರೀತಿಯ ಸೆಲೆ ಹುಟ್ಟಲು ಸಾಧ್ಯ ಎಂದ ಅವರು ದೃಶ್ಯ ಮಾದ್ಯಮ ಮತ್ತು ಮೊಬೈಲ್ ನಿಂದ ಯುವಜನರು ಸಾಹಿತ್ಯದ ಓದು ಮತ್ತು ಆಸಕ್ತಿ ಕಡಿಮೆಯಾಗುತ್ತಿದೆ. ಯುವಜನರನ್ನು ,ಮಕ್ಕಳನ್ನು ಸಾಹಿತ್ಯದ ಒಲವಿನತ್ತ ತರಲು ಸಣ್ಣ ಸಣ್ಣ ಗುಂಪು ರಚಿಸಿಕೊಂಡು ಸಾಹಿತ್ಯದ ಕಾರ್ಯಕ್ರಮಗಳನ್ನು ಮಾಡಬೇಕು. ಕವಿಯ ಕವಿತೆಗಳನ್ನು ಅವರ ಬಾಯಿಂದ ಕೇಳಿದಾಗ ಕವಿಯ ಬದುಕು ಮತ್ತು ಅವರ ಇತರ ಬರವಣಿಗೆಯ ಬಗ್ಗೆ ಸಹಜ ಆಸಕ್ತಿ ಮೂಡುತ್ತದೆ. ಸಂಬಂಧ ಮತ್ತು ಸೌಹಾರ್ದತೆಯನ್ನು ಸಾಹಿತ್ಯ ಕಲೆ ಮತ್ತು ಸಂಗೀತಗಳಿಗೆ ಬೆಸೆಯುವ ಶಕ್ತಿ ಇದೆ ಎಂದರು.
ರಾಜಕೀಯದಿಂದ ವಿಕ್ಷಿಪ್ತ ಸೃಷ್ಟಿ:
ರಾಜಕೀಯದಿಂದ ಮತ್ತು ಕೇವಲ ಮಾತುಗಳಿಂದ ವಿಕ್ಷಿಪ್ತ ವಾತಾವರಣ ಸೃಷ್ಟಿಯಾಗುತ್ತದೆ. ಇವತ್ತಿನ ಭಾರತದ ರಾಜಕೀಯ ವಾತಾವರಣ ಕುರಿತು ಮತ್ತು ನಾಯಕತ್ವ ಕುರಿತು ನಾನು ಪ್ರತ್ರಿಕ್ರಿಯಿಸುವುದಿಲ್ಲ. ರಾಜಕಾರಣ ಸಮುದಾಯಗಳಲ್ಲಿ ವಿಕ್ಷಿಪ್ತತೆ ತಂದಿದೆ. ಇದನ್ನು ತಿಳಿ ಮಾಡುವ ಶಕ್ತಿ ಸಾಹಿತ್ಯ ಮತ್ತು ಸಾಹಿತಿ ಬುದ್ದಿಜೀವಿಗಳಿಗೆ ಇದೆ ಎಂದರು.
ಬೇರೆ ಬೇರೆ ದೇಶಗಳ ಕವಿಗಳ ಪರಿಚಯ:
ವಿದೇಶಗಳಲ್ಲಿ ಸುತ್ತಿದ ಮತ್ತು ಅಲ್ಲಿನ ಶ್ರೇಷ್ಠ ಮನಸುಗಳನ್ನು ಕನ್ನಡಕ್ಕೆ ಪರಿಚಯಿಸುವ ಕಾರ್ಯ ಮಾಡಿದೆ. ಕೇವಲ ಕಾವ್ಯಕ್ಕೆ ಸೀಮಿತವಾಗದೇ ಅನುವಾದ, ಮಕ್ಕಳ ಸಾಹಿತ್ಯ, ಕತೆ ಮತ್ತು ವ್ಯಕ್ತಿಪರಿಚಯದಂಥ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಖುಷಿ ಇದೆ. ಈಗ ಚೀನಿ ಭಾಷೆಯ 100 ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದೇನೆ ಎಂದು ಕವಿ ಬಿ.ಎ.ಸನದಿ ಹೇಳಿದರು.
ಸಂವಾದದಲ್ಲಿ ರೇಣುಕಾ ರಮಾನಂದ, ಪ್ರೊ. ವಿಜಯಾ ಡಿ.ನಾಯ್ಕ, ಪ್ರೊ. ಶ್ರೀಧರ ನಾಯಕ, ಕತೆಗಾರ ಬಸು ಬೇವಿನಗಿಡದ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಸಹ ಪಂಪ ಪ್ರಶಸ್ತಿ ವಿಜೇತ ಕವಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.
0 Comments